ADVERTISEMENT

ವಿಶ್ಲೇಷಣೆ: ಹೆಚ್ಚು ಪ್ರಶ್ನೆ ಕೇಳಿದರೆ ಕಡಿಮೆ ಅಂಕ!

ಪರಿಸರ ಅನುಮೋದನೆ ನೀಡುವ ಪ್ರಾಧಿಕಾರಕ್ಕೆ ‘ಸ್ಟಾರ್ ರೇಟಿಂಗ್‌’ ವ್ಯವಸ್ಥೆ

ಡಾ.ಎಚ್.ಆರ್.ಕೃಷ್ಣಮೂರ್ತಿ
Published 3 ಮಾರ್ಚ್ 2022, 23:00 IST
Last Updated 3 ಮಾರ್ಚ್ 2022, 23:00 IST
   

ಗ್ರಾಹಕರಿಗೆ ಒದಗಿಸುವ ವಿಶಿಷ್ಟ ಸೌಕರ್ಯಗಳು ಮತ್ತು ಉತ್ತಮ ಗುಣಮಟ್ಟದ ಸೇವೆಯ ಆಧಾರದ ಮೇಲೆ ಹೋಟೆಲ್‍ಗಳನ್ನು ಶ್ರೇಣೀಕರಿಸಿ, ಅವುಗಳಿಗೆ ಒಂದರಿಂದ ಐದು ‘ಸ್ಟಾರ್’ ದರ್ಜೆಯನ್ನು ನೀಡುವ ವ್ಯವಸ್ಥೆ ‘ಸ್ಟಾರ್ ರೇಟಿಂಗ್ ಸಿಸ್ಟಮ್’ ನಮ್ಮ ದೇಶದಲ್ಲಿದೆ. ಭಾರತ ಸರ್ಕಾರದ ಪ್ರವಾಸೋದ್ಯಮ ಸಚಿವಾಲಯದ ಭಾಗವಾದ ‘ಹೋಟೆಲ್ ಆ್ಯಂಡ್ ರೆಸ್ಟೋರೆಂಟ್ ಅಪ್ರೂವಲ್ ಆ್ಯಂಡ್ ಕ್ಲಾಸಿಫಿಕೇಶನ್ ಕಮಿಟಿ’ ಈ ವರ್ಗೀಕರಣದ ಕೆಲಸವನ್ನು ಮಾಡುತ್ತದೆ. ಇದೀಗ ಇದೇ ಹೋಲಿಕೆಯ ‘ಸ್ಟಾರ್ ವರ್ಗೀಕರಣ ವ್ಯವಸ್ಥೆ’ಯನ್ನು ಕೇಂದ್ರ ಸರ್ಕಾರದ ಪರಿಸರ, ಅರಣ್ಯ ಮತ್ತು ವಾಯುಗುಣ ಬದಲಾವಣೆ ಸಚಿವಾಲಯ ಈ ವರ್ಷದ ಜನವರಿಯಿಂದ ಜಾರಿಗೆ ತಂದಿದೆ.

ರಾಜ್ಯಗಳ ಹಂತದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ‘ಪರಿಸರ ಅನುಮೋದನೆ’ಯನ್ನು ನೀಡುವ ಅಧಿಕಾರವಿರುವ, ‘ರಾಜ್ಯ ಪರಿಸರ ಪರಿಣಾಮ ಮೌಲ್ಯಮಾಪನ ಪ್ರಾಧಿಕಾರ’ದ (ಸ್ಟೇಟ್ ಎನ್‍ವೈರನ್‍ಮೆಂಟ್ ಇಂ‍ಪ್ಯಾಕ್ಟ್ ಅಸೆಸ್‍ಮೆಂಟ್ ಅಥಾರಿಟಿ) ದಕ್ಷತೆ ಮತ್ತು ಕಾರ್ಯಾಚರಣೆಯ ಯಶಸ್ಸನ್ನು ಈ ಸ್ಟಾರ್ ರೇಟಿಂಗ್ ವ್ಯವಸ್ಥೆ ಮಾಪನ ಮಾಡಿ ‘ಸ್ಟಾರ್ ದರ್ಜೆ’ಯನ್ನು ನೀಡಲಿದೆ.

2006ರ ಪರಿಸರ ಪರಿಣಾಮ ಮೌಲ್ಯಮಾಪನ ಅಧಿಸೂಚನೆಯಂತೆ 39 ವಿವಿಧ ರೀತಿಯ ಯೋಜನೆಗಳಿಗೆ ಪರಿಸರ ಮೌಲ್ಯಮಾಪನ ವರದಿ ಅಗತ್ಯ. ಈ ಯೋಜನೆಗಳನ್ನು ‘ಎ’ ಮತ್ತು ‘ಬಿ’ ಎಂದು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ‘ಎ’ ಗುಂಪಿನಲ್ಲಿ ಬರುವ ಯೋಜನೆಗಳಿಗೆ ಕೇಂದ್ರ ಪರಿಸರ ಸಚಿವಾಲಯದ ಅನುಮೋದನೆ ಅಗತ್ಯ. ‘ಬಿ’ ಗುಂಪಿನಲ್ಲಿ ಬರುವ ಯೋಜನಾ ಪ್ರಸ್ತಾವಗಳನ್ನು ರಾಜ್ಯ ಪ್ರಾಧಿಕಾರ ಪರಿಶೀಲಿಸಿ ಒಪ್ಪಿಗೆ ನೀಡುತ್ತದೆ ಅಥವಾ ತಿರಸ್ಕರಿಸುತ್ತದೆ.

ADVERTISEMENT

ವಿವಿಧ ಯೋಜನೆಗಳಿಗೆ ಪರಿಸರ ಅನುಮೋದನೆ ನೀಡುವ ಪ್ರಕ್ರಿಯೆಯಲ್ಲಿ ಪ್ರಾಥಮಿಕ ಪರಿಶೀಲನೆ (ಸ್ಕ್ರೀನಿಂಗ್), ವಿಚಾರಣಾ ವ್ಯಾಪ್ತಿ (ಟರ್ಮ್ಸ್‌ ಆಫ್ ರೆಫರೆನ್ಸ್), ಸಾರ್ವಜನಿಕ ಸಮಾಲೋಚನೆ (ಪಬ್ಲಿಕ್ ಕನ್ಸಲ್ಟೇಶನ್) ಮತ್ತು ಮೌಲ್ಯ ನಿರ್ಣಯ (ಅಪ್ರೈಸಲ್) ಎಂಬ ನಾಲ್ಕು ಹಂತಗಳಿವೆ. ಮೊದಲನೆಯ ಹಂತದಲ್ಲಿ ಯೋಜನಾ ಪ್ರಸ್ತಾವದ ಸ್ಥೂಲ ಪರಿಶೀಲನೆ ನಡೆದರೆ, ಎರಡನೆಯ ಹಂತದಲ್ಲಿ ಪರಿಸರ ಪರಿಣಾಮ ಮೌಲ್ಯಮಾಪನದ ಅಗತ್ಯ, ಅದರ ಸ್ವರೂಪ, ಕಟ್ಟುನಿಟ್ಟಾಗಿ ಪರಿಶೀಲಿಸಬೇಕಾದ ಅಂಶಗಳು, ಅವುಗಳ ವ್ಯಾಪ್ತಿ ಮುಂತಾದವುಗಳ ಬಗ್ಗೆ ಯೋಜನಾಕಾರರಿಗೆ ಸ್ಪಷ್ಟವಾಗಿ ತಿಳಿಸಲಾಗುತ್ತದೆ. ಮೂರನೆಯ ಹಂತದಲ್ಲಿ ಯೋಜನೆಯ ಪ್ರಸ್ತಾವ, ಪರಿಸರ ಪರಿಣಾಮ ವರದಿಯಲ್ಲಿರುವ ವಿಷಯಗಳ ಬಗ್ಗೆ, ಯೋಜನೆಯ ಪರಿಣಾಮಗಳಿಗೆ ಒಳಗಾಗುವ ಸ್ಥಳೀಯ ಜನಸಮುದಾಯದೊಡನೆ ಚರ್ಚೆ, ಸಮಾಲೋಚನೆಗಳು ನಡೆಯುತ್ತವೆ. ಅಂತಿಮವಾಗಿ ಈ ಎಲ್ಲ ಹಂತಗಳಲ್ಲಿ ಬಂದ ಸಲಹೆ, ಸೂಚನೆ, ಮಾಹಿತಿಗಳನ್ನು ಒಟ್ಟುಗೂಡಿಸಿ ವಿವರವಾಗಿ ಪರೀಕ್ಷಿಸುವ ‘ತಜ್ಞ ಮೌಲ್ಯ ನಿರ್ಣಯ ಸಮಿತಿ’ (ಎಕ್ಸ್‌ಪರ್ಟ್‌ ಅಪ್ರೈಸಲ್ ಕಮಿಟಿ) ತನ್ನ ಶಿಫಾರಸುಗಳನ್ನು ಕೇಂದ್ರದ ಹಂತದಲ್ಲಿ ಪರಿಸರ ಸಚಿವಾಲಯಕ್ಕೆ ಅಥವಾ ರಾಜ್ಯದ ಹಂತದಲ್ಲಿ ರಾಜ್ಯ ಪ್ರಾಧಿಕಾರಕ್ಕೆ ಸಲ್ಲಿಸುತ್ತದೆ. ಈ ಶಿಫಾರಸನ್ನು ಆಧರಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ.

ಅಭಿವೃದ್ಧಿ ಯೋಜನೆಗಳ ಪ್ರಸ್ತಾವಕ್ಕೆ ಪರಿಸರ ಅನುಮೋದನೆ ನೀಡುವ ರಾಜ್ಯ ಪ್ರಾಧಿಕಾರಗಳ ಕೆಲಸ ಕಾರ್ಯಗಳಲ್ಲಿ ಪಾರದರ್ಶಕತೆ, ದಕ್ಷತೆ ಮತ್ತು ಉತ್ತರದಾಯಿತ್ವಗಳನ್ನು ತರುವ ಉದ್ದೇಶದಿಂದ ಈ ಸ್ಟಾರ್ ರೇಟಿಂಗ್ ವ್ಯವಸ್ಥೆಯನ್ನು ಜಾರಿಗೆ ತಂದಿರುವುದಾಗಿ ಕೇಂದ್ರ ಪರಿಸರ ಸಚಿವಾಲಯ ತಿಳಿಸಿದೆ. ಪ್ರತೀ ಆರು ತಿಂಗಳಿಗೊಮ್ಮೆ, ಏಳು ಅಂಶಗಳ ಆಧಾರದ ಮೇಲೆ ರಾಜ್ಯ ಪ್ರಾಧಿಕಾರಗಳ ಮೌಲ್ಯಮಾಪನ ನಡೆಯಲಿದೆ. ಇದರಲ್ಲಿ ಐದು ಅಥವಾ ಅದಕ್ಕಿಂತ ಹೆಚ್ಚಿನ ಅಂಕಗಳು ದೊರೆತ ಪ್ರಾಧಿಕಾರಕ್ಕೆ ‘5 ಸ್ಟಾರ್ ಮಾನ್ಯತೆ’ ದೊರೆಯುತ್ತದೆ. ಈ ಅಂಕ ಪ್ರದಾನ ಹೇಗೆ ನಡೆಯುತ್ತದೆ ಎಂಬುದು ಕುತೂಹಲಕಾರಿ.

ಯೋಜನಾ ಪ್ರಸ್ತಾವಗಳ ಸ್ಥೂಲ ಪರಿಶೀಲನೆ ನಡೆಸಿ, ಪ್ರಸ್ತಾವಗಳನ್ನು ಐದು ದಿನಗಳ ಒಳಗಾಗಿ, ಮುಂದಿನ ಪ್ರಕ್ರಿಯೆಗಳಿಗೆ ಅಧಿಕೃತವಾಗಿ ಸ್ವೀಕರಿಸಿದರೆ ಒಂದು ಅಂಕ ದೊರೆಯುತ್ತದೆ. ಐದರಿಂದ ಏಳು ದಿನಗಳ ಒಳಗೆ ಸ್ವೀಕರಿಸಿದರೆ 0.5 ಮತ್ತು ಏಳು ದಿನಗಳ ನಂತರ ಸೊನ್ನೆ ಅಂಕ ದೊರೆಯುತ್ತದೆ. ಮುಂದಿನ ಹೆಜ್ಜೆ ‘ಟರ್ಮ್ಸ್‌ ಆಫ್ ರೆಫರೆನ್ಸ್’ (ಟಿಒಆರ್) ನೀಡಿಕೆ. ಬಂದ ವಿವಿಧ ಪ್ರಸ್ತಾವ
ಗಳಲ್ಲಿ, 30 ದಿನಗಳ ಒಳಗಾಗಿ ಶೇ 90 ಮತ್ತು ಅದಕ್ಕಿಂತ ಹೆಚ್ಚಿನ ಪ್ರಸ್ತಾವಗಳಿಗೆ ಟಿಒಆರ್ ನೀಡಿದರೆ ಒಂದು ಅಂಕ, ಶೇ 80ರಿಂದ ಶೇ 90ಕ್ಕೆ 0.5 ಅಂಕ ದೊರೆಯುತ್ತದೆ. ಶೇ 80ಕ್ಕಿಂತಕಡಿಮೆ ಪ್ರಸ್ತಾವಗಳಿಗೆ ಟಿಒಆರ್ ನೀಡಿದರೆ ಯಾವ ಅಂಕವೂ ದೊರೆಯುವುದಿಲ್ಲ.

ಯೋಜನಾ ಪ್ರಸ್ತಾವಕ್ಕೆ ಸಂಬಂಧಪಟ್ಟಂತೆ ಕೆಲವೊಮ್ಮೆ ಅರ್ಜಿದಾರರಿಂದ ಹೆಚ್ಚಿನ ಮಾಹಿತಿ, ದಾಖಲೆಗಳನ್ನು ಕೇಳಬೇಕಾಗುತ್ತದೆ. ಬಂದ ಅರ್ಜಿಗಳಲ್ಲಿ ಶೇ 10ಕ್ಕಿಂತ ಕಡಿಮೆ ಪ್ರಕರಣಗಳಲ್ಲಿ ಒಂದು ಬಾರಿ ಮಾತ್ರ ಹೆಚ್ಚಿನ ಮಾಹಿತಿಗಳನ್ನು ಕೇಳಬಹುದು. ಇದನ್ನು ಪಾಲಿಸಿದರೆ ಒಂದು ಅಂಕ. ಶೇ 30ಕ್ಕಿಂತ ಹೆಚ್ಚಿನ ಪ್ರಸ್ತಾವಗಳಲ್ಲಿ, ಒಂದಕ್ಕಿಂತ ಹೆಚ್ಚು ಬಾರಿ ಹೆಚ್ಚಿನ ಮಾಹಿತಿ ಕೇಳಿದರೆ ದೊರೆಯುವುದು ಶೂನ್ಯ ಅಂಕ. ಹೀಗಾಗಿ ಹೆಚ್ಚು ಪ್ರಶ್ನೆ ಕೇಳಿದಷ್ಟೂ ದೊರೆಯುವ ಅಂಕ ಕಡಿಮೆಯಾಗುತ್ತದೆ. ಹಲವಾರು ಸಂದರ್ಭಗಳಲ್ಲಿ ಅನುಮೋದನೆ ನೀಡುವ ಮುನ್ನ, ಯೋಜನಾ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸುವುದು ಅಗತ್ಯವಾಗುತ್ತದೆ. ಆದರೆ ಸ್ಟಾರ್ ರೇಟಿಂಗ್ ವ್ಯವಸ್ಥೆ ಇಂತಹ ಕ್ಷೇತ್ರಭೇಟಿಗಳನ್ನು ಪ್ರೋತ್ಸಾಹಿಸುವುದಿಲ್ಲ. ಕ್ಷೇತ್ರಭೇಟಿಗಳನ್ನು ಶೇ 10ರಷ್ಟು ಅರ್ಜಿಗಳಿಗೆ ಮಾತ್ರ ಸೀಮಿತಗೊಳಿಸಿದರೆ ಒಂದು ಅಂಕ ದೊರೆಯುತ್ತದೆ. ಶೇ 20ಕ್ಕಿಂತ ಹೆಚ್ಚಿನ ಯೋಜನಾ ಪ್ರದೇಶಗಳಿಗೆ ಭೇಟಿ ನೀಡಿದರೆ ಶೂನ್ಯಾಂಕ ಸಂಪಾದನೆ ಖಚಿತ. ಅನುಮೋದನೆ ನೀಡುವ ಮುನ್ನ ಎಷ್ಟು ಬಾರಿ ಯೋಜನಾ ಪ್ರದೇಶಕ್ಕೆ ಭೇಟಿ ನೀಡಬಹುದೆಂಬುದನ್ನು ಸ್ಪಷ್ಟವಾಗಿ ತಿಳಿಸಿಲ್ಲ.

2006ರ ಅಧಿಸೂಚನೆಯಲ್ಲಿ, ಅನುಮೋದನೆ ನೀಡುವ ಮುನ್ನ ಅಗತ್ಯಕ್ಕೆ ಅನುಗುಣವಾಗಿ ಎಷ್ಟು ಬಾರಿಯಾದರೂ ಕ್ಷೇತ್ರಭೇಟಿ ಮಾಡಬಹುದಿತ್ತು. ಆರು ತಿಂಗಳ ಅವಧಿಯಲ್ಲಿ ಪ್ರಾಧಿಕಾರಕ್ಕೆ ಬಂದ ಎಲ್ಲ ದೂರು, ಸ್ಪಷ್ಟೀಕರಣ ಕೋರಿಕೆ ಮುಂತಾದವುಗಳಿಗೆ ಉತ್ತರ ನೀಡಿದಲ್ಲಿ ಒಂದು ಅಂಕ, ಶೇ 50ರಷ್ಟಕ್ಕೆ ಉತ್ತರಿಸಿದ್ದರೆ 0.5 ಅಂಕ ನೀಡಲಾಗುತ್ತದೆ. ಅದಕ್ಕಿಂತ ಕಡಿಮೆ ಸ್ಪಷ್ಟೀಕರಣಗಳಿಗೆ ಯಾವ ಅಂಕವೂ ಇಲ್ಲ.

ಈ ಮೊದಲು ಪರಿಸರ ಅನುಮೋದನೆ ನೀಡಲು 105 ದಿನಗಳ ಕಾಲಾವಧಿಯನ್ನು ನಿಗದಿಗೊಳಿಸಲಾಗಿತ್ತು. ಸ್ಟಾರ್ರೇಟಿಂಗ್ ವ್ಯವಸ್ಥೆ ಇದನ್ನು ಬದಲಿಸಿದೆ. ಈಗ 80 ದಿನಗಳ ಒಳಗಾಗಿ ಅನುಮೋದನೆ ನೀಡಿದರೆ, ಪ್ರಾಧಿಕಾರಕ್ಕೆ 2 ಅಂಕಗಳು ದೊರೆಯುತ್ತವೆ. 80ರಿಂದ 105 ದಿನಗಳಿಗೆ ಒಂದು ಅಂಕ, 105ರಿಂದ 120 ದಿನಗಳಿಗೆ 0.5 ಅಂಕ ಸಿಗುತ್ತದೆ. 120 ದಿನಗಳ ನಂತರ ಅನುಮೋದನೆ ನೀಡಿದರೂ ದೊರೆಯುವ ಅಂಕ ಮಾತ್ರ ಸೊನ್ನೆ.

2006ರಿಂದ 2021ರ ಜುಲೈವರೆಗೆ ಪರಿಸರ ಪರಿಣಾಮ ಮೌಲ್ಯಮಾಪನಕ್ಕೆ ಸಂಬಂಧಿಸಿದ ನಿಯಮಗಳಲ್ಲಿ ‘ಸರಾಗ ವ್ಯವಹಾರ’ಕ್ಕಾಗಿ (ಈಸ್ ಆಫ್ ಡೂಯಿಂಗ್ ಬಿಸಿನೆಸ್) 67 ಬಾರಿ ಬದಲಾವಣೆಗಳನ್ನು ತರಲಾಗಿದೆ. ಇಂದು ಕೆಲವು ಯೋಜನೆಗಳಿಗೆ ಪರಿಸರ ಪರಿಣಾಮ ಮೌಲ್ಯಮಾಪನ ಅನಗತ್ಯ, ಸಾರ್ವಜನಿಕ ಸಮಾಲೋಚನೆ ಅನಗತ್ಯ, ಕೆಲವಕ್ಕೆ ಪರಿಸರ ಅನುಮೋದನೆ ಬೇಡ. ಅನುಮೋದನೆಯೇ ಇಲ್ಲದೆ ಪ್ರಾರಂಭವಾಗಿರುವ ಯೋಜನೆಗಳನ್ನು, 2021ರ ಜುಲೈನಲ್ಲಿ ಪ್ರಕಟಿಸಿದ ‘ಸ್ಟ್ಯಾಂಡರ್ಡ್ ಆಪರೇಟಿಂಗ್ಪ್ರೊಸೀಜರ್’ನಂತೆ ದಂಡ ನೀಡಿ ಸರಿಪಡಿಸಿಕೊಳ್ಳಲು ಸಾಧ್ಯ. ಇದೀಗ ಸ್ಟಾರ್ ರೇಟಿಂಗ್ ವ್ಯವಸ್ಥೆಗೆ ಬಂದಿರುವ ವ್ಯಾಪಕ ಟೀಕೆಗಳಿಗೆ ಉತ್ತರ ನೀಡಿರುವ ಸರ್ಕಾರ ‘ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯನ್ನು ತ್ವರಿತಗೊಳಿಸುವುದು ಮಾತ್ರ ಈ ಹೊಸ ವ್ಯವಸ್ಥೆಯ ಉದ್ದೇಶವೇ ವಿನಾ ಕೂಲಂಕಷ ಪರಿಶೀಲನೆಯಿಲ್ಲದೇ ಪರವಾನಗಿ ನೀಡುವುದು ಅಲ್ಲ’ ಎಂದಿದೆ.

ತ್ವರಿತಗತಿಯ ನಿರ್ಧಾರಗಳು ಬಂಡವಾಳ ಹೂಡಿಕೆಯನ್ನು ಉತ್ತೇಜಿಸಿ ದೇಶದ ಒಟ್ಟಾರೆ ಆರ್ಥಿಕತೆಯನ್ನುಸುಧಾರಿಸುತ್ತವೆ ಎಂಬುದು ನಿಜ. ಆದರೆ ‘ಫೈವ್ ಸ್ಟಾರ್ಮಾನ್ಯತೆ’ ಪಡೆಯುವ ಅಮಿತೋತ್ಸಾಹದಲ್ಲಿ ಕಟ್ಟುನಿಟ್ಟಾದ, ಆಮೂಲಾಗ್ರವಾದ, ಕೂಲಂಕಷವಾದ ಮೌಲ್ಯಮಾಪನವನ್ನು ಉಪೇಕ್ಷಿಸಿ, ಕಡೆಗಣಿಸುವ ಸ್ಪಷ್ಟ ಸಾಧ್ಯತೆ ಇದೆ ಎಂಬುದೇ ಪರಿಸರ ತಜ್ಞರು, ಸಂಘಟನೆಗಳ ಪ್ರಾಮಾಣಿಕ ಕಳವಳಕ್ಕೆ ಕಾರಣ.

ಡಾ. ಎಚ್.ಆರ್.ಕೃಷ್ಣಮೂರ್ತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.