ರಚನೆ ಮತ್ತು ನಿರಚನೆಯ ಸಂಘರ್ಷ ಅನುಗಾಲವೂ ಜಗತ್ತನ್ನು ಆತಂಕದಲ್ಲಿ ಹಿಡಿದಿಟ್ಟುಕೊಂಡಿರುತ್ತದೆ. ಈ ದಿನಕೂಡ (ಡಿ.6) ಆ ಕಾರಣಕ್ಕೆ ಚರಿತ್ರೆಯಲ್ಲಿ ಉಳಿಯುವ ದಿನ. ಆಧುನಿಕ ಭಾರತದ ನಿರ್ಮಾತೃ ಬಾಬಾ ಸಾಹೇಬ್ ಅಂಬೇಡ್ಕರ್ ಪರಿನಿರ್ವಾಣ ಹೊಂದಿದ ದಿನ. ಅಂತೆಯೇ ಅಯೋಧ್ಯೆಯಲ್ಲಿ ಚಾರಿತ್ರಿಕವಾಗಿ ನೆಲೆ ನಿಂತಿದ್ದ ಬಾಬರಿ ಮಸೀದಿಯನ್ನು ನಿರಚನೆಗೊಳಿಸಿದ್ದಕ್ಕೆ 28 ವರ್ಷ ತುಂಬಿದ ದಿನ. ವಿವಾದಾತ್ಮಕ ಸ್ಥಳದ ಹಕ್ಕುದಾರಿಕೆಯ ಸಂಘರ್ಷಕ್ಕೆ ಭರವಸೆ ತುಂಬಿ ರಾಮ ಮಂದಿರ ನಿರ್ಮಿಸುವ ಸಂಕಲ್ಪ ಸ್ವೀಕರಿಸಿದ ದಿನವೂ ಹೌದು. ಮಸೀದಿಯ ಧ್ವಂಸ ಒಂದೆಡೆ ಕರಾಳವೂ– ಮತ್ತೊಂದೆಡೆ ವಿಜಯ ಸಂಕಲ್ಪದ ಪ್ರತೀಕವೂ ಆಗಿ ಎರಡು ಸಮುದಾಯದಲ್ಲಿ ಜೀವಂತವಾಗಿ ಉಳಿದಿತ್ತು. ಅದು ಹಿಂದು– ಮುಸ್ಲಿಂ ಸಮುದಾಯಗಳ ಮನೋ ಭಿತ್ತಿಯಲ್ಲಿ ಶೀತಲ ಸಮರಕ್ಕೆ ದಶಕಗಳ ಕಾಲ ಇಂಬುಕೊಟ್ಟಿತ್ತು. ಅದೆಲ್ಲವೂ ಹಣಕಾಸು ಸೇರಿದಂತೆ ಬೇರೆ ಬೇರೆ ರೂಪದಲ್ಲಿ ಜನ ಜೀವನಕ್ಕೆ ಭೀತಿಯನ್ನು ನೀಡುತ್ತಲೇ ಇತ್ತು. 2019ರ ಅಕ್ಟೋಬರ್ 16ರಂದು ವಿವಾದಕ್ಕೆ ತಾರ್ಕಿಕ ಅಂತ್ಯವನ್ನು ಹಾಡುವ ಐತಿಹಾಸಿಕ ತೀರ್ಪನ್ನು ಸುಪ್ರೀಂಕೋರ್ಟ್ ನೀಡಿತು.
ಅದರ ಸಾಧಕ– ಬಾಧಕಗಳು ಭವಿಷ್ಯತ್ತಿನ ಚರಿತ್ರೆಯ ಬಹುಮುಖ್ಯ ಅಂಶವೂ ಆಗಬಹುದು. ಆದರೆ, ಇಂದಿನ ವಾಸ್ತವದ ಬದುಕು ಮಾತ್ರ ಹಸಿದವರ ಹೊಟ್ಟೆಯ ಮೇಲೆ ಬರೆ ಎಳೆಯುತ್ತಿದೆ. ಇದಕ್ಕೆ ಕಾರಣವಾದರೂ ಏನೆಂದು ಕೆದಕಿದರೆ ಕಣ್ಣೆದುರು ಒದೊಂದೇ ಸಮಸ್ಯೆಗಳು ಗರಿಗೆದರಿಕೊಳ್ಳುತ್ತವೆ. ಅದರಲ್ಲಿ ಒಂದು ನೋಟು ರದ್ದು; ಮತ್ತೊಂದು ಕೋವಿಡ್ ಎಂಬ ಅಗೋಚರ ವೈರಸ್. ಕೋವಿಡೋತ್ತರ ಆರ್ಥಿಕ ಪರಿಸ್ಥಿತಿ ಎಲ್ಲ ಸ್ತರದ ಜನರ ನಿತ್ಯ ಜೀವನವನ್ನೂ ಅಸ್ತವ್ಯಸ್ತಗೊಳಿಸಿದೆ. ದೇಶದಲ್ಲಿ ಕೃಷಿಯ ನಂತರ ಹೆಚ್ಚಿನ ಉದ್ಯೋಗ ಅವಕಾಶವನ್ನು ಕಲ್ಪಿಸಿರುವ ಬೀದಿ ಮತ್ತು ಸಂಚಾರಿ ವ್ಯಾಪಾರದ ಮಗ್ಗಲನ್ನೂ ಅದು ಮುರಿದಿದೆ. ಇಂತಹ ಆರ್ಥಿಕ ರೋಗ ನಿಯಂತ್ರಕ ಲಸಿಕೆ ಅಂಬೇಡ್ಕರ್ ಚಿಂತನೆಯಲ್ಲಿ ಇದೆ. ಅವರಲ್ಲಿ ಧರ್ಮ ಮತ್ತು ಸಾಮಾಜಿಕ ಸಂಘರ್ಷಗಳ ಗಾಯಕ್ಕೆ ಮಾತ್ರ ಮುಲಾಮಿಲ್ಲ. ಹಣಕಾಸಿನ ಹುಣ್ಣಿಗೂ ಮುಲಾಮು ಅವರ ಸಿದ್ಧಾಂತದಲ್ಲಿದೆ. ಅವರ ಸ್ಮರಣೆಯ ದಿನವಾದ ಇಂದು ರಚನಾತ್ಮಕ ಸಂಕಲ್ಪದ ಮೂಲಕ ‘ಪ್ರಾಬ್ಲಂ ಆಫ್ ರುಪೀ’ ಉತ್ತರವನ್ನು ಕಂಡುಕೊಳ್ಳಬಹುದು ಎಂದೆನಿಸುತ್ತದೆ.
ಆರ್‌ಬಿಐ ಪ್ರತಿಪಾದಕ
ತನಿಖಾ ಸಂಸ್ಥೆಗಳಲ್ಲಿ ಮಾತ್ರ ರಾಜಕೀಯದ ಯಜಮಾನಿಕೆ ನಡೆಯುತ್ತಿಲ್ಲ. ಅನೇಕ ಸ್ವಾಯತ್ತ ಸಂಸ್ಥೆಗಳಲ್ಲಿಯೂ ನೇರ ಇಲ್ಲವೇ ಪರೋಕ್ಷವಾಗಿ ರಾಜಕಾರಣದ ಕೈಚಳಕ ನಡೆಯುತ್ತಲೇ ಇರುತ್ತದೆ. ಇದೇ ಕಾರಣಕ್ಕೆ ಯಾವುದೇ ತನಿಖಾ ದಾಳಿ ನಡೆದಾಗ ಆಡಳಿತ ಪಕ್ಷದ ಮೇಲೆ ದೂರುವುದು ಸಾಮಾನ್ಯ. ಸ್ವತಂತ್ರ ನ್ಯಾಯಾಂಗ ವ್ಯವಸ್ಥೆಯಂತೆಯೇ ಸ್ವತಂತ್ರ ಹಣಕಾಸು ನಿಯಂತ್ರಣ ಸಂಸ್ಥೆ ಅಗತ್ಯ ಎಂದು ಸ್ವಾತಂತ್ರ್ಯ ಪೂರ್ವದಲ್ಲಿಯೇ ಅಂಬೇಡ್ಕರ್ ಪ್ರತಿಪಾದಿಸಿದ್ದರು. ಅದರಂತೆ ಆರ್‌ಬಿಐ ರಚನೆಯೂ ಆಗಿದೆ. ಕೊರಾನಾ ದೇಶದ ಆರ್ಥಿಕತೆಗೆ ಭೀಕರ ಪೆಟ್ಟನ್ನು ಕೊಟ್ಟಿದೆ. ಇಂತಹ ಹೊತ್ತಿನಲ್ಲಿ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಕೆಲವೊಂದು ಸುಧಾರಣಾ ನೀತಿಗಳನ್ನು ಆಗಾಗ ಪ್ರಕಟಿಸುತ್ತಲೇ ಇದೆ. ಇಂತಹ ಸಂಕೀರ್ಣ ಸಂದರ್ಭದಲ್ಲಿ ಆರ್ಥಿಕತೆ ಪುನರ್ ನಿರ್ಮಾಣಕ್ಕೆ ದೇಶಿ ಚಿಂತನೆಯಲ್ಲಿಯೇ ಉತ್ತರವನ್ನು ಹುಡುಕಿಕೊಳ್ಳಬೇಕಿದೆ. ‘ಆರ್ಥಿಕ ಸಮಾನತೆಯ ಮೂಲಕವೇ ಸರ್ವ ಸಮಾನತೆ ಸಾಧಿಸಲು ಸಾಧ್ಯ’ ಎನ್ನುವುದು ಅಂಬೇಡ್ಕರ್ ಆಶಯವೂ ಆಗಿತ್ತು.
ರಿಸರ್ವ್ ಬ್ಯಾಂಕ್ ಕಥೆ
ಲಂಡನ್ ವಿಶ್ವವಿದ್ಯಾಲಯದಿಂದ 1921ರಲ್ಲಿ ಅರ್ಥಶಾಸ್ತ್ರದಲ್ಲಿ ಎಂ.ಎಸ್ಸಿ. ಪದವಿಯನ್ನು ಪಡೆದ ಅಂಬೇಡ್ಕರ್ ಸಂಶೋಧನೆಯನ್ನು ಮುಂದುವರಿಸುತ್ತಾರೆ. ಅವರ ಸಂಶೋಧನೆಗೆ ಭಾರತದ ಹಣಕಾಸು ವ್ಯವಸ್ಥೆಯೇ ಅಧ್ಯಯನ ವಸ್ತುವನ್ನಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ. ಅವರು ಸಲ್ಲಿಸಿದ ಪ್ರೌಢ ಪ್ರಬಂಧಕ್ಕೆ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ವಿಶ್ವವಿದ್ಯಾಲಯ ‘ಡಾಕ್ಟರ್ ಆಫ್ ಸೈನ್ಸ್’ ಪದವಿಯನ್ನು ನೀಡುತ್ತದೆ. ನಂತರ ಆ ಪ್ರಬಂಧವನ್ನು ‘ರೂಪಾಯಿ ಸಮಸ್ಯೆ’ (ಪ್ರಾಬ್ಲಂ ಆಫ್ ರುಪೀ) ಎಂದು ಪ್ರಕಟಿಸುತ್ತಾರೆ. ಅದೇ ಸಮಯಕ್ಕೆ ಅಂದರೆ 1926ರಲ್ಲಿ ಬ್ರಿಟನ್ ಸರ್ಕಾರ ಹಿಲ್ಸನ್ ಯಂಗ್ ನೇತೃತ್ವದಲ್ಲಿ ಸಮಿತಿಯನ್ನು ಭಾರತದ ರೂಪಾಯಿಯ ಸಮಸ್ಯೆ ಮತ್ತು ಪರಿಹಾರಕ್ಕೆ ನೇಮಿಸುತ್ತದೆ. ಅಧ್ಯಯನ ಸಮಿತಿ ಎದುರು ಹಾಜರಾದ ಅಂಬೇಡ್ಕರ್ ತಮ್ಮ ಅಭಿಪ್ರಾಯವನ್ನೂ ದಾಖಲಿಸುತ್ತಾರೆ. ಹಿಲ್ಟನ್ ಯಂಗ್ ನೇತೃತ್ವದ ಆಯೋಗ 1934ರಲ್ಲಿ ತನ್ನ ವರದಿಯನ್ನು ಸರ್ಕಾರಕ್ಕೆ ನೀಡುತ್ತದೆ. ಮರುವರ್ಷವೇ (1.4.1935) ರಿಸರ್ವ್ ಬ್ಯಾಂಕ್ ಸ್ಥಾಪನೆಯೂ ಆಗುತ್ತದೆ.
ಸುಸ್ಥಿರ ಆರ್ಥಿಕತೆಗೂ ಪರಿಹಾರ
ಬೃಹತ್ ಕೈಗಾರಿಕೆಗಳು ಮತ್ತು ಅತ್ಯವಶ್ಯ ಉತ್ಪನ್ನಗಳ ಕಾರ್ಖಾನೆಗಳು ಸರ್ಕಾರದ ಸ್ವಾಮ್ಯದಲ್ಲೇ ಇರಬೇಕು ಎಂದು ಅಂಬೇಡ್ಕರ್ ಹೇಳುತ್ತಾರೆ. ಸಣ್ಣ ಕೈಗಾರಿಕೆ, ಕುಶಲ ಮತ್ತು ಗುಡಿ ಕೈಗಾರಿಕೆಗಳನ್ನು ಮಾತ್ರ ಖಾಸಗಿ ಕ್ಷೇತ್ರಕ್ಕೆ ಬಿಟ್ಟುಕೊಡಬೇಕು ಎನ್ನುವುದು ಅವರ ನಿಲುವು. ಜೀವ ವಿಮೆ ರಾಜ್ಯದ ಏಕಸ್ವಾಮ್ಯದಲ್ಲಿ ಇರಬೇಕು. ಪ್ರತಿಯೊಬ್ಬ ನಾಗರಿಕನ ಆದಾಯಕ್ಕೆ ಅನುಗುಣವಾಗಿ ಜೀವ ವಿಮೆ ಪಾಲಿಸಿಯನ್ನು ಸರ್ಕಾರ ರೂಪಿಸಬೇಕು ಎನ್ನುವುದು ಅಂಬೇಡ್ಕರ್ ವಾದವಾಗಿತ್ತು.
‘ಸಮಾನತೆ ಒಂದು ಕಲ್ಪನೆ ಇರಬಹುದು, ಆದರೆ ಅದನ್ನು ಸರ್ಕಾರ ತನ್ನ ತತ್ವ ಎಂದು ಸ್ವೀಕರಿಸಲೇಬೇಕು’ ಎನ್ನುವುದು ಬಾಬಾ ಸಾಹೇಬರ ಆಶಯ. ಅವರ ಆಶಯ ಸಾಕಾರಗೊಳಿಸುವ ಸಂಕಲ್ಪನ್ನು ಸರ್ಕಾರ ಮಾಡಬೇಕು. ರಾಜ್ಯದಲ್ಲಿ ‘ಡಾ.ಬಿ.ಆರ್. ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್’ ಎಂಬ ಅರ್ಥಶಾಸ್ತ್ರ ಅಧ್ಯಯನ ಸಂಸ್ಥೆಯನ್ನು ಆರಂಭಿಸಲಾಗಿದೆ. ಉದ್ದೇಶಿತ ಆಶಯದಂತೆ ಅದು ತನ್ನ ಕಾರ್ಯಸಾಧನೆಯ ಮೈಲುಗಲ್ಲನ್ನು ನೆಡಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.