ಭಾರತ ಆರ್ಥಿಕವಾಗಿ ಬಲಾಢ್ಯ ರಾಷ್ಟ್ರವಾಗಿ ಹೊರಹೊಮ್ಮಲಿದೆ ಎಂದು ಸಂಭ್ರಮಿಸುವುದಕ್ಕೆ ಕಾರಣಗಳು ಇರುವಂತೆಯೇ, ನಮ್ಮ ಆರ್ಥಿಕತೆಯಲ್ಲಿ ಗಂಭೀರವಾದ ಸಮಸ್ಯೆಗಳಿವೆ ಎಂದು ಆತಂಕಗೊಳ್ಳುವುದಕ್ಕೂ ಕಾರಣಗಳಿವೆ. ನಿಜ, ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ದೇಶದ ಸ್ಥಿತಿ ತುಂಬಾ ಕೆಟ್ಟದಾಗಿತ್ತು. ಭಾರತ ಒಂದಾಗಿ ಉಳಿಯಬಹುದೇ ಅನ್ನುವ ಅನುಮಾನಗಳೂ ಇದ್ದವು. ದೇಶವು ಒಂದಾಗಿ ಉಳಿದಿರುವುದಷ್ಟೇ ಅಲ್ಲ ನಿರೀಕ್ಷೆಯನ್ನು ಮೀರಿ ಅಭಿವೃದ್ಧಿಯನ್ನು ಸಾಧಿಸಿದೆ. ಬಡತನ, ಹಸಿವು ಕಡಿಮೆಯಾಗಿವೆ.
ಜಗತ್ತಿನ ಐದನೇ ದೊಡ್ಡ ಆರ್ಥಿಕತೆಯಾಗಿ ದೇಶ ಬೆಳೆದಿದೆ. ಆದರೆ, ಆತಂಕದ ವಿಷಯವೆಂದರೆ ಶಿಕ್ಷಣ, ಆರೋಗ್ಯ, ರಕ್ಷಣೆ, ಕಾನೂನಿನಂತಹ ಮೂಲಭೂತ ಸಾರ್ವಜನಿಕ ಸೇವೆಗಳನ್ನು ಪರಿಣಾಮಕಾರಿ
ಯಾಗಿ ಒದಗಿಸುವಲ್ಲಿ ವಿಫಲವಾಗಿದ್ದೇವೆ. ಉದಾಹರಣೆಗೆ ಶಿಕ್ಷಣವನ್ನು ಗಮನಿಸಿ. 2022ರಲ್ಲಿ ಶಿಕ್ಷಣಕ್ಕಾಗಿ ₹7.5 ಲಕ್ಷ ಕೋಟಿ ಖರ್ಚು ಮಾಡಲಾಗಿದೆ. ಮಕ್ಕಳ ಪೈಕಿ ಶೇಕಡ 98.4ರಷ್ಟು ಮಂದಿ ಶಾಲೆಗೆ ಹೋಗುತ್ತಿದ್ದಾರೆ. ಆದರೆ ಐದನೆಯ ತರಗತಿಯಲ್ಲಿ ಓದುತ್ತಿರುವ ಗ್ರಾಮೀಣ ಪ್ರದೇಶದ ಶೇ 50ಕ್ಕಿಂತ ಹೆಚ್ಚು ಮಕ್ಕಳಿಗೆ ಓದುವ ಸಾಮರ್ಥ್ಯ ಬಂದಿಲ್ಲ. ಸ್ವಾಭಾವಿಕವಾಗಿಯೇ ಮುಂದೆ ಅವರಿಗೆ ಆಧುನಿಕ ಆರ್ಥಿಕತೆಯಲ್ಲಿ ಭಾಗವಹಿಸುವುದು ಕಷ್ಟವಾಗುತ್ತದೆ.
ಶಿಕ್ಷಣ, ಆರೋಗ್ಯದಂತಹ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಸರ್ಕಾರ ವಿಫಲವಾದಾಗ ಹೆಚ್ಚು ತೊಂದರೆಗೆ ಒಳಗಾಗುವವರು ಬಡವರು. ಅವರು ಈ ಸೌಲಭ್ಯಗಳಿಗೆ ಸರ್ಕಾರವನ್ನೇ ನೆಚ್ಚಿಕೊಂಡಿರುತ್ತಾರೆ. ಸರ್ಕಾರ ವಿಫಲವಾದಾಗ ಅವರು ಅಪಾರ ಹಣ ತೆತ್ತು ಖಾಸಗಿಯವರಿಂದ ಆ ಸೌಲಭ್ಯಗಳನ್ನು ಪಡೆಯಬೇಕಾಗುತ್ತದೆ. ಸರ್ಕಾರದ ವೈಫಲ್ಯಕ್ಕೆ ಹಣದ ಕೊರತೆ ಕಾರಣವಲ್ಲ. ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುವುದಕ್ಕೆ ಸರ್ಕಾರಕ್ಕಿರುವ ಸಾಮರ್ಥ್ಯದ ಕೊರತೆ ಕಾರಣ. ಈ ದೌರ್ಬಲ್ಯದಿಂದಾಗಿ ಅಪೇಕ್ಷಿತ ಪರಿಣಾಮ ದೊರೆಯುತ್ತಿಲ್ಲ. ಈ ಬಗ್ಗೆ ಕಳೆದ 25 ವರ್ಷಗಳಿಂದ ಸಂಶೋಧನೆ ನಡೆಸಿರುವ ಕಾರ್ತಿಕ್ ಮುರಳೀಧರನ್ ತಮ್ಮ ‘ಆ್ಯಕ್ಸಿಲರೇಟಿಂಗ್ ಇಂಡಿಯಾಸ್ ಡೆವಲಪ್‌ಮೆಂಟ್’ ಕೃತಿಯಲ್ಲಿ, ‘ನಾವು ಇವತ್ತೂ 1950ರಲ್ಲಿ ಚಾಲೂ ಮಾಡಿದ ವಾಹನದಲ್ಲೇ ಕುಳಿತು, ಉನ್ನತ ಮಟ್ಟದ ಬದುಕನ್ನು ನಿರೀಕ್ಷಿಸುತ್ತಾ ಸಾಗುತ್ತಿದ್ದೇವೆ. ಈಗ ಆ ವಾಹನದ ಕಾರ್ಯಕ್ಷಮತೆ ಕಡಿಮೆಯಾಗಿದೆ. ಇಂಧನದ ಮೇಲೆ ಎಷ್ಟೇ ಹಣ ಚೆಲ್ಲಿದರೂ ನಿರೀಕ್ಷಿತ ಪರಿಣಾಮ ಸಿಗುವುದಿಲ್ಲ. ವಾಹನದ ಕಾರ್ಯಕ್ಷಮತೆಯನ್ನು ಹೆಚ್ಚಿಸಬೇಕು’ ಅನ್ನುತ್ತಾರೆ.
ಸರ್ಕಾರದ ಸಾಮರ್ಥ್ಯದ ಕೊರತೆಯಿಂದಾಗಿ ನಿರೀಕ್ಷಿತ ಪರಿಣಾಮ ಸಾಧ್ಯವಾಗುತ್ತಿಲ್ಲ, ಶಾಲೆಗಳಲ್ಲಿ ಪರಿಣಾಮಕಾರಿ ಕಲಿಕೆ ಸಾಧ್ಯವಾಗುತ್ತಿಲ್ಲ, ಆಸ್ಪತ್ರೆಗಳಲ್ಲಿ ಉತ್ತಮ ಸೇವೆ ದೊರಕುತ್ತಿಲ್ಲ. ಇದರಿಂದ ನಮ್ಮ ದೇಶದ ಸ್ಥಿತಿವಂತರು ಹಾಗೂ ಮಧ್ಯಮ ವರ್ಗದವರು ಸರ್ಕಾರ ಒದಗಿಸುವ ಸೇವೆಗಳ ವಿಷಯದಲ್ಲಿ ನಿರಾಸಕ್ತಿ ತಾಳುತ್ತಿದ್ದಾರೆ. ಅವರು ಶಿಕ್ಷಣ, ಆರೋಗ್ಯ, ಸಾರಿಗೆ, ಸುರಕ್ಷತೆ ಹೀಗೆ ಪ್ರತಿಯೊಂದಕ್ಕೂ ಖಾಸಗಿ ಸೇವೆಯನ್ನು ಬಳಸಿಕೊಳ್ಳುತ್ತಿದ್ದಾರೆ. ಸಾಮಾನ್ಯವಾಗಿ ಗುಣಮಟ್ಟದ ಸೇವೆಗೆ ಒತ್ತಾಯಿಸುವವರೇ ಅವರು. ಕಾರ್ತಿಕ್ ಹೇಳುವಂತೆ, ಸ್ಥಿತಿವಂತರು ಬಳಸಿಕೊಳ್ಳುತ್ತಿದ್ದಾಗ ಸರ್ಕಾರಿ ಸೇವೆಗಳ ಗುಣಮಟ್ಟ ಮೇಲ್ಮಟ್ಟದ್ದಾಗಿರುತ್ತಿತ್ತು. ಅಷ್ಟೇ ಅಲ್ಲ, ಸರ್ಕಾರಿ ಸೇವೆಯನ್ನು ಸುಧಾರಿಸಿದರೆ ಖಾಸಗಿ ಸೇವೆಗಳ ಮೇಲೂ ಒತ್ತಡ ಹೆಚ್ಚುತ್ತದೆ. ಅವೂ ಸುಧಾರಿಸಬೇಕಾಗುತ್ತದೆ. ಕಾರ್ತಿಕ್ ಅವರ ಮಾತನ್ನೇ ಉದಾಹರಿಸುವುದಾದರೆ, ಇವೆರಡರ ನಡುವಿನ ಸ್ಪರ್ಧೆ ಒಂದು ರೀತಿ ಕಾಡಿನಲ್ಲಿ ಬೆನ್ನು ಹತ್ತಿದ ಕರಡಿಯಿಂದ ತಪ್ಪಿಸಿಕೊಳ್ಳಲು ಓಡುತ್ತಿರುವ ಇಬ್ಬರು ಮನುಷ್ಯರ ಸ್ಥಿತಿ ಇದ್ದಂತೆ. ಒಬ್ಬರು ಇನ್ನೊಬ್ಬರನ್ನು ಸದಾ ಹಿಂದೆಹಾಕಿ ಮುಂದೆ ಓಡುತ್ತಿರಬೇಕು. ಹಿಂದೆ ಬಿದ್ದವರು ಕರಡಿಗೆ ಸಿಕ್ಕಿಬಿದ್ದು ಸಾಯುತ್ತಾರೆ. ಸರ್ಕಾರಿ ಸೇವೆಗಳು ಉತ್ತಮಗೊಳ್ಳುವುದರಲ್ಲಿ ತಮ್ಮ ಹಿತವೂ ಇದೆ ಅನ್ನುವುದು ಸ್ಥಿತಿವಂತರಿಗೂ ಅರ್ಥವಾಗಬೇಕು. ವಾಯು
ಮಾಲಿನ್ಯದಿಂದ ತಪ್ಪಿಸಿಕೊಳ್ಳುವುದಕ್ಕೆ ಸ್ಥಿತಿವಂತರು ಮನೆಯೊಳಗಡೆ ಫಿಲ್ಟರ್ ಹಾಕಿಕೊಳ್ಳಬಹುದು. ಆದರೆ ಮನೆಯ ಹೊರಗಡೆ ಬಂದಾಗ ಅವರೂ ಉಳಿದವರಂತೆ ಮಾಲಿನ್ಯವನ್ನು ಎದುರಿಸಬೇಕು.
ನಮ್ಮಲ್ಲಿ ಆರ್ಥಿಕ ಬೆಳವಣಿಗೆ ಹಾಗೂ ಅಭಿವೃದ್ಧಿಗೆ ಸಂಬಂಧಿಸಿದಂತೆ ಎರಡು ಅಭಿಪ್ರಾಯಗಳಿವೆ. ಜಗದೀಶ್ ಭಗವತಿಯವರ ದೃಷ್ಟಿಯಲ್ಲಿ ಆರ್ಥಿಕ ಬೆಳವಣಿಗೆ ನಮ್ಮ ಆದ್ಯತೆಯಾಗಬೇಕು. ಆರ್ಥಿಕ ಬೆಳವಣಿಗೆ ಸಾಧ್ಯವಾದರೆ ಸಾಕು, ಶಿಕ್ಷಣ, ಆರೋಗ್ಯದಂತಹ ಕ್ಷೇತ್ರಗಳಲ್ಲಿ ಅದರಷ್ಟಕ್ಕೇ ಅಭಿವೃದ್ಧಿ ಸಾಧ್ಯವಾಗುತ್ತದೆ ಅನ್ನುವುದು ಅವರ ವಾದ. ಹಾಗಾಗಿ ಅವರು ದೇಶದ ಜಿಡಿಪಿ ಹೆಚ್ಚಳದ ಬಗ್ಗೆ ಗಮನಕೊಡುತ್ತಾರೆ. ಅದಕ್ಕಾಗಿ ಅವರು ಮೂಲಸೌಕರ್ಯದ ಸುಧಾರಣೆ, ಖಾಸಗಿ ಉತ್ಪಾದಕ ಹೂಡಿಕೆಯಲ್ಲಿನ ಹೆಚ್ಚಳದಂತಹ ನೀತಿಗಳನ್ನು ಸೂಚಿಸುತ್ತಾರೆ. ಆದರೆ ಮಾನವನ ಅಭಿವೃದ್ಧಿ ಮುಖ್ಯ ಅನ್ನುವ ಅಮರ್ತ್ಯ ಸೇನ್ ದೃಷ್ಟಿಯಲ್ಲಿ ಬೆಳೆವಣಿಗೆಯ ಉದ್ದೇಶ ಜಿಡಿಪಿಯ ಹೆಚ್ಚಳವಲ್ಲ. ಮನುಷ್ಯನ ಬದುಕನ್ನು, ಅವನ ಸಾಮರ್ಥ್ಯವನ್ನು, ಅನುಭವವನ್ನು ಹೆಚ್ಚಿಸುವುದು ಬೆಳೆವಣಿಗೆಯ ಉದ್ದೇಶವಾಗಬೇಕು. ಅಭಿವೃದ್ಧಿಯನ್ನು ಸಾಧಿಸುವುದಕ್ಕೆ ದೇಶ ಶ್ರೀಮಂತವಾಗುವವರೆಗೆ ಕಾಯಬೇಕಾಗಿಲ್ಲ. ರಾಷ್ಟ್ರೀಯ ವರಮಾನ ಕಡಿಮೆ ಇದ್ದಾಗಲೂ ಹೆಚ್ಚಿನ ಮಾನವಾಭಿವೃದ್ಧಿ ಸಾಧ್ಯ ಎಂದು ಸೇನ್ ಅವರು ವಾದಿಸುತ್ತಾರೆ. ಅದಕ್ಕೆ ಅವರು ಶ್ರೀಲಂಕಾ, ವಿಯೆಟ್ನಾಂ, ಬಾಂಗ್ಲಾದೇಶದಂತಹ ದೇಶಗಳನ್ನು ಉದಾಹರಿಸುತ್ತಾರೆ. ಸರಳವಾಗಿ ಹೇಳುವುದಾದರೆ ಒಬ್ಬರು ಮೂಲಭೂತ ಸೌಕರ್ಯದಂತಹ ಭೌತಿಕ ಬಂಡವಾಳಕ್ಕೆ ಗಮನವಿತ್ತರೆ, ಮತ್ತೊಬ್ಬರು ಶಿಕ್ಷಣ, ಆರೋಗ್ಯದಂತಹ ಮಾನವ ಬಂಡವಾಳಕ್ಕೆ ಗಮನವೀಯುತ್ತಾರೆ. ಇದು ಸೈದ್ಧಾಂತಿಕವಾಗಿ ಎಡ ಹಾಗೂ ಬಲಪಂಥೀಯರ ನಡುವಿನ ವಿವಾದವೂ ಆಗಿದೆ. ಎಡಪಂಥೀಯರು ಶಿಕ್ಷಣ, ಆರೋಗ್ಯ, ಉದ್ಯೋಗ... ಇವುಗಳಿಗೆ ಆದ್ಯತೆ ನೀಡುತ್ತಾರೆ.
ಕಾರ್ತಿಕ್ ಮುರಳೀಧರನ್ ಅವರು ನಡುವಿನ ದಾರಿ ಹಿಡಿಯುತ್ತಾರೆ. ಅವರು ಹೇಳುವುದು ‘ಎರಡೂ ಸರಿ; ಆದರೆ ಹಣವನ್ನು ಯಾವುದಕ್ಕೆ ಖರ್ಚು ಮಾಡುತ್ತೀರಿ ಅನ್ನುವುದು ಮುಖ್ಯವಲ್ಲ. ಆ ಖರ್ಚು ಪರಿಣಾಮ
ಕಾರಿಯಾಗಿರಬೇಕು. ಅದು ನಿರೀಕ್ಷಿತ ಫಲ ನೀಡಬೇಕು. ಭಾರತದಲ್ಲಿ ಸದ್ಯದ ಸಮಸ್ಯೆಯೇ ಅದು. ಸರ್ಕಾರವು ಮೂಲಸೌಕರ್ಯ, ಸಾಮಾಜಿಕ ವಲಯ ಅಥವಾ ಇನ್ಯಾವುದರ ಮೇಲೆ ಬಂಡವಾಳ ತೊಡಗಿಸಿದರೂ ಅವುಗಳ ಗುಣಮಟ್ಟ ಕಳಪೆ. ನಿರೀಕ್ಷಿತ ಫಲ ನೀಡುತ್ತಿಲ್ಲ. ಹಾಗಾಗಿ ದೇಶದ ಸಾಮರ್ಥ್ಯ ಬೆಳೆಯುತ್ತಿಲ್ಲ. ಸರ್ಕಾರದ ಸಾಮರ್ಥ್ಯ ವೃದ್ಧಿಯಾದರೆ ಅದು ಮಾಡುವ ಖರ್ಚಿನಿಂದ ಸಿಗುವ ಪ್ರತಿಫಲ ಹತ್ತು ಪಟ್ಟು ಹೆಚ್ಚುತ್ತದೆ’ ಅನ್ನುವುದು ಅವರ ಅಂದಾಜು. ಸರ್ಕಾರದ ವೆಚ್ಚ ಹೆಚ್ಚು ಪರಿಣಾಮಕಾರಿಯಾದರೆ ಜನರ ಜೀವನಮಟ್ಟ ಸುಧಾರಿಸುತ್ತದೆ. ಜೊತೆಗೆ ಬೆಳವಣಿಗೆಯ ದರವೂ ಹೆಚ್ಚುತ್ತದೆ.
ಬೆಳವಣಿಗೆ ಕುಂಠಿತವಾಗಿರುವ ಮಕ್ಕಳ ಸಂಖ್ಯೆ ಈಗ ಶೇ 25ರಷ್ಟು ಇದೆ. ಸರ್ಕಾರದ ಸಾಮರ್ಥ್ಯ ಹೆಚ್ಚದಿದ್ದರೆ ಜಿಡಿಪಿ ಬೆಳವಣಿಗೆಯು ಶೇ 6ರಷ್ಟಲ್ಲ, ಶೇ 8ರಷ್ಟು ಆದರೂ ಮಕ್ಕಳ ಆರೋಗ್ಯ ಸುಧಾರಿಸುವುದಿಲ್ಲ. ಅಷ್ಟೇ ಅಲ್ಲ, ಎರಡು ದಶಕ ಕಳೆದರೂ ಪರಿಸ್ಥಿತಿ ಹೀಗೇ ಇರುತ್ತದೆ. ಸಾರ್ವಜನಿಕ ಬಂಡವಾಳವನ್ನು ಹೆಚ್ಚು ಪರಿಣಾಮಕಾರಿಯಾಗಿ ಬಳಸಿಕೊಳ್ಳುವುದಕ್ಕೆ ಸಾಧ್ಯವಾದರೆ ಕುಂಠಿತ ಬೆಳವಣಿಗೆ ದರವನ್ನು ತಗ್ಗಿಸಬಹುದು. ಮಕ್ಕಳ ಆರೋಗ್ಯ ಸುಧಾರಿಸಿದರೆ ಆರ್ಥಿಕ ಬೆಳವಣಿಗೆಯೂ ಹೆಚ್ಚುತ್ತದೆ. ಶಿಕ್ಷಣದ ವಿಷಯದಲ್ಲೂ ಇದು ನಿಜ. ಶಾಲೆಯ ಕಟ್ಟಡ, ಸಂಬಳದ ಹೆಚ್ಚಳ, ಕಂಪ್ಯೂಟರ್ ಸೌಲಭ್ಯ ಇವುಗಳಿಂದಲೇ ಕಲಿಕೆಯ ಮಟ್ಟ ಸುಧಾರಿಸುವುದಿಲ್ಲ. ಗ್ರಾಮೀಣ ಸರ್ಕಾರಿ ಶಾಲೆಯಲ್ಲಿ ಅಧ್ಯಾಪಕರ ಗೈರುಹಾಜರಿಯ ಪ್ರಮಾಣ ಶೇ 23.6ರಷ್ಟು ಎನ್ನುವ ಅಂದಾಜಿದೆ. ಅದರಿಂದ ವರ್ಷಕ್ಕೆ ಸುಮಾರು ₹10 ಸಾವಿರ ಕೋಟಿಯಷ್ಟು ನಷ್ಟವಾಗುತ್ತದೆ ಎನ್ನಲಾಗಿದೆ. ಶಿಕ್ಷಣ ಪರಿಣಾಮಕಾರಿ ಆಗಬೇಕಾದರೆ ಇದು ತಪ್ಪಬೇಕು.
ವಿವಿಧ ಸಾರ್ವಜನಿಕ ಕ್ಷೇತ್ರಗಳಲ್ಲಿ ತೊಡಗಿಸುವ ಬಂಡವಾಳವು ಸರ್ಕಾರಿ ಸೇವೆಗಳನ್ನು ಎಷ್ಟರಮಟ್ಟಿಗೆ ಉತ್ತಮಪಡಿಸುತ್ತದೆ ಮತ್ತು ಆ ಮೂಲಕ ಜನರ ಬದುಕು ಹೇಗೆ ಸುಧಾರಿಸುತ್ತದೆ ಅನ್ನುವುದನ್ನೂ ಗಮನಿಸಬೇಕು. ಯಾವ ಕ್ಷೇತ್ರಗಳಿಗೆ ಎಷ್ಟು ಬಂಡವಾಳ ಹೂಡಬೇಕೆನ್ನುವಷ್ಟೇ, ಆ ಕ್ಷೇತ್ರಗಳನ್ನು ಹೇಗೆ ಪರಿಣಾಮಕಾರಿಯಾಗಿ ಬೆಳೆಸಬೇಕು ಅನ್ನುವ ದಿಸೆಯಲ್ಲೂ ಯೋಚಿಸಬೇಕು. ಅದನ್ನು ಸಾಧ್ಯವಾಗಿಸಲು ಬೇಕಾದ ನೈತಿಕ ಸಾಮರ್ಥ್ಯವನ್ನು ಸರ್ಕಾರ ಬೆಳೆಸಿಕೊಳ್ಳಬೇಕು. ಆಗಷ್ಟೇ ಮಾನವ ಶಕ್ತಿಯ ಸಾಮರ್ಥ್ಯ ಬೆಳೆಯುವುದಕ್ಕೆ, ಪ್ರಜಾಸತ್ತೆ ಪರಿಣಾಮಕಾರಿ ಆಗುವುದಕ್ಕೆ ಸಾಧ್ಯ. ಇದಕ್ಕಾಗಿ ಒತ್ತಾಯ ಸಾರ್ವಜನಿಕರಿಂದ ಬರಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.