ADVERTISEMENT

ಫ್ಯಾಸಿಸಂ ಯುಗಾರಂಭದ ಸಂಕೇತ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2020, 20:52 IST
Last Updated 30 ಸೆಪ್ಟೆಂಬರ್ 2020, 20:52 IST
ಬಾಬರಿ ಮಸೀದಿ ಧ್ವಂಸ
ಬಾಬರಿ ಮಸೀದಿ ಧ್ವಂಸ   
""

ಬಾಬರಿ ಮಸೀದಿ ಧ್ವಂಸಗೊಳಿಸಿದ 28 ವರ್ಷಗಳ ಹಿಂದಿನ ಪ್ರಕರಣಕ್ಕೆ ಸಿಬಿಐ ವಿಶೇಷ ನ್ಯಾಯಾಲಯವು ಬುಧವಾರ ತೆರೆ ಎಳೆದಿದೆ. ಅಯೋಧ್ಯೆಯ ವಿವಾದಿತ ನಿವೇಶನಕ್ಕೆ ಸಂಬಂಧಿಸಿದ, ಶತಮಾನದಷ್ಟು ಹಳೆಯ ವಿವಾದಕ್ಕೆ ಸಂಬಂಧಿಸಿ ಕೆಲವು ತಿಂಗಳ ಹಿಂದೆಯಷ್ಟೇ ಸುಪ್ರೀಂ ಕೋರ್ಟ್‌ ತೀರ್ಪು ನೀಡಿತ್ತು. ಆನಂತರ ಈ ಪ್ರಕರಣದ ಮೇಲೆ ದೇಶದ ದೃಷ್ಟಿ ನೆಟ್ಟಿತ್ತು. ಬಿಜೆಪಿಯ ಹಲವು ಹಿರಿಯ ನಾಯಕರು ಆರೋಪಿಗಳಾಗಿದ್ದೂ ಸಹ ಇದಕ್ಕೆ ಕಾರಣ. ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಿದ ತೀರ್ಪು ಸಹಜವಾಗಿ ಪರ–ವಿರೋಧದ ಅಲೆಗಳನ್ನು ಎಬ್ಬಿಸಿದೆ.

---

ಬಹುಸಂಖ್ಯಾತರ ‘ರಾಜಕೀಯ’ವನ್ನೇ ಮುಂದಿಟ್ಟು ಹೊಡೆದಾಡಿ, ಹಿಂಸೆಗೆ ಇಳಿದವರ ಶಿಕ್ಷಿಸುವ ಪ್ರಶ್ನೆಯೇ ಇಲ್ಲ ಎಂಬುದು ಈ ತೀರ್ಪಿನ ಒಟ್ಟಾರೆ ಸಾರಾಂಶ.

ADVERTISEMENT

ಮಸೀದಿ ನಾಶ ಅಪರಾಧಿಕ ಕೃತ್ಯ ಎಂದು ತೀರ್ಪು ಹೇಳಿದೆ. ಆದರೆ, ಮಸೀದಿ ಧ್ವಂಸ ಮಾಡಿದ ಕೃತ್ಯದಲ್ಲಿ 32 ಆರೋಪಿಗಳು ಪಿತೂರಿ ಮಾಡಿದ್ದಾರೆ ಎಂಬುದಕ್ಕೆ ಸಾಕ್ಷ್ಯವಿಲ್ಲವೆಂಬ ಕಾರಣ ನೀಡಿ ಅವರೆಲ್ಲರನ್ನೂ ನಿರ್ದೋಷಿಗಳೆಂದು ಹೇಳಿದೆ. ಸಾಕ್ಷ್ಯಾಧಾರ ಇಲ್ಲದೇ ಇರುವುದರಿಂದ ಆರೋಪಿಗಳನ್ನು ಖುಲಾಸೆ ಮಾಡುವುದು ನ್ಯಾಯಿಕವಾಗಿ ಸರಿ. ಆದರೆ, ನೈತಿಕವಾಗಿ?

ಕೆ.ಫಣಿರಾಜ್

1954ರಿಂದ ಇಲ್ಲಿಯವರೆಗೆ 54 ಸಾವಿರಕ್ಕೂ ಹೆಚ್ಚು ಕೋಮುಗಲಭೆಗಳು ನಡೆದಿವೆ. ಅವುಗಳಲ್ಲಿ ಬಹುತೇಕ ಪ್ರಕರಣಗಳು ಸಾಮೂಹಿಕ ಅಥವಾ ಗುಂಪು ನಡೆಸಿದ ಅಪರಾಧಗಳು. ಹೆಸರಿಸಲಾಗದ ಆರೋಪಿಗಳ ಮೇಲೆ ಶಿಕ್ಷೆ ನೀಡಲು ಸಾಧ್ಯವೇ ಆಗದಿರುವುರಿಂದ ಶಿಕ್ಷೆಯೇ ಆಗಿಲ್ಲ. ಕೋಮುಗಲಭೆ ಮಾತ್ರವಲ್ಲ; ಖೈರ್ಲಾಂಜಿ, ಕಂಬಾಲಪಲ್ಲಿಯಂತಹ ದಲಿತರ ಮೇಲಿನ ದೌರ್ಜನ್ಯದ ಪ್ರಕರಣಗಳಲ್ಲೂ ಹೀಗೆಯೇ ಆಗಿದೆ. ಭೂಮಿ ಹಕ್ಕಿಗಾಗಿ ಹೋರಾಟ ನಡೆಸಿದ ಕಾರಣಕ್ಕೆ 1968ರಲ್ಲಿ ಕಿಲ್ವಾನ್ ಮಣಿಯಲ್ಲಿ ಗರ್ಭಿಣಿಯಾಗಿದ್ದವರೂ ಸೇರಿದಂತೆ 16 ಮಹಿಳೆಯರು, 23 ಮಕ್ಕಳು ಒಳಗೊಂಡಂತಡ 44 ದಲಿತರನ್ನು ಜೀವಂತವಾಗಿ ಸುಟ್ಟು ಹಾಕಲಾಗಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್‌, ಅಪರಾಧಿಕ ಕೃತ್ಯ ನಡೆದಿರುವುದು ನಿಜ. ಅದು ಅತ್ಯಂತ ಹೀನ ಕೃತ್ಯ ಎಂದು ಹೇಳಿತ್ತಲ್ಲದೇ‌ ಆಪಾದಿತರ ಮೇಲೆ ಸಾಕ್ಷ್ಯಗಳಿಲ್ಲ ಎಂದು ಎಲ್ಲರನ್ನೂ ಬಿಡುಗಡೆ ಮಾಡಿತ್ತು.

ಕೋಮುಗಲಭೆಯಲ್ಲಿ ಗುಂಪು ಹಿಂಸೆಗಳನ್ನು ಮುನ್ನಡೆಸಿದವರನ್ನು ಗುರುತಿಸಿ ಎಫ್‌ಐಆರ್‌ನಲ್ಲಿ ಹೆಸರಿಸಲಾಗಿದೆ. ಗುಜರಾತ್‌ ಗಲಭೆಯ 3–4 ಪ್ರಕರಣಗಳಲ್ಲಿ ಶಿಕ್ಷೆಯಾಗಿದ್ದು ಬಿಟ್ಟರೆ ಉಳಿದ 54 ಸಾವಿರ ಗಲಭೆಗಳ ತೀರ್ಪು ಇದೇ ಮಾದರಿಯಲ್ಲಿದೆ. ಆಸ್ತಿ, ಜೀವ ನಾಶವಾಗಿದೆ. ಹಿಂಸೆ ನಡೆದಿದೆ ಎಂದು ಕೋರ್ಟ್‌ ಒಪ್ಪಿಕೊಂಡರೂ ‘ಹೆಸರಿಸಲಾಗದ ಗುಂಪಿನ ಕೃತ್ಯ’ ಎಂದು ಹೇಳಿ ಖುಲಾಸೆ ಮಾಡುವುದು ಇದು ಹೊಸ ಪ್ರಕರಣವೇನಲ್ಲ.

ಭಾರತದಲ್ಲಿ ಲಾಗಾಯ್ತಿನಿಂದಲೂ ಹಿಂಸಾ ಸಂಸ್ಕೃತಿ ಇದೆ. ಈ ಸಂಸ್ಕೃತಿ ಹೊಂದಿರುವ ದೇಶದಲ್ಲಿ ಸಮಾಜವೇ ಆರೋಪಿ ಸ್ಥಾನದಲ್ಲಿದೆ. ಬಾಬರಿ ಮಸೀದಿ ಧ್ವಂಸದ ವಿಷಯದ ತೀರ್ಪಿನ ದೊಡ್ಡ ವ್ಯಂಗ್ಯ ಕೂಡ ಇದೇ ಆಗಿದೆ. ಗುಂಪೊಂದು ಇದನ್ನು ಎಸಗಿದ್ದರಿಂದ ಸಮೂಹವನ್ನು ಶಿಕ್ಷಿಸುವಂತಿಲ್ಲ ಎಂದು ಹೇಳಲಾಗಿದೆ. ಪ್ರಮುಖ ಆರೋಪಿ ಸ್ಥಾನದಲ್ಲಿದ್ದವರು ಪ್ರಚೋದಿಸಿದ್ದಾರೆಯೇ ಎಂಬುದಕ್ಕೆ ಸಾಕ್ಷ್ಯವಿಲ್ಲ ಎಂದೂ ಕೋರ್ಟ್ ಹೇಳಿದೆ. ಎಲ್‌.ಕೆ. ಆಡ್ವಾಣಿ ರಾಮಮಂದಿರ ನಿರ್ಮಾಣದ ಉದ್ದೇಶವಿಟ್ಟುಕೊಂಡು ದೇಶದುದ್ದಕ್ಕೂ ರಥಯಾತ್ರೆ ನಡೆಸಿದರು. ಈ ಯಾತ್ರೆ ಸಾಗಿದ ಕಡೆಗಳಲ್ಲಿ 10 ಸಾವಿರ ಗಲಭೆಗಳು ನಡೆದಿದ್ದು, ದಾರಿಯುದ್ದಕ್ಕೂ ಸಾವಿರಾರು ಜನ ಸತ್ತೇ ಹೋದರು. ಮಸೀದಿ ಕೆಡವಿ ಎಂದು ಆಡ್ವಾಣಿಯವರು ಪ್ರಚೋದನೆ ನೀಡಿದ್ದಾರೆಯೇ ಎಂಬುದಕ್ಕೆ ಸಾಕ್ಷ್ಯವಿಲ್ಲ ಎಂದು ತೀರ್ಪು ಹೇಳಿದೆ.

ಈ ತೀರ್ಪನ್ನೇ ಭೀಮಾ ಕೋರೆಗಾಂವ್‌ ಪ್ರಕರಣಕ್ಕೆ ಕಾರಣವಾಯಿತೆಂದು ಆಪಾದಿಸಲಾಗಿರುವ ಎಲ್ಗಾರ್ ಪರಿಷತ್‌ ಸಭೆಗೆ ಅನ್ವಯಿಸಬಹುದಾ? ಏಕೆಂದರೆ ಎಲ್ಗಾರ್‌ ಪರಿಷತ್ತಿನ ಸಭೆಯಲ್ಲಿ ಪಾಲ್ಗೊಳ್ಳದೇ ಇದ್ದ 15 ಜನರನ್ನು ಹಿಂಸೆಗೆ ಪ್ರಚೋದನೆ ನೀಡಿದ್ದರು; ದೊಡ್ಡಮಟ್ಟದ ಪಿತೂರಿಯಲ್ಲಿ ಭಾಗಿಯಾಗಿದ್ದರು ಎಂಬ ಆರೋಪ ಹೊರಿಸಿ ಜೈಲಿಗೆ ತಳ್ಳಲಾಗಿದೆ. ಸಭೆಯಲ್ಲೇ ಪಾಲ್ಗೊಳ್ಳದೇ ಇದ್ದವರು ಹಿಂಸೆಗೆ ಹೇಗೆ ಪ್ರಚೋದನೆ ನೀಡಿದರು ಎಂಬುದು ಗೊತ್ತಿಲ್ಲ. ಎರಡೂ ಘಟನೆಗಳನ್ನು ಸಮೀಕರಿಸಿ ಹೇಳುವುದಾದರೆ ಈಗೊಂದು ಯುಗಪರಿವರ್ತನೆಯಾಗಿದೆ.

ಬಹುಸಂಖ್ಯಾತವಾದಿ ವೈದಿಕಶಾಹಿ ಹಿಂದುತ್ವವಾದದ ಯುಗಕ್ಕೆ ಈಗ ನಾವು ಕಾಲಿಟ್ಟಿದ್ದೇವೆ. ಅಧಿಕಾರ ಈಗ ಅವರ ಬಳಿ ಇದ್ದು, ಅದು ಅನುಸರಿಸುವ ನ್ಯಾಯಿಕ ದೃಷ್ಟಿಕೋನವೇ ಈಗ ಪ್ರಮುಖವಾದುದಾಗಿದೆ. 1850ರಿಂದ 1950ರವರೆಗಿನ ನೂರು ವರ್ಷದ ಅವಧಿಯಲ್ಲಿ ವೈದಿಕಶಾಹಿ ಬ್ರಾಹ್ಮಣ ಸಂಸ್ಕೃತಿ ವಿರೋಧಿಸಿ ದಲಿತರು, ಶೂದ್ರರು, ಹೆಂಗಸರು, ಅಲ್ಪಸಂಖ್ಯಾತರು, ತುಳಿತಕ್ಕೊಳಗಾದ ಅನೇಕ ಸಮುದಾಯಗಳು ಹೋರಾಟ ನಡೆಸಿ ‘ವಿಶ್ವಾತ್ಮಕ ವಿಮೋಚನಾವಾದಿ ರಾಜಕೀಯ‘ವನ್ನು ಸಂವಿಧಾನದ ಮೂಲಕ ಕಂಡುಕೊಂಡಿದ್ದರೋ, ದಕ್ಕಿಸಿಕೊಂಡಿದ್ದರೋ ಆ ಯುಗ 2019ರ ನವೆಂಬರ್‌ನಲ್ಲಿ ಬಂದ ಬಾಬರಿ ಮಸೀದಿ ತೀರ್ಪಿನಿಂದಾಗಿ ಕೊನೆಯಾಗಿದೆ. ಈ ನೂರು ವರ್ಷದ ನ್ಯಾಯಪ್ರಕ್ರಿಯೆ ಇದ್ದಕ್ಕಿದ್ದಂತೆ ಕರಾಳಯುಗವಾಗಿ ಪರಿವರ್ತನೆಯಾಗಿದೆ.

ಪ್ರಭುತ್ವ ಹೇಗಿರುತ್ತದೋ ನ್ಯಾಯವೂ ಹಾಗೆಯೇ ಇರುತ್ತದೆ. ಈ ದೇಶದ ಪ್ರಭುತ್ವ ಹಿಂದುತ್ವವಾದಿ ರಾಜಕೀಯಕ್ಕೆ ವಾಲಿದ ಪ್ರಕ್ರಿಯೆ 2019ರ ನವೆಂಬರ್‌ನಲ್ಲಿ ಸಾಬೀತಾಯಿತು. ವಸಾಹತುಶಾಹಿ ವಿರೋಧಿ ಸ್ವಾತಂತ್ರ್ಯಯುಗ ದೇಶದಲ್ಲಿ ಕೊನೆಯಾಗಿದೆ. ‘ವಿಶ್ವಾತ್ಮಕ ವಿಮೋಚನಾವಾದಿ ರಾಜಕೀಯ‘ ಬದಿಗೆ ಸರಿದು ಮೇಲ್ಜಾತಿಯ, ಪುರುಷಾಧಿಕಾರದ ಬಹುಸಂಖ್ಯಾತ ಹಿಂದುತ್ವವಾದಿ ರಾಜಕೀಯ ಮೇಲುಗೈ ಪಡೆದಿದೆ. ಅದು ಸಂವಿಧಾನದ ಸ್ಪೂರ್ತಿ, ಆಶಯಕ್ಕೆ ವಿರುದ್ಧವಾಗಿ, ಸಂವಿಧಾನದ ಪ್ರಕ್ರಿಯೆಗೆ ಅತೀತವಾಗಿಯೂ ಇದೆ.

ಭಾರತದ ಫ್ಯಾಸಿಸಂನ ಹಿಂದೆ‍ಪ್ರಜಾಪ್ರಭುತ್ವೀಯ ವರಸೆಯನ್ನೂ ನೋಡುತ್ತಿದ್ದೇವೆ. ಪ್ರಜಾಪ್ರಭುತ್ವದ ಅಸ್ಥಿಪಂಜರವನ್ನಷ್ಟೇ ಉಳಿಸಿಕೊಂಡು ಮಾಂಸ, ಮಜ್ಜೆ, ರಕ್ತವನ್ನು ಹೀರಿಹಾಕಿ ಫ್ಯಾಸಿಸಂನ ಹೊಸ ವರಸೆ ತಲೆ ಎತ್ತಿದೆ. ಹೀಗಾಗಿ, ನ್ಯಾಯಾಂಗ ಪ್ರಕ್ರಿಯೆಯೂ ಅದರಿಂದ ಹೊರಗುಳಿಯಲು ಸಾಧ್ಯವಿಲ್ಲ. ಸಾಂವಿಧಾನಿಕ ಆಶಯ ಮುಂದುವರಿಯುವ ಪ್ರಮೇಯವೇ ಇಲ್ಲ. ನೂರು ವರ್ಷಗಳು ಇದ್ದ ಭಿನ್ನಮತೀಯ ಧ್ವನಿಗಳು ಪ್ರಭುತ್ವದ ಅಧಿಕಾರವಾಗಲು ಸಾಧ್ಯವಿತ್ತು. ಅದೀಗ ಮುಗಿದಂತೆ ಕಾಣಿಸುತ್ತಿದೆ. ಈ ಚಾರಿತ್ರಿಕ ಅರಿವು ರಾಜಕೀಯ ಪಕ್ಷಗಳಲ್ಲಿ ಬೆಳೆಯಬೇಕಿದೆ. ಬಲಪಂಥೀಯರ ಈ ರಾಜಕೀಯ ದಾರಿಯನ್ನು ಮಧ್ಯಮವಾದಿಗಳು, ಎಡ ಮಧ್ಯಮವಾದಿಗಳು ಚಾರಿತ್ರಿಕ ನೆಲೆಯಲ್ಲಿ ಅರ್ಥಮಾಡಿಕೊಳ್ಳದೇ ಇದ್ದರೆ ವಿಶ್ವಾತ್ಮಕ ಸ್ವಾತಂತ್ರ್ಯದ ಪರಿಕಲ್ಪನೆಯನ್ನೇ ಪ್ರಜಾಪ್ರಭುತ್ವೀಯ ಫ್ಯಾಸಿಸಂ ಮುಗಿಸುವ ಅಪಾಯವಿದೆ.

ಪ್ರಜಾಪ್ರಭುತ್ವೀಯ ಫ್ಯಾಸಿಸಂಗೆ ಜನಬೆಂಬಲವೂ ಇದೆ. ನೀವು ಎಲ್ಲಿಯೇ ಹೋಗಿ ಮಾದರಿ ಸಮೀಕ್ಷೆ ನಡೆಸಿ. ದೇಶದ 130 ಕೋಟಿ ಜನರಲ್ಲಿ 80 ಕೋಟಿ ಜನ ಇವತ್ತು ಸಿಬಿಐ ಕೋರ್ಟ್‌ ನೀಡಿದ ತೀರ್ಪನ್ನು ಸರಿ ಎಂದೇ ಹೇಳುತ್ತಾರೆ. ಅವರಿಗೆ ಆ ಮಟ್ಟಿನ ರಾಜಕೀಯ ಜ್ಞಾನವಿದೆ. 1850–1950ರ ಅವಧಿಯಲ್ಲಿ ದಲಿತ, ಶೂದ್ರ, ಮಹಿಳೆಯರಿಗಿದ್ದ ರಾಜಕೀಯ ಜ್ಞಾನದ ಜಾಗದಲ್ಲಿ ಬಲಪಂಥೀಯ ರಾಜಕೀಯವನ್ನು ಉದ್ದೀಪನಗೊಳಿಸಲಾಗಿದೆ. ಜನಸಮೂಹದ ಬೆಂಬಲ ಬಲಪಂಥದ ಕಡೆಗೆ ವಾಲಿದೆ. ಹಾಗಾಗಿ ಇದನ್ನು ಜನವಿರೋಧಿ ಎಂದು ಹೇಳುವುದು ಕಷ್ಟ.

ಹಸಿವು, ನಿರುದ್ಯೋಗ, ದೌರ್ಜನ್ಯ ಎಷ್ಟೇ ಇದ್ದರೂ, ಹೆಂಗಸರ ಮೇಲೆ ಅತ್ಯಾಚಾರ, ದಲಿತರ ಮೇಲೆ ದೌರ್ಜನ್ಯ ನಡೆಯುತ್ತಿದ್ದರೂ ನ್ಯಾಯ ಇದೆ ಎಂದು ಬಿಂಬಿಸಲಾಗುತ್ತಿದೆ. ಬಹುಸಂಖ್ಯಾತರ ವಿರುದ್ಧ ಷಡ್ಯಂತ್ರ ನಡೆದಿದೆ, ಅದನ್ನು ಸರಿಪಡಿಸುತ್ತಿದ್ದೇವೆ ಎಂಬರ್ಥದಲ್ಲಿ ನ್ಯಾಯದ ಪರಿಭಾಷೆಯನ್ನೇ ಬದಲಿಸುವ ರಾಜಕೀಯ ನಡೆಯುತ್ತಿದೆ. ಜನಸಮ್ಮತಿಯ ರಾಜಕೀಯವೇ ಫ್ಯಾಸಿಸಂನ ದೊಡ್ಡ ಬಲ. ಜನಸಮ್ಮತಿ ಗಳಿಸಿಕೊಂಡೇ ಅಧಿಕಾರದ ರಾಜಕೀಯ ನಡೆಯುತ್ತಿದೆ. ‘ಬಾಬರಿ ಮಸೀದಿ ಧ್ವಂಸ ಎಂಬುದು ಅಪರಾಧ ಕೃತ್ಯ. ಹೆಸರಿಸಲಾಗದ ದೇಶದ್ರೋಹಿಗಳು ಇದನ್ನು ಮಾಡಿದ್ದಾರೆ’ ಎಂದು ನ್ಯಾಯಿಕ ವ್ಯವಸ್ಥೆ ಹೇಳುತ್ತದೆ. ಅಂದರೆ, ದೇಶದ ಜನರನ್ನೇ ಅಪರಾಧಿಗಳು ಎಂದು ಹೇಳಿಸುವ ವ್ಯವಸ್ಥೆ. ಹಿಂದೊಮ್ಮೆ ಆಗಿದ್ದ ಅನ್ಯಾಯವನ್ನು ಸರಿಪಡಿಸಲು ಈ ಕೃತ್ಯ ಎಸಗಲಾಗಿದೆ. ಅದು ನಂಬಿಕೆಯ ಪ್ರಶ್ನೆ ಎಂದು ಜನ ಸಮ್ಮತಿ ರಾಜಕೀಯ ನಡೆಸಿದಾಗ ಜನ ಮನಸೋತು ಬೆಂಬಲಿಸುತ್ತಾರೆ. ಇದೇ ಈಗ ನಡೆದಿರುವುದು.

‘ಇವತ್ತು ರಾಜಕೀಯ ಪ್ರಜಾಪ್ರಭುತ್ವವನ್ನು ಪಡೆದಿದ್ದೇವೆ. ನಾವು ಇನ್ನು ಸಾಧಿಸಬೇಕಾಗಿರುವುದು ಸಾಮಾಜಿಕ ಪ್ರಜಾಪ್ರಭುತ್ವ . ಅಂದರೆ, ಜಾತಿ, ಮತ, ಲಿಂಗ ಭೇದವಿಲ್ಲದ ಸಮಾನ ಸ್ವಾತಂತ್ರ್ಯ ಇರುವ ಸಾಂವಿಧಾನಿಕ ಪ್ರಭುತ್ವವನ್ನು ಸ್ಥಾಪಿಸಬೇಕಾಗಿದೆ. ಅದಕ್ಕೆ ತಕ್ಕನಾಗಿ ಜನರನ್ನು ಮಾನಸಿಕವಾಗಿ ತಯಾರು ಮಾಡಬೇಕಾದ ರಾಜಕೀಯ ನಮ್ಮ ಮುಂದಿರುವ ಸವಾಲಾಗಿದೆ. ಆ ರಾಜಕೀಯ ಮಾಡದೇ ಹೋದಲ್ಲಿ, ಸಾಮಾಜಿಕ ಪ್ರಜಾಪ್ರಭುತ್ವ ಅಸ್ತಿತ್ವಕ್ಕೆ ಬರುವುದಿಲ್ಲ. ಅದು ಸ್ಥಾಪಿತವಾಗದೇ ಹೋದರೆ ರಾಜಕೀಯ ಪ್ರಜಾಪ್ರಭುತ್ವ ಎಂಬುದು ಮದ್ದುಗುಂಡುಗಳ ಮೇಲೆ ನಿಂತ ಅಸ್ಥಿರ ಸ್ಥಾವರವಾಗಲಿದೆ’ ಎಂದುಡಾ.ಬಿ.ಆರ್. ಅಂಬೇಡ್ಕರ್ ಅವರು ದೇಶಕ್ಕೆ ಸಂವಿಧಾನವನ್ನು ಒಪ್ಪಿಸುವಾಗಿ ಎಚ್ಚರಿಸಿದ್ದರು. ಇಂದು ಅದೇ ಆಗಿದೆ.

ವಿಶ್ವಾತ್ಮಕ ವಿಮೋಚನಾವಾದಿ ಅಧಿಕಾರವನ್ನು ಸಂವಿಧಾನ ರೂಪದಲ್ಲಿ ಅಂಬೇಡ್ಕರ್ ಅವರು ನಿಶ್ಚಿತ ಠೇವಣಿಯಂತೆ (ಎಫ್‌ಡಿ)‌ ದೇಶಕ್ಕೆ ಕೊಟ್ಟರು. ಅದನ್ನು ಬ್ಯಾಂಕ್‌ನಲ್ಲಿ ಇಟ್ಟ ನಾವು ಕಾಯಲಿಲ್ಲ. 2014ರಿಂದೀಚೆಗೆ ಈ ಎಫ್‌ಡಿ ಮಾತ್ರವಲ್ಲ; ಇಡೀ ಬ್ಯಾಂಕ್ ಅನ್ನೇ ಕೆಲವರು ಹೊತ್ತೊಯ್ದರು. 2019ರ ನವೆಂಬರ್ ತೀರ್ಪು ಹಾಗೂ 2020ರ ಸೆಪ್ಟೆಂಬರ್ 30ರ ತೀರ್ಪು ಬಲಪಂಥೀಯ ವೈದಿಕ ಶಾಹಿ ಫ್ಯಾಸಿಸಂನ ಜಯ ಮಾತ್ರವಲ್ಲ; ವಿಶ್ವಾತ್ಮಕ ವಿಮೋಚನಾವಾದಿ ರಾಜಕೀಯದ ಸೋಲು ಕೂಡ ಹೌದು.

(ಲೇಖಕ: ಸಾಮಾಜಿಕ ಕಾರ್ಯಕರ್ತ, ಬರಹಗಾರ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.