ADVERTISEMENT

ವಿಧವೆಯರದ್ದೇ ಒಂದು ತಲೆಮಾರು

ಅಫ್ಗಾನಿಸ್ತಾನ: ಅನಾಥರಾದ ಮಕ್ಕಳು, ಸಾಯುತ್ತಿರುವ ಯುವಕರು

ಮಜೀಬ್‌ ಮಾಷಲ್‌ ಫಾತಿಮಾ ಫೈಜಿ
Published 23 ಡಿಸೆಂಬರ್ 2018, 19:52 IST
Last Updated 23 ಡಿಸೆಂಬರ್ 2018, 19:52 IST
   

ಕಾಬೂಲ್‌ ಮೇಲೆ ಸಂಜೆ ಕವಿಯುತ್ತಿದ್ದಂತೆಯೇ ಕೆಲಸ ಮುಗಿಸಿಕೊಂಡು ತಂದೆ ಇನ್ನೇನು ಬಂದುಬಿಡುತ್ತಾರೆ ಎಂದು ಮೂರು ವರ್ಷದ ಬೆನ್ಯಾಮಿನ್‍ ಕಾತರಗೊಳ್ಳುತ್ತಾನೆ. ಆದರೆ, ಆತನ ತಂದೆ ಸಬಾವೂನ್‍ ಕಾಕರ್ ಮತ್ತು ಇತರ ಎಂಟು ಮಂದಿ ಪತ್ರಕರ್ತರು ಬಾಂಬ್‍ ದಾಳಿಗೆ ಬಲಿಯಾಗಿ ತಿಂಗಳುಗಳೇ ಕಳೆದಿವೆ. ‘ಅಪ್ಪ ಯಾವಾಗ ಬರುತ್ತಾರೆ’ ಎಂದು ಅಳುತ್ತಲೇ ತಾಯಿ ಮಾಷಲ್‍ ಸಾದಾತ್‍ ಕಾಕರ್‌ಳನ್ನು ಬೆನ್ಯಾಮಿನ್‍ ಕಾಡತೊಡಗುತ್ತಾನೆ.

ಮೂರು ವರ್ಷದ ಮಗುವಿಗೆ ಮರಣವನ್ನು ವಿವರಿ ಸುವುದು ಹೇಗೆ? ಕಂಕುಳಲ್ಲಿ ಇನ್ನೊಂದು ಮಗು ಸರ್ಫ್ರಾಜ್‍ನನ್ನು ಇರಿಸಿಕೊಂಡು ಬೆನ್ಯಾಮಿನ್‍ಗೆ ಆಟಿಕೆ ಕೊಡುತ್ತಾ ಆತನ ಗಮನ ಬೇರೆಡೆ ತಿರುಗಿಸಲು ಮಾಷಲ್‌ ಯತ್ನಿಸಿದರು. ಬೆನ್ಯಾಮಿನ್‍ ಅಳು ನಿಲ್ಲಿಸಲಿಲ್ಲ. ಮಾಷಲ್‍ ಆತನನ್ನು ಕರೆದುಕೊಂಡು ಬಾಲ್ಕನಿಗೆ ಹೋದರು. ಆಕಾಶದ ಕಡೆಗೆ ಕೈತೋರಿ ಅಲ್ಲಿದ್ದ ಅತ್ಯಂತ ಪ್ರಕಾಶಮಾನ ನಕ್ಷತ್ರವನ್ನು ತೋರಿಸುತ್ತಾ ‘ಅಪ್ಪ ಅಲ್ಲಿದ್ದಾರೆ’ ಎಂದರು.

ಅಫ್ಗಾನಿಸ್ತಾನದಲ್ಲಿನ ಯುದ್ಧವು ಯುವ ಜನರನ್ನು ಕೊಲ್ಲುತ್ತಿದೆ. ಈ ನಷ್ಟದ ಜತೆಗೆ ತಲೆಮಾರೊಂದು ಉಳಿಯುತ್ತದೆ. ಬೆನ್ಯಾಮಿನ್‍ನಂತಹ ಮಕ್ಕಳಿಗೆ ತಂದೆಯ ಅಸ್ಪಷ್ಟ ನೆನಪಷ್ಟೇ ಬಾಕಿ, ಈ ನೆನಪು ಮಸುಕಾಗುತ್ತಲೇ ತಂದೆಯ ಸಾವು ಅವರ ಬದುಕನ್ನು ರೂಪಿಸುತ್ತಾ ಹೋಗುತ್ತದೆ. ಸರ್ಫ್ರಾಜ್‍ನಂತಹ ಮಕ್ಕಳಿಗೆ ಅಪ್ಪನ ಬಗ್ಗೆ ಇರುವ ನೆನಪು ಇನ್ನೂ ಕಡಿಮೆ.

ADVERTISEMENT

2001ರಿಂದಲೇ ನಡೆಯುತ್ತಿರುವ ಯುದ್ಧವು ಸಾವಿರಾರು ವಿಧವೆಯರನ್ನು ಸೃಷ್ಟಿಸಿದೆ. ಮಾಷಲ್‍ರಂತೆಯೇ ಇವರೆಲ್ಲರೂ ಆರ್ಥಿಕ ಅವಕಾಶಗಳ ತೀವ್ರ ಕೊರತೆ ಇರುವ ಮತ್ತು ಯುದ್ಧದಿಂದಾಗಿ ದಿನಕ್ಕೆ 50 ಜನ ಸಾಯುವ ದೇಶದಲ್ಲಿ ಬದುಕು ಕಟ್ಟಿಕೊಳ್ಳಬೇಕಾಗಿದೆ.

ಅದಕ್ಕಿಂತಲೂ ಹೆಚ್ಚಾಗಿ, ಸಮಾಜ ತಮ್ಮನ್ನು ಸೊತ್ತಿನಂತೆ ನೋಡುತ್ತದೆ ಎಂಬ ನೋವಿನ ಸತ್ಯವನ್ನೂ ಅವರು ಅರಗಿಸಿಕೊಳ್ಳಬೇಕಾಗುತ್ತದೆ. ಪ್ರತಿ ಹೊಸ ವಿಧವೆಯೂ ತನ್ನ ಗಂಡನ ಕುಟುಂಬವನ್ನೇ ಸಂಪೂರ್ಣವಾಗಿ ಆಶ್ರಯಿಸಬೇಕಾಗುತ್ತದೆ. ಕುಟುಂಬದಲ್ಲಿರುವಗಂಡನ ಸಹೋದರ ಅಥವಾ ಮತ್ತೊಬ್ಬ ಸಂಬಂಧಿಯನ್ನು ಮದುವೆ ಆಗುವಂತೆ ಕುಟುಂಬವು ಒತ್ತಡ ಹೇರುವ ಸಾಧ್ಯತೆ ಬಹಳ ಹೆಚ್ಚು. ಕೆಲವರು ಇದಕ್ಕೆ ಪ್ರತಿರೋಧ ತೋರಿದರೂ ಮಹಿಳೆಯರಿಗೆ ಈ ವಿಚಾರದಲ್ಲಿ ಹೆಚ್ಚು ಹೇಳುವ ಹಕ್ಕೇನೂ ಇಲ್ಲ.

ಈ ವರ್ಷ ಯುದ್ಧ ಇನ್ನಷ್ಟು ತೀವ್ರಗೊಂಡಿದೆ. ವೈಧವ್ಯದ ಕ್ರೌರ್ಯಕ್ಕೆ ಒಳಗಾದ ಹಲವು ಯುವತಿಯರನ್ನು ನಾವು ಗಮನಿಸಿದೆವು.

ರಾತ್ರಿ ಬೆಳಗಾಗುವುದರಲ್ಲಿ ಅವರ ಜೀವನ ಹೋರಾಟವಾಗಿ ಪರಿವರ್ತನೆಯಾಗಿದೆ. ಕೆಲವರಿಗಂತೂ ದುಃಖಿಸುವುದಕ್ಕೂ ಅವಕಾಶ ಸಿಕ್ಕಿಲ್ಲ. ಮಾಷಲ್‍ರಂತಹ ಕೆಲವರಿಗೆ ಗಂಡನ ಸಾವಿನ ನೋವಿನ ಜತೆಗೆ ಮಗುವಿಗೆ ಜನ್ಮ ನೀಡುವ ನೋವೂ ಸೇರಿಕೊಂಡಿದೆ.

ರಾಹಿಲಾ ಶಮ್ಸ್ 22 ವರ್ಷ ವಯಸ್ಸಿಗೇ ವಿಧವೆಯಾದವರು. ಗಂಡ ಸಾಯುವ ಹೊತ್ತಿಗೆ ಆಕೆಯ ಎರಡನೇ ಮಗುವಿಗೆ ಗರ್ಭದಲ್ಲಿ ಆರು ತಿಂಗಳಾಗಿತ್ತು. ಜಿಲ್ಲಾ ಗವರ್ನರ್ ಆಗಿದ್ದ ಆಕೆಯ ಗಂಡ ಅಲಿ ದೋಸ್ತ್ ಶಮ್ಸ್ ಏಪ್ರಿಲ್‍ನಲ್ಲಿ ತಾಲಿಬಾನ್‍ ದಾಳಿಗೆ ಬಲಿಯಾದರು.

‘ಪ್ರಿಯತಮ, ಗೆಳೆಯ, ಗಂಡ ಎಲ್ಲವೂ ಆಗಿದ್ದ ನನ್ನ ಎರಡು ಹೆಣ್ಣು ಮಕ್ಕಳ ತಂದೆಯನ್ನು ನಾನು ಕಳೆದುಕೊಂಡಿದ್ದೇನೆ. ಗಟ್ಟಿಯಾಗಿರು ಎಂದು ಎಲ್ಲರೂ ಹೇಳುತ್ತಾರೆ. ಆದರೆ ಹೇಗೆಂದು ಯಾರೂ ಹೇಳುತ್ತಿಲ್ಲ’ ಎಂದು ರಾಹಿಲಾ ನೋವು ತೋಡಿಕೊಳ್ಳುತ್ತಾರೆ.

ಗಂಡಂದಿರನ್ನು ಕಳೆದುಕೊಂಡ ತಿಂಗಳುಗಳ ನಂತರ ಈ ಯುವ ವಿಧವೆಯರು ತಮ್ಮ ದುಃಖ, ಮಕ್ಕಳು ಎದುರಿಸುತ್ತಿರುವ ಗೊಂದಲದ ಜತೆಗೆ ಗಂಡನ ಕುಟುಂಬದ ಜತೆಗೆ ಇರಬೇಕಾದ ಅನಿವಾರ್ಯ ಸಂಕಷ್ಟವನ್ನೂ ಎದುರಿಸಬೇಕಾಗಿದೆ.

ಗಂಡನ ಸಾವಿನ ಬಳಿಕ ಹೆಲ್ಮಂಡ್‍ನಲ್ಲಿ ತಮ್ಮ ಜತೆಗೆ ಸ್ವಲ್ಪ ಸಮಯ ಬಂದು ಇರುವಂತೆ ಮಾಷಲ್‍ಗೆ ಅವರ ಗಂಡನ ಮನೆಯವರು ಹೇಳಿದರು. ಆದರೆ, ಮಾಷಲ್‍ ಅದಕ್ಕೆ ಒಪ್ಪಲಿಲ್ಲ. ಅವರ ಒತ್ತಾಯ ಇನ್ನಷ್ಟು ತೀವ್ರಗೊಂಡಿತು. ಇಬ್ಬರು ಮಕ್ಕಳ ಜತೆಗೆ ಯುವತಿಯೊಬ್ಬಳು ಕಾಬೂಲ್‍ನಲ್ಲಿ ಇರುವುದು ಸರಿಯಲ್ಲ ಎಂದು ಅವರು ವಾದಿಸತೊಡಗಿದರು ಎಂದು ಮಾಷಲ್‍ ಹೇಳುತ್ತಾರೆ.

‘ವಿದ್ಯಾವಂತೆ ಆಗಿರುವುದರಿಂದ ನನ್ನ ಜೀವನವನ್ನು ನಾನು ನೋಡಿಕೊಳ್ಳಬಲ್ಲೆ’ ಎಂದು ಗಂಡನ ಮನೆಯವರ ಬಾಯಿ ಮುಚ್ಚಿಸುವುದು ಮಾಷಲ್‍ಗೆ ಸಾಧ್ಯವಾಯಿತು.

ಆಕೆ ಕೆಲಸಕ್ಕೆ ಹೋದರು. ಆದರೆ, ಅಲ್ಲಿಂದ ಹೊರಹೋಗುವ ಯೋಚನೆ ಸದಾ ಇತ್ತು. ಏಕಾಂಗಿ ಯುವತಿಯಾಗಿ ನಿತ್ಯವೂ ಎದುರಿಸಬೇಕಾದ ಕಷ್ಟಗಳು ಅಫ್ಗಾನಿಸ್ತಾನ ಬಿಟ್ಟು ಹೋಗುವ ನಿರ್ಧಾರ ಗಟ್ಟಿಗೊಳ್ಳುವಂತೆ ಮಾಡಿತು.

ಪುರುಷ ಗೆಳೆಯರು ಮತ್ತು ಸಹೋದ್ಯೋಗಿಗಳಿಂದ ಅನಪೇಕ್ಷಿತ ಸಂದೇಶಗಳು ಬರಲಾರಂಭಿಸಿದವು. ಸರ್ಕಾರದ ಕಚೇರಿಯಲ್ಲಿ ಏಕಾಂಗಿಯಾಗಿ ಕೆಲಸ ಮಾಡುವಾಗ ತಾನೊಂದು ಬಲಿಪಶು ಎಂಬ ಭಾವ ನಿಚ್ಚಳವಾಗತೊಡಗಿತು. ಪುರುಷ ಗೆಳೆಯರು ಅಥವಾ ಕುಟುಂಬದ ಸದಸ್ಯರ ನೆರವು ಯಾಚಿಸಿದರೆ ಈತನಕ ತಾನು ರೂಪಿಸಿದ ದಿಟ್ಟತನ ಕುಸಿದು ಹೋಗುವ ಭಯ ಕಾಡಿತು.

ಕೆಲಸಕ್ಕೆ ಹೋಗುತ್ತಾ ಸರ್ಫ್ರಾಜ್‌ ಮತ್ತು ಬೆನ್ಯಾಮಿನ್‌ನನ್ನು ಸಾಕುವುದು ಮಾಷಲ್‌ಗೆ ಸುಲಭವಿರಲಿಲ್ಲ. ಗಂಡ ಸತ್ತ ಮೇಲೆ ವಿಧವೆಯು ಗಂಡನ ಮನೆಯಲ್ಲಿ ಇರಬೇಕು ಎಂಬುದನ್ನು ಅಫ್ಗಾನಿಸ್ತಾನದ ಸಮಾಜ ನಿರೀಕ್ಷಿಸುತ್ತದೆ. ಹಾಗಾಗಿ ಮಾಷಲ್‌ಗೆ ಇದೊಂದು ಸವಾಲೇ ಆಗಿತ್ತು.

ಇತರ ಮಹಿಳೆಯರ ಭವಿಷ್ಯ ಮಾಷಲ್‌ ಅವರಂತೆ ಅಲ್ಲ, ಅವರ ಮುಂದೆ ಇರುವುದು ಕತ್ತಲೆ ಮಾತ್ರ. ಭವಿಷ್ಯವನ್ನು ರೂಪಿಸಿಕೊಳ್ಳುವಲ್ಲಿ ಅವರ ಮುಂದೆ ಇರುವ ಆಯ್ಕೆಗಳು ಸೀಮಿತ. ರಾಹಿಲಾಗೆ ಕೆಲಸ ಇಲ್ಲ, ಶಿಕ್ಷಣ ಇನ್ನೂ ಪೂರ್ಣಗೊಂಡಿಲ್ಲ. ಹಾಗಾಗಿ ಗಂಡನ ಮನೆಯಲ್ಲಿ ಇರುವುದು ಅವರಿಗೆ ಅನಿವಾರ್ಯ. ಶಮ್ಸ್‌ ಬದುಕಿದ್ದಾಗ ಜಿಲ್ಲಾ ಗವರ್ನರ್‌ ಆಗಿದ್ದ ಅವರಿಗೆ ತಿಂಗಳಿಗೆ 900 ಡಾಲರ್‌ (ಸುಮಾರು ₹62,000) ವೇತನ ಇತ್ತು. ಅವರ ಸಾವಿನ ಬಳಿಕ ಒಂದಷ್ಟು ಹಣ ಕುಟುಂಬಕ್ಕೆ ದೊರೆಯುತ್ತದೆ. ಆದರೆ ಅದು ಎಷ್ಟು ಎಂಬುದೇ ರಾಹಿಲಾಗೆ ಗೊತ್ತಿಲ್ಲ. ಗಂಡನ ದೊಡ್ಡ ಅಣ್ಣ ಈ ಹಣ ತೆಗೆದುಕೊಳ್ಳುತ್ತಿದ್ದಾರೆ.

‘ನಾನು ಗಾಢ ನೋವಿನಲ್ಲಿದ್ದೆ. ಏಕಾಂಗಿಯಾಗಿಬಿಟ್ಟೆ ಎಂಬುದು ಆ ನೋವಿನಲ್ಲಿ ಹೆಚ್ಚು ದಟ್ಟವಾಗಿದ್ದ ಭಾವ. ಹೆಣ್ಣಾಗಿದ್ದಕ್ಕೆ, 22 ವರ್ಷಕ್ಕೇ ವಿಧವೆಯಾಗಿದ್ದಕ್ಕೆ, ಇಬ್ಬರು ಹೆಣ್ಣು ಮಕ್ಕಳ ತಾಯಿಯಾಗಿದ್ದಕ್ಕೆ ನಾನು ಸಾಕಷ್ಟು ಅತ್ತೆ. ಭವಿಷ್ಯದ ಬಗ್ಗೆ, ಶಮ್ಸ್‌ ಬಗ್ಗೆ ಮತ್ತು ಏಕಾಂಗಿತನದ ಬಗ್ಗೆ ಯೋಚಿಸಿದೆ. ಏಕಾಂಗಿತನವೇ ಈ ಜಗತ್ತಿನ ಅತ್ಯಂತ ದೊಡ್ಡ ನೋವು ಎಂಬುದೇ ನನ್ನ ಭಾವನೆ’ ಎಂದು ರಾಹಿಲಾ ಹೇಳುತ್ತಾರೆ.

ರಾಹಿಲಾ ಅವರ ಮುಂದೆ ಇತ್ತೀಚೆಗೆ ಭರವಸೆಯ ಕಿರಣವೊಂದು ಮಿಂಚಿ ಮರೆಯಾಯಿತು. ಒಂದು ಕೆಲಸ ಹುಡುಕಿಕೊಳ್ಳಲು ನೆರವಾಗುವುದಾಗಿ ಸಂಬಂಧಿಕರೊಬ್ಬರು ಹೇಳಿದ್ದರು. ಇದು ಅವಲಂಬನೆಯ ಸಂಕೋಲೆಯಿಂದ ಬಿಡಿಸಿಕೊಂಡು ಸ್ವತಂತ್ರವಾಗಿ ಭವಿಷ್ಯ ರೂಪಿಸಿಕೊಳ್ಳುವುದರೆಡೆಗೆ ಸಣ್ಣದೊಂದು ಹೆಜ್ಜೆಯಾಗಿತ್ತು. ಆದರೆ, ಕೆಲವೇ ದಿನಗಳ ಬಳಿಕ ಆ ಭರವಸೆ ಕೊಟ್ಟ ಸಂಬಂಧಿಕ ಕಾಬೂಲ್‌ನ ಹೊರಗೆ ನಡೆದ ಬಾಂಬ್‌ ಸ್ಫೋಟದಲ್ಲಿ ಮೃತರಾದರು.

‘ನಾನು ಈ ದೇಶ ಬಿಟ್ಟು ಶಾಂತಿ ಇರುವ ಎಲ್ಲಿಗಾದರೂ ಹೋಗಬೇಕು. ಯಾರೂ ಹತ್ಯೆಯಾಗದ ಮತ್ತು ಯಾರ ಜೀವನವೂ ನಷ್ಟವಾಗದ ಜಾಗಕ್ಕೆ ಹೋಗಬೇಕು’ ಎಂದು ರಾಹಿಲಾ ಹೇಳುತ್ತಾರೆ.

ದಿ ನ್ಯೂಯಾರ್ಕ್‌ ಟೈಮ್ಸ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.