‘ಮೇಡಮ್, ನನ್ನ ಮಗುವಿಗೆ ಕಿವಿ ಕೇಳುತ್ತಿರಲಿಲ್ಲ. ಆದ ಕಾರಣ ಮಾತೂ ಹೊರಡುತ್ತಿರಲಿಲ್ಲ. ನನ್ನ ಮಗುವನ್ನು ನನ್ನಷ್ಟು ಸರಿಯಾಗಿ ಯಾರು ಅರ್ಥಮಾಡಿಕೊಂಡಾರು ಹೇಳಿ. ನನ್ನ ವಿಶೇಷ ಮಗುವಿಗೆ ತಾಳ್ಮೆಯಿಂದ, ಪ್ರೀತಿಯಿಂದ ನನ್ನ ವಿನಾ ಯಾರು ಹೇಳಿಕೊಡಬಲ್ಲರು. ದಿನ ದಿನವೂ ನನ್ನ ಮಗುವಿನ ಬೆಳವಣಿಗೆಯನ್ನು ನೋಡಿ, ಮಗುವಿನ ಭವಿಷ್ಯದ ಕನಸನ್ನು ಕಣ್ತುಂಬಿಕೊಳ್ಳುತ್ತಿದ್ದೇನೆ. ನನ್ನ ಮಗು ಮುಂದೆ ಡಾಕ್ಟರೋ, ಎಂಜಿನಿಯರೋ ಆಗುವುದನ್ನು ಕಾಣುವಾಸೆ ನನಗೆ...’ ಹೀಗೆನ್ನುತ್ತಾ ಬೆಂಗಳೂರಿನ ಸ್ವಾತಿ ಹಿಗ್ಗಿದ್ದರು.
ಕಿವಿ ಕೇಳದ, ಮಾತು ಬಾರದ ತಮ್ಮ ಮಕ್ಕಳ ಭವಿಷ್ಯದ ಬಗೆಗೆ ಚಿಂತಿತರಾಗುವ ಪೋಷಕರಿಗೆ ಮೈಸೂರಿನ ‘ಪೇರೆಂಟ್ಸ್ ಅಸೋಸಿಯೇಷನ್ ಆಫ್ ಡೆಫ್ ಚಿಲ್ಡ್ರನ್’ ಸಂಸ್ಥೆ ಊರುಗೋಲಾಗಿದೆ. ಕಳೆದ 43 ವರ್ಷಗಳಿಂದಲೂ ಈ ಸಂಸ್ಥೆ ಕಿವುಡು ಮಕ್ಕಳಿಗೆ ಮಾತು ಕಲಿಸುವ ಕೆಲಸ ಮಾಡುತ್ತಿದೆ. ಕೆ.ಕೆ. ಶ್ರೀನಿವಾಸನ್ ಹಾಗೂ ಅವರ ಪತ್ನಿ ರತ್ನಾ ಶ್ರೀನಿವಾಸನ್ ಅವರು ಈ ಸಂಸ್ಥೆಯನ್ನು ಸ್ಥಾಪಿಸಿದರು. ಇವರ ಮಗುವಿಗೆ ಕೂಡ ಕಿವಿ ಕೇಳದ ಸಮಸ್ಯೆ ಇತ್ತು. ಚೆನ್ನೈಗೆ ಹೋಗಿ ಮಗುವಿಗೆ ಮಾತು ಕಲಿಸಿಕೊಂಡು ಬಂದರು. ನಮ್ಮ ಊರಿನ ತಾಯಿ–ತಂದೆಯರಿಗೂ ಈ ಅನುಕೂಲ ಸಿಗಬೇಕು ಎನ್ನುವ ದೃಷ್ಟಿಯಿಂದ ತಮ್ಮ ಮನೆಯಲ್ಲಿಯೇ ನಾಲ್ಕು ಜನ ಮಕ್ಕಳಿಗೆ ಮಾತು ಕಲಿಸುವ ಮೂಲಕ ತಮ್ಮ ಸೇವೆ ಆರಂಭಿಸಿದ್ದರು. ಈಗ ಇದು ದೊಡ್ಡ ಸಂಸ್ಥೆಯಾಗಿ, ಬಿಹಾರ, ಉತ್ತರ ಪ್ರದೇಶವೂ ಸೇರಿ ಕರ್ನಾಟಕದ ಮೂಲೆ ಮೂಲೆಗಳಿಂದ ತಾಯಂದಿರು ತಮ್ಮ ಮಕ್ಕಳೊಂದಿಗೆ ಈ ಸಂಸ್ಥೆಗೆ ಸೇರುತ್ತಿದ್ದಾರೆ.
ಸ್ವಾತಿ ಅವರು ಹೇಳಿದಂತೆ, ಈ ಸಂಸ್ಥೆಯಲ್ಲಿ ತಾಯಂದಿರೇ ತಮ್ಮ ಮಕ್ಕಳಿಗೆ ಮಾತು ಕಲಿಸುತ್ತಾರೆ. ಈ ತಾಯಂದಿರಿಗೆ ಸಂಸ್ಥೆಯ ಶಿಕ್ಷಕಿಯರು ಹೇಗೆ ಮಾತು ಕಲಿಸಬೇಕು ಎನ್ನುವುದರ ಕುರಿತು ತರಬೇತಿ ನೀಡುತ್ತಾರೆ. ಇದೇ ಈ ಸಂಸ್ಥೆಯ ವಿಶೇಷತೆ. ‘ಯಾವುದೇ ಮಗುವಿರಲಿ, ತಾಯಿಯೊಂದಿಗೆ ಅವು ಅಂಟಿಕೊಂಡಿರುತ್ತಾವೆ. ಜೊತೆಗೆ, ತನ್ನ ಮಗುವಿನ ಪ್ರತಿಯೊಂದ ಚಲನೆಯ ಬಗೆಗೆ ತಾಯಿಗೇ ಹೆಚ್ಚು ಅರ್ಥವಾಗುತ್ತದೆ. ಆದಕಾರಣ ಮಾತನ್ನು ಕಲಿಸಲು ತಾಯಿಗಿಂತ ಬೇರೆ ಯಾರು ತಾನೆ ಸೂಕ್ತ ಅಲ್ಲವೇ?’ ಎನ್ನುತ್ತಾರೆ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯೆ ಹಾಗೂ ಇಲ್ಲಿನ ಶಿಕ್ಷಕಿ ರತ್ನಾ ಬಿ. ಶೆಟ್ಟಿ.
ಈ ಸಂಸ್ಥೆಯ ವೈಶಿಷ್ಟ್ಯ ಇನ್ನೊಂದಿದೆ. ಮಕ್ಕಳಿಗೆ ಮಾತು ಕಲಿಸಲು ಪ್ರತ್ಯೇಕ ಪಠ್ಯ ಎಂದೇನಿಲ್ಲ. ಸಂಸ್ಥೆಯ 43 ವರ್ಷದ ಅನುಭವವೇ ಇಲ್ಲಿನ ಪಠ್ಯ. ಶ್ರೀನಿವಾಸನ್ ಅವರಿಂದ ನೇರವಾಗಿ ಕಲಿತ ತಾಯಂದಿರೇ ಕೆಲವರು ಈಗ ಇಲ್ಲಿ ಶಿಕ್ಷಕಿಯರಾಗಿದ್ದಾರೆ. ಇವರೇ ಈಗ ಮುಂದಿನ ಪೀಳಿಗೆಗೂ ತಮ್ಮ ಅನುಭವವನ್ನು ದಾಟಿಸುತ್ತಿದ್ದಾರೆ. ‘ನಾವು ಇಲ್ಲಿ ಮಾತನ್ನು ಹೇಳಿ ಕೊಡುವುದಿಲ್ಲ, ಮಾತು ಕಲಿಸುವ ವಾತಾವರಣವನ್ನು ಸೃಷ್ಟಿ ಮಾಡಿಕೊಡುತ್ತೇವೆ’ ಎಂದು ವಿವರಿಸುತ್ತಾರೆ ರತ್ನ. ಇವರು ‘ಕಿವುಡ ಮಕ್ಕಳಿಗೆ ಕಲಿಸುವ ವಿಧಾನ’ ಎನ್ನುವ ಪುಸ್ತಕವನ್ನೂ ಬರೆದಿದ್ದು, ಇದೇ ಪುಸ್ತಕವೇ ಪಠ್ಯದಂತೆ ಮಾರ್ಗದರ್ಶಿಯಾಗಿದೆ.
ಮಕ್ಕಳು ತಮ್ಮ ತಮ್ಮ ಮಾತೃಭಾಷೆಯನ್ನೇ ಕಲಿಯಬೇಕು ಎನ್ನುವುದು ಸಂಸ್ಥೆಯ ಉದ್ದೇಶ. ಕಲಿಕೆ ವಾತಾವರಣಕ್ಕೆ ಪೂರಕವಾಗಿ ಇಲ್ಲಿ ಸದ್ಯ ಕನ್ನಡ, ಹಿಂದಿ, ಇಂಗ್ಲಿಷ್, ತೆಲುಗು ಭಾಷೆಗಳಲ್ಲಿ ತಾಯಂದಿರಿಗೆ ಮೂರು ವರ್ಷಗಳಿಗೆ ತರಬೇತಿ ನೀಡಲಾಗುತ್ತದೆ. ಜೊತೆಗೆ, ಇಲ್ಲಿ ಪ್ರತೀ ಮಗುವಿನ ಮೇಲೆ ಪ್ರತ್ಯೇಕ ಗಮನಹರಿಸಲಾಗುತ್ತದೆ. ತಾಯಿಯೇ ಎಲ್ಲವನ್ನೂ ಹೇಳಿಕೊಡುವುದರಿಂದ ಇದು ಸಾಧ್ಯವಾಗಿದೆ. ತಾಯಿ ಇಲ್ಲದ ಅಥವಾ ತಂದೆ–ತಾಯಿಯರಿಬ್ಬರಿಗೂ ಕಿವಿ ಕೇಳುವುದಿಲ್ಲ ಎನ್ನುವ ಸ್ಥಿತಿ ಇದ್ದರೆ, ತಾಯಿಯಂತೆಯೇ ಮಗುವ ಆರೈಕೆ ಮಾಡುವ ಯಾರಾದರೂ ಈ ಸಂಸ್ಥೆಗೆ ಸೇರಬಹುದು. ಸದ್ಯ ಅಜ್ಜಿಯೊಬ್ಬರು ಈ ಸಂಸ್ಥೆಯಲ್ಲಿ ತರಬೇತಿ ಪಡೆಯುತ್ತಿದ್ದಾರೆ.
ಶ್ರೀನಿವಾಸನ್ ಅವರು ತಮ್ಮ ಖರ್ಚಿನಿಂದಲೇ ಕೆಲವು ಮಕ್ಕಳಿಗೆ ಮಾತು ಕಲಿಸುವ ಕಾಯಕ ಆರಂಭಿಸಿದ್ದರು. ಬಳಿಕ ಕೆಲವು ಪೋಷಕರು ಆರ್ಥಿಕವಾಗಿ ಸಂಸ್ಥೆಯೊಂದಿಗೆ ಕೈಜೋಡಿಸಿದರು. ಸರ್ಕಾರದ ಯಾವುದೇ ಅನುದಾನವಿಲ್ಲದೇ, ಕೇವಲ ದಾನಿಗಳ ದಾನದಿಂದ ಈ ಸಂಸ್ಥೆ ನಡೆಯುತ್ತಿದೆ. ಸಂಸ್ಥೆಯಲ್ಲಿ 26 ರೂಮುಗಳಿರುವ ಹಾಸ್ಟೆಲ್ ಇದೆ. ಮೊದಲು ಬಂದವರಿಗೆ ಆದ್ಯತೆ.
‘ಈ ಸಂಸ್ಥೆಗೆ ಸೇರಿದ ಎಲ್ಲ ಮಕ್ಕಳೂ ಮಾತು ಕಲಿತಿದ್ದಾರೆ. ಹಲವರಂತೂ ದೊಡ್ಡ ದೊಡ್ಡ ಹುದ್ದೆಯಲ್ಲಿದ್ದಾರೆ. ಇಲ್ಲಿಗೆ ಬಂದ ತಾಯಂದಿರ ಕನಸು ಎಂದಿಗೂ ಕಮರಿಲ್ಲ. ಮಗುವಿಗೆ ಕಿವಿ ಕೇಳುವುದಿಲ್ಲ ಎಂದು ತಿಳಿದ ದಿನ ನಮ್ಮ ಜೀವನ ಮುಗಿದು ಹೋಯಿತು ಎನ್ನಿಸಿ ಬಿಟ್ಟಿತ್ತು. ಕಣ್ಣುಗಳು ಕನಸು ಕಾಣುವುದನ್ನು ಮರೆತಿದ್ದವು. ಆದರೆ, ಈ ಸಂಸ್ಥೆಯ ಬಗ್ಗೆ ತಿಳಿದ ದಿನ, ನನ್ನ ಮಗು ನನ್ನನ್ನು ಅಮ್ಮ ಎಂದು ಕರೆದ ದಿನ, ನನ್ನ ಕಣ್ಣುಗಳು ಮತ್ತೆ ಕನಸು ಕಾಣಲು ಆರಂಭಿಸಿವೆ’ ಎನ್ನುತ್ತಾರೆ ಬಾಗಲಕೋಟೆಯ ರಾಜಶ್ರೀ ಸುರೇಶಲಾಳಿ.
ನಮ್ಮ ಸಂಸ್ಥೆಯ ಬಗೆಗೆ ತಿಳಿದ ರಾಜ್ಯ ಸರ್ಕಾರವು ಎರಡು ವರ್ಷಗಳ ಹಿಂದೆ ನಮ್ಮದೇ ಮಾದರಿಯಲ್ಲಿ ತಾಯಂದಿರಿಗೆ ತರಬೇತಿ ನೀಡುವ ಕೇಂದ್ರಗಳನ್ನು ತೆರೆಯಲು ಆರಂಭಿಸಿತು. ಆದರೆ, ನಮ್ಮ ಸಂಸ್ಥೆಗೆ ಸಹಾಯ ಮಾಡಲು ಸರ್ಕಾರಕ್ಕೆ ಇನ್ನುವರೆಗೂ ಸಾಧ್ಯವಾಗಿಲ್ಲ–ರತ್ನಾ ಬಿ. ಶೆಟ್ಟಿ, ಸಂಸ್ಥೆಯ ಆಡಳಿತ ಮಂಡಳಿ ಸದಸ್ಯೆ
* ಸದ್ಯ ಸಂಸ್ಥೆಯಲ್ಲಿರುವ ಮಕ್ಕಳ ಸಂಖ್ಯೆ; 80;
* 43 ವರ್ಷಗಳಲ್ಲಿ ಈ ಸಂಸ್ಥೆಯಲ್ಲಿ ಕಲಿತ ಮಕ್ಕಳ ಸಂಖ್ಯೆ; 1,500;
* ಸಂಸ್ಥೆಯಲ್ಲಿರುವ ಶಿಕ್ಷಕಿಯರ ಸಂಖ್ಯೆ; 7
* ಸಂಸ್ಥೆಯಲ್ಲಿರುವ ಶಿಕ್ಷಕಿಯೇತರ ಸಿಬ್ಬಂದಿ ಸಂಖ್ಯೆ; 3
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.