ಜನನ: ಜೂನ್ 10, 1948
ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ದೇವನೂರ ಮಹಾದೇವ, ಒಂದು ವಿಶಿಷ್ಟ ಪ್ರತಿಭೆ. ಅವರು ನವ್ಯೋತ್ತರ ಕಾಲಘಟ್ಟದಲ್ಲಿ ಬರವಣಿಗೆ ಆರಂಭಿಸಿ ದಲಿತ ಬಂಡಾಯ ಪಂಥದ ಪ್ರಮುಖ ಲೇಖಕರೆನಿಸಿಕೊಂಡವರು; ದಲಿತ ಲೋಕದ ಕಥೆಗಳನ್ನು ಅತ್ಯಂತ ಖಚಿತವಾಗಿ ಕಂಡರಿಸಿದ ಹಿರಿಮೆ ಅವರದ್ದು. ಅವರು ಅನುಸರಿಸಿದ ಅಭಿವ್ಯಕ್ತಿ ಕ್ರಮ ಮತ್ತು ಭಾಷೆ ಅತ್ಯಂತ ಸ್ವೋಪಜ್ಞವಾದವು.
‘ದ್ಯಾವನೂರು’ ಕಥಾ ಸಂಕಲನದ ಮೂಲಕ ಕನ್ನಡ ಸಾಹಿತ್ಯ ಲೋಕಕ್ಕೆ ಹೊಸ ದಿಕ್ಕು ತೋರಿದವರು ಮಹಾದೇವ. ನಂತರ ಅವರು ಬರೆದ ‘ಒಡಲಾಳ’, ‘ಕುಸುಮಬಾಲೆ’ ಕನ್ನಡ ಸಾಹಿತ್ಯದ ಪ್ರಮುಖ ಕೃತಿಗಳೆಂದು ಪರಿಗಣಿತವಾದವು.
ಕನ್ನಡ ಅಧ್ಯಾಪಕರಾಗಿ ಒಂದಷ್ಟು ಕಾಲ ಕೆಲಸ ಮಾಡಿ ನಂತರ ಪೂರ್ಣಾವಧಿ ಬೇಸಾಯಗಾರರಾದ ಮಹಾದೇವ, ಸಾಹಿತ್ಯ ರಚನೆ, ದಲಿತ ಸಂಘಟನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಲೋಹಿಯಾ ಸಮಾಜವಾದದಿಂದ ಪ್ರಭಾವಿತರಾಗಿದ್ದ ಮಹಾದೇವ, ನಂತರ ಅಂಬೇಡ್ಕರ್ ಚಿಂತನೆಯನ್ನೇ ತಮ್ಮ ಬದುಕು ಮತ್ತು ಸಾಹಿತ್ಯದ ಮೂಲ ದ್ರವ್ಯವನ್ನಾಗಿಸಿಕೊಂಡರು. ರಾಜ್ಯದಲ್ಲಿ ದಲಿತ ಸಂಘರ್ಷ ಸಮಿತಿಯ ಆರಂಭಕ್ಕೆ ಒತ್ತಾಸೆಯಾಗಿ, ಅದರ ಬೌದ್ಧಿಕ ಶಕ್ತಿಯಾದರು. ನಮ್ಮ ಕಾಲದ ಬಹು ಮುಖ್ಯ ಸಾಮಾಜಿಕ, ರಾಜಕೀಯ ವಾಗ್ವಾದಗಳಿಗೆ ಪ್ರತಿಕ್ರಿಯಿಸುತ್ತಾ, ನಾಡಿನ ಸಾಕ್ಷಿಪ್ರಜ್ಞೆ ಎನ್ನಿಸಿಕೊಂಡರು.
ಮಹಾದೇವ ಅವರು ಸೃಷ್ಟಿಸಿರುವ ಅಮಾಸ, ಸಾಕವ್ವ, ಕುಸಮಬಾಲೆಯಂಥ ಪಾತ್ರಗಳು, ದಟ್ಟ ಪ್ರಾದೇಶಿಕತೆಯ ಭಾಷೆ, ಕಾವ್ಯಾತ್ಮಕ ಶೈಲಿ ಬೆರೆತ ಕಥನ ಕ್ರಮದ ಜತೆಗೆ ಅವರ ವಿಶಿಷ್ಟ ಕಾಣ್ಕೆಯೂ ಸೇರಿ ಅವರನ್ನು ಕನ್ನಡ ಸಂಸ್ಕೃತಿಯ ಅಪೂರ್ವ ಬರಹಗಾರರನ್ನಾಗಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.