–ಡಾ.ನಳಿನಿ ಭಾಸ್ಕರಾನಂದ, ಮಕ್ಕಳ ವೈದ್ಯೆ, ಹೈಟೆಕ್ ಆಸ್ಪತ್ರೆ ಉಡುಪಿ
ಮಣಿಪಾಲ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುವಾಗ ಗಂಭೀರ ಅನಾರೋಗ್ಯ ಸಮಸ್ಯೆ ಎದುರಿಸುತ್ತಿದ್ದ ಮಗುವಿಗೆ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಕೊಡಬೇಕಾದ ಪರಿಸ್ಥಿತಿ ಎದುರಾಯಿತು. ಸಾವು ಬದುಕಿನ ಮಧ್ಯೆ ಹೋರಾಟ ಮಾಡುತ್ತಿದ್ದ ಮಗುವನ್ನು ಉಳಿಸಿಕೊಳ್ಳಲು ಸಾಧ್ಯವಿದ್ದ ಎಲ್ಲ ಪ್ರಯತ್ನಗಳನ್ನೂ ಪ್ರಾಮಾಣಿಕವಾಗಿ ಮಾಡಲಾಗುತ್ತಿತ್ತು. ಇಂತಹ ಪರಿಸ್ಥಿತಿಯಲ್ಲೂ ಪೋಷಕರು, ಹಣ ಮಾಡಲು ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಕೊಡುತ್ತಿದ್ದೀರಾ ಎಂದು ಪ್ರಶ್ನಿಸಿದಾಗ ಮನಸ್ಸಿಗೆ ಆಘಾತವಾಯಿತು. ತಾಳ್ಮೆಗೆಡದೆ ಮಗುವಿಗೆ ಚಿಕಿತ್ಸೆ ಮುಂದುವರಿಸಿದೆ. ಮಗು ಬದುಕುಳಿಯಿತು. ಪೋಷಕರು ಮಗುವನ್ನು ಮನೆಗೆ ಕರೆದೊಯ್ಯುವಾಗ ಅವರ ಮುಖದಲ್ಲಿ ಪಶ್ಚಾತ್ತಾಪದ ಭಾವ ಕಾಡುತ್ತಿತ್ತು. ನನ್ನ ಮನಸ್ಸಿನಲ್ಲಿ ವೈದ್ಯ ವೃತ್ತಿಯ ಬಗ್ಗೆ ಸಾರ್ಥಕ ಭಾವ ಆವರಿಸಿತ್ತು.
ವೈದ್ಯರು ದೇವರಲ್ಲ ನಿಜ; ಆದರೆ, ಚಿಕಿತ್ಸೆಗೆ ಬಂದ ರೋಗಿಗಳು ಶೀಘ್ರ ಗುಣಮುಖರಾಗಬೇಕು, ಗಂಭೀರ ಸ್ಥಿತಿಯಲ್ಲಿರುವ ರೋಗಿಗಳು ಬದುಕುಳಿಯುಬೇಕು ಎಂಬ ಕಾಳಜಿಯಂತೂ ಸಹಜವಾಗಿ ಇರುತ್ತದೆ.
ಈಚೆಗೆ ವೈದ್ಯ ವೃತ್ತಿಯತ್ತ ಆಕರ್ಷಣೆ ಹೆಚ್ಚಾಗಿದ್ದು ವೃತ್ತಿ ಆಯ್ದುಕೊಳ್ಳುವ ಮುನ್ನ ವೈದ್ಯರಿಗೆ ಕರ್ತವ್ಯ ಹಾಗೂ ಜವಾಬ್ದಾರಿಗಳ ಅರಿವಿರಬೇಕು. ಸಮಯಪ್ರಜ್ಞೆ ಪಾಲಿಸುವುದರ ಜತೆಗೆ ರೋಗಿಗಳ ಜತೆಗೆ ಸಂವಹನ ಉತ್ತಮವಾಗಿರಬೇಕು. ಸಮಸ್ಯೆಯನ್ನು ಸಮಾಧಾನ ಚಿತ್ತದಿಂದ ಆಲಿಸುವ ತಾಳ್ಮೆ ಇರಬೇಕು. ಮುಖ ಗಂಟಿಕ್ಕಿಕೊಳ್ಳುವುದನ್ನು ಬಿಟ್ಟು ಕಿರು ನಗೆಯೊಂದಿಗೆ ರೋಗಿಗಳ ಜತೆ ಮಾತನಾಡಿದರೆ ಅವರ ಅರ್ಧ ಕಾಯಿಲೆ ಗುಣಮುಖವಾದಂತೆ.
ಸಾಮಾನ್ಯವಾಗಿ ಮಕ್ಕಳಿಗೆ ಡಾಕ್ಟರ್ ಕಂಡರೆ ಭಯ. ನೋಡಿದ ಕೂಡಲೇ ಇಂಜೆಕ್ಷನ್ ಕೊಡುತ್ತಾರೆ ಎಂದು ಅಳಲು ಶುರುಮಾಡುತ್ತವೆ. ಪೋಷಕರಷ್ಟೆ ಆಪ್ತವಾಗಿ ವೈದ್ಯರು ಮಕ್ಕಳನ್ನು ಸಂತೈಸಬೇಕು. ಆತ್ಮೀಯವಾಗಿ ಬೆರೆತು ಚಿಕಿತ್ಸೆ ನೀಡಬೇಕು. ಎಲ್ಲ ವೈದ್ಯರೂ ಚಿಕಿತ್ಸೆ ನೀಡಬಲ್ಲರು; ಆದರೆ, ಪರಿಣಾಮಕಾರಿ ಚಿಕಿತ್ಸೆ ನೀಡುವವರು ಯಶಸ್ವಿ ವೈದ್ಯರಾಗುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.