ADVERTISEMENT

ನಿರ್ಭಯಾ, ನ್ಯಾಯ ಮತ್ತು ಮಹಿಳೆ

ಜೀವನಾನುಭವದಿಂದ ಮಹಿಳೆ ಕ್ಷಣಾರ್ಧದಲ್ಲಿ ಗುರುತಿಸಬಹುದಾದ ಸೂಕ್ಷ್ಮಗಳನ್ನು ಪುರುಷ ಗುರುತಿಸಲಾರ

ರಕ್ಷಿತ್ ಪೊನ್ನಾಥಪುರ
Published 27 ಮಾರ್ಚ್ 2020, 20:30 IST
Last Updated 27 ಮಾರ್ಚ್ 2020, 20:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

2012ರ ಡಿಸೆಂಬರ್‌ನಲ್ಲಿ ‘ನಿರ್ಭಯಾ’ ಮೇಲೆ ದೆಹಲಿಯಲ್ಲಿ ನಡೆದ ಸಾಮೂಹಿಕ ಅತ್ಯಾಚಾರವು ದೇಶವನ್ನೇ ಬೆಚ್ಚಿಬೀಳಿಸಿತ್ತು. ಸಾವು- ಬದುಕಿನ ನಡುವೆ ಹಲವು ದಿನ ಹೋರಾಡಿ, ನಂತರ ಸಿಂಗಪುರದಲ್ಲಿ ಕೊನೆಯುಸಿರೆಳೆದ ಆ ಯುವತಿಗೆ ಜನ ‘ನಿರ್ಭಯಾ’ ಎಂಬ ಹೆಸರಿತ್ತರು. ಶೋಷಣೆಗೊಳಗಾದ ಎಲ್ಲ ಭಾರತೀಯ ಮಹಿಳೆಯರ ಸಂಕೇತ ಅವಳು ಎಂದರು. ಅವಳ ಮೇಲೆ ಅತ್ಯಾಚಾರ ಎಸಗಿದವರಿಗೆ ಕಠಿಣ ಶಿಕ್ಷೆಯಾಗಬೇಕೆಂದು, ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಕಡಿವಾಣ ಹಾಕಬೇಕೆಂದು ಒತ್ತಾಯಿಸಿ ಭಾರತದ ಮೂಲೆ ಮೂಲೆಗಳಲ್ಲಿ ಪ್ರತಿಭಟನೆಗಳು ನಡೆದವು.

ಜನರ ಆಕ್ರೋಶವನ್ನು ತಣ್ಣಗಾಗಿಸಲು ಕೇಂದ್ರ ಸರ್ಕಾರವು ನ್ಯಾಯಮೂರ್ತಿ ವರ್ಮಾ ಸಮಿತಿ ರಚಿಸಿತು. ಅದು ಕೆಲವು ಶಿಫಾರಸುಗಳನ್ನು ನೀಡಿತು. ಅದರ ಅನ್ವಯ, ಮಹಿಳೆಯರ ಮೇಲೆ ದೌರ್ಜನ್ಯ ಎಸಗುವವರಿಗೆ ಶಿಕ್ಷೆಯನ್ನು ಹೆಚ್ಚು ಕಠಿಣಗೊಳಿಸಿ, ಮಹಿಳೆಯರಿಗೆ ಸುರಕ್ಷತೆ ಹೆಚ್ಚಿಸಲು ನಿರ್ಭಯಾ ನಿಧಿ ಸ್ಥಾಪನೆ ಮುಂತಾದ ಕ್ರಮಗಳನ್ನು ಜಾರಿಗೆ ತಂದಿತು. ನಿರ್ಭಯಾ ಪ್ರಕರಣದ ನಾಲ್ವರು ತಪ್ಪಿತಸ್ಥರನ್ನು ಗಲ್ಲಿಗೇರಿಸುವುದರೊಂದಿಗೆ ಪ್ರಕರಣಕ್ಕೆ ಇದೀಗ ತೆರೆಬಿದ್ದಿದೆ. ಕೊನೆಗೂ ಆಕೆಗೆ ನ್ಯಾಯ ಹಾಗೂ ಆಕೆಯ ಆತ್ಮಕ್ಕೆ ಶಾಂತಿ ದೊರಕಿತೆಂದು ಜನ ಸಂತಸಪಡುತ್ತಿದ್ದಾರೆ.

‘ನಿರ್ಭಯಾ’ ಪ್ರಕರಣದಿಂದ ನಡೆದ ಹೋರಾಟದ ಇತರ ಬೇಡಿಕೆಗಳು ಈಡೇರಿವೆಯೇ, ಈ ಏಳು ವರ್ಷಗಳಲ್ಲಿ ಮಹಿಳೆಯರ ಪಾಲಿಗೆ ದೇಶ ಇನ್ನಷ್ಟು ಸುರಕ್ಷಿತವಾಯಿತೇ
ಎಂದು ನಿರ್ಭಾವುಕವಾಗಿ ಪರಾಮರ್ಶಿಸಬೇಕಿದೆ. ಗಲ್ಲು ಶಿಕ್ಷೆಯು ಅತ್ಯಾಚಾರ ಪ್ರಕರಣಗಳಿಗೆ ಕಡಿವಾಣ ಹಾಕುವುದೇ ಎಂಬ ಪ್ರಶ್ನೆಯನ್ನೂ ಕೇಳಿಕೊಳ್ಳಬೇಕು.

ADVERTISEMENT

ಮಾಧ್ಯಮಗಳ ಕಾರಣದಿಂದ ಹೆಚ್ಚು ಪ್ರಚಾರ ಪಡೆಯುವ ಕೆಲವು ಪ್ರಕರಣಗಳಲ್ಲಿ ಮಾತ್ರ ಶಿಕ್ಷೆ, ಅಂದರೆ ಆರೋಪಿಗಳ, ಅಪರಾಧಿಗಳ ಸಾವನ್ನು ಬಯಸಲಾಗುತ್ತಿದೆ. ಅವರ ಸಾವನ್ನು ಸಂಭ್ರಮಿಸಿ ಅಲ್ಲಿಗೇ ಆ ವಿಷಯ ಬಿಟ್ಟುಬಿಡುವುದರಿಂದ ಮಹಿಳೆಯರ ಸುರಕ್ಷತೆ ಹೆಚ್ಚಿತೇ, ಅತ್ಯಾಚಾರಿಗಳಲ್ಲಿ ಭಯ ಹೆಚ್ಚಿತೇ ಎಂಬುದನ್ನು ನಾವು ಪ್ರಶ್ನಿಸಿಕೊಳ್ಳಬೇಕು. ಗಲ್ಲು ಶಿಕ್ಷೆಯ ಕುರಿತು ವಿಶ್ವದೆಲ್ಲೆಡೆ ಹಲವು ಅಧ್ಯಯನಗಳು ನಡೆದಿದ್ದು, ಗಲ್ಲು ಶಿಕ್ಷೆಯಿಂದ ಅತ್ಯಾಚಾರಿಗಳಲ್ಲಿ ಭಯ ಹೆಚ್ಚಾಗಿರುವ ಅಥವಾ ಅತ್ಯಾಚಾರ ಪ್ರಕರಣಗಳು ಕಡಿಮೆಯಾಗಿರುವ ನಿದರ್ಶನ ಎಲ್ಲೂ ಕಂಡುಬಂದಿಲ್ಲ.

ಬದಲಾಗಿ, ಗಲ್ಲು ಶಿಕ್ಷೆಯಾಗಬಹುದೆಂಬ ಭಯದಿಂದ ಅತ್ಯಾಚಾರಿಗಳು ಸಾಕ್ಷ್ಯ ಅಳಿಸಲು, ಅತ್ಯಾಚಾರಕ್ಕೊಳಗಾದ ಮಹಿಳೆಯರನ್ನು ಕೊಲ್ಲುವ ಸಂಭವ ಹೆಚ್ಚು ಎಂದು ಅಧ್ಯಯನಗಳು ತೋರಿಸಿವೆ. ಬಹುತೇಕ ಅತ್ಯಾಚಾರಿಗಳು ಅತ್ಯಾಚಾರಕ್ಕೊಳಗಾದ‌ ಮಹಿಳೆಯರಿಗೆ ಹತ್ತಿರದ ಸಂಬಂಧಿಕರೋ ಸ್ನೇಹಿತರೋ ಸಹೋದ್ಯೋಗಿ- ಸಹಪಾಠಿಗಳೋ ಆಗಿರುತ್ತಾರಾದ್ದರಿಂದ, ಅವರಿಗೆ ಗಲ್ಲು ಶಿಕ್ಷೆಯಾಗಬಹುದೆಂಬ ಆತಂಕದಿಂದ, ಅತ್ಯಾಚಾರಿಗಳ ವಿರುದ್ಧ ದೂರು ನೀಡಬಾರದೆಂದು ಆ ಮಹಿಳೆಯ ಮೇಲೆ ಎಲ್ಲರೂ ಸೇರಿ ಒತ್ತಡ ಹೇರುವ ಸಂಭವ ಕೂಡ ಹೆಚ್ಚು ಎಂದು ಅಧ್ಯಯನಗಳು ತೋರಿಸಿವೆ.

ಹಾಗೆಂದು,‌ ಈ ವಾದದ ಉದ್ದೇಶ ಅತ್ಯಾಚಾರಿಗಳ ಮೇಲೆ ಕರುಣೆ ತೋರಿ ಅವರಿಗೆ ಕಠಿಣವಲ್ಲದ ಶಿಕ್ಷೆ ನೀಡಬೇಕೆಂದಲ್ಲ. ಹೆಚ್ಚು ಪ್ರಚಾರ ಪಡೆದ ಕೆಲವು ಪ್ರಕರಣ
ಗಳಲ್ಲಿ ಮಾತ್ರ ಗಲ್ಲು ಶಿಕ್ಷೆ ನೀಡಿ ಜನರ ಕೋಪವನ್ನು ತಾತ್ಕಾಲಿಕವಾಗಿ ತಣ್ಣಗಾಗಿಸುವ ಬದಲು, ಪ್ರತೀ ಅತ್ಯಾಚಾರ ಪ್ರಕರಣದಲ್ಲೂ ಅಪರಾಧಿಗೆ ಕಠಿಣವಾದ ಶಿಕ್ಷೆ ಖಾತರಿಪಡಿಸುವ ವ್ಯವಸ್ಥೆಯೊಂದು ಜಾರಿಗೆ ಬಂದರೆ, ಅದು ಅತ್ಯಾಚಾರಿಗಳಲ್ಲಿ ನಿಜವಾದ ಭಯ ಮೂಡಿಸಿ, ಅತ್ಯಾಚಾರ ಪ್ರಕರಣಗಳಿಗೆ ಕಡಿವಾಣ ಹಾಕಬಹುದು.

ಮಹಿಳೆಯರು ಕೆಲಸ ಮಾಡುವ ಸ್ಥಳಗಳಲ್ಲಿ ಲೈಂಗಿಕ ಕಿರುಕುಳ ತಡೆಗಟ್ಟಲು ಆಂತರಿಕ ದೂರು ತಪಾಸಣಾ ವಿಭಾಗ ಇರಬೇಕೆಂಬ ಕಾನೂನು 2013ರಲ್ಲಿ ಜಾರಿಗೆ ಬಂತು. ಆದರೆ ಮಹಿಳೆಯರು ಕೆಲಸ ಮಾಡುವ ಬಹಳಷ್ಟು ಸಂಸ್ಥೆಗಳಲ್ಲಿ ಈ ವಿಭಾಗ ಇಲ್ಲ. ಇರುವ ಹಲವು ಸಂಸ್ಥೆಗಳಲ್ಲೂ ಹೆಚ್ಚಿನವರು ಅದನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಭಾರತದಲ್ಲಿ ಸಂಘಟಿತ ವಲಯಕ್ಕಿಂತ ಅಸಂಘಟಿತ ವಲಯದಲ್ಲಿ ಕೆಲಸ ಮಾಡುವವರೇ ಹೆಚ್ಚು. ಈ ಕಾನೂನು ಅಲ್ಲಿ ಕೆಲಸ ಮಾಡುವ ಕೋಟಿಗಟ್ಟಲೆ ಮಹಿಳೆಯರ ಸಹಾಯಕ್ಕೆ ಬರುವುದಿಲ್ಲ.

ಮಹಿಳೆಯರ ಸುರಕ್ಷತೆಗಾಗಿಯೇ ಪ್ರತ್ಯೇಕ ನಿಧಿಯೊಂದನ್ನು ಕೇಂದ್ರ ಸರ್ಕಾರ 2013ರಲ್ಲಿ ಸ್ಥಾಪಿಸಿ, ಪ್ರತಿವರ್ಷವೂ ಕೋಟಿಗಟ್ಟಲೆ ಹಣವನ್ನು ರಾಜ್ಯಗಳಿಗೆ ನೀಡುತ್ತದೆ. ಈ ನಿಧಿಯಿಂದ ಬಿಡುಗಡೆಯಾದ ಸಾವಿರಾರು ಕೋಟಿ ಹಣವನ್ನು ಬಳಸುವಲ್ಲಿ ಎಲ್ಲ ರಾಜ್ಯಗಳು ಸಂಪೂರ್ಣವಾಗಿ ವಿಫಲವಾಗಿವೆ. ಮಹಾರಾಷ್ಟ್ರ ಸೇರಿದಂತೆ ಆರು ರಾಜ್ಯಗಳು ನಯಾಪೈಸೆಯನ್ನೂ ಖರ್ಚು ಮಾಡಲಿಲ್ಲ. ಕರ್ನಾಟಕ ಮುಂತಾದ ರಾಜ್ಯಗಳು ಶೇಕಡ 5-6ರಷ್ಟು ಹಣವನ್ನು ಮಾತ್ರ ಉಪಯೋಗಿಸಿವೆ. ಸಿ.ಸಿ.ಟಿ.ವಿ. ಕ್ಯಾಮೆರಾ ಅಳವಡಿಕೆ ಹೆಚ್ಚಿಸುವಂತಹ ಕ್ಷುಲ್ಲಕ ಯೋಜನೆಗಳ ಹೊರತಾಗಿ ಬೇರೆ ಸದೃಢ ಹೆಜ್ಜೆಗಳನ್ನು ನಮ್ಮ ಜನನಾಯಕರು ಇಟ್ಟಿಲ್ಲ. ಈ ಸಿ.ಸಿ.ಟಿ.ವಿ. ಕ್ಯಾಮೆರಾಗಳು ಮಹಿಳೆಯರ ಸುರಕ್ಷತೆಗೆ ಉಪಯೋಗವಾಗುವುದಕ್ಕಿಂತ ರಾಜ್ಯ ವ್ಯವಸ್ಥೆಗೆ ತನ್ನ ನಾಗರಿಕರ ಮೇಲೆ ಇನ್ನೂ ಹೆಚ್ಚಿನ ಹದ್ದಿನ ಕಣ್ಣಿಡಲು ನೆರವಾಗುತ್ತಿವೆ!

ಸಾರ್ವಜನಿಕ ಸ್ಥಳಗಳು ಹಾಗೂ ಸಾರಿಗೆ ವ್ಯವಸ್ಥೆಗಳು ಮಹಿಳೆಯರಿಗೆ ಸುರಕ್ಷಿತವಾಗಿಲ್ಲ. ಸರಗಳ್ಳರು, ಕಾಮುಕರು ಹಾಗೂ ಕಿಡಿಗೇಡಿಗಳು ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರಿಗೆ ಹಲವು ಬಗೆಯ ಕಿರುಕುಳಗಳನ್ನು ನೀಡಿದರೆ, ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳಲ್ಲಿ ಮಹಿಳೆಯರು ಪ್ರತಿನಿತ್ಯವೂ ಲೈಂಗಿಕ ಕಿರುಕುಳಗಳಿಗೆ ಒಳಗಾಗುತ್ತಲೇ ಇರುತ್ತಾರೆ. ಇವೆಲ್ಲವನ್ನೂ ತಡೆಗಟ್ಟುವ ನಿಟ್ಟಿನಲ್ಲಿ ಪೊಲೀಸರು ಮತ್ತು ಜನನಾಯಕರು ಹಲವು ಹೆಜ್ಜೆಗಳನ್ನು ಇಡಬಹುದು. ಆದರೆ, ಇವ್ಯಾವುದನ್ನೂ ಕಿಡಿಗೇಡಿಗಳು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಪುರುಷಪ್ರಧಾನ ರಾಜಕೀಯ ಹಾಗೂ ಚುನಾವಣಾ ಪ್ರಕ್ರಿಯೆಗಳು ಮಹಿಳೆಯರನ್ನು ಮತ್ತು ಅವರ ಹಿತಾಸಕ್ತಿ
ಗಳನ್ನು ಸಂಪೂರ್ಣವಾಗಿ ಮೂಲೆಗುಂಪಾಗಿಸಿವೆ.

ಮನೆಗಳೊಳಗೆ, ಸಮಾಜದಲ್ಲಿ ಮಹಿಳೆಯರ ದೃಷ್ಟಿಕೋನದಿಂದ ರೂಪುಗೊಂಡಿರುವ ಮಹಿಳಾಸ್ನೇಹಿ ವ್ಯವಸ್ಥೆಗಳು ಹಾಗೂ ಯೋಜನೆಗಳು ಇರಬೇಕೆಂದರೆ, ಈ ಎಲ್ಲ ಕಡೆಗಳಲ್ಲೂ ನಾಯಕತ್ವದ ಸ್ಥಾನಗಳಲ್ಲಿ ಮಹಿಳೆಯರು ಗಣನೀಯ ಪ್ರಮಾಣದಲ್ಲಿ ಇರಬೇಕು. ಆದರೆ ನಾಯಕತ್ವದ ಸ್ಥಾನಗಳಲ್ಲಿ ಗಂಡಸರೇ ಇದ್ದಾರೆ. ರಾಜ್ಯಗಳ ಹಾಗೂ ದೇಶದ ಕಾನೂನು ರೂಪಿಸುವ ವಿಧಾನ
ಸಭೆಗಳಲ್ಲಿ, ಲೋಕಸಭೆ- ರಾಜ್ಯಸಭೆಗಳಲ್ಲಿ ಮಹಿಳೆಯರ ಪ್ರಾತಿನಿಧ್ಯದ ಪ್ರಮಾಣ ಸೀಮಿತಗೊಂಡಿದೆ.

ಮಹಿಳೆಯರ ಪರವಾಗಿ ಪುರುಷರು ಎಷ್ಟೇ ಮಾತನಾಡಬಹುದು, ಆದರೆ ಮಹಿಳೆಯೊಬ್ಬಳು ತನ್ನ ಜೀವನಾನುಭವಗಳಿಂದ ಕ್ಷಣಾರ್ಧದಲ್ಲಿ ಗುರುತಿಸಬಹುದಾದ ಸೂಕ್ಷ್ಮಗಳನ್ನು ಆತ ಗುರುತಿಸಲಾರ. ಮಹಿಳಾಸ್ನೇಹಿ ವ್ಯವಸ್ಥೆ ಹಾಗೂ ಯೋಜನೆಗಳು ಜಾರಿಗೆ ಬರಲು ನಾಯಕತ್ವದ ಸ್ಥಾನಗಳಲ್ಲಿ ಮಹಿಳೆಯರು ಇರಲೇಬೇಕು. ಇಂತಹ ಸ್ಥಿತಿ ತಾನಾಗೇ ಬರದು. ಅದಕ್ಕೆ ಮಹಿಳೆಯರು ಹಾಗೂ ಸ್ತ್ರೀವಾದಿಗಳೆಲ್ಲ ಸೇರಿ ಹೋರಾಡಬೇಕು.

ಲೈಂಗಿಕ ಕಿರುಕುಳದ ಪ್ರಕರಣಗಳೇ ಇರಲಿ, ಮಹಿಳಾ ಸುರಕ್ಷತೆಯೇ ಇರಲಿ, ನಿತ್ಯಜೀವನದ ಜಂಜಾಟಗಳೇ ಇರಲಿ, ಮಹಿಳೆಯರು ಏಳು ವರ್ಷಗಳ ಹಿಂದೆ ಯಾವ ಪರಿಸ್ಥಿತಿಯಲ್ಲಿದ್ದರೋ ಈಗಲೂ ಹಾಗೇ ಇದ್ದಾರೆ. ಅಮಾವಾಸ್ಯೆಗೋ ಹುಣ್ಣಿಮೆಗೋ ಒಮ್ಮೆ ಮಾಧ್ಯಮಗಳು ಹೆಚ್ಚು ಪ್ರಚುರಪಡಿಸುವ ಪ್ರಕರಣಗಳಲ್ಲಿ ಮಾತ್ರ ಖಾಪ್ ಪಂಚಾಯಿತಿ ಮಾದರಿಯ ನ್ಯಾಯವನ್ನು ಅಪೇಕ್ಷಿಸಿ, ಅದು ದೊರೆತಾಗ ಸಂತಸಪಟ್ಟು, ಅಷ್ಟಕ್ಕೇ ವಿಷಯವನ್ನು ಕೈಬಿಡುವ ಪ್ರವೃತ್ತಿ ಇದ್ದರೆ, ಮಹಿಳೆಯರ ವಿಚಾರದಲ್ಲಿ ಇದೇ ಪರಿಸ್ಥಿತಿ ಮುಂದುವರಿಯುತ್ತಾ ಇರುತ್ತದೆ. ಈ ಎಲ್ಲ ಆಯಾಮಗಳ ಕುರಿತು ಜನ ನಿರಂತರವಾಗಿ ಚಿಂತಿಸುತ್ತಾ, ಚರ್ಚಿಸುತ್ತಾ ಸಮಗ್ರ ಮಹಿಳಾಸ್ನೇಹಿ ವ್ಯವಸ್ಥೆಯನ್ನು ಕಟ್ಟುತ್ತಾ ಹೋಗದಿದ್ದರೆ, ನೂರು ಅತ್ಯಾಚಾರಿಗಳ ಗಲ್ಲು ಶಿಕ್ಷೆಗಳೂ ಮಹಿಳೆಯರ ಪರಿಸ್ಥಿತಿಯನ್ನು ಯಾವುದೇ ರೀತಿಯಲ್ಲಿ ಸುಧಾರಿಸುವುದಿಲ್ಲ. ಸುಧಾರಣೆಗಾಗಿ ಸುದೀರ್ಘ, ನಿರಂತರ ಹಾಗೂ ಅರ್ಥವತ್ತಾದ ಹೋರಾಟವನ್ನು ನಾವೆಲ್ಲರೂ ಸೇರಿ ಮಾಡಬೇಕಿದೆ.

ಲೇಖಕ: ಬೆಂಗಳೂರಿನ ನ್ಯಾಷನಲ್‌ ಲಾ ಸ್ಕೂಲ್‌ ಆಫ್‌ ಇಂಡಿಯಾ ಯೂನಿವರ್ಸಿಟಿಯಲ್ಲಿ

ಪಬ್ಲಿಕ್ ಪಾಲಿಸಿ‌ ವಿದ್ಯಾರ್ಥಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.