ADVERTISEMENT

ಪಾಣಿನೀಯ ವ್ಯಾಕರಣ – ಭಾರತೀಯ ಜ್ಞಾನ ಪರಂಪರೆಯ ಅತ್ಯಪೂರ್ವ ಕೊಡುಗೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ಅಕ್ಟೋಬರ್ 2024, 15:45 IST
Last Updated 8 ಅಕ್ಟೋಬರ್ 2024, 15:45 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಭಾಷೆಯ ಕುರಿತು ಭಾರತೀಯರಿಗೆ ಇರುವ ಬೆರಗಿಗೆ ಎಣೆಯೇ ಇಲ್ಲ. ಹಾಗೆಂದೇ ಇವತ್ತಿಗೆ ಲಭ್ಯವಿರುವ ನಮ್ಮ ಅತ್ಯಂತ ಪ್ರಾಚೀನ ವಾಙ್ಮಯವಾದ ವೇದಗಳಿಂದ ಶುರುಮಾಡಿ ಈ ಕಾಲದ ಸಾಹಿತ್ಯದವರೆಗೂ ನುಡಿಯ ಕುರಿತಾಗಿ ನಾನಾ ವಿಧವಾದ ಚರ್ಚೆ ಮತ್ತು ಚಿಂತನೆಗಳನ್ನು ಭಾರತದಲ್ಲಿ ಕಾಣುತ್ತೇವೆ. ಒಂದು ರಾಷ್ಟ್ರವಾಗಿ ಬದುಕುತ್ತಲೇ ನಾವು ಇವತ್ತಿಗೂ ಕಾಪಿಟ್ಟುಕೊಂಡು ಬಂದ ನುಡಿಬೆಡಗು ಮತ್ತು ವೈವಿಧ್ಯವಂತೂ ಜಗತ್ತಿನ ಬಹುಭಾಗದಲ್ಲಿ ಕಾಣಲಾಗದಂಥದು.

ಪುರಾಕಾಲದಲ್ಲಿ ಗುರುತಾದ ನಾಲ್ಕು ಮುಖ್ಯ ನಾಗರಿಕತೆಗಳ ಸಾಲಿನಲ್ಲಿ ಇವತ್ತಿಗೆ ತಮ್ಮ ಹಳೆಯ ಗುರುತುಗಳೊಂದಿಗೆ ಬದುಕಿರುವ ಎರಡು ನಾಗರಿಕತೆಗಳು ಭಾರತ ಮತ್ತು ಚೀನಾ ಎರಡೇ. ಮೆಸಪೊಟೇಮಿಯ ಮತ್ತು ಈಜಿಪ್ತಿನ ಸಂಸ್ಕೃತಿಗಳು ಕಾಲಗರ್ಭದಲ್ಲಿ ಲೀನವಾಗಿವೆ. ಜಗತ್ತಿನ ನಾಲ್ಕು ಬೇರೆ ಬೇರೆ ಭಾಗಗಳಲ್ಲಿ ರೂಪುಗೊಂಡ ಈ ನಾಗರಿಕತೆಗಳ ಮನೋಧರ್ಮ, ನಡಾವಳಿ ಮತ್ತು ಲೋಕದೃಷ್ಟಿಗಳು ಸಹ ಅಷ್ಟಿಷ್ಟು ಭಿನ್ನವೇ. ಭಾಷೆಯ ದೃಷ್ಟಿಯಿಂದ ನೋಡುವುದಾದರೆ ಮೆಸಪೊಟೇಮಿಯದ ನಾಗರಿಕತೆಗೆ ಬರವಣಿಗೆ ಮುಖ್ಯವಾದರೆ ಸಿಂಧೂ-ಸರಸ್ವತಿ ನಾಗರಿತೆಗೆ, ಅರ್ಥಾತ್ ಭಾರತೀಯ ನಾಗರಿಕತೆಗೆ, ನುಡಿಅಥವಾ ಉಲಿರೂಪದ ಮಾತು ಮುಖ್ಯವಾಗಿದ್ದಂತೆ ಕಾಣುತ್ತದೆ. ಮೆಸಪೊಟೇಮಿಯದ ಜನ 3200 ನೇ ಸಾಮಾನ್ಯಶಕ ಪೂರ್ವದಲ್ಲಿಯೇ ಸುಮೇರಿಯನ್ ಮತ್ತು ಅಕೇಡಿಯನ್ ಭಾಷೆಗಳ ಶಬ್ದಕೋಶವನ್ನು ಬರೆದುಕೊಂಡಿದ್ದರು. ಇವತ್ತಿಗೆ ಆ ನಾಗರಿಕತೆಯ ಕಥೆ ಹೇಳುವುದಕ್ಕೆ ಮೆಸಪೊಟೇಮಿಯನ್ನರು ಬದುಕಿಲ್ಲದಿದ್ದರೂ ಕ್ಯುನಿಫಾರ್ಮ್ ಲಿಪಿಯ ಓದು ಸಾಧ್ಯವಾದ ಬಳಿಕ ನಮಗೆ ಆ ಜನಗಳು ನಿರ್ಮಿಸಿಕೊಂಡಿದ್ದ ಶಬ್ದಲೋಕದ ಅರಿವು ಸಾಧ್ಯವಾಗುತ್ತಿದೆ. ಅದೇ ಹೊತ್ತಿಗೆ ಭಾರತವಾದರೋ ನುಡಿಯ ಧ್ವನಿಸ್ಪಷ್ಟತೆ, ಉಚ್ಚಾರಣೆಯ ಸೂಕ್ಷ್ಮಗಳು, ಧ್ವನಿಭೇದಗಳಿಂದ ಬರುವ ಅರ್ಥಭೇದಗಳು, ಪಠನ ಮತ್ತು ಶ್ರವಣಪರಂಪರೆ – ಹೀಗೆ ಮೌಖಿಕ ಭಾಷಾಲೋಕವನ್ನು ದೃಢವಾಗಿ ಬೆಳೆಸಿಕೊಂಡಿತು. ನಮ್ಮ ವೇದಗಳು ಮೌಖಿಕ ಪರಂಪರೆಗೆ ಅನ್ಯಾದೃಶವಾದ ಉದಾಹರಣೆಗಳು; ಇವತ್ತಿಗೂ ಶ್ರವಣಮೂಲವಾದ ವೇದಾಧ್ಯಯನಕ್ಕೆ ವಿಶಿಷ್ಟವಾದ ಸ್ಥಾನವಿದೆ.
ವೇದದ ಆರು ಅಂಗಗಳ ಪೈಕಿ ಮೂರು ಅಂಗಗಳು ನೇರವಾಗಿ ಧ್ವನಿ ಮತ್ತು ಭಾಷೆಗೆ ಸಂಬಂಧಿಸಿದವೇ ಆಗಿವೆ. ನುಡಿಯಕುರಿತಾಗಿ ನಮ್ಮ ನಾಗರಿಕತೆಗೆ ಇರುವ ಆಸ್ಥೆಗೆ ಇದೊಂದು ಸಜೀವ ಉದಾಹರಣೆಯಷ್ಟೆ.

ADVERTISEMENT
ವ್ಯಾಕರಣವೆಂದರೇನು?

ನುಡಿ ಪಡಿಮೂಡಿದ ಮೇಲೆ ನುಡಿಯ ನೈಸರ್ಗಿಕ ನಿಯಮವನ್ನು ಅರ್ಥೈಸಿಕೊಳ್ಳುವ ಅಧ್ಯಯನ ಪರಂಪರೆ ಬೆಳೆದು ಬಂತು. ಅದನ್ನು ಇವತ್ತಿಗೆ ವ್ಯಾಕರಣ ಎಂಬ ಹೆಸರಿನಿಂದ ಕರೆಯುತ್ತೇವೆ. ‘ಬೇರ್ಪಡಿಸುವುದು” ಎನ್ನುವುದು ವ್ಯಾಕರಣ ಪದದ ಶಬ್ದಶಃ ಅರ್ಥ. ಅಪಶಬ್ದಗಳಿಂದ ಶಬ್ದಗಳನ್ನು ಬೇರ್ಪಡಿಸುವ ಪ್ರಕ್ರಿಯೆ ಇದು. ಈ ಪ್ರಕ್ರಿಯೆಗಾಗಿ ವ್ಯಾಕರಣವು ನೆಚ್ಚಿಕೊಳ್ಳುವ ಮಾರ್ಗವಾದರೂ ‘ವ್ಯಾಕ್ರಿಯೆ’ ಯೇ (ಬೇರ್ಪಡಿಸುವಿಕೆ) ಆಗಿದೆ. ಪದವೊಂದರಲ್ಲಿ ಪ್ರಕೃತಿ (ಮೂಲಶಬ್ದ) ಯಾವುದು ಮತ್ತು ಪ್ರತ್ಯಯ (ಅಂಟಿಸಿದ ಶಬ್ದರೂಪ) ಯಾವುದು ಎಂಬ ವಿವೇಚನೆಯನ್ನು ಬೆಳೆಸುವುದು ವ್ಯಾಕರಣ. ಮುಂದೆ ಸಾಮಾನ್ಯಶಕ ಪೂರ್ವದ ಏಳನೆಯ ಶತಮಾನದಲ್ಲಿ ಬದುಕಿದ್ದ ಪಾಣಿನಿಮಹರ್ಷಿಗಳ ಕಾಲದಿಂದ ಇವತ್ತಿನ ಸಾಮಾನ್ಯಶಕದ ಇಪ್ಪತ್ತೊಂದನೆಯ ಶತಮಾನದವರೆಗೂ ಭಾಷೆಯ ಕುರಿತಾದ ಚರ್ಚೆಯ ಪರಂಪರೆ ಭಾರತದಲ್ಲಿ ಅನೂಚಾನವಾಗಿ ಸಾಗಿಬಂದಿದೆ. ಭಾರತೀಯ ವೈಯಾಕರಣರ ಸಾಲಿನಲ್ಲಿ ಮಹರ್ಷಿ ಪಾಣಿನಿಯೇ ಮೊದಲಿಗರಲ್ಲವಾದರೂ
ಅವರಿಗಿಂತ ಹಿಂದೆ ಬದುಕಿದ್ದ ವೈಯಾಕರಣರ ಗ್ರಂಥಗಳು ಮತ್ತವುಗಳ ಅಧ್ಯಯನ ಪರಂಪರೆ ನಮಗಿವತ್ತು ಲಭ್ಯವಿಲ್ಲ.

ಅಷ್ಟಾಧ್ಯಾಯೀ ಗ್ರಂಥದಲ್ಲಿ ಮಹರ್ಷಿ ಪಾಣಿನಿ ತಮ್ಮ ಹಿಂದಿನ ಹತ್ತು ಬೇರೆ ಬೇರೆ ವೈಯಾಕರಣರನ್ನು ನೆನಪಿಸಿಕೊಂಡಿದ್ದಿದೆ. ಪಾಣಿನ್ಯುತ್ತರ ಕಾಲದಲ್ಲಿ ಬಂದ ವ್ಯಾಕರಣಗಳು ಇವೆಯಾದರೂ ಅವು ಪರಂಪರೆಯಾಗಿ ಬೆಳೆದುಬಂದಿಲ್ಲ. ಮತ್ತವುಗಳು ಸ್ವರೂಪದಲ್ಲಿ ಪ್ರಾಯೇಣ ಪಾಣಿನೀಯ ವ್ಯಾಕರಣದಿಂದ ಬಹಳೇನೂ ಭಿನ್ನವೂ ಅಲ್ಲ.

ಅಷ್ಟಾಧ್ಯಾಯೀ

ಪಾಣಿನೀಯ ಅಷ್ಟಾಧ್ಯಾಯಿಯ ಹಿರಿಮೆಯೆಂದರೆ ಅದು ವೈದಿಕ ಸಂಸ್ಕೃತಕ್ಕೂ ಲೌಕಿಕ ಸಂಸ್ಕೃತಕ್ಕೂ ಸಲ್ಲುವಂಥ ವ್ಯಾಕರಣವನ್ನು ಅತ್ಯಂತ ಸಂಕ್ಷೇಪದಲ್ಲಿ, ಅಜಮಾಸು ನಾಲ್ಕುಸಾವಿರ ಸೂತ್ರಗಳಲ್ಲಿ, ಊಹಾತೀತ ನಿಖರತೆಯೊಂದಿಗೆ ಲೋಕದ ಎದುರಿಗೆ ಇರಿಸಿದ್ದು. ಸಂಸ್ಕೃತ ವಾಙ್ಮಯದ ವಿಸ್ತಾರವನ್ನು ಗಮನಿಸಿದರೆ (ಪುಣೆಯ ಡೆಕ್ಕನ್ ಕಾಲೇಜು 1948 ರಲ್ಲಿ ಸಂಸ್ಕೃತ ವಿಶ್ವಕೋಶ ಯೋಜನೆಯೊಂದನ್ನು ಕೈಗೆತ್ತಿಕೊಂಡಿದೆ. ಇದರ ಮೂಲಕ ಇದುವರೆಗೆ ಪ್ರಕಟವಾದ ಮೂವತ್ತೈದು ಸಂಪುಟಗಳಲ್ಲಿ ಅಜಮಾಸು ಒಂದೂಕಾಲು ಲಕ್ಷ ಪದಗಳಿವೆ. ಈ ಯೋಜನೆ ಪೂರ್ತಿಯಾಗುವ ಹೊತ್ತಿಗೆ ಇದರ ಪರಿಮಾಣ ಸುಮಾರು ಇಪ್ಪತ್ತು ಲಕ್ಷ ಪದಗಳಿಗೆ ತಲುಪಲಿದೆ ಎಂದು 2022 ರಲ್ಲಿ ಇಂಡಿಯನ್ ಎಕ್ಸ್-ಪ್ರೆಸ್ ವರದಿ ಮಾಡಿತ್ತು. ಪೂರ್ತಿ ಸಿದ್ಧವಾದಾಗ ಇದು ಜಗತ್ತಿನ ಅತಿದೊಡ್ಡ ಶಬ್ದಕೋಶವಾಗಲಿದೆ. ಇದನ್ನು ಗಮನಿಸುವಾಗ ಸಂಸ್ಕೃತ ಭಾಷೆಯ ಪದವಿಸ್ತಾರದ ಪರಿಕಲ್ಪನೆ ಬಂದೀತು) ನಾಲ್ಕು ಸಾವಿರ ಸೂತ್ರಗಳಲ್ಲಿ ಆ ಎಲ್ಲ ಪದಗಳಿಗೆ ಸಲ್ಲುವಂಥ ವ್ಯಾಕರಣವನ್ನು ಬರೆಯುವುದು ಮಾನವ ಮಾತ್ರರಿಂದ ಅಸಾಧ್ಯವಾದ ಕೆಲಸವೆಂಬುದು ಅರ್ಥವಾಗುತ್ತದೆ. ಅತ್ಯಂತ ಕಡಿಮೆ ಪದಗಳಲ್ಲಿ, ನಿಸ್ಸಂದಿಗ್ಧವಾಗಿ ಹಿರಿದಾದ ಭಾಷಾಲೋಕವನ್ನು ವ್ಯವಸ್ಥೆಗೊಳಪಡಿಸಬೇಕು ಅನ್ನುವುದು ಅಷ್ಟಾಧ್ಯಾಯೀ ಗ್ರಂಥದ ಮೂಲ ಆಶಯಗಳಲ್ಲಿ ಒಂದು. ಮೌಖಿಕ ಪರಂಪರೆಯ ಭಾಗವಾಗಿಯೇ ಬಂದಿರಬಹುದಾದ ಈ ಸೂತ್ರಗಳನ್ನು (ಮೌಖಿಕ ಯಾಕೆಂದರೆ ಅಷ್ಟಾಧ್ಯಾಯಿಯ ಸೂತ್ರಗಳು ಉದಾತ್ತ, ಅನುದಾತ್ತ ಮತ್ತು ಸ್ವರಿತ ಸ್ವರಗಳನ್ನು ದುಡಿಸಿಕೊಳ್ಳುತ್ತವೆ. ಈ ಸ್ವರಗಳು ಧ್ವನಿಮೂಲವಾದ ಸಂಜ್ಞೆಗಳು ಮತ್ತು ಇವುಗಳ ಹೊರತಾಗಿ ಪಾಣಿನೀಯ ಸೂತ್ರಗಳನ್ನು ಅರ್ಥೈಸಿಕೊಳ್ಳುವುದು ಅಸಾಧ್ಯ) ಇವತ್ತು ಪುಸ್ತಕರೂಪದಲ್ಲಿ ಮುದ್ರಿಸಿದಾಗ ಅಂಗಿಯ ಕಿಸೆಯಲ್ಲಿ ಇಡಬಹುದಾದಷ್ಟು ಪುಟ್ಟ ಪುಸ್ತಿಕೆಯಾಗುತ್ತದಷ್ಟೆ. ಆದರೆ ಆ ಗ್ರಂಥದ ಪರಂಪರೆಯಲ್ಲಿ ಬಂದ ಪುಸ್ತಕಗಳನ್ನೆಲ್ಲ ಇರಿಸುವುದಾದರೆ ಒಂದು ಗ್ರಂಥಾಲಯವಾದೀತು.

ಮಹರ್ಷಿ ಪಾಣಿನಿ

ಬಹುತೇಕ ಭಾರತೀಯ ಪ್ರಾಚೀನ ಮಹನೀಯರ ಚರಿತ್ರೆಯಂತೆಯೇ ಪಾಣಿನಿಯ ವೈಯಕ್ತಿಕ ಬದುಕಿನ ಕುರಿತಾಗಿ ನಮಗೆ ತಿಳಿದಿರುವುದು ಅತ್ಯಲ್ಪ. ಅವಿಭಕ್ತ ಭಾರತದ ಶಾಲಾತುರ ಗ್ರಾಮದಲ್ಲಿ (ಗಾಂಧಾರ ದೇಶ, ಇವತ್ತಿನ ಛೋಟಾ-ಲಾಹೋರ್) ಪಣಿ ಮತ್ತು ದಾಕ್ಷಿಯರ ಮಗನಾಗಿ ಹುಟ್ಟಿದ್ದರ ಕುರಿತು ನಾನಾ ದಾಖಲೆಗಳಿವೆ. ಮುಂದೆ ತಕ್ಷಶಿಲೆ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಅಧ್ಯಾಪನ ಮಾಡಿದ್ದರೆನ್ನಲಾಗುತ್ತದೆ. ಸಾಮಾನ್ಯಶಕದ ಏಳನೆಯ ಶತಮಾನದಲ್ಲಿ ಚೀನದಿಂದ ನಾಲಂದೆಗೆ ಬಂದಿದ್ದ ಬೌದ್ಧಯಾತ್ರಿ ಗ್ಸಿಯಾಂಗ್ ಗ್ಸಾಂಗ್ ನು ಶಲಾತುರ ಗ್ರಾಮದಲ್ಲಿ ಪಾಣಿನಿಮಹರ್ಷಿಯ ಮೂರ್ತಿಯೊಂದನ್ನು ನೋಡಿದ್ದಾಗಿ ತನ್ನ ಯಾತ್ರಾಚರಿತ್ರೆಯಲ್ಲಿ ಬರೆಯುತ್ತಾನೆ. ಮುಂದೆ ದಾಳಿಕೋರ ಸಮುದಾಯಗಳಿಂದಾಗಿ ಆ ಮೂರ್ತಿ ನಾಶವಾಗಿರಬಹುದು.

ಮಹರ್ಷಿ ಪಾಣಿನಿಯ ಅಷ್ಟಾಧ್ಯಾಯಿ ಗ್ರಂಥದ ಕುರಿತು ಅಮೆರಿಕದ ಆಧುನಿಕ ಭಾಷಾಶಾಸ್ತ್ರಜ್ಞ ಲಿಯೋನಾರ್ಡ್ ಬ್ಲೂಮ್ ಫೀಲ್ಡ್- “ಮಾನವ ಮತಿಗೆ ಇದುವರೆಗೆ ಸಾಧ್ಯವಾದ ಅತ್ಯುನ್ನತ ಸಾಧನೆಗಳಲ್ಲಿ ಒಂದು” ಎಂದು ಬಣ್ಣಿಸುತ್ತಾರೆ. ರಚನೆಯಾದ ಕಾಲದಿಂದ ಇವತ್ತಿನವರೆಗಿನ ಎರಡೂವರೆ ಸಾವಿರ ವರ್ಷಗಳ ಅವಿರತ ಪಾಣಿನೀಯ ಪರಂಪರೆಯಲ್ಲಿ ಬಂದ ವ್ಯಾಖ್ಯಾನ, ಟೀಕೆ, ವಿವರಣೆ, ವಿಶ್ಲೇಷಣೆಗಳು ಅಪರಿಮಿತ. ಇವತ್ತಿಗೂ ಪ್ರತಿಷ್ಠಿತ ಸಂಶೋಧನ ಪತ್ರಿಕೆಗಳ ಜಾಲತಾಣವನ್ನು ತೆರೆದರೆ

ವರ್ಷವೊಂದರಲ್ಲಿಯೇ ಪಾಣಿನೀಯ ವ್ಯಾಕರಣದ ಕುರಿತು ಜಗತ್ತಿನಾದ್ಯಂತ ಪ್ರಕಟವಾಗುವ ಶೋಧ ಪತ್ರಿಕೆಗಳು ನೂರರ ಸಂಖ್ಯೆಯಲ್ಲಿ ಸಿಗುತ್ತವೆ. ಎರಡು ವರ್ಷಗಳ ಹಿಂದೆ ಅನಿವಾಸಿ ಭಾರತೀಯ ಕೇಂಬ್ರಿಡ್ಜ್ ವಿದ್ಯಾರ್ಥಿಯೊಬ್ಬ ತಾನು ಪಾಣಿನಿವ್ಯಾಕರಣದ ಬಲುದೊಡ್ಡ ಸಿಕ್ಕೊಂದನ್ನು ಬಿಡಿಸಿದ್ದೇನೆ ಎಂದು ಮಾಧ್ಯಮಗಳ ಎದುರು ಬಂದಿದ್ದು ಮತ್ತು ಅದಕ್ಕೆ ಭಾರತೀಯ ವಿದ್ವಾಂಸರು ಯಥೋಚಿತವಾಗಿ ಉತ್ತರಿಸಿದ್ದು ಈ ಹಿನ್ನೆಲೆಯಲ್ಲಿ ಸ್ಮರಣೀಯ.

ಅಷ್ಟಾಧ್ಯಾಯೀ ಪರಂಪರೆ

ಸಂಸ್ಕೃತವನ್ನುಳಿದು ಬೇರೆ ಭಾರತೀಯ ಭಾಷೆಗಳಿಗೆ ರಚನೆಯಾದ ವ್ಯಾಕರಣಗಳು ಅಷ್ಟಾಧ್ಯಾಯೀ ಪರಂಪರೆಯ ಪ್ರಭಾವದಿಂದ ತಪ್ಪಿಸಿಕೊಳ್ಳಲಾಗಿಲ್ಲ. ದೇಶಭಾಷೆಗಳಲ್ಲೇ ಅತ್ಯಂತ ಹಳೆಯ ವ್ಯಾಕರಣ ಎನಿಸಿಕೊಂಡಿರುವ ತಮಿಳಿನ ಸಂಗಂ (ಚಂಕಂ) ಕಾಲದ ತೋಲ್ಕಾಪ್ಪಿಯಂ ವ್ಯಾಕರಣವಾದರೂ (ಸಾಮಾನ್ಯಶಕ ಒಂದರಿಂದ ನಾಲ್ಕನೆಯ ಶತಮಾನ) ಪಾಣಿನಿವ್ಯಾಕರಣದ ಪಟ್ಟುಗಳನ್ನು ಬಳಸಿಕೊಂಡೇ ಇದೆ. ಆ ಬಳಿಕ ಕನ್ನಡ, ತೆಲುಗು, ಮಲಯಾಳಂ ಭಾಷೆಗಳ ವ್ಯಾಕರಣಗ್ರಂಥಗಳು ಪಾಣಿನಿಪರಂಪರೆಯ ಪ್ರಭಾವದಿಂದ ಹೊರತಾಗಿಲ್ಲ. ಕನ್ನಡದ ಕೇಶಿರಾಜನಾದರೂ ಕನ್ನಡ ಧಾತುಗಳ ಅರ್ಥವನ್ನು ಸಂಸ್ಕೃತದಲ್ಲಿ ಬರೆದುಕೊಂಡಿದ್ದು ಇವತ್ತಿಗೂ ಲಭ್ಯ. ಸಂಸ್ಕೃತದ ಧಾತುಗಳಿಗೆ ಕನ್ನಡದಲ್ಲಿ ಅರ್ಥ ಬರೆದುಕೊಂಡ ಕನ್ನಡದ ವೈಯಾಕರಣರೂ ಇದ್ದಾರೆ. ಹಾಗೆ ನೋಡಿದರೆ ಮಹರ್ಷಿ ಪಾಣಿನಿಯ ಅಷ್ಟಾಧ್ಯಾಯೀ ಗ್ರಂಥವಾಗಲೀ, ಪತಂಜಲಿ ಮಹರ್ಷಿಗಳು ಅದಕ್ಕೆ ಬರೆದ ಭಾಷ್ಯವಾಗಲೀ – ಈ ವ್ಯಾಕರಣವನ್ನು ಸಂಸ್ಕೃತ ಭಾಷೆಗಾಗಿ ಮಾತ್ರ ಬರೆಯಲಾಗಿದೆ ಎಂದು ಎಲ್ಲಿಯೂ ಹೇಳಿಲ್ಲ. ಬದಲಾಗಿ ಭಾಷಾತತ್ತ್ವಶಾಸ್ತ್ರದ ದೃಷ್ಟಿಯಿಂದ ನೋಡುವಾಗ ಪಾಣಿನೀಯ ವ್ಯಾಕರಣವು ‘ಭಾಷೆ’ ಎಂಬ ಸಾರ್ವತ್ರಿಕ ವಿಚಾರವನ್ನು ಮುಂದಿಟ್ಟುಕೊಂಡಂತೆ ಕಾಣುತ್ತದೆ. ಹಾಗಾಗಿಯೇ ಆಧುನಿಕ ಭಾಷಾಶಾಸ್ತ್ರದಲ್ಲಿ ಸೆಮಾಂಟಿಕ್ಸ್ ಕುರಿತಾಗಿ ಮಾಡುವ ವಿಚಾರಕ್ಕೆ ಪಾಣಿನೀಯಪರಂಪರೆಯು ಪ್ರಸ್ತುತವೆನ್ನಿಸುತ್ತದೆ.

ಭಾರತೀಯ ಜ್ಞಾನಪರಂಪರೆಯಲ್ಲಿ ಭಾಷೆಯ ಚರ್ಚೆಯನ್ನು ವೈಯಾಕರಣರು ಮಾತ್ರವೇ ಅಲ್ಲದೆ ಪ್ರಾಯೇಣ ಎಲ್ಲ ಜ್ಞಾನಶಾಖೆಗಳೂ ಎತ್ತಿಕೊಳ್ಳುತ್ತವೆ. ಪದ, ಅರ್ಥ, ಧ್ವನಿ, ಪ್ರಕೃತಿ-ಪ್ರತ್ಯಯ, ವಾಕ್ಯಾರ್ಥ ಇತ್ಯಾದಿ ಚರ್ಚೆಗಳನ್ನು ತತ್ತ್ವಶಾಸ್ತ್ರ, ಕರ್ಮಕಾಂಡ, ಧರ್ಮಶಾಸ್ತ್ರ, ಅರ್ಥಶಾಸ್ತ್ರ, ಸಾಹಿತ್ಯಶಾಸ್ತ್ರ, ನ್ಯಾಯಶಾಸ್ತ್ರಗಳು ನಡೆಸಿದ್ದಿದೆ. ಭಾಷೆಯ ಚರ್ಚೆಯಿಲ್ಲದೆ ಭಾರತೀಯ ತತ್ವಶಾಸ್ತ್ರವೇ ಇಲ್ಲವೆನ್ನಬಹುದು. ಶಬ್ದಪ್ರಮಾಣವನ್ನು ಒಪ್ಪುವ ಆಸ್ತಿಕ ದರ್ಶನಗಳು ಮಾತ್ರವಲ್ಲದೆ, ನಾಸ್ತಿಕರಾದ ಜೈನ ಮತ್ತು ಬೌದ್ಧ ಪರಂಪರೆಗಳು ಸಹ ಶಬ್ದಕ್ಕಾಗಿ ದುಡಿದಿವೆ. ಸ್ವಯಂ ವ್ಯಾಕರಣ ಶಾಸ್ತ್ರವೇ ಒಂದು ತತ್ತ್ವಶಾಸ್ತ್ರೀಯ ಮುನ್ನೆಲೆಯನ್ನು ಕಂಡುಕೊಂಡಿದ್ದೂ ಸಹ ಪರಂಪರೆಯಲ್ಲಿ ಇದೆ. ಸಾಮಾನ್ಯಶಕದ ಐದನೇ ಶತಮಾನದಲ್ಲಿ
ಮಹಾವೈಯಾಕರಣನಾದ ಭರ್ತೃಹರಿಯು ತನ್ನ ವಾಕ್ಯಪದೀಯ ಗ್ರಂಥದಲ್ಲಿ ಶಬ್ದಾದ್ವೈತವಾದವನ್ನು ಪ್ರತಿಪಾದಿಸುತ್ತಾನೆ. ಆಚಾರ್ಯಶಂಕರರು ಶುದ್ಧಬ್ರಹ್ಮದ ಅದ್ವೈತವನ್ನು ಪ್ರತಿಪಾದಿಸುವುದಕ್ಕಿಂತ ಎರಡು ಶತಮಾನಗಳಷ್ಟು ಮುಂಚೆ ವ್ಯಾಕರಣ ಪರಂಪರೆಯಲ್ಲಿ ಶಬ್ದಬ್ರಹ್ಮದ ಪ್ರತಿಪಾದನೆಯನ್ನು ಮಾಡಿದ ವೈಯಾಕರಣವೇದಾಂತಿ ಭರ್ತೃಹರಿ.

ವ್ಯಾಕರಣ ಪರಂಪರೆಯ ಅರಿವಿನ ಪ್ರಸ್ತುತತೆ

ಭಾರತದ ನಾಗಕತೆಯನ್ನು ಮತ್ತು ಇತಿಹಾಸವನ್ನು ಅರ್ಥಮಾಡಿಕೊಳ್ಳುವ ನಿಟ್ಟಿನಲ್ಲಿ ನಮಗಿವತ್ತು ಲಭ್ಯವಿರುವ ಬಲುಮುಖ್ಯ ಆಸರೆಗಳಲ್ಲಿ ಪಾಣಿನೀಯ ಅಷ್ಟಾಧ್ಯಾಯೀ, ಪಾತಂಜಲ ಮಹಾಭಾಷ್ಯ ಮತ್ತು ಕಾಶಿಕಾವೃತ್ತಿ ಗ್ರಂಥಗಳು ಮುಖ್ಯವೆನಿಸಿಕೊಳ್ಳುತ್ತವೆ. ಆ ಕಾಲದ ಭಾಷೆಯ ವ್ಯವಹಾರ, ಬಳಕೆಯಲ್ಲಿದ್ದ ಪದಗಳು, ಪ್ರದೇಶದ ಹೆಸರುಗಳು, ಜನಪದಗಳು, ವ್ಯಾಪಾರ, ಅಳತೆಯ ಮಾನಗಳು, ನುಡಿಗಟ್ಟಿನ ಬಳಕೆ, ಸಮುದಾಯ ಪದ್ಧತಿಗಳು, ಆಹಾರ, ಜನಜೀವನ, ಆಡಳಿತ – ಹೀಗೆ ವ್ಯಾಕರಣ ಗ್ರಂಥಗಳು ಬೆಳಕು ಚೆಲ್ಲುವ ಕ್ಷೇತ್ರಗಳು ಹತ್ತು ಹಲವಾರು. ಇದೇ ನೆಲೆಯಲ್ಲಿ ವಿ. ಎಸ್. ಅಗ್ರವಾಲರು ಬರೆದ ‘ಇಂಡಿಯಾ ಅಸ್ ನೋನ್ ಟು ಪಾಣಿನಿ’ (India as known to Panini-1953) ಪುಸ್ತಕವನ್ನು ಆಸಕ್ತರು ಪರಾಂಬರಿಸಬಹುದಾಗಿದೆ. ಪಾಣಿನಿಯ ಪರಂಪರೆಯೂ ಸೇರಿದಂತೆ ಸಮಗ್ರ ಸಂಸ್ಕೃತ ವ್ಯಾಕರಣದ ವಿಕಾಸದ ಚರಿತ್ರೆಯನ್ನು ಯುಧಿಷ್ಠಿರ ಮೀಮಾಂಸಕರು ತಮ್ಮ’ ಸಂಸ್ಕೃತ ವ್ಯಾಕರಣಶಾಸ್ತ್ರ ಕಾ ಇತಿಹಾಸ್’ (1984) ಗ್ರಂಥದಲ್ಲಿ ಮೂರು ಭಾಗಗಳಲ್ಲಿ ಪ್ರಕಟಿಸಿದ್ಧಾರೆ. ಭಾರತದ ಇತಿಹಾಸವನ್ನು ಭಾರತದ ಕಣ್ಣುಗಳಲ್ಲಿ ಕಾಣುವ ಪ್ರಯತ್ನಕ್ಕೆ ನಮಗಿವತ್ತು ಲಭ್ಯವಿರುವ ಸಾಮಗ್ರಿಗಳು ಇವೆಲ್ಲ. ಮಹರ್ಷಿ ಪಾಣಿನಿ ಹುಟ್ಟಿದ ಊರು, ಅಧ್ಯಯಿಸಿದ್ದ ತಕ್ಷಶಿಲಾ ವಿದ್ಯಾಪೀಠಗಳನ್ನು ನಮ್ಮ ಅನೂಚಾನ ನಾಗರಿಕತೆಯ ನೆನಪುಗಳಾಗಿ ಪುನಾರಚಿಸುವ ಕಾರ್ಯಗಳು ಆಗಬೇಕಿತ್ತು. ದುರದೃಷ್ಟವಶಾತ್, ಮತ ಯಾವುದೇ ಆದರೂ ನಾಗರಿಕತೆಯ ಗುರುತುಗಳನ್ನು ನಾಶಮಾಡಬಾರದು ಎನ್ನುವ ಪ್ರಜ್ಞೆ ಇರುವ ಆಡಳಿತ ವ್ಯವಸ್ಥೆ ಸದ್ಯಕ್ಕೆ ಶಲಾತುರ ಗ್ರಾಮದಲ್ಲಿ ಇಲ್ಲದ್ದರಿಂದ ಹೆಚ್ಚಿನದನ್ನು ನಿರೀಕ್ಷಿಸುವಂತಿಲ್ಲ. ಭಾರತದಲ್ಲಿ ಇವತ್ತಿಗೂ ಪಾಣಿನೀಯವ್ಯಾಕರಣ ಪರಂಪರೆ ಅನುಚಾನವಾಗಿದೆ, ವಾರ್ಷಿಕ ನೂರಾರು ವಿದ್ಯಾರ್ಥಿಗಳು ಭಾರತದ ಬೇರೆ ಬೇರೆ ವಿದ್ಯಾಸಂಸ್ಥೆಗಳಲ್ಲಿ ಪಾರಂಪರಿಕವಾಗಿ ಪಾಣಿನಿವ್ಯಾಕರಣವನ್ನು ಅಧ್ಯಯನ ಮಾಡುತ್ತಾರೆ ಎಂಬಷ್ಟರಮಟ್ಟಿಗೆ ನಾವಿವತ್ತು ಸಂತೋಷಿಸಬಹುದೇನೋ.

(ಲೇಖಕರು ಚಾಣಕ್ಯ ವಿಶ್ವವಿದ್ಯಾಲಯದಲ್ಲಿ ಸಹಾಚಾರ್ಯರು)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.