ಕರ್ನಾಟಕದ ಐಡೆಂಟಿಟಿ (ಅಸ್ಮಿತೆ) ರಾಜಕಾರಣ ವಿವಿಧ ಮಜಲುಗಳನ್ನು ಪಡೆಯುತ್ತಿರುವ ಸಂದರ್ಭದಲ್ಲಿ, ಜಾತಿಗಳ ಪಟ್ಟಿಯಲ್ಲಿ ಪುನರ್‌ವರ್ಗೀಕರಣ, ಮೀಸಲಾತಿಯಲ್ಲಿ ಹೆಚ್ಚಳ ಹಾಗೂ ಒಳಮೀಸಲಾತಿಗೆ ಹಲವು ಸಮುದಾಯಗಳು ಬೇಡಿಕೆ ಮುಂದಿಟ್ಟಿವೆ. ಆದರೆ, ಇದು ವಸಾಹತುಶಾಹಿ ಕಾಲದ ಬೆಳವಣಿಗೆಯ ವಿಸ್ತೃತ ರೂಪ ಅಷ್ಟೆ. ವಾಸ್ತವವಾಗಿ ಕರ್ನಾಟಕದಲ್ಲಿ 1874ರಿಂದ ಆರಂಭಗೊಂಡ ಈ ರಾಜಕಾರಣ ಇನ್ನೂ ಮುಗಿಯದ ಕತೆ. ಈ ಸಂದರ್ಭದಲ್ಲಿ ಅಲ್ಪಸಂಖ್ಯಾತರಲ್ಲಿ (ಮುಸ್ಲಿಂ) ಜಾತಿ ಮತ್ತು ಅಸ್ಮಿತೆಯ ರಾಜಕಾರಣ ಇತ್ತೇ, ಅದರಸ್ವರೂಪವೇನಾಗಿತ್ತು, ಅದನ್ನು ಹೇಗೆ ಅರ್ಥೈಸಬಹುದು ಎಂಬ ಪ್ರಶ್ನೆಗಳಿವೆ.
ಮುಸ್ಲಿಮರಲ್ಲಿ ಜಾತಿಗಳ ತರಹದ ಎರಡು ರೀತಿಯ ವರ್ಗಗಳನ್ನು ಪ್ರಥಮ ಬಾರಿಗೆ ಗುರುತಿಸಿದವ ಜಿಯಾವುದ್ದೀನ್ ಬರನಿ. ತುಘಲಕ್‍ನ ಆಸ್ಥಾನದಲ್ಲಿದ್ದ ಬರನಿ ತನ್ನ ‘ಫತವಾ ಎ- ಜಹಂದಾರಿ’ ಗ್ರಂಥದಲ್ಲಿ ಮುಸ್ಲಿಮರನ್ನು ಎರಡು ವರ್ಗಗಳನ್ನಾಗಿಸಿ ಗುರುತಿಸುತ್ತಾನೆ. ಮೊದಲನೆಯದು, ಉದಾತ್ತ, ಗುಣಶೀಲ ಮೇಲ್ವರ್ಗ. ಎರಡನೆಯದು, ಗುಲಾಮಿ, ಬಜಾರಿ, ಕಟುಕ ತಳವರ್ಗ. ತದನಂತರದ ಚರ್ಚೆಯಲ್ಲಿ ಮುಖ್ಯವಾಗುವುದು ಬುಡಕಟ್ಟು ಮತ್ತು ಧರ್ಮ. ಧರ್ಮ ಎಲ್ಲಾ ಐಡೆಂಟಿಟಿಗಳನ್ನು ನಿರಾಕರಿಸಿದರೂ ತನ್ನ ತಳಹದಿಯಲ್ಲಿ ವಿವಿಧ ಪ್ರದೇಶಗಳ ಸಾಮಾಜಿಕ ಚೌಕಟ್ಟುಗಳನ್ನು ಒಳಗೊಳ್ಳುತ್ತಾ ಹೋಗುವುದು ಅಷ್ಟೇ ವಾಸ್ತವ. ಇದೇ ಕಾರಣಕ್ಕಾಗಿ ಖ್ಯಾತ ಸಮಾಜಶಾಸ್ತ್ರಜ್ಞ ಅಕ್ಬರ್ ಅಹ್ಮದ್, ಧರ್ಮಕ್ಕೆ ಯಾವತ್ತೂ ಬುಡಕಟ್ಟು ಚೌಕಟ್ಟನ್ನು ನಿರಾಕರಿಸಲು ಸಾಧ್ಯವಾಗಲಿಲ್ಲ. ಅಲ್ಲದೆ ಬುಡಕಟ್ಟು ದೃಷ್ಟಿಕೋನದ ಧರ್ಮ ಇದೆ ಎಂದು ವಾದಿಸುತ್ತಾರೆ. ಬಹುಶಃ ಇದೇ ಚೌಕಟ್ಟಿನಲ್ಲಿ ಮುಸ್ಲಿಮರಲ್ಲಿ ಜಾತಿಗಳನ್ನು ಅಥವಾ ‘ಜಾತಿಗಳಂತೆ ಇರುವ ಚೌಕಟ್ಟನ್ನು’ ನೋಡಬೇಕು.
ಇದಕ್ಕೆ ವಸಾಹತುಶಾಹಿ ಕಾಲದ, ಅದರಲ್ಲೂ 1871ರ ನಂತರದ ಜನಗಣತಿ ಮತ್ತು ಕುಲಶಾಸ್ತ್ರೀಯ ಅಧ್ಯಯನಗಳು ಪುಷ್ಟಿ ಕೊಡುತ್ತವೆ. ವಾಸ್ತವವಾಗಿ ಎರಡೂ ಅಧ್ಯಯನಗಳು ಬಹಳಷ್ಟು ತಪ್ಪುಗಳನ್ನು ಮಾಡಿದ್ದವು. ಹಿಂದೂ ಮತ್ತು ಇಸ್ಲಾಂ ಧರ್ಮದ ಸೂಕ್ಷ್ಮಗಳು ಗೊತ್ತಿಲ್ಲದಿದ್ದುದೇ ಇದಕ್ಕೆ ಕಾರಣವಾಗಿರಬಹುದು. ಜನಗಣತಿಯು ನಾಲ್ಕು ಪ್ರಬಲ ಜಾತಿಗಳನ್ನು ಹೊರತುಪಡಿಸಿದರೆ, ನೂರಾರು ಜಾತಿಗಳನ್ನು ಒಂದೋ ಗುರುತಿಸಿತ್ತು ಅಥವಾ ನಿರ್ಮಿಸಿತ್ತು. ಅದರ ಪಟ್ಟಿಯಲ್ಲಿ ಪಂಗಡಗಳೇ ಪಂಥಗಳಾದವು, ಪಂಥಗಳೇ ಧರ್ಮಗಳಾದವು, ಉಪಜಾತಿಗಳೇ ಜಾತಿಗಳಾದವು, ಜಾತಿಗಳು ಪ್ರತ್ಯೇಕವಾಗಿ ಗುರುತಿಸಲ್ಪಟ್ಟವು. ಮುಸ್ಲಿಮರನ್ನು ದಾಖಲಿಸುವಾಗ ಧರ್ಮ-ಪಂಗಡ, ಚಿಂತನಾಶಾಲೆ, ಜಾತಿ, ‘ಟ್ರೈಬ್’ಗಳ ನಡುವಿನ ವ್ಯತ್ಯಾಸವೇ ಕಲಸುಮೇಲೋಗರ ಆಯಿತು. ಇದರಿಂದಾಗಿ ಮುಸ್ಲಿಂ ಐಡೆಂಟಿಟಿಗೆ ಎರಡು ರೂಪಗಳು ದೊರೆತವು- ಧರ್ಮದ ರೂಪ ಹಾಗೂ ಸರ್ಕಾರಿ ಪಟ್ಟಿಯ ರೂಪ.
ಜನಗಣತಿಯಲ್ಲಿ ಬಹುಮುಖ್ಯವೆನಿಸುವುದು 1901ರ ಬಂಗಾಲದ ಜನಗಣತಿ. ಈ ಸಂದರ್ಭದಲ್ಲಿ ಜನಗಣತಿಯು ಪ್ರಬಲ ಜಾತಿಗೆ ಸೇರಿದ ಆಸ್ರಫ್‍ರಲ್ಲಿ ಆರು ಜಾತಿಗಳನ್ನು ಗುರುತಿಸಿತ್ತು- ಶೇಖ್, ಸಯ್ಯದ್, ಪಠಾಣ್, ಮೊಘಲ್, ಮಲಿಕ್, ಮಿರ್ಜಾ. ಕುಲಕಸುಬು ಜಾತಿಯ ಅಜ್ಲಫ್‍ಗಳಲ್ಲಿ ಬಹುಮುಖ್ಯವಾಗಿ ದರ್ಜಿ, ಜೊಲಾಹ, ಫಕೀರ್, ರಂಗ್ರೇಜ್, ಬಾರ್ಹಿ, ಬಲಿಹಾರ, ಚಿಕ್, ಚೌರಿಹಾರ್, ದಾಯ್, ಧವ, ಧುನಿಯ, ಗದ್ದಿ, ಕಲಾಲ್, ಕಸ್ಯೆ, ಕೌಲ, ಕುಂಜಾರ, ಲಹೆರಿ ಇತ್ಯಾದಿ 34 ಜಾತಿಗಳನ್ನು; ದಲಿತರಿಗೆ ಸಮಾನವಾಗಿರುವ ಅರ್ಜ್‍ಲ್ಸ್‌ನಲ್ಲಿ ಭನಾರ್, ಹಲಾಲ್ಕೋರ್, ಹಿಜಾರ, ಕಸ್ಬಿ ಇತ್ಯಾದಿ ಏಳು ಜಾತಿಗಳನ್ನು ಮತ್ತು ಅದರೊಟ್ಟಿಗೆ ಜಾತಿ ಪಂಚಾಯತ್‌ಗಳನ್ನು ಗುರುತಿಸಿತ್ತು. 1931ರ ಜನಗಣತಿ ಇದಕ್ಕಿಂತ ಭಿನ್ನವಾಗಿರಲಿಲ್ಲ. ಅದು ಅತೀ ಹೆಚ್ಚು ಜಾತಿಗಳನ್ನು ಮತ್ತು ಗೋತ್ರಗಳನ್ನು ಗುರುತಿಸಿತ್ತು.
ಇದೇ ಸಂದರ್ಭದಲ್ಲಿ ಕರ್ನಾಟಕದಲ್ಲಿ ಜಾತಿಯ ದಾಖಲಾತಿ ಇತ್ತೇ ಎಂಬ ಪ್ರಶ್ನೆ ಇದೆ. ಅದಕ್ಕಾಗಿ ವಿವಿಧ ಪ್ರಾಂತ್ಯಗಳ ಜನಗಣತಿಯನ್ನು ನೋಡಬೇಕು. ಕೊಡಗಿನ 1891ರ ಜನಗಣತಿಯಲ್ಲಿ ಜಾತಿಗಳ ಹೆಸರುಗಳು ವಿಚಿತ್ರವಾಗಿದ್ದವು. ಕಂದಟಾ, ಗುಳಿಗ, ಕಕಾರಿ, ಯೆನ್ನೆ ಗೌಳಿಗ. ಇವು ನಿರ್ಮಿತಿಯೇ ಅಥವಾ ವಾಸ್ತವವೇ ಎಂಬ ಗೊಂದಲವಿದೆ. ಇವುಗಳು ಮುಂದೆ ಸಿಗುವುದೇ ಇಲ್ಲ.
ಹಳೆ ಮೈಸೂರಿನಲ್ಲಿ ಜಾತಿಗಳ ಉಲ್ಲೇಖ ದೊರೆಯುವುದು 1911 ಮತ್ತು 1931ರ ಜನಗಣತಿಯಲ್ಲಿ. ಇದರಲ್ಲಿ ಬಹಳ ಮುಖ್ಯವಾಗಿರುವುದು ದೋಬಿ, ಕಾಪು, ಮಾದಿಗ, ಮೋಚಿ, ಒಡ್ಡೆ, ಪರಿಯಾನ್, ರಜಪೂತ್, ರಂಗರ್. ಹೈದರಾಬಾದ್ ಪ್ರಾಂತ್ಯದ 1921ರ ಜನಗಣತಿಯಲ್ಲಿ ಕೆಲವು ಜಾತಿಗಳು ಉಲ್ಲೇಖವಾಗುತ್ತವೆ: ರಂಗಾರಿ/ ರಂಗ್ರೇಜ್, ದುಡಿಕುಲ, ಗಾಯ್, ಕಸಬ್, ದೋಬಿ, ಮೋಚಿ. ಬಾಂಬೆ ಪ್ರೆಸಿಡೆನ್ಸಿಯ 1931ರ ಜನಗಣತಿ ಬಹುಮುಖ್ಯವಾಗಿ ಉತ್ತರ ಕನ್ನಡದ ಮುಸ್ಲಿಂ ಆದಿವಾಸಿಗಳಾದ ಸಿದ್ದಿಗಳನ್ನು ಗುರುತಿಸುತ್ತದೆ. ಅಲ್ಲದೆ ಅಂದಿನ ಪ್ರೆಸಿಡೆನ್ಸಿ ಜಿಲ್ಲೆಗಳಾದ ಬಿಜಾಪುರ, ಬೆಳಗಾವಿ, ಕೆನರಾ, ಧಾರವಾಡ ಭಾಗಗಳಲ್ಲಿದ್ದ ಹಲವು ಜಾತಿಗಳನ್ನು ಪಟ್ಟಿ ಮಾಡುತ್ತದೆ. ಅದರಲ್ಲಿ ಕೆಲವು ಕುಲಕಸುಬು ಜಾತಿಗಳು. ಇವುಗಳಲ್ಲಿ ಅತರಿ ಅಥವಾ ಅತರ್ (ಸುಗಂಧ ದ್ರವ್ಯವನ್ನು ಮಾರುವ ಜಾತಿಗಳು), ಕಲಾಲ್/ಕಲಾನ್ (ಮದ್ಯ ಮಾರಾಟಗಾರರು), ಕಚ್ಚಿ (ಹಣ್ಣು ವ್ಯಾಪಾರಿಗಳು), ಕಲಾವಂತ್ (ನೃತ್ಯ ಮತ್ತು ಹಾಡುಗಾರರು), ಕಸ್ಬಿ/ ಕಾಟಿಕ್ (ಕಟುಕ), ಭಂಗಿ/ಹಲಾಲ್ಕೋರ್, ಸುಳೆರ್ (ವೇಶ್ಯೆ), ಸುತಾರ್ (ಬಡಗಿ), ಕೊಟೆಗಾರ್/ ಮೆತ್ರಿ/ ಕೊಟ್ಲಿವ (ಜಾಡಮಾಲಿ), ಹಜಾಮ್ (ಕ್ಷೌರಿಕ), ವಜ್ರಂತಿ (ವಾದ್ಯ ನುಡಿಸುವವ), ಜಾತಿಗರ್ (ದನದ ವ್ಯಾಪಾರಿ), ಗಾರೂಡಿ/ ಮೋಡಿಕಾರ್ (ಹಾವಾಡಿಗ), ಕಂಜರ್ (ಭಿಕ್ಷುಕ) ಇತ್ಯಾದಿ.
ಚಪ್ದರ್ ಬಂದ್ ನಿರ್ದಿಷ್ಟವಾಗಿ ನಿರ್ಮಿತಿ ಜಾತಿ- ಅದನ್ನು ಕ್ರಿಮಿನಲ್ ಜಾತಿಯೆಂದು ವಸಾಹತುಶಾಹಿ ಪಟ್ಟಿ ಮಾಡುತ್ತದೆ. ವಿಚಿತ್ರವೆಂದರೆ, 1920ರ ದಶಕದ ಬ್ರಾಹ್ಮಣೇತರ ಚಳವಳಿ ಮತ್ತು ತದನಂತರದ ಮೀಸಲಾತಿಯಲ್ಲಿ ಅವರು ಸಮುದಾಯವಾಗಿ ಗುರುತಿಸಲ್ಪಟ್ಟರೇ ಹೊರತು ಜಾತಿಯಾಗಿ ಅಲ್ಲ.
ಒಂದೆಡೆ ಸಂವಿಧಾನ ರಚನಾ ಸಮಿತಿ, 1950ರ ರಾಷ್ಟ್ರಾಧ್ಯಕ್ಷರ ಆದೇಶವು ಮುಸಲ್ಮಾನರಿಗೆ ಧರ್ಮಾಧಾರಿತವಾಗಿ ಮೀಸಲಾತಿಯನ್ನು ನಿರಾಕರಿಸಿದರೆ, ಮತ್ತೊಂದೆಡೆ, ಅಂದಿನ ಜನಗಣತಿ ಮತ್ತು ತದನಂತರದ ಮೀಸಲಾತಿ ಆಯೋಗಗಳು ಜಾತಿಗಳ ಅಸ್ತಿತ್ವವನ್ನು ದೃಢಪಡಿಸಿದವು. 1951ರ ಜನಗಣತಿಯು ಮುಸ್ಲಿಮರಲ್ಲಿ 29 ಜಾತಿಗಳನ್ನು ಗುರುತಿಸಿತ್ತು ಮತ್ತು ಕೆಲವು ಜಾತಿಗಳು ಹೊಸತಾಗಿದ್ದವು- ಅವನ್, ಬಬುಹಿ, ಗುರ್, ಜಾಮ್, ಜಂಜುವ, ಖರಲ್, ಖದ್ರಿ, ಕಾಕರ್, ಖಂಡಾರಿ, ನೆಮನ್, ನಯತ್. ದುರಂತವೆಂದರೆ, ಮುಂದೆ ಮೀಸಲಾತಿಯನ್ನು ಘೋಷಿಸುವ ಸಂದರ್ಭದಲ್ಲಿ ಹಲವು ಜಾತಿಗಳು ಸರ್ಕಾರಿ ಪಟ್ಟಿಯಿಂದ ಹೊರಗುಳಿದವು. ಅವುಗಳ ಅಸ್ಮಿತೆಯ ಕುರಿತು ನಮಗೆ ಮುಂದೆ ದಾಖಲೆಗಳು ದೊರೆಯುವುದಿಲ್ಲ. ವಾಸ್ತವವಾಗಿ ಮೀಸಲಾತಿ ಎಂಬುದು ಜಾತಿ ರಾಜಕಾರಣದ ಬಹುಮುಖ್ಯ ಭಾಗ.
ಜನಗಣತಿಯ ಸಂದರ್ಭದಲ್ಲಿ ಲಿಂಗಾಯತರು, ಒಕ್ಕಲಿಗರು, ಕುಂಚಿಟಿಗರು ಮತ್ತಿತರ ಸಮುದಾಯಗಳು ಒತ್ತಾಯಿಸಿದಂತೆ ಮುಸಲ್ಮಾನ ಜಾತಿಗಳು ಪುನರ್ ವರ್ಗೀಕರಣಕ್ಕಾಗಿ ಯಾವತ್ತೂ ಕೇಳಲಿಲ್ಲ. ಅಪವಾದವೆಂಬಂತೆ, ಹಾವನೂರು ಆಯೋಗದ ಸಂದರ್ಭದಲ್ಲಿ ತಮ್ಮನ್ನು ಪ್ರತ್ಯೇಕವಾಗಿ ದಾಖಲಿಸಬೇಕೆಂದು ಕೇಳಿಕೊಂಡಿದ್ದರು. ಕೇಂದ್ರದಲ್ಲಿ ಮಂಡಲ್ ಆಯೋಗ, ಸಾಚಾರ್ ಸಮಿತಿ, ಕರ್ನಾಟಕದಲ್ಲಿ ನಾಗನಗೌಡ ಸಮಿತಿ, ಹಾವನೂರು ಆಯೋಗ ಜಾತಿಗಳನ್ನು ಗುರುತಿಸುತ್ತಾ ಹೋದವು. ಇವುಗಳು ಈ ಹಿಂದಿನಂತೆ ಹೊಸ ಜಾತಿಗಳನ್ನು ನಿರ್ಮಿಸಲಿಲ್ಲ. ಇದರ ಭಾಗವಾಗಿಯೇ ಎಚ್.ಡಿ.ದೇವೇಗೌಡರ ಆಡಳಿತ ಅವಧಿಯಲ್ಲಿ ಸಾಮಾಜಿಕ ಮತ್ತು ಆರ್ಥಿಕ ಹಿಂದುಳಿಯುವಿಕೆಯನ್ನು ಪರಿಗಣಿಸಿ ಎರಡು ಪ್ರವರ್ಗಗಳಲ್ಲಿ ಮೀಸಲಾತಿಯನ್ನು ನೀಡಲಾಯಿತು. ಇದರರ್ಥ ಜಾತಿ ರಾಜಕಾರಣ ಮುಗಿಯಿತು ಎಂದಲ್ಲ.
ಒಂದನೆಯದಾಗಿ, ಕೇಂದ್ರದ ಹಿಂದುಳಿದವರ ಪಟ್ಟಿಯಲ್ಲಿ ಒಂಬತ್ತು ಮುಸ್ಲಿಂ ಜಾತಿಗಳನ್ನು ‘ಹೊರತುಪಡಿಸಿ’ ಇನ್ನಿತರರನ್ನು ಯಾವುದೇ ತರ್ಕವಿಲ್ಲದೆ ಸೇರಿಸಲಾಯಿತು. ಇದೇ ಸಂದರ್ಭದಲ್ಲಿ ಕುಲಕಸುಬುಗಳನ್ನು ಬಿಟ್ಟ ಜಾತಿಗಳಿಗೆ ಮೀಸಲಾತಿ ಅನ್ವಯಿಸುತ್ತದೆಯೇ? ಜಾತಿಗಳ ವಿಸ್ಮೃತಿಗೊಳಗಾದ ಸಮುದಾಯ ತನ್ನ ಐಡೆಂಟಿಟಿಯನ್ನು ಜಾತಿಗಳ ಮೂಲಕ ಕಟ್ಟಬೇಕೇ ಎಂಬಿತ್ಯಾದಿ ಗೊಂದಲಗಳಿವೆ. ವಸಾಹತು ಕಾಲದಲ್ಲಿ ದಾಖಲಾಗಿದ್ದ ಎಷ್ಟೋ ಜಾತಿಗಳು ಇವತ್ತು ಕಣ್ಮರೆಯಾಗಿವೆ, ದಾಖಲಾತಿಯಿಂದ ಹೊರಗಿವೆ, ವಿಸ್ಮೃತಿಯ ಭಾಗವಾಗಿವೆ. ಇಂದಿನ ಜಾತಿಗಳ ಐಡೆಂಟಿಟಿ ರಾಜಕಾರಣದಲ್ಲಿ ಅವುಗಳು ಮರುಹುಟ್ಟು ಪಡೆದರೆ ಅದು ಹೊಸ ರಾಜಕಾರಣಕ್ಕೆ ದಾರಿ ಮಾಡಿಕೊಡುವುದು ದಿಟ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.