ಈ ಅಜ್ಜಿಯನ್ನು ಬೀದಿಯ ಜನ ಬಜಾರಿಯೆಂದು ಘೋಷಿಸಿಯಾಗಿತ್ತು. ಆದರೆ, ಆ ತಾಯಿ ಯಾರ ಜೊತೆಯೂ ಯಾವ ಜಗಳವನ್ನೂ ಮಾಡಿದ್ದು ನಾನಂತೂ ನೋಡಿರಲಿಲ್ಲ. ಉಪ್ಪಿನಕಾಯಿ ಹಾಕುವ ಕಾಯಕ ಮಾಡುತ್ತಿದ್ದಳು. ಹಲವಾರು ಜನ ಬಂದು ಆಗಾಗ ಬಂದು ಖರೀದಿಸುತ್ತಿದ್ದರು.
ಅವಳ ಮನೆ ಓಣಿಯ ಹಿಂಭಾಗದಲ್ಲಿತ್ತು. ಮುಂದಿನ ಪುಟ್ಟ ಮನೆಯಲ್ಲಿ
ಅವಳ ಗಂಡ ವಾಸವಿದ್ದ. ಮನೆ ಪಾಲಾಗಿರುವುದು ಗೊತ್ತಾಗುತ್ತಿತ್ತು. ಮಕ್ಕಳು ಮರಿ ಇದ್ದಂತೆ ಕಾಣಲಿಲ್ಲ. ಇಬ್ಬರಿಗೂ ಪರಸ್ಪರ
ಮಾತುಕತೆ ತಪ್ಪಿ ಹೋಗಿ ಅನೇಕ ವರ್ಷಗಳೇ ಆಗಿದ್ದವಂತೆ. ಗಂಡನ ಕಣ್ಣೆತ್ತಿಯೂ ನೋಡದೆ ಅವಳು ಸಾಗಿ ಹೋಗುತ್ತಿದ್ದಳು.
ಒಂದು ದಿನ ಅವರ ಮನೆ ಮುಂದೆ ಶಾಮಿಯಾನ ಹಾಕಿದ್ದರು. ಅಜ್ಜ ಹಿಂದಿನ ರಾತ್ರಿ ಸತ್ತು ಹೋಗಿದ್ದ. ಬಂಧು ಬಳಗದವರು ಸೇರಿದ್ದರು. ಜೋರಾದ ಗಲಾಟೆ ಶುರುವಾಗಿತ್ತು. ಅಜ್ಜಿ ಯಾರ ಮಾತಿಗೂ ಸೊಪ್ಪು ಹಾಕದೆ ತನ್ನ ಹಟ ಮುಂದುವರಿಸಿದ್ದಳು. ಯಾವ ಕಾರಣಕ್ಕೂ ನಾನವನ ಮುಖವನ್ನು ನೋಡುವುದಿಲ್ಲ. ನನ್ನ ಪಾಲಿಗೆ ಅವನು ಸತ್ತು ಬಹಳ ವರ್ಷಗಳಾದವು. ತಾಳಿ ತೆಗೆಯುವುದಿಲ್ಲ. ಬಳೆ ಒಡೆಯಲು ಬಿಡುವುದಿಲ್ಲ. ಕಣ್ಣೀರು ಹಾಕುವುದನ್ನು ನೀವಂತೂ ಮರೆತು ಬಿಡಿ. ನಿಮಗಿಷ್ಟವಿದ್ದರೆ ಧಪನ್ ಮಾಡಿ. ಇಲ್ಲ ಅವನ ಹೆಣ ಅಲ್ಲೇ ಬಿದ್ದಿರಲಿ ಎಂದು ಖಡಕ್ಕಾಗಿ ಹೇಳಿ ಎದ್ದು ಹೋದಳು.
ಅಜ್ಜಿ ಯಾಕಿಷ್ಟು ನಿಷ್ಠುರವಾಗಿ ನಡೆದುಕೊಳ್ಳುತ್ತಿದ್ದಾಳೆಂಬ ಕುತೂಹಲ ಎಲ್ಲರಂತೆ ನನಗೂ ಇತ್ತು. ಬಂದ ಹಲವರು ಅಜ್ಜನ ಪರವಾಗಿ ವಾದಿಸಿದರೆ; ಕೆಲವರು ಮಾತ್ರ ಅಜ್ಜಿಯೇ ಸರಿ ಎನ್ನುತ್ತಿದ್ದರು. ಅಷ್ಟೊಂದು ಉರಿಸಿದ, ಕುಡಿದು ಸತಾಯಿಸಿ, ವಿನಾಕಾರಣ ಅನುಮಾನ ಪಟ್ಟ, ಅವನನ್ನು ಅಜ್ಜಿ ಕ್ಷಮಿಸದಿರುವುದೇ ಸರಿ ಎನ್ನುವವರ ದನಿ ಸಣ್ಣ ಪ್ರಮಾಣದಲ್ಲಿತ್ತು. ಆಗಿದ್ದು ಆಗಿ ಹೋಗಿದೆ. ಮತ್ತೆ ನೋಡಬೇಕು ಎಂದರೂ ಗಂಡನ ಮುಖ ಸಿಗುವುದಿಲ್ಲ. ಸತ್ತ ಮೇಲೆ ಎಲ್ಲರನ್ನೂ, ಎಲ್ಲವನ್ನೂ ಕ್ಷಮಿಸುವುದು ಮನುಷ್ಯ ಧರ್ಮ. ಹೆಂಗಸಾದ ಇವಳಿಗೆ ಇಷ್ಟು
ಹಟಮಾರಿತನ ಇರುವುದು ಸರಿಯಲ್ಲ ಎಂದು ಕೆಲವರು ತೀರ್ಮಾನ ಹೇಳುತ್ತಿದ್ದರು.
ಅಜ್ಜಿ ತನ್ನ ನಿರ್ಧಾರವನ್ನು ಬದಲಿಸಲೇ ಇಲ್ಲ. ಹೋಗಿ ತನ್ನ ಮನೆಯಲ್ಲಿ ಪಟ್ಟಾಗಿ ಕುಳಿತಳು. ಶವವನ್ನು ಹೊತ್ತು ಸಾಗಿಸಿದರು.ಆಮೇಲೆ ಸ್ನಾನ ಮುಗಿಸಿ ಅಂಗಳಕ್ಕೆ ಬಂದ ಆಕೆ ಸಹಜವಾಗಿ ತಲೆ ಬಾಚಿಕೊಂಡು ಹೂ ಮುಡಿದಳು. ಬೀದಿಯ ಜನ ಆಕೆ ಈಗ
ಅಳಬಹುದೆಂದು ಹಾಕಿದ್ದ ಲೆಕ್ಕಾಚಾರವೂ ಅಲ್ಲಿ ಜರುಗಲಿಲ್ಲ. ಮನಸ್ಸನ್ನು ಹೀಗೆ ಗಟ್ಟಿಕಲ್ಲು ಮಾಡಿಕೊಂಡ ಈಕೆ ಮೊದಲು ಈ ತರಹ ಇರಲಿಲ್ಲ ಎಂದು ಕೆಲವರು ವಿವರಿಸಿದರು. ಜೀವನದ ಕೆಲ ಕಹಿ ಘಟನೆಗಳನ್ನು ಮರೆತು ಮುನ್ನಡೆವ ಸ್ವಭಾವ ಹೆಚ್ಚಿನವರಲ್ಲಿ ಇರಬಹುದು. ತೀವ್ರ ಅಘಾತ, ವಿವರಿಸಲಾಗದ ಅವಮಾನ, ಮಾನಸಿಕ ಹಿಂಸೆ ಅನುಭವಿಸಿದ ಮನುಷ್ಯನ ಒಳಗಿನ ಗಾಯದ ಗಾಢತೆ ಹೀಗೆ ಕಠೋರವಾಗಿಸಬಹುದೇನೋ? ಹೊರಗಿನಿಂದ ನಿಂತು ನೋಡುವ ಯಾರಿಗೂ ಒಳಗಿನ ಮರ್ಮ ಏನೆಂದು ತಿಳಿಯುವುದೇ ಇಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.