ಪೋಕ್ಸೊ ಕಾಯ್ದೆ ಜಾರಿಗೆ ಬಂದು ಹತ್ತು ವರ್ಷಗಳು ಕಳೆದಿವೆ. ಪೋಕ್ಸೊ ಎಂದರೆ ಪ್ರೊಟೆಕ್ಷನ್ ಆಫ್ ಚಿಲ್ಡ್ರನ್ ಫ್ರಮ್ ಸೆಕ್ಷುಯಲ್ ಅಫೆನ್ಸಸ್. ಇದು ಜಾರಿಗೆ ಬಂದದ್ದು 2012ರಲ್ಲಿ. ಇದರ ಉದ್ದೇಶ, ಮಕ್ಕಳ ಮೇಲೆ ನಡೆಯುವ ಲೈಂಗಿಕ ಅಪರಾಧಗಳನ್ನು, ಶೋಷಣೆಗಳನ್ನು ಮತ್ತು ಅತ್ಯಾಚಾರಗಳನ್ನು ಪರಿಣಾಮ ಕಾರಿಯಾಗಿ ತಡೆಯುವುದು ಮತ್ತು ಮಕ್ಕಳನ್ನು ಅಂಥ ಶೋಷಣೆಗೆ ಗುರಿಪಡಿಸಿದವರನ್ನು ಅತ್ಯಂತ ಕಠಿಣ ಶಿಕ್ಷೆಗೆ ಗುರಿಪಡಿಸುವುದು. ಆ ಮೂಲಕ ಮಕ್ಕಳಿಗೆ ಅಂಥ ಅಪರಾಧಗಳಿಂದ ರಕ್ಷಣೆ ಕೊಡುವುದು. ಈ ಕಾನೂನಿನ ಪ್ರಕಾರ, 18 ವರ್ಷದೊಳಗಿನ ವಯಸ್ಸಿನವರೆಲ್ಲರೂ ‘ಮಕ್ಕಳು’.
ಭಾರತದಲ್ಲಿ 18 ವರ್ಷ ವಯಸ್ಸಿನೊಳಗಿರುವವರ ಸಂಖ್ಯೆ 47.2 ಕೋಟಿ! ವಿಶ್ವಸಂಸ್ಥೆಯು 1989ರಲ್ಲೇ ಮಕ್ಕಳ ಹಕ್ಕುಗಳ ಒಡಂಬಡಿಕೆಯನ್ನು ಅಂಗೀಕರಿಸಿದ್ದರೂ 2012ರವರೆಗೂ ಭಾರತದಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯವನ್ನು ಅಪರಾಧವನ್ನಾಗಿಸುವ ಮತ್ತು ಮಕ್ಕಳಿಗೆ ಲೈಂಗಿಕ ಶೋಷಣೆಯಿಂದ ರಕ್ಷಣೆ ನೀಡುವ ಸಮಗ್ರ ಕಾನೂನು ಜಾರಿಯಾಗಿರಲಿಲ್ಲ. ಈ ಕಾಯ್ದೆಯ ಕೇಂದ್ರ ಗಮನವು ಮಕ್ಕಳ ಸುರಕ್ಷೆ ಮತ್ತು ಅವರ ಹಕ್ಕುಗಳ ರಕ್ಷಣೆ. ಶಾಲೆಗಳಲ್ಲಿ, ಉದ್ಯಾನಗಳಲ್ಲಿ, ವಸತಿ ನಿಲಯಗಳಲ್ಲಿ, ಧಾರ್ಮಿಕ ಸ್ಥಳಗಳಲ್ಲಿ ಮಕ್ಕಳ ಮೇಲೆ ಲೈಂಗಿಕ ಕಿರುಕುಳ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಗಂಡು ಮಕ್ಕಳೂ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ಆದರೆ, ಗಂಡು ಮಕ್ಕಳಿಗೆಯಾವ ಕಾನೂನಿನ ಅಡಿಯಲ್ಲಿಯೂ ರಕ್ಷಣೆ ಇರಲಿಲ್ಲ. ಆದರೆ ಪೋಕ್ಸೊ, ಹೆಣ್ಣು ಮಕ್ಕಳಿಗೆ ಮತ್ತು ಗಂಡು ಮಕ್ಕಳಿಗೆ ಸಮಾನ ರೀತಿಯಲ್ಲಿ ರಕ್ಷಣೆ ನೀಡುವ ಮೂಲಕ ಆ ಕೊರತೆಯನ್ನು ನೀಗಿಸಿದೆ.
ವಿಚಾರಣೆಯ ಕಾಲದಲ್ಲಿ, ಸಂತ್ರಸ್ತೆಯ ಮನಃಸ್ಥಿತಿ ಅತ್ಯಂತ ಸೂಕ್ಷ್ಮವಾಗಿರುತ್ತದೆ. ಆದ್ದರಿಂದ ಈ ಅಪರಾಧದ ಸಂಬಂಧವಾಗಿ ನಡೆಯುವ ವಿಚಾರಣೆಯ ಸಮಯದಲ್ಲಿ ಸಂತ್ರಸ್ತೆಯನ್ನು ಅತ್ಯಂತ ಕಾಳಜಿಯಿಂದ ನಡೆಸಿಕೊಳ್ಳ ಬೇಕು. ಶೋಷಣೆಗೆ ಒಳಗಾದ ಮಕ್ಕಳು ಮತ್ತೆ ಮತ್ತೆ ಶೋಷಣೆಗೆ ಒಳಗಾಗುವ ಸಾಧ್ಯತೆ ಇರುವುದರಿಂದ ಅವರಿಗೆ ರಕ್ಷಣೆ ನೀಡಬೇಕು. ಸಂತ್ರಸ್ತ ಮಗುವಿಗೆ ಆಗಿರುವ ಆಘಾತದಿಂದ ಚೇತರಿಸಿಕೊಳ್ಳಲು ಅಗತ್ಯವಿರುವ ಹಣಕಾಸು, ಶಿಕ್ಷಣ ಮತ್ತು ಆರೋಗ್ಯ ಸೇವೆಗಳನ್ನು ಒದಗಿಸಬೇಕು. ವಿಚಾರಣೆಗೆ ಮುನ್ನ ಮತ್ತು ವಿಚಾರಣೆ ನಡೆಯುವಾಗ, ಸಂತ್ರಸ್ತೆಯ ಭದ್ರತೆಯ ದೃಷ್ಟಿಯಿಂದ ಆಕೆಯ ಗುರುತನ್ನು ಯಾವುದೇ ಕಾರಣಕ್ಕೂ ಬಹಿರಂಗ ಗೊಳಿಸಬಾರದು ಮತ್ತು ರಕ್ಷಣೆ ನೀಡಬೇಕು. ಅವಳ ಭವಿಷ್ಯಕ್ಕಾಗಿ ಪರಿಹಾರಧನವನ್ನು ಕೊಡುವ ವ್ಯವಸ್ಥೆ ಮಾಡಬೇಕು.
‘ಎಕಾನಮಿಸ್ಟ್ ಇಂಟೆಲಿಜೆನ್ಸ್ ಯುನಿಟ್’ ಸಂಸ್ಥೆಯು ಮಕ್ಕಳನ್ನು ಲೈಂಗಿಕ ಶೋಷಣೆಯಿಂದ ರಕ್ಷಿಸಲು 60 ದೇಶಗಳಲ್ಲಿ ಜಾರಿಯಲ್ಲಿರುವ ಕಾನೂನುಗಳ ಬಗ್ಗೆ 2019ರಲ್ಲಿ ನಡೆಸಿದ ಸಮೀಕ್ಷೆಯಲ್ಲಿ, ಭಾರತದಲ್ಲಿ ಜಾರಿಯಲ್ಲಿರುವ ಪೋಕ್ಸೊ ಕಾಯ್ದೆಯು ಅತ್ಯುತ್ತಮ ವಾದ ಕಾನೂನು ಎಂಬ ಅಂಶ ಹೊರಹೊಮ್ಮಿದೆ. ಲೈಂಗಿಕ ದೌರ್ಜನ್ಯ, ಲೈಂಗಿಕ ಉದ್ದೇಶದಿಂದ ನಡೆಸುವ ದೈಹಿಕ ಸಂಪರ್ಕ, ದೈಹಿಕ ಸಂಪರ್ಕರಹಿತ ಲೈಂಗಿಕ ದೌರ್ಜನ್ಯ, ಮೌಖಿಕ ದೌರ್ಜನ್ಯ, ಅಂತರ್ಜಾಲದ ಮೂಲಕ ನಡೆಯುವ ಲೈಂಗಿಕ ದೌರ್ಜನ್ಯಗಳನ್ನೂ ಭಾರತದಲ್ಲಿನ ಈ ಕಾನೂನು ಅಪರಾಧ ಎಂದು ಪರಿಗಣಿಸುತ್ತದೆ.
ಈ ಕಾನೂನು ಜಾರಿಯಾದ ನಂತರ, ದಾಖಲಾಗುವ ಪ್ರಕರಣಗಳ ಸಂಖ್ಯೆ ನಿರಂತರವಾಗಿ ಏರಿಕೆಯಾಗಿದೆ. ಆದರೆ, ಈ ಏರಿಕೆಯು ವಾಸ್ತವವನ್ನು ಪೂರ್ತಿಯಾಗಿ ಹೇಳುವುದಿಲ್ಲ ಎಂಬುದು ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಸ್ವಯಂಸೇವಾ ಸಂಸ್ಥೆಗಳ ಅಭಿಪ್ರಾಯ. ಇದಕ್ಕೆ ಒಂದು ಕಾರಣ, ಇಂಥ ದೌರ್ಜನ್ಯದ ಎಲ್ಲ ಪ್ರಕರಣಗಳೂ ವರದಿಯಾಗುವುದಿಲ್ಲ ಎಂಬುದು. ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಾಗ, ಬಹುಪಾಲು
ಪ್ರಕರಣಗಳಲ್ಲಿ ಪೋಷಕರು ಮೌನಕ್ಕೆ ಶರಣಾಗುವುದೇ ಹೆಚ್ಚು. ಮತ್ತೊಂದು ಕಾರಣ, ಇಂಥದ್ದೊಂದು ಕಾನೂನು ಜಾರಿಯಲ್ಲಿದೆ ಎಂಬ ಅರಿವೇ ಇಲ್ಲದಿರುವುದು. ಪೋಷಕರಲ್ಲೂ ಅರಿವಿನ ಕೊರತೆ ಇದೆ, ಮಕ್ಕಳಲ್ಲೂ ಅರಿವಿನ ಕೊರತೆ ಇದೆ.
‘ವರ್ಲ್ಡ್ ವಿಷನ್ ಇಂಡಿಯಾ’ ಎಂಬ ಸಂಸ್ಥೆಯು ‘ಭಾರತದಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ- ಜಾಗೃತಿ ಮತ್ತು ಮನೋಭಾವ’ ಶೀರ್ಷಿಕೆಯ ಅಡಿಯಲ್ಲಿ, ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ ಹಾಗೂ ಈಶಾನ್ಯದ ತಲಾ ಮೂರು ರಾಜ್ಯಗಳಂತೆ, 15 ರಾಜ್ಯಗಳಲ್ಲಿ, 4,500 ಮಕ್ಕಳು, 4,500 ಮಂದಿ ಪೋಷಕರು ಹಾಗೂ 75 ಮಕ್ಕಳ ರಕ್ಷಣಾ ಅಧಿಕಾರಿಗಳ ಕುರಿತು ಅಧ್ಯಯನ ನಡೆಸಿತು. ಈ ಕಾನೂನಿನ ಬಗ್ಗೆ ಒಟ್ಟಾರೆ ಶೇ 35ರಷ್ಟು ಮಕ್ಕಳಿಗೆ, ಶೇ 32ರಷ್ಟು ಪೋಷಕರಿಗೆ ಮಾತ್ರ ಅರಿವಿದೆ ಎಂಬ ಅಂಶ ಈ ಅಧ್ಯಯನದಿಂದ ತಿಳಿದುಬಂದಿದೆ. ಈ ಅಂಕಿ ಅಂಶಗಳು, ಮಕ್ಕಳು ಮತ್ತು ಪೋಷಕರಲ್ಲಿ ಈ ಕಾನೂನಿನ ಬಗೆಗಿರುವ ಅರಿವಿನ ಕೊರತೆಯ ಸೂಚಿಯಾಗಿವೆ. ಈ ಕಾನೂನಿನ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಬೇಕು ಎಂದುಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ಹಾಗೂ ಕೆಲವು ರಾಜ್ಯಗಳ ಹೈಕೋರ್ಟ್‌ಗಳು ಪದೇ ಪದೇ ತಿಳಿಸಿವೆ. ಹಕ್ಕುಗಳನ್ನು ನೀಡುವ ಕಾನೂನುಗಳ ಅರಿವಿದ್ದಾಗ ಮಾತ್ರ ಕಾನೂನುಗಳಿಂದ ರಕ್ಷಣೆ ಪಡೆಯುವುದು ಸಾಧ್ಯ.
ಪೋಕ್ಸೊ ಪ್ರಕರಣಗಳಲ್ಲಿ ಸಂತ್ರಸ್ತರಿಗೆ ನ್ಯಾಯ ದೊರ ಕಿಸಿಕೊಡುವಲ್ಲಿ ಸಾಕ್ಷ್ಯಗಳು ಪ್ರಮುಖ ಪಾತ್ರ ವಹಿಸುತ್ತವೆ. ದೂರು ದಾಖಲಾದ ಕೂಡಲೇ, ಆರೋಪಿಗಳಿಗೆ ಸಾಕ್ಷ್ಯ ನಾಶಕ್ಕೆ ಅವಕಾಶ ಕೊಡದಂತೆ ಮಿಂಚಿನ ವೇಗದಲ್ಲಿ ಸಾಕ್ಷ್ಯಗಳ ಸಂರಕ್ಷಣೆಗೆ ಕ್ರಮ ಕೈಗೊಳ್ಳಬೇಕು. ಸಾಕ್ಷ್ಯಗಳ ಕೊರತೆಯಿಂದ ಆರೋಪಿ ಖುಲಾಸೆಯಾಗುವ ಸಂಭವ ಜಾಸ್ತಿ. ಹಾಗಾಗಿಯೇ ಪೋಕ್ಸೊ ಕಾಯ್ದೆ ಅಡಿಯಲ್ಲಿ ನ್ಯಾಯಾಲಯದ ಮೆಟ್ಟಿಲು ಹತ್ತಿದ ಪ್ರಕರಣಗಳ ಪೈಕಿ ಶೇ 30ರಿಂದ 40ರಷ್ಟು ಪ್ರಕರಣಗಳಲ್ಲಿ ಮಾತ್ರ ಅಪರಾಧ ರುಜುವಾತಾಗಿ ಶಿಕ್ಷೆಯಾಗಿದೆ. ಕಾನೂನು ದುರ್ಬಳಕೆಯಾಗುವುದನ್ನು ತಡೆಗಟ್ಟಲು ಸುಳ್ಳು ಪ್ರಕರಣ ದಾಖಲಿಸಿದ ದೂರುದಾರರಿಗೂ ಕಠಿಣ ಶಿಕ್ಷೆ ವಿಧಿಸುವ ಅವಕಾಶವನ್ನು ಕಾನೂನಿನಲ್ಲಿ ಕಲ್ಪಿಸಲಾಗಿದೆ.
2019ರಲ್ಲಿ ಈ ಕಾಯ್ದೆಗೆ ತಿದ್ದುಪಡಿ ತರಲಾಯಿತು. 2020ರಲ್ಲಿ ಕೇಂದ್ರ ಸರ್ಕಾರವು ನಿಯಮಗಳನ್ನು ರೂಪಿಸಿ, ಈ ಕಾನೂನಿನ ಬಗ್ಗೆ ಜಾಗೃತಿ ಮೂಡಿಸಲು ಅಗತ್ಯವಾದ ಎಲ್ಲ ಕ್ರಮಗಳನ್ನು ಕೈಗೊಳ್ಳಲು ಯೋಜನೆಗಳನ್ನು ರೂಪಿಸಿತು. ಆದರೆ, ಕೊರೊನಾದಿಂದಾಗಿ ಎಲ್ಲವೂ ನನೆಗುದಿಗೆ ಬಿತ್ತು. ಅವೆಲ್ಲವನ್ನೂ ರಾಜ್ಯಗಳು ಸಮರೋಪಾದಿಯಲ್ಲಿಅನುಪಾಲನೆಗೆ ತರುವ ತುರ್ತು ಅಗತ್ಯ ಇಂದು ಉಂಟಾಗಿದೆ. ಸುರಕ್ಷಾ ಕ್ರಮಗಳು ಮತ್ತು ಲಿಂಗ ಸಮಾನತೆಯು ಶಾಲಾ ಶಿಕ್ಷಣ ಪಠ್ಯದ ಭಾಗವಾಗಬೇಕು.
ಬೆಳೆಯುವ ಚಿಗುರು ವ್ಯವಸ್ಥೆಯಲ್ಲಿ ನಂಬಿಕೆ ಕಳೆದು ಕೊಳ್ಳದಿರುವುದು ದೇಶದ ಭವಿಷ್ಯದ ದೃಷ್ಟಿಯಿಂದ ಅತಿ ಮುಖ್ಯವಾದುದು. ಹಾಗಾಗಬೇಕಾದರೆ, ಇಂಥ ಪ್ರಕರಣಗಳಲ್ಲಿ ತ್ವರಿತವಾಗಿ ನ್ಯಾಯ ದೊರೆಯಬೇಕು ಮತ್ತು ಅಪರಾಧಿಗಳಿಗೆ ಶಿಕ್ಷೆಯಾಗಬೇಕು. ಆದರೆ, ಏರುತ್ತಿರುವ ಪ್ರಕರಣಗಳ ಸಂಖ್ಯೆ ಮತ್ತು ಏರದಿರುವ ನ್ಯಾಯಾಲಯಗಳ ಸಂಖ್ಯೆಯು ಶೀಘ್ರ ನ್ಯಾಯದಾನಕ್ಕೆ ಅಡ್ಡಿಯಾಗಿವೆ. 2019ರ ಜೂನ್ ಅಂತ್ಯದಲ್ಲಿ ನ್ಯಾಯಾಲಯಗಳಲ್ಲಿ ಬಾಕಿ ಉಳಿದಿದ್ದ ಪ್ರಕರಣಗಳ ಸಂಖ್ಯೆ 1,60,828. ಪ್ರತಿವರ್ಷ ದಾಖಲಾಗುವ ಪ್ರಕರಣಗಳ ಸಂಖ್ಯೆ ಏರುತ್ತಲೇ ಇದೆ. ಇದನ್ನು ಮನಗಂಡು, ಸರ್ಕಾರವು 1,023 ತ್ವರಿತಗತ ನ್ಯಾಯಾಲಯಗಳನ್ನು ಸ್ಥಾಪಿಸಲು ನಿರ್ಧರಿಸಿತು. ಅವುಗಳ ಪೈಕಿ 2021ರ ಫೆಬ್ರುವರಿ 19ರ ವೇಳೆಗೆ 612 ತ್ವರಿತಗತಿಯ ನ್ಯಾಯಾಲಯಗಳು ಕಾರ್ಯನಿರ್ವಹಿಸಲು ಪ್ರಾರಂಭಿಸಿವೆ.
ಇವೆಲ್ಲದರಷ್ಟೇ ಅಥವಾ ಇವೆಲ್ಲದಕ್ಕಿಂತ ಹೆಚ್ಚು ಮುಖ್ಯವಾಗಿ ಆಗಬೇಕಾದುದು ಎಳೆಯ ವಯಸ್ಸಿನಲ್ಲಿ ಮೃಗೀಯ ಅಪರಾಧಕ್ಕೆ ಒಳಗಾಗಿ ಹೊಸಕಿಹೋದ ಮನಸ್ಸುಗಳಿಗೆ ಸಾಂತ್ವನ ನೀಡಿ ಬದುಕಿನಲ್ಲಿ ಭರವಸೆ ಮೂಡಿಸುವ ಕೆಲಸ. ಆ ಆಘಾತಕಾರಿ ಅನುಭವದಿಂದ ಮಕ್ಕಳು ಹೊರಬರಲು ಅವರಿಗೆ ಸುಮಾರು ವರ್ಷಗಳೇ ಬೇಕಾಗುತ್ತವೆ. ಅಲ್ಲಿಯವರೆಗೆ ಅವರಿಗೆ ಆಪ್ತ ಸಮಾಲೋಚನೆ ಒದಗಿಸುವ ವ್ಯವಸ್ಥೆಯಾಗಬೇಕು. 2020ರಲ್ಲಿ ರಚಿಸಿದ ನಿಯಮಗಳಲ್ಲಿ ಸರ್ಕಾರ ಈ ಬಗ್ಗೆ ಗಮನಹರಿಸಿರುವುದು ಸ್ವಾಗತಾರ್ಹ.
ಕಾನೂನು ಎಷ್ಟೇ ಸಮಗ್ರವಾಗಿ ರೂಪುಗೊಂಡರೂ ಅದರ ಆಶಯ ಈಡೇರುವುದು ವಿಚಾರಣೆ ನಿಷ್ಪಕ್ಷಪಾತ
ವಾಗಿ ನಡೆದಾಗ ಮತ್ತು ನ್ಯಾಯದಾನ ವ್ಯವಸ್ಥೆಯು ಕಾನೂನನ್ನು ಅಕ್ಷರಶಃ ಅನ್ವಯಿಸದೆ, ಕಾನೂನಿನ ಆಶಯವನ್ನು ಈಡೇರಿಸುವ ದಿಸೆಯಲ್ಲಿ ನ್ಯಾಯದಾನ ಮಾಡಿದಾಗ ಮಾತ್ರ. ಇದನ್ನು ಮರೆಯಬಾರದು.
- ಡಾ.ಗೀತಾ ಕೃಷ್ಣಮೂರ್ತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.