ADVERTISEMENT

National Doctor's Day| ಮೂತ್ರ ಪರೀಕ್ಷೆಯ ಗೊಂದಲದ ಪ್ರಸಂಗ ವಿವರಿಸಿದ ಡಾ. ಅನುಪಮಾ

ಎಚ್.ಎಸ್.ಅನುಪಮಾ
Published 30 ಜೂನ್ 2023, 23:30 IST
Last Updated 30 ಜೂನ್ 2023, 23:30 IST
ಡಾ.ಎಚ್.ಎಸ್.ಅನುಪಮಾ
ಡಾ.ಎಚ್.ಎಸ್.ಅನುಪಮಾ   

ಡಾ.ಎಚ್.ಎಸ್.ಅನುಪಮಾ

ಹೇಳುವುದು ಕೇಳುವುದು ಮುಖ್ಯವಾದದ್ದು. ವೈದ್ಯಕೀಯ ವೃತ್ತಿಯಲ್ಲಿ ಹೇಳುವುದೇ ಒಂದು, ಅರ್ಥ ಮಾಡಿಕೊಳ್ಳುವುದೇ ಇನ್ನೊಂದು. ಆದರೆ, ಅದು ಹಲವು ಆಭಾಸಗಳನ್ನು ಸೃಷ್ಟಿಸುತ್ತದೆ. ನನ್ನ ವೃತ್ತಿ ಬದುಕಿನಲ್ಲಿ ನಡೆದ ಒಂದು ಘಟನೆ ಇವತ್ತಿಗೂ ನೆನಪಾಗುತ್ತ ಇರುತ್ತದೆ.

ಒಮ್ಮೆ ನೌಕರಸ್ಥ ತರುಣ ಪತಿಯೊಬ್ಬ ತಪ್ಪಿತಸ್ಥನ ಮೋರೆ ಹಾಕಿಕೊಂಡು ಬಂದ. ‘ನಮಗೆ ಇಷ್ಟು ಬೇಗ ಮಕ್ಕಳು ಬೇಡಾಗಿತ್ತು ಮೇಡಂ. ಅವಳೊಂದು ಪರೀಕ್ಷೆ ಕಟ್ಟಿದಾಳೆ. ಮದುವೆಯಾಗಿ ಎರಡು ತಿಂಗಳಾಯಿತಷ್ಟೇ. ಈ ತಿಂಗಳು ಋತುಸ್ರಾವ ಆಗಿಲ್ಲ. ಅಳತಾ ಕೂತಿದ್ದಾಳೆ. ನಂದೇ ತಪ್ಪು, ಇದೊಂದು ಸಾರಿ ಅಬಾರ್ಷನ್ ಮಾಡಿಸ್ಕೊಡಿ’ ಎಂದು ಅಳುವ ದನಿಯಲ್ಲಿ ಹೇಳಿದ.

ADVERTISEMENT

ಮೊದಲನೆಯ ಗರ್ಭವನ್ನು ಅಬಾರ್ಷನ್ ಮಾಡಿ ತೆಗೆಸುವುದು ಒಳ್ಳೆಯದಲ್ಲ ಎಂದು ಎಷ್ಟು ಹೇಳಿದರೂ ಆತ ಕೇಳುತ್ತಿಲ್ಲ. ಕೊನೆಗೆ, ‘ಮೊದಲು ಅವಳನ್ನು ಕರೆ ತನ್ನಿ ಅಥವಾ ನಾಳೆ ಬೆಳಗಿನ ಫಸ್ಟ್ ಸ್ಯಾಂಪಲ್ ಮೂತ್ರ ತನ್ನಿ. ಪರೀಕ್ಷೆ ಮಾಡಿ ನಂತರ ವಿಚಾರ ಮಾಡುವ’ ಎಂದು ಹೇಳಿ ಕಳಿಸಿದೆ.

ಮರುದಿನ ಆತ ಮೂತ್ರ ತಂದ. ಟೆಸ್ಟ್ ನೆಗೆಟಿವ್ ಇತ್ತು. ‘ಏನೂ ಹೆದರಬೇಡಿ. ಗರ್ಭ ನಿಂತಿಲ್ಲ, ನಿಮ್ಮ ಹೆಂಡತಿಗೆ ಅಳಬೇಡ ಅಂತ ಹೇಳಿ. ಪರೀಕ್ಷೆಗೆ ನನ್ನ ಬೆಸ್ಟ್ ಆಫ್ ಲಕ್ ಹೇಳಿ’ ಎಂದು ಕಳಿಸಿದೆ. ವಾರ ಆಗುವುದರಲ್ಲಿ ಅಸಾಮಿ ಮತ್ತೆ ಹಾಜರ್. ‘ಮೇಡಂ, ಇಡೀ ದಿನ ವಾಂತಿ ಮಾಡ್ತಾಳೆ, ಹೊಟ್ಟೆಗೆ ಏನೂ ದಕ್ಕುತ್ತಿಲ್ಲ. ತಲೆ ಸುತ್ತು ಅಂತಾಳೆ’ ಎಂದ.

‘ನೋಡದೇ ಏನೂ ಹೇಳಕ್ಕಾಗಲ್ಲ, ಕರೆದುಕೊಂಡು ಬನ್ನಿ’ ಎಂದೆ. ಮರುದಿನ ಅವರಿಬ್ಬರೂ ಬಂದರು. ಅವಳ ಬಳಿ, ‘ಮೂತ್ರ ಪರೀಕ್ಷೆ ನೋಡಿದ್ರೆ ನೆಗೆಟಿವ್ ಬಂದಿತ್ತಲ್ಲಮ್ಮ, ಆದರೂ ವಾಂತಿನಾ?’ ಎಂದು ಪರೀಕ್ಷಿಸಲು ಹೊರಟಾಗ ‘ಮೇಡಂ, ನನ್ನ ಮೂತ್ರನೂ ಒಮ್ಮೆ ಚೆಕ್ ಮಾಡಿನೋಡಿ, ಪ್ಲೀಸ್’ ಎಂದು ನನ್ನನ್ನು ತಡೆದಳು.

ಅಂದರೆ ಅವತ್ತು ತಂದದ್ದು? ಅವಳ ಗಂಡನದಂತೆ!!

ಈಗ ತಲೆ ತಿರುಗುವ ಸರದಿ ನನ್ನದಾಯ್ತು. ‘ಕಲಿತ’ ದಡ್ಡ ಗಂಡನಿಗೆ ಏನೆನ್ನುವುದು?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.