ADVERTISEMENT

ಸಮಾಜವಾದಿ ಸೈಕಲ್‌ ಏರಿದ ಕುಸ್ತಿಪಟು!

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2022, 7:24 IST
Last Updated 10 ಅಕ್ಟೋಬರ್ 2022, 7:24 IST
ಪ್ರಧಾನಿ ಮೋದಿ ಅವರೊಂದಿಗೆ ಮುಲಾಯಂ
ಪ್ರಧಾನಿ ಮೋದಿ ಅವರೊಂದಿಗೆ ಮುಲಾಯಂ   

ತೀವ್ರ ಅನಾರೋಗ್ಯಗೊಂಡಿದ್ದ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್‌ ಯಾದವ್‌ ಇಂದು ಗುರುಗ್ರಾಮದ ಮೇದಾಂತ್‌ ಆಸ್ಪತ್ರೆಯಲ್ಲಿ ನಿಧರಾಗಿದ್ದಾರೆ. ಇದರೊಂದಿಗೆ ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತ ಸಮುದಾಯದ ಪ್ರಶ್ನಾತೀತ ನಾಯಕರಾಗಿದ್ದ ಮುಲಾಯಂ ಅವರ 6 ದಶಕಗಳ ರಾಜಕೀಯ ಜೀವನ ಕೊನೆಗೊಂಡಿದೆ. ಮೂರು ಬಾರಿ ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿ, ಕೇಂದ್ರ ರಕ್ಷಣಾ ಸಚಿವರಾಗಿ, ರಾಜ್ಯ ಖಾತೆ ಸಚಿವರಾಗಿ, 8 ಬಾರಿ ಶಾಸಕರಾಗಿ, ಎಂಎಲ್‌ಸಿಯಾಗಿ ರಾಜಕೀಯದಲ್ಲಿ ಸೈಕಲ್‌ ಸವಾರಿ ನಡೆಸಿದ ಮುಲಾಯಂ, ಉತ್ತರ ಪ್ರದೇಶ ರಾಜಕೀಯ ಅಧ್ಯಾಯದಲ್ಲೊಂದು ದಂತಕಥೆ. ಪ್ರಸ್ತುತ ಮೈನ್‌ಪುರಿ ಕ್ಷೇತ್ರದ ಸಂಸದರಾಗಿದ್ದ ಇವರು, ಹಿಂದೆ ಅಜಂಘಡ್‌ ಮತ್ತು ಸಂಭಾಲ್‌ ಕ್ಷೇತ್ರದಿಂದ ಆಯ್ಕೆಯಾಗುವ ಮೂಲಕ ಅತ್ಯಂತ ದೀರ್ಘ ಅವಧಿವರೆಗೆ ಸೇವೆ ಸಲ್ಲಿಸಿದ ಸಂಸದ ಎಂಬ ಖ್ಯಾತಿಯನ್ನು ಪಡೆದಿದ್ದರು.

ನವೆಂಬರ್‌ 22,1939ರಂದು ಎತ್ವಾ ಜಿಲ್ಲೆಯ ಸೈಫೈ ಗ್ರಾಮದ ಬಡ ಕುಟುಂಬದಲ್ಲಿ ಜನಿಸಿದ ಮುಲಾಯಂ, ಭಾರತೀಯ ರಾಜಕೀಯದಲ್ಲಿ ಉತ್ತರ ಪ್ರದೇಶವನ್ನು ಕೇಂದ್ರಬಿಂದುವಾಗಿಸಿದವರು. ಬಾಲ್ಯದಲ್ಲಿ ಕುಸ್ತಿಪಟುವಾಗುವ ಕನಸು ಕಂಡಿದ್ದ ಸಿಂಗ್‌, ಜಸ್ವಂತನಗರದ ಶಾಸಕ ನಾತು ಸಿಂಗ್‌ ಕಣ್ಣಿಗೆ ಬೀಳುತ್ತಾರೆ. ಮುಲಾಯಂ ಅವರ ಕೌಶಲ್ಯಗಳನ್ನು ನೋಡಿ ಅವರನ್ನು ತಮ್ಮ ಪಾಳಯಕ್ಕೆ ಸೇರಿಸಿಕೊಳ್ಳುತ್ತಾರೆ. 1967ರಲ್ಲಿ ಸಂಯುಕ್ತ ಸಮಾಜವಾದಿ ಪಕ್ಷದಿಂದ ಜಸ್ವಂತನಗರದ ಶಾಸಕರಾಗಿ ಮೊದಲ ಬಾರಿಗೆ ಮುಲಾಯಂ ಆಯ್ಕೆಯಾಗುತ್ತಾರೆ.

ಉತ್ತಮ ಕುಸ್ತಿಪಟು:
ಆದಾಗ್ಯೂ ತಮ್ಮ ಕುಸ್ತಿ ಕೌಶಲ್ಯ ಮರೆಯುವುದಿಲ್ಲ. ‘ಚರಕ್‌ ದಾವೊ’ ಎಂಬ ಕುಸ್ತಿಯ ತಂತ್ರದಿಂದ ಜನಪ್ರಿಯರಾಗಿದ್ದ ಮುಲಾಯಂ, ಎದುರಾಳಿಯ ಕಾಲು ಹಿಡಿದು ತಿರುಗಿಸಿ ಎಸೆಯುವಲ್ಲಿ ಪ್ರವೀಣರಾಗಿದ್ದರು. ಆಗ್ರ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿದ್ದ ಅವರಿಗೆ ರಾಜಕೀಯ ಶಾಸ್ತ್ರದಲ್ಲಿನ ಜ್ಞಾನ ಅಪಾರವಾಗಿತ್ತು.

ADVERTISEMENT

1970ರಲ್ಲಿ ರಾಮ್‌ ಮನೋಹರ್‌ ಲೋಹಿಯಾ ಅವರ ಸಿದ್ಧಾಂತದಿಂದ ಮುಲಾಯಂ ಆಕರ್ಷಿತರಾದರು. ಅವರೊಂದಿಗೆ ಗುರುತಿಸಿಕೊಂಡ ಮುಲಾಯಂ, ತುರ್ತು ಪರಿಸ್ಥಿತಿ ಸಮಯದಲ್ಲಿ 19 ತಿಂಗಳು ಜೈಲಿನಲ್ಲಿದ್ದರು. 1977ರಲ್ಲಿ ಜನತಾದಳ, ಕಾಂಗ್ರೇಸ್ಸೇತರ ಪಕ್ಷವಾಗಿ ಮೊದಲ ಸಲ ಅಧಿಕಾರ ಪಡೆಯಿತು. ಆಗ ಮುಲಾಯಂ ರಾಜ್ಯಖಾತೆ ಸಚಿವರಾದರು. ಇದು ಅವರ ರಾಜಕೀಯ ಭವಿಷ್ಯದ ಚಿತ್ರಣವನ್ನೇ ಬದಲಿಸಿತು. ರಾಜ್ಯ ಸಚಿವರಾಗಿ ಸಹಕಾರಿ ಸಂಸ್ಥೆಗಳಲ್ಲಿ ಪರಿಶಿಷ್ಟ ಜಾತಿಗೆ ಮೀಸಲಾತಿ ತಂದರು. ಇದು ಅವರನ್ನು ಪರಿಶಿಷ್ಟ ಜಾತಿಯಲ್ಲಿನ ದೊಡ್ಡ ನಾಯಕನನ್ನಾಗಿಸಿತು.

ಮುಲಾಯಂ ಅವರ ಸಮಾಜವಾದಿ ಚಿಂತನೆ 1989ರಲ್ಲಿ ಉತ್ತರ ಪ್ರದೇಶದಲ್ಲಿ ಜನತಾದಳ ಅಧಿಕಾರ ಪಡೆದಾಗ ಅವರನ್ನು ಮುಖ್ಯಮಂತ್ರಿಯಾಗಿ ಆಯ್ಕೆಯಾಗುವಂತೆ ಮಾಡಿತು. 1990ರಲ್ಲಿ, ಬಾಬ್ರಿ ಮಸೀದಿ ಕೆಡವಲು 2 ವರ್ಷಕ್ಕೆ ಮೊದಲು ಮುಲಾಯಂ 1990ರಲ್ಲಿ ಕರಸೇವಕರ ಮೇಲೆ ಪೊಲೀಸ್‌ ಫೈರಿಂಗ್‌ಗೆ ಆದೇಶ ನೀಡಿ ಸುದ್ದಿಯಾದರು. ಹೀಗಾಗಿ ಅವರು ಎಡರಂಗದ ಬಹುದೊಡ್ಡ ನಾಯಕರಾಗಿ ಹೊರಹೊಮ್ಮಿದರು. ಆದರೆ 1991ರಲ್ಲಿ ಉತ್ತರ ಭಾರತದಲ್ಲಿ ಕೇಸರಿ ಅಲೆ ದಟ್ಟವಾಯಿತು. ಮುಲಾಯಂ ಅವರನ್ನು ಅಧಿಕಾರ ಕಳೆದುಕೊಳ್ಳುವಂತೆ ಮಾಡಿತು. ಕಾಂಗ್ರೆಸ್‌ ತನ್ನ ಬೆಂಬಲ ವಾಪಾಸ್‌ ಪಡೆಯಿತು. ಹೀಗಾಗಿ ಬಿಜೆಪಿಗೆ ತನ್ನ ಕುರ್ಚಿ ಬಿಟ್ಟುಕೊಡಬೇಕಾದ ಸ್ಥಿತಿ ಎದುರಾಯಿತು.

ಸದಾ ದಲಿತ, ಹಿಂದುಳಿದ, ಮುಸ್ಲಿಂ ಮತಗಳ ಲೆಕ್ಕಾಚಾರದಲ್ಲಿದ್ದ ಮುಲಾಯಂ 1992ರಲ್ಲಿ ತಮ್ಮದೇ ಆದ ಸಮಾಜವಾದಿ ಪಕ್ಷವನ್ನು ಸ್ಥಾಪಿಸಿದರು. ತಮ್ಮ ಹೊಸ ಪಕ್ಷ ಪ್ರಾರಂಭಿಸಿದ ಒಂದು ವರ್ಷದಲ್ಲಿ, ಅಂದರೆ 1993ರಲ್ಲಿ ಬಹುಜನ ಸಮಾಜವಾದಿ ಪಕ್ಷದ ಬೆಂಬಲದೊಂದಿಗೆ ಮತ್ತೆ ಮುಖ್ಯಮಂತ್ರಿಯಾಗುತ್ತಾರೆ. ಆದರೆ ಅವರ ಜಾತಿ ಲೆಕ್ಕಾಚಾರ ಪ್ರತಿ ಸಲ ಕೆಲಸ ಮಾಡಲಿಲ್ಲ. ಹೀಗಾಗಿ 1995ರಲ್ಲಿ ಅವರು ಅಧಿಕಾರ ಕಳೆದುಕೊಂಡು ಮಾಯಾವತಿ ಮುಖ್ಯಮಂತ್ರಿಯಾಗುತ್ತಾರೆ.

ಮುಲಾಯಂಗೆ ಪರ್ಯಾಯವಾಗಿ ಅತ್ತ ಲಾಲೂ ಪ್ರಸಾದ್‌ ಯಾದವ್‌ ಬಿಹಾರದಲ್ಲಿ ಬೆಳೆಯುತ್ತಾರೆ. ಎಡರಂಗದ ವರ್ಚಸ್ವಿ ನಾಯಕನಾಗಿ ತಮ್ಮನ್ನು ಬಿಂಬಿಸಿಕೊಳ್ಳುತ್ತಾರೆ. ಮುಲಾಯಂ ಅವರದ್ದೇ ರಾಜಕೀಯ ಲೆಕ್ಕಾಚಾರ ಹೊಂದಿರುವ ಲಾಲೂ ಕೂಡ ದೇಶದಲ್ಲಿ ಪ್ರಭಾವಿ ರಾಜಕಾರಣಿ ಎನಿಸಿಕೊಳ್ಳುತ್ತಾರೆ.

1996ರಲ್ಲಿ ಕೇಂದ್ರದಲ್ಲಿ ಎಡಪಕ್ಷಗಳಿಗೆ ಅಧಿಕಾರ ಲಭಿಸಿತು. ಪ್ರಧಾನಿ ರೇಸ್‌ನಲ್ಲಿ ಮುಲಾಯಂ ಮುಂಚೂಣಿಯಲ್ಲಿದ್ದರು. ಆದರೆ ಲಾಲೂ ಪ್ರಸಾದ್‌ ಯಾದವ್‌ ಇದನ್ನು ತೀವ್ರವಾಗಿ ವಿರೋಧಿಸಿದ್ದರಿಂದ ಈ ಅವಕಾಶ ಕೈತಪ್ಪಿ ಹೋಯಿತು. ದೇವೇಗೌಡರು ಪ್ರಧಾನಿಯಾದರು. ಆದಾಗ್ಯೂ ಅವರ ಸರ್ಕಾರದಲ್ಲಿ ಮುಲಾಯಂಗೆ ರಕ್ಷಣಾ ಖಾತೆ ನೀಡಲಾಯಿತು.

ರಾಜ್ಯ ಮತ್ತು ರಾಷ್ಟ್ರ ರಾಜಕಾರಣದ ನಡುವೆ ಸದಾ ಪಯಣ ನಡೆಸುತ್ತಿದ್ದ ಮುಲಾಯಂ, ಕೇಂದ್ರದಲ್ಲಿ ಬಿಜೆಪಿ ಬಲ ಹೆಚ್ಚಾದಂತೆ ರಾಜ್ಯಕ್ಕೆ ಮರಳಿದರು. 2012ರಲ್ಲಿ ಸಮಾಜವಾದಿ ಪಕ್ಷ ಮತ್ತೆ ಅಧಿಕಾರ ಗದ್ದುಗೆ ಹಿಡಿದಾಗ ತಮ್ಮ ಪುತ್ರ ಅಖಿಲೇಶ್‌ ಯಾದವ್‌ ಅವರನ್ನು ಮುಖ್ಯಮಂತ್ರಿಯಾಗಿ ಮಾಡಿ ತಾವು ಅಧಿಕಾರದಿಂದ ದೂರ ಉಳಿಯುತ್ತಾರೆ. ಎರಡು ಮದುವೆ, ದಾಯಾದಿ ಕಲಹ, ಕುಟುಂಬದಲ್ಲಿನ ಬಿರುಕು ಮುಲಾಯಂ ಅವರನ್ನು ಅಧಿಕಾರದಿಂದ ದೂರ ಉಳಿಯುವಂತೆ ಮಾಡಿತು ಎಂಬ ಮಾತುಗಳು ಕೇಳಿಬರುತ್ತವೆ. ಅಲ್ಲಿಂದ ಬಳಿಕ ಮುಲಾಯಂ ರಾಜಕೀಯದಲ್ಲಿ ಮತ್ತೆ ಮೇಲೆಳಲಿಲ್ಲ.

ಬಲಕ್ಕೆ ವಾಲಿದ್ದಾರೇ?:
ಹಾಗೆ ನೋಡಿದರೆ ರಾಜಕೀಯದಲ್ಲಿ ಸದಾ ಅಧಿಕಾರ ಅನುಭವಿಸುತ್ತ ಬಣ್ಣದ ಬದುಕು ಕಂಡವರು ಮುಲಾಯಂ. ಒಂದು ಕಾಲಕ್ಕೆ ಎಡಪಂಥ, ಹಿಂದುಳಿದ ವರ್ಗಗಳ ನಾಯಕರೆನಿಸಿಕೊಂಡ ಮುಲಾಯಂ 2021ರಲ್ಲಿ ಆರ್‌ಎಸ್‌ಎಸ್‌ನ ಮೋಹನ್‌ ಭಾಗವತ್‌ ಜೊತೆಗೆ ಕಾಣಿಸಿಕೊಂಡಿದ್ದು ಬಹಳ ಚರ್ಚೆ ಹುಟ್ಟು ಹಾಕಿತ್ತು. 2019ರಲ್ಲಿ ನರೇಂದ್ರ ಮೋದಿ ಪ್ರಧಾನಿಯಾಗಬೇಕೆಂದು ಸಂಸತ್ತಿನಲ್ಲಿ ಮುಲಾಯಂ ಹೇಳಿಕೆ ನೀಡಿದ್ದರು. ಜೊತೆಗೆ ತೃತೀಯ ರಂಗದಿಂದಲೂ ದೂರ ಉಳಿದಿದ್ದರು. ಒಮ್ಮೆ ಅತ್ಯಾಚಾರದ ಕುರಿತು ವಿವಾದಾತ್ಮಕ ಹೇಳಿಕೆ ನೀಡಿ ಹಿನ್ನಡೆ ಅನುಭವಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.