ರಾಜಕೀಯ, ಸಮಾಜ, ಸಂಸ್ಕೃತಿ, ಆರ್ಥಿಕತೆ ಎಲ್ಲವನ್ನೂ ಒಟ್ಟಾಗಿ ನೋಡಿದ ಪರಿಪೂರ್ಣ ಚಿಂತಕರಾದ ಬಾಬಾಸಾಹೇಬ್ ಅಂಬೇಡ್ಕರ್ ಮಂಡಿಸಿರುವ ಸಾಮಾಜಿಕ ಚಿಂತನೆಗಳನ್ನು ಹೆಚ್ಚು ಚರ್ಚಿಸುವ ನಾವು, ಅವರ ರಾಜಕೀಯ ಚಿಂತನೆ-ಕ್ರಿಯೆಗಳಿಗೆ ಹೆಚ್ಚು ಗಮನ ಕೊಟ್ಟಂತಿಲ್ಲ. ಚುನಾವಣೆಯ ಗಡಿಬಿಡಿಯ ನಡುವೆ ನಡೆಯುತ್ತಿರುವ ಈ ಸಲದ ಅಂಬೇಡ್ಕರ್ ದಿನಾಚರಣೆಯ ನೆಪದಲ್ಲಾದರೂ ಗಟ್ಟಿಯಾದ ಪ್ರಜಾಪ್ರಭುತ್ವವನ್ನು ರೂಪಿಸುವ ಹಾಗೂ ರಾಜಕೀಯ ಅಧಿಕಾರವನ್ನು ಅರ್ಥಪೂರ್ಣವಾಗಿ ಬಳಸುವ ಅಂಬೇಡ್ಕರ್ ಮಾದರಿಯನ್ನು ಸರಿಯಾಗಿ ಅರಿಯುವ ಅಗತ್ಯವಿದೆ.
ಅಂಬೇಡ್ಕರ್ ರಂಗಪ್ರವೇಶ ಮಾಡುವ ಹೊತ್ತಿಗಾಗಲೇ ದೇಶದಲ್ಲಿ ಪ್ರಜಾಪ್ರಭುತ್ವ ಸ್ಥಾಪನೆಗೆ ಕಾಂಗ್ರೆಸ್ ನೇತೃತ್ವದಲ್ಲಿ ಸ್ವಾತಂತ್ರ್ಯ ಚಳವಳಿ ನಡೆಯುತ್ತಿತ್ತು. ಆದರೆ ಸಾವಿರಾರು ವರ್ಷಗಳಿಂದ ದೇಶಿ ರಾಜರು, ವಿದೇಶಿ ಸುಲ್ತಾನರು, ಪಾಳೆಗಾರರು, ಜಮೀನ್ದಾರರು, ಪುರೋಹಿತರು, ಪ್ರಬಲ ಜಾತಿಗಳು ಹಾಗೂ ಬ್ರಿಟಿಷ್ ಪ್ರಭುತ್ವ ಇವೆಲ್ಲದರ ಗುಲಾಮಗಿರಿಗೆ ಒಗ್ಗಿಹೋಗಿದ್ದ ಜನರಿಗೆ ತಮ್ಮನ್ನೇ ತಾವು ಆಳಿಕೊಳ್ಳುವ ಪ್ರಜಾಪ್ರಭುತ್ವವನ್ನು ಕಲಿಸುವುದು ಹೇಗೆ ಎಂಬ ಸವಾಲು ಅಂಬೇಡ್ಕರ್ ಅವರ ಎದುರಿಗಿತ್ತು. ಈ ಸವಾಲಿಗೆ ಉತ್ತರ ಹುಡುಕಿ ಅವರು ಆಳವಾದ ಅಧ್ಯಯನ, ಚಿಂತನೆಗಳನ್ನು ನಡೆಸಿದರು, ಪೂರಕವಾದ ಕ್ರಿಯೆಗಳನ್ನು ರೂಪಿಸಲಾರಂಭಿಸಿದರು. ಪ್ರಜಾಪ್ರಭುತ್ವದ ಆಶಯಗಳಿಗೆ ಪ್ರಬಲ ಅಡ್ಡಿಯಾಗಿದ್ದ ಭಾರತೀಯರ ಜಾತಿಪೀಡಿತ ಮಿದುಳನ್ನು ಸ್ವಚ್ಛಗೊಳಿಸುವ ಕೆಲಸ ಶುರು ಮಾಡಿದರು. ಜಾತಿಪದ್ಧತಿಯ ಸರ್ವಾಧಿಕಾರವನ್ನು ಹಿಮ್ಮೆಟ್ಟಿಸದಿದ್ದರೆ, ವ್ಯಕ್ತಿ ಜಾತಿಪ್ರಜ್ಞೆಯಿಂದ ಬಿಡುಗಡೆ ಪಡೆಯದಿದ್ದರೆ, ಭಾರತೀಯರಿಗೆ ವ್ಯಕ್ತಿಸ್ವಾತಂತ್ರ್ಯವಾಗಲೀ ಸಾಮಾಜಿಕ ಪ್ರಜಾಪ್ರಭುತ್ವವಾಗಲೀ ದಕ್ಕುವುದಿಲ್ಲ ಎಂಬುದನ್ನು ‘ಜಾತಿ ವಿನಾಶ’ ಪುಸ್ತಕದಲ್ಲಿ ತೋರಿಸಿಕೊಟ್ಟರು.
ಇಲ್ಲಿಂದಾಚೆಗೆ ರಾಜಕೀಯವಾಗಿಯೂ ಕ್ರಿಯಾಶೀಲರಾದ ಅಂಬೇಡ್ಕರ್, 1930ರಲ್ಲಿ ದಲಿತರಿಗೆ ತಕ್ಕ ಪ್ರಾತಿನಿಧ್ಯಕ್ಕಾಗಿ ಒತ್ತಾಯಿಸಿ ‘ಆಲ್ ಇಂಡಿಯಾ ಡಿಪ್ರೆಸ್ಡ್ ಕ್ಲಾಸಸ್ ಅಸೋಸಿಯೇಷನ್’ ಶುರು ಮಾಡಿದರು. 1936ರಲ್ಲಿ ಅವರು ಸ್ಥಾಪಿಸಿದ ‘ಇಂಡಿಪೆಂಡೆಂಟ್ ಲೇಬರ್ ಪಾರ್ಟಿ’ ಅವರ ಮಹತ್ವದ ರಾಜಕೀಯ ಹೆಜ್ಜೆ. ಸಮಾಜಶಾಸ್ತ್ರಜ್ಞರು ಹೇಳುವಂತೆ ಜಾತಿ ಪದ್ಧತಿ ‘ಶ್ರಮ ವಿಭಜನೆ’ ಅಲ್ಲ; ಅದು ‘ಶ್ರಮಿಕರ ವಿಭಜನೆ’ ಎಂದಿದ್ದ ಅಂಬೇಡ್ಕರ್, ವಿವಿಧ ಜಾತಿಗಳ ಶ್ರಮಿಕರು ಒಂದಾಗಿ ತಮ್ಮ ಹಕ್ಕುಗಳಿಗಾಗಿ ಹೋರಾಡಲು ಕೂಡ ಜಾತಿಪದ್ಧತಿ ತಡೆಯೊಡ್ಡಿದೆ ಎಂಬುದನ್ನು ಸ್ಪಷ್ಟವಾಗಿ ಅರಿತಿದ್ದರು. ಆದ್ದರಿಂದಲೇ ವಿವಿಧ ಜಾತಿಗಳ ಬಡವರನ್ನು, ಕಾರ್ಮಿಕ, ರೈತ ವರ್ಗಗಳನ್ನು ಒಟ್ಟಿಗೆ ತರಬಲ್ಲ ಲೇಬರ್ ಪಾರ್ಟಿಯನ್ನು ಸ್ಥಾಪಿಸಿದರು.
1936ರಲ್ಲಿ ಸ್ಥಳೀಯ ಸರ್ಕಾರಗಳನ್ನು ರಚಿಸುವ ಘೋಷಣೆಯಾದಾಗ, ಚುನಾವಣಾ ರಾಜಕೀಯಕ್ಕೆ ಇಳಿದರು. ಅವರು ರೂಪಿಸಿದ ಲೇಬರ್ ಪಾರ್ಟಿಯ ಪ್ರಣಾಳಿಕೆಯಲ್ಲಿ ಹಳೆಯ ಕಸುಬುಗಳ ಆಧುನೀಕರಣ, ಹೊಸ ಉದ್ಯೋಗ ಸೃಷ್ಟಿ, ಗೇಣಿ ಪದ್ಧತಿಯ ಶೋಷಣೆಗೆ ಕೊನೆ, ಭೂಹೀನರಿಗೆ ಜಮೀನು ಮುಂತಾಗಿ ಎಲ್ಲ ದುಡಿಯುವ ವರ್ಗಗಳ ಸಮಸ್ಯೆಗಳಿಗೂ ಪರಿಹಾರ ಹುಡುಕುವ ಗುರಿಗಳಿದ್ದವು.
ಸ್ವಾತಂತ್ರ್ಯಕ್ಕೆ ಸಜ್ಜಾಗುತ್ತಿದ್ದ ದೇಶಕ್ಕೆ ಅತ್ಯಗತ್ಯವಾಗಿದ್ದ ಕಾರ್ಯಕ್ರಮಾಧಾರಿತ ರಾಜಕೀಯ ದಿಕ್ಕುಗಳನ್ನು ನೀಡಲೆತ್ನಿಸಿದ ಲೇಬರ್ ಪಾರ್ಟಿಯಿಂದ 1937ರ ಮುಂಬೈ ಪ್ರಾಂತ ಚುನಾವಣೆಯಲ್ಲಿ 17 ಜನ ಸ್ಪರ್ಧಿಸಿದರು. ಅವರಲ್ಲಿ ಅಂಬೇಡ್ಕರ್ ಸೇರಿದಂತೆ 14 ಜನ ಗೆದ್ದರು. ಚುನಾವಣಾ ಫಲಿತಾಂಶ ಬಂದ ಒಂದು ತಿಂಗಳಲ್ಲೇ ಮಹಾಡ್ ಕೆರೆಯ ಸಿಹಿನೀರು ಬಳಸುವ ದಲಿತರ ಹಕ್ಕನ್ನು ಎತ್ತಿ ಹಿಡಿದ ಹೈಕೋರ್ಟ್ ತೀರ್ಪು ಬಂತು! 1927ರಲ್ಲಿ ದಲಿತರು ಮಹಾಡ್ ಕೆರೆಯ ಸಿಹಿನೀರು ಬಳಸುವ ಹಕ್ಕಿಗಾಗಿ ಅಂಬೇಡ್ಕರ್ ನೇತೃತ್ವದಲ್ಲಿ ನಡೆಸಿದ್ದ ಹೋರಾಟ ಪ್ರಕರಣದ ತೀರ್ಪು ಇದು.
ಮೇಲ್ನೋಟಕ್ಕೆ ಇವೆರಡೂ ಬೆಳವಣಿಗೆಗಳಿಗೆ ಪರಸ್ಪರ ಸಂಬಂಧ ಕಾಣದಿರಬಹುದು, ಆದರೆ ರಾಜಕೀಯಾಧಿಕಾರಕ್ಕೂ ಸಾಮಾಜಿಕ ಅಧಿಕಾರಕ್ಕೂ ಇರುವ ಸಂಬಂಧದ ಸಣ್ಣ ಸೂಚನೆ ಇಲ್ಲಿದೆ.
ಲೇಬರ್ ಪಾರ್ಟಿಯ ಅನುಭವವು ಮುಂದೆ ಅಂಬೇಡ್ಕರ್ ಮುಂಬೈ ಪ್ರಾಂತ ಸರ್ಕಾರದಲ್ಲಿ ಕಾರ್ಮಿಕ ಸಚಿವರಾದಾಗ ಖಚಿತ ಫಲ ಕೊಟ್ಟಿತು. 1942-46ರ ನಡುವೆ ಕಾರ್ಮಿಕ ಖಾತೆಯ ಜೊತೆಗೇ ಗಣಿ ಖಾತೆ, ಗೃಹ ನಿರ್ಮಾಣ, ಸೈನ್ಯ ಭರ್ತಿ ಮುಂತಾದ ಹಲವು ಖಾತೆಗಳನ್ನು ನಿರ್ವಹಿಸಿದ ಅಂಬೇಡ್ಕರ್, ಕಾರ್ಮಿಕರ ವಸತಿ ಪ್ರದೇಶದಲ್ಲಿ ಇದ್ದು, ಗಣಿಗಳಲ್ಲಿ ಇಳಿದು ನೋಡಿ, ಕಾರ್ಮಿಕರ ಕಷ್ಟಗಳಿಗೆ ಪರಿಹಾರ ರೂಪಿಸಿದರು. ಮುಂದೆ ಸ್ವತಂತ್ರ ಭಾರತದಲ್ಲಿ ಕಾನೂನು ಮಂತ್ರಿಯಾಗಿ ಅಂಬೇಡ್ಕರ್ ರೂಪಿಸಿದ ಸಂವಿಧಾನದ ಫಲಗಳು ನಮ್ಮೆಲ್ಲರಿಗೂ ದಕ್ಕಿವೆ. ಮಹಿಳೆಯರಿಗೆ ಆಸ್ತಿಯ ಹಕ್ಕನ್ನು ದೊರಕಿಸಲು ಅವರು ಅಪಾರ ಶ್ರಮದಿಂದ ತಯಾರಿಸಿದ ‘ಹಿಂದೂ ಕೋಡ್ ಬಿಲ್’ ಸನಾತನಿಗಳ ಒತ್ತಡದಿಂದ ಹಿಂದೆ ಸರಿಯಿತು. ಆದರೆ ಮುಂದೆ ಕರ್ನಾಟಕದಲ್ಲಿ ವೀರಪ್ಪ ಮೊಯಿಲಿ ನೇತೃತ್ವದ ಸರ್ಕಾರ ಹಾಗೂ ಕೇಂದ್ರದಲ್ಲಿ ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರ ಮಹಿಳೆಯರಿಗೆ ಸಮಾನ ಆಸ್ತಿಯ ಹಕ್ಕನ್ನು ಜಾರಿಗೊಳಿಸಿದವು. ಅಂಬೇಡ್ಕರ್ ತೆರೆದ ಹಾದಿಯ ಮೂಲಕವೇ ಇವತ್ತು ಶೇಕಡ 50ಕ್ಕೂ ಮೀರಿರುವ ಮೀಸಲಾತಿಯ ಫಲವನ್ನು ದೇಶದ ಹಲವು ಜಾತಿಗಳ ಹಲವು ತಲೆಮಾರುಗಳು ಪಡೆಯುತ್ತಿವೆ.
ಎಸ್‌ಸಿ, ಎಸ್‌ಟಿ ಫೆಡರೇಷನ್ ಅಂಬೇಡ್ಕರ್ ರಾಜಕೀಯ ಹೆಜ್ಜೆಯ ಮುಂದಿನ ಘಟ್ಟ. ಅಂಬೇಡ್ಕರ್ ತಮ್ಮ ಜೀವಿತದ ಕೊನೆಯಲ್ಲಿ ಎದುರಿಸಿದ ಎರಡು ಚುನಾವಣೆಗಳಲ್ಲಿ ಸೋತಿದ್ದರ ಹಿನ್ನೆಲೆಯಲ್ಲಿ ಸವರ್ಣೀಯರ ಹಿಡಿತಕ್ಕೆ ಒಳಪಟ್ಟ ಪಕ್ಷಗಳ, ಶಕ್ತಿಗಳ ಕೈವಾಡವಿತ್ತು. ಆದರೆ ಅಂಬೇಡ್ಕರ್ ಚಿಂತನೆ, ಕಾರ್ಯಯೋಜನೆ ಹಾಗೂ ಸಂವಿಧಾನದ ರಕ್ಷಣಾಬಲದಿಂದ ಭಾರತದ ಪ್ರಜಾಪ್ರಭುತ್ವ ಇಷ್ಟಾದರೂ ಉಳಿದಿದೆ ಎಂಬುದು ಹೊಸ ತಲೆಮಾರಿನ ಹುಡುಗ, ಹುಡುಗಿಯರಿಗಾದರೂ ಅರಿವಾಗಬೇಕು. ಸೋಲಿನಿಂದ ಹಿಮ್ಮೆಟ್ಟದ ಅಂಬೇಡ್ಕರ್ 1956ರಲ್ಲಿ ‘ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ’ ಕಟ್ಟಲೆತ್ನಿಸಿ ಭಾರತದ ರಾಜಕೀಯಕ್ಕೇ ಹೊಸ ದಿಕ್ಕು ನೀಡಲೆತ್ನಿಸಿದರು. ‘ದ ಟ್ರೈನಿಂಗ್ ಸ್ಕೂಲ್ ಫಾರ್ ಎಂಟ್ರೆನ್ಸ್ ಟು ಪಾಲಿಟಿಕ್ಸ್’ ಸಂಸ್ಥೆಯ ಮೂಲಕ ರಿಪಬ್ಲಿಕ್ ಪಾರ್ಟಿಯ ನಾಯಕ-ಕಾರ್ಯಕರ್ತರಿಗಾಗಿ ರೂಪಿಸಿದ ಸಮಗ್ರ ರಾಜಕೀಯ ತರಬೇತಿಯಲ್ಲಿ 15 ಜನ ತಯಾರಾದರು.
ಅಂಬೇಡ್ಕರ್ ನಿರ್ಗಮನದ ನಂತರ ಈ ರಾಜಕೀಯ ತರಬೇತಿಯ ಆದರ್ಶ ಮಾದರಿ ವ್ಯವಸ್ಥಿತವಾಗಿ ಮುಂದುವರಿದಿದ್ದರೆ, ದಕ್ಷ ರಾಜಕೀಯ ತರಬೇತಿ ಪಡೆದ ನಾಯಕರು ದೇಶವನ್ನು ವೃತ್ತಿಪರವಾಗಿ ಮುನ್ನಡೆಸುವ ಸಾಧ್ಯತೆ ಇರುತ್ತಿತ್ತು. ಆದ್ದರಿಂದಲೇ ಅಂಬೇಡ್ಕರ್ ರಾಜಕೀಯದ ಗೊತ್ತು ಗುರಿ, ಅವರು ಅಧ್ಯಯನ, ಬದ್ಧತೆಗಳ ಮೂಲಕ ಅಧಿಕಾರದ ಹೊಣೆಗಳನ್ನು ನಿರ್ವಹಿಸಿದ ರೀತಿ ಇವತ್ತು ಅಧಿಕಾರಕ್ಕಾಗಿ ಹಾತೊರೆಯುತ್ತಿರುವ ಒಳ್ಳೆಯ ರಾಜಕಾರಣಿಗಳಿಗಾದರೂ ಅರ್ಥವಾಗಬೇಕು. ಆರಂಭದಲ್ಲಿ ದಲಿತರ ಬದುಕನ್ನು ಬದಲಿಸಲು ಜೀವನವನ್ನು ಮುಡಿಪಾಗಿಟ್ಟಿದ್ದ ಅಂಬೇಡ್ಕರ್ ಮುಂದೆ ತಮಗೆ ದೊರೆತ ಅಧಿಕಾರ ಸ್ಥಾನಗಳನ್ನು ಎಲ್ಲ ವರ್ಗಗಳ ಏಳಿಗೆಗಾಗಿ ಬಳಸಿದ ರೀತಿ ಎಲ್ಲರಿಗೂ ಮಾದರಿಯಾಗಬೇಕು. ಇವತ್ತು ಮತ ಕೇಳಲು ಬರುತ್ತಿರುವ ನಾಯಕ, ನಾಯಕಿಯರಿಗೆ ತಾವುಯಾಕೆ ರಾಜಕೀಯಾಧಿಕಾರ ಹಿಡಿಯಬೇಕು ಎಂಬ ಬಗ್ಗೆ ಅಂಬೇಡ್ಕರ್ ಅವರಿಗಿದ್ದ ಸ್ಪಷ್ಟತೆ, ದಿಕ್ಕು ಇರಲೇಬೇಕೆಂದು ಒತ್ತಾಯಿಸುವ ತಾಕತ್ತು ಮತದಾರರಿಗಿರಬೇಕು.
ಪ್ರತೀ ಏಪ್ರಿಲ್ 14ರಂದು ತಮ್ಮ ನಾಯಕ ಬಾಬಾಸಾಹೇಬರ ಹುಟ್ಟುಹಬ್ಬವನ್ನು ಸ್ವಇಚ್ಛೆಯಿಂದ ಆಚರಿಸುವಷ್ಟು ದೊಡ್ಡ ಪ್ರಮಾಣದ ಅಭಿಮಾನಿ-ಅನುಯಾಯಿಗಳು ಭಾರತದ ಬೇರಾವ ನಾಯಕರಿಗೂ ಈಗ ಇಲ್ಲ. ಭಕ್ತರು ಆಚರಿಸುವ ದೇವರುಗಳ ಜಯಂತಿಗಳು ಕೂಡ ಈ ಪ್ರಮಾಣದಲ್ಲಿಲ್ಲ! ದೇಶದ ಸಂಪೂರ್ಣ ವಿಮೋಚನೆಗಾಗಿ ದುಡಿದ ವೈಚಾರಿಕ ನಾಯಕನಿಗೆ ಸಲ್ಲುತ್ತಿರುವ ಇಂಥ ಗೌರವ ಜಗತ್ತಿನಲ್ಲೇ ಅಪೂರ್ವವಾದುದು. ರಾಜಕೀಯವನ್ನು ಗಂಭೀರವಾಗಿ ತೆಗೆದುಕೊಂಡ ಅಂಬೇಡ್ಕರ್ ರೀತಿಯಿಂದಾಗಿಯೇ ಅವರ ಅನುಯಾಯಿಗಳಲ್ಲಿ ಇವತ್ತಿಗೂ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಬತ್ತಿಲ್ಲ. ಇವತ್ತಿಗೂ ಸಮಾಜದಲ್ಲಿ ನ್ಯಾಯಯುತ ಬದಲಾವಣೆ ಮಾಡುವ ಸಂಘಟಿತ ಶಕ್ತಿ ಅಂಬೇಡ್ಕರ್ ವಾದವನ್ನು ನಂಬಿದ ಸಂಘಟನೆಗಳಲ್ಲೇ ಹೆಚ್ಚು ಇದೆ.
ರಾಜಕೀಯ ಅಧಿಕಾರದ ಸಾಮಾಜಿಕ ಮಹತ್ವವನ್ನು ಇತರರಿಗಿಂತ ದಲಿತರು ಸಮರ್ಥವಾಗಿ ಅರಿತಿದ್ದಾರೆ. ಆಧುನಿಕ ರಾಜಕೀಯ ಪ್ರಜ್ಞೆಯೇ ಇಲ್ಲದ ದೇಶದ ಒಟ್ಟು ಜನಕೋಟಿಯ ಸಾಮಾಜಿಕ ಬದಲಾವಣೆಯ ರಥದ ಜೊತೆಜೊತೆಗೇ ರಾಜಕೀಯ ರಥವನ್ನು ಕೂಡ ಅಂಬೇಡ್ಕರ್ ಮುಂದೊಯ್ದಿದ್ದಾರೆ ಎಂಬ ಕೃತಜ್ಞತೆಯಿಂದ ಅಂಬೇಡ್ಕರ್ ಜಯಂತಿಯನ್ನು ಇಡೀ ದೇಶವೇ ಅರ್ಥಪೂರ್ಣವಾಗಿ ಆಚರಿಸಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.