ADVERTISEMENT

Pv Web Exclusive | ಮಕ್ಕಳ ಆಟಿಕೆ...ಜೋಕೆ ಬಲು ಜೋಕೆ

ಸ್ಮಿತಾ ಶಿರೂರ
Published 2 ಮಾರ್ಚ್ 2021, 8:00 IST
Last Updated 2 ಮಾರ್ಚ್ 2021, 8:00 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಸದ್ಯ ಆಟಿಕೆಗಳ ಉದ್ಯಮದಲ್ಲಿ ಹೊಸ ಅಲೆ ಬೀಸತೊಡಗಿದೆ. ಚೈನಾ ಆಟಿಕೆಗಳಿಂದ ತುಂಬಿ ಹೋಗಿರುವ ಅಂಗಡಿಗಳಲ್ಲಿ ದೇಸಿ ಆಟದ ಸಾಮಗ್ರಿಗಳನ್ನು ತುಂಬುವ ಪ್ರಯತ್ನ ಆರಂಭವಾಗಿದೆ. ಇದೇನೇ ಇದ್ದರೂ ಈಗಾಗಲೇ ಹಲವು ವಿಧಗಳ ಆಟಿಕೆಗಳ ಮಧ್ಯ ದಿನ ಕಳೆಯುವ ಮಕ್ಕಳಿಗೆ ಆಟಿಕೆಗಳು ಎಷ್ಟು ಸುರಕ್ಷಿತ ಎಂಬ ಬಗ್ಗೆಯೂ ಪೋಷಕರು ಎಚ್ಚರಿಕೆ ವಹಿಸಬೇಕಿದೆ.

‘ಐಎಲ್‌ಒ ಕನ್‌ಸಲ್ಟಿಂಗ್‌’ ಪ್ರಕಾರ ಆಟಿಕೆ ಉದ್ಯಮದ ವಹಿವಾಟಿನ ಗಾತ್ರ ಸದ್ಯ ವಾರ್ಷಿಕವಾಗಿ ₹ 5,750 ಕೋಟಿಗೆ ಏರಿದೆ. ಪ್ರತಿ ವರ್ಷ ಇದರ ಬೆಳವಣಿಗೆ ದರ ಶೇ 10ರಿಂದ ಶೇ 15ರಷ್ಟು ಪ್ರಮಾಣದಲ್ಲಿದೆ. ಕ್ರಿಯೆಟಿವಿಟಿ ಹೆಚ್ಚಿಸಲು, ಶೈಕ್ಷಣಿಕ ಜ್ಞಾನಕ್ಕಾಗಿ ಎಂಬ ಅರಿವು ಪೋಷಕರಲ್ಲಿ ಮೂಡಿರುವುದರಿಂದ ಆಟಿಕೆಗಳ ಖರೀದಿಯಲ್ಲಿ ಹೆಚ್ಚಳವಾಗಿದೆ. ವಾರ್ಷಿಕವಾಗಿ ದೇಶದಲ್ಲಿ ಮಾರಾಟವಾಗುವ ದೇಶದ ಶೇ 85ರಷ್ಟು ಆಟಿಕೆಗಳು ಆಮದಾಗಿಯೇ ಬಂದಿರುವಂಥವು. ಇವುಗಳಲ್ಲಿ ಚೈನಾದಿಂದ ಆಗುವ ಆಮದಿನ ಪ್ರಮಾಣವೇ ಅಗಾಧ. ಉಳಿದವು ಶ್ರೀಲಂಕಾ, ಮಲೇಷಿಯಾ, ಹಾಂಗ್‌ಕಾಂಗ್‌ ಹಾಗೂ ಅಮೆರಿಕದವು.

ಆಟಿಕೆ ತಯಾರಕರು, ಮಾರಾಟಗಾರರು, ಬಳಕೆದಾರರನ್ನು ಒಂದೆಡೆ ತರಬೇಕು ಎಂಬ ಉದ್ದೇಶದಿಂದ 1995ರಲ್ಲಿ ಟಾಯ್‌ ಅಸೋಸಿಯೇಷನ್‌ ಆಫ್‌ ಇಂಡಿಯಾ ಆರಂಭವಾಗಿದೆ. ನವದೆಹಲಿಯಲ್ಲಿ ಕೇಂದ್ರ ಕಚೇರಿ ಇರುವ ಈ ಸಂಸ್ಥೆಯಲ್ಲಿ ಸದ್ಯ 600 ಸದಸ್ಯರು ಇದ್ದು, ಅವರಲ್ಲಿ 275 ಮಂದಿ ಮಾತ್ರ ಆಟಿಕೆ ತಯಾರಕರು. ಉಳಿದವರು ಆಟಿಕೆಗಳ ವರ್ತಕರು ಹಾಗೂ ವಿತರಕರು. ದೇಶದಾದ್ಯಂತ ಆಟಿಕೆಗಳ ಮೇಳ, ಪ್ರದರ್ಶನಗಳನ್ನು ಈ ಸಂಸ್ಥೆ ಏರ್ಪಡಿಸುತ್ತದೆ.

ADVERTISEMENT

ಮುಂಬಯಿಯಲ್ಲಿ ಕೇಂದ್ರ ಕಚೇರಿ ಹೊಂದಿರುವ ‘ಆಲ್‌ ಇಂಡಿಯಾ ಟಾಯ್‌ ಮ್ಯಾನುಫ್ಯಾಕ್ಚರರ್ಸ್‌ ಅಸೋಸಿಯೇಷನ್’ 1976ರಿಂದ ಅಸ್ತಿತ್ವದಲ್ಲಿದೆ. ಪಶ್ಚಿಮದ ರಾಜ್ಯಗಳಲ್ಲಿ ಇದರ ಕಾರ್ಯಾಚರಣೆ ಹೆಚ್ಚು. ಇದರಲ್ಲಿ 150 ಸದಸ್ಯರಿದ್ದು, ಅವರಲ್ಲಿ 100 ಆಟಿಕೆ ತಯಾರಕರು. ಉಳಿದವರು ಆಟಿಕೆ ಆಮದು ಮಾಡಿ ಮಾರಾಟ ಮಾಡುವ ವರ್ತಕರು ಹಾಗೂ ವಿತರಕರು.

ದೇಶದ ಆಟಿಕೆ ಉದ್ಯಮವು ಸ್ವಾವಲಂಬನೆ ಸಾಧಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವತ್ತ ಈ ಎರಡೂ ಸಂಸ್ಥೆಗಳು ಈಗ ಮುಂದಾಗಿವೆ. ಇಷ್ಟೇ ಅಲ್ಲದೇ ಆಟಿಕೆಗಳ ಬಳಕೆದಾರರಿಗೂ ಉಪಯುಕ್ತ ಸಲಹೆಗಳನ್ನು ನೀಡುತ್ತಿವೆ.

ಟಾಯ್‌ ಅಸೋಸಿಯೇಷನ್‌ ಆಫ್‌ ಇಂಡಿಯಾ ಮಕ್ಕಳ ಸುರಕ್ಷತೆಗಾಗಿ ಕೆಲವು ಸೂಚನೆಗಳನ್ನು ನೀಡಿದೆ:

ಹಲವು ಆಟಿಕೆಗಳ ಪ್ಯಾಕೆಟ್‌ಗಳ ಮೇಲೆ ಅದು ಎಷ್ಟು ವಯಸ್ಸಿನ ಮಕ್ಕಳಿಗೆ ಸುರಕ್ಷಿತ ಎಂಬ ಬರಹ ಇರುತ್ತದೆ. ಅದನ್ನು ಗಮನಿಸಿಯೇ ತೆಗೆದುಕೊಳ್ಳುವುದು ಸೂಕ್ತ. 4 ವರ್ಷಕ್ಕಿಂತ ಚಿಕ್ಕಮಕ್ಕಳು ಕಂಡ–ಕಂಡದ್ದನ್ನು ಬಾಯಲ್ಲಿ ಹಾಕುವ ಅಭ್ಯಾಸ ಹೊಂದಿರುವ ಕಾರಣ ಚಿಕ್ಕ ಬಿಡಿಭಾಗಗಳಿರುವ ಆಟಿಕೆಗಳನ್ನು ಅವರಿಗೆ ಕೊಡಬಾರದು. ಇದ್ದರೂ ಅವರ ಕೈಗೆ ಸಿಗದಂತೆ ಎತ್ತಿಡಬೇಕು.

ಮ್ಯಾಗ್ನೆಟ್‌ ಚೂರುಗಳನ್ನು ಅಂಟಿಸಲಾದ ಪ್ಲಾಸ್ಟಿಕ್‌ ಆಲ್ಫಾಬೆಟ್ಸ್‌ ಹಾಗೂ ಕನ್ನಡ ವರ್ಣಮಾಲೆ ಇರುವ ಆಟಿಕೆಗಳ ಸೆಟ್‌ ಈಗ ಚಿಕ್ಕ ಅಂಗಡಿಗಳಲ್ಲೂ ಸಿಗುತ್ತವೆ. ಇದಕ್ಕಿರುವ ಆಯಸ್ಕಾಂತ ಕೆಳಗೆ ಉದುರಿ ಮಕ್ಕಳು ಅದನ್ನು ನುಂಗಿದರೆ ಅಪಾಯ ಸಂಭವಿಸುವ ಸಾಧ್ಯತೆ ಇರುತ್ತದೆ. ಹೀಗಾಗಿ ಈ ಆಟಿಕೆಗಳ ಬಗ್ಗೆ ಸದಾ ಜಾಗೃತರಾಗಿರಬೇಕು. ಚಿಕ್ಕ ಮಕ್ಕಳ ಆಟದ ಸಾಮಾನುಗಳಲ್ಲಿ ಆಯಸ್ಕಾಂತ ಇಲ್ಲದಂತೆ ನೋಡಿಕೊಳ್ಳುವುದು ಅಗತ್ಯ.

ಮಕ್ಕಳ ವಯಸ್ಸಿಗನುಗುಣವಾಗಿ ಆಟಿಕೆಗಳನ್ನು ಖರೀದಿಸುವುದು ಸರಿಯಾದ ಕ್ರಮ. ನಾವೇ ಖರೀದಿಸಿ ತಂದ ಆಟಿಕೆಯಾಗಲಿ ಸಂಬಂಧಿಕರು ತಂದು ಕೊಟ್ಟದ್ದಾಗಲಿ ಮಕ್ಕಳಿಗೆ ಅಪಾಯ ತರುವಂಥ ಬಿಡಿ ಭಾಗಗಳು ಇವೆಯೇ ಎಂದು ಪರಿಶೀಲಿಸಿ, ಇದ್ದರೆ ಅವುಗಳಿಂದ ಮಕ್ಕಳನ್ನು ದೂರವಿಡಬೇಕು.

ಸೈಕಲ್‌ ರೈಡಿಂಗ್‌, ಸ್ಕೇಟ್‌ ಬೋರ್ಡ್‌ ಇಷ್ಟಪಡುವ ಮಕ್ಕಳಿಗೆ ಅದಕ್ಕೆ ಸೂಕ್ತ ಹೆಲ್ಮೆಟ್‌ ಖರೀದಿಸುವದನ್ನು ಮರೆಯಬಾರದು.
ಆಟ ಮುಗಿದ ನಂತರ ಎಲ್ಲ ಆಟಿಕೆಗಳನ್ನು ಒಂದೆಡೆ ಶಿಸ್ತುಬದ್ಧವಾಗಿ ಜೋಡಿಸಿರುವುದನ್ನು ರೂಢಿಸಿದರೆ ಇನ್ನೂ ಉತ್ತಮ.

ಚಿಕ್ಕ ಮಕ್ಕಳಿಗೆ ತಂದು ಕೊಡುವ ಸೈಕಲ್‌, ಗಾಡಿಗಳು ಚೂಪಾದ ಭಾಗಗಳನ್ನು ಹೊಂದಿಲ್ಲ ಎನ್ನುವುದನ್ನು ಖಾತ್ರಿ ಪಡಿಸಿಕೊಳ್ಳಬೇಕು. ಇವುಗಳನ್ನು ಓಡಿಸುವ ಜಾಗಗಳೂ ಸಮತಟ್ಟಾಗಿರುವಂತೆ ಎಚ್ಚರಿಕೆ ವಹಿಸಬೇಕು. ಇಂಥ ಪುಟ್ಟ ಗಾಡಿಗಳು ತಗ್ಗು ಪ್ರದೇಶಗಳಿರುವ ಕಡೆ ಬಹಳ ವೇಗವಾಗಿ ಹೋಗಿಬಿಡುವ ಸಾಧ್ಯತೆಗಳಿರುತ್ತವೆ. ಮೆಟ್ಟಿಲುಗಳು, ಈಜು ಕೊಳ, ಟ್ರಾಫಿಕ್‌ ಇರುವ ಕಡೆ ಹೋಗದಂತೆಯೂ ಕಾಳಜಿ ವಹಿಸಬೇಕಾದದ್ದು ತಂದೆ–ತಾಯಿಯರ ಕರ್ತವ್ಯ.

ಮಕ್ಕಳ ಆಟದ ಜಾಗಗಳಲ್ಲಿ ಅಪಾಯಕಾರಿ ಸಾಮಗ್ರಿಗಳು ಇಲ್ಲದಂತೆ ನೋಡಿಕೊಳ್ಳಬೇಕು. ಟೇಬಲ್ ಲ್ಯಾಂಪ್‌, ಕೋರ್ಡ್‌ಗಳು, ವಿದ್ಯುತ್‌ ಚಾಲಿತ ಅಲಂಕಾರಿಕ ಸಾಮಗ್ರಿಗಳು ಇವೆಯೇ ಎಂದು ಪರಿಶೀಲಿಸಿ ಅವುಗಳನ್ನು ಅಲ್ಲಿಂದ ತೆರವುಗೊಳಿಸಬೇಕು.
ಬ್ಯಾಟರಿ ಚಾಲಿತ ಆಟಿಕೆಗಳಿಗೆ ಪೋಷಕರೇ ಬ್ಯಾಟರಿ ಶೆಲ್‌ಗಳನ್ನು ಹಾಕಿ–ತೆಗೆದು ಮಾಡಬೇಕು. ಅಸಮರ್ಪಕ ಜೋಡಣೆ, ಬೇರೆ ಬೇರೆ ವಿಧದ ಬ್ಯಾಟರಿ ಶೆಲ್‌ಗಳನ್ನು ಹಾಕುವುದರಿಂದ ಲೀಕೇಜ್‌ ಕಂಡು ಬರುವ ಸಾಧ್ಯತೆಗಳು ಇರುತ್ತವೆ.

ಚಾರ್ಜ್‌ ಮಾಡಬಲ್ಲಂಥ ಬ್ಯಾಟರಿಗಳು ಸಹ ಮಕ್ಕಳಿಗೆ ಅಪಾಯ ಉಂಟುಮಾಡಬಹುದು. ಹೀಗಾಗಿ ಇವುಗಳನ್ನು ಪೋಷಕರೇ ಹ್ಯಾಂಡಲ್‌ ಮಾಡುವುದು ಉತ್ತಮ. ಹಾಸಿಗೆ ಅಥವಾ ಮಂಚಗಳ ಮೇಲೆ ಬ್ಯಾಟರಿ ಚಾಲಿತ ಆಟಿಕೆಗಳನ್ನು ಕೊಂಡೊಯ್ಯದಿರುವುದೇ ಸೂಕ್ತ. ಬ್ಯಾಟರಿಗಳು ವಿಷಕಾರಿ ಆಗಿರುವುದರಿಂದ, ಇಂಥದ್ದನ್ನು ಮಕ್ಕಳು ನುಂಗಿದ ಸಂದರ್ಭ ಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.

ಮುರಿದ, ಹಾಳಾದ ಆಟಿಕೆಗಳನ್ನು ಕಸದ ಡಬ್ಬಿಗಳಲ್ಲಿ ಹಾಕುವುದು ಸರಿಯಲ್ಲ. ಅವುಗಳನ್ನು ರದ್ದಿ ಅಥವಾ ಹಳೇ ಸಮಾನುಗಳನ್ನು ಕೊಳ್ಳಲು ಬರುವ ಗುಜರಿ ವ್ಯಾಪಾರಿಗಳಿಗೆ ನೀಡುವುದು ಉತ್ತಮ. ಅಲ್ಲಿ ಇವು ಪುನರ್ಬಳಕೆ ಆಗುವುದರಿಂದ ಪರಿಸರಕ್ಕೆ ಆಗುವ ಹಾನಿ ಕಡಿಮೆಯಾಗುತ್ತದೆ.

ಆಟಿಕೆಯ ಜೊತೆ ಇರುವ ಸೂಚನೆಗಳನ್ನು ಓದಿಕೊಂಡು ಮಕ್ಕಳಿಗೂ ಅದನ್ನು ತಿಳಿಸಿ ಹೇಳಿ. ಹೆಣ್ಣುಮಕ್ಕಳಿಗೆ ಗೊಂಬೆ, ಅಡುಗೆ ಸೆಟ್‌, ಗಂಡುಮಕ್ಕಳಿಗೆ ಕಾರು–ಗಾಡಿ... ಎಂಬ ತಾರತಮ್ಯ ಬೇಡ. ಯಾವುದೇ ಆಟಿಕೆಗಳಿಗೆ ಲಿಂಗ ಆಧಾರಿತ ಪೂರ್ವಗ್ರಹ ಬೇಡವೇ ಬೇಡ. ಆಟಿಕೆಗಳಿಂದ ಅಲರ್ಜಿ ಕಂಡು ಬಂದರೆ ಅವುಗಳನ್ನು ಮಕ್ಕಳಿಂದ ದೂರವಿರಿಸಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.