‘ಏನಮ್ಮ, ನಿನ್ನ ಎರಡನೇ ಮಗುವಿಗೆ ಲಸಿಕೆ ಹಾಕಿಸೋಕೆ ಹೋಗಿದ್ಯಾ? ಒಂಬತ್ತು ತಿಂಗಳು ಆಯ್ತಲ್ಲ’, ಶಾಂತಮ್ಮನ್ನ ಊರಿನ ಶಾಲಾ ಮೇಷ್ಟ್ರು ಕೇಳಿದ್ರು. ‘ಇಲ್ರೀ, ಲಸಿಕೆ ಹಾಕ್ಸಿದ್ರೆ ಮಗುಗೆ ಜ್ವರ ಬಂದು ಅದೇ ರೋಗಾನೇ ಅಂಟ್ಕೊಳತ್ತೆ, ಹಾಕಿಸ್ಕೊಳದು ಬೇಡ ಅಂದ್ರು’.
‘ಯಾರು ನಿಂಗೆ ಆ ರೀತಿ ಹೇಳಿದ್ದು? ಡಾಕ್ಟ್ರಾ, ನರ್ಸಾ?’ ‘ಅಲ್ಲ ರೀ. ವಾಟ್ಸಾಪ್ನಾಗ ಬಂದಿತ್ತು. ತುಂಬಾ ಜನ ಫಾರ್ವರ್ಡ್ ಮಾಡಿದ್ರು. ನಮ್ ಮನೆಯವರೂ ಕಳಿಸಿದ್ರು’. ‘ಓ, ಸರಿ ಬಿಡು! ನಿನ್ನ ಮಗುವಿನ ಆರೋಗ್ಯ, ಭವಿಷ್ಯ ಎಲ್ಲಾ ಹಾಗಿದ್ರೆ ನಿನ್ನ ವಾಟ್ಸಾಪು, ಫೇಸ್‌ಬುಕ್ಕೇ ಹೇಳುತ್ತೆ! ಡಾಕ್ಟ್ರು ಇರೋದ್ಯಾಕೆ ಅಲ್ವಾ?’ ‘ಹಾಗೇನಿಲ್ಲ. ಡಾಕ್ಟುರುಗುಳೂ ಈಗ ನಂಬಿಕಸ್ತರಾಗಿ ಉಳ್ಕೊಂಡಿಲ್ವಲ್ಲ. ದುಡ್ಡಿಗೋಸ್ಕರ ನಮಗೆ ಮೋಸ ಮಾಡಾಕಿಲ್ವ? ಅವರನ್ನೂ ಹೇಗೆ ನಂಬೋದು?!’
ಈ ಮಾತಿಗೆ ಹೇಗೆ ಪ್ರತಿಕ್ರಿಯೆ ಕೊಡಬೇಕು ತಿಳಿಯದೆ ಮೇಷ್ಟ್ರು ಕಕ್ಕಾಬಿಕ್ಕಿಯಾಗಿ ತಮ್ಮ ಸ್ಮಾರ್ಟ್ ಫೋನ್ ಆಚೆ ತೆಗೆದು, ‘ಸರಿ, ಆ ಮೆಸೇಜ್ ನಂಗೂ ಕಳಿಸು ನೋಡಣ’ ಅಂದ್ರು. ಶಾಂತಮ್ಮ ಕಳಿಸಿದಳು. ಮೆಸೇಜ್ ಓದಿದರು. ಯಾರೋ ವೈದ್ಯರೇ ಬರೆದಿರುವ ಹಾಗೆಯೇ ಮೆಸೇಜ್ ಇತ್ತು. ಮೀಸಲ್ಸ್ (ದಡಾರ) ರೋಗದ ಗುಣಲಕ್ಷಣಗಳು, ಲಸಿಕೆಯಿಂದ ಎದುರಾಗುವ ವೈದ್ಯಕೀಯ ಸಮಸ್ಯೆಗಳು, ಜೊತೆಗೆ ಒಂದು ಮಗುವಿನ ಚಿತ್ರವೂ ಇತ್ತು. ಇದನ್ನು ನೋಡಿದ ಮೇಷ್ಟ್ರಿಗೆ ಗೊಂದಲ ಉಂಟಾಯಿತು. ‘ನಿಜವೂ ಇರಬಹುದೋ ಏನೋ ಯಾರಿಗೆ ಗೊತ್ತು. ಈ ಲಸಿಕೆ ತಯಾರು ಮಾಡೋರನ್ನ, ಸರ್ಕಾರಾನ ಯಾರನ್ನೂ ನಂಬಕ್ಕಾಗಲ್ಲ. ವೈದ್ಯರೂ ಕಳ್ಳರಾಗಿರುವಾಗಇನ್ನೇನು ಹೇಳೋದು. ಮೆಸೇಜ್ ಬೇರೆ ಇಷ್ಟು ವೈಜ್ಞಾನಿಕ ಪರಿಭಾಷೆಯಲ್ಲಿ ಇದೆ’, ಎಂದು ತಲೆ ಕೆರೆದುಕೊಳ್ಳುತ್ತಾ
ಭಯಮಿಶ್ರಿತ ಗೊಂದಲದ ದೃಷ್ಟಿ ಬೀರಿದರು. ‘ಬರೀ ಮೆಸೇಜಲ್ಲ, ಸುಮಾರು ನಮ್ಮ ಪರಿಚಯಸ್ಥರೆಲ್ಲಾ ಹೇಳಿದಾರೆ ಮೇಷ್ಟ್ರೇ’. ಮೇಷ್ಟ್ರು ಮೌನವಾದರು.
ಸುದ್ದಿಯ ಸತ್ಯಾಸತ್ಯತೆಯನ್ನು ಪ್ರಶ್ನಿಸುವ ಬುದ್ಧಿಮತ್ತೆಯನ್ನೇ ಮಂಕಾಗಿಸುವ ಪರಿಯೆಂದರೆ ಇದು! ವಿಪರ್ಯಾಸವೆಂದರೆ, ವೈಜ್ಞಾನಿಕ ಕ್ರಾಂತಿಯ ಅಡಿಪಾಯದಲ್ಲಿ ಮುಂದುವರಿಯುತ್ತಿರುವ 21ನೇ ಶತಮಾನವು ಅವೈಜ್ಞಾನಿಕ ಸುದ್ದಿಗಳ ಮೊರೆ ಹೋಗುತ್ತಿದೆ. ಲಸಿಕೆಯ ಉದಾಹರಣೆಯನ್ನೇ ಮುಂದುವರಿಸಿ ವಿಶ್ಲೇಷಿಸಿದರೆ, 2018ರಲ್ಲಿ ಭಾರತದ 29 ಲಕ್ಷ ಮಕ್ಕಳು ದಡಾರಕ್ಕೆ ಕೊಡುವ ಮೀಸಲ್ಸ್-ರುಬೆಲ್ಲಾ (ಎಮ್.ಆರ್) ಲಸಿಕೆಯನ್ನು ಹಾಕಿಸಿಕೊಂಡಿಲ್ಲ. ಅವರಲ್ಲಿ 55,399 ಮಕ್ಕಳು ಮೀಸಲ್ಸ್ (ದಡಾರ) ರೋಗಕ್ಕೆ ತುತ್ತಾಗಿದ್ದಾರೆ. ಪ್ರಪಂಚದಾದ್ಯಂತ ಈ ವರ್ಷದ ಮೊದಲ ಮೂರು ತಿಂಗಳೊಳಗೆ 1.10 ಲಕ್ಷ ಮಕ್ಕಳು ಮೀಸಲ್ಸ್ ರೋಗಕ್ಕೆ ಬಲಿಯಾಗಿದ್ದಾರೆ.
ಕಾರಣವೇನು ಗೊತ್ತೆ? ಲಸಿಕೆಗಳ ಬಗ್ಗೆ ಭಯ ಮತ್ತು ಗೊಂದಲ ಸೃಷ್ಟಿಸಲು ಸೋಷಿಯಲ್ ಮೀಡಿಯಾವನ್ನು ಯಶಸ್ವಿಯಾಗಿ ಬಳಸಿಕೊಂಡ ಲಸಿಕೆ ವಿರುದ್ಧದ ಅಭಿಯಾನ. ಇದರಿಂದ ಎಚ್ಚೆತ್ತುಕೊಂಡ ವಿಶ್ವ ಆರೋಗ್ಯ ಸಂಸ್ಥೆ ಮತ್ತು ಯುನಿಸೆಫ್, ಸೋಷಿಯಲ್ ಮೀಡಿಯಾ ವೇದಿಕೆಗಳಾದ ಫೇಸ್‌ಬುಕ್, ಟ್ವಿಟರ್, ವಾಟ್ಸ್‌ಆ್ಯಪ್ ಮುಂತಾದೆಡೆ ಹರಡುತ್ತಿದ್ದ ಸುಳ್ಳು ಸುದ್ದಿಗಳನ್ನು ನಿಯಂತ್ರಿಸಲು ಕರೆ ಕೊಟ್ಟವು. ‘ಭಾರತದಲ್ಲಿ ಸುಳ್ಳು ಸುದ್ದಿಯು ವೈರಾಣುವಿಗಿಂತ ವೇಗವಾಗಿ ಹರಡುತ್ತದೆ’ ಎಂದು ವಿಶ್ವಸಂಸ್ಥೆ ವಿಷಾದ ಸೂಚಿಸಿತು. ಆದರೂ ಈ ವೇದಿಕೆಗಳನ್ನು ನಿಯಂತ್ರಿಸುವ ಗಂಭೀರ ಪ್ರಯತ್ನಗಳು ಯಾವುದೇ ದೇಶದಲ್ಲೂ ನಡೆದಿಲ್ಲ.
ಇತ್ತೀಚಿನ ಇನ್ನೊಂದು ಉದಾಹರಣೆ: ಮಕ್ಕಳ ಕಳ್ಳರಿದ್ದಾರೆಂದು ಹರಡಿದ ಸುದ್ದಿ. ಈ ಸುದ್ದಿಯಿಂದ ಭಯಗೊಂಡು, ವಿಚಲಿತರಾಗಿ ರೊಚ್ಚಿಗೆದ್ದ ಜನರು 2017ರಿಂದೀಚೆಗೆ 33 ಅಮಾಯಕರನ್ನು ಬಲಿ ತೆಗೆದುಕೊಂಡರೆಂದು ವರದಿಯಾಗಿದೆ. ಜನರೇ ಕಾನೂನನ್ನು ಕೈಗೆ ತೆಗೆದುಕೊಂಡು ಅಮಾಯಕರನ್ನು ಕೊಲ್ಲುವಂತಾಗಲು ಕಾರಣ, ಸೋಷಿಯಲ್ ಮೀಡಿಯಾದಲ್ಲಿನ ನಿಯಂತ್ರಣವಿಲ್ಲದ ಸುದ್ದಿ ಪ್ರಕಟಣೆ ಮತ್ತು ಪ್ರಸರಣೆಯ ವೇಗ. ಕಾನೂನಿನ ಯಾವುದೇ ನೇರ ಕಡಿವಾಣಗಳು ಈ ವೇದಿಕೆಗಳಿಗಿಲ್ಲ. ವಾಕ್ ಸ್ವಾತಂತ್ರ್ಯದ ಹಕ್ಕಿದೆ ಎಂಬ ಕಾರಣಕ್ಕೆ, ತಜ್ಞರ ವಿಶ್ಲೇಷಣೆ, ಮೌಲ್ಯಮಾಪನ ಯಾವುದೂ ಇಲ್ಲದ ಸುದ್ದಿ ಪ್ರಕಟಣೆ ಮತ್ತು ಅತಿ ಹೆಚ್ಚು ಜನರನ್ನು ಅತ್ಯಂತ ಕಡಿಮೆ ಸಮಯದಲ್ಲಿ ತಲುಪುವ ತಂತ್ರಜ್ಞಾನ ಈ ವೇದಿಕೆಗಳ ಬಂಡವಾಳ. ಭಯ, ಗೊಂದಲ ಮತ್ತು ದ್ವೇಷ ಭಾವನೆಗಳ ಸೃಷ್ಟಿಯೇ ಇದರ ಜೀವಾಳ.
‘ಸಮಾನಮನಸ್ಕರನ್ನು ಜೊತೆಗೂಡಿಸುವುದೇ ನಮ್ಮ ಉದ್ದೇಶ’ ಎನ್ನುವ ಫೇಸ್‌ಬುಕ್ ಜನಕ ಜುಕರ್‌ಬರ್ಗ್, ಸಮಾನಮನಸ್ಕರು ಸಮಾಜಘಾತುಕರೂ ಆಗಿರಬಹುದು ಎಂಬುದನ್ನು ಮರೆಯುತ್ತಾರೆ. ಈ ವೇದಿಕೆಗಳನ್ನು ಬಳಸುವವರು ಆತಂಕವಾದಿಗಳೂ ಆಗಿರಬಹುದು, ಮಾನವತಾವಾದಿಗಳೂ ಆಗಿರಬಹುದು. ಸಂಪರ್ಕಜಾಲವನ್ನು ಪ್ರಪಂಚದಾದ್ಯಂತ ವ್ಯವಸ್ಥಿತವಾಗಿ ಮತ್ತು ಯಶಸ್ವಿಯಾಗಿ, ಯಾವುದೇ ನಿಯತ್ರಣವಿಲ್ಲದೆ ವಿಸ್ತರಿಸಿಕೊಳ್ಳುವ ಅವಕಾಶ ಈಗ ಇವರಿಬ್ಬರ ಕೈಯಲ್ಲೂ ಇದೆ! ಆದರೆ ಸಮಾಜ
ಘಾತುಕರಿಗೆ ಈ ಅವಕಾಶ ಸಿಕ್ಕರೆ ಆಗುವ ಅಪಾಯ ಈಗಾಗಲೇ ನಮಗೆ ಗೋಚರಿಸುತ್ತಿದೆ. 2016ರಲ್ಲಿ ಮ್ಯಾನ್ಮಾರ್ ದೇಶದಲ್ಲಿ ನಡೆದ ಭೀಕರ ರೋಹಿಂಗ್ಯಾ ಜನಾಂಗೀಯ ಕೊಲೆಗಳಿಗೆ ಪೂರಕವಾಗಿ ಕೆಲಸ ಮಾಡಿದ ಇಂಟರ್ನೆಟ್ ಸಂಪರ್ಕ ಜಾಲದ ನೇರ ಹೊಣೆಗಾರಿಕೆಯನ್ನು ಫೇಸ್‍ಬುಕ್ ಹೊರಬೇಕು ಎಂದು ವಿಶ್ವಸಂಸ್ಥೆ ಖಂಡಿಸಿತು. ಆದರೆ ಇದಕ್ಕೆ ಸಿಕ್ಕ ಉತ್ತರ, ಹೊಣೆಗಾರಿಕೆಯಿಂದ ನುಣುಚಿಕೊಳ್ಳುವ ಅವರ ಬ್ಯುಸಿನೆಸ್ ನೀತಿ: ‘ನಮ್ಮದು ಕೇವಲ ವೇದಿಕೆ. ಅಲ್ಲಿ ಪ್ರಕಟವಾಗುವ ಸುದ್ದಿಗಳಿಗೆ ಬಳಕೆದಾರರೇ ಹೊಣೆಗಾರರು’. ಈ ನಿಲುವು ಅನೈತಿಕವಲ್ಲದೆ ಮತ್ತೇನು? ಜುಕರ್‌ಬರ್ಗ್ ಅವರ ಫೇಸ್‌ಬುಕ್ ಕೇವಲ ಸಂಪರ್ಕ ವೇದಿಕೆಯಾಗಷ್ಟೇ ಉಳಿಯದೆ, ಅಮೆರಿಕದ ಚುನಾವಣೆಯ ಮಾರ್ಗವನ್ನೇ ಬದಲಾಯಿಸಿತ್ತು. ಅಮೆರಿಕದ ಕಾಂಗ್ರೆಸ್ ಕಮಿಟಿಯ ಮುಂದೆ ವಿಚಾರಣೆಗೆ ಒಳಗಾದರೂ ಜುಕರ್‌ಬರ್ಗ್ ತಮ್ಮ ಉದ್ದಿಮೆಯ ಮಾರ್ಗವನ್ನೇನೂ ಬದಲಾಯಿಸಿಲ್ಲ.
ಸುದ್ದಿ ಸುದ್ದಿಯಾಗಷ್ಟೇ ಉಳಿಯುವುದಿಲ್ಲ. ವ್ಯಕ್ತಿಯ ಆಲೋಚನಾ ಕ್ರಮವನ್ನು ನಿರ್ದಿಷ್ಟ ದಿಕ್ಕಿನಲ್ಲಿ ಸದ್ದಿಲ್ಲದೆ ಒಯ್ಯುವ ಮಾರ್ಗವಾಗಿ ಬದಲಾಗಿದೆ. ಅಮೆರಿಕದಂತೆ ಇತರ ದೇಶಗಳ ರಾಜಕೀಯ ಚುನಾವಣಾ ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ನಿರ್ದಿಷ್ಟ ದಿಕ್ಕಿನಲ್ಲಿ ಬದಲಾಯಿಸುತ್ತಿರುವ ಈ ವೇದಿಕೆಗಳು ಯಾರ ಹಂಗಿಲ್ಲದೆ ಮುನ್ನುಗ್ಗುತ್ತಿವೆ. ಭಾರತದಂತಹ ಹೆಚ್ಚು ಜನಸಂಖ್ಯೆಯಿರುವ ದೇಶದಲ್ಲಿ ಕೇಂಬ್ರಿಡ್ಜ್ ಅನಲಿಟಿಕಾ ರೀತಿಯ ಕುತಂತ್ರ ನಡೆಯದಿರುವ ಸಂಭವ ಎಷ್ಟಿದೆ? ಜನಸಂಖ್ಯೆ ಹೆಚ್ಚಿದ್ದಷ್ಟೂ ಸುದ್ದಿ ಪ್ರಸರಣೆಯ ವಿಸ್ತಾರ ಮತ್ತು ಈ ಕಂಪನಿಗಳ ಲಾಭ ಊಹಾತೀತ. ಇದರ ನೇರ ಪರಿಣಾಮ ವಾಕ್ ಸ್ವಾತಂತ್ರ್ಯದ ಹೆಸರಿನಲ್ಲಿ ನಡೆಯುವ ಪ್ರಜಾಪ್ರಭುತ್ವದ ಸಾವು! ಇಂತಹ ಅನೈತಿಕ ಬ್ಯುಸಿನೆಸ್ ಮಾಡೆಲ್‌ಗಳನ್ನು ಕಾನೂನಾತ್ಮಕವಾಗಿ ಪ್ರಶ್ನಿಸುವುದಕ್ಕೆ ಅವಕಾಶವೇ ಇಲ್ಲವಾಗಿದೆ.
ಜುಕರ್‌ಬರ್ಗ್ ಅವರಿಗೆ ಫೇಸ್‌ಬುಕ್‌ನ ಮೊದಲ ದಿನಗಳಲ್ಲಿ ಮೆಂಟರ್ ಆಗಿದ್ದ ರಾಗರ್ ಮ್ಯಾಕ್‍ನಮಿ ಫೇಸ್‌ಬುಕ್‌ನ ಅಪಾಯಗಳ ಬಗ್ಗೆ ತಮ್ಮ ‘Zucked: Waking Up to the Facebook Catastrophe’ ಎಂಬ ತಮ್ಮ ಪುಸ್ತಕದ ಬಗ್ಗೆ ಮಾತನಾಡುತ್ತ, ‘ಮುಂದೊಂದು ದಿನ ಜುಕರ್‌ಬರ್ಗ್ ಸ್ವತಃ ತಮ್ಮ ಕಂಪನಿಗೆ ನಿಯಂತ್ರಣ ಹೇರುವ ನೈತಿಕ ನಿಲುವನ್ನು ತೋರಿಸಲಿ ಎಂದು ಆಶಿಸುತ್ತೇನೆ’ ಎನ್ನುತ್ತಾರೆ. ‘ನಮ್ಮ ವೈಯಕ್ತಿಕ ಮಾಹಿತಿಯಿಂದ ಊಹೆಗೂ ಮೀರಿದ ಲಾಭ ಮಾಡಿಕೊಳ್ಳಲು ಈ ವೇದಿಕೆಗಳಿಗೆ ಯಾರು ಅಧಿಕಾರ ನೀಡಿದ್ದು? ಈ ವೇದಿಕೆಗಳನ್ನು ನಿಯಂತ್ರಿಸುವ ಕಾನೂನುಗಳನ್ನು ನೀವೇಕೆ ತರುತ್ತಿಲ್ಲ?’ ಎಂದು ಚುನಾವಣೆಗೆ ಸ್ಪರ್ಧಿಸುವ ಪ್ರತಿಯೊಬ್ಬ ಜನಪ್ರತಿನಿಧಿಯನ್ನೂ ಪ್ರಜೆಗಳು ಪ್ರಶ್ನಿಸಬೇಕು ಎಂದು ರಾಗರ್ ಹೇಳುತ್ತಾರೆ. ನಮಗೆ ಉಳಿದಿರುವ ಮಾರ್ಗ ಇದೊಂದೇ ಎನಿಸುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.