ಈ ಸಲದ ಅಂಬೇಡ್ಕರ್ ಜಯಂತಿಯ ದಿನ ಬೆಂಗಳೂರಿ ನಲ್ಲಿ ಆರು ದಲಿತ ಸಂಘಟನೆಗಳು ಒಟ್ಟಾಗಿ, ಕೇಂದ್ರ ಸರ್ಕಾರದ ‘ಸಂವಿಧಾನ ವಿರೋಧಿ ನೀತಿ’ ಕುರಿತು ವಿಚಾರ ಸಂಕಿರಣ ನಡೆಸಿದವು. ಈ ಸಂಕಿರಣ ಈಚೆಗೆ ಕರ್ನಾಟಕದಲ್ಲಿ ದೊಡ್ಡ ಮಟ್ಟದಲ್ಲಿ ಶುರುವಾಗಿರುವ ದಲಿತ ಚಳವಳಿಯ ಏಕತೆಯ ಪ್ರಯತ್ನದ ಭಾಗ ಕೂಡ.
ಈ ಮಹತ್ವದ ಹೆಜ್ಜೆಯನ್ನು ಸ್ವಾಗತಿಸುತ್ತಲೇ ದಲಿತ ಚಳವಳಿಯ ಭವಿಷ್ಯ ಕುರಿತಂತೆ ಅಂಬೇಡ್ಕರ್ ಆಲೋಚನೆ ಗಳನ್ನು ನೋಡೋಣ: 1942ರ ಜೂನ್ 18. ಅದೇ ಆಗ ಅಂಬೇಡ್ಕರ್ ಅವರನ್ನು ವೈಸ್‌ರಾಯ್ ತಮ್ಮ ಆಡಳಿತ ಮಂಡಳಿಗೆ ಲೇಬರ್ ಸದಸ್ಯರನ್ನಾಗಿ ಆಹ್ವಾನಿಸಿದ್ದರು. ಅಂದು ಡಿಪ್ರೆಸ್ಡ್ ಕ್ಲಾಸಸ್ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಅಂಬೇಡ್ಕರ್, ಚಳವಳಿಯನ್ನು ಮುಂದಿನ ತಲೆಮಾರಿಗೆ ದಾಟಿಸುವ ಮಾತಾಡಿದ್ದರು: ‘ನಾನೀಗ ಭಾರತ ಸರ್ಕಾರದ ಸದಸ್ಯನಾಗಿರುವುದರಿಂದ ಇನ್ನು ನೀವೆಲ್ಲ ಚಳವಳಿಯನ್ನು ಮುನ್ನಡೆಸುವ, ಚಳವಳಿಯ ಗುರಿ ತಲುಪುವ ಕೆಲಸವನ್ನು ಕೈಗೆತ್ತಿಕೊಳ್ಳಬೇಕು. ನಾನು ನಿಮ್ಮ ಸಲಹೆಗಾರನಾಗಿರುತ್ತೇನೆ; ಚಳವಳಿಯಲ್ಲಿ ನೇರವಾಗಿ ಭಾಗಿಯಾಗುವುದಿಲ್ಲ. ಇಪ್ಪತ್ತು ವರ್ಷಗಳಿಂದ ಬೆಳೆಸಿದ ಚಳವಳಿಯನ್ನು ನಿಮಗೆ ವಹಿಸುವ ಕಾಲ ಬಂದಿದೆ’.
ಆದರೆ, ಅಂಬೇಡ್ಕರ್ ಅವರು ದಲಿತ ಚಳವಳಿಯನ್ನು ಬಿಡುವುದಾಗಲೀ ಚಳವಳಿ ಅವರನ್ನು ಬಿಡುವುದಾಗಲೀ ಸಾಧ್ಯವಿರಲಿಲ್ಲ! ಸಂವಿಧಾನದ ಕರಡನ್ನು ಸಿದ್ಧಪಡಿಸು ವಾಗಲೂ ಸಚಿವರಾದಾಗಲೂ ಸಚಿವ ಪದವಿ ಬಿಟ್ಟ ಮೇಲೂ ಚಳವಳಿಗೆ ಅಂಬೇಡ್ಕರ್ ಹೊಸ ಆಯಾಮ ಕೊಡುತ್ತಾ ಮುನ್ನಡೆಸುತ್ತಿದ್ದರು. ಚಳವಳಿಗೆ ಪೂರಕವಾದ ರಾಜಕೀಯ ಪಕ್ಷವನ್ನೂ ಕಟ್ಟಲೆತ್ನಿಸಿದರು. ಬೌದ್ಧಧರ್ಮ ಸ್ವೀಕಾರವು ಅಂಬೇಡ್ಕರ್ ಮುನ್ನಡೆಸಿದ ಸಮಾನತಾ ಚಳವಳಿಯ ಬಹುಮುಖ್ಯ ಘಟ್ಟವಾಗಿತ್ತು. ಚಳವಳಿಯ
ಫಲಾನುಭವಿಗಳಾದ ವಿದ್ಯಾವಂತ ದಲಿತರು ತಾನು ಈವರೆಗೆ ಮುನ್ನಡೆಸಿದ ಚಳವಳಿಯನ್ನು ಮುನ್ನಡೆಸು ವರೋ ಇಲ್ಲವೋ ಎಂಬ ಆತಂಕ ಅಂಬೇಡ್ಕರ್ ಜೀವಿತದ ಕೊನೆಯಲ್ಲಿ ಮುತ್ತಿತ್ತು.
ಅಂಬೇಡ್ಕರ್ ಆತಂಕ ಹಾಗೂ ಅಂಬೇಡ್ಕರ್ ನಿರೀಕ್ಷೆಗಳ ಸಾಕಾರ ಎರಡನ್ನೂ ಆನಂತರದ ಕಾಲ ಕಂಡಿದೆ. ಬಾಬಾ ಸಾಹೇಬರ ತಾತ್ವಿಕ ಅನುಯಾಯಿಗಳು ಮುನ್ನಡೆಸಿದ ದಲಿತ ಚಳವಳಿಯು ಶಿಕ್ಷಣ, ಸಂಘಟನೆ, ಹೋರಾಟಗಳ ದಿಕ್ಕಿನಲ್ಲಿ ಮಹತ್ವದ ಗುರಿಗಳನ್ನು ಸಾಧಿಸಿದೆ. ಸಂವಿಧಾನ ಕೊಟ್ಟ ದಲಿತರ ಹಕ್ಕುಗಳನ್ನು ರಕ್ಷಿಸುವ ಕರ್ತವ್ಯವನ್ನು ದಲಿತ ರಾಜಕಾರಣಿಗಳು, ದಲಿತ ಚಳವಳಿಗಾರರು, ದಲಿತ ವಿದ್ಯಾವಂತರ ಜೊತೆಗೆ ಸಮಾನತೆಯಲ್ಲಿ ನಂಬಿಕೆಯಿಟ್ಟ ದಲಿತೇತರ ವರ್ಗವೂ ಮಾಡಿದೆ. ಇವರೆಲ್ಲರೂ ಅಂಬೇಡ್ಕರ್ ತೋರಿದ ಗುರಿಯತ್ತ ದೇಶವನ್ನು ನಡೆಸಲೆತ್ನಿಸಿದ್ದಾರೆ. ಹಾಗೆಯೇ ಗುರಿಯನ್ನು ತಪ್ಪಿಸಿದ ಖಳರೂ ಇದ್ದಾರೆ. ಕಳೆದ ದಶಕಗಳಲ್ಲಂತೂ ಅಂಬೇಡ್ಕರ್ ಹೋರಾಟದ ಫಲಗಳನ್ನು ಕಾರ್ಪೊರೇಟ್ ವಲಯ ಹಾಗೂ ಕೋಮುಶಕ್ತಿಗಳು ನಾಶ ಮಾಡಲೆತ್ನಿಸುತ್ತಾ, ದಲಿತ ಸಮುದಾಯವನ್ನೂ ಬಡವರ ಭಾರತವನ್ನೂ ಹಿನ್ನಡೆಯತ್ತ ದೂಡುತ್ತಿವೆ.
ಅಂಬೇಡ್ಕರ್ ಮಾರ್ಗದ ದಲಿತ ಚಳವಳಿಯ ಉದ್ದೇಶವನ್ನೇ ಅರಿಯದೆ, ಚಳವಳಿಯನ್ನು ಜಾತಿ, ಉಪಜಾತಿಗಳ ಸೀಮಿತ ವೇದಿಕೆಗಳನ್ನಾಗಿಸಿದವರೂ ಈ ಹಿನ್ನಡೆಗೆ ಕಾರಣರಾಗಿದ್ದಾರೆ. ಅಸ್ಪೃಶ್ಯರಿಗೆ ಸಿಗತೊಡಗಿದ್ದ ಅಷ್ಟಿಷ್ಟು ರಾಜಕೀಯ ಅಧಿಕಾರವೂ ಅಸ್ಪೃಶ್ಯತೆಯ ಕಷ್ಟ ಅನುಭವಿಸದ ಜಾತಿಗಳ ಪಾಲಾಗಿದೆ. ಅಂಬೇಡ್ಕರ್ ಚಿಂತನೆಯ ಫಲವಾಗಿಯೇ ಶಿಕ್ಷಣ, ಉದ್ಯೋಗ, ಅಧಿಕಾರ ಗಳನ್ನು ಪಡೆದ ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾ
ತರು; ರಾಜಕೀಯ ಮೀಸಲಾತಿಯಿಂದಾಗಿ ಅಧಿಕಾರ ಪಡೆದ ಮಹಿಳೆಯರು ಅಂಬೇಡ್ಕರ್ ಮಾರ್ಗದ ಮಹತ್ವ ವನ್ನೇ ಅರಿತಿಲ್ಲ; ದೇಶದ ಶೇಕಡ ಎಂಬತ್ತು ಭಾಗ ಜನರಿಗೆ ವಿಮೋಚನೆಯ ಬಾಗಿಲು ತೆರೆದ ಅಂಬೇಡ್ಕರ್ ಮಾರ್ಗ ಇನ್ನಷ್ಟು ಬೆಳೆಯದಿರಲು ಇವೆಲ್ಲವೂ ಕಾರಣಗಳಾಗಿವೆ. ಹಾಗೆಯೇ ಅಂಬೇಡ್ಕರ್ ಹಾದಿಯಿಂದ ದೂರವಾದ ದಲಿತ ಚಳವಳಿ ಒಡೆಯಲು ವ್ಯಕ್ತಿಗತ ಕಾರಣಗಳೂ ಕಾಲದ ಕಾರಣಗಳೂ ಇವೆ. ಕೂಡು ಕುಟುಂಬಗಳು ಒಡೆದು ಸಣ್ಣ ಕುಟುಂಬಗಳಾಗುತ್ತವೆ; ದೊಡ್ಡ ರಾಜಕೀಯ ಪಕ್ಷಗಳು ಒಡೆದು ಹತ್ತಾರು ಪಕ್ಷಗಳಾಗುತ್ತವೆ. ಸಾಮಾಜಿಕ ಚಳವಳಿಗಳು ಕೂಡ ಒಡೆದು ಹತ್ತಾಗುತ್ತವೆ.
ಇಂಥ ಕಾಲಘಟ್ಟದಲ್ಲಿ ದಲಿತ ಸಂಘಟನೆಗಳು ಒಗ್ಗೂಡಿ ಚಳವಳಿಯನ್ನು ಬೆಳೆಸಬೇಕೆಂಬ ಚರ್ಚೆಗಳು ಕರ್ನಾಟಕದಲ್ಲಿ ದೊಡ್ಡ ಮಟ್ಟದಲ್ಲಿ ಶುರುವಾಗಿವೆ. ಹಿಂದೆ ಹೀಗೆ ಒಗ್ಗೂಡುವ ಚರ್ಚೆಗಳು ಶುರುವಾಗಿದ್ದರೂ ಅವು ಸ್ಥಗಿತಗೊಳ್ಳಲು ಕಾರಣಗಳು ಹಲವು: ರಾಜಕೀಯ ಪಕ್ಷಗಳ ಕತ್ತರಿಯಾಟಗಳು, ದಲಿತ ಚಳವಳಿ ನಡೆದುಬಂದ ಹಾದಿಯ ‘ಪೋಸ್ಟ್ ಮಾರ್ಟಂ’ ಸಭೆಗಳಲ್ಲಿ ಒಡಕಿನ ಮೂಲಗಳನ್ನು ತಂತಮ್ಮ ಮೂಗಿನ ನೇರಕ್ಕೆ ಚರ್ಚಿಸುವ ಹಟ, ತಾತ್ವಿಕ ಭಿನ್ನಮತ, ಕೆಸರೆರಚಾಟ, ಚಾರಿತ್ರ್ಯವಧೆ, ಅಹಂಕಾರ, ಸ್ವಾರ್ಥ ಇತ್ಯಾದಿ...
ಇಂಥ ಅನುಭವಗಳ ಹಿನ್ನೆಲೆಯಲ್ಲಿ ದಲಿತ ಸಂಘ ಟನೆಗಳು ಮತ್ತೆ ಒಗ್ಗೂಡಿ ನಡೆಯಬೇಕಾದರೆ ಅವು ವಿಭಿನ್ನ ಹಾದಿಯನ್ನೇ ಹುಡುಕಬೇಕಾಗಬಹುದು:
1. ಮೊದಲಿಗೆ, ಅಂಬೇಡ್ಕರ್ ಉದ್ಘಾಟಿಸಿದ ಸಾಮಾಜಿಕ ನ್ಯಾಯದ ಯುಗದ ಫಲ ಪಡೆದ ಎಲ್ಲ ಜಾತಿ, ವರ್ಗಗಳ ಜನರು ಅಂಬೇಡ್ಕರ್ ಕಾರಣದಿಂದಾಗಿಯೇ ತಮಗೆ ದಕ್ಕಿರುವ ಸವಲತ್ತುಗಳನ್ನು ಅರಿತು ಆತ್ಮಪರೀಕ್ಷೆ ಮಾಡಿಕೊಳ್ಳಬೇಕು. ಬೌದ್ಧಮಾರ್ಗವನ್ನು ಬಲ್ಲವರಂತೂ ಈ ಆತ್ಮಪರೀಕ್ಷೆಯನ್ನು ಆಳವಾಗಿ ಮಾಡಿಕೊಳ್ಳಬೇಕು.
2. ಭಾರತವನ್ನು ನಿತ್ಯ ದಾರಿ ತಪ್ಪಿಸುತ್ತಿರುವವರು ಎರಚುವ ಹುಸಿ ಸಾಂಸ್ಕೃತಿಕ ಪ್ರಶ್ನೆಗಳನ್ನು ತಿರಸ್ಕರಿಸಿ, ದಲಿತರ, ಎಲ್ಲ ಜಾತಿಗಳ ಬಡವರ ಆರ್ಥಿಕ ಪ್ರಶ್ನೆಗಳನ್ನು ದಲಿತ ಚಳವಳಿ ಕೈಗೆತ್ತಿಕೊಳ್ಳಬೇಕು.
3. ಸನಾತನಿಗಳಂತೆ ಸದಾ ಹಿಂದಕ್ಕೇ ನೋಡುತ್ತಾ ದಲಿತ ಚಳವಳಿಯ ಪತನದ ಬಗೆಗೆ ಗೊಣಗುವುದನ್ನು ಹಿರಿಯರು ನಿಲ್ಲಿಸಬೇಕು. ಚಳವಳಿಯನ್ನು ‘ಕಟ್ಟಿದವರು’ ‘ಒಡೆದವರು’ ಎಂಬ ವ್ಯರ್ಥ ಚರ್ಚೆಯನ್ನು ಕೈ ಬಿಡಬೇಕು. ನಿಜಕ್ಕೂ ಬಗೆಹರಿಸಿಕೊಳ್ಳಲಾಗದ ಕಹಿಗಳು, ಅಸಮಾಧಾನಗಳಿದ್ದವರು ಏಕತೆಯ ಪ್ರಯತ್ನಗಳಲ್ಲಿ
ಭಾಗಿಯಾಗಲೇಬಾರದು. ಏಕತೆಯ ಚರ್ಚೆ ‘ಒಂದು ಹೆಜ್ಜೆ ಮುಂದೆ, ಎರಡು ಹೆಜ್ಜೆ ಹಿಂದೆ’ ಸಾಗದೆ, ಭವಿಷ್ಯಮುಖಿ ಆಗಬೇಕು.
4. ಕರ್ನಾಟಕದಲ್ಲಿ ದಲಿತ ಸಾಹಿತ್ಯದಿಂದಾಗಿ ಎಲ್ಲ ಜಾತಿ, ವರ್ಗಗಳ ಲೇಖಕ, ಲೇಖಕಿಯರೂ ದಲಿತ ಚಿಂತನೆಯನ್ನು ಗ್ರಹಿಸಿದರು; ದಲಿತಪರ ಚಿಂತನೆ, ಜಾತ್ಯತೀತ ನಿಲುವುಗಳು ಸಾಹಿತ್ಯ, ಪತ್ರಿಕೋದ್ಯಮ, ರಂಗಭೂಮಿ, ರಾಜಕಾರಣ, ಸಿನಿಮಾ... ಎಲ್ಲೆಡೆ ಹಬ್ಬಿದವು. ಆ ವಾತಾವರಣ ಮತ್ತೆ ಸೃಷ್ಟಿಯಾದರೆ ಅಂಬೇಡ್ಕರ್ ಮಾರ್ಗವನ್ನು ಈ ಕಾಲದಲ್ಲಿ ಬೆಳೆಸಲು ಎಲ್ಲ ಜಾತಿ, ವರ್ಗಗಳ ಕ್ರಿಯಾಶೀಲರೂ ಭಾಗಿಯಾಗಬಲ್ಲರು. ಈ ಶತಮಾನದ ಹೊಸ ತಲೆಮಾರು ಈ ಕೆಲಸವನ್ನು ಕೈಗೆತ್ತಿಕೊಳ್ಳಬೇಕು.
5. ವಿವಿಧ ದಲಿತ ಸಂಘರ್ಷ ಸಮಿತಿಗಳು, ದಲಿತ ಸಂಘಟನೆಗಳು ಒಗ್ಗೂಡಿ ‘ಮಹಾ ದಲಿತ ಸಂಘರ್ಷ ಸಮಿತಿ’ಯಂಥ ವಿಶಾಲ ಸಂಘಟನೆಯೊಂದನ್ನು ರೂಪಿಸಿ ಕೊಳ್ಳಬೇಕು. ತಂತಮ್ಮ ಮೂಲ ಸಂಘಟನೆಗಳನ್ನು ಉಳಿಸಿ ಕೊಂಡು ಕೂಡ ಗಟ್ಟಿ ತಾತ್ವಿಕ ಪ್ರಣಾಳಿಕೆಯೊಂದರ ಮೂಲಕ ವಿಶಾಲ ಸಂಘಟನೆಯನ್ನು ಕಟ್ಟಬಹುದು.
‘6. ‘ಸಂಘಟನೆಗಳು ನಾಯಕರ ಮಟ್ಟದಲ್ಲಿ ಬೆರೆಯು ವುದು ಸುಲಭ; ವಿವಿಧ ಜಿಲ್ಲೆಗಳ ಕಾರ್ಯಕರ್ತರು ತಕ್ಷಣ ಬೆರೆಯುವುದು ಕಷ್ಟ’ ಎಂಬ ಸಮಸ್ಯೆಯನ್ನು ನಾಯಕ ರೊಬ್ಬರು ಮುಂದಿಟ್ಟರು. ಸಂಘಟಿತ ಹೋರಾಟದಿಂದ ಚಳವಳಿಗೆ ಬರುವ ಶಕ್ತಿ ಹಾಗೂ ದಲಿತ ಸಮುದಾಯಕ್ಕೆ ಸಿಕ್ಕುವ ಆರ್ಥಿಕ, ರಾಜಕೀಯ ಬಲ ಕಾರ್ಯಕರ್ತರಿಗೆ ಮೊದಲು ಮನವರಿಕೆಯಾಗಬೇಕು.
7. ಚಳವಳಿಗಳನ್ನು ಕಟ್ಟಿದ ಹಿರಿಯರ ಸಲಹೆಗಳನ್ನು ಒಗ್ಗೂಡಿಸಿ ತಾತ್ವಿಕ ಮಟ್ಟದಲ್ಲಾದರೂ ಒಕ್ಕೂಟವೊಂದನ್ನು ಕಟ್ಟಲು ಹೊಸ ತಲೆಮಾರಿಗೆ ಸಾಧ್ಯವೇ? ಹಳೆಯ ಹೊರೆಯಿಲ್ಲದ, ಅಂಬೇಡ್ಕರ್ ಚಿಂತನೆಗಳನ್ನು ಓದುತ್ತಿರುವ ಹೊಸ ತಲೆಮಾರನ್ನು ಒಂದೆಡೆ ತರಲು ಹಿರಿಯ ಚಳವಳಿಗಾರರು ಯೋಚಿಸಬೇಕು. ವಿದ್ಯಾರ್ಥಿ ಸಂಘಟನೆ ಹಾಗೂ ಮಹಿಳಾ ಸಂಘಟನೆಗಳಿಗೆ ಅಂಬೇಡ್ಕರ್ ಚಿಂತನೆಯನ್ನು ಹಬ್ಬಿಸುವ ಕೆಲಸ ಹೊಸ ತಲೆಮಾರಿನಿಂದಲೇ ಶುರುವಾಗಬೇಕು.
8. ದೊಡ್ಡ ಶತ್ರುವಿನ ವಿರುದ್ಧ ಒಟ್ಟಾಗದಿದ್ದರೆ ನಿರ್ದಯ ಸರ್ಕಾರಗಳ ಕುಟಿಲೋಪಾಯಗಳನ್ನು ಎದುರಿಸುವುದು ಕಷ್ಟವೆಂಬುದು ರೈತ ನಾಯಕರಿಗೆ ಅರಿವಾಗಿದೆ; ಕೆಲವು ತಿಂಗಳುಗಳಿಂದ ನಡೆಯುತ್ತಿರುವ ರೈತ ಚಳವಳಿಯಲ್ಲಿ ಹಲವು ರೈತ ಸಂಘಟನೆಗಳ ಜೊತೆಗೆ ನಾಲ್ಕು ತಲೆಮಾರಿನ ರೈತರು, ರೈತ ಬೆಂಬಲಿಗರು ಒಗ್ಗೂಡಿ, ದಲಿತ ಚಳವಳಿಯ ಬೆಂಬಲದತ್ತಲೂ ಕೈಚಾಚಿದ್ದಾರೆ. ಈ ಬೆಳವಣಿಗೆಗಳನ್ನು ದಲಿತ ಚಳವಳಿಯ ಹೊಸ ತಲೆಮಾರು ಅರಿತರೆ ಹೊಸ ಒಕ್ಕೂಟವೊಂದು ಮೂಡಬಲ್ಲದು.
ಅಂಬೇಡ್ಕರ್ ಜಯಂತಿಯ ನೆಪದಲ್ಲಿ ಈ ಏಕತೆಯ ಧ್ಯಾನ ಎಲ್ಲರನ್ನೂ ಈ ಗುರಿಯೆಡೆಗೆ ಒಯ್ಯಲಿ!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.