ADVERTISEMENT

ವಿಶ್ಲೇಷಣೆ: ರಾಜಕೀಯ ಕುಭಾಷೆಯ ನುಡಿದುರಂತ

ಭಾಷೆ– ಭಾವ– ಸಮಾಜದ ಹದಗೆಡಿಸುತ್ತಿವೆ ಮುತ್ತೊಡೆದಂಥ ಮಾತುಗಳು

ಡಾ.ಬಸವರಾಜ ಸಾದರ
Published 12 ಡಿಸೆಂಬರ್ 2022, 19:30 IST
Last Updated 12 ಡಿಸೆಂಬರ್ 2022, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಅದೊಂದು ಊಹಿಸಲು ಅಸಾಧ್ಯವಾದ ಘಟನೆ. ಅಷ್ಟೇ ಅವಮಾನಕರವಾದದ್ದು ಕೂಡ. ಅಬ್ರಹಾಂ ಲಿಂಕನ್ ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾದ ನಂತರ, ಸೆನೆಟ್‍ ಅನ್ನು ಉದ್ದೇಶಿಸಿ ತಮ್ಮ ಚೊಚ್ಚಲ ಭಾಷಣ ಮಾಡಲಿದ್ದ ಸಂದರ್ಭವದು. ಇನ್ನೇನು ಅವರು ಮಾತು ಆರಂಭಿಸಬೇಕು, ಅಷ್ಟರಲ್ಲೇ ಒಬ್ಬ ವ್ಯಕ್ತಿ ಎದ್ದು ನಿಂತವನೇ ‘ಮಿಸ್ಟರ್‌ ಲಿಂಕನ್, ನಿಮಗೊಂದು ಮಾತು ಹೇಳುವುದಿದೆ, ನಿಮ್ಮ ತಂದೆ ನನ್ನ ಇಡೀ ಕುಟುಂಬದವರಿಗೆ ಬೂಟುಗಳನ್ನು ತಯಾರಿಸಿಕೊಡುತ್ತಿದ್ದ ಎಂಬುದನ್ನು ನೀವು ಮರೆಯಬಾರದು’ ಎಂದುಬಿಟ್ಟ!

ತಮ್ಮಂಥ ಕೋಟ್ಯಧಿಪತಿಗಳು ಮಾತ್ರ ಅಮೆರಿಕದ ಅಧ್ಯಕ್ಷರಾಗಬೇಕೇ ವಿನಾ ನಿಮ್ಮಂಥವರಲ್ಲ ಎಂಬ ಅಹಮಿಕೆ, ಮತ್ಸರ ಆ ವ್ಯಕ್ತಿಯ ಅಂತರಾಳದಲ್ಲಿ ಕುದಿಯುತ್ತಿದ್ದವು. ಲಿಂಕನ್‍ ಅವರಿಗೆ ಅವಮಾನ ಮಾಡುವುದೇ ಅವನ ದುರುದ್ದೇಶವಾಗಿತ್ತು. ಆ ಮಾತು ಕೇಳಿ, ಇಡೀ ಸೆನೆಟ್ ಗಹಗಹಿಸಿ ನಗತೊಡಗಿತು. ಲಿಂಕನ್‍ರನ್ನು ಮೂರ್ಖನನ್ನಾಗಿಸಿದ್ದೇವೆ ಎಂಬ ಜಂಬ ಅಲ್ಲಿದ್ದವರ ಮುಖಗಳಲ್ಲಿತ್ತು.

ತಕ್ಷಣ ಎದ್ದುನಿಂತ ಲಿಂಕನ್ ಆ ಕೋಟ್ಯಧಿಪತಿಯತ್ತ ತಿರುಗಿ, ಅತ್ಯಂತ ತಾಳ್ಮೆಯಿಂದ ‘ಸರ್, ನೀವು ಹೇಳಿದ್ದು ನಿಜ. ನನ್ನ ತಂದೆ ನಿಮ್ಮ ಕುಟುಂಬದ ಸದಸ್ಯರಿಗೆಲ್ಲ ಬೂಟುಗಳನ್ನು ಮಾಡಿಕೊಡುತ್ತಿದ್ದರೆಂಬುದು ನನಗೂ ಗೊತ್ತು. ಅಷ್ಟೇ ಅಲ್ಲ, ಇಲ್ಲಿರುವ ಇನ್ನೂ ಅನೇಕರಿಗೆ ಅವರು ಬೂಟುಗಳನ್ನು ಮಾಡಿ‌ಕೊಡುತ್ತಿದ್ದರು. ಯಾಕೆಂದರೆ, ಅವರು ಮಾಡುತ್ತಿದ್ದಂಥ ಬೂಟುಗಳನ್ನು ಇನ್ನಾರಿಗೂ ಮಾಡಲು ಬರುತ್ತಿದ್ದಿಲ್ಲ. ಅವರು ನಿಜಕ್ಕೂ ಸೃಜನಶೀಲ ಶೂಮೇಕರ್ ಆಗಿದ್ದರು. ಬೂಟು ಸಿದ್ಧಪಡಿಸುವಾಗ ಅವರು ತಮ್ಮ ದೇಹ- ಮನಸ್ಸು ಎರಡನ್ನೂ ಆ ಕೆಲಸದಲ್ಲಿ ತೊಡಗಿಸುತ್ತಿದ್ದರು. ಅದಿರಲಿ, ನನ್ನ ತಂದೆ ಮಾಡಿಕೊಟ್ಟ ಬೂಟುಗಳ ಬಗ್ಗೆ ಈಗ ನಿಮಗೇನಾದರೂ ತಕರಾರು ಇದೆಯೆ? ಯಾಕೆ ಹಾಗೆ ಕೇಳಿದೆನೆಂದರೆ, ನನಗೂ ಒಳ್ಳೆಯ ಬೂಟುಗಳನ್ನು ಮಾಡಲು ಬರುತ್ತದೆ. ಅವರು ಮಾಡಿಕೊಟ್ಟಿರುವ ಬೂಟುಗಳಿಂದ ನಿಮಗೆ ತೊಂದರೆಯಾಗಿದ್ದಲ್ಲಿ, ನಾನೀಗ ನಿಮಗೆ ಮತ್ತೊಂದು ಜೋಡು ಬೂಟುಗಳನ್ನು ತಯಾರಿಸಿ ಕೊಡುವೆ. ಆದರೆ ಒಂದು ಸತ್ಯ, ನನ್ನ ತಂದೆ ಮಾಡಿದ ಬೂಟುಗಳ ಬಗ್ಗೆ ಈವರೆಗೆ ಒಂದೇ ಒಂದು ತಕರಾರು ಬಂದಿಲ್ಲ. ಬೂಟು ತಯಾರಿಸುವಲ್ಲಿ ಆತ ಅಷ್ಟೊಂದು ನಿಷ್ಣಾತನಿದ್ದ. ಅದಕ್ಕಾಗಿಯೇ ನನ್ನ ತಂದೆಯ ಬಗ್ಗೆ ನನಗೆ ಅಪಾರ ಹೆಮ್ಮೆಯಿದೆ’ ಎಂದಾಗ, ಇಡೀ ಸೆನೆಟ್ ಬಾಯಿ ಮುಚ್ಚಿಕೊಂಡು ಮೌನದಲ್ಲಿ ಕುಳಿತಿತ್ತು! ಲಿಂಕನ್‍ರನ್ನು ಮೂರ್ಖನನ್ನಾಗಿಸಲು ಹೊರಟಿದ್ದ ಆ ವ್ಯಕ್ತಿ ಮತ್ತು ಅದೇ ಮನೋಭಾವದ ಇತರೆಲ್ಲರ ಮುಖಗಳು ಒಣಗಿ ಹೋಗಿದ್ದವು, ಅವರೇ ಮೂರ್ಖರಾಗಿದ್ದರು.

ADVERTISEMENT

ಸಂಯಮ ಮತ್ತು ವಿವೇಕದ ಮೊತ್ತವೇ ಆಗಿದ್ದ ಲಿಂಕನ್‍ ಅವರ ಬಾಯಿಂದ ಸಹಜವಾಗಿ ಹೊರಬಂದ ಆ ಮಾತುಗಳು ಅವರೊಬ್ಬ ಸುಸಂಸ್ಕೃತ ವ್ಯಕ್ತಿ ಎಂಬುದನ್ನು ಸಾಬೀತುಪಡಿಸುತ್ತವೆ. ಅವು ಕೇವಲ ಮಾತಾಗಿರಲಿಲ್ಲ, ಶೂಗಳನ್ನು ಸಿದ್ಧಪಡಿಸುವ ರಚನಾತ್ಮಕ ಕೆಲಸವೂ ಅವರಿಗೆ ಗೊತ್ತಿತ್ತು. ಜೊತೆಗೆ ತಮ್ಮ ತಂದೆ ಮಾಡುತ್ತಿದ್ದ ವೃತ್ತಿಯ ಬಗ್ಗೆಯೂ ಅವರಿಗೆ ಅಷ್ಟೇ ಆದರ, ಗೌರವವಿತ್ತು. ಅಂತೆಯೇ ಅವರಾಡಿದ ಮಾತುಗಳು ಎದುರಾಳಿಯ ಮರ್ಮವನ್ನೇ ಭೇದಿಸಿದ್ದವು. ಅರಿವಿಲ್ಲದ ಅಹಂಕಾರದ ಮಾತುಗಳಿಗೆ ಸಂಯಮ ಮತ್ತು ವಿವೇಕಪೂರ್ಣ ಪ್ರತಿಕ್ರಿಯೆ ಹೇಗಿರುತ್ತದೆ ಮತ್ತು ಹೇಗಿರಬೇಕು ಎಂಬುದಕ್ಕೆ ಲಿಂಕನ್‍ ಅವರ ಆ ಮಾತುಗಳೇ ಸಾರ್ವಕಾಲಿಕ ಸಾಕ್ಷಿ.

ಇಂಥದೇ ಪ್ರಶ್ನೆಯನ್ನು ಇಂದಿನ ರಾಜಕೀಯ ವಲಯದಲ್ಲಿ ಯಾರಾದರೂ ಕೇಳಿದ್ದರೆ ಅದಕ್ಕೆ ಬರ ಬಹುದಾದ ಪ್ರತಿಕ್ರಿಯೆಯ ಸ್ವರೂಪ ಮತ್ತು ಕಾಣುವ ದೃಶ್ಯ ಗಳು ಹೇಗಿರುತ್ತಿದ್ದವು? ಊಹಿಸಲು ಅಸಾಧ್ಯ. ಇಂದು ಪಕ್ಷಾತೀತವಾಗಿ ‘ಹೆಚ್ಚಿನ’ ರಾಜಕಾರಣಿಗಳ ಬಾಯಿಂದ ಬಹಿರಂಗವಾಗಿಯೇ ತೂರಿ ಬರುತ್ತಿರುವ ಮಾತು ಮತ್ತು ಪ್ರತಿಕ್ರಿಯೆಗಳನ್ನು ಗಮನಿಸಿದರೆ, ಲಿಂಕನ್‍ರಂಥವರ ಸಂಯಮದ ಭಾವ-ಭಾಷೆಗಳು ಸಂಪೂರ್ಣ ಮರೆಯಾದದ್ದು ಸ್ಪಷ್ಟವಾಗಿ ಗೋಚರವಾಗುತ್ತದೆ.

‘ಕ್ರಿಯೆ ಮತ್ತು ಪ್ರತಿಕ್ರಿಯೆಗಳು ಸದಾ ಸಮನಾಗಿ ರುತ್ತವೆ ಮತ್ತು ಪರಸ್ಪರ ವಿರುದ್ಧ ದಿಕ್ಕಿನಲ್ಲಿರುತ್ತವೆ’ ಎಂಬುದು ಜಗತ್ಪ್ರಸಿದ್ಧ ವಿಜ್ಞಾನಿ ನ್ಯೂಟನ್‍ನ ಚಲನೆಯ ಮೂರನೆಯ ನಿಯಮ. ವರ್ತಮಾನದ ರಾಜಕಾರಣಿಗಳ ಅಪದ್ಧ ಭಾಷೆ, ಅಸಹ್ಯ ಹೇಳಿಕೆ ಮತ್ತು ಪ್ರತಿಹೇಳಿಕೆಗಳನ್ನು ಆಧರಿಸಿ, ಈ ವೈಜ್ಞಾನಿಕ ನಿಯಮವನ್ನು ಈಗ ‘ಕ್ರಿಯೆಗಿಂತ ಪ್ರತಿಕ್ರಿಯೆಯು ನೂರು ಪಟ್ಟು ಹೆಚ್ಚಾಗಿರುತ್ತದೆ, ಜೋರಾಗಿರುತ್ತದೆ ಮತ್ತು ಅಪಾಯಕಾರಿಯಾಗಿರುತ್ತದೆ’ ಎಂದು ಬದಲಿಸಬೇಕಾದ ಅನಿವಾರ್ಯವಿದೆ. ಅಷ್ಟರ
ಮಟ್ಟಿಗೆ ರಾಜಕಾರಣಿಗಳ ವರಸೆ, ಮಾತಿನ ಎರಚಾಟ, ಪ್ರತಿ ಎರಚಾಟಗಳು ಮಿತಿಮೀರಿದ್ದು ಕನ್ನಡಿಯ ಪ್ರತಿಬಿಂಬದಷ್ಟೇ ಸತ್ಯ.

ರಾಜಕಾರಣಿಗಳ ಇಂಥ ಅನಿಯಂತ್ರಿತ ಮಾತುಗಳಲ್ಲಿ ಸೈದ್ಧಾಂತಿಕ ಮತ್ತು ತಾತ್ವಿಕ ಭಿನ್ನಾಭಿಪ್ರಾಯಗಳಿಗಿಂತ ದ್ವೇಷಪೂರಿತ ಆರೋಪ- ಪ್ರತ್ಯಾರೋಪಗಳೇ ತುಂಬಿರು ವುದು ಸತ್ಯ. ಹಾಗೆಯೇ ಪರಸ್ಪರ ವೈರತ್ವ ಮತ್ತು ವೈಯಕ್ತಿಕ ಚಾರಿತ್ರ್ಯ ಹನನಗಳೇ ಎದ್ದು ಕಾಣುತ್ತಿರುವುದೂ ಆತಂಕಕಾರಿ ಬೆಳವಣಿಗೆ. ಇದೆಲ್ಲವನ್ನೂ ಒಳಗೊಂಡ ಒಂದು ‘ಶ್ರುತಿ ಅಸಹ್ಯ’ ರಾಜಕೀಯ ಕುಭಾಷೆಯೇ ನಿರ್ಮಾಣವಾಗುತ್ತಿರುವುದು ನುಡಿ ದುರಂತ. ಹೀಗೆ ಹದಗೆಡು ತ್ತಿರುವ ಭಾವ- ಭಾಷೆಗಳ ಕರಿಛಾಯೆ ಎಲ್ಲ ಕ್ಷೇತ್ರಗಳ ಮೇಲೆಯೂ ಬೀಳುತ್ತಿದ್ದು, ಅದುವೇ ಈಗಿನ ಮಕ್ಕಳಿಗೆ ಕುಸಂಸ್ಕೃತಿಯ ದರ್ಶನಕ್ಕೆ ಮುನ್ನುಡಿಯಾಗುತ್ತಿದೆ.

ವಿವೇಕ ಮತ್ತು ಅರಿವಿನ ಲವಲೇಶವೂ ಇಲ್ಲದ ಇಂಥ ಮಾತು-ಪ್ರತಿಕ್ರಿಯೆಗಳಿಂದ ಸಾಮಾಜಿಕ ಸಭ್ಯತೆ ಮತ್ತು ಸಂಬಂಧಗಳೂ ಹಳ್ಳ ಹಿಡಿಯುತ್ತಿವೆ. ಇದು ಇಡೀ ನೆಲದ ಸಾಂಸ್ಕೃತಿಕ ಬರಕ್ಕೆ ಮುನ್ನುಡಿಯಂತಿದೆ. ಸೈದ್ಧಾಂತಿಕ ಪ್ರಶ್ನೆಗಳನ್ನು ಕೇಳುವುದು, ಅವುಗಳಿಗೆ ಸಕಾರಣವಾಗಿ, ವೈಚಾರಿಕವಾಗಿ ಪ್ರತಿಕ್ರಿಯಿಸುವುದು ಹಾಗೂ ಇದೆಲ್ಲದಕ್ಕೂ ಸಂಯಮದ ಮತ್ತು ಗೌರವಯುತ ಭಾಷೆ ಬಳಸುವುದು- ಈ ಎಲ್ಲ ಸದ್ವಿವೇಕದ ಮಾರ್ಗಗಳನ್ನು ನಮ್ಮ ರಾಜ ಕಾರಣಿಗಳು ಮರು ರೂಢಿಸಿಕೊಳ್ಳದೇ ಹೋದರೆ ಒಟ್ಟು ವ್ಯವಸ್ಥೆಯೇ ಅರಾಜಕತೆಗೆ ತಲುಪುವುದು ಖಚಿತ. ಈ ಕಾರಣದಿಂದ, ಮೌಲ್ಯಾಧಾರಿತ ರಾಜಕಾರಣ ಮತ್ತು ಅದನ್ನು ಪೋಷಿಸುವ ಸುಸಂಸ್ಕೃತ ನಡವಳಿಕೆಗಳನ್ನು ಬಿತ್ತಿ ಬೆಳೆಯುವುದು ಇಂದಿನ ಆದ್ಯ ಅಗತ್ಯವಾಗಿದೆ.

ಸಮಗ್ರ ಸಾಮಾಜಿಕ ಕ್ರಾಂತಿ ಮಾಡಹೊರಟ ಬಸವಣ್ಣನವರ ಮೇಲೆಯೂ ರಾಜಕೀಯ ಆರೋಪಗಳು ಕೇಳಿಬಂದಾಗ ಅವುಗಳಿಗೆ ಅವರು ಕೊಟ್ಟ ಉತ್ತರ ಗಳೇ ಲಿಂಕನ್‍ರ ಮಾತುಗಳಲ್ಲಿ ಪ್ರತಿಧ್ವನಿಸಿದಂತಿವೆ. ಮುಖ್ಯವಾಗಿ ಹಣಕಾಸಿನ ಆರೋಪ ಮತ್ತು ದೊರೆ ಬಿಜ್ಜಳನನ್ನು ಓಲೈಸುತ್ತಿದ್ದಾರೆಂಬ ಪುಕಾರು ಕೇಳಿಬಂದಾಗ ಬಸವಣ್ಣನವರು ಕೊಟ್ಟ ದಿಟ್ಟ ಪ್ರತಿಕ್ರಿಯೆಗಳು ಗಮನಾರ್ಹ ವಾಗಿವೆ. ‘ಹೊತ್ತಾರೆ ಎದ್ದು ಕಣ್ಣ ಹೊಸೆಯುತ್ತ, ಎನ್ನ ಒಡಲಿಂಗೆ, ಎನ್ನ ಒಡವೆಗೆಂದು, ಎನ್ನ ಮಡದಿ-ಮಕ್ಕಳಿಗೆಂದು, ಕುದಿದೆನಾದಡೆ ಎನ್ನ ಮನಕ್ಕೆ ಮನವೇ ಸಾಕ್ಷಿ... ಭವಿ ಬಿಜ್ಜಳನ ಗದ್ದುಗೆಯ ಕೆಳಗೆ ಕುಳ್ಳಿರ್ದು ಓಲೈಸಿಹನೆಂದು ನುಡಿವರಯ್ಯಾ ಪ್ರಮಥರು. ಕೊಡುವೆನೆ ಉತ್ತರವನವರಿಗೆ? ಕೊಡಲಮ್ಮೆ. ಹೊಲೆಹೊಲೆಯರ ಮನೆಯ ಹೊಕ್ಕಾದಡೆಯೂ, ಸಲೆ ಕೈಕೂಲಿಯ ಮಾಡಿಯಾದಡೆಯೂ, ನಿಮ್ಮ ನಿಲವಿಂಗೆ ಕುದಿವೆನಲ್ಲದೆ, ಎನ್ನ ಒಡಲವಸರಕ್ಕೆ ಕುದಿದೆನಾದಡೆ ತಲೆದಂಡ ಕೂಡಲ ಸಂಗಮದೇವಾ’.

ಇಂಥದ್ದೇ ಮತ್ತೊಂದು ವಚನ, ‘ಊರ ಮುಂದೆ ಹಾಲ ಹಳ್ಳ ಹರಿಯುತ್ತಿರಲು, ಓರೆಯಾವಿನ ಬೆನ್ನಲ್ಲಿ ಹರಿಯಲೇಕಯ್ಯಾ? ಲಜ್ಜೆಗೆಡಲೇಕೆ? ನಾಣುಗೆಡಲೇಕೆ? ಕೂಡಲಸಂಗಮದೇವಯ್ಯನುಳ್ಳನ್ನಕ್ಕ, ಬಿಜ್ಜಳನ ಭಂಡಾರವೆನಗೇಕಯ್ಯಾ?’ ಎಂದಿದೆ. ಈ ಮಾತುಗಳು ಅವರ ಪರಿಶುದ್ಧ ಬದುಕು ಮತ್ತು ವ್ಯಕ್ತಿತ್ವದ ಪಡಿನುಡಿ
ಗಳಂತಿವೆ. ‘ಭಕ್ತಿ ಸುಭಾಷೆಯ ನುಡಿಯ ನುಡಿವೆ, ನುಡಿದಂತೆ ನಡೆವೆ. ನಡೆಯೊಳಗೆ ನುಡಿಯ ಪೂರೈಸುವೆ. ಮೇಲೆ ತೂಗುವ ತ್ರಾಸು ಕಟ್ಟಳೆ ನಿಮ್ಮ ಕೈಯಲ್ಲಿ. ಒಂದು ಜವೆ ಕೊರತೆಯಾದಡೆ, ಎನ್ನನದ್ದಿ ನೀನೆದ್ದು ಹೋಗು, ಕೂಡಲಸಂಗಮದೇವಾ’ ಎಂಬ ಮಾತಂತೂ ಅವರ ಸಂಯಮ, ಧ್ಯೇಯಾದರ್ಶ ಮತ್ತು ಸೈದ್ಧಾಂತಿಕತೆಯ ಪ್ರತೀಕವಾಗಿವೆ. ನಡೆ-ನುಡಿಯೆರಡರಲ್ಲೂ ಏಕತೆ ಮತ್ತು ನೈತಿಕತೆ ಸಾಧಿಸಿದವರ ಬಾಯಲ್ಲಿ ಮಾತ್ರ ಇಂಥ ಮಾತು ಹೊರಬರಲು ಸಾಧ್ಯ.

ಬಸವಣ್ಣ- ಲಿಂಕನ್‍ರಂಥವರ ಸಂಯಮದ ವ್ಯಕ್ತಿತ್ವ ಹಾಗೂ ಮತ್ತೊಬ್ಬರಿಗೆ ಕೇಡಿಲ್ಲದ ಪಾಠದಂತೆ ಪ್ರತಿಕ್ರಿಯಿಸುವ ಅವರದೇ ಆದ ಅಭಿವ್ಯಕ್ತಿಯ ರೀತಿ ವರ್ತಮಾನದ ರಾಜಕಾರಣಿಗಳಿಗೆ ಪಾಠವಾಗಬೇಕಿದೆ.

ಇದಕ್ಕೆ ಮೊದಲು ಮೌಲ್ಯಾಧಾರಿತ ಬದುಕು ಬೇಕು. ಬದುಕಿನಲ್ಲಿ ಶುದ್ಧತೆ, ಪ್ರಾಮಾಣಿಕತೆ ಬಂದಾಗ ಮಾತು ಮತ್ತು ಪ್ರತಿಕ್ರಿಯೆಗಳಲ್ಲೂ ಅದು ಪಡಿಮೂಡುತ್ತದೆ. ಒಡೆಯುವ ರಾಜಕಾರಣ ಬಿಟ್ಟು, ಒಟ್ಟುಗೂಡಿಸುವ ಹಾಗೂ ಸುಸಂಸ್ಕೃತ ನಾಡು ಕಟ್ಟಬೇಕೆಂಬ ಸದ್ಬುದ್ಧಿ ರಾಜಕಾರಣಿಗಳಲ್ಲಿ ಬರಬೇಕಾದರೆ ಇಂಥ ವ್ಯಕ್ತಿಗಳ ಚರಿತ್ರೆ- ಚಾರಿತ್ರ್ಯಗಳ ಅನುಸರಣೆ ಅತ್ಯಗತ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.