ಡಾ.ಕೆ.ಪಿ.ಹೆಗಡೆ, ಪ್ರಗತಿ ಚಿಕಿತ್ಸಾಲಯ, ರಾಮನಗರ
ರಾಮನಗರ ಸುತ್ತಮುತ್ತ ಇರುವ ಬುಡಕಟ್ಟು ಸಮುದಾಯವಾದ ಇರುಳಿಗರದ್ದು ಒಂದು ರೀತಿಯ ವಿಭಿನ್ನ ಬದುಕು. ಆರೋಗ್ಯ ಸಮಸ್ಯೆಯಾದರೂ ಅವರು ಆಸ್ಪತ್ರೆಗಳತ್ತ ಸುಳಿಯದೇ ತಮ್ಮಲ್ಲೇ ಔಷಧ ಮಾಡಿಕೊಂಡು ಸುಮ್ಮನಾಗುತ್ತಿದ್ದರು. ವಾಸಿಯಾದರೆ ಆಯಿತು, ಇಲ್ಲಾಂದ್ರೆ ಹಾಗೆಯೇ ನರಳುತ್ತಿದ್ದರು. ರಾಮನಗರದಲ್ಲಿ ನಾನು ಕ್ಲಿನಿಕ್ ಶುರು ಮಾಡಿದ ಬಳಿಕ, ಆಗಾಗ ಅವರಿರುವ ಗುಡಿಸಲುಗಳಿಗೆ ಒಂದಿಷ್ಟು ಔಷಧ ತುಂಬಿಕೊಂಡು ಹೋಗಿ ಉಚಿತವಾಗಿ ಚಿಕಿತ್ಸೆ ನೀಡಲು ಶುರು ಮಾಡಿದೆ.
ಆಧುನಿಕ ಜಗತ್ತಿನಿಂದ ದೂರವೇ ಉಳಿದಂತಿದ್ದ ಅವರು, ಆರಂಭದಲ್ಲಿ ನನ್ನನ್ನು ಖಳನಂತೆ ನೋಡುತ್ತಿದ್ದರು. ಆರೋಗ್ಯ ಸಮಸ್ಯೆ ಹೇಳಿಕೊಳ್ಳಲು ಮುಂದೆ ಬರುತ್ತಿರಲಿಲ್ಲ. ರೋಗಿಗಳಿಗೆ ಬಲವಂತವಾಗಿ ಚಿಕಿತ್ಸೆ ನೀಡುತ್ತಿದ್ದೆ. ಅದಕ್ಕೂ ಅವರು ಸಹಕರಿಸುತ್ತಿರಲಿಲ್ಲ. ಕೇಳಿದ್ದಕ್ಕೆ ಸರಿಯಾಗಿ ಪ್ರತಿಕ್ರಿಯಿಸುತ್ತಿರಲಿಲ್ಲ.
ಹೀಗೆ; ಸುಮಾರು ಹತ್ತು ವರ್ಷ ಅವರಿರುವ ಸ್ಥಳಕ್ಕೆ ಹೋಗಿ ಚಿಕಿತ್ಸೆ ಕೊಟ್ಟಿದ್ದೆ. ವೈದ್ಯಕೀಯ ತಪಾಸಣೆ ಶಿಬಿರ ಆಯೋಜಿಸುತ್ತಾ ಬಂದೆ. ಕ್ರಮೇಣ ಅವರು ಹೊಂದಿಕೊಳ್ಳಲಾರಂಭಿಸಿದರು. ಈಗ, ಅವರಿರುವ ಜಾಗಕ್ಕೆ ಹೋಗಬೇಕಿಲ್ಲ. ನನ್ನ ಕ್ಲಿನಿಕ್‌ಗೆ ಅವರೇ ಹುಡುಕಿಕೊಂಡು ಬಂದು ಚಿಕಿತ್ಸೆ ಪಡೆಯುತ್ತಾರೆ. ಇರುಳಿಗರು ಸೇರಿದಂತೆ ಕ್ಲಿನಿಕ್‌ಗೆ ಬರುವ ಬಡವರು ತಮ್ಮ ಕೈಲಿದ್ದ ಹಣ ಕೊಡುತ್ತಾರೆ. ನನ್ನ ಕ್ಲಿನಿಕ್‌ನಲ್ಲಿ ಹಣಕ್ಕಿಂತ ಚಿಕಿತ್ಸೆಗೆ ಆದ್ಯತೆ.
ಬಡವರ ಬಂಧು: ಬಡವರ ಬಗ್ಗೆ ವಿಶೇಷ ಕಾಳಜಿ ಹೊಂದಿರುವ 76 ವರ್ಷದ ಡಾ.ಕೆ.ಪಿ.ಹೆಗಡೆ, ರಾಮನಗರದಲ್ಲಿ ‘ಬಡವರ ಬಂಧು’ ಎಂದೇ ಪ್ರಸಿದ್ಧರು. ಇರುಳಿಗರು, ಕೂಲಿ ಕಾರ್ಮಿಕರು, ನಿರ್ಗತಿಕರ ಪಾಲಿನ ಆಪತ್ಪಾಂಧವರಾದ ಇವರ ಕ್ಲಿನಿಕ್‌ಗೆ ಬರುವವರಿಗೆ, ಚಿಕಿತ್ಸೆ ಜೊತೆಗೆ ಔಷಧವೂ ಉಚಿತ. ಉಳ್ಳವರು ಶುಲ್ಕ ಕೊಡುತ್ತಾರೆ. ಇಲ್ಲದವರು ‘ನಮಸ್ಕಾರ’ ಹೇಳಿ ಹೋಗುತ್ತಾರೆ.
ನಿರೂಪಣೆ: ಓದೇಶ ಸಕಲೇಶಪುರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.