ಪೆಗಾಸಸ್ ತಂತ್ರಾಂಶ ಬಳಸಿ ಭಾರತ ಸರ್ಕಾರ, ಕೋಟ್ಯಂತರ ಮೊಬೈಲ್ ಫೋನ್ ಬಳಕೆದಾರರ ದೂರವಾಣಿ ಕರೆಗಳನ್ನು ಕದ್ದಾಲಿಸುತ್ತಿದೆ; ಸಂದೇಶಗಳು, ಇ-ಮೇಲ್ ಮೊದಲಾದ ಮಾಹಿತಿಯನ್ನು ಅನಧಿಕೃತವಾಗಿ ಸಂಗ್ರಹಿಸುತ್ತಿದೆ ಮತ್ತು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎನ್ನುವುದು ತಾಂತ್ರಿಕವಾಗಿ ಸಾಧ್ಯವಿಲ್ಲ. ಏಕ ಕಾಲದಲ್ಲಿ ಕೋಟ್ಯಂತರ ಜನರ ದೂರವಾಣಿ ಕರೆ ಕದ್ದಾಲಿಕೆ, ಸಂದೇಶಗಳ ಸಂಗ್ರಹ, ವಿಶ್ಲೇಷಣೆ ಮಾಡುವ ಅತ್ಯಾಧುನಿಕ ವ್ಯವಸ್ಥೆ ಭಾರತದ ಮಾತಿರಲಿ, ಅಮೆರಿಕದಂತಹ ದೇಶದಲ್ಲಿ ಕೂಡಾ ಇಲ್ಲ. ಇಂತಹ ವ್ಯವಸ್ಥೆ ಸ್ಥಾಪಿಸಲು ಲಕ್ಷಾಂತರ ಕೋಟಿ ಡಾಲರ್ ಬೇಕಾಗುತ್ತದೆ ಮತ್ತು ಜನಸಾಮಾನ್ಯರಿಗೆ ಗೊತ್ತಾಗದಂತೆ ಅವರ ದೂರವಾಣಿ ಕರೆ ಕದ್ದು ಕೇಳುವ ಅಥವಾ ಮಾಹಿತಿ ಸಂಗ್ರಹಿಸುವ, ದುರ್ಬಳಕೆ ಮಾಡಿಕೊಳ್ಳುವ ಯಾವುದೇ ಸರ್ಕಾರದ ಯೋಜನೆಯಲ್ಲಿ ಹೆಸರಾಂತ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳು ಭಾಗಿಯಾಗುವುದಿಲ್ಲ ಕೂಡಾ.
ಡಿಜಿಟಲ್ ಯುಗದಲ್ಲಿ ಮಾಹಿತಿ ಬಂಗಾರ ಎನ್ನುವ ಮಾತಿದೆ. ವಿಶ್ವದಾದ್ಯಂತ ಪ್ರತಿದಿನ 30,600 ಕೋಟಿ ಇ-ಮೇಲ್‌ಗಳನ್ನು ಕಳುಹಿಸಲಾಗುತ್ತಿದೆ. ಇ-ಮೇಲ್, ಎಸ್‌ಎಂಎಸ್, ಟ್ವಿಟರ್, ಫೇಸ್‌ಬುಕ್, ಸ್ಮಾರ್ಟ್ ಫೋನ್, ಡಿಜಿಟಲ್ ಕ್ಯಾಮೆರಾ, ಸಿಸಿಟಿವಿ ಕ್ಯಾಮೆರಾ ಹೀಗೆ ವಿವಿಧ ಮೂಲಗಳಿಂದ, ವಿಶ್ವದಾದ್ಯಂತ ಪ್ರತಿದಿನ, ಪ್ರತಿಕ್ಷಣ ಅಪಾರ ಪ್ರಮಾಣದ ಮಾಹಿತಿ ಸೃಷ್ಟಿಯಾಗುತ್ತಿದೆ. ಈ ಮಾಹಿತಿ ಮಹಾಪೂರದಲ್ಲಿ ಭಾರತದ ಕೊಡುಗೆ ಪ್ರತಿವರ್ಷ ಹೆಚ್ಚಾಗುತ್ತಿದೆ.
2025ರ ಹೊತ್ತಿಗೆ ವಿಶ್ವದಾದ್ಯಂತ ಮಾಹಿತಿ ಕಳವು ಮತ್ತು ದುರ್ಬಳಕೆಯಿಂದಾಗಿ ಪ್ರತಿವರ್ಷ ₹7,72,00,000 ಕೋಟಿ ನಷ್ಟವಾಗಲಿದೆ ಎಂದು ಮಾಹಿತಿ ಸುರಕ್ಷತೆಯಲ್ಲಿ ಹೆಸರು ಮಾಡಿರುವ ಅಂತರರಾಷ್ಟ್ರೀಯ ಸಂಸ್ಥೆಯೊಂದು ನಡೆಸಿರುವ ಸಮೀಕ್ಷಾ ವರದಿಯಲ್ಲಿ ತಿಳಿಸಲಾಗಿದೆ.
ಇನ್ನು ಸುಳ್ಳು ಸುದ್ದಿ, ಆಡಿಯೊ, ವಿಡಿಯೊಗಳನ್ನು ಸೃಷ್ಟಿಸಿ, ಜನಸಾಮಾನ್ಯರಲ್ಲಿ ಆತಂಕ, ದ್ವೇಷ ಸೃಷ್ಟಿಸುವ ಮತ್ತು ಕೋಮುವಾದ, ಹಿಂಸೆಗೆ ಪ್ರಚೋದಿಸುವ ಅಪರಾಧಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಮತ್ತೊಂದು ಆತಂಕದ ವಿಷಯವಾಗಿದೆ. ಹಾಗಾದರೆ, ಇಂತಹ ಅಪರಾಧಗಳನ್ನು ಮಾಡುತ್ತಿರುವವರು ಯಾರು? ಸೈಬರ್ ಅಪರಾಧಿಗಳು, ಸೈಬರ್ ಅಪರಾಧಿಗಳ ಸಂಘಟನೆಗಳು ಮತ್ತು ಸೈಬರ್ ಭಯೋತ್ಪಾದಕರು. ಇವರಿಂದಾಗಿ, ವಿಶ್ವದಾದ್ಯಂತ ಪ್ರತಿ ಮೂರು ಕ್ಷಣಕ್ಕೆ ಒಂದು ಸೈಬರ್ ಅಪರಾಧ ಪ್ರಯತ್ನ ನಡೆಯುತ್ತಿದೆ. ಸೈಬರ್ ಭಯೋತ್ಪಾದಕರ ದಾಳಿಯಿಂದಾಗಿ ವಿದ್ಯುತ್ ಉತ್ಪಾದನೆ, ವಿತರಣೆ ವ್ಯವಸ್ಥೆಗಳು ಸ್ಥಗಿತಗೊಳ್ಳುವುದು, ಸರಕು ಸಾಗಾಣಿಕೆ ನೌಕೆಗಳು ದಾರಿ ತಪ್ಪುವುದು, ದೂರವಾಣಿ ಮತ್ತು ದೂರದರ್ಶನ ಸೇವೆ ವ್ಯತ್ಯಯವಾಗುವುದು, ಅಗತ್ಯ ವಸ್ತುಗಳ ಪೂರೈಕೆಯ ವ್ಯವಸ್ಥೆಯಲ್ಲಿ ಅಡಚಣೆಗಳಾಗುವುದು, ಹೀಗೆ ಹಲವಾರು ಘಟನೆಗಳು ವಿಶ್ವದಾದ್ಯಂತ ವರದಿಯಾಗುತ್ತಿವೆ.
ಭಾರತದ ರಾಷ್ಟ್ರೀಯ ಭದ್ರತಾ ನೀತಿಯಲ್ಲಿ ಪ್ರಜೆಗಳ ವೈಯಕ್ತಿಕ ಮಾಹಿತಿ, ವಾಣಿಜ್ಯ ಮತ್ತು ಆರ್ಥಿಕ ಮಾಹಿತಿ, ವಿಜ್ಞಾನ, ಸಂಶೋಧನೆ ಮತ್ತು ರಕ್ಷಣಾಪಡೆಗಳು, ಹೀಗೆ ವಿವಿಧ ರೀತಿಯ ಮಾಹಿತಿ ಸುರಕ್ಷತೆಗೆ ಮಹತ್ವ ನೀಡಲಾಗಿದೆ. ಸೈಬರ್ ಅಪರಾಧಗಳು ಮತ್ತು ಸೈಬರ್ ಭಯೋತ್ಪಾದನೆಯ ಪ್ರಯತ್ನಗಳನ್ನು ವಿಫಲಗೊಳಿಸಲು ಸ್ವಂತ ಪ್ರಯತ್ನದ ಜೊತೆಗೆ ಹಲವಾರು ದೇಶಗಳ ಜೊತೆ ಸಂಘಟಿತ ಪ್ರಯತ್ನವನ್ನು ಕೂಡಾ ಭಾರತ ಮಾಡುತ್ತಿದೆ.
ಮಾಹಿತಿ ಸುರಕ್ಷತೆಗೆ ಮತ್ತು ಸೈಬರ್ ಸುರಕ್ಷತೆಗೆ ಅಗತ್ಯವಾದ ಹಲವು ತಂತ್ರಜ್ಞಾನಗಳು, ಹಾರ್ಡ್‌ವೇರ್ ಮತ್ತು ತಂತ್ರಾಂಶಗಳನ್ನು ಭಾರತದಲ್ಲಿ ಅಭಿವೃದ್ಧಿ ಮಾಡುವ ಪ್ರಯತ್ನದ ಜೊತೆಗೆ ಈ ಕ್ಷೇತ್ರದಲ್ಲಿ ಹೆಸರು ಮಾಡಿರುವ ವಿದೇಶಿ ತಜ್ಞರು ಮತ್ತು ಸಂಸ್ಥೆಗಳ ನೆರವನ್ನು ಕೂಡಾ ಭಾರತ ಪಡೆಯುತ್ತಿದೆ. ವಿಶೇಷವಾಗಿ ಸೈಬರ್ ಅಪರಾಧಿಗಳು ಮತ್ತು ಭಯೋತ್ಪಾದಕರು ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸುವ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ, ಸ್ವದೇಶಿ ಸಾಮರ್ಥ್ಯ ವೃದ್ಧಿಯ ಜೊತೆಗೆ ವಿದೇಶಿ ನೆರವು ಪಡೆಯುವುದು ಭಾರತಕ್ಕೆ ಅನಿವಾರ್ಯವಾಗಿದೆ.
ಭೂಗಡಿ, ಕರಾವಳಿ ಗಡಿ ರಕ್ಷಣೆಯಂತೆ ಬಾಹ್ಯಾಕಾಶದಲ್ಲಿರುವ ಉಪಗ್ರಹಗಳ ರಕ್ಷಣೆ ಕ್ಷೇತ್ರದಲ್ಲಿ ಕೂಡಾ ವಿವಿಧ ಸುರಕ್ಷತಾ ತಂತ್ರಜ್ಞಾನಗಳು, ತಂತ್ರಾಂಶಗಳನ್ನು ಭಾರತ ಬಳಸುತ್ತಿದೆ. ಸಮುದ್ರದ ಆಳದಲ್ಲಿ ಸದ್ದಿಲ್ಲದಂತೆ ಸಂಚರಿಸುವ ಮಾನವ ರಹಿತ ನೌಕೆಗಳನ್ನು ಬಳಸಿ ಯಾವುದೇ ದೇಶದ ಮೇಲೆ ಗೂಢಚರ್ಯೆ ನಡೆಸುವ ಪ್ರಯತ್ನಗಳು ನಡೆಯುತ್ತಿವೆ ಎನ್ನುವುದನ್ನು ಇಲ್ಲಿ ಗಮನಿಸಬೇಕು.
ರಾಷ್ಟ್ರದ ಬಾಹ್ಯ ಮತ್ತು ಆಂತರಿಕ ಭದ್ರತೆಯ ದೃಷ್ಟಿಯಿಂದ ಬಳಸುವ ತಂತ್ರಜ್ಞಾನಗಳು, ತಂತ್ರಾಂಶಗಳು ಮತ್ತು ಕೆಲಸ ಮಾಡುವ ತಜ್ಞರು, ವಿಜ್ಞಾನಿಗಳ ವಿವರಗಳನ್ನು ಯಾವುದೇ ದೇಶ ಸಾರ್ವಜನಿಕವಾಗಿ ಬಹಿರಂಗಪಡಿಸುವುದಿಲ್ಲ. ಒಂದು ಸಂಸ್ಥೆಯ ತಂತ್ರಾಂಶವನ್ನು ಬಳಸಿ, ಕೋಟ್ಯಾಂತರ ಪ್ರಜೆಗಳ ವೈಯಕ್ತಿಕ ಮಾಹಿತಿ ಮತ್ತು ಡಿಜಿಟಲ್ ಮಾಹಿತಿಯನ್ನು ಪಡೆದು ಕೊಳ್ಳುವುದು ಮತ್ತು ದುರ್ಬಳಕೆ ಮಾಡಿಕೊಳ್ಳುವುದು ಸಾಧ್ಯವಾಗಿದ್ದರೆ, ಅನೇಕ ದೇಶಗಳು ಈ ಉದ್ದೇಶಕ್ಕಾಗಿ ಇಂತಹ ತಂತ್ರಾಂಶವನ್ನು ಬಳಸುತ್ತಿದ್ದವು. ವೈರಿ ದೇಶದ ಗೂಢಚಾರರು, ಅಪರಾಧಿಗಳು ಮತ್ತು ತೀವ್ರವಾದಿಗಳ ಮೇಲೆ ನಿಗಾ ಇಡಲು ಕೂಡಾ ಒಂದಲ್ಲ ಹಲವಾರು ತಂತ್ರಾಂಶಗಳನ್ನು ಮತ್ತು ತಂತ್ರಜ್ಞಾನಗಳನ್ನು ಬಳಸಬೇಕಾಗುತ್ತದೆ.
ಇನ್ನು ಸರ್ಕಾರಕ್ಕೆ ಮಾತ್ರ ತಮ್ಮ ತಂತ್ರಾಂಶ ಮತ್ತು ತಂತ್ರಜ್ಞಾನವನ್ನು ಬಳಸಲು ಅನುಮತಿ ನೀಡುತ್ತೇವೆ ಎನ್ನುವ ಸಂಸ್ಥೆಗಳು, ಬಳಸಲು ಪರವಾನಗಿ ಮಾತ್ರ ನೀಡುತ್ತವೆ. ಸರ್ಕಾರದ ಅಧಿಕಾರಿಗಳಿಗೆ ಇಂತಹ ತಂತ್ರಜ್ಞಾನ ಅಥವಾ ತಂತ್ರಾಂಶದಲ್ಲಿ ಸಣ್ಣ ಬದಲಾವಣೆಯನ್ನು ಮಾಡಲು ಅವಕಾಶವಿರುವುದಿಲ್ಲ; ಒಂದು ವೇಳೆ ಈ ತಂತ್ರಾಂಶ ಅಥವಾ ತಂತ್ರಜ್ಞಾನ ಬಳಕೆಯನ್ನು ಮೂಲ ಉದ್ದೇಶದ ಹೊರತಾಗಿ ಬೇರೆ ಉದ್ದೇಶಗಳಿಗಾಗಿ ಬಳಸಲಾಗುತ್ತಿದೆ ಎಂದು ಗೊತ್ತಾದಾಗ, ಬಳಸಲು ನೀಡಿರುವ ಪರವಾನಗಿ ರದ್ದು ಮಾಡುವುದರ ಜೊತೆಗೆ ಸರ್ಕಾರದಿಂದ ಸಾವಿರಾರು ಕೋಟಿ ಡಾಲರ್ ಪರಿಹಾರವನ್ನು ಕೂಡಾ ಇಂತಹ ಸಂಸ್ಥೆಗಳು ಕೇಳಬಹುದು.
ಮಾಹಿತಿ ಸುರಕ್ಷತೆ, ಸೈಬರ್ ಸುರಕ್ಷತೆ ಮತ್ತು ಸೈಬರ್ ಭಯೋತ್ಪಾದನೆ ವಿರುದ್ಧ ಹೋರಾಟದಲ್ಲಿ ಜನಸಾಮಾನ್ಯರು ಮಹತ್ವದ ಪಾತ್ರ ವಹಿಸಬೇಕಾಗಿದೆ. ಉದಾಹರಣೆಗೆ, ಸಾವಿರಾರು ರೂಪಾಯಿ ಕೊಟ್ಟು ಖರೀದಿಸುವ ಮೊಬೈಲ್ ಫೋನ್ ಹೇಗೆ ಸುರಕ್ಷಿತವಾಗಿ ಬಳಸಬೇಕು ಎಂದು ಹೆಚ್ಚು ಜನರಿಗೆ ಗೊತ್ತಿರುವುದಿಲ್ಲ. ಈಗಿನ ವರ್ಕ್ ಫ್ರಮ್ ಹೋಮ್, ಲರ್ನ್ ಫ್ರಮ್ ಹೋಮ್ ಪರಿಸ್ಥಿತಿಯಲ್ಲಿ ಮನೆಯಲ್ಲಿ ಬಳಸುವ ಇಂಟರ್‌ನೆಟ್, ಕಂಪ್ಯೂಟರ್, ಮೊಬೈಲ್ ಫೋನ್‌ಗಳ ಸುರಕ್ಷಿತ ಬಳಕೆ ಕುರಿತು ಹೆಚ್ಚು ಜಾಗೃತಿ ಅಗತ್ಯವಿದೆ. ಸಾಮಾಜಿಕ ಜಾಲತಾಣಗಳಲ್ಲಿ ನಮ್ಮ ಹೆಸರಿನಲ್ಲಿ ನಕಲಿ ಖಾತೆ ತೆರೆದು ವಂಚಿಸುತ್ತಿದ್ದಾರೆ ಎಂದು ಗಾಬರಿಯಾಗುವ ನಾವು, ಈ ಕುರಿತು ಸೈಬರ್ ಪೋಲಿಸರಿಗೆ ದೂರು ನೀಡುವುದು ಕಡಿಮೆ.
ಸೈಬರ್ ಭಯೋತ್ಪಾದನೆ, ಮಾಹಿತಿ ತಂತ್ರಜ್ಞಾನ ಪರಿಣತರನ್ನು ಒಳಗೊಂಡ ಉಗ್ರವಾದಿ ಸಂಘಟನೆಗಳು ಮತ್ತು ಅಪರಾಧಿ ಮಾಫಿಯಾದ ಅಪಾಯವನ್ನು ಎದುರಿಸಲು ಈಗ ಭಾರತದಲ್ಲಿರುವ ಸೈಬರ್ ಕಾನೂನುಗಳ ಪರಿಷ್ಕರಣೆ ಅಗತ್ಯ. ಹೀಗೆ ಮಾಡುವಾಗ, ಜನಸಾಮಾನ್ಯರ ವೈಯಕ್ತಿಕ ಮಾಹಿತಿ ಸುರಕ್ಷತೆ ಕುರಿತು ಇರುವ ಆತಂಕಗಳಿಗೂ ಪರಿಹಾರ ನೀಡಬಹುದು. ಮಾಹಿತಿ ಸುರಕ್ಷತೆ, ಸೈಬರ್ ಸುರಕ್ಷತೆಯ ವಿಷಯದಲ್ಲಿ ಜನಸಾಮಾನ್ಯರು ಕೂಡಾ ಸರ್ಕಾರದ ಜೊತೆಯಲ್ಲಿ ಕೈಜೋಡಿಸುವುದು ಅತ್ಯಗತ್ಯವಿದೆ.
ಲೇಖಕ: ಅಂತರರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಮತ್ತು ಸೈಬರ್ ಸುರಕ್ಷತೆ ತಜ್ಞ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.