–ಸರ್ಬಾನಂದ ಸೋನೊವಾಲ್, ಕೇಂದ್ರ ಆಯುಷ್ ಹಾಗೂ ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ಸಚಿವರು
'ವಸುಧೈವ ಕುಟುಂಬಕಂ ಗಾಗಿ ಯೋಗ' – ಇದು ಈ ವರ್ಷದ ʻಅಂತರರಾಷ್ಟ್ರೀಯ ಯೋಗ ದಿನʼದ ಧ್ಯೇಯ ವಾಕ್ಯವಾಗಿದೆ. ಈ ಧ್ಯೇಯವಾಕ್ಯವು ಆರೋಗ್ಯಯುತ, ಸಂತೋಷದಾಯಕ, ಶಾಂತಿಯುತ ಮತ್ತು ಕ್ರಿಯಾತ್ಮಕ ಜಗತ್ತನ್ನು ನಿರ್ಮಿಸುವ ನಿಟ್ಟಿನಲ್ಲಿ ʻಅಂತಾರಾಷ್ಟ್ರೀಯ ಯೋಗ ದಿನಾಚರಣೆʼಯಲ್ಲಿ ಭಾಗಿಯಾದ ಎಲ್ಲರ ನಿರಂತರ, ದಿಟ್ಟ ಮತ್ತು ಅವಿರತ ಪ್ರಯತ್ನಗಳನ್ನು ಎತ್ತಿ ಹಿಡಿಯುತ್ತದೆ. ಯೋಗವು ಸಕಾರಾತ್ಮಕ ಶಕ್ತಿಯನ್ನು ತರುತ್ತದೆ. ಹಾಗೆಯೇ, 'ವಸುಧೈವ ಕುಟುಂಬಕಂ' ಎಂದರೆ, ಜಗತ್ತನ್ನು ಒಂದು ದೊಡ್ಡ ಕುಟುಂಬವಾಗಿ ನೋಡುವ ಮತ್ತು ನಂಬುವ ತತ್ವವಾಗಿದೆ. ಈ ರೀತಿಯಲ್ಲಿ ನೋಡಿದಾಗ, ಭಾರತದ ಪ್ರಾಚೀನ ಸಾಂಪ್ರದಾಯಿಕ ಪದ್ಧತಿಯಾದ ಯೋಗವು: 'ಸರ್ವೇ ಭವಂತು ಸುಖಿನಃ, ಸರ್ವೇ ಸಂತು ನಿರಾಮಯ' (ಎಲ್ಲರೂ ಸಂತೋಷವಾಗಲಿ ಮತ್ತು ಎಲ್ಲರೂ ರೋಗ ಮುಕ್ತರಾಗಲಿ') ಎಂಬ ಪ್ರಾಚೀನ ಪ್ರಾರ್ಥನೆಯನ್ನು ಸಾಕಾರಗೊಳಿಸಲು ಪ್ರಬಲ ಪ್ರೇರಕ ಶಕ್ತಿಯಾಗುತ್ತದೆ.
ಕಳೆದ 9 ವರ್ಷಗಳಲ್ಲಿ ʻಆಯುಷ್ʼ ಸಚಿವಾಲಯವು ಒಟ್ಟಾರೆಯಾಗಿ ಅದ್ಭುತ ಪ್ರಗತಿ ಸಾಧಿಸಿದೆ ಎಂಬುದನ್ನು ಪುನರುಚ್ಚರಿಸುತ್ತೇನೆ. ನಮ್ಮ ಗೌರವಾನ್ವಿತ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ದೂರದೃಷ್ಟಿ, ಮುಂಗಾಣಿಕೆ ಮತ್ತು ಭಾರತದ ಸಂಪ್ರದಾಯಗಳ ಬಗ್ಗೆ ಅವರು ಹೊಂದಿರುವ ಆಳವಾದ ತಿಳಿವಳಿಕೆಯೇ ʻಆಯುಷ್ʼ ಅನ್ನು ವೇಗವಾಗಿ ಬೆಳೆಯುವಂತೆ ಮಾಡಿತು. ಜನಸಮೂಹದ ಸೇವೆಯ ಬಗ್ಗೆ ಅವರ ಅವಿರತ ಬದ್ಧತೆ ಮತ್ತು ಭಾರತವು ಪ್ರತಿಯೊಂದು ಕ್ಷೇತ್ರದಲ್ಲೂ ಉತ್ತಮ ಸಾಧನೆ ಮಾಡುವುದನ್ನು ನೋಡುವ ಅವರ ಬಯಕೆಯ ಪರಿಣಾಮವಾಗಿ ʻಅಂತಾರಾಷ್ಟ್ರೀಯ ಯೋಗ ದಿನʼವನ್ನು ಜಗತ್ತಿನಾದ್ಯಂತ ಆಚರಿಸುವಂತಾಯಿತು. ಇದರಲ್ಲಿ ಭಾಗವಹಿಸುವವರ ಸಂಖ್ಯೆ ಅನೇಕ ಪಟ್ಟು ಹೆಚ್ಚಾಗಿದೆ. ನಮ್ಮ ಗೌರವಾನ್ವಿತ ಪ್ರಧಾನ ಮಂತ್ರಿಗಳು, 2014ರಲ್ಲಿ, ಪ್ರತಿವರ್ಷ ಜೂನ್ 21ರಂದು ʻಅಂತರರಾಷ್ಟ್ರೀಯ ಯೋಗ ದಿನʼವನ್ನು ಆಚರಿಸುವ ಪ್ರಸ್ತಾಪದ ರೂಪದಲ್ಲಿ ಜಾಗತಿಕ ಯೋಗಕ್ಷೇಮ ಮತ್ತು ಸಮಗ್ರ ಆರೋಗ್ಯದ 'ಮಂತ್ರ'ವನ್ನು ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳ ಮುಂದಿಟ್ಟರು. ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳು ಆಗ ಈ ಪ್ರಸ್ತಾಪವನ್ನು ಸರ್ವಾನುಮತದಿಂದ ಒಪ್ಪಿಕೊಂಡವು ಮತ್ತು ಈಗ ಜಗತ್ತು ಅದನ್ನು ಪೂರ್ಣ ಹೃದಯದಿಂದ ಸ್ವೀಕರಿಸುತ್ತಿದೆ.
'ವಸುಧೈವ ಕುಟುಂಬಕಂ ಗಾಗಿ ಯೋಗ' ಒಂದು ದಿನದಲ್ಲಿ ರೂಪುಗೊಂಡಿದ್ದಲ್ಲ. ಇದು ನಮ್ಮ ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಅವರ ಪರಿಕಲ್ಪನೆ. ಅಷ್ಟೇ ಅಲ್ಲ, ಇದು ಅನೇಕರಿಂದ ಉತ್ತಮ ಚಿಂತನ-ಮಂಥನಕ್ಕೆ ಒಳಗಾದ, ಚರ್ಚಿಸಲ್ಪಟ್ಟ, ಪ್ರತಿಬಿಂಬಿತವಾದ ವಿಷಯವಾಗಿದೆ. ʻಜಿ 20ʼ ರಾಷ್ಟ್ರಗಳು ಮತ್ತು ʻಶಾಂಘೈ ಸಹಕಾರ ಸಂಸ್ಥೆʼ (ಎಸ್‌ಸಿಒ) ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳು ಹಾಗೂ ʻಎಸ್‌ಸಿಒʼ ಪಾಲುದಾರರು ಸಹ ಯೋಗವನ್ನು ಹೆಚ್ಚಿನ ಗೌರವದಿಂದ ಕಾಣುತ್ತಾರೆ. ಈ ವರ್ಷ ʻಅಂತಾರಾಷ್ಟ್ರೀಯ ಯೋಗ ದಿನʼದಂದು ವಿವಿಧ ದೇಶಗಳ ನಿಯೋಗಗಳು ಭಾರತದಲ್ಲಿ ಯೋಗಾಭ್ಯಾಸ ಮಾಡಲಿವೆ.
ನಾವು ಈಗಾಗಲೇ ಕಾಣುತ್ತಿರುವಂತೆ, ʻಅಂತರರಾಷ್ಟ್ರೀಯ ಯೋಗ ದಿನʼವು ಸಾಮೂಹಿಕವಾಗಿ ಯೋಗ ಸ್ವೀಕಾರದ ಹೆಚ್ಚಳಕ್ಕೆ ಸಾಕ್ಷಿಯಾಗಿದೆ. ಯೋಗದ ವಿಚಾರವಾಗಿ ಇಡೀ ಸರ್ಕಾರದ ಕಾರ್ಯವಿಧಾನವು ಸಮಗ್ರ ರೂಪ ಪಡೆದಿದೆ. ಭಾರತ ಸರ್ಕಾರದ ಪ್ರತಿಯೊಂದು ಸಚಿವಾಲಯ ಹಾಗೂ ಪಾಲುದಾರರು ಸಹಯೋಗದೊಂದಿಗೆ ಕೆಲಸ ಮಾಡುತ್ತಿದ್ದಾರೆ. ಅಂತರರಾಷ್ಟ್ರೀಯ ಯೋಗ ದಿನದ ಸಂದರ್ಭದಲ್ಲಿ ಯೋಗ ಕಾರ್ಯಕ್ರಮಗಳನ್ನು ಆಯೋಜಿಸಲು ವಿದೇಶಾಂಗ ಸಚಿವಾಲಯವು ಭಾರತೀಯ ರಾಜತಾಂತ್ರಿಕ ಕಚೇರಿಗಳು, ವಿದೇಶದಲ್ಲಿರುವ ಭಾರತೀಯ ರಾಯಭಾರ ಕಚೇರಿಗಳು ಮತ್ತು ವಿಶ್ವದಾದ್ಯಂತದ ಕಾನ್ಸುಲೇಟ್‌ಗಳನ್ನು ಪ್ರೋತ್ಸಾಹಿಸುತ್ತದೆ. ಇದು ಜಾಗತಿಕ ಸಮುದಾಯದಲ್ಲಿ ಯೋಗವನ್ನು ಉತ್ತೇಜಿಸುತ್ತದೆ ಮತ್ತು ಭಾರತದ ಸಾಂಸ್ಕೃತಿಕ ರಾಜತಾಂತ್ರಿಕತೆಯನ್ನು ಬಲಪಡಿಸುತ್ತದೆ. ಅಂತೆಯೇ, ಇತರ ಸಚಿವಾಲಯಗಳು ಸಹ ತಮ್ಮ ಸಾಮರ್ಥ್ಯ ಕ್ಷೇತ್ರದಲ್ಲಿ ಈ ನಿಟ್ಟಿನಲ್ಲಿ ಶ್ರಮ ವಹಿಸುತ್ತಿವೆ.
ʻಅಂತರರಾಷ್ಟ್ರೀಯ ಯೋಗ ದಿನ-2023ʼ (ಐಡಿವೈ-2023) ಧ್ಯೇಯವಾಕ್ಯವನ್ನು ಗರಿಷ್ಠ ಮಟ್ಟದಲ್ಲಿ ಅರ್ಥಪೂರ್ಣಗೊಳಿಸುವ ನಿಟ್ಟಿನಲ್ಲಿ ಮಾಡಬೇಕಾದ ಮೊದಲ ಮಹತ್ವದ ಕಾರ್ಯವೆಂದರೆ ಅದು ವಿಶ್ವದ ಪ್ರತಿಯೊಂದು ಮೂಲೆ ಮೂಲೆಯನ್ನು ತಲುಪುವುದು. ಕಳೆದ ವರ್ಷ ನಾವು ಈ ಉದ್ದೇಶಕ್ಕಾಗಿ 'ಗಾರ್ಡಿಯನ್ ರಿಂಗ್ ಆಫ್ ಯೋಗ' ಹೊಂದಿದ್ದೆವು. ಈ ವರ್ಷ ನಾವು 'ಸಾಗರ ಉಂಗುರ' ಹಾಗೂ 'ಆರ್ಕ್ಟಿಕ್‌ನಿಂದ ಅಂಟಾರ್ಕ್ಟಿಕ ದೇಶಗಳವರೆಗೆ ಯೋಗ' ಹೆಸರಲ್ಲಿ ಯೋಗ ಪ್ರದರ್ಶನವನ್ನು ನಡೆಸುತ್ತಿದ್ದೇವೆ. ಇದರ ಅಂಗವಾಗಿ ಪ್ರಧಾನ ಭೂ ಮಧ್ಯ ರೇಖೆಯ ಮೇಲೆ ಅಥವಾ ಸನಿಹ ಬರುವ ದೇಶಗಳಾದ್ಯಂತ ಯೋಗ ಆಯೋಜನೆ ನಡೆಯಲಿದೆ. ಈ ಎರಡು ಅವಲೋಕನಗಳು ಜೂನ್ 21ರಂದು ʻಅಂತರರಾಷ್ಟ್ರೀಯ ಯೋಗ ದಿನಾಚರಣೆʼಯಲ್ಲಿ ಜಾಗತಿಕ ಸಮುದಾಯಗಳ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸುತ್ತವೆ. ಅಲ್ಲದೆ, ಯಾವುದೇ ಸಂದರ್ಭವಾದರೂ ಯಾವುದೇ ಜಾಗವಾದರೂ ಯೋಗವು ಜೀವನವನ್ನು ಉಳಿಸುವ ಶಕ್ತಿಯಾಗಿದೆ ಎಂಬ ಸಂದೇಶವನ್ನೂ ಈ ಎರಡೂ ಅವಲೋಕನಗಳು ಸಾರುತ್ತವೆ.
ಉತ್ತರ ಮತ್ತು ದಕ್ಷಿಣ ಧ್ರುವ ಪ್ರದೇಶದಲ್ಲಿ ಯೋಗ ನಡೆಯಲಿದೆ. ಆರ್ಕ್ಟಿಕ್‌ನ ಸ್ವಾಲ್ಬಾರ್ಡ್‌ರ್ಡ್‌ನಲ್ಲಿರುವ ಭಾರತೀಯ ಸಂಶೋಧನಾ ನೆಲೆಯಾದ ʻಹಿಮಾದ್ರಿʼಯಲ್ಲಿ; ಜೊತೆಗೆ, ಅಂಟಾರ್ಕ್ಟಿಕಾದ ಮೂರನೇ ಭಾರತೀಯ ಸಂಶೋಧನಾ ನೆಲೆಯಾದ ʻಭಾರತಿʼಯಲ್ಲೂ ಯೋಗ ದಿನಾಚರಣೆ ನಡೆಯಲಿದೆ.
ʻಅಂತರರಾಷ್ಟ್ರೀಯ ಯೋಗ ದಿನ-2023ʼ ಆಚರಣೆಯಲ್ಲಿ ಪ್ರತಿಯೊಂದು ವಿಭಾಗ, ವರ್ಗ, ಗುಂಪುಗಳನ್ನು ಒಳಗೊಳ್ಳುವ ಸಲುವಾಗಿ, ನಮ್ಮ ದೇಶದಲ್ಲಿ ಅಂತರರಾಷ್ಟ್ರೀಯ ಯೋಗ ದಿನದಂದು ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಭಾರತೀಯ ಸೇನೆ, ವಾಯುಪಡೆ, ನೌಕಾಪಡೆ, ಕರಾವಳಿ ಕಾವಲು ಪಡೆ ಹಾಗೂ ಗಡಿ ರಸ್ತೆ ಸಂಸ್ಥೆಯ (ಬಿಆರ್‌ಒ) ಭಾಗವಹಿಸುವಿಕೆಯೊಂದಿಗೆ ʻಯೋಗ ಭಾರತ ಮಾಲಾʼವನ್ನು ರಚಿಸಲಾಗುವುದು. ಗ್ರಾಮೀಣಾಭಿವೃದ್ಧಿ ಸಚಿವಾಲಯದ ʻಅಮೃತ್ ಸರೋವರʼಗಳು ಕೂಡ ಈ ವರ್ಷದ ಯೋಗ ದಿನಾಚರಣೆಯ ಭಾಗವಾಗಲಿವೆ. ಶಿಕ್ಷಣ ಸಚಿವಾಲಯ, ರಕ್ಷಣಾ ಸಚಿವಾಲಯ ಮತ್ತು ಭಾರತ ಸರ್ಕಾರದ ಇತರ ಪ್ರಮುಖ ಸಚಿವಾಲಯಗಳು ಈ ಆಚರಣೆಯ ಅವಿಭಾಜ್ಯ ಅಂಗಗಳಾಗಿವೆ. ಇದು ಇಡೀ ಸರ್ಕಾರದ ಕಾರ್ಯವಿಧಾನವನ್ನು ಪ್ರತಿಬಿಂಬಿಸುತ್ತದೆ. ಅಂತರರಾಷ್ಟ್ರೀಯ ಯೋಗ ದಿನವು ಪ್ರತಿಯೊಬ್ಬರಿಗೂ ಸಂಬಂಧಿಸಿದ್ದಾಗಿದೆ. ನಮ್ಮಲ್ಲಿ ಪ್ರತಿಯೊಬ್ಬರಿಗೂ ಇದರಲ್ಲಿ ಒಂದು ಪಾತ್ರವಿದೆ ಎಂದು ಸ್ಪಷ್ಟವಾಗಿ ತೋರಿಸುವುದು ಇದರ ಉದ್ದೇಶವಾಗಿದೆ.
ಗ್ರಾಮ ಮಟ್ಟದಲ್ಲಿ ʻಸಾಮಾನ್ಯ ಯೋಗ ಶಿಷ್ಟಾಚಾರʼ (ʻಕಾಮನ್ ಯೋಗ ಪ್ರೊಟೊಕಾಲ್-ಸಿವೈಪಿ) ಆಚರಿಸಲಾಗುವುದು. ಇದಕ್ಕಾಗಿ ಗ್ರಾಮಗಳ ʻಸಾಮಾನ್ಯ ಸೇವಾ ಕೇಂದ್ರʼಗಳನ್ನು ಸಹ ಬಳಸಿಕೊಳ್ಳಲಾಗುತ್ತದೆ.
ʻರಾಷ್ಟ್ರೀಯ ಆಯುಷ್ ಮಿಷನ್ʼ ಅಡಿಯಲ್ಲಿ ಬರುವ ʻಆಯುಷ್ ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರʼಗಳು ಸಹ ʻಸಾಮಾನ್ಯ ಯೋಗ ಶಿಷ್ಟಾಚಾರʼ ಆಚರಣೆಗೆ ಸಾಕ್ಷಿಯಾಗಲಿವೆ. ಇದು ಭಾರತದಾದ್ಯಂತದ ಎಲ್ಲಾ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಲ್ಲಿ ನಡೆಯಲಿದೆ. ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು ಮುಂತಾದ ಎಲ್ಲಾ ಆಯುಷ್ ಕೇಂದ್ರಗಳಲ್ಲಿ ʻಸಿವೈಪಿʼ ಅಭ್ಯಾಸ ಮಾಡಲಾಗುತ್ತದೆ. ಪ್ರತಿ ರಾಜ್ಯದ ಒಂದು ಆಯುಷ್ ಗ್ರಾಮವೂ ʻಸಿವೈಪಿʼ ಅಭ್ಯಾಸದಲ್ಲಿ ಭಾಗವಹಿಸುತ್ತದೆ. ಈ ಉದ್ದೇಶಕ್ಕಾಗಿ ಗುರುತಿಸಲಾದ ಗ್ರಾಮದಲ್ಲಿ ಯೋಗ ತರಬೇತುದಾರರನ್ನು ನೇಮಿಸಲಾಗಿದೆ. ಇದರಿಂದ 'ಸಂಪೂರ್ಣ ಯೋಗ ಗ್ರಾಮ'ದ ಸ್ಥಾನಮಾನವನ್ನು ಸಾಧಿಸಬಹುದು. ಯೋಗವನ್ನು ಗ್ರಾಮೀಣ ಮತ್ತು ದೂರದ ಪ್ರದೇಶಗಳಿಗೆ ಕೊಂಡೊಯ್ಯುವ ಮೂಲಕ 'ಹರ್ ಆಂಗನ್ ಯೋಗ' ಧ್ಯೇಯವನ್ನು ಸಾಧಿಸುವುದು ಅಂತಿಮ ಉದ್ದೇಶವಾಗಿದೆ. ಇದಕ್ಕಾಗಿ ಭಾರತದ 2 ಲಕ್ಷಕ್ಕೂ ಹೆಚ್ಚು ಹಳ್ಳಿಗಳಲ್ಲಿ ʻಸಾಮಾನ್ಯ ಯೋಗ ಶಿಷ್ಟಾಚಾರʼದಲ್ಲಿ ಜನರಿಗೆ ತರಬೇತಿ ನೀಡಲು ಅವಕಾಶ ಕಲ್ಪಿಸಲಾಗಿದೆ.
ಈ ವರ್ಷ, ನಮ್ಮ ಗೌರವಾನ್ವಿತ ಪ್ರಧಾನ ಮಂತ್ರಿಗಳು ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಯೋಗ ಪ್ರದರ್ಶನದ ನೇತೃತ್ವ ವಹಿಸಲಿದ್ದಾರೆ. ಇದು ಅಂತರರಾಷ್ಟ್ರೀಯ ಮಟ್ಟದಲ್ಲಿ ಯೋಗಕ್ಕೆ ದೊಡ್ಡ ಬೆಂಬಲವನ್ನು ತಂದುಕೊಡುವ ಖಾತರಿ ನನಗಿದೆ. ಅಲ್ಲದೆ, ಈ ವರ್ಷದ ಅಂತರರಾಷ್ಟ್ರೀಯ ಯೋಗ ದಿನದ ಮುಖ್ಯ ಕಾರ್ಯಕ್ರಮವು ಜೂನ್ 21ರಂದು ಮಧ್ಯಪ್ರದೇಶದ ಜಬಲ್‌ಪುರದಲ್ಲಿ ನಡೆಯಲಿದೆ. ಭಾರತದ ಗೌರವಾನ್ವಿತ ಉಪರಾಷ್ಟ್ರಪತಿ ಜಗದೀಪ್ ಧನ್‌ಕರ್ ಅವರು ಜಬಲ್‌ಪುರದ ಗ್ಯಾರಿಸನ್ ಮೈದಾನದಲ್ಲಿ ಸಾಮೂಹಿಕ ಯೋಗ ಪ್ರದರ್ಶನದ ನೇತೃತ್ವ ವಹಿಸಲಿದ್ದಾರೆ. ಮಧ್ಯಪ್ರದೇಶದ ರಾಜ್ಯಪಾಲರಾದ ಮಂಗುಭಾಯಿ ಪಟೇಲ್, ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಆಯುಷ್ ಸಚಿವಾಲಯದ ಸಹಾಯಕ ಸಚಿವ ಡಾ. ಮುಂಜಪರ ಮಹೇಂದ್ರಭಾಯಿ ಮತ್ತು ಇತರ ಗಣ್ಯರು ಭಾಗವಹಿಸಲಿದ್ದಾರೆ.
ನಾವು ʻಅಂತರರಾಷ್ಟ್ರೀಯ ಯೋಗ ದಿನ-2023ʼ ಆಚರಣೆಯತ್ತ ಸಾಗುತ್ತಿರುವಾಗ ಸಂದರ್ಭದಲ್ಲಿ, ಪ್ರತಿ ನಿಮಿಷ, ಪ್ರತಿ ಸೆಕೆಂಡು ಮತ್ತು ಪ್ರತಿಯೊಂದು ಸ್ಥಳವು ಅತ್ಯಂತ ಪ್ರಾಮುಖ್ಯತೆಯನ್ನು ಪಡೆಯುತ್ತದೆ. ʻಅಂತರರಾಷ್ಟ್ರೀಯ ಯೋಗ ದಿನ-2023ʼ ಅನ್ನು ಯಶಸ್ವಿಗೊಳಿಸುವಲ್ಲಿ ನಮ್ಮ ಪ್ರತಿಯೊಬ್ಬರ ಪಾತ್ರವೂ ಮುಖ್ಯವಾಗಿದೆ. ಸ್ವಲ್ಪ ಸಮಯ ಮಾಡಿಕೊಳ್ಳಿ, ಯೋಗದ ಶಮನಕಾರಿ ಶಕ್ತಿಯಲ್ಲಿ ನಿಮ್ಮನ್ನು ತಲ್ಲೀನರಾಗಿಸಿ. ನಾನು ಸಹ ಪ್ರತಿದಿನ ಇದನ್ನೇ ಮಾಡುತ್ತೇನೆ. ನನ್ನನ್ನು ನಂಬಿ, ಈ ವರ್ಷ 'ಯೋಗ'ವನ್ನು 'ವಸುಧೈವ ಕುಟುಂಬಕಂ' ಶಕ್ತಿಯೊಂದಿಗೆ ಸಂಯೋಜಿಸಿರುವುದರಿಂದ ಈ ವರ್ಷದ ಅಂತರರಾಷ್ಟ್ರೀಯ ಯೋಗದಿನ ಅತ್ಯಂತ ವಿಶೇಷವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.