ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ ಬಂದಿರುವುದೇ ಬರಗಾಲ ಮತ್ತು ಗ್ರಾಮೀಣರ ನಿರುದ್ಯೋಗದ ಸಮಸ್ಯೆಗಳನ್ನು ನೀಗಲು. ಹಸಿರು ಸಂಪನ್ಮೂಲವನ್ನು ಸೃಷ್ಟಿ ಮಾಡುವ, ತನ್ಮೂಲಕ ಹಳ್ಳಿಗಳಿಂದ ಜನರು ಉದ್ಯೋಗ ಹುಡುಕಿ ವಲಸೆ ಹೋಗದಂತೆ ತಡೆಯುವ ಗುರಿ ಇಟ್ಟುಕೊಂಡು ಜಾರಿಯಾಗಿರುವ ಉದ್ಯೋಗ ಖಾತರಿಯು ಸಂಘಟನೆಯಾಗಿರುವಲ್ಲೆಲ್ಲ ಜನರಿಗೆ ಉದ್ಯೋಗ ಕೊಟ್ಟಿದೆ, ಸಾಕಷ್ಟು ಗ್ರಾಮೀಣ ಸಂಪನ್ಮೂಲವನ್ನೂ ಸೃಷ್ಟಿ ಮಾಡಿದೆ.
ಆದರೇನು, ಮಳೆಯ ಅನಿಶ್ಚಿತತೆ, ಬೆಳೆಗೆ ಬೇಕಾದ ಭಾರಿ ಒಳಸುರಿಗಳ ಕಾರಣದಿಂದಾಗಿ ಗ್ರಾಮಗಳಲ್ಲಿನ ಜನರು ತಮ್ಮ ಜಮೀನನ್ನು ಬಿಟ್ಟು ವಲಸೆ ಹೋಗುವುದು ತಪ್ಪುತ್ತಿಲ್ಲ. ಎಕರೆ ಎಕರೆಗಟ್ಟಲೆ ಭೂಮಿ ಖಾಲಿ ಬಿದ್ದಿದೆ. ಹೊರಗಡೆಯಿಂದ ದುಡಿದು ತಂದದ್ದನ್ನು ಬೀಜ, ಗೊಬ್ಬರ, ಕಳೆನಾಶಕ, ಕೀಟನಾಶಕಗಳಿಗೇ ಹಾಕಿದರೂ ಬೆಳೆ ಬಂದೀತೆಂಬ ಧೈರ್ಯ ಇಲ್ಲ. ಹತಾಶರಾಗಿರುವ ಜನ ತಮ್ಮ ಹೊಲದತ್ತ ತಿರುಗಿ ನೋಡುವುದಿಲ್ಲ. ನೋಡುವವರಿಲ್ಲದೆ, ಸಲಹುವವರಿಲ್ಲದೆ ಭೂಮಿ ಬೀಳಾಗುತ್ತಿದೆ.
ಇದೊಂದು ಕಳವಳಕಾರಿ ಅಂಶವಾದರೆ, ದುಡ್ಡುಳ್ಳ ರೈತರು ತಮ್ಮ ಹೊಲಗಳ ಕಳೆ ನಿವಾರಣೆಗೆ ಗ್ಲೈಫೋಸೇಟ್ ಎಂಬ ಕಳೆನಾಶಕವನ್ನು ಸಿಂಪಡಿಸಿ ಕಳೆಯ ನಿವಾರಣೆ ಮಾಡುತ್ತಿರುವುದು ಇನ್ನೊಂದು ಅಘಾತಕಾರಿ ವಿಷಯ. ರಸ್ತೆ ಇಕ್ಕೆಲಗಳಲ್ಲಿ, ಹೊಲದ ಬದುಗಳಲ್ಲಿ, ಶಾಲೆ ಮೈದಾನಗಳಲ್ಲಿ ಭೂಮಿ ಸುಟ್ಟಂತೆ ಗೋಚರವಾಗುತ್ತದೆ. ಹಾವು, ಕಪ್ಪೆಗಳು ಕಣ್ಣಿಗೆ ಕಾಣಿಸುತ್ತಿಲ್ಲ. ಇನ್ನು ಕಣ್ಣಿಗೆ ಕಾಣದ ಜೀವಿಗಳ ಕತೆ ಏನು? ಕಬ್ಬಿನ ಗದ್ದೆಯಲ್ಲಿ ಮೇದು ಬಂದ ಎಮ್ಮೆ ಸಂಜೆ ವಿಲವಿಲನೆ ಒದ್ದಾಡಿ ಪ್ರಾಣ ಬಿಟ್ಟಿದ್ದು ನೋಡಿದರೆ ಅದೆಂಥ ಘೋರ ವಿಷವನ್ನು ಹುಲ್ಲಿನ ಮೇಲೆ ಸಿಂಪಡಿಸಿರಬಹುದೆಂದು ಅಂದಾಜಾಗುತ್ತದೆ. ಒಂದು ಮಳೆಬಂತೆಂದರೆ ಈ ವಿಷ ಭೂಮಿಯೊಳಗೆ ಇಂಗುತ್ತದೆ, ಜೋರುಮಳೆ ಬಂತೆಂದರೆ ಹಳ್ಳ-ಕೊಳ್ಳಗಳಲ್ಲಿ, ಸ್ಥಳೀಯ ಕೆರೆಗಳಲ್ಲಿ ಎಲ್ಲ ಕಡೆ ನೀರು ಸಂಪೂರ್ಣ ವಿಷಮಯವಾಗಲಿದೆ.
ವಿಶ್ವ ಆರೋಗ್ಯ ಸಂಸ್ಥೆಯೇ ಹೇಳಿರುವಂತೆ ಕ್ಯಾನ್ಸರ್‌ಕಾರಕವಾದ ಈ ಕಳೆನಾಶಕದ ಮೇಲೆ ಜಗತ್ತಿನಾದ್ಯಂತ ಸಾವಿರಾರು ಮೊಕದ್ದಮೆಗಳಿವೆ. ಸರಿಯಾದ ಮಾಹಿತಿ ಇಲ್ಲದ ರೈತರು ಮುಂದಾಲೋಚನೆ ಇಲ್ಲದೆ ‘ರೌಂಡ್‍ಅಪ್’ ಕಳೆನಾಶಕವನ್ನು ಎಲ್ಲೆಂದರಲ್ಲಿ ಸಿಂಪಡಿಸುತ್ತಿದ್ದಾರೆ. ಕೂಲಿಯ ಖರ್ಚು ಈ ಕಳೆನಾಶಕ ಖರೀದಿಯ ಖರ್ಚಿಗಿಂತ ಹೆಚ್ಚು ಎಂದು ಅವರು ಕೊಡುವ ಕಾರಣ. ರೈತರಷ್ಟೇ ಅಲ್ಲ, ರೈಲ್ವೆಯವರು ತಮ್ಮ ಟ್ರಾಕ್ ಅನ್ನು ಸ್ವಚ್ಛಗೊಳಿಸಲು, ಕೆರೆ–ಕುಂಟೆ– ಪಾರ್ಕುಗಳ ಆಜೂಬಾಜು ಬೆಳೆದಿರುವ ಸಸ್ಯರಾಶಿಗಳನ್ನು ನಿವಾರಿಸಲು ಸುಲಭವಾಗಿ ಕೈಗೆಟಕುತ್ತಿರುವ ಆಯುಧವೇ ಬಾಯರ್ ಕಂಪನಿಯ ‘ರೌಂಡ್‍ಅಪ್’. ಕೆಲವು ದೇಶಗಳಲ್ಲಂತೂ ಸುಗ್ಗಿಗೆ ಮೊದಲು ಗಿಡಗಳನ್ನು ನಾಶ ಮಾಡಲು ಕೂಡ ಇದನ್ನು ಬಳಸುತ್ತಾರೆಂದರೆ ಯಾವ ಪ್ರಮಾಣದಲ್ಲಿ ಈ ಕಳೆನಾಶಕವು ಜನಪ್ರಿಯವಾಗಿದೆ ಎಂಬುದನ್ನು ಊಹಿಸಬಹುದು.
ಮೊನ್ಸಾಂಟೊ ಗ್ಲೈಫೋಸೇಟ್ ರೌಂಡ್‍ಅಪ್ ಕಳೆನಾಶಕದ ಮೂಲ ಉತ್ಪಾದಕ. ಅಮೆರಿಕದಲ್ಲಿ ಪರಿಸರ ರಕ್ಷಣಾ ಸಂಸ್ಥೆಯು ಆಗಿನ್ನೂ ತನ್ನ ನಿಯಮಗಳನ್ನು ಮಾಡುತ್ತಿದ್ದ ಸಮಯದಲ್ಲಿಯೇ ಮೊನ್ಸಾಂಟೊ ಕಂಪನಿಯು ಗ್ಲೈಫೋಸೇಟ್ ಅನ್ನು ಮಾರುಕಟ್ಟೆಗೆ ಪರಿಚಯಿಸಿತು. ತನ್ನೆಲ್ಲ ಅಧ್ಯಯನ ವರದಿಗಳನ್ನೂ ತ್ವರಿತವಾಗಿ ಪರಿಸರ ರಕ್ಷಣಾ ಸಂಸ್ಥೆಗೆ ಒಪ್ಪಿಸಿ ಪರವಾನಗಿಯನ್ನು ಗಿಟ್ಟಿಸಿಕೊಂಡುಬಿಟ್ಟಿತು. ಈ ವರದಿಗಳು ಹೊರಗೆಲ್ಲೂ ಪ್ರಕಟವಾಗಿಯೂ ಇಲ್ಲ, ಪುನರ್‌ಪರೀಕ್ಷೆಗೆ ಒಡ್ಡಿಕೊಳ್ಳಲೂ ಇಲ್ಲ, ಅವು ವ್ಯಾಪಾರಿ ಗೋಪ್ಯದ ಹೆಸರಲ್ಲಿ ಎಲ್ಲಿಯೂ ಯಾರಿಗೂ ಲಭ್ಯವಿಲ್ಲ ಕೂಡ. ಅಸ್ತಿತ್ವವಿಲ್ಲದ ಪ್ರಯೋಗ ಶಾಲೆಗಳಲ್ಲಿ ಪ್ರಯೋಗ ನಡೆಸಿ ಈ ವಿಷವನ್ನು ಹೊರತಂದಿರುವ ಮೊನ್ಸಾಂಟೊ ಅಂದಿನಿಂದಲೂ ತನ್ನ ಕಳೆನಾಶಕದ ರಕ್ಷಣೆಗೆ ನಿಂತೇ ಇದೆ. ಮೊನ್ಸಾಂಟೊ ಮಾಡಿಸಿದ ಪ್ರಯೋಗಗಳಲ್ಲಿ ಎಲ್ಲವೂ ಸತ್ಯವಲ್ಲ ಎಂದು ಈ ಕಳೆನಾಶಕದ ಮೇಲೆ ಪುಸ್ತಕ ಬರೆದಿರುವ ಗ್ಯಾರಿ ಗಿಲ್ಲಂ ಹೇಳುತ್ತಾರೆ. ಅಧ್ಯಯನ ವರದಿಗಳನ್ನು ಬದಲು ಮಾಡುವುದು, ಮರುಸೃಷ್ಟಿಸುವುದು, ‘ಇದು ಕ್ಷೇಮಕರವಲ್ಲ’ ಎಂದ ವಿಜ್ಞಾನಿಗಳಿಗೆ ಪ್ರತಿ ಉತ್ತರ ಕೊಡುವ ವಿಜ್ಞಾನಿಗಳನ್ನು ಪ್ರೋತ್ಸಾಹಿಸುವುದು, ಹೀಗೆ ಮಾಡುತ್ತ ಅಮೆರಿಕದ ಪರಿಸರ ರಕ್ಷಣಾ ಸಂಸ್ಥೆ ಹೊರತಂದಿದ್ದ ವರದಿಯನ್ನು 1985ರಲ್ಲಿ ಹಿಂಪಡೆಯುವಂತೆ ಮಾಡಿತು ಮೊನ್ಸಾಂಟೊ. 2015ರಲ್ಲಿ ಗ್ಲೈಫೋಸೇಟ್ ವಿಷವು ಕ್ಯಾನ್ಸರ್‌ಕಾರಕ ಎಂದು ವಿಶ್ವ ಆರೋಗ್ಯ ಸಂಸ್ಥೆಯೊಂದಿಗೆ ಅಂತರರಾಷ್ಟ್ರೀಯ ಕ್ಯಾನ್ಸರ್ ಅಧ್ಯಯನ ಸಂಸ್ಥೆಯು ಹೇಳಿದ್ದನ್ನು ಕೂಡ ಮೊನ್ಸಾಂಟೊ ವಿಜ್ಞಾನಿಗಳು ಹೀಗಳೆದರು. ಮರುವರ್ಷವೇ ಅಮೆರಿಕದ ಆಹಾರ ಮತ್ತು ಕೃಷಿ ಸಂಸ್ಥೆಯನ್ನೂ ಸೇರಿಸಿಕೊಂಡು, ವಿಶ್ವ ಆರೋಗ್ಯ ಸಂಸ್ಥೆಯ ಸದಸ್ಯರನ್ನೂ ಒಳಗೊಂಡು ‘ಗ್ಲೈಫೋಸೇಟ್ ಆಹಾರದೊಳಗೆ ಹೋದರೆ ಕ್ಯಾನ್ಸರ್ ಉಂಟುಮಾಡುವ ಸಾಧ್ಯತೆ ಇಲ್ಲ’ ಎಂದು ವರದಿ ಬರುವಂತೆ ಮಾಡಿತು. ಆದರೆ ಅಂತರರಾಷ್ಟ್ರೀಯ ಕ್ಯಾನ್ಸರ್ ಅಧ್ಯಯನ ಸಂಸ್ಥೆ ಮಾತ್ರ 2017ರಲ್ಲಿ ಮತ್ತೊಮ್ಮೆ ಇದು ಕ್ಯಾನ್ಸರ್‌ಕಾರಕ ವಿಷ ಎಂದೇ ಸಾರಿದೆ.
ಒಂದು ಕಡೆ ವಿಜ್ಞಾನಿಗಳನ್ನು, ವಿಶ್ವ ಮಟ್ಟದ ಸಂಸ್ಥೆಗಳನ್ನು ಪ್ರಭಾವಿಸುವ ಪ್ರಯತ್ನ, ಇನ್ನೊಂದು ಕಡೆ ಕಳೆನಾಶಕವನ್ನು ನಿಷೇಧಿಸದಂತೆ ಸರ್ಕಾರಗಳ ಮೇಲೆ ಒತ್ತಡ ತರುವ ಪ್ರಯತ್ನಗಳಲ್ಲಿ ಮೊನ್ಸಾಂಟೊ ಕಂಪನಿಯು ಸದಾ ತೊಡಗಿಕೊಂಡಿದೆ. ನೀರಿನಲ್ಲಿರುವ ಕ್ಯಾಡ್ಮಿಯಂ ಮತ್ತು ಆರ್ಸೆನಿಕ್‍ಗಳ ಜೊತೆ ಕಳೆನಾಶಕವು ಸೇರಿಕೊಂಡು ಇನ್ನಷ್ಟು ವಿಷಕಾರಕ ಆಗುತ್ತದೆ, ಮೂತ್ರಕೋಶದ ತೊಂದರೆಗಳಿಗೆ ಕಾರಣವಾಗುತ್ತದೆ ಎಂಬ ಕಾರಣಕ್ಕೆ ಶ್ರೀಲಂಕಾ ದೇಶವು ಗ್ಲೈಫೋಸೇಟ್ ಅನ್ನು ನಿಷೇಧಿಸಿತ್ತು. ಕಳೆಗಳು ಚಹಾ ತೋಟದ ಉತ್ಪನ್ನವನ್ನು ಶೇಕಡ 70ರಷ್ಟು ಕಡಿಮೆ ಮಾಡಬಲ್ಲವು. ಕಳೆಗಳಿಂದಾಗಿ ಚಹಾತೋಟದಲ್ಲಿ ಬಹುದೊಡ್ಡ ಪ್ರಮಾಣದಲ್ಲಿ ನಷ್ಟವಾಗಿದೆ ಎಂದು ಚಹಾತೋಟದ ಮಾಲೀಕರು ಸರ್ಕಾರಕ್ಕೆ ದೂರಿದ ಪರಿಣಾಮವಾಗಿ 2014ರಲ್ಲಿ ಹೇರಿದ್ದ ನಿಷೇಧಾಜ್ಞೆಯು ಕಳೆದ ತಿಂಗಳಷ್ಟೇಹಿಂತೆಗೆಯಲ್ಪಟ್ಟಿತು. ಥಾಯ್ಲೆಂಡ್‌ನಲ್ಲಿ ಕೂಡ ಪಾಮ್, ರಬ್ಬರ್ ಮತ್ತು ಹಣ್ಣಿನ ತೋಟಗಳಲ್ಲಿ ಬಳಕೆಯಾಗುತ್ತಿರುವ ಗ್ಲೈಫೋಸೇಟ್ ಅನ್ನು ನಿಷೇಧ ಮಾಡಬಾರದು ಎಂದು ರೈತರು ಮತ್ತು ಕೃಷಿ ಉದ್ಯಮ ಕೂಡಿಯೇ ಸರ್ಕಾರದ ಮೇಲೆ ಒತ್ತಡ ತರುತ್ತಿವೆ. ಹಣ್ಣಿನ ತೋಪಿನಲ್ಲಿ ಕಳೆಯನ್ನು ಕೀಳದೆ, ಭೂಮಿಯನ್ನು ಅಗೆಯದೆ ಇರುವುದರಿಂದ ಮಣ್ಣಿನ ಸವಕಳಿ ಮತ್ತು ನೀರು ಹರಿದು ಹೋಗುವುದು ಕಡಿಮೆ ಆಗುತ್ತದೆ ಎಂಬುದು ಅಲ್ಲಿನ ಕೃಷಿಕರ ವಾದ.
ಅಮೆರಿಕದ ಮೊನ್ಸಾಂಟೊವನ್ನು ಜರ್ಮನಿಯ ಬಾಯರ್ ಕಂಪನಿಯು ಖರೀದಿಸಿದೆ. ತದನಂತರ ಗ್ಲೈಫೋಸೇಟ್‍ನ ಲೈಸನ್ಸ್ ಅನ್ನು ನವೀಕರಿಸಬೇಕೋ, ಹಿಂಪಡೆಯಬೇಕೋ ಎಂಬ ವಿಚಾರವನ್ನು ಯುರೋಪಿಯನ್ ಒಕ್ಕೂಟವು ಪಾರ್ಲಿಮೆಂಟಿನಲ್ಲಿ ಮತಕ್ಕೆ ಹಾಕಿತು. ಜರ್ಮನಿ ಸಹಿತ 18 ದೇಶಗಳು ನವೀಕರಿಸಬೇಕು ಎಂದೂ 9 ದೇಶಗಳು ಬೇಡವೆಂದೂ ಮತ ಹಾಕಿದ ಪರಿಣಾಮವಾಗಿ ಕಳೆನಾಶಕದ ಲೈಸೆನ್ಸ್ ನವೀಕರಣ ಆಗಿಬಿಟ್ಟಿತು. ಗರ್ಭವತಿಯರ ಮೇಲೆ ಈ ಕಳೆನಾಶಕ ಮಾಡುವ ದುಷ್ಪರಿಣಾಮದ ಅಧ್ಯಯನ ವರದಿ ಬಂದಾಗ ಅರ್ಜೆಂಟೀನಾ ದೇಶವು ಅದನ್ನು ನಿಷೇಧಿಸಲು ಮುಂದಾಯಿತು. ಕಂಪನಿಯು ಯುರೋಪಿಯನ್ ಒಕ್ಕೂಟದ ಉದಾಹರಣೆಯನ್ನೇ ಮುಂದಿಟ್ಟು ಅಲ್ಲಿಯೂ ಕೂಡ ಕಳೆನಾಶಕ ನಿಷೇಧವಾಗದಂತೆ ತಡೆಯಿತು.
ಗ್ಲೈಫೋಸೇಟ್ ಔಷಧ ಮತ್ತು ಕುಲಾಂತರಿ ಹತ್ತಿ–ಸಾಸಿವೆಗಳು ಒಟ್ಟೊಟ್ಟಿಗೆ ರೈತರ ಹೊಲಗಳನ್ನು ಪ್ರವೇಶಿಸುತ್ತವೆ. ಅದೇ ಕಂಪನಿ ತಯಾರು ಮಾಡಿದ ಕುಲಾಂತರಿ ತಳಿಯ ಬೆಳೆಯನ್ನೊಂದು ಬಿಟ್ಟು ಉಳಿದೆಲ್ಲವನ್ನೂ ನಾಶಪಡಿಸುವ ಶಕ್ತಿ ಗ್ಲೈಫೋಸೇಟ್‍ಗಿದೆ. ಎರಡಕ್ಕೂ ಭಾರತದಲ್ಲಿ ಮುಕ್ತ ಪ್ರವೇಶವಿಲ್ಲ. ಭಾರತದಲ್ಲಿ ಚಹಾ ತೋಟ ಮತ್ತು ತಿನ್ನುವ ಬೆಳೆಗಳಿಲ್ಲದ ಪ್ರದೇಶಗಳಲ್ಲಿ ಮಾತ್ರ ಗ್ಲೈಫೋಸೇಟ್ ಸಿಂಪಡಿಸಲು ಅನುಮತಿ ಇದೆ. ಆದರೂ ಅಕ್ರಮವಾಗಿ ಎಲ್ಲ ಕಡೆಗೂ ನುಸುಳಿಕೊಂಡು ಬೇಕಾಬಿಟ್ಟಿಯಾಗಿ ಮಾರಾಟವಾಗುತ್ತಿದೆ ಈ ವಿಷಕಾರಕ ಕಳೆನಾಶಕ. ಅಂಥ ಕುಲಾಂತರಿ ತಳಿಗಳೂ ಭಾರತದೊಳಗೆ ಅಕ್ರಮವಾಗಿ ನುಸುಳಿದ್ದು ರೈತರ ಹೊಲಗಳಲ್ಲಿ ರಾಜಾರೋಷವಾಗಿ ಬೆಳೆದು ನಿಂತಿರುವುದನ್ನು ಸಂಶೋಧಕಿ ವರ್ಷಾ ವಾಸ್ನೇಯಿ ಬಯಲು ಮಾಡಿದ್ದಾರೆ. ಮಹಾರಾಷ್ಟ್ರದಲ್ಲಿ ಮತ್ತು ಆಂಧ್ರಪ್ರದೇಶದಲ್ಲಿ ಸ್ಥಳೀಯ ಅಧಿಕಾರಿಗಳು ಗ್ಲೈಫೋಸೇಟ್ ಅನ್ನು ನಿಯಂತ್ರಿಸಲು ಪ್ರಯತ್ನಿಸಿದರೂ ಕೇಂದ್ರ ಸರ್ಕಾರದ ಬಿಗಿ ಇಲ್ಲದೆ ಅವು ಒಳನುಸುಳಿ ಬರುವುದರಿಂದ ಪರಿಣಾಮಕಾರಿಯಾದ ನಿಯಂತ್ರಣ ಸಾಧ್ಯವಿಲ್ಲದಾಗಿದೆ. ಕಂಪನಿಯ ಹೇಳಿಕೆಯ ಪ್ರಕಾರ ಭಾರತದಲ್ಲಿ ಈ ಕಳೆನಾಶಕದ ಮಾರಾಟ ಎರಡು ವರ್ಷಗಳ ಹಿಂದಿನದಕ್ಕಿಂತ 19 ಪಟ್ಟು ಹೆಚ್ಚಾಗಿದೆ.
ರೌಂಡ್‌ಅಪ್ ಕಳೆನಾಶಕದ ಅಕ್ರಮ ಮಾರಾಟ, ಮಾಹಿತಿಇಲ್ಲದ ರೈತರಿಂದ ಬಳಕೆ, ಅತಿ ಬಳಕೆ... ಇವೆಲ್ಲವೂ ಕೇವಲ ಕೃಷಿ ಆರ್ಥಿಕತೆಗೆ ಸಂಬಂಧಿಸಿದ ವಿಷಯವಾಗಿ ಉಳಿದಿಲ್ಲ. ರೈತರಿಗೂ ಹಣ ಬೇಕು, ವಿನಾಶಕಾರಿ ಕಳೆನಾಶಕ ತಯಾರಿ
ಸುವ ಕಂಪನಿಗಳಿಗೂ ಬೇಕು. ಆದರೆ ಪರಿಸರ, ಜೀವಚರಗಳ ನಾಶವಾದರೂ ಸರಿ, ಸುತ್ತಲಿನವರ ಆರೋಗ್ಯ ಹಾಳಾದರೂ ಸರಿ, ಹಣ ಗಳಿಸುವುದೊಂದೇ ಜೀವನದ ಗುರಿ ಎಂದು ಕಂಪನಿಯಾಗಲೀ ರೈತರಾಗಲೀ ತಿಳಿದಾಗ ಅದು ಅಪಾಯದ
ಮುನ್ಸೂಚನೆ. ಕಂಪನಿಯು ಅದೇನೇ ಹೇಳಿದರೂ ಗ್ಲೈಫೋಸೇಟ್ ಕ್ಯಾನ್ಸರ್‌ಕಾರಕ ಎಂದು ಅಂತರರಾಷ್ಟ್ರೀಯ ಸಂಸ್ಥೆಗಳ ವರದಿಗಳು ಹೇಳಿವೆ. ಗರ್ಭಿಣಿಯರಿಗೆ ಅಪಾಯಕಾರಿ ಎಂದು ಇನ್ನೊಂದು ದೇಶದಲ್ಲಿ ಸಾಬೀತಾಗಿದೆ. ಮೂತ್ರ
ಕೋಶಕ್ಕೆ ಆಘಾತಕಾರಿ ಎಂದು ಮತ್ತೊಂದು ದೇಶದ ವರದಿ ಹೇಳುತ್ತಿರುವಾಗ ನಮ್ಮ ದೇಶದ ಅಧಿಕಾರಿಗಳು ಯಾವುದೇ ರೀತಿಯ ಅಧ್ಯಯನಗಳ ನೆರವಿಲ್ಲದೆ ಇಂಥ ಅತಿವಿಷಕಾರಿ ಕಳೆನಾಶಕವನ್ನು ಒಳಗೆ ನುಸುಳಲು ಬಿಟ್ಟಿದ್ದು ಘೋರ ತಪ್ಪು. ನಮ್ಮ ರೈತರಿಗೆ ಇಂದಿಗೂ ವೈಜ್ಞಾನಿಕವಾಗಿ ಗೊಬ್ಬರ ತಯಾರಿಕೆಯ ಮಾಹಿತಿಯನ್ನು ಕೊಡುವಲ್ಲಿ ಕೂಡ ನಮ್ಮ ಕೃಷಿ ಇಲಾಖೆ ಸೋತಿದೆ. ಪೇಟೆಗೆ ಬರುತ್ತಿರುವ ಬೀಜಗಳು, ರಾಸಾಯನಿಕಗಳು ಭೂಮಿಗೆ ಎಂಥ ಕೇಡನ್ನುಂಟು ಮಾಡಬಲ್ಲವೆಂದು ತಿಳಿಹೇಳುವುದರಲ್ಲಿ ಸೋತಿವೆ. ಇಂಥ ಪರಿಸ್ಥಿತಿಯಲ್ಲಿ ಎಗ್ಗಿಲ್ಲದೆ ಇಂಥ ಘೋರ ವಿಷವನ್ನು ಎಲ್ಲರ ಕೈಗೆಟುಕುವಂತೆ ರಾಜಾರೋಷವಾಗಿ ಮಾರಾಟ ಮಾಡಲು ಅವಕಾಶ ಕೊಟ್ಟಿರುವುದು ಇಡೀ ಜೀವಸಂಕುಲಕ್ಕೇ ಮಾಡುತ್ತಿರುವ ದೊಡ್ಡ ಅಪರಾಧ. ಇಂಥ ವಿಷವನ್ನು ಕೆರೆ– ಬಾವಿಗಳ ಸುತ್ತ, ಕಬ್ಬು– ತರಕಾರಿ ಹೊಲಗಳ ಬದುಗಳಲ್ಲಿ, ದನಕರುಗಳು ಮೇಯುವಲ್ಲಿ, ಮಕ್ಕಳಾಡುವಲ್ಲಿ ಬೇಕಾಬಿಟ್ಟಿಯಾಗಿ ಚೆಲ್ಲುತ್ತಿರುವುದು ಜೀವಗಳಿಗೆ ನಾವು ಕೊಡುತ್ತಿರುವ ಬೆಲೆಯನ್ನು ತೋರಿಸುತ್ತಿದೆ. ಗ್ಲೈಫೋಸೇಟ್ ವಿಷದ ಬಗ್ಗೆ ರೈತರ ಮಧ್ಯೆ ನಿಜ ಮಾಹಿತಿ ಕೊಡುವುದು ತಕ್ಷಣವೇ ಆಗಬೇಕಾದ ಕೆಲಸ. ಇಂದು ಕೂಲಿಕಾರರಿಗೆ ಕೊಡುವಲ್ಲಿ ಉಳಿಸಿದ ಖರ್ಚಿನ ದುಪ್ಪಟ್ಟು, ನಾಲ್ಕುಪಟ್ಟು ಆಸ್ಪತ್ರೆಗೆ ಚೆಲ್ಲಬೇಕಾದೀತು ಎಂಬುದನ್ನು ರೈತಬಾಂಧವರಲ್ಲಿ ಹೇಳಬೇಕಾಗಿದೆ.
ವಿದೇಶಿ ಕಂಪನಿಯ ವಿಷವನ್ನು ದೇಶಿ ಸರ್ಕಾರಕ್ಕೆ ನಿಯಂತ್ರಿಸಲು ಸಾಧ್ಯವಾಗದಿದ್ದರೆ ಸ್ಥಳೀಯ ಸರ್ಕಾರಗಳೇ ನಿಯಂತ್ರಣ ಹೇರಲು ಸಾಧ್ಯವಿದೆ. ಉದ್ಯೋಗ ಖಾತರಿ ಕಾಯ್ದೆಯಲ್ಲಿ ಇದಕ್ಕೆ ಅವಕಾಶವಿದೆ. ಜನರು ಕಳೆಯೆಂದು ತಿಳಿಯುತ್ತಿರುವ ಹಸಿರು ಸಂಪತ್ತನ್ನು ಅತ್ಯವಶ್ಯಕ ಸಂಪನ್ಮೂಲವನ್ನಾಗಿ ಪರಿವರ್ತಿಸಲು ಸಾಧ್ಯವಿದೆ. ಕಳೆಯನ್ನು ಕೊಯ್ದು, ಕಿತ್ತು ಸ್ಥಳೀಯವಾಗಿ ಸಿಗುವ ಸಗಣಿ, ನೀರನ್ನು ಬಳಸಿ ಕಂಪೋಸ್ಟ್ ಮಾಡುವುದನ್ನು ಒಂದು ಕಾಮಗಾರಿಯಾಗಿ ಪಂಚಾಯಿತಿಗಳು ತೆಗೆದುಕೊಳ್ಳಬಹುದು. ಕಳೆ ಹೋಯಿತೆಂದರೆ ವಿನಾಶಕಾರಿ ರೌಂಡ್‍ಅಪ್‍ನಂತಹ ಕಳೆನಾಶಕಗಳ ಬಳಕೆ ತನ್ನಷ್ಟಕ್ಕೇ ಕಡಿಮೆಯಾಗುವುದು. ಮುಂದೆ ರೈತರು ತಮ್ಮ ಬೆಳೆಗಾಗಿ ಹೊರಗಿನ ಒಳಸುರಿಗಳನ್ನು ಅವಲಂಬಿಸದೇ ಸ್ಥಳೀಯವಾಗಿ ಸಿಗುವ ಗೊಬ್ಬರವನ್ನೇ ಬಳಸಬಹುದು, ತನ್ಮೂಲಕ ಭೂಮಿಯ ಫಲವತ್ತತೆಯನ್ನು ಹೆಚ್ಚಿಸಬಹುದು. ಆಗ ಬಹುಶಃ ಅತ್ತ ಮುಖ ಮಾಡಿದ ರೈತರು ಭೂಮಿಯತ್ತ ತಿರುಗಬಹುದು. ಬೀಳು ಭೂಮಿಯೂ ರೈತರ ಆರೈಕೆಯಲ್ಲಿ ನಳನಳಿಸಬಹುದು. ಕಸ, ಕಳೆಯನ್ನು ರಸಗೊಬ್ಬರವಾಗಿಸುವ ಈ ವಿಧಾನದ ಮೂಲಕ ಪ್ರಧಾನ ಮಂತ್ರಿಯವರ ಕನಸಾದ ಸ್ವಚ್ಛ ಭಾರತದ ಕನಸೂ ನನಸಾಗಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.