ತಮಿಳುನಾಡಿಗೆ ಕಾವೇರಿ ನೀರು ಬಿಟ್ಟರೆ ಜನ ದಂಗೆ ಏಳುತ್ತಾರೆ....
–ಈ ಕಟುವಾದ ಮಾತಿನಿಂದ ಮುತ್ಸದ್ಧಿ ನಾಯಕ ಜಿ.ಮಾದೇಗೌಡ ಅವರು ರಾಜ್ಯದ ಗಮನ ಸೆಳೆಯುತ್ತಿದ್ದರು. ಯಾವುದೇ ಸರ್ಕಾರವಿರಲಿ, ಮುಖ್ಯಮಂತ್ರಿಗೆ ಕರೆಮಾಡಿ ಏಕವಚನದಲ್ಲಿ ಆಕ್ರೋಶ ಹೊರಹಾಕುತ್ತಿದ್ದರು.
1991, ಜುಲೈ 25ರಂದು ಕಾವೇರಿ ನ್ಯಾಯಮಂಡಳಿಯ ಮಧ್ಯಂತರ ತೀರ್ಪು ಹೊರ ಬಂದಾಗ ಮಂಡ್ಯ ಜಿಲ್ಲೆ ಅಕ್ಷರಶಃ ಬೆಂಕಿಯ ಉಂಡೆಯಾಗಿತ್ತು. ಪ್ರತಿವರ್ಷ ತಮಿಳುನಾಡಿಗೆ 205 ಟಿಎಂಸಿ ಅಡಿ ನೀರು ಹರಿಸಲು ಗೆಜೆಟ್ ಅಧಿಸೂಚನೆ ಹೊರಬಿತ್ತು. ರಾಜ್ಯಕ್ಕೆ ಆದ ಘೋರ ಅನ್ಯಾಯದ ವಿರುದ್ಧ ಜಿ.ಮಾದೇಗೌಡರು ಉಗ್ರ ಹೋರಾಟಕ್ಕೆ ಕರೆ ಕೊಟ್ಟರು. ಆಗಲೇ ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ರಚನೆಯಾಯಿತು.
ಎಲ್ಲಾ ಪಕ್ಷದ ಹೋರಾಟ ರೈತ ಸಂಘಟನೆಗಳ, ಪ್ರಗತಿಪರ ಸಂಘಟನೆಗಳನ್ನು ಒಗ್ಗೂಡಿಸಲು ಸಮಿತಿಯ ಅಧ್ಯಕ್ಷರನ್ನಾಗಿ ಮಾದೇಗೌಡರನ್ನು ಆಯ್ಕೆ ಮಾಡಲಾಯಿತು. ಉತ್ತರ ಕರ್ನಾಟಕದ ಜನರ ಆಶಯದಂತೆ ಕೃಷ್ಣ- ಕಾವೇರಿ ಹೋರಾಟ ಸಮಿತಿಯ ಅಧ್ಯಕ್ಷರಾಗಿಯೂ ಆಯ್ಕೆಯಾದರು. ನಂತರ ನಡೆದದ್ದು ಇತಿಹಾಸ. ದೀರ್ಘ ರಾಜಕೀಯ ಇತಿಹಾಸದ ಜೊತೆಗೆ ಅವರೊಬ್ಬ ಹೋರಾಟಗಾರರಾಗಿ ಜನಮಾನಸದಲ್ಲಿ ಉಳಿದರು.
ಎಸ್.ಬಂಗಾರಪ್ಪ ಮುಖ್ಯಮಂತ್ರಿಯಾಗಿದ್ದಾಗ ತಮಿಳುನಾಡಿಗೆ ನೀರು ಹರಿಸುವುದಿಲ್ಲ ಎಂದು ಕೈಗೊಂಡ ನಿರ್ಧಾರದ ಹಿಂದೆ ಜಿ.ಮಾದೇಗೌಡರು ಪ್ರಮುಖ ಕಾರಣಕರ್ತರಾಗಿದ್ದರು. ಕಾವೇರಿ ಹೋರಾಟಕ್ಕಾಗಿ ಲೋಕಸಭಾ ಸದಸ್ಯತ್ವ ಸ್ಥಾನಕ್ಕೂ ರಾಜೀನಾಮೆ ಕೊಟ್ಟರು.
ಗೌಡರನ್ನು ಸಾರ್ವಜನಿಕರು ಒರಟು ಸ್ವಭಾವ, ಹಠ, ಕೋಪದ ವ್ಯಕ್ತಿ ಬಹಳ ಬುದ್ಧಿವಂತ ರಾಜಕಾರಣಿ ಹೀಗೆಲ್ಲಾ ಅಭಿಪ್ರಾಯ ಪಡುತ್ತಿದ್ದರು. ನಾನು ಅವರನ್ನು ಹತ್ತಿರದಿಂದ ಗಮನಿಸಿದ ಹಾಗೆ ಆ ಭಾವನೆಗಳು ರೈತರು, ಸಾರ್ವಜನಿಕರಿಗಾಗಿ ಕೆಲಸಗಳನ್ನು ಮಾಡಿಸುವಾಗ ಮಾತ್ರ ಎಂಬುದು ಗೊತ್ತಾಯಿತು. ಹಾಸ್ಯಪ್ರಜ್ಞೆ ಹೊಂದಿದ್ದ ಅವರು ಸೌಮ್ಯ, ಹೃದಯವಂತ ಹಾಗೂ ಸಾಮಾನ್ಯ ಜನರ ಜೊತೆಯಲ್ಲಿ ಸಲೀಸಾಗಿ ಬೆರೆಯುವ ವ್ಯಕ್ತಿಯಾಗಿದ್ದರು. ಸಾರ್ವಜನಿಕರು ಸಹ ಅವರ ಜೊತೆ ಸಲೀಸಾಗಿ ಬೆರೆಯಬಹುದಿತ್ತು.
ಮದ್ದೂರು ತಾಲ್ಲೂಕು, ಗುರುದೇವರಹಳ್ಳಿ 1928ರಲ್ಲಿ ಜನಿಸಿದ ಜಿ.ಮಾದೇಗೌಡರು ಬಿಎ ಎಲ್ಎಲ್ ಬಿ ವಿದ್ಯಾಭ್ಯಾಸದೊಂದಿಗೆ ಕೃಷಿ, ರಾಜಕೀಯ, ಸಾಮಾಜಿಕ ಶಿಕ್ಷಣ, ಆರೋಗ್ಯ, ಕ್ರೀಡೆ ಇನ್ನಿತರ ಕ್ಷೇತ್ರಗಳ ಪರಿಣತಿಯೊಂದಿಗೆ ಸಮಾಜಮುಖಿಯಾಗಿ ಗುರುತಿಸಿಕೊಂಡಿದ್ದರು.
6 ಬಾರಿ ವಿಧಾನಸಭೆ ಸದಸ್ಯರಾಗಿ, ಕ್ಯಾಬಿನೆಟ್ ಸಚಿವರಾಗಿ, ಎರಡು ಬಾರಿ ಸಂಸತ್ ಸದಸ್ಯರಾಗಿ, ಮೈಷುಗರ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಮಾದೇಗೌಡರಿಗೆ ರಾಜಕಾರಣ, ಹೋರಾಟ ಮನೋಭಾವ ಜನ್ಮಜಾತವಾಗಿ ಬಂದಿತ್ತು. ಜನ ಸಮುದಾಯದ ಹಿತಕ್ಕಾಗಿ ರಚನಾತ್ಮಕ ಯೋಜನೆಗಳೊಂದಿಗೆ ಹೋರಾಟಕ್ಕಿಳಿದಿದ್ದರು. ಶ್ರದ್ಧೆಯಿಂದ ಅವುಗಳನ್ನು ಜಾರಿಗೊಳಿಸಲು ನಿರಂತರವಾಗಿ
ಶ್ರಮವಹಿಸುತ್ತಿದ್ದರು. ಹುಟ್ಟೂರಿನಲ್ಲಿ ಸ್ವಂತ ಭೂಮಿಯನ್ನು ದಾನ ಮಾಡಿ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪಿಸಿದ್ದರು.
ಗ್ರಾಮೀಣ ಪ್ರದೇಶದ ಮಕ್ಕಳಿಗೆ ಸ್ಥಳೀಯವಾಗಿ ವಿದ್ಯಾಭ್ಯಾಸದ ಅನುಕೂಲಕ್ಕಾಗಿ ಕಾಳಮುದ್ದನ ದೊಡ್ಡಿ (ಕೆ.ಎಂ.ದೊಡ್ಡಿ) ಗ್ರಾಮಕ್ಕೆ ಹೊಸ ರೂಪ ಕೊಟ್ಟರು. ಈಗ ಅದು ಭಾರತೀನಗರವಾಗಿ ರೂಪುಗೊಂಡಿದ್ದು ಶೈಕ್ಷಣಿಕ ಕಾಶಿಯಾಗಿ ಗುರುತಿಸಿಕೊಂಡಿದೆ. ರೈತರ ಆರ್ಥಿಕ ಅಭಿವೃದ್ಧಿಗಾಗಿ ಭಾರತಿ ಸಹಕಾರ ಸಕ್ಕರೆ ಕಾರ್ಖಾನೆ ಸ್ಥಾಪಿಸಿ ಕೈಗಾರೀಕರಣಕ್ಕೆ ನಾಂದಿ ನಾಡಿದರು.ನಂತರ ಅದು ಈಗಿನ ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆಯಾಗಿದೆ. ಧಾರ್ಮಿಕ ವಿಚಾರವಾಗಿ ಹಾಗೂ ಪ್ರವಾಸಿ ತಾಣದ ಆಲೋಚನೆಯಿಂದ ಆತ್ಮಲಿಂಗೇಶ್ವರ ದೇವಸ್ಥಾನ ನಿರ್ಮಿಸಿದರು. ಈಗ ಅದು ರಾಜ್ಯದ ಪ್ರಮುಖ ಪ್ರವಾಸಿತಾಣವಾಗಿ ರೂಪಗೊಂಡಿದೆ. ಮೈಷುಗರ್ ಕಾರ್ಖಾನೆ ಸರ್ಕಾರಿ ಸ್ವಾಮ್ಯದಲ್ಲೇ ಉಳಿಯಬೇಕು ಎಂಬುದು ಅವರ ಬಲವಾದ ನಿಲುವಾಗಿತ್ತು.
ಆರೋಗ್ಯ ಸೇವೆಗಾಗಿ ಪ್ರಕೃತಿಧಾಮ (ನೈಸರ್ಗಿಕ ಚಿಕಿತ್ಸೆ) ಹಾಗೂ ತಮ್ಮ ಹೆಸರಿನಲ್ಲಿ ಜಿ ಮಾದೇಗೌಡ ಅಸ್ಪತ್ರೆಯನ್ನು ನಿರ್ಮಿಸಿದರು. ಮಂಡ್ಯ ನಗರದ ಮಧ್ಯಭಾಗದಲ್ಲಿ ಗಾಂಧಿ ಭವನ ನಿರ್ಮಾಣ ಮಾಡಿ ವಿವಿಧ ಚಟುವಟಿಕೆ ಆರಂಭಿಸಿದರು. ಮಂಡ್ಯ ತಾಲ್ಲೂಕಿನ ಎಚ್.ಮಲ್ಲಿಗೆರೆ ಗ್ರಾಮ ವ್ಯಾಪ್ತಿಯಲ್ಲಿ ಗಾಂಧಿ ಗ್ರಾಮ ನಿರ್ಮಾಣ ಮಾಡಲು 20 ಎಕರೆ ಭೂಮಿಯನ್ನು ಮಂಜೂರು ಮಾಡಿಸಿದ್ದರು.
ಬದುಕಿನಲ್ಲಿ ಬಹಳ ಎತ್ತರಕ್ಕೆ ಬೆಳೆದಿರುವ ಅವರ ಬಗ್ಗೆ ಮುಂದಿನ ಪೀಳಿಗೆಗೆ ಅಧ್ಯಯನಕ್ಕೆ ಅವಕಾಶವಾಗಬೇಕು. ತಮ್ಮ ಜೀವನದಲ್ಲಿ ಬಹಳಷ್ಟು ಸಮಯವನ್ನು ಸಮಾಜಕ್ಕಾಗಿ ಮೀಸಲಿಟ್ಟ ಜಿ.ಮಾದೇಗೌಡರು ರಾಜ್ಯದಲ್ಲಿ ದಾಖಲೆಯಾಗಿ ಉಳಿಯುತ್ತಾರೆ.
ಲೇಖಕಿ: ಸಂಘಟನಾ ಕಾರ್ಯದರ್ಶಿ, ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.