ವಿಭಿನ್ನ ಭಾಷೆ, ಸಂಸ್ಕೃತಿ, ಆಚಾರ-ವಿಚಾರವನ್ನೊಳಗೊಂಡ 130 ಕೋಟಿಗೂ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಭಾರತವು ಒಬ್ಬ ವ್ಯಕ್ತಿಯ ಸಂದೇಶ ಮತ್ತು ಸೂಚನೆಗಳಿಗೆ ತಲೆದೂಗುವಂತೆ ತೋರುವುದರ ಹಿಂದಿನ ಅಗೋಚರವಾದ ನಂಬಿಕೆ ಯಾವುದಿರಬಹುದು? ಸ್ವಚ್ಛಭಾರತ ಅಭಿಯಾನಕ್ಕೆ ಕರೆಕೊಟ್ಟಾಗ ಇಡೀ ದೇಶದ ಒಂದು ಸಮೂಹ ಕೈಯಲ್ಲಿ ಪೊರಕೆಯನ್ನು ಹಿಡಿದು ಕಾಯಕದಲ್ಲಿ ತೊಡಗಿದ್ದನ್ನು ನೋಡಿದ್ದೇವೆ. ಕೊರೋನಾದಂತಹ ರೋಗಾಣು ಅಪ್ಪಳಿಸಿದ ಭರಕ್ಕೆ ಇಡೀ ಜಗತ್ತು ಹಾನಿಗೊಳಗಾದಾಗ ದೀಪವನ್ನು ಬೆಳಗಿಸಿ ಗಂಟೆ-ಜಾಗಟೆಯನ್ನು ಮೊಳಗಿಸಲು ನರೇಂದ್ರ ಮೋದಿಯವರು ಕರೆ ನೀಡಿದಾಗ ಇಡೀ ದೇಶವೇ ಶ್ರದ್ಧಾಪೂರ್ವಕವಾಗಿ ಸೂಚನೆಯನ್ನು ಅನುಸರಿಸುತ್ತದೆ.
ಇದು ಭಾರತ ದೇಶಕ್ಕೆ ಮಾತ್ರ ಸೀಮಿತವಾಗಿ ನಿಲ್ಲುವುದಿಲ್ಲ. ಜಗತ್ತಿನಾದ್ಯಂತ ಯೋಗ ಆಚರಣೆ ನಡೆಯಬೇಕು ಎಂಬ ಭಾರತದ ಕೋರಿಕೆಗೆ ವಿಶ್ವಸಂಸ್ಥೆ ಮನ್ನಣೆ ನೀಡಿ, ಜೂನ್ 21 ಅನ್ನು ಅಂತರರಾಷ್ಟ್ರೀಯ ಯೋಗ ದಿನವನ್ನಾಗಿ ಘೋಷಿಸಿತು. ಇಂದು ದೇಶದ ಪುಟ್ಟ ಹಳ್ಳಿಯಿಂದ ಹಿಡಿದು ಜಗತ್ತಿನ ಪ್ರಮುಖ ರಾಷ್ಟ್ರಗಳೆಲ್ಲವೂ ಮೋದಿಯವರ ಮೋಡಿಗೆ ಒಳಗಾಗಿವೆಯೆಂದರೆ ಅತಿಶೋಯಕ್ತಿಯೇನಲ್ಲ!
ನರೇಂದ್ರ ಮೋದಿಯವರು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದಾಗ ಭಾರತದ 18 ಸಾವಿರ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ದೊರೆತಿರಲಿಲ್ಲ. ಕೇವಲ 1 ಸಾವಿರ ದಿನಗಳಲ್ಲಿ 18 ಸಾವಿರ ಹಳ್ಳಿಗಳನ್ನು ವಿದ್ಯುದೀಕರಣಗೊಳಿಸಲಾಯಿತು. ಪ್ರತಿವರ್ಷ ಹತ್ತಾರು ಸಾವಿರ ಮಹಿಳೆಯರು ಶ್ವಾಸಕೋಶದ ಕ್ಯಾನ್ಸರ್‌ನಿಂದ ಸಾಯುತ್ತಿದ್ದರು. ಹೊಗೆಯುಕ್ತ ವಾತಾವರಣದಲ್ಲಿ ಕೆಲಸ ನಿರ್ವಹಿಸುವ ಅನಿವಾರ್ಯವು ಕ್ಯಾನ್ಸರ್‌ಗೆ ಕಾರಣವಾಗುತ್ತಿತ್ತು. ಹೊಗೆಮುಕ್ತ ಅಡುಗೆ ಮನೆಯ ಕನಸು ಕಂಡ ಮೋದಿಯವರು ಉಜ್ವಲ ಯೋಜನೆ ಮೂಲಕ ತಲುಪಿದ್ದು ಬರೋಬ್ಬರಿ 9 ಕೋಟಿ ಕುಟುಂಬಗಳನ್ನು.
ಆರ್ಥಿಕ ಚಟುವಟಿಕೆಗಳಲ್ಲಿ ಜನಸಾಮಾನ್ಯನೂ ತೊಡಗಿಕೊಳ್ಳುವಂತೆ ಮಾಡಿದ ಪ್ರಧಾನ ಮಂತ್ರಿ ‘ಜನ್‍ಧನ್ ಯೋಜನೆ’, ಉತ್ಪಾದನೆಯನ್ನು ಹೆಚ್ಚಿಸಿ ರಫ್ತು ಕೈಗೊಳ್ಳುವ ‘ಮೇಕ್ ಇನ್ ಇಂಡಿಯಾ’ ಯೋಜನೆ, ಕಾರ್ಮಿಕ ನೀತಿ ಹಾಗೂ ಶ್ರಮಿಕರ ಘನತೆಯನ್ನು ಉತ್ತೇಜಿಸುವ ಶ್ರಮ ಏವ ಜಯತೆ, ಅಟಲ್ ಪಿಂಚಣಿಯಿಂದ ಹಿಡಿದು ಹೋಸ ಯೋಜನೆಗಳೆಲ್ಲವನ್ನೂ ತಂತ್ರಜ್ಞಾನ ಅಳವಡಿಕೆಗೆ ಹೊಂದಿಸಲಾಯಿತು. ಡಿಜಿಟಲ್ ಇಂಡಿಯಾ ಮಿಷನ್ ಜನರಲ್ಲಿ ಮಹತ್ತರ ಬದಲಾವಣೆಗೆ ಕಾರಣವಾಯಿತು.
ದೇಶದ ಬಹುಪಾಲು ಆದಾಯ ವಿದೇಶಗಳಿಂದ ಆಮದು ಮಾಡಿಕೊಳ್ಳುವ ಇಂಧನ ಹಾಗೂ ಯುದ್ಧ ಸಾಮಗ್ರಿಗಳ ಖರೀದಿಗೆ ವ್ಯಯವಾಗುತ್ತಿದೆ. 2050ರ ಹೊತ್ತಿಗೆ ಭಾರತವು ಇಂಧನ ಸ್ವಾವಲಂಬನೆ ಸಾಧಿಸಬೇಕು ಎಂದು ಮೋದಿಯವರು ಕರೆ ನೀಡಿದ್ದಾರೆ. 100 ಗಿಗಾವಾಟ್ ಸೌರ ವಿದ್ಯುತ್ ಹಾಗೂ 75 ಗಿಗಾವಾಟ್ ಪವನ ವಿದ್ಯುತ್ ಉತ್ಪಾದಿಸುವ ಯೋಜನೆಗೆ ನೀಲನಕ್ಷೆ ಸಿದ್ಧವಾಗಿದೆ. ರಕ್ಷಣಾ ಸಾಮಗ್ರಿಗಳಿಗೆ ವಿದೇಶಗಳನ್ನೇ ಆಶ್ರಯಿಸಿ ಅಪಾರ ಪ್ರಮಾಣದ ಹಣವನ್ನು ವ್ಯಯಿಸಬೇಕಾಗಿತ್ತು. ಭಾರತಕ್ಕೆ ಶಸ್ತ್ರಾಸ್ತ್ರಗಳನ್ನು ಪೂರೈಸುವ ರಾಷ್ಟ್ರಗಳೇ ಶತ್ರು ರಾಷ್ಟ್ರಗಳಿಗೂ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿದ್ದವು. ರಕ್ಷಣಾ ವೆಚ್ಚದ ಶೇ 80ರಷ್ಟು ಹಣವನ್ನು ಸ್ವದೇಶಿ ನಿರ್ಮಿತ ಉತ್ಪನ್ನಗಳ ಖರೀದಿಗೆ ಮೀಸಲಿಡುವುದರೊಂದಿಗೆ ‘ಆತ್ಮ ನಿರ್ಭರ’ ಭಾರತ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ.
ಪ್ರತಿಯೊಬ್ಬ ಭಾರತೀಯ ಪ್ರಜೆಯ ಅಭಿವೃದ್ಧಿ ಹಾಗೂ ಸಂರಕ್ಷಣೆಯೊಂದಿಗೆ ರಾಷ್ಟ್ರ ನಿರ್ಮಾಣದ ಧ್ಯೇಯೋದ್ದೇಶದೊಂದಿಗೆ ಸಾಗುತ್ತಿರುವ ಮೋದಿಯವರ ನೇತೃತ್ವದ ಸರ್ಕಾರ ಎಂಟು ವರ್ಷಗಳನ್ನು ಪೂರೈಸುವುದರೊಂದಿಗೆ ರಾಷ್ಟ್ರೀಯತೆಯ ನಂಟನ್ನು ಬೆಸೆಯುವಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿದೆ.
ಲೇಖಕ: ಬಿಜೆಪಿ ರಾಜ್ಯ ಘಟಕದ ವಕ್ತಾರ, ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.