ಎಂಥ ವಿಚಿತ್ರ ನೋಡಿ; ರಕ್ಷಣಾ ಆಮದಿನ ವಿಚಾರದಲ್ಲಿ ಒಂದು ಕಡೆಯಿಂದ ಮೊದಲ ಸ್ಥಾನದಲ್ಲಿ ಯುಎಇ, ಎರಡನೇ ಸ್ಥಾನದಲ್ಲಿ ಭಾರತವಿದೆ. ಭಾರತವು ‘ಪ್ರಮುಖ ರಕ್ಷಣಾ ಆಮದುದಾರ’ನೆಂಬ ಟ್ಯಾಗ್ ಕೂಡ ಗಳಿಸಿದೆ. ಆದರೆ ಇನ್ನೊಂದೆಡೆ, ಭಾರತವು ರಕ್ಷಣಾ ರಫ್ತುದಾರನಾಗಿಯೂ ಹೊರಹೊಮ್ಮುತ್ತಿದೆ.
ಪ್ರಧಾನಿ ನರೇಂದ್ರ ಮೋದಿಯವರ ಆತ್ಮನಿರ್ಭರ ಭಾರತ್ ಕರೆಯನ್ನು ರಕ್ಷಣಾ ಕ್ಷೇತ್ರಕ್ಕಿಂತ ಗಂಭೀರವಾಗಿ ಬೇರಾವ ಕ್ಷೇತ್ರವೂ ಪರಿಗಣಿಸಿಲ್ಲ. ಆತ್ಮನಿರ್ಭರ ಭಾರತ್ ಕರೆಯು ದೇಶದ ಕೋವಿಡ್-19 ರೀತಿಯ ಪರಿಸ್ಥಿತಿಗೆ ಮತ್ತೆ ಸಿದ್ಧವಾಗುವ ಹಾಗೂ ಆರ್ಥಿಕವಾಗಿ ಸ್ವಾವಲಂಬಿ ರಾಷ್ಟ್ರವನ್ನು ರಚಿಸುವ ಗುರಿಯನ್ನು ಹೊಂದಿದೆ. ಅದಕ್ಕೂ ಮೊದಲು ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ಮೊದಲ ಅಧಿಕಾರಾವಧಿಯಲ್ಲಿ, 'ಮೇಕ್ ಇನ್ ಇಂಡಿಯಾ' ಉಪಕ್ರಮಕ್ಕೆ ಪ್ರಧಾನಿಯವರು ಕರೆ ನೀಡಿದ್ದರು.
ರಕ್ಷಣಾ ಉಪಕರಣಗಳು ಮತ್ತು ಸಾಮಗ್ರಿಗಳ ರಫ್ತಿನ ಪ್ರಮಾಣ ಪ್ರತಿ ವರ್ಷವೂ ಹೆಚ್ಚುತ್ತಿರುವುದು, ಪ್ರಧಾನಿಯವರ ಕರೆಗೆ ರಕ್ಷಣಾ ಕ್ಷೇತ್ರ ತೋರಿರುವ ಬದ್ಧತೆಯನ್ನು ಪ್ರದರ್ಶಿಸುತ್ತದೆ.
ಭಾರತ ಸರ್ಕಾರದ ಅಂಕಿ-ಅಂಶಗಳ ಪ್ರಕಾರ ದೇಶವು 2014ರಿಂದ ಈಚೆಗೆ ಏಳು ವರ್ಷಗಳಲ್ಲಿ ₹38,500 ಕೋಟಿ ಮೌಲ್ಯದ ಮಿಲಿಟರಿ ಹಾರ್ಡ್‌ವೇರ್ ಮತ್ತು ಸಿಸ್ಟಮ್‌ಗಳನ್ನು ರಫ್ತು ಮಾಡಿದೆ.
ಸಂಸತ್ತಿನಲ್ಲಿ ಸರ್ಕಾರ ಒದಗಿಸಿರುವ ವಿವರಗಳ ಪ್ರಕಾರ, 2014-15ರಲ್ಲಿ ಭಾರತದ ರಕ್ಷಣಾ ರಫ್ತು ₹1,940.64 ಕೋಟಿ ಮೌಲ್ಯದ್ದಾಗಿತ್ತು. ಮುಂದಿನ ವರ್ಷ, ಅಂದರೆ 2015-16ರಲ್ಲಿ ಅದು ₹2,059.18 ಕೋಟಿಗೆ ಏರಿಕೆಯಾಗಿದೆ. 2016-17ರಲ್ಲಿ ₹1,521.91 ಕೋಟಿ ಮತ್ತು 2017-18ರಲ್ಲಿ ₹4,682.36 ಕೋಟಿ ಮತ್ತು 2018-19ರಲ್ಲಿ ₹10,745.77 ಕೋಟಿಗೆ ಬೆಳೆದಿದೆ. 2019-20ರಲ್ಲಿ ₹9,115.55 ಕೋಟಿ ಮತ್ತು 2020-21ರಲ್ಲಿ ₹8,434.84 ಕೋಟಿಗೆ ಹಿಗ್ಗಿದೆ. 2014-15ರಿಂದ ಈ ವರೆಗಿನ ಎಲ್ಲವನ್ನೂ ಕೂಡಿಸಿದರೆ ರಫ್ತಿನ ಒಟ್ಟು ಮೊತ್ತವು ₹38,500.25 ಕೋಟಿಯಾಗುತ್ತದೆ.
ಕಳೆದ ಐದು ವರ್ಷಗಳಲ್ಲಿ ಭಾರತದ ರಕ್ಷಣಾ ರಫ್ತು ಶೇ 325ರಷ್ಟು ಹೆಚ್ಚಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಉಲ್ಲೇಖಸಿದ್ದರು. ರಾಷ್ಟ್ರೀಯ ಭದ್ರತೆಯ ಹಿತಾಸಕ್ತಿಯಲ್ಲಿ ಸಾರ್ವಜನಿಕ ವಲಯ ಮತ್ತು ಖಾಸಗಿ ವಲಯದ ಜಂಟಿ ಉದ್ಯಮ ಮತ್ತು ಸಮನ್ವಯವು ಇದಕ್ಕೆ ಕಾರಣ ಎಂದು ಅವರು ಹೇಳಿದ್ದರು.
ಸ್ಥಳೀಯ ಉತ್ಪಾದನೆಯನ್ನು ಮತ್ತು ರಫ್ತುಗಳನ್ನು ಹೆಚ್ಚಿಸುವ ಉದ್ದೇಶದಿಂದ ‘ಆರ್ಡಿನೆನ್ಸ್ ಫ್ಯಾಕ್ಟರಿ ಬೋರ್ಡ್ (OFB)’ ಅನ್ನು ವಿಸರ್ಜಿಸಲು ಸರ್ಕಾರವು ನಿರ್ಧರಿಸಿದೆ. ಮುಂದಿನ ದಿನಗಳಲ್ಲಿ ಏಳು ಹೊಸ ಕಂಪನಿಗಳು ದೇಶದಲ್ಲಿ ಸೇನೆಗೆ ಪ್ರಬಲ ನೆಲೆಯನ್ನು ರೂಪಿಸಲಿವೆ.
‘ಆತ್ಮ ನಿರ್ಭರ್ ಭಾರತ್ (ಸ್ವಾವಲಂಬಿ ಭಾರತ) ದೃಷ್ಟಿಗೆ ಅನುಗುಣವಾಗಿ ಈ ಹೊಸ ಕಂಪನಿಗಳು ಆಮದಿಗೆ ಪರ್ಯಾಯವಾದ ತಯಾರಿಕೆಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ’ ಎಂದು ಮೋದಿ ಅವರು ಸಂಸತ್ತಿನಲ್ಲಿ ಹೇಳಿದ್ದಾರೆ. ಕಳೆದ ಐದು ವರ್ಷಗಳಲ್ಲಿ ನಮ್ಮ ರಕ್ಷಣಾ ರಫ್ತು ಶೇ 325ರಷ್ಟು ಹೆಚ್ಚಿರುವುದರಿಂದ, ನಮ್ಮ ಕಂಪನಿಗಳು ತಮ್ಮ ಉತ್ಪನ್ನಗಳಲ್ಲಿ ಪರಿಣತಿಯನ್ನು ಸಾಧಿಸುವುದು ಮಾತ್ರವಲ್ಲದೆ ಜಾಗತಿಕ ಬ್ರ್ಯಾಂಡ್ ಆಗುವುದು ನಮ್ಮ ಗುರಿಯಾಗಿದೆ ಎಂದೂ ಅವರು ತಿಳಿಸಿದ್ದಾರೆ.
ಸ್ಟಾಕ್‌ಹೋಮ್ ಇಂಟರ್‌ನ್ಯಾಷನಲ್ ಪೀಸ್ ರಿಸರ್ಚ್ ಇನ್‌ಸ್ಟಿಟ್ಯೂಟ್ (ಅಂತರಾಷ್ಟ್ರೀಯ ಶಾಂತಿ ಸಂಶೋಧನಾ ಸಂಸ್ಥೆ)ಯ 2020ರ ವರದಿಯನ್ನು ಉಲ್ಲೇಖಿಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಕ್ಷಣಾ ಉತ್ಪನ್ನಗಳನ್ನು ರಫ್ತು ಮಾಡುವ ಟಾಪ್ 25 ರಾಷ್ಟ್ರಗಳಲ್ಲಿ ಭಾರತವೂ ಸೇರಿದೆ ಎಂಬ ಮಾಹಿತಿಯನ್ನು ನೀಡಿದ್ದಾರೆ.
2025ರ ವೇಳೆಗೆ 5 ಬಿಲಿಯನ್ ಅಮೆರಿಕನ್ ಡಾಲರ್ ವಾರ್ಷಿಕ ರಫ್ತು ಗುರಿಯೊಂದಿಗೆ ವಿಶ್ವದ ಅಗ್ರ ಐದು ಏರೋಸ್ಪೇಸ್ ಮತ್ತು ರಕ್ಷಣಾ ತಯಾರಕರಲ್ಲಿ ಒಂದಾಗುವ ಗುರಿಯೊಂದಿಗೆ 'ಡಿಫೆನ್ಸ್ ಪ್ರೊಡಕ್ಷನ್ ಪಾಲಿಸಿ -2018' ಅನ್ನು ಭಾರತವು ಜಾರಿಗೆ ತಂದಿತು. ಆದರೆ, ಒಎಫ್‌ಬಿಯಂತಹ ಕೈಗಾರಿಕೆಗಳ ಮೇಲಿನ ರಫ್ತು ನಿರ್ಬಂಧಗಳ ಕಾರಣದಿಂದಾಗಿ ಶಸ್ತ್ರಾಸ್ತ್ರ ರಫ್ತುದಾರನಾಗಿ ದೇಶವು ಇನ್ನೂ ಶೈಶವಾವಸ್ಥೆಯಲ್ಲಿದೆ. ಈ ಎಲ್ಲದರ ನಡುವೆ, ದೇಶದ ರಫ್ತು ಉದ್ಯಮವು ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳು, ಶಸ್ತ್ರಾಸ್ತ್ರಗಳ ಬಿಡಿಭಾಗಗಳು, ರಾಸಾಯನಿಕಗಳು ಮತ್ತು ಸ್ಫೋಟಕಗಳು, ಪ್ಯಾರಾಚೂಟ್‌ಗಳು, ಚರ್ಮ ಮತ್ತು ಬಟ್ಟೆಯ ವಸ್ತುಗಳನ್ನು ಥೈಲೆಂಡ್, ಮಲೇಷ್ಯಾ, ಇಂಡೋನೇಷ್ಯಾ, ಶ್ರೀಲಂಕಾ, ಬಾಂಗ್ಲಾದೇಶ, ಜರ್ಮನಿ, ಬೆಲ್ಜಿಯಂ, ಟರ್ಕಿ, ಈಜಿಪ್ಟ್, ಓಮನ್, ಇಸ್ರೇಲ್, ಕೀನ್ಯಾ, ನೈಜೀರಿಯಾ, ಬೋಟ್ಸ್‌ವಾನ, ಚಿಲಿ, ಸುರಿನಾಮ್ ಮತ್ತು ಅಮೆರಿಕ ಮುಂತಾದ 30ಕ್ಕೂ ಹೆಚ್ಚು ದೇಶಗಳನ್ನು ಕೇಂದ್ರೀಕರಿಸಿದೆ.
ಭಾರತದ ರಕ್ಷಣಾ ರಫ್ತುಗಳಲ್ಲಿನ ಈ ಗಣನೀಯ ಹೆಚ್ಚಳಕ್ಕೆ 2014ರಿಂದ ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರವು ಅಳವಡಿಸಿಕೊಂಡ ಉದಾರ ನೀತಿಗಳೇ ಕಾರಣವಾಗಿವೆ.
ಮಾರ್ಚ್ 2011ರಲ್ಲಿ, ಭಾರತವು ಸ್ಥಳೀಯವಾಗಿ ವಿನ್ಯಾಸಗೊಳಿಸಿದ ಮತ್ತು ನಿರ್ಮಿಸಿದ 'ಬರ್ರಾಕುಡಾ' ಎಂಬ ತನ್ನ ಮೊದಲ ಮಲ್ಟಿರೋಲ್ ಆಫ್‌ಶೋರ್ ಗಸ್ತು ಹಡಗನ್ನು (OPV) ಮಾರಿಷಸ್‌ಗೆ ಮಾರಾಟ ಮಾಡಲು ಒಪ್ಪಿಕೊಂಡಿತು.
ಮಾರ್ಚ್ 2017ರಲ್ಲಿ, ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ, ಹಗುರವಾದ 37.9 ಮಿಲಿಯನ್ ಡಾಲರ್ ಮೌಲ್ಯದ ಟಾರ್ಪಿಡೊಗಳ ಮಾರಾಟಕ್ಕಾಗಿ ಭಾರತವು ಮ್ಯಾನ್ಮಾರ್‌ನೊಂದಿಗೆ ಒಪ್ಪಂದವನ್ನು ಅಂತಿಮಗೊಳಿಸಿದೆ. ಇದೇ ರೀತಿಯ ನೌಕಾ ವೇದಿಕೆಗಳನ್ನು ಶ್ರೀಲಂಕಾ ಮತ್ತು ವಿಯೆಟ್ನಾಂಗೆ ಮಾರಾಟ ಮಾಡಲಾಯಿತು.
ಸೆಪ್ಟೆಂಬರ್ 2017ರಲ್ಲಿ, ಯುಎಇಯಿಂದ 40,000 ಸಂಖ್ಯೆಗಳ 155 ಎಂಎಂ ಫಿರಂಗಿ ಶೆಲ್‌ಗಳನ್ನು ₹3.22 ಬಿಲಿಯನ್ (43 ಮಿಲಿಯನ್ ಅಮೆರಿಕನ್ ಡಾಲರ್‌ಗಳು) ಮೊತ್ತಕ್ಕೆ ಪೂರೈಸಲು ತನ್ನ ಅತಿದೊಡ್ಡ ರಫ್ತು ಆದೇಶವನ್ನು ಒಎಫ್‌ಬಿ ಪಡೆದುಕೊಂಡಿತು. ಆಗಸ್ಟ್ 2019ರಲ್ಲಿ, ಮತ್ತೊಮ್ಮೆ 50,000 ಫಿರಂಗಿ ಶೆಲ್‌ಗಳನ್ನು ಪೂರೈಸಲು ಯುಎಇಯಿಂದ ಎರಡನೇ ಆದೇಶವನ್ನು ಒಎಫ್‌ಬಿ ಪಡೆಯಿತು.
ಖಾಸಗಿ ವಲಯದ ಸುಮಾರು 50 ಭಾರತೀಯ ಕಂಪನಿಗಳು ರಕ್ಷಣಾ ರಫ್ತಿಗೆ ತಮ್ಮ ಕೊಡುಗೆ ನೀಡಿವೆ. ರಕ್ಷಣಾ ಉತ್ಪನ್ನಗಳಿಗೆ ಇಟಲಿ, ಮಾಲ್ಡೀವ್ಸ್, ಶ್ರೀಲಂಕಾ, ರಷ್ಯಾ, ಫ್ರಾನ್ಸ್, ನೇಪಾಳ, ಮಾರಿಷಸ್, ಇಸ್ರೇಲ್, ಈಜಿಪ್ಟ್, ಯುಎಇ, ಭೂತಾನ್, ಇಥಿಯೋಪಿಯಾ, ಸೌದಿ ಅರೇಬಿಯಾ, ಫಿಲಿಪ್ಫೀನ್ಸ್, ಪೋಲೆಂಡ್, ಸ್ಪೇನ್ ಮತ್ತು ಚಿಲಿ ಕೆಲವು ನಿರ್ಣಾಯಕ ರಫ್ತು ತಾಣಗಳಾಗಿವೆ. ರಫ್ತು ಮಾಡಲಾಗುತ್ತಿರುವ ಪ್ರಮುಖ ರಕ್ಷಣಾ ವಸ್ತುಗಳಲ್ಲಿ ವೈಯಕ್ತಿಕ ರಕ್ಷಣಾ ವಸ್ತುಗಳು, ಕಡಲಾಚೆಯ ಗಸ್ತು ಹಡಗುಗಳು, ಎಎಲ್‌ಎಚ್ ಹೆಲಿಕಾಪ್ಟರ್, ಎಸ್ ಏವಿಯಾನಿಕ್ಸ್, ಭಾರತಿ ರೇಡಿಯೋ, ಕರಾವಳಿ ಕಣ್ಗಾವಲು ವ್ಯವಸ್ಥೆಗಳು, ‘ಕವಚ್ ಎಂಒಡಿ ಸೆಕೆಂಡ್’ ಲಾಂಚರ್ ಮತ್ತು ಎಫ್‌ಸಿಎಸ್, ರಾಡಾರ್, ಎಲೆಕ್ಟ್ರಾನಿಕ್ ಸಿಸ್ಟಮ್ಸ್ ಮತ್ತು ಲೈಟ್ ಎಂಜಿನಿಯರಿಂಗ್ ಮೆಕ್ಯಾನಿಕಲ್ ಭಾಗಗಳಿಗೆ ಬಿಡಿಭಾಗಗಳು ಸೇರಿವೆ.
ಒಟ್ಟಾರೆಯಾಗಿ, ಭಾರತದಿಂದ ಸುಮಾರು 75 ದೇಶಗಳಿಗೆ ರಕ್ಷಣಾ ಉಪಕರಣಗಳ ರಫ್ತು ಮಾಡಲಾಗುತ್ತಿದೆ.
******
ಲೇಖಕರು – ಗಿರೀಶ್ ಲಿಂಗಣ್ಣ
ವ್ಯವಸ್ಥಾಪಕ ನಿರ್ದೇಶಕರು, ಎ.ಡಿ.ಡಿ. ಇಂಜಿನಿಯರಿಂಗ್ ಇಂಡಿಯಾ (ಇಂಡೋ–ಜರ್ಮನ್ ಸಂಸ್ಥೆ )
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.