ADVERTISEMENT

ನುಡಿ ಬೆಳಗು: ನೀನು ಅನಿವಾರ್ಯವಲ್ಲ

ಪ್ರೊ. ಎಂ. ಕೃಷ್ಣೇಗೌಡ
Published 16 ಮೇ 2024, 23:17 IST
Last Updated 16 ಮೇ 2024, 23:17 IST
<div class="paragraphs"><p>ನುಡಿ ಬೆಳಗು</p></div>

ನುಡಿ ಬೆಳಗು

   

ಆಕೆ ಒಂದು ದೊಡ್ಡ ಕಂಪೆನಿಯಲ್ಲಿ ದೊಡ್ಡ ಜವಾಬ್ದಾರಿ ಸ್ಥಾನದಲ್ಲಿದ್ದಳು. ಭಾರಿ ಸಂಬಳ. ವರ್ಷದ ಸಂಬಳ ಕೋಟಿಗಳಲ್ಲಿತ್ತು. ಅವಳ ಸಾಮರ್ಥ್ಯ ಕೂಡ ಹಾಗೇ ಇತ್ತು ಅನ್ನಿ. ಅಷ್ಟಲ್ಲದೆ ಅಷ್ಟೊಂದು ಸಂಬಳ ಯಾರು ಕೊಡುತ್ತಾರೆ? ಇರಲಿ. ಕತೆ ಕೇಳಿ.
ಅದೊಂದು ದಿನ‌ ಆಕೆ ಆ ಕಂಪೆನಿಯ ಸಿ.ಇ.ಒ ಅನ್ನು ಭೇಟಿಯಾಗಿ ತಾನು ಕಂಪೆನಿಯ ಹುದ್ದೆಗೆ ರಾಜೀನಾಮೆ ಕೊಡಲು ಇಚ್ಛಿಸುತ್ತೇನೆ ಎಂದು ಹೇಳಿ ರಾಜೀನಾಮೆ ಪತ್ರವನ್ನು ಸಿ.ಇ.ಒ ಮೇಜಿನ ಮೇಲಿಟ್ಟಳು.

ಸಿ.ಇ.ಒ ಕೇಳಿದ: ‘ನೀನು ಇಷ್ಟು ಒಳ್ಳೆಯ ಹುದ್ದೆ, ಸಂಬಳ ಇರುವ ಕೆಲಸಕ್ಕೆ ರಾಜೀನಾಮೆ ಕೊಡುತ್ತಿರುವುದೇಕೆ?’

ADVERTISEMENT

ಆಕೆ: ‘ಸಾರಿ, ಅದನ್ನು ನಾನು ‌ನಿಮಗೆ ಹೇಳಬೇಕಾಗಿಲ್ಲ. ನನ್ನ ರಾಜೀನಾಮೆ ಸ್ವೀಕರಿಸಿ’.

ಸಿ.ಇ.ಒ: ‘ಆಗಲಿ. ನಿನಗೆ ನಾನು ಒಂದು ಸೌಜನ್ಯದ ಆಫರ್ ಕೊಡುತ್ತೇನೆ. ಅದೇನೆಂದರೆ, ಇನ್ನೊಂದು ತಿಂಗಳು ನಮ್ಮ ಕಂಪನಿಯ ಖರ್ಚಿನಲ್ಲಿ ನೀನು ಒಂದು ವರ್ಲ್ಡ್ ಟೂರ್ ಮಾಡಿಕೊಂಡು ಬಾ. ನಿನಗೆ ತೃಪ್ತಿಯಾಗುವಷ್ಟು ಹಣ ಖರ್ಚು ಮಾಡು. ಅದೆಲ್ಲವನ್ನೂ ಕಂಪೆನಿಯೇ ನೋಡಿಕೊಳ್ಳುತ್ತದೆ. ನೀನು ಬಂದ ಮೇಲೆಯೂ ನಿನಗೆ ರಾಜೀನಾಮೆ ಕೊಡಬೇಕು ಅನ್ನಿಸಿದರೆ ಕೊಡು. ನಾನು ಸ್ವೀಕರಿಸುತ್ತೇನೆ’.

ಇದು ವಿಚಿತ್ರ ಅನ್ನಿಸಿತು ಆಕೆಗೆ. ಆಗಲಿ, ಏಕೆ ಬೇಡ, ಎಂದು ಒಪ್ಪಿಕೊಂಡಳು.

ತಿಂಗಳು ಕಳೆದ ಮೇಲೆ ಆಕೆ ವರ್ಲ್ಡ್ ಟೂರ್ ಮುಗಿಸಿ ವಾಪಸಾದಳು. ಬಂದವಳೇ ಮತ್ತೆ ಸಿ.ಇ.ಒ ಅನ್ನು ಭೇಟಿಯಾದಳು.

ಸಿ.ಇ.ಒ ಕೇಳಿದ: ‘ಈಗಲೂ ನಿನಗೆ ರಾಜೀನಾಮೆ ಕೊಡಬೇಕು ಅನ್ನಿಸುತ್ತಿದೆಯಾ?’

ಆಕೆ: ‘ಶೂರ್, ನನ್ನ ನಿರ್ಧಾರದಲ್ಲಿ ಬದಲಾವಣೆಯಿಲ್ಲ. ನನ್ನ ರಾಜೀನಾಮೆಯನ್ನು ಸ್ವೀಕರಿಸಿ.

ಸಿ.ಇ.ಒ: ‘ಆಗಲಿ. ನಿನ್ನ ರಾಜೀನಾಮೆಯನ್ನು ಸ್ವೀಕರಿಸಿದ್ದೇನೆ. ನೀನಿನ್ನು ಹೋಗಬಹುದು. ಆಲ್ ದ ಬೆಸ್ಟ್’.

ಆಕೆ ಈಗ ಕೇಳಿದಳು: ‘ಅದು ಸರಿ. ಆದರೆ ಈ ಕೆಲಸವನ್ನು ಒಂದು ತಿಂಗಳ ಮೊದಲೇ ಮಾಡಬಹುದಿತ್ತಲ್ಲ? ಅದಕ್ಕೆ ನನಗಾಗಿ ಇಷ್ಟು ಖರ್ಚು ಮಾಡುವುದು ತಪ್ಪುತ್ತಿತ್ತಲ್ಲ?’

ಸಿ.ಇ.ಓ ಹೇಳಿದ: ‘ಸಾರಿ, ಅದನ್ನು ನಾನು ನಿನಗೆ ಹೇಳಬೇಕಾಗಿಲ್ಲ. ಆದರೂ ಹೇಳುತ್ತೇನೆ ಕೇಳು. ಈ ಒಂದು ತಿಂಗಳು ನೀನಿಲ್ಲದೆಯೂ ನಮ್ಮ ಕಂಪೆನಿಯ ಕೆಲಸ ಸುಸೂತ್ರವಾಗಿ ನಡೆಯುತ್ತದೆಯೇ ಅಂತ ನೋಡಿದೆ. ನಿನ್ನ ಟೀಮಿನ ಮಂದಿಯನ್ನು ಹುರಿದುಂಬಿಸಿದೆ. ಅವರೆಲ್ಲಾ ಅದ್ಭುತವಾಗಿ ಆ ಕೆಲಸವನ್ನು ನಿಭಾಯಿಸಿದರು. ಹಾಗಾಗಿ ನೀನು ನನ್ನ ಕಂಪೆನಿಗೆ ಅನಿವಾರ್ಯವಲ್ಲ. ನೀನು ಅನಿವಾರ್ಯವಾಗಿದ್ದರೆ ನಿನ್ನ ಸಂಬಳವನ್ನು ಎರಡು ಪಟ್ಟು ಏರಿಸಿ ನಿನ್ನ ಮನವೊಲಿಸುತ್ತಿದ್ದೆ. ಗೊತ್ತಾಯಿತಲ್ಲ, ನೀನು ಅನಿವಾರ್ಯ ಅನ್ನಿಸಿದರೆ ಮಾತ್ರ ನಿನ್ನ ಕಿಮ್ಮತ್ತು. ಇನ್ನು ನೀನು ಹೊರಡಬಹುದು’.

ಸಿ.ಇ.ಒ ಮಾತಿನರ್ಥವನ್ನು ಇನ್ನೂ ಬಿಡಿಸಿ ಹೇಳಬೇಕೆ? ಇನ್ನು ಮುಂದೆ ನಮ್ಮ ಕಂಪೆನಿಗೆ, ಕಚೇರಿಗೆ, ಕಾರ್ಖಾನೆಗೆ, ಇಲಾಖೆಗೆ ನಾವು ಅನಿವಾರ್ಯ ಅನ್ನಿಸುವಂಥ ಪ್ರತಿಭೆ, ಜ್ಞಾನ, ಶ್ರದ್ಧೆ, ಚಾತುರ್ಯ ಬೆಳೆಸಿಕೊಳ್ಳದಿದ್ದರೆ ನಮಗೆ ಉಳಿಗಾಲವಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.