ADVERTISEMENT

ರೈತರು ಮಂಡಿಸಿದ ಅವಿಶ್ವಾಸ ನಿರ್ಣಯ

ಪ್ರಜಾವಾಣಿ ವಿಶೇಷ
Published 19 ಜುಲೈ 2018, 20:08 IST
Last Updated 19 ಜುಲೈ 2018, 20:08 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಅವಿಶ್ವಾಸ ನಿರ್ಣಯದ ವಿಚಾರವಾಗಿ ಸಂಸತ್ತಿನಲ್ಲಿ ಚರ್ಚೆ ನಡೆಯುವ ಹೊತ್ತಿನಲ್ಲಿ, ಭಾರತದ ಎಲ್ಲ ಕಡೆಗಳಿಂದ ಬಂದಿರುವ ರೈತ ಪ್ರತಿನಿಧಿಗಳು ಸಂಸತ್ತಿನ ಹೊರಗಡೆ ‘ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ’ ಆಶ್ರಯದಲ್ಲಿ ಜಾಥಾ ನಡೆಸುತ್ತಿರುತ್ತಾರೆ. ಈ ಸರ್ಕಾರದ ಮೇಲೆ ತಮಗೆ ವಿಶ್ವಾಸ ಇಲ್ಲ ಎಂದು ರೈತರು ಈಗಾಗಲೇ ನಿರ್ಣಯ ಕೈಗೊಂಡಾಗಿದೆ. ರೈತರಿಗೆ ಸಹಾಯ ಮಾಡುವ ಬದಲು ಈ ಸರ್ಕಾರವು ಅವರಿಗೆ ತೊಂದರೆ ಉಂಟುಮಾಡಿದೆ.

ಹೀಗೆ ಆರೋಪ ಮಾಡುವುದು ಬಹಳ ಕಟುವಾದುದು. ಇದಕ್ಕೆ ಬಲವಾದ ಸಾಕ್ಷ್ಯ ಒದಗಿಸಬೇಕು. ಈಗಿನ ಸರ್ಕಾರ ಅವಧಿಯಲ್ಲಿ ಕೃಷಿ ಬೆಳವಣಿಗೆ ಮಂದಗತಿಯಲ್ಲಿದೆ ಎನ್ನುವುದು ಸರಿಯಾಗುವುದಿಲ್ಲ. ಒಂದಾದ ನಂತರ ಒಂದರಂತೆ ಎರಗಿದ ಬರಗಾಲದ ಕಾರಣವಾಗಿ ಕೃಷಿ ಕ್ಷೇತ್ರ ಸೊರಗಿದೆ. ಇದಕ್ಕೆ ಸರ್ಕಾರವನ್ನು ದೂಷಿಸುವುದು ಸರಿಯಲ್ಲ. ರೈತರ ಆತ್ಮಹತ್ಯೆಗಳಿಗೆ ಸಂಬಂಧಿಸಿದ ಅಂಕಿ–ಅಂಶಗಳನ್ನೂ ಬಳಸಿಕೊಳ್ಳಲು ಸಾಧ್ಯವಿಲ್ಲ. ಈ ಅಂಕಿ–ಅಂಶಗಳನ್ನು ಕಳೆದ 15 ತಿಂಗಳುಗಳಿಂದ ಬಿಡುಗಡೆ ಮಾಡಿಲ್ಲ.

ಆದರೆ, ಭಾರತದ ರೈತರು ಸರ್ಕಾರದ ಮೇಲೆ ವಿಶ್ವಾಸವಿಲ್ಲ ಎಂದಿರುವುದಕ್ಕೆ ಗಟ್ಟಿಯಾದ ಸಾಕ್ಷ್ಯಗಳನ್ನು ಹೊಂದಿರುವ ಹತ್ತು ವಾದಗಳು ಇಲ್ಲಿವೆ:

ADVERTISEMENT

1) 2014ರಲ್ಲಿ ನೀಡಿದ್ದ ಪ್ರಮುಖ ಚುನಾವಣಾ ಭರವಸೆಗಳನ್ನು ಜಾರಿಗೊಳಿಸುವಲ್ಲಿ ಈ ಸರ್ಕಾರ ವಿಫಲವಾಗಿದೆ. ‘ಕೃಷಿಗೆ ಅತಿಹೆಚ್ಚಿನ ಆದ್ಯತೆ, ರೈತರ ಆದಾಯದಲ್ಲಿ ಹೆಚ್ಚಳ’ ಎನ್ನುವ ಭರವಸೆ ಬಿಜೆಪಿಯ ಪ್ರಣಾಳಿಕೆಯಲ್ಲಿತ್ತು. ರೈತರ ಆದಾಯ ‘ಹಾಗೆಯೇ ಇದೆ’ ಎಂಬುದನ್ನು 2018ರ ಆರ್ಥಿಕ ಸಮೀಕ್ಷೆ ಒಪ್ಪಿಕೊಂಡಿದೆ. ಕೃಷಿಯಲ್ಲಿ ಹೆಚ್ಚಿನ ಸರ್ಕಾರಿ ಹೂಡಿಕೆ ಕಾರ್ಯರೂಪಕ್ಕೆ ಬಂದಿಲ್ಲ. ಅದು ಕಡಿಮೆ ಆಗಿದೆ. ರಾಷ್ಟ್ರೀಯ ಜಮೀನು ಬಳಕೆ ನೀತಿಯನ್ನು ಜಾರಿಗೆ ತಂದಿಲ್ಲ.

2) ‘ವೆಚ್ಚದ ಮೇಲೆ ಶೇಕಡ 50ರಷ್ಟು ಲಾಭ’ ಎನ್ನುವ ಭರವಸೆ ವಿಚಾರದಲ್ಲಿ ಮೋದಿ ನೇತೃತ್ವದ ಸರ್ಕಾರ ಹಿಂದಕ್ಕೆ ಸರಿದಿದೆ. 2015ರಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಪ್ರಮಾಣಪತ್ರ ಸಲ್ಲಿಸಿದ ಸರ್ಕಾರ, ಇದು ಕೃಷಿ ಮಾರುಕಟ್ಟೆಯನ್ನು ಅಸ್ತವ್ಯಸ್ತಗೊಳಿಸುತ್ತದೆ ಎಂಬ ಕಾರಣ ನೀಡಿ, ಈ ಭರವಸೆ ಈಡೇರಿಸಲು ನಿರಾಕರಿಸಿತು.

3) ಬೆಳೆಗೆ ಆಗುವ ಮೂಲ ವೆಚ್ಚ ಮತ್ತು ಮೂಲ ವೆಚ್ಚದ ಶೇಕಡ 50ರಷ್ಟನ್ನು ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ರೂಪದಲ್ಲಿ ನೀಡಲಾಗುವುದು ಎಂಬ ಭರವಸೆ ಈಡೇರಿಸದೆ ಇರುವುದು ಮಾತ್ರವೇ ಅಲ್ಲ, ಎಂಎಸ್‌ಪಿಯ ವಾರ್ಷಿಕ ಹೆಚ್ಚಳವನ್ನು ಕೂಡ ಹಿಂದಿನಂತೆ ಮಾಡಲಿಲ್ಲ. ಈ ಸರ್ಕಾರದ ಅವಧಿಯಲ್ಲಿ ಆಗಿರುವ ಎಂಎಸ್‌ಪಿಯ ಶೇಕಡಾವಾರು ಹೆಚ್ಚಳವು ಯುಪಿಎ–1 ಹಾಗೂ ಯುಪಿಎ–2 ಅವಧಿಯಲ್ಲಿ ಆಗಿದ್ದ ಹೆಚ್ಚಳಕ್ಕಿಂತ ಕಡಿಮೆ. ಈ ಸರ್ಕಾರ ಈಚೆಗೆ ಮಾಡಿರುವ ಎಂಎಸ್‌ಪಿ ಹೆಚ್ಚಳ ಕೂಡ ಯುಪಿಎ ಸರ್ಕಾರ 2008–09ರಲ್ಲಿ ಮಾಡಿದ್ದ ಹೆಚ್ಚಳಕ್ಕಿಂತ ಕಡಿಮೆ ಇದೆ.

4) 2014–15 ಹಾಗೂ 2015–16ರಲ್ಲಿ ದೇಶಾದ್ಯಂತ ಕಂಡುಬಂದ ಬರ ಪರಿಸ್ಥಿತಿಗೆ ಬಹುಶಃ ಅತ್ಯಂತ ನಿಧಾನಗತಿಯಲ್ಲಿ ಸ್ಪಂದಿಸಿದ ತಪ್ಪನ್ನೂ ಈ ಸರ್ಕಾರ ಮಾಡಿದೆ. ಈ ರಾಷ್ಟ್ರೀಯ ವಿಪತ್ತು ಎದುರಾದಾಗ ಸರ್ಕಾರದ ಪ್ರತಿಕ್ರಿಯೆಯು ಪರಿಹಾರಕ್ಕೆ ಅರ್ಹರಾಗುವವರ ಮಿತಿಯನ್ನು ಹೆಚ್ಚಿಸಿದ್ದು ಹಾಗೂ ಪರಿಹಾರದ ಮೊತ್ತವನ್ನು ಹೆಚ್ಚಿಸಿದ್ದು ಮಾತ್ರ. ಆದರೆ, ಇದೇ ಸಂದರ್ಭದಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯಿಂದ ರಾಜ್ಯಗಳಿಗೆ ನೀಡುವ ಅನುದಾನವನ್ನು ಕಡಿತ ಮಾಡಿತು. ಸುಪ್ರೀಂ ಕೋರ್ಟ್‌ ಮತ್ತೆ ಮತ್ತೆ ಒತ್ತಡ ಹೇರಿದರೂ ಈ ಸರ್ಕಾರವು ಬರ ಘೋಷಿಸುವಲ್ಲಿ, ಪಡಿತರ ವಸ್ತುಗಳ ತಲುಪಿಸುವಿಕೆ ಸುಧಾರಿಸುವಲ್ಲಿ, ಕುಡಿಯುವ ನೀರಿನ ಕೊರತೆ ನಿವಾರಿಸುವಲ್ಲಿ ಹುರುಪಿನಿಂದ ಕೆಲಸ ಮಾಡಲಿಲ್ಲ.

5) ನರೇಗಾ ಯೋಜನೆಯ ಜಾರಿಗೆ ಸರ್ಕಾರಕ್ಕೆ ರಾಜಕೀಯ ಇಚ್ಛಾಶಕ್ತಿ ಇಲ್ಲದಿರುವುದು ಗ್ರಾಮೀಣ ಭಾಗದ ಬಡಜನರ ಮೇಲೂ, ಕೃಷಿ ಕೂಲಿ ಕಾರ್ಮಿಕರ ಮೇಲೂ ಕೆಟ್ಟ ಪರಿಣಾಮ ಬೀರಿದೆ.

6) ಆಲೂಗಡ್ಡೆಗೆ 2014ರಲ್ಲಿ ಕನಿಷ್ಠ ರಫ್ತು ಬೆಲೆ ಹೇರುವುದರಿಂದ ಆರಂಭಿಸಿ, ಪಾಕಿಸ್ತಾನದಿಂದ ಸಕ್ಕರೆ ಆಮದು ಮಾಡಿಕೊಳ್ಳುವವರೆಗೆ ಈ ಸರ್ಕಾರ ರೈತ ವಿರೋಧಿ ವಾಣಿಜ್ಯ ನೀತಿಗಳನ್ನು ಅನುಸರಿಸಿದೆ. ಕೃಷಿ ಉತ್ಪನ್ನಗಳ ರಫ್ತಿಗೆ ವ್ಯವಸ್ಥಿತವಾಗಿ ಅಡ್ಡಿ ಉಂಟುಮಾಡಲಾಗಿದೆ. ಇದರಿಂದಾಗಿ 2013–14ರಿಂದ 2016–17ರ ನಡುವಣ ಅವಧಿಯಲ್ಲಿ ರಫ್ತು ಪ್ರಮಾಣದಲ್ಲಿ ಕುಸಿತ ಆಗಿದೆ.

7) ಸೂಕ್ತ ಸಿದ್ಧತೆ ಮಾಡಿಕೊಳ್ಳದೆ ಕೈಗೊಂಡ ನೋಟು ರದ್ದತಿ ತೀರ್ಮಾನವು ಕೃಷಿ ಮಾರುಕಟ್ಟೆಗಳ ಮೇಲೆ ಬಲವಾದ ಏಟು ನೀಡಿತು. ಅದರಲ್ಲೂ, ಹಣ್ಣು ಮತ್ತು ತರಕಾರಿ ಮಾರುಕಟ್ಟೆ ಮೇಲೆ ಹೆಚ್ಚಿನ ಪರಿಣಾಮ ಉಂಟಾಯಿತು. ರೈತರು ಬರಗಾಲದಿಂದ ಸಾವರಿಸಿಕೊಳ್ಳುತ್ತಿದ್ದ ಹೊತ್ತಿನಲ್ಲೇ ಈ ಏಟು ಎದುರಾಯಿತು. ಅದರ ಪರಿಣಾಮ ಇಂದಿಗೂ ಕಂಡುಬರುತ್ತಿದೆ.

8) ಜಾನುವಾರು ಮಾರುಕಟ್ಟೆಯನ್ನು ನಿಯಂತ್ರಣಕ್ಕೆ ಒಳಪಡಿಸಲು ಸರ್ಕಾರ ನಡೆಸಿದ ಯತ್ನ ಹಾಗೂ ‘ದನಗಳನ್ನು ಸಾಗಿಸುತ್ತಿದ್ದಾರೆ’ ಎಂಬ ಶಂಕೆಯ ಅಡಿ ಜನರನ್ನು ಬೀದಿಯಲ್ಲಿ ಹೊಡೆಯುವವರಿಗೆ ರಕ್ಷಣೆ ಕೊಡುತ್ತಿರುವ ಕಾರಣ ಜಾನುವಾರುಗಳ ಮತ್ತು ರೈತನ ಜೊತೆ ಬೆಸೆದುಕೊಂಡಿರುವ ಆರ್ಥಿಕ ವ್ಯವಸ್ಥೆ ಮೇಲೆ ಕೆಟ್ಟ ಪರಿಣಾಮ ಉಂಟಾಗಿದೆ. ಇದರಿಂದಾಗಿ ಒಂದೆಡೆ ಆದಾಯ ಕುಸಿತ ಎದುರಾದರೆ, ಇನ್ನೊಂದೆಡೆ ಜಾನುವಾರುಗಳು ಬೆಳೆಗಳನ್ನು ನಾಶ ಮಾಡುವುದು ಹೆಚ್ಚಾಗಿದೆ.

9) ಆದಿವಾಸಿ ರೈತರ ಪಾಲಿಗೆ ಇದು ಅತ್ಯಂತ ಸಂವೇದನಾರಹಿತ ಸರ್ಕಾರ. ಜಮೀನು ಮತ್ತು ಜಲ ಸಂಪನ್ಮೂಲಗಳನ್ನು ಆದಿವಾಸಿಗಳಿಂದ ಕೈಗಾರಿಕೋದ್ಯಮಿಗಳಿಗೆ ಹಸ್ತಾಂತರ ಮಾಡುವ ಉದ್ದೇಶದಿಂದ ಸರ್ಕಾರವು ಹಲವು ಕ್ರಮಗಳ ಮೂಲಕ ಅರಣ್ಯ ಹಕ್ಕು ಕಾಯ್ದೆ ಹಾಗೂ ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ಹಲವು ಕಾನೂನುಗಳನ್ನು ದುರ್ಬಲಗೊಳಿಸಿದೆ.

10) ಐತಿಹಾಸಿಕವಾದ 2013ರ ಭೂಸ್ವಾಧೀನ ಕಾಯ್ದೆಯನ್ನು ನಿಷ್ಪ್ರಯೋಜಕಗೊಳಿಸಲು ಮೋದಿ ನೇತೃತ್ವದ ಸರ್ಕಾರವು ನಾಲ್ಕು ಬಾರಿ ಯತ್ನಿಸಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಂತಹ ಸರ್ಕಾರಿ ಸಂಸ್ಥೆಗಳು ನಡೆಸಿದ ಭೂಸ್ವಾಧೀನ ಪ್ರಕ್ರಿಯೆಗಳಲ್ಲಿ ಈ ಕಾಯ್ದೆಯನ್ನು ಮೀರಲು ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಹಾಗೆಯೇ, ಜಮೀನು ಮಾಲೀಕರಿಗೆ ಪ್ರಯೋಜನ ಆಗುತ್ತಿದ್ದ ಅಂಶಗಳನ್ನು ನಿಷ್ಪ್ರಯೋಜಕಗೊಳಿಸುವಂತೆ ಮಾಡಲು ರಾಜ್ಯ ಸರ್ಕಾರಗಳಿಗೆ ಅವಕಾಶ ಕಲ್ಪಿಸಿದೆ.

ಸ್ವತಂತ್ರ ಭಾರತ ಕಂಡು ಅತ್ಯಂತ ರೈತ ವಿರೋಧಿ ಸರ್ಕಾರ ಎನ್ನುವ ‘ಖ್ಯಾತಿ’ಯನ್ನು ಈ ಸರ್ಕಾರ ನ್ಯಾಯೋಚಿತವಾಗಿಯೇ ಪಡೆದುಕೊಂಡಿದೆ. ಲೋಕಸಭೆಯಲ್ಲಿ ಏನೇ ಆಗಲಿ, ರೈತರಿಂದ ವಿಶ್ವಾಸಮತ ಗೆದ್ದುಕೊಳ್ಳುವುದು ಮೋದಿ ನೇತೃತ್ವದ ಸರ್ಕಾರದ ಪಾಲಿಗೆ ಕಷ್ಟದ ಕೆಲಸ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.