ಒಬ್ಬರಿಗೆ ಅಶ್ಲೀಲ ಎಂದು ಕಂಡಿದ್ದು ಮತ್ತೊಬ್ಬರಿಗೆ ಹಾಗೆ ಅನ್ನಿಸದೇ ಇರಬಹುದು– ‘ಅಶ್ಲೀಲ’ ಎಂಬ ಆರೋಪ ಹೊತ್ತಿದ್ದ ಜಾಹೀರಾತಿನ ಪ್ರಕರಣವೊಂದರ ತೀರ್ಪು ಪ್ರಕಟಿಸುವಾಗ ಮುಂಬೈನ ಕೋರ್ಟೊಂದು ವ್ಯಕ್ತಪಡಿಸಿದ ಅಭಿಪ್ರಾಯ ಇದು.
ದೇಶದ ಖ್ಯಾತ ಮಾಡೆಲ್‌ಗಳಲ್ಲಿ ಒಬ್ಬರಾಗಿ ಈಗಲೂ ಚಾಲ್ತಿಯಲ್ಲಿರುವ ಮಿಲಿಂದ್ ಸೋಮನ್ ಮತ್ತು ನಟಿ ಮಧು ಸಪ್ರೆ ಅವರ ನಗ್ನ ಚಿತ್ರವನ್ನು ಒಳಗೊಂಡ ಶೂವೊಂದರ ಜಾಹೀರಾತು, ಸರಿಯಾಗಿ 25 ವರ್ಷಗಳ ಹಿಂದೆ ನಿಯತಕಾಲಿಕವೊಂದರಲ್ಲಿ ಪ್ರಕಟವಾಗಿತ್ತು. ಒಬ್ಬರನ್ನೊಬ್ಬರು ತಬ್ಬಿ ಹಿಡಿದು, ಮಿಲಿಂದ್ ಕತ್ತಿಗೆ ಸುತ್ತಿಕೊಂಡಿದ್ದ ಹಾವು ಮತ್ತು ಪರಸ್ಪರ ಬೆಸೆದುಕೊಂಡ ಕಾಲುಗಳಲ್ಲೇ ಗುಪ್ತಾಂಗಗಳನ್ನು ಮರೆಮಾಚಿ ನಿಂತಿತ್ತು ಆ ಜೋಡಿ. ಕಾಲಿಗೆ ತೊಟ್ಟಿದ್ದ ಉದ್ದೇಶಿತ ಜಾಹೀರಾತಿನ ಶೂ ಬಿಟ್ಟರೆ ಇಬ್ಬರ ಮೈಮೇಲೆ ತುಂಡು ಬಟ್ಟೆಯೂ ಇರದಿದ್ದ ಆ ಚಿತ್ರ ವಿವಾದ ಸೃಷ್ಟಿಸಿತ್ತು. ಜಾಹೀರಾತುದಾರರು ಮತ್ತು ನಿಯತಕಾಲಿಕದ ಪ್ರಕಾಶಕರ ವಿರುದ್ಧ ಎರಡು ಪ್ರಕರಣಗಳು ದಾಖಲಾಗಿದ್ದವು. ಸತತ 14 ವರ್ಷಗಳ ಕಾಲ ವಿಚಾರಣೆ ನಡೆದಿದ್ದ ಈ ಪ್ರಕರಣದಲ್ಲಿ ಇಬ್ಬರೂ ಕಲಾವಿದರನ್ನು ಖುಲಾಸೆಗೊಳಿಸಿದ್ದ ಕೋರ್ಟ್, ಆ ಜಾಹೀರಾತು ಅಶ್ಲೀಲವಾಗಿತ್ತು ಎಂಬ ಅರ್ಜಿದಾರರ ವಾದಕ್ಕೆ ಮೇಲಿನಂತೆ ಪ್ರತಿಕ್ರಿಯಿಸಿತ್ತು.
ಕೋರ್ಟ್‌ನ ಈ ಹೇಳಿಕೆ ಆಧುನಿಕ ಸಮಾಜದ ಸಮಕಾಲೀನ ಸ್ಪಂದನೆಗೆ ಪೂರಕವಾಗಿರುವಂತೆ ಮೇಲ್ನೋಟಕ್ಕೆ ಕಂಡರೂ ಶೀಲ ಅಥವಾ ಅಶ್ಲೀಲ ಎನಿಸುವ ಸಂಗತಿಗಳನ್ನು ನಿರ್ಣಯಿಸುವ ವಿಚಾರದಲ್ಲಿ ಭಾರತೀಯ ಸಮಾಜಕ್ಕೆ ಮಾತ್ರವಲ್ಲ ನಮ್ಮ ನೀತಿ ನಿರೂಪಕರಿಗೂ ಇರುವ ಗೊಂದಲವನ್ನು ಸ್ಪಷ್ಟವಾಗಿ ಹೊರಗೆಡಹುತ್ತದೆ. ಭಾರತೀಯ ದಂಡ ಸಂಹಿತೆಯ 292, 293 ಮತ್ತು 294ನೇ ಸೆಕ್ಷನ್‌ಗಳು ಸಹ ಯಾವುದು ಅಶ್ಲೀಲ ಎಂಬುದನ್ನು ನಿರೂಪಿಸಲು ಸೋತಿರುವ ಅಂಶದತ್ತ ನಮ್ಮ ಗಮನ ಸೆಳೆಯುತ್ತದೆ.
ಅಶ್ಲೀಲ ಎನಿಸುವ ಪುಸ್ತಕಗಳು ಮತ್ತು ಇತರ ಮುದ್ರಿತ ಪ್ರತಿಗಳು, ಚಲನಚಿತ್ರ ಜಾಹೀರಾತುಗಳು, ಹೋರ್ಡಿಂಗ್‌ಗಳು, ಅಶ್ಲೀಲ ಕೃತ್ಯಗಳು, ಪ್ರಚೋದಕ ಹಾಡುಗಳೆಲ್ಲದರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಈ ಸೆಕ್ಷನ್‌ಗಳು ಹೇಳುತ್ತವೆ. ಹಾಗಿದ್ದರೆ ಯಾವುದೆಲ್ಲ ಅಶ್ಲೀಲ ಎಂಬುದಕ್ಕೆ ಮಾತ್ರ ಇಲ್ಲಿ ಯಾವುದೇ ನಿರ್ದಿಷ್ಟ ವಿವರಣೆ ಇಲ್ಲ. ಹೀಗಾಗಿ, ಶೀಲ ಅಥವಾ ಅಶ್ಲೀಲ ಎನಿಸುವ ಸಂಗತಿಗಳು ದೇಶದಾದ್ಯಂತ ಆಯಾ ಕಾಲಘಟ್ಟಕ್ಕೆ ಅನುಗುಣವಾಗಿ ‘ಅವರವರ ಭಾವಕ್ಕೆ’ ತಕ್ಕಂತೆ ವ್ಯಾಖ್ಯಾನಗೊಳ್ಳುತ್ತಾ ಬಂದಿವೆ.
ಇನ್ನೂ ಕುತೂಹಲದ ಸಂಗತಿಯೆಂದರೆ, ಆ ಚಿತ್ರವನ್ನು ಈಗಿನ ಲಾಕ್‌ಡೌನ್ ಅವಧಿಯಲ್ಲಿ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವ ಮಿಲಿಂದ್, ‘ಆಗಾಗ ಈ ಚಿತ್ರದತ್ತ ಇಣುಕುತ್ತಿರುತ್ತೇನೆ. ಈ ಚಿತ್ರ ತೆಗೆದ ಕಾಲಘಟ್ಟದಲ್ಲಿ ಸಾಮಾಜಿಕ ಜಾಲತಾಣಗಳು, ಇಂಟರ್ನೆಟ್ ಯಾವುದೂ ಇರಲಿಲ್ಲ. ಇದೇನಾದರೂ ಈಗ ಬಿಡುಗಡೆಯಾಗಿದ್ದರೆ ಎಂತಹ ಪ್ರತಿಕ್ರಿಯೆ ವ್ಯಕ್ತವಾಗುತ್ತಿತ್ತು ಎಂಬುದನ್ನು ನೆನೆಸಿಕೊಂಡರೆ ನನಗೆ ಅಚ್ಚರಿಯಾಗುತ್ತದೆ’ ಎಂಬ ಅಡಿಬರಹವನ್ನು ಕೊಟ್ಟಿದ್ದರು. ಅದಕ್ಕೆ 1,380 ಕಮೆಂಟ್‌ಗಳು ಬಂದಿದ್ದವು. ‘ಈ ಚಿತ್ರ ಮಾತ್ರ ಇನ್ನೂ ಅಪ್ರತಿಮ’ ಎಂಬರ್ಥವನ್ನೇ ಹೆಚ್ಚಿನ ಕಮೆಂಟ್‌ಗಳು ಧ್ವನಿಸಿದ್ದವು!
ಹಾಗಿದ್ದರೆ ನಮ್ಮ ಸಮಾಜ ಅಷ್ಟೊಂದು ಮುಕ್ತವಾಗಿದೆಯೇ? ಆ ಮಟ್ಟಿಗಿನ ಮುಕ್ತತೆಗೆ ನಮ್ಮನ್ನು ಒಡ್ಡಿಕೊಳ್ಳುವ ಅಗತ್ಯವಾದರೂ ಇದೆಯೇ? ಈ ಚಿತ್ರವನ್ನು ಈಗ ಶೂಟ್ ಮಾಡಿದ್ದರೂ ಇಂತಹುದೇ ಪ್ರಶಂಸೆಗಳು ವ್ಯಕ್ತವಾಗುತ್ತಿದ್ದವೇ ಎಂಬಂತಹ ಪ್ರಶ್ನೆಗಳಿಗೆ ಮಿಲಿಂದ್ ಅವರ ಅಡಿಬರಹದಲ್ಲಿ ಸೂಚ್ಯವಾದ ಉತ್ತರ ಸಿಗುತ್ತದೆ.
ಆಧುನಿಕತೆ ಹೆಚ್ಚಿದಷ್ಟೂ ಖಾಸಗಿತನವನ್ನು ಕಳೆದುಕೊಂಡು ನಾನಾ ರೀತಿಯ ವೈರುಧ್ಯಗಳಿಗೆ ಮುಖಾಮುಖಿಯಾಗುತ್ತಿರುವ ಸಮಾಜಕ್ಕೆ ಸದಾ ಅಭದ್ರತಾ ಭಾವ. ಹೀಗಾಗಿಯೇ ಏನೋ ವಿವೇಚನೆಯಿಂದಲೇ ನಿರ್ಣಯಿಸಬಹುದಾದ, ಅತ್ಯಂತ ಸೂಕ್ಷ್ಮವಾಗಿ ಪ್ರತಿಕ್ರಿಯಿಸಬೇಕಾದ ಶೀಲ, ಅಶ್ಲೀಲದಂತಹ ಸಂಗತಿಗಳಿಗೆ ಅದು ಅತಿರೇಕವಾಗಿ ಪ್ರತಿಕ್ರಿಯಿಸುತ್ತದೆ. ಎಲ್ಲೋ ಕಳೆದುಹೋಗುತ್ತಿರುವ ಮಾನವನ್ನು ಇನ್ನೆಲ್ಲೋ ಮುಚ್ಚಿಟ್ಟುಕೊಳ್ಳಲು ಹವಣಿಸುತ್ತದೆ. ಬದಲಾದ ಕಾಲಘಟ್ಟದಲ್ಲಿ, ತೆರೆದ ದಿಡ್ಡಿ ಬಾಗಿಲಿನಲ್ಲಿ ಸೋರಿಹೋಗುತ್ತಿರುವ ಸಂಸ್ಕೃತಿಯನ್ನು ಉಳಿಸಿಕೊಳ್ಳುವ ದಾರಿ ಕಾಣದೆ, ಜರಡಿಯಲ್ಲಿ ಅದನ್ನು ಹಿಡಿದಿಡುವ ವ್ಯರ್ಥ ಪ್ರಯತ್ನಕ್ಕೆ ಮುಂದಾಗುತ್ತದೆ. ಇಂತಹ ಸಾಂಸ್ಕೃತಿಕ ವಕ್ತಾರಿಕೆಯ ಪ್ರತಿನಿಧಿಗಳಾಗಿ ಹುಟ್ಟಿಕೊಳ್ಳುವ ‘ನೈತಿಕ ಪೊಲೀಸರು’ ಸಮಾಜದಲ್ಲಿ ಉರಿಯುವ ಬೆಂಕಿಗೆ ಆಗಾಗ ತುಪ್ಪ ಸುರಿಯುತ್ತಲೇ ಇರುತ್ತಾರೆ. ಆದರೆ ಇಂತಹ ಅತಿರೇಕಗಳಿಗೆ, ಅಪನಂಬಿಕೆಗಳಿಗೆ ಸುಲಭವಾಗಿ ಬಲಿಯಾಗುವುದು ಮಾತ್ರ ಯುವಪೀಳಿಗೆ.
ತಾವು ತೊಡಲು ಮನೆಯಲ್ಲಿ ಅನುಮತಿ ಸಿಗುವ ವಸ್ತ್ರಕ್ಕೆ ಸಾರ್ವಜನಿಕವಾಗಿ ಮಾನ್ಯತೆ ಇಲ್ಲದಿರುವುದನ್ನು ಕಂಡು ಅವರು ಗೊಂದಲಕ್ಕೆ ಒಳಗಾಗುತ್ತಾರೆ. ಸಮಾನಮನಸ್ಕರೊಡನೆ ಬೆಳೆಸುವ ಸ್ನೇಹವೂ ಕೆಲವೊಮ್ಮೆ ಧರ್ಮದ ಸುಳಿಗೆ ಸಿಲುಕಿ ಹುಯಿಲೆಬ್ಬಿಸಿದಾಗ ಆಘಾತಕ್ಕೆ ಒಳಗಾಗುತ್ತಾರೆ. ಓದಿಸಲು, ಉದ್ಯೋಗಕ್ಕೆ ಸೇರಿ ಡಾಲರ್‌ಗಳಲ್ಲಿ ಹಣ ಎಣಿಸಲು ತಮ್ಮ ಮನೆಮಕ್ಕಳನ್ನು ವಿದೇಶಗಳಿಗೆ ಕಳುಹಿಸಿ ಬೀಗುವ ಇದೇ ಮಂದಿ ರಸ್ತೆಗಳಲ್ಲಿ ನಿಂತು, ಪಾಶ್ಚಾತ್ಯ ಅನುಕರಣೆಯ ಅನಾಹುತಗಳ ಬಗ್ಗೆ ತಮಗೆ ನೀತಿ ಪಾಠ ಹೇಳುವುದನ್ನು ಅಚ್ಚರಿಯಿಂದ ಕಣ್ಣಗಲಿಸಿ ನೋಡುತ್ತಾರೆ. ಆರ್ಥಿಕವಾಗಿ ಸಬಲರಾದ ಪೋಷಕರ ನೆರಳಿನಲ್ಲಿ ಬಿಡುಬೀಸಾಗಿ ಬೆಳೆದುಬಂದ ಮಕ್ಕಳು ಅಥವಾ ಮನೆಯಲ್ಲಿನ ಬಡತನಕ್ಕೂ ಥಳುಕು ಬಳುಕಿನ ಹೊರಜಗತ್ತಿಗೂ ತಾಳಮೇಳವೇ ಇಲ್ಲದೆ ಕೀಳರಿಮೆಯಿಂದ ನರಳುವ ಮಕ್ಕಳಲ್ಲಿ ಹೆಚ್ಚಿನವರು ಸ್ವಂತ ವ್ಯಕ್ತಿತ್ವ ರೂಢಿಸಿಕೊಳ್ಳುವಲ್ಲಿ ಸೋಲುವುದು ಇಂತಹ ಕಾಲಘಟ್ಟದಲ್ಲೇ. ಅದರ ಪರಿಣಾಮವು, ಅವರು ಹೆಚ್ಚಾಗಿ ಬಳಸುವ ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಒಂದು ಸಂಗತಿಗೆ ಅವರಿಂದ ವ್ಯಕ್ತವಾಗುವ ಅತಿರೇಕದ ಪ್ರತಿಕ್ರಿಯೆಗಳಲ್ಲಿ ಗೋಚರಿಸುತ್ತಿದೆ. ಇಂತಹ ಮನೋಭಾವದ ಲಾಭ ಪಡೆಯಲು ಮುಂದಾಗುವ ರಾಜಕೀಯ ನೇತಾರರಿಂದಾಗಿ ಸಂಗತಿಗಳು ಇನ್ನಷ್ಟು ಸಂಕೀರ್ಣಗೊಳ್ಳುತ್ತಲೇ ಹೋಗುತ್ತಿವೆ.
ಹೀಗಾಗಿ, ಶಾಲಾ– ಕಾಲೇಜು ಮಕ್ಕಳಿಗೆ ಲೈಂಗಿಕ ಶಿಕ್ಷಣ ನೀಡಬೇಕೆಂಬ ವಿವೇಚನೆಯುಕ್ತ ಪ್ರಯತ್ನಗಳಿಗೂ ಸಮಾಜದಿಂದ ಸಿಗುವುದು ತಣ್ಣೀರೆರಚುವ ಪ್ರತಿಕ್ರಿಯೆಯೇ. ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ಕೆಲ ವರ್ಷಗಳ ಹಿಂದೆ ಇಂತಹದ್ದೊಂದು ಪ್ರಯತ್ನಕ್ಕೆ ಕೈ ಹಾಕಿತ್ತು. ಗುಜರಾತ್, ಮಧ್ಯಪ್ರದೇಶ, ಮಹಾರಾಷ್ಟ್ರ, ಕರ್ನಾಟಕ, ರಾಜಸ್ತಾನ ರಾಜ್ಯಗಳು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದವು. ಈ ಪುಸ್ತಕಗಳಲ್ಲಿನ ಚಿತ್ರಗಳು ಕಾಮಪ್ರಚೋದಕವಾಗಿವೆ ಮತ್ತು ಇಂತಹ ಶಿಕ್ಷಣ ನೀಡುವುದು ನಮ್ಮ ಸಂಸ್ಕೃತಿಗೆ ವಿರುದ್ಧ ಎಂದಿದ್ದ ಹಲವರು, ಯುವಮನಸ್ಸುಗಳ ಮೇಲೆ ಇದು ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಆಕ್ಷೇಪಿಸಿದ್ದರು. ಸಂಗತಿಯನ್ನು ಬಿಚ್ಚಿಟ್ಟು ಪರಿಣಾಮಗಳ ಸಾಧ್ಯಾಸಾಧ್ಯತೆಗಳನ್ನು ಮನದಟ್ಟು ಮಾಡಿಸಿ, ಸರಿ ತಪ್ಪುಗಳ ವಿವೇಚನೆಯನ್ನು ಮಕ್ಕಳಲ್ಲಿ ಮೂಡಿಸುವ ವಿಶಾಲ ದೃಷ್ಟಿಕೋನದ ಮೇಲೆ ಸಂಕುಚಿತ ಮನೋಭಾವ ಮೇಲುಗೈ ಸಾಧಿಸಿತ್ತು. ಗೊಂದಲಗಳು ಎಂದಿನಂತೆ ಮುಂದುವರಿದವು.
ಫ್ಯಾಷನ್ ಹೆಸರಿನಲ್ಲಿ ಬೆನ್ನಿಡೀ ಪ್ರದರ್ಶನಕ್ಕಿಡುವ ರವಿಕೆಗಳು, ಗಾಗ್ರಾ ಚೋಲಿಯಲ್ಲಿ ಇಣುಕುತ್ತಿರುವ ಹೊಕ್ಕಳಿನ ಸುತ್ತ ಚಿತ್ತಾರ ಮೂಡಿಸಿಕೊಂಡು ಸಂಭ್ರಮಿಸುವ ಮನೆಮಕ್ಕಳನ್ನು ಸಮಾರಂಭಗಳಲ್ಲಿ ಕಂಡು ಬೀಗುವ ಮಂದಿಗೆ, ಪಾರ್ಕಿನಲ್ಲಿ ಕೈಕೈ ಹಿಡಿದು ಕೂತ ಪ್ರೇಮಿಗಳು ಹೇವರಿಕೆ ಹುಟ್ಟಿಸುತ್ತಾರೆ, ಪಬ್‌ಗೆ ತೆರಳುವ ಹೆಣ್ಣುಮಕ್ಕಳು ಜಾರಿಣಿಯರಂತೆ ಕಾಣತೊಡಗುತ್ತಾರೆ. ತಮ್ಮಂತೆಯೇ ಬಿಡುಬೀಸಾಗಿ ಬೆಳೆಸಿದ ಇನ್ಯಾರದೋ ಮಕ್ಕಳಿಗೆ ಇವೆಲ್ಲ ತಪ್ಪೆನಿಸದೆ ಸಹಜ ನಡವಳಿಕೆ ಎನಿಸಬಹುದೆಂಬ ಯೋಚನೆಯೂ ಅವರತ್ತ ಸುಳಿಯುವುದಿಲ್ಲ. ಮುಚ್ಚಿದ ಬಟ್ಟೆಯೊಳಗಿನ ಮೈಮಾಟವೂ ಕಾಮುಕ ಮನಸ್ಸುಗಳಿಗೆ ಪ್ರಚೋದಕವಾಗಿಯೇ ಕಾಣಬಹುದಲ್ಲವೇ ಎಂಬ ತರ್ಕಕ್ಕೆಲ್ಲ ಅವರ ಬಳಿ ಉತ್ತರ ಇರದು. ಹೀಗಾಗಿಯೇ ನೈತಿಕ ಪೊಲೀಸ್‌ಗಿರಿಯ ಹೆಸರಿನಲ್ಲಿ ಏನು ಮಾಡುವುದಕ್ಕೂ ಅವರು ಸದಾ ಸಿದ್ಧ. ನೇರವಾಗಿ ಹಲ್ಲೆಗಿಳಿಯುವ, ಖಾಸಗಿತನಕ್ಕೆ ಧಕ್ಕೆ ತರುವ, ಹರೆಯದ ಸೂಕ್ಷ್ಮ ಮನಸ್ಸುಗಳನ್ನು ಕದಡುವ ಪ್ರಯತ್ನ ಆಗಾಗ್ಗೆ ನಡೆಯುತ್ತಲೇ ಇರುತ್ತದೆ.
ಬೆಂಗಳೂರಿನ ಪಾರ್ಕೊಂದರಲ್ಲಿ ಮೊನ್ನೆ ಸ್ಪೋರ್ಟ್ಸ್ ಬ್ರಾ, ಪ್ಯಾಂಟ್ ತೊಟ್ಟು ಸ್ನೇಹಿತೆಯರೊಂದಿಗೆ ವರ್ಕ್‌ಔಟ್ ಮಾಡುತ್ತಿದ್ದ ಸಂಯುಕ್ತಾ ಹೆಗಡೆ ಅವರ ಮೇಲೆ ನಡೆದ ನೈತಿಕ ಪೊಲೀಸ್‌ಗಿರಿಯೂ ಇಂತಹುದೇ ಮನಸ್ಸುಗಳ ಪ್ರತಿಫಲನ. ಜವಾಬ್ದಾರಿಯುತ ಸ್ಥಾನದಲ್ಲಿರುವ ಒಬ್ಬ ನಟಿಯಾಗಿ, ಅಂತಹದ್ದೊಂದು ವಸ್ತ್ರ ತೊಡುವುದು ಆಕೆಗೆ ಅಚ್ಚರಿಯ ಸಂಗತಿಯೇ ಅಲ್ಲದಿರುವಾಗ ಮತ್ಯಾರೋ ಮಹಿಳೆಗೆ ಅದರಲ್ಲಿ ಅಶ್ಲೀಲತೆ ಎದ್ದು ಕಾಣುತ್ತದೆ. ಅದಕ್ಕೆ, ಸ್ವತಃ ಕಾನೂನನ್ನೇ ಕೈಗೆತ್ತಿಕೊಂಡು ಕೈಮಾಡಲೂ ಆಕೆ ಹಿಂಜರಿಯುವುದಿಲ್ಲ. ಜೊತೆಗಿದ್ದವರ ಕುಮ್ಮಕ್ಕಿನಿಂದ ಪೊಲೀಸರ ಸಮ್ಮುದಲ್ಲಿಯೇ ಮುಂದುವರಿದ ಈ ರಾಡಿರಂಪ, ನೈತಿಕ ಪೊಲೀಸ್‌ಗಿರಿಗೆ ಅನಾಯಾಸವಾಗಿ ದಕ್ಕಿಬಿಡುವ ಜನಬೆಂಬಲದ ಅಪಾಯವನ್ನೂ ತೋರುಗಾಣಿಸುತ್ತದೆ. ಮುಂಬೈ ಕೋರ್ಟ್‌ನ ಹೇಳಿಕೆಯು ಪ್ರಸ್ತುತವೆನಿಸುವುದು, ಮಹತ್ವ ಪಡೆದುಕೊಳ್ಳುವುದು ಇಂತಹ ಸಂದರ್ಭಗಳಲ್ಲೇ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.