ADVERTISEMENT

ವಿಶ್ಲೇಷಣೆ | ಯುದ್ಧಭೂಮಿಯಲ್ಲಿ ಶಾಂತಿಯ ಉಪದೇಶ

ಎಳೆಯರನ್ನು ಒಂದು ಕೃತಿಗೆ ವಿಮುಖರನ್ನಾಗಿಸುವ ಸುಲಭೋಪಾಯವೆಂದರೆ ಅದನ್ನು ಪಠ್ಯಕ್ಕೆ ಅಳವಡಿಸುವುದು

ಡಾ.ಟಿ.ಎನ್‌.ವಾಸುದೇವ ಮೂರ್ತಿ
Published 21 ಮಾರ್ಚ್ 2022, 19:31 IST
Last Updated 21 ಮಾರ್ಚ್ 2022, 19:31 IST
   

ಭಗವದ್ಗೀತೆಯನ್ನು ಶಾಲಾ ಪಠ್ಯಪುಸ್ತಕದಲ್ಲಿ ಸೇರಿಸು ವುದರ ಕುರಿತು ಚಿಂತನೆ ನಡೆದಿದೆ. ಬಿಜೆಪಿ ಆಳ್ವಿಕೆಯ ಗುಜರಾತ್‌ನಲ್ಲಿ ಈ ಉಪಕ್ರಮವನ್ನು ಈಗಾಗಲೇ ಜಾರಿಗೊಳಿಸಲಾಗಿದೆ. ಕರ್ನಾಟಕದ ಮಕ್ಕಳಿಗೂ ಪಠ್ಯಕ್ರಮದಲ್ಲಿ ಗೀತೆ ಅಳವಡಿಸುವ ಬಗ್ಗೆ ಸರ್ಕಾರ ಆಸಕ್ತಿ ತೋರಿಸುತ್ತಿದೆ. ಇದು ವೋಟಿನ ವ್ಯಾಮೋಹವೋ ಅಥವಾ ಬೌದ್ಧಿಕ ಇಬ್ಬಂದಿತನವೋ ತಿಳಿಯದಾಗಿದೆ.

ಭಗವದ್ಗೀತೆಯು ಕುರುಕ್ಷೇತ್ರ ಯುದ್ಧದ ಮೊದಲ ದಿವಸ ಯುದ್ಧಭೂಮಿಯಲ್ಲಿ ಕೃಷ್ಣಾರ್ಜುನರ ನಡುವೆ ನಡೆದ ಒಂದು ಖಾಸಗಿ ಸಂವಾದವಾಗಿದೆ. ‘ಧರ್ಮಕ್ಷೇತ್ರವಾದ ಕುರುಕ್ಷೇತ್ರದಲ್ಲಿ ಯುದ್ಧೋತ್ಸಾಹಿ ಗಳಾದ ನನ್ನ ಮಕ್ಕಳು ಮತ್ತು ಪಾಂಡವರು ಏನು ಮಾಡುತ್ತಿದ್ದಾರೆ, ಹೇಳು ಸಂಜಯ’ ಎಂದು ಸಂಜಯ ನನ್ನು ಧೃತರಾಷ್ಟ್ರ ಕೇಳುತ್ತಾನೆ. ಅಂಧರೊಬ್ಬರ ಪ್ರಶ್ನೆಯಿಂದ ಭಗವದ್ಗೀತೆ ಶುರುವಾಗುತ್ತದೆ. ಹಾಗೆ ನೋಡಿದರೆ ಜಗತ್ತಿನ ಎಲ್ಲ ಧರ್ಮಗ್ರಂಥಗಳೂ ಅಂಧರ ಪ್ರಶ್ನೆಯಿಂದಲೇ ಪ್ರಾರಂಭವಾಗುವುದು. ಆದರೆ ಗೀತೆಯ ವೈಶಿಷ್ಟ್ಯ ಏನೆಂದರೆ, ಅದನ್ನು ಶಾಂತಿಯ ನೆಲದಲ್ಲಲ್ಲ; ರಣರಂಗದಲ್ಲಿ ಉಪದೇಶಿಸಲಾಯಿತು. ಯುದ್ಧಭೂಮಿಯ ಮಧ್ಯದಲ್ಲಿ ಶಾಂತಿಯ ಉಪದೇಶ ನಡೆಯುವುದೇ ಒಂದು ಅಪೂರ್ವ ರೂಪಕವಾಗಿದೆ.

ಗೀತೆಯನ್ನು ಒಂದು ಧಾರ್ಮಿಕ ಕೃತಿ ಎನ್ನುವುದಕ್ಕಿಂತ ಒಂದು ಕಾವ್ಯಕೃತಿ ಎಂದು ಕರೆಯುವುದು ಸೂಕ್ತ. ಬೈಬಲ್‌, ಕುರಾನ್‌ ಸಹ ಅವುಗಳ ಸ್ವರೂಪದಲ್ಲಿ ಕಾವ್ಯಕೃತಿಗಳೇ ಆಗಿವೆ. ಮಿಲ್ಟನ್‌, ಡಾಂಟೆ ಮುಂತಾದವರ ಅಭಿಜಾತ ಕಾವ್ಯಕೃತಿಗಳು ಬೈಬಲ್ಲನ್ನು ಆಧರಿಸಿದ್ದಾಗಿವೆ. ಹಾಗೆ ನೋಡಿದರೆ ಧರ್ಮ ಮತ್ತು ಕಾವ್ಯಗಳ ನಡುವೆ ಗಾಢವಾದ ಸಂಬಂಧವಿದೆ. ಒಂದು ಧಾರ್ಮಿಕ ಮನಸ್ಸು ಕಾವ್ಯಾಭಿರುಚಿಯ ಒಂದು ಪರಿಷ್ಕೃತ, ಸುಧಾರಿತ ರೂಪವಾಗಿದೆ. ಈ ಕಾವ್ಯಾಭಿರುಚಿಯನ್ನು ವರಕವಿ ಬೇಂದ್ರೆ ‘ಓಂಕಾರದ ಶಂಖನಾದಕಿಂತ ಕಿಂಚಿದೂನ’ ಎಂದು ವಿವರಿಸುತ್ತಾರೆ. ಧರ್ಮ-ಕಾವ್ಯಗಳ ನಡುವಿನ ಅಂತಃಸಂಬಂಧವನ್ನು ವಿವರಿಸುವ ಕುವೆಂಪು ‘ರಸೋ ವೈ ಸಃ’ (ಆ ಪರಮತತ್ವವು ರಸಾನುಭವವೇ ಅಲ್ಲವೇ?) ಎಂಬ ಉಪನಿಷತ್ತಿನ ವಾಕ್ಯವನ್ನು ಉದ್ಧರಿಸುತ್ತಾರೆ.

ADVERTISEMENT

ಆದರೆ ನಾಗರಿಕತೆ ವಿಕಾಸಗೊಂಡಂತೆ ಕಾವ್ಯಧರ್ಮ ಮತ್ತು ಧರ್ಮಗಳ ನಡುವಿನ ಸಂಬಂಧ ದೂರವಾಗುತ್ತಾ ಹೋಯಿತು. ಧರ್ಮವು ರಾಜಕಾರಣದೊಂದಿಗೆ ತನ್ನ ನಂಟನ್ನು ಬೆಳೆಸಿಕೊಂಡು ಪತಿತವಾಗತೊಡಗಿತು. ಇಂದು ಗೀತೆಯನ್ನು ಶಾಲಾಪಠ್ಯಕ್ಕೆ ಅಳವಡಿಸಬೇಕೆಂಬ ಆಗ್ರಹದ ಹಿಂದೆ ರಾಜಕೀಯ ಪ್ರೇರೇಪಣೆ ಇದೆಯೇ ವಿನಾಕಾವ್ಯಾಭಿರುಚಿಯನ್ನು ಬೆಳೆಸಬೇಕೆಂಬ ಆಶಯವಿಲ್ಲ.

ಪಠ್ಯಕ್ರಮದಲ್ಲಿ ಗೀತೆಯನ್ನು ಅಳವಡಿಸಬೇಕೆಂದು ಆಗ್ರಹಿಸುವವರು ‘ಭಗವದ್ಗೀತೆ ಒಂದು ಧರ್ಮಗ್ರಂಥ ಅಲ್ಲವೇ ಅಲ್ಲ; ಗೀತೆ ಮನೋವಿಜ್ಞಾನ, ಮ್ಯಾನೇಜ್‌ಮೆಂಟ್‌ ಕೌಶಲ ಮುಂತಾದವನ್ನು ಕಲಿಸಿಕೊಡುವ ಒಂದು

ಶಾಸ್ತ್ರಗ್ರಂಥವಾಗಿದೆ. ವಿದೇಶಿ ವಿ‍ಶ್ವವಿದ್ಯಾಲಯಗಳಲ್ಲಿ, ಪ್ರಸಿದ್ಧ ಮ್ಯಾನೇಜ್‌ಮೆಂಟ್‌ ಸಂಸ್ಥೆಗಳಲ್ಲಿ ಅದನ್ನು ಕಲಿಸುತ್ತಿದ್ದಾರೆಂದ ಮೇಲೆ ನಮ್ಮ ಶಾಲಾ ಮಕ್ಕಳಿಗೆ ಕಲಿಸಿದರೆ ಏನು ತಪ್ಪು’ ಎಂದು ವಾದಿಸುತ್ತಾರೆ.

ಭಗವದ್ಗೀತೆಯಲ್ಲಿ ಹಲವು ಜ್ಞಾನಶಾಖೆಗಳ ಮೂಲಧಾತುಗಳು ಇರಬಹುದು, ಇಲ್ಲವೆಂದಲ್ಲ. ಆದರೆ ಅಷ್ಟಕ್ಕೇ ಗೀತೆಯನ್ನು ಸೀಮಿತಗೊಳಿಸಿ ವ್ಯಾಖ್ಯಾನಿಸಿದಾಗ ಅದರ ಮಹತ್ವವನ್ನು ಕಿರಿದುಗೊಳಿಸಿದಂತಾಗುತ್ತದೆ. ಎಲ್ಲ ಜ್ಞಾನಶಾಖೆಗಳೂ ಪ್ರವೃತ್ತಿ ಮಾರ್ಗದವು; ಗೀತೆ ಯಾದರೂ ನಿವೃತ್ತಿ ಮಾರ್ಗವನ್ನು ಬೋಧಿಸುವ ಅಧ್ಯಾತ್ಮ ವಿದ್ಯೆಯಾಗಿದೆ.

‘ಸಿಕ್ಕಿದ್ದರಲ್ಲಿ ತೃಪ್ತಿಪಡುವುದು, ದ್ವಂದ್ವವಿಲ್ಲದೇ ಜೀವಿಸುವುದು, ಅನ್ಯರಿಗೆ ಅಸೂಯೆ ಪಡದಿರುವುದು, ಸೋಲು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸುವುದು– ಇವು ವಿಮೋಚನೆಗೆ ದಾರಿ’ (ಯದೃಚ್ಛಾಲಾಭಸಂತುಷ್ಟೋ ದ್ವಂದ್ವಾತೀತೋ ವಿಮತ್ಸರಃ ‌| ಸಮಃ ಸಿದ್ಧಾವಸಿದ್ಧೌ ಚ ಕೃತ್ವಾಪಿ ನ ನಿಬಧ್ಯತೇ- 4.22) ಎಂಬುದು ಗೀತೆ ಬೋಧಿಸುವ ನೀತಿಯಾಗಿದೆ. ನಮ್ಮ ರಾಜಕಾರಣಿಗಳು ಈ ಮೌಲ್ಯಗಳನ್ನು ಎಷ್ಟರಮಟ್ಟಿಗೆ ಪಾಲಿಸುತ್ತಿದ್ದಾರೆಂದು ಅವಲೋಕಿಸಿ ನೋಡಿದರೆ ನಿರಾಶೆಯಾಗುತ್ತದೆ.

ನಾವು ಒಂದು ಮೌಲ್ಯವನ್ನು ಪಾಲಿಸದೇ ಹೋದಾಗ ಆ ವೈಫಲ್ಯವನ್ನು ಮುಚ್ಚಿಕೊಳ್ಳುವ ಸಲುವಾಗಿ ಅದನ್ನು ಬೇರೆಯವರಿಗೆ ಬೋಧಿಸಲು ಹೋಗುತ್ತೇವೆ. ಶಾಲಾ ಕಾಲೇಜು ಹುದ್ದೆ ನೇಮಕಾತಿ, ಡೊನೇಷನ್‌ ಹಾವಳಿಯಿಂದ ಹಿಡಿದು ಶಾಸಕರನ್ನು ಖರೀದಿಸುವವರೆಗೆ ಆಡಳಿತದ ಪ್ರತೀ ಹಂತದಲ್ಲೂ ಭ್ರಷ್ಟಾಚಾರ, ಸೋಗಲಾಡಿತನ ತಾಂಡವವಾಡುತ್ತಿವೆ. ಸರ್ಕಾರ ತಾನು ನೈತಿಕವಾಗಿ ಸ್ವಚ್ಛವಾಗದೇ ಮಕ್ಕಳಿಗೆ ಗೀತೆ ಕಲಿಸುವ ಮೂಲಕ ಅವರನ್ನು ನೀತಿ ಮಾರ್ಗದಲ್ಲಿ ನಡೆಸಲು ಹೊರಟಿರುವುದು ಒಂದು ವಿಡಂಬನೆಯಾಗಿದೆ, ಒಂದು ಆತ್ಮವಂಚನೆಯಾಗಿದೆ.

ಇವರಿಗೆ ಗೀತೆಯ ತತ್ವವನ್ನು ಕಾರ್ಯರೂಪಕ್ಕೆ ತರಲೇಬೇಕೆಂಬ ಬಯಕೆ ಇದ್ದಲ್ಲಿ ಗೀತೆಯ ವಿಚಾರವನ್ನು ಗಾಂಧೀಜಿ ಮಾಡಿದಂತೆ ಮೊದಲು ತಮ್ಮ ಸಾರ್ವಜನಿಕ ಬದುಕಿನಲ್ಲಿ ಅನುಷ್ಠಾನಕ್ಕೆ ತರಬೇಕಾಗುತ್ತದೆ. ಆಗ ಮಕ್ಕಳಿಗೆ ಆ ಪ್ರೇರೇಪಣೆ ತಾನಾಗೇ ಸಿಗುತ್ತದೆ. ಗೀತೆ, ಬೈಬಲ್‌, ಕುರಾನ್‌ನಲ್ಲಿನ ಉದಾತ್ತ ಸಂದೇಶಗಳನ್ನು ಮಕ್ಕಳು ತಿಳಿಯಬಾರದೆಂದಲ್ಲ. ಮಕ್ಕಳಿಗೆ ಆ ಪವಿತ್ರ ಗ್ರಂಥಗಳನ್ನು ಓದುವ ಅಕ್ಷರಜ್ಞಾನ ನೀಡಿದರೆ ಸಾಕೆನಿಸುತ್ತದೆ. ಶಿಕ್ಷಕರಾಗಲಿ, ರಾಜಕಾರಣಿಗಳಾಗಲಿ ಲೋಕೋದ್ಧಾರದ ಗೊಡವೆಗೆ ಹೋಗಬೇಕಿಲ್ಲ. ತಾವು ಮಾಡುವ ಕೆಲಸವನ್ನು ನೆಟ್ಟಗೆ ಮಾಡಿದರೆ ಸಾಕು ಎಂದೇ ಗೀತೆಯೂ ಹೇಳುವುದು (3.35).

ಒಂದು ಅಮೂಲ್ಯ ಕೃತಿಯ ಬಗ್ಗೆ ಹೊಸ ತಲೆಮಾರಿನಲ್ಲಿ ವಿಮುಖತೆ ಮೂಡಿಸುವ ಅತಿಸುಲಭ ವಿಧಾನವೆಂದರೆ ಅದನ್ನು ಪಠ್ಯಕ್ರಮಕ್ಕೆ ಅಳವಡಿಸುವುದು. ಈ ಹಿನ್ನೆಲೆಯಲ್ಲಿ ನೋಡಿದರೆ, ಇಂದು ಯಾರೆಲ್ಲ ಗೀತೆಯನ್ನು ಶಾಲೆಗಳಲ್ಲಿ ಕಲಿಸಬೇಕೆಂದು ಆಗ್ರಹಿಸುತ್ತಿ ರುವರೋ ಅವರು ತಮಗರಿವಿಲ್ಲದಂತೆ ಗೀತೆಯ ಬಗ್ಗೆ ಮಕ್ಕಳಲ್ಲಿ ವಿಮುಖತೆ ಮೂಡಿಸುವ ಕೆಲಸ ಮಾಡುತ್ತಿರು ವರು. ಶಾಲಾ ಪರೀಕ್ಷೆ ಮುಗಿದು ಬೇಸಿಗೆ ರಜೆ ಬಂದರೆ ಮಕ್ಕಳು ತಮ್ಮ ಪಠ್ಯಪುಸ್ತಕಗಳನ್ನು ರದ್ದಿ ಕಾಗದದ ಅಂಗಡಿಗೆ ಹಾಕುತ್ತಾರೆ. ದೇವರ ಕೋಣೆಯ ಪವಿತ್ರ ಜಾಗವನ್ನು ಅಲಂಕರಿಸಬೇಕಾದ ಒಂದು ಕೃತಿ ರದ್ದಿ ಪೇಪರಿನ ಅಂಗಡಿಯಲ್ಲಿ ತೂಕದ ಲೆಕ್ಕದಲ್ಲಿ ಮಾರಾಟ ಆಗುವುದು ಅವಮಾನಕರವಲ್ಲವೇ?

ಗೀತೆಯಲ್ಲಿರುವಂತೆ ಬೈಬಲ್‌, ಕುರಾನ್‌ನಲ್ಲೂ ಉದಾತ್ತವಾದ ಸಂದೇಶಗಳಿವೆ. ಇಂದು ಹಿಂದೂಗಳನ್ನು ಓಲೈಸುತ್ತಿರುವ ಸರ್ಕಾರ ಗೀತೆಯನ್ನು ಪಠ್ಯಕ್ರಮದಲ್ಲಿ ಸೇರಿಸಿದರೆ ನಾಳೆ ದಿನ ಮುಸ್ಲಿಮರನ್ನೋ ಕ್ರೈಸ್ತರನ್ನೋ ಓಲೈಸುವ ಸರ್ಕಾರ ಬಂದರೆ ಅದು ಬೈಬಲ್‌, ಕುರಾನ್‌ ಸೇರಿಸದಿರದು. ಓದುವ ಮಕ್ಕಳನ್ನು ರಾಜಕೀಯ ಮೇಲಾಟಕ್ಕೆ ಆಡುಂಬೊಲವಾಗಿಸಿಕೊಳ್ಳುವುದು ಅನಾಚಾರವಾಗಿದೆ.

ಬಾಯಾರಿದವರು ಬಾವಿಯನ್ನು ಹುಡುಕಿಕೊಂಡು ಹೋಗುವರೇ ವಿನಾ ಬಾವಿಯೇ ಬಾಯಾರಿದವನ ಬಳಿಗೆ ಬರುವುದಿಲ್ಲ. ಸ್ವತಃ ಶ್ರೀಕೃಷ್ಣನೇ ತನ್ನ ವಿಚಾರಗಳನ್ನು ಅರ್ಜುನನ ಮೇಲೆ ಹೇರಲಿಲ್ಲ. ಅರ್ಜುನ ತಾನಾಗೇ ತಿಳಿವ ಹಂಬಲ ವ್ಯಕ್ತಪಡಿಸಿದಾಗ ಶ್ರೀಕೃಷ್ಣ ಗೀತೋಪದೇಶ ಮಾಡಿದ. ನೀನು ಕೇಳಿದ್ದರಿಂದ ನಾನು ಹೇಳಿದ್ದೇನೆ ಎಂದ. ತಿಳಿವ ಹಂಬಲವಿರುವವನ ಕಡೆಯಿಂದ ಪ್ರಯತ್ನ ಶುರುವಾಗಬೇಕಲ್ಲದೇ ತಿಳಿಸುವವನು ಶಿಷ್ಯನ ಮೇಲೆ ಮುಗಿಬಿದ್ದು ಉಪದೇಶಿಸಲು ಹೋಗಬಾರದು. ‘ನೀನಾಗೇ ಕೇಳಬೇಕು, ಆಗ ನಿನಗೆ ಹೇಳಲಾಗುತ್ತದೆ, ನೀನಾಗೇ ಹುಡುಕಬೇಕು ಆಗ ಅದು ನಿನಗೆ ಸಿಗುತ್ತದೆ, ನೀನಾಗೇ ಬಾಗಿಲು ತಟ್ಟಬೇಕು ಆಗ ಬಾಗಿಲು ತೆರೆಯುತ್ತದೆ’ (ಮ್ಯಾಥ್ಯೂ 7.7) ಎಂಬ ಮಾತು ಬೈಬಲ್ಲಿನಲ್ಲೂ ಇದೆ.

ಗೀತೆ ಒಂದು ವಿಶ್ವ ಸಾಹಿತ್ಯವಾಗಿದೆ. ಇಂತಹ ಗೀತೆಯನ್ನು ಹಿಂದೂಗಳ ಓಲೈಕೆಗಾಗಿ ಶಾಲಾಪಠ್ಯದಲ್ಲಿ ಅಳವಡಿಸಲು ಹೊರಟಿರುವವರು ತಮಗರಿವಿಲ್ಲದೆಯೇ ಸಾರ್ವಕಾಲಿಕವಾದ, ವಿಶ್ವಾತ್ಮಕವಾದ ಗೀತೆಯನ್ನು ಒಂದು ನಿರ್ದಿಷ್ಟ ಕೋಮಿಗೆ ಸೀಮಿತಗೊಳಿಸುತ್ತಾರೆ. ಇವರ
ಈ ಪ್ರಯತ್ನದಿಂದ ಗೀತೆಯ ಮಹತ್ವಕ್ಕೆ ಕುಂದುಂಟಾ ಗುತ್ತದೆ.

ಯಾವುದೇ ಶಾಸ್ತ್ರಗ್ರಂಥವನ್ನು ಓದುವವನಿಗೆ ಒಂದು ಕನಿಷ್ಠ ಅರ್ಹತೆ ಇರಬೇಕಾಗುತ್ತದೆ. ಈ ಮಾತನ್ನು ಗೀತೆಯೂ ಅನುಮೋದಿಸುತ್ತದೆ (18.67). ಗೀತೆಯನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಜೀವನಾ ನುಭವವೂ ಬೇಕು. ಎಳೆಯ ವಯಸ್ಸಿನವರ ಓದಿಗೆ ಗೀತೆ ಸೂಕ್ತವಾಗಬಹುದೇ? ಗೀತೆಯನ್ನು ಪಠ್ಯದಲ್ಲಿ ಅಳವಡಿಸಲು ಮುಂದಾಗಿರುವವರು ಸ್ವಗತದಲ್ಲಿಯಾ ದರೂ ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲಿ.

ಲೇಖಕ: ಸಹಾಯಕ ಪ್ರಾಧ್ಯಾಪಕ ಜ್ಯೋತಿನಿವಾಸ್‌ ಕಾಲೇಜ್‌, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.