ADVERTISEMENT

ವಿಶ್ಲೇಷಣೆ: ಆಟಗಾರರ ಆಯ್ಕೆ ಹೀಗೇಕೆ?

ಗಿರೀಶ ದೊಡ್ಡಮನಿ
Published 19 ನವೆಂಬರ್ 2024, 21:18 IST
Last Updated 19 ನವೆಂಬರ್ 2024, 21:18 IST
   

ಕೃಷ್ಣನ್ ಲಕ್ಷ್ಮಣ್ ಶ್ರೀಜಿತ್ ಅವರು ಈಚೆಗೆ ಲಖನೌನಲ್ಲಿ ಉತ್ತರಪ್ರದೇಶ ಎದುರು ನಡೆದ ರಣಜಿ ಟ್ರೋಫಿ ಪಂದ್ಯದಲ್ಲಿ ಕರ್ನಾಟಕ ತಂಡಕ್ಕೆ ಪದಾರ್ಪಣೆ ಮಾಡಿ ಶತಕ ಗಳಿಸಿದರು. ಆಗ ಕರ್ನಾಟಕದ ಹಲವು ಕ್ರಿಕೆಟ್ ಅಭಿಮಾನಿಗಳು ‘ಇಷ್ಟು ದಿವಸ ಎಲ್ಲಿದ್ದ ಈ ಹುಡುಗ?’ ಎಂದು ಅಚ್ಚರಿ ವ್ಯಕ್ತಪಡಿಸಿದ್ದರು. ಎಡಗೈ ಬ್ಯಾಟರ್‌ ಹಾಗೂ ವಿಕೆಟ್‌ಕೀಪರ್‌ ಶ್ರೀಜಿತ್‌ಗೆ ಈಗ 28 ವರ್ಷ ವಯಸ್ಸು. ಆದರೆ, ಬಿಸಿಸಿಐ ಆಯೋಜಿತ ಬೇರೆ ಟೂರ್ನಿಗಳನ್ನು ನೋಡಿದವರಿಗೆ ಶ್ರೀಜಿತ್ ಆಟ ಚಿರಪರಿಚಿತ. ಆದರೆ ಆಯ್ಕೆ ಸಮಿತಿಯವರಿಗೆ ಮಾತ್ರ ಈ ಆಟಗಾರ ಕಂಡಿರಲಿಲ್ಲವೇ?

ಅಭಿನವ್ ಮನೋಹರ್ ಅವರಿಗೆ ಈಗ 30 ವರ್ಷ ದಾಟಿದೆ. ಇಷ್ಟು ದಿನ ಅವರನ್ನು ‘ವೈಟ್‌ಬಾಲ್ ಕ್ರಿಕೆಟ್ ಪರಿಣತ’ ಎಂಬ ಹಣೆಪಟ್ಟಿ ಕಟ್ಟಿ ಕೆಂಪುಚೆಂಡಿನ ಪಂದ್ಯಗಳಿಂದ ದೂರವಿಡಲಾಗಿತ್ತು. ಆದರೆ ಈ ಬಾರಿ ರಣಜಿ ಋತುವಿನಲ್ಲಿ ಆಡುವ ಅವಕಾಶ ಪಡೆದಿರುವ ಮನೋಹರ್, ಮಧ್ಯಮ ಕ್ರಮಾಂಕದಲ್ಲಿ ‘ಟೆಸ್ಟ್ ಮಾದರಿ’ ಕ್ರಿಕೆಟ್ ಆಟಕ್ಕೂ ತಾವು ಸೈ ಎಂದು ತೋರಿಸಿದ್ದಾರೆ. ರಕ್ಷಣಾತ್ಮಕ ಮತ್ತು ಆಕ್ರಮಣಶೀಲ ಕೌಶಲಗಳ ಮಿಶ್ರಣದ ಮೂಲಕ ಬೌಲರ್‌ಗಳಿಗೆ ಸವಾಲೊಡ್ಡಿದ್ದಾರೆ.

ಹೋದ ವರ್ಷದ ರಣಜಿ ಟೂರ್ನಿಯಲ್ಲಿ ಕೆ.ವಿ. ಅನೀಶ್, ಹಾರ್ದಿಕ್ ರಾಜ್, ಸುಜಯ್ ಸತೇರಿ, ಧೀರಜ್ ಗೌಡ, ಎಡಗೈ ಸ್ಪಿನ್ನರ್ ರೋಹಿತ್ ಕುಮಾರ್, ಆಫ್‌ಸ್ಪಿನ್ನರ್ ಶಶಿಕುಮಾರ್ ಕಾಂಬ್ಳೆ ಮತ್ತು ಕಿಶನ್ ಬೆದಾರೆ ಅವರು ಕರ್ನಾಟಕ ತಂಡಕ್ಕೆ ಪದಾರ್ಪಣೆ ಮಾಡಿದ್ದರು. ಇವರಲ್ಲಿ ಈ ಬಾರಿ ತಂಡದಲ್ಲಿ ಉಳಿದಿದ್ದು ಹಾರ್ದಿಕ್, ಸುಜಯ್ ಹಾಗೂ ಕಿಶನ್ ಮಾತ್ರ. ಹೋದ ಋತುವಿನಲ್ಲಿ ತಲಾ ಮೂರು ಪಂದ್ಯ ಆಡಿದ್ದ ರೋಹಿತ್ 14 ವಿಕೆಟ್ ಹಾಗೂ ಶಶಿಕುಮಾರ್ 6 ವಿಕೆಟ್ ಗಳಿಸಿದ್ದರು. ಆದರೆ ಈ ಬಾರಿ ಅವರಿಗೆ ಸ್ಥಾನವೇ ಇಲ್ಲ. ಕೇರಳ ತಂಡಕ್ಕೆ ಆಡುತ್ತಿದ್ದ ಅನುಭವಿ ಶ್ರೇಯಸ್ ಗೋಪಾಲ್ ಈಗ ಕರ್ನಾಟಕ ತಂಡಕ್ಕೆ ಮರಳಿದ್ದಾರೆ ಮತ್ತು ನವಪ್ರತಿಭೆ ಮೊಹಸೀನ್ ಖಾನ್ ಸ್ಥಾನ ಪಡೆದಿದ್ದಾರೆ.

ADVERTISEMENT

ಎರಡು ವರ್ಷಗಳ ಹಿಂದೆ, 19 ವರ್ಷದೊಳಗಿನವರ ಟೂರ್ನಿಯಲ್ಲಿ ರನ್‌ಗಳ ಹೊಳೆ ಹರಿಸಿದ್ದ ವಿಶಾಲ್ ಓನತ್ ಅವರಿಗೆ ಕರ್ನಾಟಕ ರಣಜಿ ತಂಡದಲ್ಲಿ ಆಡಲು ಇದ್ದಕ್ಕಿದ್ದಂತೆ ಅವಕಾಶ ನೀಡಲಾಯಿತು. ವೈಫಲ್ಯ ಅನುಭವಿಸಿದ ಆ ಹುಡುಗ ನಂತರ ರಣಜಿ ತಂಡದಲ್ಲಿ ಕಾಣಿಸಿಕೊಂಡಿಲ್ಲ. ವಿಶಾಲ್‌ ಅವರಿಗೆ ಅವಕಾಶ
ಕಲ್ಪಿಸಿದ್ದರಿಂದ ಅನುಭವಿ ಆಟಗಾರರನ್ನು ಬೆಂಚ್‌ ಮೇಲೆ ಕೂರಿಸಬೇಕಾಯಿತು.

ಕಳೆದ 3–4 ವರ್ಷಗಳಲ್ಲಿ ಕರ್ನಾಟಕ ಕ್ರಿಕೆಟ್ ತಂಡದ ಆಯ್ಕೆಯಲ್ಲಿ ನಡೆಯುತ್ತಿರುವ ಪ್ರಯೋಗಗಳಲ್ಲಿ ಆಯ್ದ ಉದಾಹರಣೆಗಳು ಇವು. ಒಂದು ಬಲಿಷ್ಠ ತಂಡವನ್ನು ಕಟ್ಟಲು ಪ್ರಯೋಗಗಳು ಅಗತ್ಯ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ, ಸಿಕ್ಕ ಅವಕಾಶದಲ್ಲಿ ಚೆನ್ನಾಗಿ ಆಡುವ ಭರವಸೆ ಮೂಡಿಸಿದವರನ್ನು ಕೈಬಿಡುವುದು ಸರಿಯೇ? ಶ್ರೀಜಿತ್, ಮನೋಹರ್ ಅವರನ್ನು ಇಲ್ಲಿಯವರೆಗೆ ಆಯ್ಕೆ ಮಾಡದಿರುವುದು,  ಅಲ್ಲದೆ, ಹೋದ ಋತುವಿನಲ್ಲಿ ತಂಡಕ್ಕೆ ಆಸರೆಯಾಗಿದ್ದ ಉದಯೋನ್ಮುಖ ಸ್ಪಿನ್ನರ್‌ಗಳಿಗೆ ಮತ್ತೊಂದು ಆವಕಾಶ ನೀಡದಿರುವುದು ಎಷ್ಟು ಸರಿ?

ಈ ಹಿಂದೆ ಕೆ.ಎಲ್. ರಾಹುಲ್, ಮಯಂಕ್ ಅಗರವಾಲ್, ಕರುಣ್ ನಾಯರ್ ಸೇರಿದಂತೆ ಹಲವು ಆಟಗಾರರು ಆಡಲು ಅವಕಾಶ ಪಡೆಯುವ ಮುನ್ನ ಎರಡು–ಮೂರು ಋತುಗಳಲ್ಲಿ ತಂಡದ ಬೆಂಚ್‌ನಲ್ಲಿದ್ದರು. ಆದರೆ ಈಗ ತಂಡದೊಳಗೆ ಬಂದ ಕೂಡಲೇ ಆಡಲು ಅವಕಾಶ ಕಲ್ಪಿಸುವುದು, ನಂತರ ಕೈಬಿಡುವ ಪರಿಪಾಟ ಶುರುವಾಗಿದೆ. ಕರ್ನಾಟಕ ತಂಡವು ‘ಪ್ರತಿಭಾ ನಿರ್ವಹಣೆ’ಯ ಒತ್ತಡವನ್ನು ಎದುರಿಸುತ್ತಿರುವುದರ ಸೂಚನೆ ಇದು. ದಶಕಗಳ ಹಿಂದೆ ಭಾರತ ತಂಡದಲ್ಲಿ ಆರು ಜನ ಕನ್ನಡಿಗರು ಸ್ಥಾನ ಪಡೆದಾಗ, ಬೆಂಚ್‌ನಲ್ಲಿ ಅವರಷ್ಟೇ ಸಮರ್ಥರು ಇದ್ದರು. ಪ್ರಮುಖರ ಗೈರಿನಲ್ಲಿಯೇ ಬೆಂಚ್ ಹುಡುಗರು ಕರ್ನಾಟಕ ತಂಡವನ್ನು ನಾಕೌಟ್‌ಗೆ ಪ್ರವೇಶಿಸುವಂತೆ ಮಾಡಿದ ಉದಾಹರಣೆಗಳು ಸಾಕಷ್ಟಿವೆ. ಆದರೆ ಈಗ ಬೆಂಚ್ ಶಕ್ತಿ ನಿಧಾನವಾಗಿ ಕ್ಷೀಣಿಸುತ್ತಿರುವುದು ಸುಳ್ಳಲ್ಲ. ಒಂದೆಡೆ ಅನುಭವಿ ಆಟಗಾರರು ವೈಫಲ್ಯ ಅನುಭವಿಸುತ್ತಿದ್ದಾರೆ. ಇನ್ನೊಂದೆಡೆ ಹೊಸ ಹುಡುಗರು ಅನುಭವದ ಕೊರತೆಯಿಂದ ಗೆಲ್ಲುವ ಪಂದ್ಯಗಳನ್ನು
ಕೈಚೆಲ್ಲುತ್ತಿದ್ದಾರೆ.

ಅದರ ಪರಿಣಾಮ ಈ ಬಾರಿಯ ರಣಜಿ ಟೂರ್ನಿಯಲ್ಲಿ ಢಾಳಾಗಿ ಕಾಣಿಸುತ್ತಿದೆ. ಕರ್ನಾಟಕಕ್ಕೆ ಈಗ ನಾಕೌಟ್ ಹಂತ ತಲುಪುವುದು ದುಸ್ತರವಾಗಿದೆ. ಈ ಸಲದ ರಣಜಿ ಋತು ಎರಡು ಭಾಗಗಳಲ್ಲಿ ನಡೆಯುತ್ತಿದೆ. ಮೊದಲ ಹಂತದಲ್ಲಿ ನಡೆದ ಐದು ಪಂದ್ಯಗಳಲ್ಲಿ ಕರ್ನಾಟಕ ಒಂದರಲ್ಲೂ ಸೋತಿಲ್ಲ. ಗುಂಪಿನ ಇನ್ನೆರಡು ಪಂದ್ಯಗಳು ಮತ್ತು ನಾಕೌಟ್ ಹಣಾಹಣಿಗಳು ಮುಂದಿನ ಜನವರಿ–ಫೆಬ್ರುವರಿಯಲ್ಲಿ ನಡೆಯಲಿವೆ.

‘ಸಿ’ ಗುಂಪಿನ ಮೊದಲೆರಡೂ ಪಂದ್ಯಗಳು ಮಳೆಗೆ ಕೊಚ್ಚಿಹೋದವು. ಮೂರನೇ ಪಂದ್ಯದಲ್ಲಿ ಬಲಿಷ್ಠವಲ್ಲದ ಬಿಹಾರ ಎದುರು ಜಯಿಸಿತು. ಆದರೆ ಬೆಂಗಳೂರಿನಲ್ಲಿಯೇ ನಡೆದ ಪಂದ್ಯದಲ್ಲಿ ಬಂಗಾಳ ಎದುರು ಮೊದಲ ಇನಿಂಗ್ಸ್ ಹಿನ್ನಡೆ ಅನುಭವಿಸಿ ಡ್ರಾ ಮಾಡಿಕೊಂಡಿತು. ಈಚೆಗೆ ಲಖನೌನಲ್ಲಿ ಉತ್ತರಪ್ರದೇಶ ತಂಡವನ್ನು ಮೊದಲ ಇನಿಂಗ್ಸ್‌ನಲ್ಲಿ 89 ರನ್‌ಗಳಿಗೆ ಆಲೌಟ್ ಮಾಡಿತ್ತು. ನಂತರ ಉತ್ತಮ ಮುನ್ನಡೆ ಪಡೆಯುವಲ್ಲಿಯೂ ಯಶಸ್ವಿಯಾಗಿತ್ತು. ಆದರೆ ಎರಡನೇ ಇನಿಂಗ್ಸ್‌ನಲ್ಲಿ ಆತಿಥೇಯ ತಂಡವು 400ಕ್ಕೂ ಹೆಚ್ಚು ರನ್‌ಗಳ ಮೊತ್ತ ಪೇರಿಸಿತು. ಅದನ್ನು ತಡೆಯಲು ಕರ್ನಾಟಕ ಬೌಲರ್‌ಗಳಿಗೆ ಆಗಲಿಲ್ಲ. 

ವೈಶಾಖ ವಿಜಯಕುಮಾರ್, ವಿದ್ವತ್ ಕಾವೇರಪ್ಪ ಮತ್ತು ಪ್ರಸಿದ್ಧ ಕೃಷ್ಣ ಅವರ ಗೈರುಹಾಜರಿಯಲ್ಲಿ ಮಧ್ಯಮ
ವೇಗಿ ವಾಸುಕಿ ಕೌಶಿಕ್ ಅವರೊಬ್ಬರೇ ತಂಡಕ್ಕೆ ಆಸರೆಯಾಗಿದ್ದಾರೆ. ಅವರಿಗೆ ವಿದ್ಯಾಧರ್ ಪಾಟೀಲರು ಒಂದಿಷ್ಟು ಬೆಂಬಲ ನೀಡಿದರು. ಬಂಗಾಳ ಎದುರಿನ ಪಂದ್ಯದಲ್ಲಿ ಪದಾರ್ಪಣೆ ಮಾಡಿ ಒಟ್ಟು 3 ವಿಕೆಟ್ ಗಳಿಸಿದ್ದ ಎಡಗೈ ವೇಗಿ ಅಭಿಲಾಷ್ ಶೆಟ್ಟಿ ಅವರನ್ನು ಲಖನೌ ಪಂದ್ಯದಲ್ಲಿ ಕೈಬಿಡಲಾಗಿತ್ತು. ಎಸ್. ಅರವಿಂದ್ ನಂತರ ರಾಜ್ಯ ತಂಡಕ್ಕೆ ಒಬ್ಬ ಎಡಗೈ ವೇಗಿಯ ಸ್ಥಾನ ತುಂಬುವ ಭರವಸೆ ಮೂಡಿಸಿದ ಅಭಿಲಾಷ್ ಬದಲು ಬಲಗೈ ಬೌಲರ್ ಯಶೋವರ್ಧನ್ ಪರಂತಾಪ್ ಅವರನ್ನು ಕಣಕ್ಕಿಳಿಸಿದ್ದು ಅಚ್ಚರಿ ಮೂಡಿಸಿತ್ತು.

ಸ್ಪಿನ್ ವಿಭಾಗದಲ್ಲಿ ಮಾತ್ರ ರಾಜ್ಯದ ಸ್ಥಿತಿ ಅಷ್ಟೇನೂ ಉತ್ತಮವಾಗಿಲ್ಲ.  ಲೆಗ್‌ಸ್ಪಿನ್ನರ್ ಶ್ರೇಯಸ್ ಅವರೊಬ್ಬರಿಗೇ ಒತ್ತಡ ನಿಭಾಯಿಸಲು ಸಾಧ್ಯವಾಗುತ್ತಿಲ್ಲ. ಬೌಲಿಂಗ್ ಜೊತೆಗೆ ಕೆಳಕ್ರಮಾಂಕದ ಬ್ಯಾಟಿಂಗ್‌ನಲ್ಲಿಯೂ ಅವರು ರನ್‌ಗಳ ಕಾಣಿಕೆ ನೀಡುವತ್ತ ಗಮನ ಕೊಡುತ್ತಿದ್ದಾರೆ. ಅವರಿಗೆ ಈ ಹಿಂದೆ ಕೃಷ್ಣಪ್ಪ ಗೌತಮ್ ಉತ್ತಮ ಜೊತೆಗಾರ ಆಗಿದ್ದರು. ಆದರೆ ಈಗ ಯಾರೂ ಇಲ್ಲ. ಇದರಿಂದಾಗಿ ಎದುರಾಳಿ ತಂಡದ ಪ್ರಮುಖ ಜೊತೆಯಾಟಗಳನ್ನು ಮುರಿಯುವ ಮತ್ತು ಪಂದ್ಯ ಗೆಲ್ಲಿಸುವ ಸ್ಪಿನ್ನರ್‌ ಆಗಿ ಹೊರಹೊಮ್ಮಲು ಶ್ರೇಯಸ್ ಅವರಿಗೆ ಸಾಧ್ಯವಾಗುತ್ತಿಲ್ಲ. ಕ್ರಿಕೆಟ್ ಲೋಕಕ್ಕೆ ಸ್ಪಿನ್ ದಿಗ್ಗಜರನ್ನು ನೀಡಿದ ತಂಡವು ಇಂತಹದ್ದೊಂದು ಪರಿಸ್ಥಿತಿ ಎದುರಿಸಲು ಕಾರಣಗಳಾದರೂ ಯಾವುವು?

ಬ್ಯಾಟಿಂಗ್‌ನಲ್ಲಿ ಆರಂಭಿಕ ಜೋಡಿ ಮಯಂಕ್ ಮತ್ತು ನಿಕಿನ್ ಜೋಸ್ ಅವರು ವಿಫಲರಾಗುತ್ತಿದ್ದಾರೆ. ಹೊಸ ಪ್ರತಿಭೆ ಆರ್. ಸ್ಮರಣ್ 30–35 ರನ್‌ ಗಳಿಸುವವರೆಗೆ ಚೆನ್ನಾಗಿಯೇ ಅಡುತ್ತಾರೆ. ಅವರ ಕೌಶಲಗಳು, ಬ್ಯಾಟ್‌ ಫ್ಲೋ ಮತ್ತು ಪಾದಚಲನೆ ಆಕರ್ಷಕವಾಗಿವೆ. ಆದರೆ ಅವರಿಗೆ ದೊಡ್ಡ ಇನಿಂಗ್ಸ್‌ ಕಟ್ಟಲಾಗುತ್ತಿಲ್ಲ. ಮನೀಷ್ ಪಾಂಡೆ ಅವರ ಬ್ಯಾಟ್‌ನಿಂದ ರನ್‌ಗಳು ಈ ಮೊದಲಿನಂತೆ ಹರಿಯುತ್ತಿಲ್ಲ. ಆದರೆ ಫೀಲ್ಡಿಂಗ್‌ನಲ್ಲಿ ಅವರು ಎಂದಿನಂತೆ ಚುರುಕಾಗಿದ್ದಾರೆ ಎನ್ನುವುದು ಸಮಾಧಾನಕರ.  

‘ನಮ್ಮ ತಂಡವು ಈಗ ಬದಲಾವಣೆ ಪರ್ವದಲ್ಲಿದೆ. ಹೊಸಬರು ಹೊಂದಿಕೊಳ್ಳಲು ಸಮಯ ಬೇಕು. ಅವರಿಗೆ ಅವಕಾಶ ನೀಡಲಾಗುತ್ತಿದೆ’ ಎಂದು ನಾಯಕ ಮಯಂಕ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು. ಆದರೆ ಒಂದು ದಶಕದಿಂದ ರಾಜ್ಯ ತಂಡವು ಎದುರಿಸುತ್ತಿರುವ ರಣಜಿ ಟ್ರೋಫಿ ಗೆಲುವಿನ ಬರವನ್ನು ನೀಗಿಸುವುದು ಯಾವಾಗ ಎಂಬ ಪ್ರಶ್ನೆಗೆ ಮಾತ್ರ ಉತ್ತರ ಸುಲಭವಲ್ಲ. ಈ ರಣಜಿ ಋತುವಿನಲ್ಲಿ ಆ ಕನಸು ಕೈಗೂಡುವುದೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.