ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ಮಾತನಾಡುತ್ತ, ಮಾತೃಭಾಷೆಯಲ್ಲಿ ಮಕ್ಕಳು ಕಲಿಯುವುದರಿಂದ ಅವರ ಪ್ರತಿಭೆ ಅರಳುತ್ತದೆ, ಸಹಜ ಕಲಿಕೆ ಸಾಧ್ಯವಾಗುತ್ತದೆ, ಅದರಲ್ಲೂ ಮೊದಲ ಹಂತದ ಕಲಿಕೆಯಲ್ಲಿ ಮಾತೃಭಾಷಾ ಶಿಕ್ಷಣ ಅತ್ಯಂತ ಮಹತ್ವದ್ದು ಎಂದು ಒತ್ತಿ ಹೇಳಿದ್ದಾರೆ. ಮುಂದುವರಿದು, ‘ಭಾರತವು ಭಾಷೆಗಳ ಖಜಾನೆ, ಈ ಭಾಷೆಗಳು ಜ್ಞಾನದ, ಅನುಭವದ ಭಂಡಾರ. ನಮ್ಮ ಭಾಷೆಗಳು ಬೆಳೆಯಬೇಕು. ನಮಗಷ್ಟೇ ಏಕೆ ಇತರ ದೇಶದವರಿಗೂ ಇದರ ಪರಿಚಯವಾಗಬೇಕು’ ಎಂದಿದ್ದಾರೆ.
ಜಿಡಿಪಿ ಆಧಾರದ ಮೇಲೆ ನೋಡಿದರೆ, ಜಗತ್ತಿನ ಮುಂಚೂಣಿಯಲ್ಲಿರುವ ಸುಮಾರು ಇಪ್ಪತ್ತು ದೇಶಗಳು ತಮ್ಮ ‘ಗೃಹಭಾಷೆ’ ಅಥವಾ ‘ಮಾತೃಭಾಷೆ’ಯಲ್ಲೇ ಶಿಕ್ಷಣ ನೀಡುತ್ತಿವೆ ಎಂದು ಅವರು ಗುರುತಿಸಿದ್ದಾರೆ. ಮೋದಿಯವರ ಈ ಮಾತುಗಳನ್ನು ದೇಶದ ಬುದ್ಧಿಜೀವಿಗಳು, ಪ್ರಜ್ಞಾವಂತರು ಸ್ವಾಗತಿಸುವುದರಲ್ಲಿ ಅನುಮಾನವಿಲ್ಲ.
ಐದನೇ ತರಗತಿಯವರೆಗೆ ಸಾಧ್ಯವಿರುವಲ್ಲೆಲ್ಲ ಮಾತೃಭಾಷೆಯಲ್ಲೇ ಶಿಕ್ಷಣ ನೀಡುವುದು ಮತ್ತು ಎಂಟನೇ ತರಗತಿಯವರೆಗೂ ಮಾತೃಭಾಷಾ ಮಾಧ್ಯಮದಲ್ಲೇ ಶಿಕ್ಷಣ ಮುಂದುವರಿಯುವುದು ಅಪೇಕ್ಷಣೀಯ ಎಂದು ರಾಷ್ಟ್ರೀಯ ಶಿಕ್ಷಣ ನೀತಿಯು ಅಭಿಪ್ರಾಯಪಟ್ಟಿದೆ.
ಅಷ್ಟೇ ಏಕೆ, ಆನಂತರದ ಶಿಕ್ಷಣವೂ ಹೀಗೆಯೇ ಮುಂದುವರಿಯಲು ಯಾವ ಅಡ್ಡಿಯೂ ಇಲ್ಲ ಎನ್ನುತ್ತ, ಮಾತೃಭಾಷೆ ಅಥವಾ ಪ್ರಾದೇಶಿಕ ಭಾಷೆಯಲ್ಲಿ ಶಿಕ್ಷಣ ನೀಡುವುದಕ್ಕೆ ಆದ್ಯತೆ ನೀಡಿದೆ.
ಇಂಗ್ಲಿಷ್ ಭಾಷೆಯು ಬೋಧನಾ ಮಾಧ್ಯಮವಾಗುವುದನ್ನು ನಿರ್ಬಂಧಿಸಬೇಕೆಂದೂ ಪ್ರಾದೇಶಿಕ ಭಾಷೆಯಲ್ಲಿ ಕಲಿಯುವುದನ್ನು ಉತ್ತೇಜಿಸಬೇಕೆಂದೂ ಕೊಠಾರಿ ಆಯೋಗವು 1960ರ ದಶಕದಲ್ಲಿ ಶಿಫಾರಸು ಮಾಡಿತ್ತು. ಈ ಶಿಫಾರಸನ್ನೇ 2020ರ ರಾಷ್ಟ್ರೀಯ ಶಿಕ್ಷಣ ನೀತಿಯೂ ಎತ್ತಿಹಿಡಿದಿದೆ ಎಂದೂ ಭಾವಿಸಬಹುದು.
ಮಾತೃಭಾಷೆ ಅಥವಾ ಪ್ರಾದೇಶಿಕ ಭಾಷೆಯ ಮೂಲಕ ಕಲಿಸುವುದು ಇಷ್ಟು ಪ್ರಮುಖ ಸಂಗತಿಯೆಂದು ಮನವರಿಕೆಯಾದ ಮೇಲೆ, ನಮ್ಮ ರಾಷ್ಟ್ರೀಯ ಶಿಕ್ಷಣ ನೀತಿಯ ನಿರೂಪಕರು ‘ಸಾಧ್ಯವಿದ್ದಲ್ಲೆಲ್ಲ’ ಎಂದು ಹೇಳುವ ಬದಲು ‘ಕಡ್ಡಾಯವಾಗಿ’ ಎಂದು ಹೇಳಬಹುದಿತ್ತಲ್ಲ? ಭಾಷಾ ಮಾಧ್ಯಮದ ಆಯ್ಕೆಯು ಪೋಷಕರಿಗೆ ಬಿಟ್ಟಿದ್ದು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದರೂ ಕಡ್ಡಾಯ ಮಾಡಲು ಅಗತ್ಯವಾದ ಸಾಂವಿಧಾನಿಕ ತಿದ್ದುಪಡಿ ಮಾಡುವ ಸಾಧ್ಯತೆಯನ್ನು ಕೇಂದ್ರ ಸರ್ಕಾರ ಪ್ರಕಟಿಸಿದ್ದರೆ ಮೋದಿಯವರ ಭಾಷಣಕ್ಕೆ ಹೆಚ್ಚು ಅರ್ಥ ಬರುತ್ತಿತ್ತು. ಇಂತಹ ಒಂದು ತಿದ್ದುಪಡಿ ತರಲು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆಯಬೇಕೆಂದು ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಅವರು ಮೋದಿಯವರಿಗೆ ಪತ್ರ ಬರೆದದ್ದನ್ನು ನೆನೆಯಬಹುದು. ಆದರೆ ನ್ಯಾಯಮೂರ್ತಿ ನಾಗಮೋಹನದಾಸ್ ಅವರು ‘ಸಂವಿಧಾನದಲ್ಲಿ ನೀಡಿರುವ ಮೂಲಭೂತಹಕ್ಕುಗಳು ಪೂರ್ಣಹಕ್ಕುಗಳಲ್ಲ, ಬದಲಾಗಿ ಅವು ವಿವೇಚನೆಯುಳ್ಳ ನಿರ್ಬಂಧಕ್ಕೆ ಒಳಪಟ್ಟಿವೆ ಎಂದು ಸುಪ್ರೀಂ ಕೋರ್ಟ್ ಈ ಹಿಂದೆ ವ್ಯಾಖ್ಯಾನಿಸಿದೆ. ಸಮಾಜ ಹಾಗೂ ಮಕ್ಕಳ ಹಿತದೃಷ್ಟಿಯಿಂದ ವಿಧಿ 19 (1)(ಎ) ಮತ್ತು 19 (1)(ಜಿ)ಯಲ್ಲಿರುವ ಮೂಲಭೂತ ಹಕ್ಕುಗಳ ಮೇಲೆ ನಿರ್ಬಂಧ ವಿಧಿಸುವ ಹಕ್ಕನ್ನು ಸರ್ಕಾರ ಹೊಂದಿದೆ ಎಂಬ ಅಂಶವನ್ನು ನ್ಯಾಯಾಲಯಗಳು ಗಣನೆಗೆ ತೆಗೆದುಕೊಳ್ಳದೇ ಇರುವುದು ಒಂದು ದುರಂತವೇ ಸರಿ’ ಎನ್ನುತ್ತಾರೆ.
ಇದೇನೇ ಇರಲಿ, ಕೇಂದ್ರ ಸರ್ಕಾರವು 34 ವರ್ಷಗಳ ನಂತರ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅಂಗೀಕರಿಸಿ, ಮಾತೃಭಾಷೆ ಅಥವಾ ಪ್ರಾದೇಶಿಕ ಭಾಷಾ ಮಾಧ್ಯಮದ ಶಿಕ್ಷಣವನ್ನು ಸಾಧ್ಯವಿದ್ದಲ್ಲೆಲ್ಲ ಅನುಷ್ಠಾನಕ್ಕೆ ತರಲು ಬದ್ಧವಾಗಿದೆ. ನಮ್ಮ ರಾಜ್ಯದಲ್ಲಿ ಈ ಹಿಂದೆ ಇದ್ದ ಸರ್ಕಾರವು ಒಂದು ಸಾವಿರ ಸರ್ಕಾರಿ ಶಾಲೆಗಳಲ್ಲಿ ಒಂದನೇ ತರಗತಿಯಿಂದಲೇ ಏಕಾಏಕಿ ಇಂಗ್ಲಿಷ್ ಮಾಧ್ಯಮ ಶಿಕ್ಷಣವನ್ನು ಪ್ರಾರಂಭಿಸಿತು. ಮಗು ಮೊದಲು ಮೈಗೂಡಿಸಿಕೊಂಡ ಮಾತೃಭಾಷೆಯಲ್ಲಿ ಶಿಕ್ಷಣ ನೀಡಬೇಕೆಂದು ವೈಜ್ಞಾನಿಕ ಸಂಶೋಧನೆಗಳನ್ನು ಆಧರಿಸಿ ಜಗತ್ತಿನಾದ್ಯಂತ ತಜ್ಞರು ಶಿಫಾರಸು ಮಾಡುತ್ತಾರೆ.
‘ದಕ್ಷಿಣ ಭಾರತೀಯ ಇಂಗ್ಲಿಷ್ ಪ್ರಾದೇಶಿಕ ಸಂಸ್ಥೆ’ಯು ಮಾತೃಭಾಷಾ ಶಿಕ್ಷಣವನ್ನು ಶಿಫಾರಸು ಮಾಡಿದೆ. ಒಂದನೇ ತರಗತಿಯಿಂದಲೇ ಇಂಗ್ಲಿಷ್ ಮಾಧ್ಯಮ ಬೇಡವೆಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು, ಸಾಹಿತಿಗಳು, ವಿಜ್ಞಾನಿಗಳು ಧ್ವನಿ ಎತ್ತಿದರೂ ಲೆಕ್ಕಿಸದೆ, ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸರ್ಕಾರವು ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ತೆರೆಯಿತು. ಈಗ ಹೊಸ ಶಿಕ್ಷಣ ನೀತಿಯ ಬೆಳಕಿನಲ್ಲಿ ನಮ್ಮ ರಾಜ್ಯ ಸರ್ಕಾರದ ನಿಲುವೇನು?
2019ರ ಅ. 3ರಂದು ನಮ್ಮ ಒಂದು ತಂಡವು ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರನ್ನು ಭೇಟಿ ಮಾಡಿ, ಈ ಹಿಂದಿನ ಸರ್ಕಾರ ಮಾಡಿರುವ ಪ್ರಮಾದವನ್ನು ಈಗಿನ ಸರ್ಕಾರ ಸರಿಪಡಿಸಬೇಕೆಂದು ಕೋರಿತು. ಈ ಸಂಬಂಧ ನಾವು ಪ್ರಕಟಿಸಿರುವ ‘ನೆಲದ ನುಡಿಯ ನಂಟು’ ಎಂಬ ಒಂದು ಸಂಕಲನಗ್ರಂಥವನ್ನೂ ಸಚಿವರಿಗೆ ನೀಡಿದೆವು. ಈ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳಲು ತಜ್ಞರ ಸಭೆ ಕರೆಯುವುದಾಗಿ ಅವರು ಆಶ್ವಾಸನೆಯಿತ್ತರು. ಆದರೆ ಅದೇಕೋ ಆ ಸಭೆ ನಡೆಯಲಿಲ್ಲ. ಇಷ್ಟಲ್ಲದೆ 2020-21ನೇ ಸಾಲಿನಲ್ಲಿ, ಸರ್ಕಾರಿ ಶಾಲೆಗಳಲ್ಲಿ 825 ಇಂಗ್ಲಿಷ್ ಮಾಧ್ಯಮ ತರಗತಿಗಳನ್ನು ತೆರೆಯಲಾಗುವುದೆಂದು ಶಿಕ್ಷಣ ಸಚಿವರು ಹೇಳಿರುವುದು ಗೊಂದಲಕ್ಕೆ ಕಾರಣವಾಗಿದೆ. ಈ ಪ್ರಕಟಣೆಯು ಹೊಸ ನೀತಿ ಹೊರಬೀಳುವ ಮೊದಲಿನದ್ದಾದ್ದರಿಂದ ಈಗ ಈ ನಿರ್ಧಾರವನ್ನು ಕೈಬಿಡುತ್ತಾರೆಂದು ಆಶಿಸೋಣವೇ? ಅಲ್ಲದೆ ಈಗಾಗಲೇ ನಡೆಸಲಾಗುತ್ತಿರುವ ಸರ್ಕಾರಿ ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ಅತ್ಯುತ್ತಮ ಕನ್ನಡ ಮಾಧ್ಯಮ ಶಾಲೆಗಳನ್ನಾಗಿ ಪರಿವರ್ತಿಸಿ, ಗುಣಮಟ್ಟದ ಶಿಕ್ಷಣ ನೀಡಿ, ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳ ಬಗ್ಗೆ ಪೋಷಕರಿಗೆ ನಂಬಿಕೆ ಮೂಡುವಂತೆ ಮಾಡಬಹುದು.
ಹೊಸ ನೀತಿಯು ದೇಶದ ಅನೇಕ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸದಿರುವುದು ಎದ್ದುಕಾಣುತ್ತಿದೆ ಯಾದರೂ ಶೈಕ್ಷಣಿಕವಾಗಿ ಹಲವು ಉತ್ತಮ ಅಂಶಗಳನ್ನು ಒಳಗೊಂಡಿದೆ. ಮೊದಲ ಹಂತದ ಕಲಿಕೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ಈ ನೀತಿ, ಗಿಳಿಪಾಠದ ಯಾಂತ್ರಿಕ ಕಲಿಕೆಯನ್ನು ಬದಲಿಸಿ ಗ್ರಹಿಕೆಗೆ ಒತ್ತು ನೀಡುತ್ತದೆ. ಗ್ರಹಿಸಿದ್ದನ್ನು ಅನ್ವಯಿಸುವ ಸಂದರ್ಭದಲ್ಲಿ ವಿಮರ್ಶಾತ್ಮಕ ಚಿಂತನೆಯನ್ನು, ಸೃಜನಶೀಲತೆಯನ್ನು, ಬಹುಶಾಸ್ತ್ರೀಯ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬಹುದಾದ ಕಲಿಕಾ ಪರಿಸರಕ್ಕೆ ಒತ್ತು ನೀಡುತ್ತದೆ. ಭಾರತೀಯ ಜ್ಞಾನ ಪರಂಪರೆಯ ಚಿಂತನಾಧಾರೆಯನ್ನು, ಆದಿವಾಸಿ ಬುಡಕಟ್ಟು ಜನಾಂಗದ ಪಾರಂಪರಿಕ ಜ್ಞಾನವನ್ನೂ ಒಳಗೊಂಡಂತೆ ಎಲ್ಲ ಸ್ಥಳೀಯ ವೈಶಿಷ್ಟ್ಯಗಳನ್ನು ಅರಿಯುವ, ಗೌರವಿಸುವ ಶಿಕ್ಷಣವನ್ನು ಪ್ರತಿಪಾದಿಸುತ್ತದೆ. ಇಂತಹ ಒಂದು ಪರಿಕಲ್ಪನೆಯುಳ್ಳ ಶಿಕ್ಷಣವನ್ನು ಮಕ್ಕಳಿಗೆ ಅರ್ಥವಾಗದ ಇಂಗ್ಲಿಷ್ ಭಾಷೆಯ ಮೂಲಕ ತಲುಪಿಸುವುದಾದರೂ ಹೇಗೆ?
ದೇಶದ ಶಾಲೆಗಳಲ್ಲಿ ಅನೇಕ ದಶಕಗಳಿಂದಲೂ ಕೋಟ್ಯಂತರ ಮಕ್ಕಳಿಗೆ ಯಾಂತ್ರಿಕ ಶಿಕ್ಷಣವನ್ನು ನೀಡುತ್ತಿದ್ದೇವೆ. ನಮ್ಮ ಸರ್ಕಾರಿ ಶಾಲಾ ಮಕ್ಕಳ ಕಲಿಕಾ ಸಾಮರ್ಥ್ಯವನ್ನು ಗಮನಿಸಿದರೆ ಇದರ ಪರಿಣಾಮ ತಿಳಿಯುತ್ತದೆ. ಮಕ್ಕಳಿಗೆ ಅರ್ಥವಾಗುವ ಭಾಷೆಯಲ್ಲಿ ಕಲಿಸಲು ಬಹಳಷ್ಟು ಸುಧಾರಣೆಗಳನ್ನು ಮಾಡಬೇಕಾಗಿರುವಾಗ, ಅಧ್ಯಾಪಕರಿಗೇ ಬಾರದ ಇಂಗ್ಲಿಷ್ ಭಾಷೆಯ ಮೂಲಕ ಗುಣಮಟ್ಟದ ಶಿಕ್ಷಣ ಹೇಗೆ ಸಾಧ್ಯವಾದೀತು?
ಹೊಸ ನೀತಿಯ ಮತ್ತೊಂದು ಪ್ರಮುಖ ಅಂಶ ಎಂದರೆ, ಎಳೆಯ ಮಕ್ಕಳ ಶಿಕ್ಷಣ. ಇದು ಅಕ್ಷರ ಶಿಕ್ಷಣವಲ್ಲ. ಎಳೆಯ ಮಕ್ಕಳ ಮೆದುಳಿನ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಅಗತ್ಯವಾದ ಪೌಷ್ಟಿಕ ಆಹಾರವನ್ನು ಕೊಡುವುದು, ಮೆದುಳು ಮತ್ತು ನರವಿನ್ಯಾಸದ ಬೆಳವಣಿಗೆಗೆ ಅಗತ್ಯವಾದ ಚಟುವಟಿಕೆಗಳನ್ನು ರೂಪಿಸುವುದು ಇದರ ಉದ್ದೇಶ. ಎಳೆಯ ಮಕ್ಕಳ ಶಿಕ್ಷಣವನ್ನು ಸ್ವತಂತ್ರ ಘಟಕವಾಗಿ ಪ್ರಾರಂಭಿಸಬಹುದಾದ್ದರಿಂದ ಇದು ಹಣ ಗಳಿಸುವ ದಂಧೆಯಾಗಿ ಎಳೆಯ ಮಕ್ಕಳು ಬಲಿಪಶುಗಳಾಗಬಹುದು. ಶಿಕ್ಷಣದ ವ್ಯಾಪಾರವನ್ನು ತೀವ್ರವಾಗಿ ನಿಷೇಧಿಸುವ ನೀತಿಗೆ ಕಾನೂನು ಹಾಗೂ ಆಡಳಿತದ ಪಾರದರ್ಶಕ ಬೆಂಬಲ ಅಗತ್ಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.