ADVERTISEMENT

ಸುಸ್ಥಿರ ಬದುಕಿಗೆ ಬೇಕಿದೆ ಭೂಬಳಕೆ ನೀತಿ

ಕಡತದ ಲಾಯದಲ್ಲಿ ಮುಪ್ಪಾಗದಿರಲಿ ನೆಲ-– ಜಲ-– ಅರಣ್ಯ ಕಾನೂನು ಕುದುರೆಗಳು

ಕೇಶವ ಎಚ್.ಕೊರ್ಸೆ
Published 13 ಆಗಸ್ಟ್ 2019, 2:14 IST
Last Updated 13 ಆಗಸ್ಟ್ 2019, 2:14 IST
   

ನೈರುತ್ಯ ಮಾರುತ ತಂದ ಆಗಸ್ಟ್ ತಿಂಗಳಿನ ಭಾರಿ ಮಳೆಗೆ ನಾಡೇ ಕಂಗಾಲಾಗಿದೆ. ಜಲಾವೃತವಾಗಿರುವ ಕರಾವಳಿ, ಮಲೆನಾಡು ಹಾಗೂ ಉತ್ತರ ಕರ್ನಾಟಕದ ಜನರ ಸಂಕಷ್ಟಗಳಿಗೆ ಸ್ಪಂದಿಸಲು, ವಿಪತ್ತು ನಿರ್ವಹಣಾ ಪಡೆ ಹಾಗೂ ಸೈನ್ಯವೂ ಜೊತೆಯಾಗುವಷ್ಟು ಪರಿಸ್ಥಿತಿ ಬಿಗಡಾಯಿಸಿದೆ. ನೆರೆ ಇಳಿದ ನಂತರ ಹರಡಬಹುದಾದ ಸಾಂಕ್ರಾಮಿಕ ರೋಗಗಳನ್ನು ನಿಯಂತ್ರಿಸಬೇಕಿದೆ. ಮನೆ, ಅಂಗಡಿ, ಜಮೀನು, ಜಾನುವಾರುಗಳಂಥ ಆಸ್ತಿಪಾಸ್ತಿ ನಾಶವಾಗಿರುವ ಲಕ್ಷಾಂತರ ಕುಟುಂಬಗಳ ಬದುಕನ್ನು ಪುನಃ ರೂಪಿಸುವ ಸವಾಲಂತೂ ಬಹು ದೊಡ್ಡದು. ನುಜ್ಜಾದ ರಸ್ತೆ, ಕಾಲುವೆ, ಕೆರೆಯೊಡ್ಡು, ಸೇತುವೆಗಳಂತಹ ಸಾರ್ವಜನಿಕ ಸ್ವತ್ತುಗಳನ್ನು ಸರಿಪಡಿಸಿ, ಜನಜೀವನವನ್ನು ಮಾಮೂಲಿಗೆ ತರುವ ಜವಾಬ್ದಾರಿಯೂ ಅಷ್ಟೇ ಮುಖ್ಯ. ಈ ಮಾನವ ಅವಘಡದ ಎಳೆಗಳನ್ನೆಲ್ಲ ಕಾಲಬದ್ಧ ಯೋಜನೆಗಳ ಮೂಲಕ ಸರಿಪಡಿಸಲು, ಆಡಳಿತ ವ್ಯವಸ್ಥೆಯ ಜೊತೆ ನಾಗರಿಕರೂ ಹೆಗಲು ನೀಡಬೇಕಿದೆ.

ಈ ಅವಾಂತರಗಳಿಗೆಲ್ಲ ರಭಸದ ಮಳೆಯೇ ಕಾರಣವೆನ್ನುವುದು ಮೇಲ್ನೋಟಕ್ಕೆ ಸರಿ. ಹಲವು ತಿಂಗಳುಗಳಲ್ಲಿ ಬರಬೇಕಾದ ಮಳೆಯು ಒಂದೆರಡು ದಿನಗಳಲ್ಲಿ ಸುರಿದ ಪರಿಣಾಮವಿದು. ಮಳೆಯು ಈ ಪ್ರಮಾಣದಲ್ಲಿ ಏರಿದ್ದೇಕೆ? ಒಳನಾಡಿನಲ್ಲೂ ಮುಂಗಾರು ತೀವ್ರವಾದ ಕಾರಣವೇನು? ಸಾಗರ ಹಾಗೂ ಭೂಮೇಲ್ಮೈ ಪ್ರದೇಶದ ತಾಪಮಾನ ವ್ಯತ್ಯಯದಿಂದ ಉಂಟಾಗುವ ಮಳೆ ಮಾರುತಗಳನ್ನು ನೂರಾರು ಪಾರಿಸರಿಕ ಅಂಶಗಳು ಪ್ರಭಾವಿಸುತ್ತಿರುತ್ತವೆ. ಹವಾಮಾನ ತಜ್ಞರ ತರ್ಕಕ್ಕೂ ಮೀರಿ ಘಟಿಸಿರುವ ಈ ಪರಿಸರ ಅವಘಡವು ವೈಜ್ಞಾನಿಕ ವಿಶ್ಲೇಷಣೆಗೆ ಇನ್ನೂ ನಿಲುಕುತ್ತಿಲ್ಲ. ಹವಾಮಾನ ಬದಲಾವಣೆಯ ಸಂಕೀರ್ಣ ವಿದ್ಯಮಾನವೆಂದು ಮಾತ್ರ ಅರ್ಥೈಸಿಕೊಳ್ಳಬಹುದಷ್ಟೆ. ಭಾರಿ ಮಳೆಯು ನಿಸರ್ಗ ನಿರ್ಮಿತವಾದರೂ, ಆಗುತ್ತಿರುವ ನಷ್ಟ-ಸಂಕಷ್ಟಗಳೆಲ್ಲವೂ ನೈಸರ್ಗಿಕವೇ? ಕೆಲವೇ ದಿನಗಳ ಹಿಂದೆ ಭೀಕರ ಬರದಿಂದ ಕಂಗೆಟ್ಟು ಹನಿ ನೀರಿಗಾಗಿ ಹಾತೊರೆಯುತ್ತಿದ್ದ ನಾಡಿನ ಅನೇಕ ಭಾಗಗಳು, ಈಗ ನೀರಿನಲ್ಲಿ ಮುಳುಗಿವೆಯಲ್ಲ! ಇಂಥ ವೈರುಧ್ಯ ಘಟಿಸುತ್ತಿರುವುದಾದರೂ ಏಕೆ?

ಅತಿವೃಷ್ಟಿಗೆ ಹವಾಮಾನ ಬದಲಾವಣೆಯೇ ಮೂಲ ಕಾರಣವಾದರೂ, ಅದು ತರುವ ಸಾವುನೋವುಗಳಿಗೆ ಅವೈಜ್ಞಾನಿಕ ನೆಲನಿರ್ವಹಣೆಯೇ ಕಾರಣ. ನಗರ-ಪಟ್ಟಣಗಳ ರಾಜಕಾಲುವೆಗಳು ಸುಸ್ಥಿತಿಯಲ್ಲಿಲ್ಲ. ಹೊಳೆ-ನದಿಗಳ ಪಾತ್ರದಲ್ಲಿ ನೀರು ಸುಲಲಿತವಾಗಿ ಹರಿದುಹೋಗುತ್ತಿಲ್ಲ. ನದಿ-ಕೆರೆಗಳ ಜಲಾನಯನ ಪ್ರದೇಶದಲ್ಲಿ ಮಳೆನೀರು ಇಂಗುವ ಪ್ರಮಾಣವೇ ಕಡಿಮೆಯಾಗಿದೆ. ಅಣೆಕಟ್ಟುಗಳ ಕೆಳಹರಿವಿನಲ್ಲಿ ನದಿಪಾತ್ರ ಕಿರಿದಾಗುತ್ತಿದ್ದು, ಅಚ್ಚುಕಟ್ಟು ಪ್ರದೇಶಗಳ ಮೇಲ್ಮಣ್ಣು ನಾಶ ಹೆಚ್ಚುತ್ತಿದೆ. ಎಷ್ಟೆಲ್ಲ ಸರ್ಕಾರಿ ಇಲಾಖೆಗಳು, ಯೋಜನೆಗಳು ಮತ್ತು ಅನುದಾನ ಇದ್ದಾಗ್ಯೂ, ನೆಲ ಹಾಗೂ ಜಲಮೂಲ ನಿರ್ವಹಣೆಯು ಹೀಗೆ ವಿಫಲವಾಗುತ್ತಿರುವುದೇಕೆ? ನದಿ-ಕೆರೆಗಳಂಚಿನ ಅತಿಕ್ರಮಣ, ಅರಣ್ಯ ಒತ್ತುವರಿ, ವಾಣಿಜ್ಯ ಉದ್ದೇಶಕ್ಕಾಗಿ ಕೃಷಿಭೂಮಿಯ ಮಿತಿಯಿಲ್ಲದ ಪರಿವರ್ತನೆ, ಹೊಳೆ-ಹಳ್ಳಗಳ ಮರಳು ಗಣಿಗಾರಿಕೆ, ಯಂತ್ರಗಳಿಂದ ಗುಡ್ಡ ಕತ್ತರಿಸುವುದು, ಜೌಗುಪ್ರದೇಶಗಳ ಹೂಳು- ಇವೆಲ್ಲ ತೋರುತ್ತಿರುವುದಾದರೂ ಏನು? ಅಭಿವೃದ್ಧಿಯ ಓಘದಲ್ಲಿ ನೆಲಬಳಕೆಯಲ್ಲಿ ಕನಿಷ್ಠ ಶಿಸ್ತನ್ನು ಪಾಲಿಸಲೂ ಸೋಲುತ್ತಿದ್ದೇವೆ ಎಂಬುದೇ ಉತ್ತರ. ಆಡಳಿತದಲ್ಲಿ ದೂರದರ್ಶಿತ್ವದ ಕೊರತೆ, ಕಾನೂನುಗಳ ಪಾಲನೆಗೆ ತೊಡಕಾಗುವ ಅಧಿಕಾರ ರಾಜಕಾರಣ, ಭ್ರಷ್ಟಾಚಾರ- ಇವೆಲ್ಲವೂ ಇದಕ್ಕೆ ಕಾರಣಗಳೇ. ಆದ್ದರಿಂದ, ಈಗಾಗಲೇ ಇರುವ ಕಾಯ್ದೆಗಳ ಆಧಾರದಲ್ಲಿ ಸಮಗ್ರ ಭೂಬಳಕೆ ನೀತಿಯೊಂದನ್ನು ಶಿಸ್ತುಬದ್ಧವಾಗಿ ಜಾರಿಗೆ ತರುವುದೇ ಇಂದಿನ ಅಗತ್ಯ. ಈ ಚಿಂತನೆಗೆ ಪೂರಕವಾಗಿ, ಕೆಲವು ಅಂಶಗಳನ್ನು ಇಲ್ಲಿ ಚರ್ಚಿಸಲಾಗಿದೆ.

ADVERTISEMENT

ಹವಾಮಾನ ಬದಲಾವಣೆಯಿಂದಾಗಿನ ಸಮಸ್ಯೆಗಳ ಹಿನ್ನೆಲೆಯಲ್ಲಿ, ಭವಿಷ್ಯದ ಹಿತಕಾಯಬಲ್ಲ 17 ‘ಸುಸ್ಥಿರ ಅಭಿವೃದ್ಧಿ ಗುರಿ’ಗಳನ್ನು ವಿಶ್ವಸಂಸ್ಥೆಯು ಈಗಾಗಲೇ ನಿಗದಿಪಡಿಸಿದೆ. ಇವುಗಳನ್ನು ಸಾಧಿಸುವ ಮಾರ್ಗಸೂಚಿಗಳನ್ನು ದೇಶದ ನೀತಿ ಆಯೋಗವು ಗುರುತಿಸಿಯೂ ಆಗಿದೆ. ರಾಜ್ಯದ ಯೋಜನಾ ಮಂಡಳಿಯೂ ಈ ನಿಟ್ಟಿನಲ್ಲಿ ವಿಸ್ತೃತ ಕಾರ್ಯವಿಧಾನಗಳನ್ನು ಸಂಶ್ಲೇಷಿಸಿದೆ. ಪರಿಸರ ವೈಪರೀತ್ಯಗಳನ್ನು ಎದುರಿಸಲು, ರಾಜ್ಯ ಪರಿಸರ ಇಲಾಖೆಯು ಕಾರ್ಯಯೋಜನೆಯನ್ನೂ ಸಿದ್ಧಪಡಿಸಿದೆ. ನೆಲ-ಜಲ ನಿರ್ವಹಣೆಯ ಈ ವಿವೇಕಯುಕ್ತ ಸೂತ್ರಗಳು ಸರ್ಕಾರಿ ಯೋಜನೆಗಳ ಅನುಷ್ಠಾನದಲ್ಲಿ ಮಿಳಿತವಾಗುವುದು ಮಾತ್ರ ಬಾಕಿಯಿದೆ.

ನೈಸರ್ಗಿಕ ಸಂಪನ್ಮೂಲಗಳನ್ನು ವ್ಯವಸ್ಥಿತವಾಗಿ ನಿರ್ವಹಿಸುವುದಕ್ಕಾಗಿ ಸರ್ಕಾರವು ಈ ಮೊದಲ ಹೆಜ್ಜೆಯನ್ನಿಟ್ಟರೆ, ತಳಮಟ್ಟದಲ್ಲಿ ಅವನ್ನು ಕಾರ್ಯಗತಗೊಳಿಸಲು ಆಡಳಿತಯಂತ್ರವು ಈಗಾಗಲೇ ಇದೆ. ನಗರ ಪ್ರದೇಶಗಳ ಜಮೀನು, ರಸ್ತೆ, ಕಾಲುವೆ, ಜಲಮೂಲಗಳ ನಿರ್ವಹಣೆಯನ್ನು ಗಮನಿಸಲು ‘ನಗರಾಭಿವೃದ್ಧಿ ಪ್ರಾಧಿಕಾರ’ಗಳಿವೆ. ಆದರೆ, ದೂರದೃಷ್ಟಿಯ ಕೊರತೆ ಮತ್ತು ಭ್ರಷ್ಟಾಚಾರದಿಂದಾಗಿ ಅವು ತಮ್ಮ ಮೂಲ ಕರ್ತವ್ಯವನ್ನೇ ಮರೆತಿವೆ. ಗ್ರಾಮ ಪಂಚಾಯಿತಿಗಳ ಮೂಲಕ ನೆಲಬಳಕೆಸುಸ್ಥಿರವಾಗಿಸಬಲ್ಲ ‘ಜಿಲ್ಲಾ ಯೋಜನಾ ಸಮಿತಿಗಳು’ ಪ್ರತಿ ಜಿಲ್ಲೆಯಲ್ಲೂ ಇವೆ. ಸಂವಿಧಾನದ 73 ಮತ್ತು 74ನೇ ತಿದ್ದುಪಡಿ ಮೂಲಕ ಜಿಲ್ಲಾ ಪಂಚಾಯಿತಿಗಳಲ್ಲಿ ರಚಿಸಿದ ಶಾಸನಬದ್ಧ ಸಮಿತಿಗಳಿವು. ಆದರೆ, ಅವು ಇಂದಿಗೂ ಕಾರ್ಯಶೀಲವಾಗಿಲ್ಲ! ಈ ಎರಡೂ ಸಾಂಸ್ಥಿಕ ವ್ಯವಸ್ಥೆಯನ್ನು ಸಬಲೀಕರಣಗೊಳಿಸಿದರೆ, ನೆಲಬಳಕೆ ಶಿಸ್ತನ್ನು ಜಾರಿಗೆ ತರುವುದು ಕಷ್ಟವೇನೂ ಅಲ್ಲ. ಬೇಕಿರುವುದು ರಾಜಕೀಯ ಇಚ್ಛಾಶಕ್ತಿಯಷ್ಟೆ.

ಸಾರ್ವಜನಿಕ ಜಾಗಗಳು ಅತಿಕ್ರಮಣಕ್ಕೆ ಒಳಗಾಗುತ್ತಿರುವುದು ಇನ್ನೊಂದು ದುರಂತ. ಕರಾವಳಿಯ ಅಳಿವೆ, ಹಿನ್ನೀರು, ಕಾಂಡ್ಲಾ ಅರಣ್ಯಗಳಂಥ ಜೌಗುಗಳನ್ನು ಅತಿಕ್ರಮಿಸಿ, ಮಣ್ಣು ತುಂಬಿಸುವ ವಾಣಿಜ್ಯಕ ವಿದ್ಯಮಾನ ವ್ಯಾಪಕವಾಗಿದೆ. ಮಲೆನಾಡು ಹಾಗೂ ಬಯಲುಸೀಮೆಯ ಹೊಳೆ-ನದಿ, ಕೆರೆಪಾತ್ರಗಳಂತೂ ಒತ್ತುವರಿಯಾಗುತ್ತಲೇ ಇವೆ. ಕಾದಿಟ್ಟ ಹಾಗೂ ಕಂದಾಯಭೂಮಿ ಅರಣ್ಯವನ್ನು ಬಲಾಢ್ಯರು ಅತಿಕ್ರಮಿಸುತ್ತಿದ್ದಾರೆ. ಗೋಮಾಳ, ಕಾನು, ಗ್ರಾಮ ಅರಣ್ಯದಂಥ ಸಮುದಾಯ ಸ್ವತ್ತುಗಳುಖಾಸಗೀಕರಣಗೊಳ್ಳುತ್ತಿವೆ. ಮಳೆ ತರುವ ಹಸಿರುಕವಚ ಮಾಯವಾದಂತೆಲ್ಲ, ಮಳೆನೀರು ಇಂಗುವ ಹಾಗೂ ಸರಾಗವಾಗಿ ನೀರು ಹರಿಯುವ ಸಾಧ್ಯತೆಗಳೂ ಕುಂದುತ್ತವೆ. ಒತ್ತುವರಿಯಾದ ಸರ್ಕಾರಿ ಭೂಮಿಯನ್ನು ಹಿಂಪಡೆಯುವ ಕುರಿತಂತೆ ವಿ.ಬಾಲಸುಬ್ರಮಣಿಯನ್ ನೇತೃತ್ವದ ಕಾರ್ಯಪಡೆಯು 2011ರಲ್ಲಿ ಸರ್ಕಾರಕ್ಕೆ ಸಲ್ಲಿಸಿದ ವರದಿಯು 15ಕ್ಕೂ ಹೆಚ್ಚು ಪ್ರಮುಖ ಕಾನೂನುಗಳನ್ನು ಅತಿಕ್ರಮಣದಾರರು ಹೇಗೆ ಗಾಳಿಗೆ ತೂರಿದ್ದಾರೆ ಎಂಬುದನ್ನು ಆಧಾರಸಹಿತ ನಿರೂಪಿಸಿದೆ. ಒತ್ತುವರಿ ತಡೆಯದೆ ನೆರೆ ನಿಯಂತ್ರಣ ಸಾಧ್ಯವಾದೀತೇ?

ಕೃಷಿ ಭೂಮಿಯಲ್ಲೂ ಪಾಲಿಸಬೇಕಾದ ನಿಯಮಗಳಿವೆ. ಭೂಗುಣ, ಹವಾಮಾನ, ಮಳೆಯ ಪ್ರಮಾಣ, ನೀರಿನ ಲಭ್ಯತೆಗೆ ಅನುಗುಣವಾಗಿ ಬೆಳೆ ಬೆಳೆಸಬೇಕು. ಕೃಷಿಅರಣ್ಯ, ಮಳೆನೀರು ಸಂಗ್ರಹ ಹಾಗೂ ಮಣ್ಣು ಸಂರಕ್ಷಣಾ ತತ್ವಗಳನ್ನೂ ಅಳವಡಿಸಿಕೊಳ್ಳಬೇಕು. ಈ ಕುರಿತು ರಾಷ್ಟ್ರೀಯ ಕೃಷಿ ವಿಜ್ಞಾನ ಅಕಾಡೆಮಿಯು ವಿಸ್ತೃತ ಸೂತ್ರಗಳನ್ನೂ ರೂಪಿಸಿದೆ. ಈ ಉದ್ದೇಶಕ್ಕಾಗಿ 2006ರ ಕೃಷಿ ನೀತಿಯಲ್ಲೇ ಪ್ರಸ್ತಾಪಿಸಿರುವ ಭೂಬಳಕೆ ಮಂಡಳಿಯೊಂದನ್ನು ಈಗಾದರೂ ರಚಿಸಬೇಕಾಗಿದೆ.

ಈ ಎಲ್ಲ ಅಂಶಗಳನ್ನೊಳಗೊಂಡ ಸೂಕ್ತ ಭೂಬಳಕೆ ನಿಯಮಗಳನ್ನು ಜಾರಿಗೆ ತರುವುದೇ ಬರ ಮತ್ತು ನೆರೆಯನ್ನು ಎದುರಿಸುವ ಸಮರ್ಥ ಸಾಧನವಾಗಬಲ್ಲದು. ಈಗಿನ ಭೀಕರ ನೆರೆಯಿಂದಾಗಿ, ‘ಇವಾನ್ ಆಲ್‌ಮೈಟಿ’ ಎಂಬ, ಕಳೆದ ದಶಕದ ಹಾಲಿವುಡ್ ಚಲನಚಿತ್ರದ ಭಯಾನಕ ದೃಶ್ಯವೊಂದು ನೆನಪಾಗುತ್ತಿದೆ. ಅಚಾನಕ್ಕಾಗಿ ಪ್ರವಾಹಕ್ಕೆ ಸಿಲುಕಿದ ಹಡಗೊಂದು, ನೂರಾರು ಜನ ಹಾಗೂ ಪ್ರಾಣಿಸಮೂಹಕ್ಕೆ ಆಶ್ರಯತಾಣವಾಗುತ್ತದೆ. ಆ ಹಡಗು, ಜೀವವಿರೋಧಿ ಕಾನೂನೊಂದನ್ನು ಜಾರಿಗೊಳಿಸಲು ಮುಂದಾದ ಅಮೆರಿಕೆಯ ಸಂಸತ್ತಿಗೇ ಅಪ್ಪಳಿಸಿಬಿಡುವ ಸನ್ನಿವೇಶವದು! ಸದ್ಯದ ನೆರೆಯೂ ಸರ್ಕಾರದ ವಿಪತ್ತು ನಿರ್ವಹಣಾ ಸಾಮರ್ಥ್ಯ
ವನ್ನೇ ಪ್ರಶ್ನಿಸುವ ಆ ರೂಪಕದಂತಿದೆ. ಈ ಪರಿಸರ ದುರಂತವಾದರೂ ಕಟ್ಟುನಿಟ್ಟಿನ ಭೂಬಳಕೆಗಾಗಿ ಸರ್ಕಾರವನ್ನು ಎಚ್ಚರಿಸಲಿ. ಈಗಲೂ ಜಾಗೃತರಾಗದಿದ್ದರೆ, ಇನ್ನು ಯಾವಾಗ?

ಲೇಖಕ: ನಿರ್ದೇಶಕ, ಸಂರಕ್ಷಣಾ ಜೀವಶಾಸ್ತ್ರಮತ್ತು ಸುಸ್ಥಿರ ಅಭಿವೃದ್ಧಿ ಅಧ್ಯಯನ ಕೇಂದ್ರ, ಶಿರಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.