‘ಯುದ್ಧ ಯಾರಿಗೆ ಬೇಕು’ ಎಂಬ ಪ್ರಶ್ನೆಯನ್ನು ಇಟ್ಟುಕೊಳ್ಳೋಣ. ಶಸ್ತ್ರಾಸ್ತ್ರಗಳನ್ನು ಧಾನ್ಯದಂತೆ ಅಪಾರವಾಗಿ ಸಂಗ್ರಹಿಸಿ ಇಟ್ಟುಕೊಂಡವರಿಗೆ, ತನ್ನ ಗಡಿಯೊಳಗೆ ತಾಗಿಕೊಂಡು ಆ ದೇಶ ಬೆಳೆಯುತ್ತದೆಯಲ್ಲ ಎಂಬ ಹೊಟ್ಟೆಕಿಚ್ಚು ಬೆಳೆಸಿಕೊಂಡವರಿಗೆ, ಪರಮಾಣು ಬಾಂಬುಗಳು ತನ್ನ ಬತ್ತಳಿಕೆಯಲ್ಲಷ್ಟೇ ಇರಬೇಕು, ತಾನು ಮಾತ್ರ ‘ಹೀರೊ’, ಉಳಿದವರು ‘ಖಳನಾಯಕ’ ಎಂಬ ಮನಃಸ್ಥಿತಿಯುಳ್ಳವರಿಗೆ, ಯುದ್ಧವನ್ನು ಒಂದು ಉದ್ಯಮ ಮಾಡಿಕೊಂಡವರಿಗೆ, ತನ್ನ ನೆರೆಹೊರೆಯನ್ನು ಆಕ್ರಮಿಸಿಕೊಂಡು ಅಲ್ಲಿ ತನ್ನ ಗೋಡೆಯನ್ನೋ ಧ್ವಜವನ್ನೋ ನೆಟ್ಟು ಬದುಕಬೇಕೆಂಬ ಹಿಪಾಕ್ರಸಿ ಮನಸ್ಸುಳ್ಳವರಿಗೆ, ಪ್ರಜಾಪ್ರಭುತ್ವ, ಸಂವಿಧಾನ, ಸ್ವಾತಂತ್ರ್ಯದ ಹಕ್ಕು ಬಾಧ್ಯತೆಗಳಿದ್ದರೂ ತನ್ನ ಆಂತರಿಕ ಬದುಕಿಗೆಲ್ಲೋ ಅಪಾಯವಿದೆಯೆಂದು ಸ್ವಗತವಾಗಿ ನರಳುವವರಿಗೆ, ನಮ್ಮ ಪ್ರಾಚೀನ ಕಾವ್ಯಗಳಲ್ಲಿರುವಂತೆ ದಾಯಾದಿ ಮತ್ಸರ, ಹಗೆ, ಸ್ವಾರ್ಥ ತುಂಬಿಕೊಂಡವರಿಗೆ... ಹೀಗೆ ಇವನ್ನು ಪಟ್ಟಿ ಮಾಡುತ್ತಾ ಹೋಗಬಹುದು.
ಇವುಗಳ ಮಧ್ಯೆಯೂ ಎಲ್ಲೋ ಕರ್ಣ, ಏಕಲವ್ಯ, ಬಾಹುಬಲಿ, ಕುವೆಂಪು ಅವರ ಶಂಬೂಕ, ಜಲಗಾರ, ಕನಕನ ರಾಗಿ ತೋರುವ ಆತ್ಮವಿಶ್ವಾಸ, ಅಂತಃಕರಣ, ಮನುಷ್ಯನನ್ನು, ಮನುಷ್ಯತ್ವವನ್ನು ಬಾಳಿಸುತ್ತದೆಯಲ್ಲಾ ಎಂದು ನೆನೆದರೆ ಒಂದಿಷ್ಟು ನೆಮ್ಮದಿಯಂತೂ ಆಗುತ್ತದೆ. ಹಾಗೆಯೇ ಜಗತ್ತು ನಾವು ನೆಮ್ಮದಿಯಿಂದ ಇದ್ದೇವೆ ಎನ್ನುವಾಗಲೇ ನಮ್ಮ ಹೊರಗೂ ಒಳಗೂ ಯುದ್ಧವೊಂದು ಸದಾ ಜಾಗೃತಿಯಲ್ಲಿರುತ್ತದೆ. ‘ಗೋವಿನ ಹಾಡು’ವಿನಲ್ಲೂ ‘ಅಮ್ಮಗಳಿರಾ ಅಕ್ಕಗಳಿರಾ ನಮ್ಮ ತಾಯ್ ಒಡಹುಟ್ಟುಗಳಿರಾ ನಿಮ್ಮ ಕಂದನೆಂದು ಕಾಣಿರಿ ತಬ್ಬಲಿಯನೀ ಕರುವನು’ ಎಂದು ಸ್ವತಃ ತಾಯಿ ಆಕಳು ಹುಲಿಯ ಬಾಯಿಗೆ ತಾನು ಈಡಾಗಬಹುದಾದ ಪ್ರಸಂಗವನ್ನು ನೆನೆದು ಅಲವತ್ತುಕೊಳ್ಳುವುದನ್ನು ನೋಡಿದರೆ ನಮಗೆ ಸದ್ಯದ ‘ಉಕ್ರೇನ್’ನ ದುಗುಡ ನೆನಪಾಗುತ್ತದೆ. ಗೋವಿನ ಹಾಡಿನ ಹುಲಿ ರಷ್ಯಾ ಆಗಲು ಸಾಧ್ಯವೇ? ಮಕ್ಕಳು, ತಾಯಂದಿರು, ಅವರ ಸಂಕುಲ, ಪರಿಸರವೇ ನಾಶ ಹೊಂದುತ್ತಿರುವ ಕರುಳು ಹಿಂಡುವ ಯುದ್ಧದ ದೃಶ್ಯಗಳನ್ನು ನಾವು ಹೇಗೆ ಅರಗಿಸಿಕೊಳ್ಳುವುದು?
ಹಲವಾರು ಹುಲಿಗಳ ಶಕ್ತಿ- ಸಾಮರ್ಥ್ಯ ಸೇರಿ ಇಲ್ಲಿ ‘ನ್ಯಾಟೊ’ ಎನ್ನುವ ಒಂದು ಬಲಿಷ್ಠ ಒಕ್ಕೂಟವಾಗಿದೆ. ಅಮೆರಿಕವು ಇದರ ರಿಮೋಟ್ ಹಿಡಿದಿದೆ. ಅದು ಉಕ್ರೇನಿಗೆ ಸಹಾಯಹಸ್ತ ಚಾಚುವ ಭರವಸೆ ನೀಡಿದೆ. ಆದರೂ ಅದಕ್ಕೂ ಯುದ್ಧೋನ್ಮಾದವೇ ಬೇಕು. ಅತ್ತ ಬೇಟೆ ಸಿಕ್ಕಿದೆಯೆಂದು ನಿರಂತರ ದಾಳಿ ಎಸಗುತ್ತಲೇ ಇರುವ ಇನ್ನೊಂದು ಬಲಿಷ್ಠ ಹುಲಿ ರಷ್ಯಾ. ಈ ಬಲಿಷ್ಠ ಹುಲಿಗಳನ್ನು ಗಮನಿಸುತ್ತಲೇ ಹೊಂಚುಹಾಕಿ, ಬೇಟೆಯಿಂದ ಉಳಿದ ಆಹಾರವನ್ನು ನಾವು ಹಂಚಿಕೊಂಡು ಸವಿಯಬಹುದು ಎಂದು ಎದುರು ನೋಡುತ್ತಿರುವ ಚೀನಾ, ಪಾಕಿಸ್ತಾನ, ದಕ್ಷಿಣ ಕೊರಿಯಾದಂಥ ದೇಶಗಳು. ಇಲ್ಲಿ ಭಾರತವೇನೋ ತಟಸ್ಥವಾಗಿದೆ. ಆದರೆ ಒಮ್ಮೊಮ್ಮೆ ಈ ತಟಸ್ಥ ನೀತಿ ಅದಕ್ಕೆ ಮುಳುವಾಗಲೂಬಹುದು. ನಮ್ಮ ಬಲವಾದ ಅಭಿಪ್ರಾಯವನ್ನು ಹೇಳದೇ ಇರುವ, ದಾಖಲಿಸದೇ ಇರುವ ಈ ನಡೆ ನಮ್ಮ ತಾಯಿನಾಡಿಗೆ ಎಂಥ ಸುಖವನ್ನು ಕೊಡುತ್ತದೆಯೋ ಗೊತ್ತಿಲ್ಲ. ಸದಾ ವೀರಾವೇಶದಿಂದ ಬದುಕುವ ನಮಗೆ, ಅಲ್ಲಿ ಕಲಿಯಲು ಹೋದ ನಮ್ಮ ಮಕ್ಕಳನ್ನು ಉಳಿಸಿಕೊಳ್ಳಲು ಆಗುತ್ತಿಲ್ಲ. ಆ ರಾಷ್ಟ್ರದಲ್ಲಿ ಆಗುತ್ತಿರುವ ಯುದ್ಧದ ಘನಘೋರ ಅಪಾಯಗಳು ನಮಗೆ ತಟ್ಟದೆ ಇರುತ್ತವೆಯೇ? ಯುದ್ಧವೆಂದರೆ ಸಾವೇ ಅದರ ಹೆಬ್ಬಾಗಿಲು!
ನಾವೆಷ್ಟೇ ಸ್ವಾವಲಂಬಿ, ಸ್ವದೇಶಿ, ಮೇಕ್ ಇನ್ ಇಂಡಿಯಾ ಎಂದು ಹೇಳಿಕೊಂಡರೂ ಕಚ್ಚಾ ರೇಷ್ಮೆಯನ್ನು, ಸ್ಟೀಲು, ಉಕ್ಕು, ಕಲ್ಲಿದ್ದಲನ್ನು, ಯುದ್ಧ ಸಾಮಗ್ರಿಗಳು, ಆಧುನಿಕ ತಂತ್ರಜ್ಞಾನದ ಬಿಡಿಭಾಗಗಳನ್ನು ಜೊತೆಗೆ ಗೋಧಿ, ಸೂರ್ಯಕಾಂತಿ ಎಣ್ಣೆ, ಈರುಳ್ಳಿ, ಆಲೂಗಡ್ಡೆಯಂತಹ ಮೂಲಭೂತ ಸಾಮಗ್ರಿಗಳನ್ನು ಆಮದು ಮಾಡಿಕೊಳ್ಳಲು ನಾವು ಹಲವು ರಾಷ್ಟ್ರಗಳನ್ನು ಆಶ್ರಯಿಸಬೇಕು. ಅದರಲ್ಲಿ ನೆರೆಯ ‘ವೈರಿ’ ಎಂದು ಬಿಂಬಿಸುತ್ತಲೇ ಬಂದಿರುವ ರಾಷ್ಟ್ರವೂ ಇದೆ. ಅಷ್ಟೊಂದು ಪರಾವಲಂಬಿಗಳು ನಾವು. ಪರಸ್ಪರ ಸೌಹಾರ್ದ, ರಾಜತಾಂತ್ರಿಕತೆ, ಬಾಂಧವ್ಯ ಇದ್ದಾಗಲೂ ಕ್ರೀಡೆ, ಕಲೆ, ಸಾಹಿತ್ಯ, ಸಂಸ್ಕೃತಿ, ಧಾರ್ಮಿಕ ಆಚರಣೆ, ಗೋಷ್ಠಿಗಳಲ್ಲೂ ನಾವು ಮತ್ತು ಅವರು ಪರಸ್ಪರ ಕಹಿ ಭಾವನೆಗಳನ್ನು ಆಗಾಗ ವ್ಯಕ್ತಪಡಿಸುತ್ತಿರುತ್ತೇವೆ. ಇದೇ ವೈರುಧ್ಯದ ದೇಶೀಯತೆ ಮತ್ತು ರಾಷ್ಟ್ರಪ್ರೇಮ!
ಹೋಗಲಿ ಒಂದು ಕಾಲದಲ್ಲಿ ನಾವೇ ಆಗಿದ್ದ ಅಕ್ಕಪಕ್ಕದ ಗಡಿರಾಜ್ಯಗಳ ವಿಷಯದಲ್ಲೂ ನಾವು ಪರಸ್ಪರ ಕೂಡಿ ಬದುಕುವ ಸೌಹಾರ್ದವನ್ನು ಇಟ್ಟುಕೊಂಡಿಲ್ಲವಲ್ಲ. ಭಾಷೆಯ ವಿಷಯದಲ್ಲಿ, ಜಲದ ವಿಷಯದಲ್ಲಿ, ಭೂಮಿ ಗಡಿಯ ವಿಷಯದಲ್ಲಿ, ಜಾತಿ, ವರ್ಗ, ಧರ್ಮದ ವಿಷಯದಲ್ಲಿ ನಾವು ಸದಾ ಒಡಕಲು ಬಿಂಬಗಳೇ. ಹೋಗಲಿ ನಮ್ಮ ಕನ್ನಡ ಕುಲಪುರೋಹಿತರು ಎನಿಸಿಕೊಂಡವರ, ಮರಾಠಿ ಕುಲಪುರೋಹಿತರು ಎನಿಸಿಕೊಂಡವರ, ತಮಿಳು ಕುಲಪುರೋಹಿತರು ಎನಿಸಿಕೊಂಡವರ ಹಾಗೇ ತೆಲುಗು, ಮಲಯಾಳಂ ಹೀಗೆ ಸಾಂಸ್ಕೃತಿಕವಾಗಿ ಹೆಚ್ಚು ಶ್ರೀಮಂತವಿರುವ ದಕ್ಷಿಣ ದ್ರಾವಿಡ ಪರಿಸರದಲ್ಲಿಯೇ ಅನನ್ಯ ಅಸ್ಮಿತೆಗಳಿಂದ ಬದುಕಿರುವ ನಮ್ಮನಮ್ಮಲ್ಲಿಯೇ ಎಷ್ಟೊಂದು ಜಗಳಗಳನ್ನು ನಮ್ಮ ಸಾಹಿತ್ಯಿಕ ಕೃತಿಗಳು ಹುಟ್ಟುಹಾಕಿಲ್ಲ. ಕೆಲವು ಪಠ್ಯಗಳನ್ನು ಓದುತ್ತಿದ್ದರೆ ನಮ್ಮೊಳಗೇ ಒಂದು ‘ದ್ವೇಷ’ ಹುಟ್ಟಿಕೊಂಡುಬಿಡುತ್ತದೆ.
ಇದು ಹೀಗೇಕಾಯ್ತು? ಅಷ್ಟೊಂದು ಕಠಿಣವಿತ್ತೇ ಈ ಭಾಷಾ ಬಹುತ್ವದ ಸಂಸ್ಕೃತಿಯ ಬದುಕು ಎನ್ನುವ ಆತಂಕವೂ ಎದುರಾಗುತ್ತದೆ.
ಇಷ್ಟಿದ್ದರೂ ಬೇಂದ್ರೆಯವರು ‘ನಮ್ಮ ಬೇಂದ್ರೆ’ಯಾಗಿ ನಮ್ಮಲ್ಲಿಯೇ ಬದುಕಿದರು. ‘ಮಾತೃಭಾಷೆ ತಮಿಳು, ಹೃದಯದ ಭಾಷೆ ಕನ್ನಡ’ವೆಂದು ಕನ್ನಡದ ಆಸ್ತಿ ಎನಿಸಿದ ‘ಮಾಸ್ತಿ’ ಬದುಕಿದರು. ಹಾಗೇ ತಂಜಾವೂರು ಪರಮಶಿವ ಕೈಲಾಸಂ, ಬಾಲ್ಯದಿಂದಲೂ ನಮ್ಮನ್ನು ನಾಯಿಮರಿ, ಬಣ್ಣದ ತಗಡಿನ ತುತ್ತೂರಿ ಮೂಲಕ ಬೆಳೆಸಿದ ‘ರತ್ನನ ಪದ’ದ ನಮ್ಮ ಜಿ.ಪಿ.ರಾಜರತ್ನಂ, ‘ಆಲ್ ಇಂಡಿಯಾ ರೇಡಿಯೊ’ ಎಂದು ನಾಮಕರಣ ಮಾಡಿದ್ದ ನಾ.ಕಸ್ತೂರಿ (ಮೂಲ ಕೇರಳದವರು) ನಮ್ಮ ಮನ, ಮನೆಯ ಬೆಳಗಿ ನಿಂತವರು. ಹಾಗೆ ನೋಡಿದರೆ ಬುದ್ಧ, ಮಹಾವೀರ, ಪೈಗಂಬರ, ಕ್ರಿಸ್ತ, ನಮ್ಮ ವಚನಕಾರರು, ದಾಸರು, ಸಂತರು, ಸೂಫಿಗಳು, ತತ್ವಪದಕಾರರು, ಗಾಂಧಿ, ಅಂಬೇಡ್ಕರ್, ಲೋಹಿಯಾ, ಕಾರ್ಲ್‌ಮಾರ್ಕ್ಸ್ ಮುಂತಾದವರು ಯಾವ ಯಾವುದೊ ನಾಡುಗಳಿಂದಲೂ ಚಿಂತನೆಗಳಿಂದಲೂ ಬಂದು ಇಲ್ಲಿ ನದಿಯಾಗಿ ಕೂಡಿಕೊಂಡರು. ಈ ಬೆಳಕೇ ನಮ್ಮನ್ನಿಂದು ಆಂತರಿಕ ಶಕ್ತಿಯಾಗಿ ಬೆಳಗುತ್ತಿದೆ ತಾನೆ?
ಮರಾಠಿ ನಾಟಕಗಳು ಕನ್ನಡ ಪರಿಸರದಲ್ಲಿ ಪ್ರಯೋಗಗೊಂಡರೆ, ಕನ್ನಡ ನಾಟಕಗಳು ಮರಾಠಿ ನೆಲದಲ್ಲಿ ಪ್ರಯೋಗಗೊಂಡರೆ ಸಂಸ್ಕೃತಿಯ ಬಹುತ್ವದ ಪ್ರಸರಣದಲ್ಲಿ ದ್ವೇಷ ಮಾಡುವುದೇನಿದೆ? ನಮ್ಮ ದುಡಿಮೆ, ಹಕ್ಕು, ಆದಾಯವನ್ನು ಅವು ಗಳಿಸಿ ಬಲಿಷ್ಠ
ವಾಗುತ್ತವೆ ಎಂಬ ಆತಂಕವೇ ಹೆಚ್ಚಾಗಿದೆ. ನಮ್ಮ ವಿವೇಕವನ್ನು ಅವು ಬೆಳಗಿ ನಮ್ಮದಾಗುವ ಹಂಬಲಕ್ಕೆ ಇಂಬಾಗುತ್ತವೆ ಎಂದು ನಂಬಿ ನಾವು ಪರಸ್ಪರ ಹೃದಯ ತೆರೆದುಕೊಳ್ಳಲೇ ಇಲ್ಲ. ಪುರಾಣದ ಆಂಜನೇಯನೇನೋ ತನ್ನ ಭಕ್ತಿ, ಪ್ರೇಮ, ಸೇವಕತನಕ್ಕೆ ಎದೆ ತೆರೆದು ಒಟ್ಟಾಗಿ ರಾಮ, ಲಕ್ಷ್ಮಣ, ಸೀತೆಯರನ್ನು ಕಾಣಿಸಿದ. ನಾವು ಹಾಗೆ ಕಾಣಿಸಲು ಸಿದ್ಧರಿದ್ದೇವೆಯೇ? ಎದೆಯ ಕದ ತೆರೆಯುವುದಷ್ಟೇ ಇರಲಿ ಹೊರಗಿನ ಯಾವ ಶುದ್ಧ ಗಾಳಿಯೂ ಒಳಬರಬಾರದೆಂದು ನಮ್ಮೆಲ್ಲ ಮನ ಮನೆಗಳ ಕಿಟಕಿ ಬಾಗಿಲುಗಳನ್ನು ಭದ್ರಪಡಿಸಿಕೊಂಡು, ಸಮನ್ವಯವಿಲ್ಲದೆ ಒಳಗೊಳಗೇ ಮಾನಸಿಕವಾಗಿ ನರಳುತ್ತಿದ್ದೇವೆ. ಅಷ್ಟೊಂದು ಅಭದ್ರತೆ ನಮ್ಮ ವರ್ತಮಾನದ ಬದುಕಿಗಿದೆ.
ಬೇಂದ್ರೆಯವರು ಕನ್ನಡದ ಮೂಲಕ ಜಗದೇಳಿಗೆ ಬಯಸಿದ್ದರು. ವಾಸ್ತವದಲ್ಲಿ ಜಗತ್ತೇ ಇಂದು ಉದ್ವಿಗ್ನ, ಬೇಗುದಿಯ ಸ್ಥಿತಿಯಲ್ಲಿದೆ. ನಾವು ಈಗ ಯಾವ ಜಗತ್ತನ್ನು ಆದರ್ಶವೆಂದು ಭಾವಿಸುವುದು? ಪರಸ್ಪರ ಉದ್ವಿಗ್ನತೆಯನ್ನು ಸಾಹಿತ್ಯಿಕವಾಗಿ, ಸಾಂಸ್ಕೃತಿಕವಾಗಿ, ಸಾಮಾಜಿಕ, ರಾಜಕೀಯ, ಧಾರ್ಮಿಕ, ಔದ್ಯೋಗಿಕವಾಗಿ ಮೀರದಿದ್ದರೆ ನಮಗೆ ಉಳಿಗಾಲವಿಲ್ಲ. ನಮ್ಮ ಮನುಷ್ಯತ್ವಕ್ಕೂ ಬೆಲೆ ಇರುವುದಿಲ್ಲ. ನಾವು ಜಗತ್ತಿನ ಯುದ್ಧಗಳನ್ನು ಗೆಲ್ಲುವುದಕ್ಕಿಂತ ನಮ್ಮೊಳಗಿನ ಯುದ್ಧದ ತಾಪಗಳನ್ನು ಕಳೆದುಕೊಳ್ಳುವುದು ಹೆಚ್ಚು ಅರ್ಥಪೂರ್ಣ. ಅದೇ ಬಾಳಿನ ನಿಜವಾದ ಸೊಗಸು.
ಲೇಖಕ: ಸಹಾಯಕ ಪ್ರಾಧ್ಯಾಪಕ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.