ಅಡುಗೆ ಮನೆಯ ಗ್ಯಾಸ್‌ಲೈಟರ್‌ನಿಂದ ಹಿಡಿದು ಉಪಗ್ರಹ ಹಾರಿಸುವ ತಂತ್ರಜ್ಞಾನಗಳೆಲ್ಲ ವಿಜ್ಞಾನದ ತತ್ವಗಳ ಮೇಲೆಯೇ ರೂಪುಗೊಂಡಿವೆ. ಆದರೆ, ಅವುಗಳನ್ನು ಬಳಸುವ ಮೂಲಕ ವಿಜ್ಞಾನದಿಂದ ಬಂದ ಪ್ರಯೋಜನಗಳನ್ನು ಕಣ್ಮುಚ್ಚಿ ಸ್ವೀಕರಿಸುವ ಜನ, ತಮ್ಮ ಜೀವನದಲ್ಲಿ ಅದರ ಪಾತ್ರ, ಪ್ರಾಮುಖ್ಯ ಮತ್ತು ಅನಿವಾರ್ಯದ ಬಗ್ಗೆ ತಲೆಕೆಡಿಸಿಕೊಳ್ಳುವುದೇ ಇಲ್ಲ. ಏಕೆ ಹೀಗೆ ಎಂದು ಕೇಳಿದಾಗ ವಿಜ್ಞಾನಿ ರಾಜಾರಾಮಣ್ಣ, ‘ಅದೇನು ರಾಕೆಟ್ ಸೈನ್ಸ್ ಅಲ್ಲ. ಮನೆಗಳಲ್ಲಿ ಉಪಯೋಗಿಸುವ ಇಸ್ತ್ರಿ ಪೆಟ್ಟಿಗೆ, ಟಿ.ವಿ. ರಿಮೋಟ್, ಲೈಟ್ ಸ್ವಿಚ್‌ಗಳು ಹೇಗೆ ಕೆಲಸ ಮಾಡುತ್ತವೆ ಎಂಬುದು ಗೊತ್ತಿರದ ದೊಡ್ಡ ಸಂಖ್ಯೆಯ ಜನ ಪ್ರತಿ ದೇಶದಲ್ಲೂ ಇದ್ದಾರೆ. ಅವರಿಗೆಲ್ಲ ಅದು ಗೊತ್ತಾದ ದಿನ ವಿಜ್ಞಾನ ಜೀವಿಸುತ್ತದೆ, ಇಲ್ಲದಿದ್ದರೆ ಜಡವಾಗುತ್ತದೆ’ ಎಂದಿದ್ದರು.
ಇದೇ ಪ್ರಶ್ನೆಗೆ ಉತ್ತರ ನೀಡಿದ್ದ ಐನ್‌ಸ್ಟೀನ್, ವಿಜ್ಞಾನದ ಅನುಕೂಲ ಪಡೆದುಕೊಂಡರೆ ಸಾಲದು, ಅದರ ಸಾರವನ್ನು ಸವಿಯಬೇಕು. ರುಚಿಯಾದ ಖಾದ್ಯವನ್ನು ಸೇವಿಸುವಾಗ ರುಚಿಗೆ ಕಾರಣವಾದ ಅಂಶಗಳನ್ನು ಹೊಗಳುತ್ತಾ ವಿಮರ್ಶಿಸುತ್ತಾ ರುಚಿಯನ್ನು ಆಸ್ವಾದಿಸುತ್ತೇವಲ್ಲವೇ? ರುಚಿಯಾಗಿ ಇರದಿದ್ದರೆ ರುಚಿಯಾಗಿಲ್ಲ ಎಂದು ಸಿಟ್ಟು ತೋರಿಸುತ್ತೇವೆ, ಸರಿಮಾಡಲು ಹೇಳುತ್ತೇವೆ. ಹಾಗೆಯೇ ವಿಜ್ಞಾನ– ತಂತ್ರಜ್ಞಾನದ ಕೆಲಸಗಳನ್ನು ಜನ ಚರ್ಚಿಸಿ ಆನಂದಿಸಬೇಕು, ಅನನುಕೂಲಗಳಾದಾಗ ಟೀಕಿಸಬೇಕು. ವಿಜ್ಞಾನದ ವಿಷಯಗಳು ರಾಜಕೀಯ, ಆಟ, ಸಿನಿಮಾ ಗಾಸಿಪ್‌ಗಳಂತೆ ಎಲ್ಲೆಡೆ ಚರ್ಚೆಗೆ ಒಳಪಡಬೇಕು’ ಎಂದಿದ್ದರು.
ಈ ಚಿಂತನೆಗಳನ್ನು ಕಾರ್ಯರೂಪಕ್ಕೆ ತರುವ ಅಗತ್ಯದ ಬಗ್ಗೆ 25 ವರ್ಷಗಳ ಹಿಂದೆ ಹಂಗೆರಿಯ ಬುಡಾಪೆಸ್ಟ್
ನಲ್ಲಿ ಜರುಗಿದ ವಿಶ್ವ ವಿಜ್ಞಾನ ಸಮ್ಮೇಳನದಲ್ಲಿ ಚರ್ಚಿಸಲಾಯಿತು. ವಿಜ್ಞಾನದ ಕೆಲಸಗಳನ್ನು ಜನರ ಬಳಿಗೆ ಕೊಂಡೊಯ್ಯಲು ಮತ್ತು ವಿಜ್ಞಾನದಿಂದ ವಿಶ್ವಶಾಂತಿ ಹಾಗೂ ಅಭಿವೃದ್ಧಿಯನ್ನು ಸಾಧಿಸುತ್ತೇವೆಂದು ಪಣ ತೊಡಲು ಪ್ರತಿವರ್ಷ ನವೆಂಬರ್ 10ರಂದು ವಿಶ್ವ ವಿಜ್ಞಾನ ದಿನವನ್ನು ಆಚರಿಸಬೇಕೆಂದು ನಿರ್ಧರಿಸಲಾಯಿತು. ವೈಜ್ಞಾನಿಕ ಸಂಶೋಧನೆಗಳ ಗುರಿಗಳ ಬಗ್ಗೆ ಜನರಿಗೆ ತಿಳಿದಿರಬೇಕು ಮತ್ತು ಅನ್ವೇಷಣೆಯೊಂದು ತಪ್ಪಾಗಿ ಬಳಕೆಯಾದಲ್ಲಿ ಅದನ್ನು ವಿರೋಧಿಸಲು ಜನ ಹಿಂಜರಿಯಬಾರದು ಎಂಬ ಆಶಯದೊಂದಿಗೆ ದಿನಾಚರಣೆಯನ್ನು ಪ್ರಾರಂಭಿಸಲಾಯಿತು.
ವಿಜ್ಞಾನ– ತಂತ್ರಜ್ಞಾನದ ಮಹತ್ವದ ಫಲಗಳಾದ ಯಾಂತ್ರಿಕ ಬುದ್ಧಿಮತ್ತೆ (ಯಾಂಬು), ಕ್ವಾಂಟಮ್ ಕಂಪ್ಯೂಟರ್, ಹೈಪರ್ ಲೂಪ್ ರೈಲು, ಚಾಲಕನಿಲ್ಲದ ಕಾರು, ಖಾಸಗಿ ಬಾಹ್ಯಾಕಾಶ ಪ್ರವಾಸ, ಹಾರಿದ ಜಾಗಕ್ಕೆ ಹಿಂತಿರುಗಿಬರಬಲ್ಲ ರಾಕೆಟ್ ಲಾಂಚರ್‌ಗಳು, ಸ್ಯಾಟಲೈಟ್ ಇಂಟರ್ನೆಟ್, ಐ.ಒ.ಟಿ. (ಇಂಟರ್ನೆಟ್ ಆಫ್ ಥಿಂಗ್ಸ್), ಹೆಲಿಟ್ಯಾಕ್ಸಿ, ಹೊಸ ಹೊಸ ಲಸಿಕೆ, ಔಷಧ, ಬಗೆ ಬಗೆಯ ವಸ್ತ್ರ, ನ್ಯಾನೊ ಮತ್ತು ತ್ರೀಡಿ ಪ್ರಿಂಟೆಡ್ ಸಾಧನಗಳು, ಆಹಾರ, ತರಕಾರಿಗಳು ಇಡೀ ವಿಶ್ವವನ್ನೇ ತನ್ನ ತೆಕ್ಕೆಯಲ್ಲಿ ಇರಿಸಿಕೊಂಡಿವೆ.
ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಾಗುವ ಕೆಲಸಗಳು ಯಾವುದೇ ದೇಶದ ದೀರ್ಘಕಾಲೀನ ಬೆಳವಣಿಗೆ ಮತ್ತು ಕ್ರಿಯಾಶೀಲತೆಯನ್ನು ಉದ್ದೀಪಿಸಿ, ಆ ದೇಶವನ್ನು ಒಳಗಿನಿಂದ ಗಟ್ಟಿಗೊಳಿಸುತ್ತವೆ. ಆದರೆ ಅಣುಬಾಂಬಿನ ವಿಷಯದಲ್ಲಿ ಆದದ್ದೇ ಬೇರೆ. ‘ಹಿಟ್ಲರ್‌ನ ನಾಜಿ ಗುಂಪಿನ ವಿಜ್ಞಾನಿಗಳು ಪರಮಾಣು ಬಾಂಬ್ ತಯಾರಿಸುವಲ್ಲಿ ಯಶಸ್ಸು ಗಳಿಸುವುದರಲ್ಲಿದ್ದಾರೆ, ನೀವು ಸಹ ಅದರ ತಯಾರಿಕೆಗೆ ಗಮನಹರಿಸಬೇಕು’
ಎಂದು ವಿಜ್ಞಾನಿ ಐನ್‌ಸ್ಟೀನ್ ಸಹವಿಜ್ಞಾನಿ ಲಿಯೊ ಜಿರಾಲ್ಡ್ ಅವರೊಂದಿಗೆ ಚರ್ಚಿಸಿ, ಅಮೆರಿಕದ ಅಧ್ಯಕ್ಷ ರೂಸ್‌ವೆಲ್ಟ್ ಅವರಿಗೆ 1939ರಲ್ಲಿ ಪತ್ರ ಬರೆದರು. ಅಧ್ಯಕ್ಷ ಎಚ್ಚೆತ್ತುಕೊಂಡರು. ‘ಮ್ಯಾನ್‌ಹಟನ್’ ಯೋಜನೆಗೆ ಚಾಲನೆ ದೊರೆಯಿತು. ಬಾಂಬ್ ತಯಾರಿಸಲಾಯಿತು. ಆರು ವರ್ಷಗಳ ನಂತರ ಜಪಾನ್‌ನ ನಗರಗಳ ಮೇಲೆ ಬಾಂಬ್ ಹಾಕಿ, ಆ ನಗರಗಳನ್ನು ಅಕ್ಷರಶಃ ನೆಲಸಮಗೊಳಿಸಲಾಯಿತು. 2 ಲಕ್ಷಕ್ಕೂ ಹೆಚ್ಚು ಜನರ ಪ್ರಾಣಹರಣವಾಯಿತು. ಕಾಯಬೇಕಾಗಿದ್ದ ವಿಜ್ಞಾನವು ಕೊಲ್ಲುವ ಕೆಲಸ ಮಾಡಿ ವಿನಾಶದ ಮುನ್ನುಡಿ ಬರೆದಿತ್ತು. ಇತ್ತೀಚೆಗೆ ಪ್ರವರ್ಧಮಾನಕ್ಕೆ ಬರುತ್ತಿರುವ ಯಾಂಬು ತನ್ನ ತರಹೇವಾರಿ ಕೆಲಸಗಳಿಂದ ಅಣುಬಾಂಬಿಗಿಂತ ದೊಡ್ಡ ತಲ್ಲಣ ಸೃಷ್ಟಿಸಿದೆ. ಸ್ವಯಂ ಕಲಿಕೆಯ ಪಟ್ಟುಗಳನ್ನು ವ್ಯವಸ್ಥಿತ
ವಾಗಿ ಕಲಿಯುತ್ತಿರುವ ಯಂತ್ರಗಳು ಭಾವನಾತ್ಮಕ ಆಯಾಮ ಪಡೆದರೆ ಮನುಕುಲದ ಅಸ್ತಿತ್ವವೇ ಪ್ರಶ್ನೆಗೆ ಒಳಗಾಗಬಹುದು ಎಂಬ ದೊಡ್ಡ ಆತಂಕ ಎದುರಾಗಿದೆ.
ವಿಜ್ಞಾನ ವಿಕಾಸಗೊಂಡಂತೆಲ್ಲ ಅದರ ಸಿದ್ಧಾಂತಗಳು ಆಯಾ ಕಾಲದ ಗುಣಧರ್ಮ ಮತ್ತು ವಾಸ್ತವತೆಗೆ ಸಂಬಂಧಿಸಿದಂತೆ ಪರೀಕ್ಷೆ ಎದುರಿಸುತ್ತವೆ. ತಂತ್ರಜ್ಞಾನ ಕಾಲಿಟ್ಟ ಜಾಗದಲ್ಲೆಲ್ಲ ದೌರ್ಬಲ್ಯಕ್ಕೆ, ತಾರತಮ್ಯಕ್ಕೆ ಸ್ಥಳವೇ ಇಲ್ಲ. ಆಗ ಸಬಲರು, ದುರ್ಬಲರು ಎಂಬ ವ್ಯತ್ಯಾಸ ಇರುವುದಿಲ್ಲ. ಉದಾಹರಣೆಗೆ, ಹಿಂದೆಲ್ಲಾ ವಿಜ್ಞಾನಕ್ಕಾಗಿ ದುಡಿದ, ಸಂಶೋಧನೆಗೆ ತಲೆಕೆಡಿಸಿಕೊಂಡ, ಇಂತಿಷ್ಟು ವಿದ್ಯಾಭ್ಯಾಸ ಮಾಡಿ ಕೌಶಲ ಉಳ್ಳವರು, ತರಬೇತಿ ಪಡೆದವರು ಕೃತಕ ಉಪಗ್ರಹ ನೌಕೆಗಳಲ್ಲಿ ಬಾಹ್ಯಾಕಾಶಕ್ಕೆ ಪ್ರಯಾಣಿಸಬಹುದಿತ್ತು. ಈಗ ಹಣ ಎಲ್ಲ ಗೆರೆಗಳನ್ನು ಅಳಿಸಿಹಾಕಿ ಸಾಮಾನ್ಯ, ಅಸಾಮಾನ್ಯರಿಬ್ಬರನ್ನೂ ಒಟ್ಟಿಗೆ ಕೂಡಿಸಿ, ರಾಕೆಟ್ ಚಿಮ್ಮಿಸಿ, ಎಲ್ಲರನ್ನೂ ಮೇಲೆ ಕಳಿಸಿ, ಸಮಾನರು ಎನ್ನುತ್ತದೆ.
ಪ್ರಕೃತಿಯ ರಹಸ್ಯಗಳನ್ನು ತೆರೆದಿಡುವಲ್ಲಿ ವಿಜ್ಞಾನದ ಪಾತ್ರ ಬಹಳ ದೊಡ್ಡದು ಮತ್ತು ಜನಜನಿತ. ಹಿಂದಿನ ನಾಲ್ಕುನೂರು ವರ್ಷಗಳಲ್ಲಿ ನಮ್ಮ ಭೌತಿಕ ಜಗತ್ತಿನ ಕುರಿತು ಬೃಹತ್ ಜ್ಞಾನ ಭಂಡಾರವನ್ನೇ ವಿಜ್ಞಾನ ನಮಗೆ ನೀಡಿದೆ. ಆರ್ಥಿಕತೆಯ ಬೆನ್ನೆಲುಬಾಗಿಯೂ ನಿಂತು ಕೋಟ್ಯಂತರ ಜನರ ಮನಸ್ಸಿನ ಮತ್ತು ಹೊಟ್ಟೆಯ ಹಸಿವು ನೀಗಿಸುತ್ತಿದೆ. ಆದರೂ ಹಲವು ಕಾರಣಗಳಿಗೆ ವಿಜ್ಞಾನವು ಜನರಿಂದ ದೂರವೇ ಉಳಿದಿದೆ. ವಿಜ್ಞಾನದ ಬಗ್ಗೆ ಆಸಕ್ತಿ ಹೊಂದಿರುವ ಜನ ಚದುರಿದಂತೆ ಇರುವುದು ಮತ್ತು ಸಂವಹನರಹಿತರಾಗಿ ಇರುವುದು, ವಿಜ್ಞಾನಿಗಳು ಸಾಮಾನ್ಯ ಜನರಿಂದ ದೂರ ಇರುವುದು, ಸಂಕಷ್ಟಗಳ ಸಮಯದಲ್ಲಿ ಜನರ ಅನುಮಾನ ಮತ್ತು ಭಯವನ್ನು ವೈಜ್ಞಾನಿಕವಾಗಿ ದೂರ ಮಾಡದಿರುವುದು, ಜನಪ್ರಿಯ ಮಾಧ್ಯಮಗಳು ವಿಜ್ಞಾನಕ್ಕೆ ಪ್ರಾಮುಖ್ಯ ನೀಡದಿರುವುದು, ವಿಜ್ಞಾನಿಯ ಕೆಲಸ ಹಾಗೂ ದೈನಂದಿನ ಜೀವನ ಎರಡೂ ತಾಳೆ ಆಗದಿರುವಂತಹ ಕಾರಣಗಳು ಇದರ ಹಿಂದಿವೆ.
ವೈಜ್ಞಾನಿಕ ಕೆಲಸಗಳು ಸಾಮಾಜಿಕ ಕೆಲಸಗಳೆ. ವಿಜ್ಞಾನದ ಬಳಕೆಯಿಂದ ಜನ ಸಂತೋಷಪಟ್ಟಾಗ ಅದರ ಶಕ್ತಿಯ ಅರಿವಾಗುತ್ತದೆ. ನಂತರ ಅದು ಜನರ ಚಿಂತನಾ ಕ್ರಮವನ್ನು ಸರಿಪಡಿಸಿ ಜೀವನದ ಬಗೆಗಿನ ದೃಷ್ಟಿಕೋನವನ್ನು ವೈಜ್ಞಾನಿಕ ನೆಲೆಯಲ್ಲಿ ಪುನರ್ ರೂಪಿಸುತ್ತದೆ. ಹಾಗೆ ವಿಜ್ಞಾನದಲ್ಲಿ ಉತ್ತರವಿದೆ ಎಂಬ ಭರವಸೆ ನೀಡಿ, ವಿಜ್ಞಾನವನ್ನು ಕಲಿಯಲು, ಪ್ರೀತಿಸಲು, ಬಳಸಲು ಪ್ರೇರೇಪಿಸುತ್ತದೆ. ಪ್ರಶ್ನಿಸುವ ಗುಣವನ್ನು ಬೆಳೆಸುತ್ತದೆ. ಜ್ಞಾನೋದಯವನ್ನು ಉಂಟುಮಾಡುತ್ತದೆ. ವರ್ತನೆಗಳನ್ನು ಸುಧಾರಿಸುತ್ತದೆ. ವೈಜ್ಞಾನಿಕ ಸಂಶೋಧನೆಗಳಿಗೆ ಬೆಂಬಲ ನೀಡುವಂತೆ ಜನರ ಮನವೊಲಿಸುತ್ತದೆ. ಸ್ಪರ್ಧಾ ಮನೋಭಾವವನ್ನು ಉದ್ದೀಪಿಸಿ ಜನಸಮುದಾಯವನ್ನು ಸದಾ ಮುಖ್ಯವಾಹಿನಿಯಲ್ಲಿ ಇರಿಸುತ್ತದೆ.
ವೈಜ್ಞಾನಿಕ ಪ್ರಗತಿಯು ಎರಡು ಅಲಗಿನ ಕತ್ತಿಯಂತೆ. ವಿಜ್ಞಾನದ ಪ್ರಯೋಜನಗಳನ್ನು ಗುರುತಿಸುವಾಗ ಅವು ಸಮುದಾಯದ ಸಮಸ್ಯೆಗಳಿಗೆ ಪರಿಹಾರ ನೀಡುತ್ತವೆಯೇ ಎಂದು ಲೆಕ್ಕ ಹಾಕಿ ಕೆಲಸ ಮಾಡಬೇಕು ಎಂಬುದು ಈಗಿನ ಸಮಾಜ ಚಿಂತಕರ ವಾದ. ವಿಜ್ಞಾನವನ್ನು ಸಂಪ್ರದಾಯದ ಪಂಜರದಲ್ಲಿ ಕೂಡಿಹಾಕಿದ್ದೇವೆ ಎಂಬ ಆರೋಪವು ನಮ್ಮ ಮೇಲಿದೆ. ಜನರು ವಿಜ್ಞಾನದ ಕಾಣಿಕೆಗಳನ್ನು ಸುಲಭವಾಗಿ ನಂಬುವುದಿಲ್ಲ. ಅದು ಗೆಲಿಲಿಯೊ, ನ್ಯೂಟನ್‌ನ ಕಾಲದಿಂದಲೂ ರುಜುವಾತಾಗಿದೆ. ಧಾರ್ಮಿಕ ನಂಬಿಕೆಗಳನ್ನು ಮೀರಿದ ಸತ್ಯವನ್ನು ಹೇಳಿದ ಯಾವೊಬ್ಬ ವಿಜ್ಞಾನಿಯೂ ನೆಮ್ಮದಿಯಾಗಿ ಬದುಕಲಿಲ್ಲ. ಯಾವಾಗ ವಿಜ್ಞಾನಿಗಳು ಹೇಳಿದಂತೆ, ತೋರಿಸಿದಂತೆ ಪ್ರಕೃತಿಯಲ್ಲಿ ಕಾಣಿಸುತ್ತಿತ್ತೋ ಆಗ ಜನ ಅವರನ್ನು ನಂಬಲು ಶುರು ಮಾಡಿದರು. ವಿಜ್ಞಾನದ ಹೊಸತೆಲ್ಲ ತಂತ್ರಜ್ಞಾನವಾಗಿ ಮನೆ ಮನೆಗೆ ಬರುವುದರಿಂದ ಅದರ ಬಳಕೆಯು ಜನರ ಚಿಂತನೆ, ನಡವಳಿಕೆ, ಹವ್ಯಾಸ, ವರ್ತನೆ ಮತ್ತು ನಂಬಿಕೆಗಳನ್ನು ಬಹುಬೇಗ ಬದಲಾಯಿಸುತ್ತದೆ. ಹಾಗೆಂದ ಮಾತ್ರಕ್ಕೆ ಅವರೆಲ್ಲ ಅದನ್ನು ಒಪ್ಪಿಕೊಂಡಿದ್ದಾರೆ ಎಂದೇನೂ ಅಲ್ಲ. ಭೂಮಿಯ ಬಿಸಿ ಏರುವುದನ್ನು ತಡೆಯಲು, ಬರಗಾಲ, ಪ್ರವಾಹ ನಿಯಂತ್ರಿಸಲು, ರೋಗ ವಾಸಿಮಾಡಲು, ಬೆಳೆ ಇಳುವರಿ ಹೆಚ್ಚಿಸಲು, ಜನರ ಹಸಿವು ನೀಗಿಸಲು ವಿಜ್ಞಾನ ಬೇಕೇ ಬೇಕು. ಸುಸ್ಥಿರ ಅಭಿವೃದ್ಧಿ ಗುರಿ ಸಾಧನೆಗೆ ಅದು ಸೋಪಾನವಾಗಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.