ADVERTISEMENT

ನುಡಿ ಬೆಳಗು: ಛೆ, ಅದೇ ಚಪಾತಿ, ಅದೇ ಆಲೂಗೆಡ್ಡೆ

ಪ್ರೊ. ಎಂ. ಕೃಷ್ಣೇಗೌಡ
Published 18 ಜುಲೈ 2024, 21:34 IST
Last Updated 18 ಜುಲೈ 2024, 21:34 IST
<div class="paragraphs"><p>ನುಡಿ ಬೆಳಗು</p></div>

ನುಡಿ ಬೆಳಗು

   

ಅವನೊಬ್ಬ ಹೊಸದಾಗಿ ಕೆಲಸಕ್ಕೆ ಸೇರಿದ್ದ ಕಾಲೇಜ್ ಮೇಷ್ಟ್ರು. ಆ ಕಾಲೇಜು ಊರ ಹೊರಗಿದ್ದುದರಿಂದ ಎಲ್ಲ ಮೇಷ್ಟ್ರುಗಳೂ ಮಧ್ಯಾಹ್ನದ ಊಟವನ್ನು ಮನೆಯಿಂದಲೇ ತರುತ್ತಿದ್ದರು. ಊಟದ ವಿರಾಮದಲ್ಲಿ ಎಲ್ಲರೂ ಸ್ಟಾಫ್ ರೂಮಿನಲ್ಲೇ ಡಬ್ಬಿ ಬಿಚ್ಚಿ ಊಟ ಮಾಡುತ್ತಿದ್ದರು.

ಈ ಡಬ್ಬಿ ಊಟದ ಬಳಗಕ್ಕೆ ಸಹಜವಾಗೇ ಈ ಹೊಸ ಮೇಷ್ಟ್ರೂ ಸೇರಿಕೊಂಡ.

ADVERTISEMENT

ಹೀಗೇ ಮೂರ್ನಾಲ್ಕು ದಿನ ಆದಮೇಲೆ ಒಂದು ದಿನ ಮೇಷ್ಟ್ರು ಡಬ್ಬಿ ಬಿಚ್ಚಿದ. ‘ಛೆ, ಈವತ್ತೂ ಅದೇ ಚಪಾತಿ, ಅದೇ ಆಲೂಗೆಡ್ಡೆ ಪಲ್ಯ...’ ಅಂತ ಡಬ್ಬಿಯನ್ನೊಮ್ಮೆ ಕುಕ್ಕಿದ. ಆಮೇಲೆ ಅದನ್ನು ಸುಮ್ಮನೆ ತಿಂದ.

ಮರುದಿನ ಮತ್ತೆ ಸ್ಟಾಫ್ ರೂಮಿನಲ್ಲಿ ಡಬ್ಬಿ ಬಿಚ್ಚಿದ. ಆಶ್ಚರ್ಯ... ಮತ್ತೆ ಅದೇ ಉದ್ಗಾರ. ‘ಛೆ, ಈವತ್ತೂ ಅದೇ ಚಪಾತಿ, ಅದೇ ಆಲೂಗೆಡ್ಡೆ ಪಲ್ಯ’ ಅಂತ ಡಬ್ಬಿಯನ್ನು ಕುಕ್ಕಿದ. ಮತ್ತೆ ತಿಂದ.

ಮತ್ತೆ ಅದರ ಮಾರನೆಯ ದಿನ ಕೂಡಾ ಅದೇ ಪುನರಾವರ್ತನೆ ಆಯಿತು. ಅವನು ಡಬ್ಬಿ ಬಿಚ್ಚಿ ‘ಛೆ, ಈವತ್ತೂ ಅದೇ ಚಪಾತಿ, ಅದೇ ಆಲೂಗೆಡ್ಡೆ ಪಲ್ಯ’ ಅಂತ ಡಬ್ಬಿಯನ್ನು ಕುಕ್ಕಿದ. ಪಕ್ಕದಲ್ಲೇ ಕೂತಿದ್ದವನಿಗೆ ರೇಗಿಹೋಯಿತು.

ಅವನು ಹೇಳಿದ- ‘ಏಯ್ ಅವಿವೇಕಿ, ನಿನಗೆ ಚಪಾತಿ, ಆಲೂಗೆಡ್ಡೆ ಪಲ್ಯ ಇಷ್ಟ ಇಲ್ಲ ಅಂದ್ರೆ ನಿನ್ನ ಹೆಂಡ್ತಿಗೆ ಬೇರೆ ಏನಾದರೂ ಮಾಡೋದಕ್ಕೆ ಹೇಳು. ಇಲ್ಲಿ ಬಂದು ಡಬ್ಬಿ ಕುಕ್ಕೋದು ತಪ್ಪುತ್ತೆ’.

ಹೊಸ ಮೇಷ್ಟ್ರು ಹೇಳಿದ- ‘ಹೆಂಡ್ತಿ... ಯಾವ ಹೆಂಡ್ತಿ? ಯಾರ ಹೆಂಡ್ತಿ?’

‘ಇನ್ನ್ಯಾರು ನಿನ್ನ ಹೆಂಡ್ತಿಗೇ ಹೇಳು, ಊಟಕ್ಕೆ ಬೇರೇನಾದರೂ ಮಾಡು ಅಂತ’.

ಅದಕ್ಕೆ ಆ ಮೇಷ್ಟ್ರು ಹೇಳಿದ- ‘ಅಲ್ಲಯ್ಯಾ, ನನಗೆ ಮದುವೇನೇ ಆಗಿಲ್ಲ, ಹೇಳೂದಕ್ಕೆ ಹೆಂಡ್ತೀನ‌ ಎಲ್ಲಿಂದ ತರಲಿ?’

‘ಹಾಗಾದರೆ ನಿನ್ನ ಮನೆಯಲ್ಲಿ ಅಡುಗೆ ಮಾಡೋದು ಯಾರು?

‘ಇನ್ನ್ಯಾರು? ನಾನೇ, ನಾನೇ ನನ್ನ ಮನೆಯಲ್ಲಿ ಅಡುಗೆ ಮಾಡೋದು...’

ಇದೇ ನಮ್ಮ ಬದುಕು. ನಾವೇ ಮಾಡೋದು, ನಾವೇ ತಿನ್ನೋದು. ಸುಮ್ಮನೆ ಪಾತ್ರೆ ಕುಕ್ಕುತ್ತೇವೆ, ತಲೆ ಚಚ್ಚಿಕೊಳ್ತೇವೆ, ಅಷ್ಟೆ.

ಓಶೋ ಹೇಳುತ್ತಾರೆ- ನಿಮ್ಮ ಬದುಕಿನಲ್ಲಿ ನೀವು ಸದಾ ಗೋಳಾಡುತ್ತಿದ್ದರೆ ಅದೇ ನಿಮ್ಮ ಆಯ್ಕೆ. ನೀವು ಸಂತೋಷವಾಗಿ, ಆನಂದವಾಗಿ ಇರಬೇಕೆಂದರೂ ಅದು ನಿಮ್ಮ ಆಯ್ಕೆಯೇ. ನೀವು ಏನು ಮಾಡಿದ್ದೀರೋ, ಏನು ಮಾಡುತ್ತಿದ್ದೀರೋ, ಅದನ್ನೇ ನೀವೀಗ ಅನುಭವಿಸುತ್ತಿದ್ದೀರಿ‌. ಡಬ್ಬಿ ಕುಕ್ಕಿದರೆ ಏನೂ ಬದಲಾಗುವುದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.