ಹೊಸ ಶೈಕ್ಷಣಿಕ ವರ್ಷ ಶುರುವಾಗಿ ಒಂದು ತಿಂಗಳು ಕಳೆದಿದೆ. ಪರೀಕ್ಷಾ ಸಿದ್ಧತೆಗೆ ಸಂಬಂಧಿಸಿ ಆಗುವ ಎಡ
ವಟ್ಟುಗಳನ್ನು ಈಗಿನಿಂದಲೇ ಸರಿಪಡಿಸಿಕೊಳ್ಳಬೇಕಾದ ಅಗತ್ಯವಿದೆ. ನಮ್ಮ ಶಾಲಾ ವ್ಯವಸ್ಥೆಯಲ್ಲಿ, ಪರೀಕ್ಷೆಗೆ ಒಂದು ತಿಂಗಳೋ, ಹದಿನೈದು ದಿನಗಳೋ ಬಾಕಿ ಇರುವಾಗ ವಿದ್ಯಾರ್ಥಿಗಳಿಗೆ ‘ಪರೀಕ್ಷಾ ತರಬೇತಿ’ ಎನ್ನುವ ಕಾರ್ಯಾಗಾರಗಳು ಪ್ರತಿ ವರ್ಷವೂ ನಡೆಯುತ್ತವೆ. ಇದೊಂದು ಪ್ರಹಸನದಂತೆ ಇರುತ್ತದೆ. ಏಕೆಂದರೆ ಪರೀಕ್ಷಾ ಸನ್ನದ್ಧತೆಯು ಶೈಕ್ಷಣಿಕ ವರ್ಷದ ಪ್ರಾರಂಭದಿಂದ ನಡೆಯ ಬೇಕಾದದ್ದು ಎಂಬುದು ಎಲ್ಲರಿಗೂ ಗೊತ್ತಿರುತ್ತದೆ. ಹೀಗಿದ್ದರೂ ಪ್ರಾರಂಭದಲ್ಲಿ ಈ ಯಾವ ಬಗೆಯ ತರಬೇತಿಗಳೂ ಸಾಮಾನ್ಯವಾಗಿ ನಡೆಯುವುದಿಲ್ಲ.
‘ಪರೀಕ್ಷೆ ಬಂತು, ಓದಿ ಓದಿ’ ಎಂದು ವಿದ್ಯಾರ್ಥಿಗಳಿಗೆ ಹೇಳಲಾಗುತ್ತದೆ. ಆದರೆ ಓದಲು ಉತ್ತೇಜನ ನೀಡಬೇಕಾದ್ದು ಯಾರಿಗೆ ಎಂದು ಯೋಚಿಸುವುದು ಕಡಿಮೆ. ಯಾವ ವಿದ್ಯಾರ್ಥಿಯು ಓದಿ ಗಳಿಸಬೇಕಾದ ವಿಷಯ ಜ್ಞಾನವನ್ನು ಹೊಂದಿರುವುದಿಲ್ಲವೋ ಅಂತಹ ವಿದ್ಯಾರ್ಥಿಗೆ ಮಾತ್ರ ಓದಲು ಉತ್ತೇಜನದ ಅಗತ್ಯವಿರುತ್ತದೆ. ಅದಾಗಲೇ ವಿಷಯ ಜ್ಞಾನ ಇರುವ ವಿದ್ಯಾರ್ಥಿ ಗಳಿಗೆ ಓದಲು ಉತ್ತೇಜಿಸುವ ಕಾರ್ಯಕ್ರಮಗಳ ಅಗತ್ಯ ಇರುವುದಿಲ್ಲ. ಆದರೆ ಇಡೀ ವರ್ಷ ಪಾಠ ಕೇಳಿಯೂ ವಿಷಯ ಜ್ಞಾನ ಬೆಳೆಯದ ವಿದ್ಯಾರ್ಥಿಗಳು ಇರುತ್ತಾರೆ. ಪಾಠಗಳನ್ನು ಕೇಳಿಸಿಕೊಳ್ಳುವುದರಲ್ಲಿ, ಕೇಳಿಸಿ ಕೊಂಡದ್ದನ್ನು ಗ್ರಹಿಸುವುದರಲ್ಲಿ ಅವರು ದೌರ್ಬಲ್ಯ ಹೊಂದಿರುತ್ತಾರೆ. ಅಂತಹ ವಿದ್ಯಾರ್ಥಿಗಳ ನಿಜವಾದ ಸಮಸ್ಯೆ ಪಾಠವನ್ನು ಕೇಳಿಸಿಕೊಳ್ಳದೇ ಇರುವುದು. ಅಂತಹ ವಿದ್ಯಾರ್ಥಿಗಳನ್ನು ಗುರುತಿಸಿ ಪಾಠಗಳನ್ನು ಕೇಳಿಸಿಕೊಳ್ಳಲು ಶೈಕ್ಷಣಿಕ ವರ್ಷದ ಪ್ರಾರಂಭದಲ್ಲೇ ಉತ್ತೇಜಿಸಬೇಕು. ಈ ಕೆಲಸದಲ್ಲಿ ಅಧ್ಯಾಪಕರು, ಪೋಷಕರು ಮತ್ತು ಸಮುದಾಯದಲ್ಲಿ ವಿಶೇಷ ಆಸಕ್ತಿ ಕಾಣಿಸುವುದಿಲ್ಲ.
ತರಗತಿಯಲ್ಲಿ ಪಾಠವನ್ನು ಕೇಳಿಸಿಕೊಳ್ಳದೆ ಇದ್ದಾಗಲೂ ಪರೀಕ್ಷೆ ಹತ್ತಿರ ಬಂದಾಗ ಓದುವ ಮೂಲಕ ಪಠ್ಯ ವಸ್ತುವನ್ನು ಗ್ರಹಿಸಲು ಸಾಧ್ಯವಿದೆ. ಈ ನೆಲೆಯಲ್ಲಿ, ‘ಪರೀಕ್ಷೆಗಾಗಿ ಓದು’ ಎಂದು ಉತ್ತೇಜಿಸುವುದು ಸರಿ. ಆದರೆ ವ್ಯವಸ್ಥಿತ ಶಿಕ್ಷಣದಲ್ಲಿ ಪಾಠ ಪುಸ್ತಕವನ್ನು ಓದುವ ಉದ್ದೇಶ ‘ಗ್ರಹಿಕೆ’ ಅಲ್ಲ; ಅದರ ಉದ್ದೇಶ ‘ದೃಢೀಕರಣ’. ಪಠ್ಯ ಬೋಧನೆಯಲ್ಲೇ ಪಠ್ಯದ ವಸ್ತುವಿನ ಗ್ರಹಿಕೆ ನಡೆದಿರುತ್ತದೆ, ಅದರ ದೃಢೀಕರಣ ಮಾಡಿಕೊಳ್ಳುವುದಕ್ಕಾಗಿ ಓದಬೇಕಾಗುತ್ತದೆ. ಪಾಠ ಕೇಳಿಸಿಕೊಳ್ಳದ ವಿದ್ಯಾರ್ಥಿಗಳಲ್ಲಿ ‘ಗ್ರಹಿಕೆ’ಯೇ ಆಗಿರುವುದಿಲ್ಲ. ಆದ್ದರಿಂದ ಅಂತಹ ವಿದ್ಯಾರ್ಥಿಗಳು ಓದಿನ ಮೂಲಕವೇ ಗ್ರಹಿಕೆಯನ್ನೂ, ದೃಢೀಕರಣವನ್ನೂ ಮಾಡಿಕೊಳ್ಳುವ ದುಪ್ಪಟ್ಟು ಶ್ರಮ ಹಾಕಬೇಕಾಗುತ್ತದೆ.
ಪರೀಕ್ಷೆಯ ಸಂದರ್ಭದಲ್ಲಿ ಈ ಎರಡು ಕೆಲಸಗಳನ್ನು ಮಾಡುವುದು ವಿದ್ಯಾರ್ಥಿಗಳ ಪರೀಕ್ಷಾ ದಕ್ಷತೆಯನ್ನು ದುರ್ಬಲಗೊಳಿಸುತ್ತದೆ. ಅಂದರೆ ಅಂತಹ ವಿದ್ಯಾರ್ಥಿಗಳು ಪಡೆಯಬಹುದಾದ ಅಂಕಗಳ ಪ್ರಮಾಣ ಕುಸಿಯುತ್ತದೆ ಎನ್ನುವುದು ಸ್ಪಷ್ಟ. ‘ಚೆನ್ನಾಗಿ ಓದಿದರೆ ಒಳ್ಳೆಯ ಅಂಕಗಳು ಬರುತ್ತವೆ’ ಎನ್ನುವ ನಂಬಿಕೆ ಪರೀಕ್ಷಾ ಸಂದರ್ಭದಲ್ಲಿ ಓದನ್ನು ಪ್ರಾರಂಭಿಸುವವರ ಮಟ್ಟಿಗೆ ನಂಬಿಕೆಯಾಗಿಯಷ್ಟೇ ಉಳಿಯುತ್ತದೆ. ಆದ್ದರಿಂದ ವಿದ್ಯಾರ್ಥಿಗಳನ್ನು ಓದಲು ಉತ್ತೇಜಿಸಬೇಕಾದದ್ದು ಪಾಠ ಬೋಧನೆ ನಡೆಯುತ್ತಿರುವ ಸಂದರ್ಭದಲ್ಲೇ ವಿನಾ ಪಾಠ ಬೋಧನೆ ಪೂರ್ಣಗೊಂಡ ಬಳಿಕವಲ್ಲ.
ಬದಲಾಗಿರುವ ಶೈಕ್ಷಣಿಕ ಸಂದರ್ಭದಲ್ಲಿ ವಿದ್ಯಾರ್ಥಿಗಳ ಬರವಣಿಗೆಯ ಸಮಸ್ಯೆಯ ಬಗ್ಗೆ ಹೆಚ್ಚು ಚರ್ಚೆ ಆಗಿಲ್ಲ. ಪಂಡಿತ ಪರಂಪರೆಯ ಶೈಲಿಯೇ ಮುಖ್ಯವಲ್ಲ, ವ್ಯಾಕರಣ ಕಲಿಸುವುದೇ ಪ್ರಧಾನವಲ್ಲ, ವಿದ್ಯಾರ್ಥಿಯ ಸಾಮರ್ಥ್ಯ ವೃದ್ಧಿ ಬಹಳ ಪ್ರಧಾನವಾದದ್ದು ಎಂಬ ಚಿಂತನೆಯ ಹಿನ್ನೆಲೆಯಲ್ಲಿ ನಡೆದ ಶೈಕ್ಷಣಿಕ ಸುಧಾರಣೆಗಳು ಪ್ರಾಥಮಿಕ ಹಂತದಲ್ಲಿ ಹಲವು ವಿದ್ಯಾರ್ಥಿಗಳ ವಾಕ್ಯರಚನಾ ಕೌಶಲದ ಮೇಲೆ ಋಣಾತ್ಮಕ ಪರಿಣಾಮ ಉಂಟುಮಾಡಿವೆ. ಅವರಿಗೆ ವಿಷಯ ಜ್ಞಾನ ಇರುತ್ತದೆ. ಆದರೆ ಗೊತ್ತಿರುವ ವಿಷಯವನ್ನು ವಾಕ್ಯ ರೂಪದಲ್ಲಿ ಹೇಳಲು ಗೊತ್ತಾಗುವುದಿಲ್ಲ. ಆದರೆ ಪರೀಕ್ಷೆಯಲ್ಲಿ ವಾಕ್ಯ ರಚಿಸಿ, ಬರೆದೇ ಹೇಳ
ಬೇಕಾಗಿರುತ್ತದೆ. ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ತಮಗೆ ಗೊತ್ತಿರುವುದನ್ನು ಮೌಖಿಕವಾಗಿ ಹೇಳಲಿಕ್ಕಾಗಲಿ, ಹಾವ ಭಾವಗಳಿಂದ ಹೇಳಲಿಕ್ಕಾಗಲಿ ಅವಕಾಶ ಇಲ್ಲ. ಬರೆದೇ ಹೇಳಬೇಕು. ಅಂದರೆ ವಿದ್ಯಾರ್ಥಿಗಳಲ್ಲಿ ಬರವಣಿಗೆಯ ಕೌಶಲ, ಅದಕ್ಕೆ ಅಗತ್ಯವಾದ ಶಬ್ದ ಭಂಡಾರ ಚೆನ್ನಾಗಿ ಇರಲೇಬೇಕಾಗುತ್ತದೆ. ಪ್ರಾಥಮಿಕ ಶಿಕ್ಷಣದಲ್ಲಿ ಇದು ಆಗಿಲ್ಲದೆ ಇದ್ದರೆ ಪ್ರೌಢ ಶಿಕ್ಷಣಕ್ಕೆ ಬಂದು ಪಬ್ಲಿಕ್ ಪರೀಕ್ಷೆ ಎದುರಿಸುವಾಗ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕುತ್ತಾರೆ.
ಅಂಥವರಿಗೆ ಪ್ರಶ್ನೋತ್ತರಗಳನ್ನು ಕಂಠಪಾಠ ಮಾಡುವುದು ಅನಿವಾರ್ಯವಾಗುತ್ತದೆ. ಕಂಠಪಾಠ ಮಾಡಿರದ ಪ್ರಶ್ನೆಗಳು ಪರೀಕ್ಷೆಯಲ್ಲಿ ಬಂದಾಗ ಉತ್ತರ ಬರೆಯಲು ಗೊತ್ತಾಗುವುದಿಲ್ಲ. ಕಂಠಪಾಠ ಮಾಡಿದ ಉತ್ತರಕ್ಕೆ ಬೇಕಾದ ಪ್ರಶ್ನೆ ಬಂದಾಗಲೂ ನೆನಪಿರಿಸಿಕೊಂಡ ವಾಕ್ಯಗಳಲ್ಲಿ ಒಂದು ವಾಕ್ಯ ಮರೆತುಹೋದರೆ ಮುಂದಿನದನ್ನು ಬರೆಯಲು ಆಗುವುದಿಲ್ಲ. ಕಂಠಪಾಠ ಮಾದರಿಯಲ್ಲಿ ವಿದ್ಯಾರ್ಥಿಗಳು ನಿರ್ದಿಷ್ಟ ಪ್ರಶ್ನೆಗೆ ನಿರ್ದಿಷ್ಟ ಉತ್ತರವನ್ನು ಕಲಿತಿರುತ್ತಾರೆ. ಅದೇ ಪ್ರಶ್ನೆಯನ್ನು ಕೊಂಚ ಭಿನ್ನ ಸ್ವರೂಪದಲ್ಲಿ ಕೇಳಿದರೆ ಯಾವ ಉತ್ತರ ಬರೆಯಬೇಕೆಂದು ಗೊತ್ತಾಗುವುದಿಲ್ಲ. ಈ ಸಮಸ್ಯೆ ನಿವಾರಣೆಯಾಗಬೇಕಾದರೆ ವಾಕ್ಯ ರಚನಾ ಸಾಮರ್ಥ್ಯವೇ ವಿದ್ಯಾರ್ಥಿಗಳಲ್ಲಿ ಬೆಳೆಯಬೇಕು. ಇದಾಗಬೇಕಾದದ್ದು ಕೂಡ ಬೋಧನೆ ಮತ್ತು ಕಲಿಕೆಯ ಸಂದರ್ಭದಲ್ಲೇ ವಿನಾ ಪಾಠಗಳು ಪೂರ್ಣಗೊಂಡ ಬಳಿಕ ಅಲ್ಲ.
ಕೆಲವು ವಿದ್ಯಾರ್ಥಿಗಳಲ್ಲಿ ಪರೀಕ್ಷೆಯು ಒಂದು ರೀತಿಯ ಖಿನ್ನತೆ, ಭಯದ ಮನೋಭಾವ ನಿರ್ಮಿಸುತ್ತದೆ. ಈ ಸಮಸ್ಯೆಯನ್ನು ವಿದ್ಯಾರ್ಥಿಗಳು ಸೃಷ್ಟಿಸಿದ್ದಲ್ಲ. ಪರೀಕ್ಷೆಯೂ ಸೃಷ್ಟಿಸಿದ್ದಲ್ಲ. ಇಡೀ ಶಿಕ್ಷಣ ವ್ಯವಸ್ಥೆಯೇ ಸೃಷ್ಟಿಸಿದ ಸಮಸ್ಯೆ ಇದು. ಸಾರ್ವತ್ರಿಕವಾಗಿ ‘ಪರೀಕ್ಷೆ ಬಹಳ ಮುಖ್ಯ’ ಎಂಬ ಭಾವನೆ ಸಮಾಜದಲ್ಲಿದೆಯೇ ವಿನಾ ‘ಕಲಿಕೆ ಬಹಳ ಮುಖ್ಯ, ಆದ್ದರಿಂದ ಕಲಿಕಾ ಪ್ರಕ್ರಿಯೆಯಲ್ಲಿ ಶಿಸ್ತುಬದ್ಧವಾಗಿ ಪಾಲ್ಗೊಳ್ಳಬೇಕು’ ಎಂಬ ಭಾವನೆ ಇಡೀ ಸಮಾಜದಲ್ಲಿ ಇಲ್ಲ. ಇದರಿಂದಾಗಿ ವಿದ್ಯಾರ್ಥಿಗಳು ಕೂಡ ಕಲಿಕಾ ಪ್ರಕ್ರಿಯೆಯನ್ನು ಲಘುವಾಗಿಯೂ ಪರೀಕ್ಷಾ ಪ್ರಕ್ರಿಯೆಯನ್ನು ಗಂಭೀರವಾಗಿಯೂ ತೆಗೆದುಕೊಳ್ಳುತ್ತಾರೆ.
ಕಲಿಕಾ ಪ್ರಕ್ರಿಯೆಯನ್ನು ಬಹಳ ಗಂಭೀರವಾಗಿ ತೆಗೆದುಕೊಳ್ಳಬೇಕು. ಆಗ ಪರೀಕ್ಷೆಯನ್ನು ಲಘುವಾಗಿ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ಕೆಲವು ವಿದ್ಯಾರ್ಥಿಗಳು ಈ ರೀತಿ ಇರುತ್ತಾರೆ. ಪಾಠ ಬೋಧನೆಯನ್ನು ಸಮರ್ಪಕವಾಗಿ ಕೇಳಿಸಿಕೊಂಡು ಆಯಾ ದಿನ ಅಥವಾ ಆಯಾ ವಾರದಲ್ಲೇ ಪಾಠ ಪುಸ್ತಕವನ್ನು ಓದಿ ಕಲಿಕಾ ದೃಢೀಕರಣ ಮಾಡಿಕೊಂಡಿರುತ್ತಾರೆ. ಅಂತಹ ವಿದ್ಯಾರ್ಥಿಗಳಿಗೆ ಪರೀಕ್ಷಾ ಭಯ, ಆತಂಕಗಳು ಇರುವುದಿಲ್ಲ. ಆದರೆ ಇಂಥವರ ಸಂಖ್ಯೆ ಬಹಳ ಕಡಿಮೆ. ಆದ್ದರಿಂದ ಕಲಿಕಾ ಪ್ರಕ್ರಿಯೆಗೆ ಮಹತ್ವ ನೀಡಿದಾಗ, ವಿದ್ಯಾರ್ಥಿ
ಗಳಲ್ಲಿ ಪರೀಕ್ಷೆಯ ಸಂದರ್ಭದಲ್ಲಿ ಉಂಟಾಗುವ ಅನೇಕ ಮಾನಸಿಕ ಮತ್ತು ಭಾವನಾತ್ಮಕ ಸಮಸ್ಯೆ
ಗಳನ್ನು ನಿವಾರಿಸಬಹುದು ಎಂಬುದು ಪೋಷಕರು ಮತ್ತು ಅಧ್ಯಾಪಕರಿಗೆ ಗೊತ್ತಿರಬೇಕು. ಕಲಿಕೆಯ ಪ್ರಕ್ರಿಯೆಗೆ ವಿದ್ಯಾರ್ಥಿಗಳನ್ನು ತೊಡಗಿಸಿದಾಗ, ವ್ಯಕ್ತಿ ಭಿನ್ನತೆಯ ನೆಲೆಯಲ್ಲಿ ಪರಿಶೀಲಿಸಿ ಮಾರ್ಗದರ್ಶನ ಮಾಡಬೇಕಾಗುತ್ತದೆ. ಈ ಕಾರ್ಯವೂ ಬೋಧನೆ ಮತ್ತು ಕಲಿಕಾ ಪ್ರಕ್ರಿಯೆಯ ಜೊತೆ ನಡೆಯಬೇಕು. ಶೈಕ್ಷಣಿಕ ವರ್ಷಾಂತ್ಯದಲ್ಲಲ್ಲ. ಪರೀಕ್ಷಾ ಸಂದರ್ಭದಲ್ಲಿ ವಿದ್ಯಾರ್ಥಿಗಳಲ್ಲಿ ಖಿನ್ನತೆ, ಆತಂಕ, ಭಯ ಉಂಟಾಗುವುದಕ್ಕೆ, ಕಲಿಕೆಯಿಂದ ಬಂದಿರಬೇಕಾದ ಆತ್ಮವಿಶ್ವಾಸ ಬಂದಿಲ್ಲದಿರುವುದು ಕೂಡ ಬಹುಮಟ್ಟಿಗೆ ಕಾರಣವಾಗಿರುತ್ತದೆ.
ಪರೀಕ್ಷೆಯ ಸಂದರ್ಭದಲ್ಲಿ, ‘ಏನೂ ಹೆದರಬೇಡ’ ಎಂದು ಧೈರ್ಯ ಕೊಡುವುದರಿಂದ ಉಪಯೋಗವಿಲ್ಲ. ಆ ಧೈರ್ಯ ವಿದ್ಯಾರ್ಥಿಗಳ ವ್ಯಕ್ತಿತ್ವದಲ್ಲೇ ಬೆಳೆದುಬರುವಂತೆ ಮಾಡಬೇಕು. ಆದ್ದರಿಂದ ಇದು ಕೂಡ ಶೈಕ್ಷಣಿಕ ವರ್ಷಾರಂಭದಿಂದ ಮಾಡಬೇಕಾದ ಸಿದ್ಧತೆ. ವಿದ್ಯಾರ್ಥಿಗಳ ಕಲಿಕಾ ಮಟ್ಟವನ್ನು ಉತ್ತಮಪಡಿ
ಸುವುದು ಪರೀಕ್ಷೆಯ ಸಂದರ್ಭದ ಔಪಚಾರಿಕ ಉಪದೇಶ, ತರಬೇತಿಯನ್ನು ಅವಲಂಬಿಸಿಲ್ಲ ಎನ್ನುವುದು ಇಡೀ ಶಾಲಾ ವ್ಯವಸ್ಥೆಗೆ ಮೊದಲು ಅರ್ಥವಾಗಬೇಕು. ಆದರೆ ಸ್ಥಾಪಿತ ಮನೋಭಾವವು ವೈಚಾರಿಕ ಸ್ಪಷ್ಟತೆಯನ್ನು ಬೇಗ ಪಡೆಯುವುದಿಲ್ಲ. ಆದ್ದರಿಂದ ಅಂತಹ ವೈಚಾರಿಕ ಸ್ಪಷ್ಟತೆ ಬರುವ ತನಕವೂ ಇದನ್ನು ಪದೇ ಪದೇ ಹೇಳುತ್ತಾ ಇರಬೇಕಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.