ADVERTISEMENT

ವಿಶ್ಲೇಷಣೆ | ಕನ್ನಡದ ನಾಳೆಗಳನ್ನು ರೂಪಿಸುವತ್ತ...

ಅನುವಾದ ಕ್ಷೇತ್ರದಲ್ಲಿ ಅವಕಾಶಗಳು ತೆರೆದುಕೊಂಡಿವೆ; ಬಳಸಿಕೊಳ್ಳಲು ಆಗಿಲ್ಲ ಸಿದ್ಧತೆ

​ಡಾ.ಟಿ.ಎನ್.ವಾಸುದೇವಮೂರ್ತಿ
Published 3 ನವೆಂಬರ್ 2023, 19:11 IST
Last Updated 3 ನವೆಂಬರ್ 2023, 19:11 IST
...
...   

ಇಹದ ಪಂಚಭೂತಮಯವಾದ ಜಗತ್ತಿಗೆ ಸಂಬಂಧಿಸಿರದ ಅಲೌಕಿಕ ತತ್ವವನ್ನು ಫೋಟೊದಲ್ಲಿ ಒಂದು ಪ್ರತಿಕೃತಿಯ ರೂಪದಲ್ಲಿ ಪ್ರತಿಷ್ಠಾಪಿಸಿ ಹಾರ ಹಾಕಿ ಪೂಜಿಸುವುದು ನಮ್ಮ ಸಾಂಪ್ರದಾಯಿಕ ಪದ್ಧತಿಯಾಗಿದೆ. ಆದರೆ ಒಂದು ಭಾಷೆ ಇಹದ ಜಗತ್ತಿಗೆ ಸಂಬಂಧಿಸಿರದ ಅಲೌಕಿಕ ತತ್ವವಲ್ಲ. ಅದು ನಮ್ಮ ನಶ್ವರ ಸಂಬಂಧಗಳನ್ನು ತಾತ್ಕಾಲಿಕವಾಗಿಯಾದರೂ ಅರ್ಥಪೂರ್ಣವಾಗಿಸುವ ಶಬ್ದಮಯ ಪ್ರಪಂಚವಾಗಿದೆ.

ಕವಿ ಗೋಪಾಲಕೃಷ್ಣ ಅಡಿಗರು ‘ಕನ್ನಡವೆಂದರೆ ತಾಯಿಯೇ ದೇವಿಯೇ?/ ನಾನು ನೀನು, ಅವರು/ ಜನಮನದೊಳಗುದಿ ತುಡಿತ ಮಿಡಿತಗಳ/ ಪ್ರತಿಕೃತಿ ಗತಿ ನೂರಾರು’ (ಬತ್ತಲಾರದ ಗಂಗೆ) ಎಂದು ಹೇಳುತ್ತಾರೆ. ಇಂತಹ ಕನ್ನಡವನ್ನು ನಮ್ಮ ಒಳಗುದಿ, ತುಡಿತ, ಮಿಡಿತಗಳಿಗಾಗಿ ಬಳಸದೇ ಕನ್ನಡ ನಮ್ಮ ಇಹದ ಜಗತ್ತಿನಲ್ಲಿ ಜೀವಂತವಾಗಿ ಬಳಕೆಯಲ್ಲಿಲ್ಲ ಎಂಬ ರೀತಿಯಲ್ಲಿ ಫೋಟೊದ ಚೌಕಟ್ಟಿನೊಳಗೆ ಪ್ರತಿಷ್ಠಾಪಿಸಿ ಹಾರ ಹಾಕಿ ಪೂಜಿಸುತ್ತಿದ್ದೇವೆ.

ನಮ್ಮ ಶಾಲಾಕಾಲೇಜುಗಳಲ್ಲಿ, ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ, ಬ್ಯಾಂಕುಗಳಲ್ಲಿ, ದೈನಂದಿನ ವ್ಯಾಪಾರ ವಹಿವಾಟುಗಳಲ್ಲಿ ಕನ್ನಡದ ಬಳಕೆ ಕಡಿಮೆಯಾಗುತ್ತಿದೆ. ಪ್ರಾಥಮಿಕ ಶಿಕ್ಷಣದ ಹಂತದಲ್ಲಿ ಕನ್ನಡ ಮಾಧ್ಯಮವನ್ನು ಜಾರಿಗೆ ತರಲು ಸೂಕ್ತವಾದ ನೀತಿಯನ್ನು ರೂಪಿಸಲು ಇನ್ನೂ ನಮ್ಮ ರಾಜಕಾರಣಿಗಳಿಗೆ ಸಾಧ್ಯವಾಗಿಲ್ಲ. ಇನ್ನು ಉನ್ನತ ಶಿಕ್ಷಣದ ಹಂತದಲ್ಲಿ ಕಡ್ಡಾಯವಾಗಿ ಕನ್ನಡ ಕಲಿಸುವ ಉಪಕ್ರಮವನ್ನು ಹಿಂದಿನ ವರ್ಷ ಕೈಗೊಂಡಾಗ ನಮ್ಮವರೇ ಅದಕ್ಕೆ ಅಡ್ಡಗಾಲು ಹಾಕಿದರು. ಹಿಂದಿ, ಸಂಸ್ಕೃತದಂತಹ ಭಾಷೆಗಳ ಶಿಕ್ಷಕರ ಉದ್ಯೋಗದ ಸಂಖ್ಯೆ ಕಡಿಮೆಯಾಗುತ್ತದೆ ಎಂದು ಹೈಕೋರ್ಟಿನಲ್ಲಿ ವಾದಿಸಿದರು. ನಾವೇನು ಉದ್ಯೋಗಗಳನ್ನು ಸೃಷ್ಟಿಸುವುದಷ್ಟೇ ಶಿಕ್ಷಣ ವ್ಯವಸ್ಥೆಯ ಉದ್ದೇಶವೆಂದು ಭಾವಿಸಿದ್ದೇವೆಯೇ?

ADVERTISEMENT

ಸಂಶೋಧಕ ಎಂ. ಚಿದಾನಂದಮೂರ್ತಿ ಅವರು ‘ವಿಜ್ಞಾನ, ತಂತ್ರಜ್ಞಾನದಂತಹ ಜ್ಞಾನಕ್ಷೇತ್ರಗಳಿಗೆ ಪ್ರತಿಭಾವಂತರಷ್ಟೇ ಹೋಗುತ್ತಾರೆ, ಇನ್ನಾವ ಪ್ರತಿಭೆಯೂ ಇಲ್ಲದವರು, ಇನ್ನೆಲ್ಲಿಯೂ ಸಲ್ಲದ ಅಭ್ಯರ್ಥಿಗಳು ಕನ್ನಡ ಎಂ.ಎ. ಕಲಿಯಲು ಬರುತ್ತಿದ್ದಾರೆ’ ಎಂಬ ಮಾತನ್ನು ಆಗಾಗ ವಿಷಾದದಿಂದ ಹೇಳುತ್ತಿದ್ದರು. ಅವರ ಮಾತಿನಲ್ಲಿ ಸತ್ಯಾಂಶ ಇದೆಯಾದರೂ ಅದಕ್ಕೆ ಅಭ್ಯರ್ಥಿಗಳನ್ನು ದೂಷಿಸಲಾಗದು.

ನಮ್ಮ ಪ್ರಾಥಮಿಕ ಶಿಕ್ಷಣ ವ್ಯವಸ್ಥೆಯ ಗುಣಮಟ್ಟ ಕುಸಿದಿದೆ. ನಮ್ಮ ಶಾಲೆಗಳ ಬಹುತೇಕ ಗಣಿತ, ವಿಜ್ಞಾನ ಶಿಕ್ಷಕರು ತಮ್ಮ ವಿಷಯದ ಮೂಲಭೂತ ಜ್ಞಾನವನ್ನೂ ಹೊಂದಿರದ ಸ್ಥಿತಿಯಲ್ಲಿದ್ದಾರೆ. ಇಂತಹವರಿಂದ ಪ್ರಾಥಮಿಕ, ಪ್ರೌಢಶಾಲಾ ಹಂತದಲ್ಲಿ ಪಾಠ ಹೇಳಿಸಿಕೊಳ್ಳುವ ವಿದ್ಯಾರ್ಥಿಗಳಲ್ಲಿಯೂ ಸಹಜವಾಗಿಯೇ ಆ ವಿಷಯಗಳ ಮೂಲಭೂತ ಜ್ಞಾನ ಇರುವುದಿಲ್ಲ. ವಿದ್ಯಾರ್ಥಿಗಳು ಬಾಲ್ಯದಿಂದಲೂ ಪರಿಸರ ಭಾಷೆ ಅಥವಾ ಮಾತೃಭಾಷೆಯಾದ ಕನ್ನಡವನ್ನೇ ಅಚ್ಚುಕಟ್ಟಾಗಿ ಮತ್ತು ಸುಲಭವಾಗಿ ಕಲಿಯುವುದರಿಂದ ಸಹಜವಾಗಿಯೇ ಉನ್ನತ ಶಿಕ್ಷಣವನ್ನೂ ಕನ್ನಡದಲ್ಲೇ ಮುಂದುವರಿಸಲು ಒಲವು ತೋರಿಸುತ್ತಾರೆ. ಸಮಸ್ಯೆಯ ಮೂಲ ಇಲ್ಲಿದೆ ಎನಿಸುತ್ತದೆ.

ಗಣಿತದಲ್ಲೋ ಭೌತಶಾಸ್ತ್ರದಲ್ಲೋ ಅಥವಾ ರಸಾಯನಶಾಸ್ತ್ರದಲ್ಲೋ ವಿಶೇಷ ಪರಿಣತಿ ಹೊಂದಬಲ್ಲ ಸಾಮರ್ಥ್ಯವುಳ್ಳ ವಿದ್ಯಾರ್ಥಿಗೆ ಆ ವಿಷಯಗಳಿಗೆ ಸಂಬಂಧಿಸಿದಂತೆ ಸೂಕ್ತ ಬುನಾದಿ ಸಿಗದ ಕಾರಣ ಈ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದಾಗಿ ಅವರಿಗೂ ಹಾಗೆಯೇ ಅವರು ಆಯ್ಕೆ ಮಾಡಿಕೊಳ್ಳುವ ಕನ್ನಡದಂತಹ ಜ್ಞಾನಶಾಖೆಗೂ ಅನ್ಯಾಯವೇ ಆಗುತ್ತಿದೆ.

ಸುಮಾರು ನೂರಿಪ್ಪತ್ತು ವರ್ಷಗಳ ಹಿಂದೆ ಬಿ.ಎಂ.ಶ್ರೀಕಂಠಯ್ಯ ಅವರು ಕನ್ನಡದ ಶ್ರೀಮಂತಿಕೆಯನ್ನು ಕುರಿತು ‘ಬೆಳೆ ಏನೋ ಸಾಕಷ್ಟಿದೆ; ಆದರೆ ಕೊಯ್ಲು ಮಾಡಿಕೊಳ್ಳುವವರಿಲ್ಲ’ ಎಂದಿದ್ದರು. ಅವರು ಈ ಮಾತನ್ನು ಯಾವ ಸನ್ನಿವೇಶದಲ್ಲಿ ಹೇಳಿದ್ದರೋ ಆ ಸನ್ನಿವೇಶ ಇಂದಿಗೂ ಹಾಗೆಯೇ ಇದೆ. ಕನ್ನಡದ ಈಗಿನ ಸ್ಥಿತಿಯನ್ನು ಕಂಡು ನೊಂದ ನಮ್ಮ ಬುದ್ಧಿಜೀವಿಗಳು ‘ಕನ್ನಡ ಅನ್ನದ ಭಾಷೆಯಾಗಬೇಕು’ ಎಂಬ ಮಾತನ್ನು ಮತ್ತೆ ಮತ್ತೆ ಹೇಳುತ್ತಿರುತ್ತಾರೆ. ಜಾಗತೀಕರಣ ಪದಾರ್ಪಣೆಯಾದಂದೇ ಕನ್ನಡವು ಅನ್ನದ ಭಾಷೆಯಾಯಿತು. ಆದರೆ ಆ ಅನ್ನಭಾಗ್ಯವನ್ನು ಪಡೆದುಕೊಳ್ಳುವ ಅದೃಷ್ಟವಂತರಿಲ್ಲ ಎಂಬ ಪರಿಸ್ಥಿತಿ ಸದ್ಯಕ್ಕೆ ನಮ್ಮ ನಾಡಿನಲ್ಲಿ ನಿರ್ಮಾಣವಾಗಿದೆ.

ಜಾಗತೀಕರಣದ ನಂತರ ಅನುವಾದ ಕ್ಷೇತ್ರದಲ್ಲಿ ವಿಪುಲವಾದ ಅವಕಾಶಗಳು ತೆರೆದುಕೊಂಡಿವೆ. ಅಮೆರಿಕದ ಬ್ಯೂರೊ ಆಫ್‌ ಸ್ಟ್ಯಾಟಿಸ್ಟಿಕ್ಸ್‌ ವರದಿಯ ಪ್ರಕಾರ, 2029ರ ವೇಳೆಗೆ ಅನುವಾದಕರ ಬೇಡಿಕೆ ಶೇಕಡ 20ರಷ್ಟು ಹೆಚ್ಚಲಿದೆ. ಶಿಕ್ಷಣ, ಆಡಳಿತ, ಆರೋಗ್ಯ ಆರೈಕೆ, ಕೈಗಾರಿಕೆ, ವ್ಯಾಪಾರ, ಬ್ಯಾಂಕಿಂಗ್‌, ಕಾನೂನು, ಪತ್ರಿಕೋದ್ಯಮ, ಸಬ್‌ಟೈಟಲಿಂಗ್‌, ಮನರಂಜನೆಯಂತಹ ನೂರಾರು ಕ್ಷೇತ್ರಗಳು ತಮ್ಮ ಉಳಿವಿಗಾಗಿ, ಬೆಳವಣಿಗೆಗಾಗಿ ಸ್ಥಳೀಯ ಭಾಷೆಗೆ ಪ್ರಾಮುಖ್ಯ ನೀಡುತ್ತಿವೆ. ಸಿನಿಮಾ, ಧಾರಾವಾಹಿ, ಸಾಕ್ಷ್ಯಚಿತ್ರದಂತಹವುಗಳ ಡಬ್ಬಿಂಗ್‌ ಮೇಲಿನ ನಿರ್ಬಂಧ ತೆರವುಗೊಂಡ ಮೇಲೆ ಟಿ.ವಿ. ಮಾಧ್ಯಮ ಮತ್ತು ಮನರಂಜನಾ ಕ್ಷೇತ್ರದಲ್ಲಿ ಸ್ಥಳೀಯ ಭಾಷಿಕರಿಗೆ ದೊಡ್ಡಮಟ್ಟದಲ್ಲಿ ಉದ್ಯೋಗಾವಕಾಶ ತೆರೆದುಕೊಂಡಿದೆ. ಆದರೆ ಇದಕ್ಕೆಲ್ಲ ಸೂಕ್ತ ಅಭ್ಯರ್ಥಿಗಳನ್ನು ಸೃಷ್ಟಿಸುವಲ್ಲಿ ನಮ್ಮ ಶಿಕ್ಷಣ ವ್ಯವಸ್ಥೆ ಸಮರ್ಥವಾಗಿದೆಯೇ ಎಂದು ಅವಲೋಕಿಸಿದರೆ ನಿರಾಸೆಯಾಗುತ್ತದೆ.

ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದಂತಹ ಖಾಸಗಿ ವಿಶ್ವವಿದ್ಯಾಲಯಗಳು ಸ್ಥಳೀಯ ಮತ್ತು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಸಾವಿರ ಸಾವಿರ ಸಂಖ್ಯೆಯಲ್ಲಿ ಪುಸ್ತಕಗಳು ಮತ್ತು ಸಂಶೋಧನಾ ಲೇಖನಗಳನ್ನು ಕನ್ನಡಕ್ಕೆ ಅನುವಾದಿಸುತ್ತಿವೆ. ಪದವಿ ಪೂರೈಸಿದ ಪ್ರತಿಭಾವಂತ ಯುವ ಅಭ್ಯರ್ಥಿಗಳನ್ನು ಈ ಅನುವಾದ ಕಾರ್ಯಕ್ಕಾಗಿ ಪ್ರತಿವರ್ಷವೂ ಆರಿಸಿ ಅವರಿಗೆ ಅನುವಾದದ ತರಬೇತಿ ನೀಡುತ್ತಿವೆ. ನಾಡಿನ ಎಲ್ಲ ವಿಶ್ವವಿದ್ಯಾಲಯಗಳೂ ತಾವು ಬೋಧಿಸುವ ಪಠ್ಯವಿಷಯ ಮತ್ತು ಅಧ್ಯಯನ ಸಾಮಗ್ರಿಗಳನ್ನು ವಿದ್ಯಾರ್ಥಿಗಳಿಗೆ ಕನ್ನಡದಲ್ಲಿಯೂ ಒದಗಿಸಬೇಕೆಂದು ಮುಖ್ಯಮಂತ್ರಿ ಇತ್ತೀಚೆಗೆ ಆದೇಶ ಹೊರಡಿಸಿದ್ದರು. ಆದರೆ ಈ ಆದೇಶ ಎಷ್ಟರ ಮಟ್ಟಿಗೆ ಜಾರಿಯಾಗುತ್ತದೋ ನಮ್ಮ ವಿಶ್ವವಿದ್ಯಾಲಯಗಳು ಈ ಆದೇಶವನ್ನು ಎಷ್ಟರಮಟ್ಟಿಗೆ ಗಂಭೀರವಾಗಿ ತೆಗೆದುಕೊಳ್ಳುತ್ತವೋ ಕಾದು ನೋಡಬೇಕು.

ಇಂದು ಬೆಂಗಳೂರಿನಂತಹ ನಗರಗಳಲ್ಲಿ ಕನ್ನಡವನ್ನೇ ಕಲಿಯದೆ ದಶಕಗಳ ಕಾಲದಿಂದ ವಾಸಿಸುತ್ತಿರುವ ಲಕ್ಷಾಂತರ ಜನರಿದ್ದಾರೆ. ಕರ್ನಾಟಕದಲ್ಲಿ ಉದ್ಯೋಗಾವಕಾಶ ಬಯಸುವವರಿಗೆ ಕನಿಷ್ಠ ಮಟ್ಟದ ಸ್ಥಳೀಯ ಭಾಷಾಜ್ಞಾನ ಅತ್ಯಗತ್ಯವೆಂಬ ನಿಯಮಾವಳಿಯನ್ನು ರೂಪಿಸುವ ಸಾಧ್ಯಾಸಾಧ್ಯತೆಯ ಕುರಿತು ಕಾನೂನು ತಜ್ಞರು ಪರ್ಯಾಲೋಚಿಸಬೇಕಿದೆ. ಏಕೆಂದರೆ, ಜರ್ಮನಿ ದೇಶ ತನ್ನ ಸ್ಥಳೀಯತೆಯನ್ನು ಕಾಪಾಡಿಕೊಳ್ಳಲು ತನ್ನ ನೆಲದಲ್ಲಿ ಆ ಬಗೆಯ ನಿಯಮವನ್ನು ಜಾರಿಗೆ ತಂದಿದೆ. ಅಂತಹುದೇ ನಿಯಮ ನಮ್ಮಲ್ಲೂ ಜಾರಿಯಾದಲ್ಲಿ ಲಕ್ಷಾಂತರ ಜನ ಕನ್ನಡ ಕಲಿಯುತ್ತಾರೆ, ಸಾವಿರಾರು ಜನ ಶಿಕ್ಷಕರಿಗೆ ಉದ್ಯೋಗವಾಗುತ್ತದೆ, ಎಲ್ಲಕ್ಕಿಂತ ಮಿಗಿಲಾಗಿ ಕನ್ನಡದ ಪ್ರವರ್ಧನೆಯಾಗುತ್ತದೆ.

ಅದಕ್ಕಾಗಿ ವಿಶೇಷ ಸಿದ್ಧತೆಯ ಅಗತ್ಯವೇನೂ ಇಲ್ಲ. ಕನ್ನಡ ಸಾಹಿತ್ಯ ಪರಿಷತ್ತು ಈಗಾಗಲೇ ಕಾವ, ಜಾಣ, ರತ್ನ ಎಂಬ ವಿವಿಧ ಹಂತದ ಸರ್ಟಿಫಿಕೇಟ್‌ ಕೋರ್ಸುಗಳನ್ನು ನಡೆಸುತ್ತಿದೆ. ಈ ಕೋರ್ಸುಗಳನ್ನು ಬಳಸಿಕೊಂಡು ಅಂತಹ ಕಾನೂನನ್ನು ಸಮರ್ಥವಾಗಿ ಜಾರಿಗೆ ತಂದರೂ ಸಾಕು. ಈ ಬಗೆಯ ಉಪಕ್ರಮಕ್ಕೆ ನ್ಯಾಯಾಂಗದ ಅನುಮೋದನೆಯೂ ಸಿಗುತ್ತದೆ. ಹಿಂದಿನ ವರ್ಷ ಪದವಿ ತರಗತಿಗೆ ಕನ್ನಡವನ್ನು ಕಡ್ಡಾಯಗೊಳಿಸಿದ ಸರ್ಕಾರದ ಉಪಕ್ರಮವನ್ನು ಆಕ್ಷೇಪಿಸಿದ ಹೈಕೋರ್ಟ್‌, ‘ಉದ್ಯೋಗದಲ್ಲಿ ಬೇಕಾದರೆ ಕನ್ನಡ ಕಲಿಕೆಗೆ ಆಗ್ರಹಿಸಬಹುದು. ಈ ಸಂಬಂಧ ನೀವು ಷರತ್ತು ವಿಧಿಸಬಹುದು’ ಎಂದು ಸರ್ಕಾರಕ್ಕೆ ಸೂಚಿಸಿತ್ತು.

ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವು ಬಡವರು, ದಲಿತರು ಮತ್ತು ಹಿಂದುಳಿದ ಸಮುದಾಯಗಳ ಮೇಲೆ ತನಗೆ ವಿಶೇಷ ಕಾಳಜಿಯುಂಟೆಂಬ ಭರವಸೆ ನೀಡಿ ಮತದಾರರನ್ನು ಒಲಿಸಿಕೊಂಡಿತು. ಕನ್ನಡ ಪರವಾದ ಇಂತಹ ಕೆಲಸಗಳನ್ನು ಈಗ ಸಮರೋಪಾದಿಯಲ್ಲಿ ಕೈಗೊಳ್ಳಬೇಕಿದೆ. ಕನ್ನಡದ ಪ್ರವರ್ಧನೆಯಿಂದ ನೇರವಾದ, ಗರಿಷ್ಠವಾದ ಪ್ರಯೋಜನ ಸಿಗುವುದು ನಮ್ಮ ದಲಿತರಿಗೆ ಮತ್ತು ಹಿಂದುಳಿದ ವರ್ಗಗಳಿಗೆ ಎಂಬುದನ್ನು ಆಳುವ ಸರ್ಕಾರ ಮರೆಯಬಾರದು.

ಲೇಖಕ: ಸಹಪ್ರಾಧ್ಯಾಪಕ, ಆದಿಚುಂಚನಗಿರಿ ವಿಶ್ವವಿದ್ಯಾಲಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.