ADVERTISEMENT

ವಿಶ್ಲೇಷಣೆ | ಕರಗುತ್ತಿದೆ ಸಹ್ಯಾದ್ರಿಯ ಪರಿಸರ: ಮಲೆನಾಡು ಛಿನ್ನ, ಬದುಕೂ ಛಿದ್ರ

ಸಹ್ಯಾದ್ರಿಯ ಅನನ್ಯ ಪರಿಸರ ಕರಗಿದಂತೆಲ್ಲ, ಜನರ ನಿತ್ಯಜೀವನವೂ ಕಷ್ಟವಾಗುತ್ತಿದೆ

ಕೇಶವ ಎಚ್.ಕೊರ್ಸೆ
Published 12 ನವೆಂಬರ್ 2019, 2:51 IST
Last Updated 12 ನವೆಂಬರ್ 2019, 2:51 IST
   

ಬೇಸಿಗೆಯ ಬರ, ಚಳಿಗಾಲದ ಅಕಾಲಿಕ ಮಳೆ, ನೆರೆ-ಭೂಕುಸಿತ, ಬೆಳೆ-ಜಾನುವಾರುಗಳಿಗೆ ಇನ್ನಿಲ್ಲದ ರೋಗಗಳು, ಹೊಲಕ್ಕೆ ದಾಳಿಯಿಡುವ ವನ್ಯಪ್ರಾಣಿಗಳು- ಇವೆಲ್ಲವುಗಳಿಂದ ಗ್ರಾಮೀಣ ಸಮುದಾಯ ಬಸವಳಿದು ನಿಂತಿದೆ. ಸೂಕ್ಷ್ಮ ಪರಿಸರದ ಮಲೆನಾಡಿನ ಪರಿಸ್ಥಿತಿಯು ಬಿಗಡಾಯಿಸುತ್ತಿರುವುದೂ ನಾಡಿನ ಜನಜೀವನದ ಈ ಅಯೋಮಯ ಪರಿಸ್ಥಿತಿಗೆ ಕಾರಣ ಎಂಬುದೀಗ ಸಿದ್ಧವಾದ ಅಂಶ.

ಆದಾಗ್ಯೂ, ಕೊಡಗಿನಿಂದ ಬೆಳಗಾವಿವರೆಗಿನ ಪಶ್ಚಿಮಘಟ್ಟದುದ್ದಕ್ಕೂ ಅದನ್ನು ಅಡ್ಡಡ್ಡ ಸೀಳುವ ಮೂವತ್ತಕ್ಕೂ ಮಿಕ್ಕಿ ಹೊಸದಾದ ರಾಷ್ಟ್ರೀಯ ಹೆದ್ದಾರಿ, ರೈಲುಮಾರ್ಗ, ವಿದ್ಯುತ್ ಮಾರ್ಗ ಹಾಗೂ ವಿದ್ಯುತ್ ಯೋಜನೆಗಳನ್ನು ಪ್ರಸ್ತಾಪಿಸಲಾಗಿದೆಯಲ್ಲ! ಅಭಯಾರಣ್ಯ ಹೊರತುಪಡಿಸಿದರೆ, ಕನಿಷ್ಠ ಹತ್ತು ಚದರ ಕಿಲೊ ಮೀಟರ್ ಕಾಡು ಕೂಡ ಒಂದೆಡೆ ಉಳಿಯುವುದು ದುಸ್ತರ ಎನ್ನುವಷ್ಟು ಸಹ್ಯಾದ್ರಿಯು ಛಿದ್ರವಾಗುತ್ತಿದೆ.

ನಾಡಿನ ಜೀವನದಿಗಳಲ್ಲಿ ಒಂದಾದ ಶರಾವತಿ ಕಣಿವೆಯ ಸದ್ಯದ ಸ್ಥಿತಿಯನ್ನೇ ಗಮನಿಸೋಣ. ಇನ್ನೇನು ಇಲ್ಲಿನ ಲಿಂಗನಮಕ್ಕಿ ಜಲಾಶಯದ ನೀರನ್ನು ಬೆಂಗಳೂರಿಗೆ ಸಾಗಿಸುವ ಪ್ರಸ್ತಾವವು ಹಿನ್ನೆಲೆಗೆ ಸರಿಯಿತು ಅನ್ನುವಷ್ಟರಲ್ಲಿ, ಈ ನದಿ ತಪ್ಪಲಿನ ದಟ್ಟ ಅರಣ್ಯದಲ್ಲಿ ಭೂಗತ ಜಲವಿದ್ಯುತ್ ಯೋಜನೆ ಕೈಗೊಳ್ಳುವ ಯೋಜನೆ ಮುನ್ನೆಲೆಗೆ ಬಂದಿದೆ! ಈ ಕಣಿವೆಯ ಪ್ರಸಕ್ತ ಪರಿಸ್ಥಿತಿಯ ಅವಲೋಕನವು ಸಹ್ಯಾದ್ರಿ ಶ್ರೇಣಿ ಎದುರಿಸುತ್ತಿರುವ ಅಪಾಯಗಳಿಗೆ ಕೈಗನ್ನಡಿ. ಅದು ತೋರುವ ಮಲೆನಾಡಿನ ಮೂರು ಪ್ರಮುಖ ಬಿಕ್ಕಟ್ಟುಗಳ ದರ್ಶನ ಇಲ್ಲಿದೆ.

ADVERTISEMENT

ಸಾಗರದ ಬಳಿಯ ಮಡೆನೂರಿನಲ್ಲಿ ಶರಾವತಿಗೆ ಕಟ್ಟಿದ್ದ ಅಣೆಕಟ್ಟಿನಲ್ಲಿ ನೆಲೆ ಕಳೆದುಕೊಂಡಿದ್ದ ಹಲವು ಕುಟುಂಬಗಳು, ಸ್ವಾತಂತ್ರ್ಯ ಬರುವ ಕಾಲಕ್ಕೆ ಜಲಾಶಯದ ಮೇಲ್ಭಾಗದ ಕಾಡಿನಲ್ಲಿ ಕಾಲೂರಿದ್ದವು. ಅರವತ್ತರ ದಶಕದಲ್ಲಿ ನಿರ್ಮಾಣವಾದ ಬೃಹತ್ ಲಿಂಗನಮಕ್ಕಿ ಅಣೆಕಟ್ಟೆಯಲ್ಲಿ ಈ ಮಡೆನೂರು ಒಡ್ಡೇ ಜಲಸಮಾಧಿಯಾಯಿತು. ಇದರೊಂದಿಗೆ, ಆಗಷ್ಟೇ ಹೊಸ ನೆಲದಲ್ಲಿ ಬದುಕು ಕಟ್ಟಿಕೊಳ್ಳಲು ಆರಂಭಿಸಿದ್ದ ಮಡೆನೂರು ಪುನರ್ವಸತಿಗರ ಕನಸೂ ಕರಗಿತೆನ್ನಬೇಕು. ಸಾಗರ ಹಾಗೂ ಹೊಸನಗರ ತಾಲ್ಲೂಕುಗಳ ನೂರಾ ಎಪ್ಪತ್ತೈದಕ್ಕೂ ಮಿಕ್ಕಿ ಗ್ರಾಮಗಳ ಹನ್ನೆರಡು ಸಾವಿರಕ್ಕೂ ಹೆಚ್ಚಿನ ಜನರನ್ನು ಸ್ಥಳಾಂತರಿಸಿದ ಭಾರಿ ಜಲಾಶಯವಿದು. ಕೆಲವರೇನೋ ಅಕ್ಕಪಕ್ಕದ ಊರು- ಜಿಲ್ಲೆಗಳಿಗೆ ಹೋಗಿ ನೆಲೆ ಕಂಡರು. ಆದರೆ, ಸರ್ಕಾರಿ ಆಸರೆಯನ್ನೇ ನಂಬಿ ಅಲ್ಲಿಯೇ ಉಳಿದ ಸಾವಿರಾರು ಕುಟುಂಬಗಳು, ಸ್ವಾತಂತ್ರ್ಯ ಬಂದು ಎಪ್ಪತ್ತು ವರ್ಷಗಳಾದರೂ ಅತಂತ್ರವಾಗಿಯೇ ಬದುಕುತ್ತಿವೆ. ಈ ಅಸಹಾಯಕ ಪರಿಸರ ನಿರಾಶ್ರಿತರಿಗೆ ಸ್ವಸ್ಥ ಬದುಕನ್ನು ಹಿಂತಿರುಗಿಸಲು ಸರ್ಕಾರ ಹಾಗೂ ಸಮಾಜಕ್ಕೆ ಇನ್ನೂ ಸಾಧ್ಯವಾಗಿಲ್ಲ. ಪರಿಸರ ಸಂರಕ್ಷಣೆಯ ದೂರದರ್ಶಿತ್ವದ ಮಾತು ಒಂದೆಡೆಯಿರಲಿ, ಅಭಿವೃದ್ಧಿರಥದ ಚಕ್ರದಡಿ ನಲುಗಿದ ಜನಕ್ಕೆ ಕನಿಷ್ಠ ಆಸರೆಯನ್ನೂ ನೀಡಲಾಗದ ‘ಕಲ್ಯಾಣರಾಜ್ಯ’ದ ಕಥೆ ಇದು.

ಶರಾವತಿ ನದಿ ತಪ್ಪಲಿನ ಜೀವವೈವಿಧ್ಯಭರಿತ ಕಾಡು ಹಾಗೂ ಗೋಮಾಳವನ್ನೆಲ್ಲ ಹೊಸಕುತ್ತಿರುವ ಇನ್ನೊಂದು ವಾಮನಪಾದವೆಂದರೆ, ಏಕಸಸ್ಯ ನೆಡುತೋಪು. ಭದ್ರಾವತಿಯ ಕಾಗದ ಕಾರ್ಖಾನೆಗಾಗಿ, ಸರ್ಕಾರಿ ಸ್ವಾಮ್ಯದ ಮೈಸೂರ್ ಪೇಪರ್ ಮಿಲ್ಸ್ ಕಂಪನಿಯು ಎಂಬತ್ತರ ದಶಕದಲ್ಲಿ ಗುತ್ತಿಗೆ ಆಧಾರದಲ್ಲಿ ಪಡೆದ ಸುಮಾರು ಎಪ್ಪತ್ತು ಸಾವಿರ ಎಕರೆ ಅರಣ್ಯಭೂಮಿಯಲ್ಲಿ ನೀಲಗಿರಿ ಹಾಗೂ ಅಕೇಶಿಯ ಬೆಳೆಸುವುದರೊಂದಿಗೆ ಇದು ಆರಂಭವಾಯಿತು ಎನ್ನಬೇಕು. ನಂತರದ ದಶಕಗಳಲ್ಲಿ, ಕಾದಿಟ್ಟ ಅರಣ್ಯ, ಕಂದಾಯಭೂಮಿ ಕಾನು, ಗೋಮಾಳ ಮತ್ತು ರೈತರ ಹೊಲಗಳಿಗೂ ಈ ಕೈಗಾರಿಕಾ ನೆಡುತೋಪುಗಳು ಕಾಲಿಟ್ಟವು. ಅರಣ್ಯ ಇಲಾಖೆಯ ಸಾಮಾಜಿಕ ಅರಣ್ಯ ಯೋಜನೆಯಂತೂ ಅಕೇಶಿಯಾವನ್ನೇ ಅಪ್ಪಿಕೊಂಡುಬಿಟ್ಟಿತು.

ಕಾಡನ್ನು ಸುಟ್ಟು, ಅಪಾರ ಕ್ರಿಮಿನಾಶಕ ಸುರಿದು ಶುಂಠಿ ಬಿತ್ತುವ ಹಾಗೂ ರಬ್ಬರ್ ಬೆಳೆಸುವ ವಾಣಿಜ್ಯಕೃಷಿಯೂ ಇತ್ತೀಚಿನ ದಶಕಗಳಲ್ಲಿ ಹೆಚ್ಚಿದೆ. ಇವೆಲ್ಲವುಗಳಿಂದಾಗಿ ಹೆಚ್ಚಾಗಿರುವ ಕಾಡಿನ ಬೆಂಕಿ, ಮಳೆಗಾಲದ ಭೂಸವೆತ, ನೆಲ-ಜಲಕ್ಕೆ ವಿಷಪ್ರಾಶನ, ಅಂತರ್ಜಲ ಬತ್ತುವುದು, ಗಿಡಮೂಲಿಕೆ ಹಾಗೂ ಮೇವಿನ ನಾಶ ಇತ್ಯಾದಿ ಅಧ್ವಾನಗಳ ಕುರಿತೆಲ್ಲ ವೈಜ್ಞಾನಿಕ ಅಧ್ಯಯನಗಳೂ ಆಗಿವೆ. ಜಲಾನಯನ ವ್ಯಾಪ್ತಿಯಲ್ಲಿ ಮಿತಿಮೀರುತ್ತಿರುವ ಮಣ್ಣು ಸವೆತದಿಂದಾಗಿ ಲಿಂಗನಮಕ್ಕಿ ಜಲಾಶಯದಲ್ಲಿ ಹೂಳು ಹೆಚ್ಚುತ್ತಿರುವ ಕುರಿತು ವಿಜ್ಞಾನಿಗಳು ಎಚ್ಚರಿಸಿಯಾಗಿದೆ. ವಿಸ್ತಾರವಾದ ನೈಜಕಾಡು ಮಾಯವಾದಂತೆಲ್ಲ ಹುಲಿಚಿರತೆಗಳಂಥ ಬೃಹತ್ ಪ್ರಾಣಿಗಳು ಕಣ್ಮರೆಯಾದವು. ನೈಸರ್ಗಿಕ ಆಹಾರ ಸರಪಳಿ ತುಂಡುತುಂಡಾಗಿ ಅಸಂಖ್ಯ ಜೀವವೈವಿಧ್ಯ ಕಣ್ಮರೆಯಾದರೆ, ಮಂಗನಂಥ ಪ್ರಾಣಿಗಳ ಸಂಖ್ಯೆ ಮಿತಿಮೀರಿ ಬೆಳೆಯುತ್ತಿದೆ. ಉಲ್ಬಣಿಸುತ್ತಿರುವ ಮಂಗನಕಾಯಿಲೆ, ಮಿತಿಮೀರಿದ ಮಂಗನ ಹಾವಳಿ ಇವೆಲ್ಲವುಗಳಿಂದ ರೈತರು ಕಂಗೆಟ್ಟಿದ್ದಾರೆ.

ಮಲೆನಾಡಿನ ಅಳಿದುಳಿದಿರುವ ಕಾಡನ್ನೂ ನುಂಗುತ್ತಿರುವ ವಾಮನನ ಮೂರನೇ ಪಾದವೇ ಭೂಅತಿಕ್ರಮಣ. ಆದಿವಾಸಿಗಳಿಗೆ ಅರಣ್ಯ ಹಕ್ಕು ಕಾಯ್ದೆಯಡಿ ಭೂಮಿಯ ಒಡೆತನ ದಕ್ಕಬೇಕಿತ್ತು. ಅಂತೆಯೇ, ಸರ್ಕಾರಿ ಕಂದಾಯಭೂಮಿ ಕಾಡಿನಲ್ಲಿ ದಶಕಗಳಿಂದ ಉಳುಮೆ ಮಾಡುತ್ತಿರುವ ಬಡ ರೈತರಿಗೆ ಬಗರ್‌ಹುಕುಂ ನೀತಿಯಡಿ ಕೃಷಿ ಭೂಮಿ ಒದಗಲೂಬೇಕು. ಆದರೆ, ಈ ದೀನರ ಹೆಸರಿನಲ್ಲಿ ಉಳ್ಳವರು ಮಾಡುತ್ತಿರುವ ಅರಣ್ಯಭೂಮಿ ಒತ್ತುವರಿಯು ಶರಾವತಿ ಜಲಾನಯನ ಪ್ರದೇಶದಾದ್ಯಂತ ವ್ಯಾಪಿಸಿದೆ. ಕಾನು, ದೇವರಕಾಡು, ಗೋಮಾಳದಂಥ ಸಮುದಾಯ ಭೂಮಿಗಳೆಲ್ಲ ಬಲಾಢ್ಯರ ಕೈಸೇರುತ್ತಿವೆ. ಕಂದಾಯ ಇಲಾಖೆಯು ಬಗರ್‌ಹುಕುಂ ಅರ್ಜಿ ಸ್ವೀಕರಿಸುವ ಅಂತಿಮ ದಿನಾಂಕವನ್ನು ವಿಸ್ತರಿಸುತ್ತ ಹೋದದ್ದೂ ಇದಕ್ಕೆ ಕಾರಣ. ಎಲ್ಲೆಲ್ಲೋ ಉದ್ಯೋಗ-ಉದ್ಯಮ ಮಾಡಿಕೊಂಡಿರುವ ಧನಾಢ್ಯರೆಲ್ಲ ಹೆಂಡತಿ-ಮಕ್ಕಳ ಹೆಸರಿನಲ್ಲೆಲ್ಲ ಅರ್ಜಿ ಹಾಕುತ್ತ, 30- 40 ಎಕರೆ ಅರಣ್ಯಭೂಮಿ ಸ್ವಾಧೀನ ಮಾಡಿಕೊಳ್ಳುತ್ತಿರುವುದು ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ನಡೆಯುತ್ತಿದೆ. ರಾತ್ರೋರಾತ್ರಿ ಕಾಡನ್ನು ಸುಟ್ಟು, ಭಾರಿ ಯಂತ್ರಗಳಿಂದ ಉಳುಮೆ ಮಾಡಿ ಗದ್ದೆ-ತೋಟ ನಿರ್ಮಿಸಿ ಸರ್ಕಾರಕ್ಕೆ ಸಾಗುವಳಿ ಸಾಕ್ಷ್ಯ ಒದಗಿಸುವ ‘ದಾಖಲೆ ವೀರರೂ’ ಇದ್ದಾರೆ! ಈ ನೈಸರ್ಗಿಕ ಪುಪ್ಪುಸಗಳ ಕಡಿತವಾದಂತೆಲ್ಲ, ಮೇವು, ಉರುವಲಷ್ಟೇ ಅಲ್ಲ, ಬೇಸಿಗೆಯಲ್ಲಿ ಕುಡಿಯುವ ನೀರಿಗೂ ಕೊರತೆಯಾಗುತ್ತಿದೆ.

ಶರಾವತಿಯೊಡಲಿನ ಈ ಮೂರೂ ಸಂಕಷ್ಟಗಳು, ವಿವಿಧ ಆಯಾಮ ಹಾಗೂ ಪ್ರಮಾಣದಲ್ಲಿ ಮಲೆನಾಡಿನ ಇತರೆಡೆಯೂ ಇವೆ. ಜೊತೆಗೆ, ಅನಿಯಂತ್ರಿತ ಮರಳು ಗಣಿಗಾರಿಕೆ, ಅನಧಿಕೃತ ಕ್ವಾರಿ, ಗಿಡಮೂಲಿಕೆ ಕಳ್ಳಸಾಗಣೆ, ನೆಲ-ಜಲ ಮಾಲಿನ್ಯ, ಅಂತರ್ಜಲ ಬರಿದಾಗಿಸುತ್ತಿರುವ ಕೊಳವೆಬಾವಿಗಳ ಭರಾಟೆ. ಇದೂ ಸಾಲದೆಂಬಂತೆ ಬೃಹತ್ ಅಭಿವೃದ್ಧಿ ಯೋಜನೆಗಳು ಸೃಜಿಸುವ ಪಲ್ಲಟಗಳು! ನೈಸರ್ಗಿಕ ಸಂಪನ್ಮೂಲಗಳೇ ಅಭಿವೃದ್ಧಿಸೌಧದ ನೆಲೆಗಟ್ಟು ಎಂಬ ವಿವೇಕವೇ ಆಡಳಿತ ನೀತಿಯಲ್ಲಿ ಮಾಯವಾಗಿ ನೀರು, ಅರಣ್ಯ, ವನ್ಯಜೀವಿ, ಜೀವವೈವಿಧ್ಯ ಸಂರಕ್ಷಣೆಯ ಕುರಿತಾಗಿರುವ ಕಾನೂನು ಹಾಗೂ ನಿಯಮಗಳನ್ನೆಲ್ಲ ಗಾಳಿಗೆ ತೂರಲಾಗುತ್ತಿದೆ. ಸಹ್ಯಾದ್ರಿಯ ಮೇಲ್ಮೈ ಪರಿಸರ ವಿರೂಪಗೊಳ್ಳುತ್ತ ಸಾಗಿದಂತೆಲ್ಲ, ಅದರ ಧಾರಣಾ ಸಾಮರ್ಥ್ಯವೇ ಗಣನೀಯವಾಗಿ ಕಡಿಮೆಯಾಗುತ್ತಿದೆ.

ತಾಪಮಾನ ನಿಯಂತ್ರಿಸುವ, ಸಕಾಲಕ್ಕೆ ಮಳೆ ಬರಿಸುವ ಹಾಗೂ ಮಳೆ ಬಂದಾಗ ನೆರೆ ನಿಯಂತ್ರಿಸುವ ಪಶ್ಚಿಮಘಟ್ಟವು, ನಾಡಿನ ಜನಜೀವನ ಸುರಕ್ಷತೆಯ ದೃಷ್ಟಿಯಿಂದ ಅಮೂಲ್ಯವಾದದ್ದು. ಸೂಕ್ತ ಭೂಬಳಕೆ ನೀತಿಯೊಂದನ್ನು ಜಾರಿಗೆ ತಂದು ಮಲೆನಾಡಿನ ಅರಣ್ಯ ಹಾಗೂ ನದಿಕಣಿವೆಗಳ ಪರಿಸರದ ಸಮಗ್ರತೆಯನ್ನು ಕಾಪಾಡಿಕೊಳ್ಳಲೇಬೇಕಾದ ಜರೂರತ್ತಿದೆ ಈಗ. ರಾಜ್ಯ ಯೋಜನಾ ಇಲಾಖೆಯು ಇದೀಗ ರೂಪಿಸಿರುವ ‘ಸುಸ್ಥಿರ ಅಭಿವೃದ್ಧಿ ಗುರಿ’ಗಳನ್ನು ಎಲ್ಲ ಸರ್ಕಾರಿ ಯೋಜನೆಗಳಲ್ಲಿ ಅಳವಡಿಸಿಕೊಳ್ಳುವುದು ಭವಿಷ್ಯದ ಸುರಕ್ಷಿತ ದಾರಿ ಕಂಡುಕೊಳ್ಳುವಲ್ಲಿ ಮಹತ್ವದ ಹೆಜ್ಜೆಯಾಗಬಲ್ಲದು.

ಮುಂದಿನ ತಲೆಮಾರಿನ ಮಾತು ಬಿಡಿ, ಇಂದಿನದೇ ಬದುಕಿನ ಕನಿಷ್ಠ ಅಗತ್ಯಗಳನ್ನು ಪೂರೈಸಿಕೊಳ್ಳಲು ಹಾಗೂ ಬರ-ನೆರೆಯಂಥ ವಿಪ್ಲವಗಳಿಂದ ಪಾರಾಗಲಾದರೂ ಮಲೆನಾಡನ್ನು ಕಾಪಾಡಿಕೊಳ್ಳಲೇಬೇಕಿದೆ.

ಲೇಖಕ: ನಿರ್ದೇಶಕ, ಸಂರಕ್ಷಣಾ ಜೀವಶಾಸ್ತ್ರ ಮತ್ತು ಸುಸ್ಥಿರ ಅಭಿವೃದ್ಧಿ ಅಧ್ಯಯನ ಕೇಂದ್ರ, ಶಿರಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.