ADVERTISEMENT

ವಿಶ್ಲೇಷಣೆ | ವೈಚಾರಿಕ ಚಿಂತನೆ ಮತ್ತು ಸಮಗ್ರ ಭಾರತ

ಎಡ – ಬಲ ದರ್ಶನಗಳ ಬೆಸುಗೆಯಿಂದ ಸಮೃದ್ಧ ಭಾರತ

ಡಾ.ಶಿವಮೂರ್ತಿ ಮುರುಘಾ ಶರಣರು
Published 9 ಜೂನ್ 2020, 1:25 IST
Last Updated 9 ಜೂನ್ 2020, 1:25 IST
   

ಫ್ರೆಂಚ್‌ ಕ್ರಾಂತಿಯ ಸಂದರ್ಭದಲ್ಲಿ ರಾಜಕಾರಣಿಗಳ ಆಸನ ವ್ಯವಸ್ಥೆಗಾಗಿ ಆರಂಭವಾದ ಒಂದು ಪದ್ಧತಿಯು ಈವರೆಗೆ ಜೀವಂತಿಕೆಯನ್ನು ಉಳಿಸಿಕೊಳ್ಳುತ್ತಾ ಬಂದಿದೆ. ಫ್ರಾನ್ಸ್‌ನ ರಾಷ್ಟ್ರೀಯ ಅಸೆಂಬ್ಲಿ ಸದಸ್ಯರು ಸಂವಿಧಾನ ರೂಪಿಸುವ ಸಲುವಾಗಿ 1789ರ ಬೇಸಿಗೆಯಲ್ಲಿ ಸಭೆ ಸೇರಿದ್ದರು. ಆಗ, ಅಲ್ಲಿನ ರಾಜನಿಗೆ ಎಷ್ಟು ಅಧಿಕಾರ ಇರಬೇಕು ಎಂಬ ಬಗ್ಗೆ ತೀವ್ರ ಭಿನ್ನಾಭಿಪ್ರಾಯ ಉಂಟಾಗಿ, ಸದಸ್ಯರು ಎರಡು ಗುಂಪುಗಳಾಗಿ ವಿಭಜನೆಗೊಂಡರು. ರಾಜಪ್ರಭುತ್ವ ವಿರೋಧಿ ಕ್ರಾಂತಿಕಾರಿಗಳು ಸ್ವಯಂಪ್ರೇರಿತರಾಗಿ ಸಭಾಧ್ಯಕ್ಷರ ಎಡಬದಿಯಲ್ಲಿ ಕುಳಿತುಕೊಂಡರೆ, ರಾಜಪ್ರಭುತ್ವನಿಷ್ಠ ಶ್ರೀಮಂತ ಬೆಂಬಲಿಗರು ಬಲಭಾಗದಲ್ಲಿ ಒಟ್ಟುಗೂಡಿದರು.

ಇಂತಹ ವಿಭಜನೆ ನಂತರವೂ ಮುಂದುವರಿಯಿತಲ್ಲದೆ, ‘ಉದಾರವಾದಿ ಎಡಗುಂಪು’ ಮತ್ತು ‘ಸಂಪ್ರದಾಯವಾದಿ ಬಲಗುಂಪು’ ಎಂದು ಪತ್ರಿಕೆಗಳು ಉಲ್ಲೇಖಿಸತೊಡಗಿದವು. ಕಾಲಕ್ರಮೇಣ ಈ ಪದ್ಧತಿ ಇತರ ದೇಶಗಳಿಗೂ ಹಬ್ಬಿತಲ್ಲದೆ, ಬಲಗಡೆ ಕುಳಿತು ವ್ಯವಸ್ಥೆಯ ಪರವಾಗಿ ವಾದ ಮಂಡಿಸುವವರನ್ನು ಬಲಪಂಥೀಯರೆಂದೂ ಎಡಭಾಗದಲ್ಲಿ ಕುಳಿತು ವಾದಸರಣಿ ಮಂಡಿಸುವವರನ್ನು ಎಡಪಂಥೀಯರೆಂದೂ ಗುರುತಿಸಲಾಯಿತು.

ಹೀಗಾಗಿ, ಸಂಪ್ರದಾಯಬದ್ಧವಾಗಿ ಆಲೋಚಿಸುವವರದು ಬಲಪಂಥೀಯ ಧೋರಣೆಯೆಂದು ಹೆಸರಾಗಿದ್ದು, ಇಡೀ ವ್ಯವಸ್ಥೆಯು ಅದರ ಪರವಾಗಿಯೇ ನಿಲ್ಲುತ್ತದೆ. ಬಲಪಂಥೀಯ ಧೋರಣೆಯಲ್ಲಿನ ದೌರ್ಬಲ್ಯಗಳನ್ನು ಪತ್ತೆ ಹಚ್ಚುವ ಕೆಲಸವು ನಿನ್ನೆ ಮೊನ್ನೆಯದಲ್ಲ. ಬಹುಪಾಲು ಸಂದರ್ಭಗಳಲ್ಲಿ ಬಲಪಂಥೀಯರೇ ವ್ಯವಸ್ಥೆಯ ನಿಯಂತ್ರಕರು. ಸಮಾಜವು ಬಲಪಂಥೀಯ ಧೋರಣೆಗಳನ್ನೇ ಹೆಚ್ಚಿಗೆ ಒಳಗೊಳ್ಳುತ್ತಾ ಬಂದಿದೆ.

ADVERTISEMENT

ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತ ಬಂದಿರುವುದು ಜಾತೀಯತೆ. ಜಾತಿಯಿಂದ ಹಿಂದುಳಿದವರನ್ನು ಸಮಾಜವು ದೂರವಿಡುತ್ತಲೇ ಬಂದಿದೆ. ವ್ಯವಸ್ಥೆಯನ್ನು ಆಳುತ್ತಾ ಬಂದವರು ಸಾಮಾಜಿಕ ನೀತಿಗಳನ್ನು ನಿರೂಪಿಸಿದ್ದಾರೆ. ಅದರಲ್ಲೂ ಪುರುಷಪ್ರಧಾನ ಸಮಾಜದಲ್ಲಿ ಪುರುಷನಿಗೇ ಒಂದು ಕಾನೂನು, ಸ್ತ್ರೀಯರಿಗೇ ಒಂದು ಕಾನೂನು ನಿರೂಪಿಸಲಾಗಿದೆ. ಪುರುಷನಿಗೆ ಪ್ರಥಮ ಆದ್ಯತೆ ನೀಡಲಾಗಿದೆ. ಇಲ್ಲಿಯೂ ಬಲ-ಎಡ ಭಾವನೆಗಳು ಸೃಷ್ಟಿಗೊಂಡವು. ಪುರುಷನು ಬಲಗಡೆ ಹಾಗೂ ಸ್ತ್ರೀಯು ಎಡಗಡೆ (ಮದುವೆ ಮುಂತಾದ ಸಂದರ್ಭಗಳಲ್ಲಿ)ಕೂರಬೇಕೆಂಬ ಪದ್ಧತಿ. ವಿದೇಶದಲ್ಲಿ ಉಂಗುರ ಬದಲಿಸಿಕೊಳ್ಳುವ ಪದ್ಧತಿ. ಬಲಗೈ ಶ್ರೇಷ್ಠ, ಎಡಗೈ ಕನಿಷ್ಠ ಎಂಬಂತೆ ಬಲಗಾಲು ಉತ್ತಮ, ಎಡಗಾಲು ಅಧಮ ಎಂದು ಕಲ್ಪಿಸಲಾಗಿದೆ.

ಜಾತಿಯ ಜ್ಯೇಷ್ಠತೆ, ಸಾಮಾಜಿಕ ಅಸಮಾನತೆ, ಲಿಂಗತಾರತಮ್ಯ ಇತ್ಯಾದಿ ಪ್ರಶ್ನಿಸುವವರುಎಡಪಂಥೀಯರಾಗುತ್ತಾರೆ. ಸಾಮಾಜಿಕ ನ್ಯಾಯದಿಂದ ವಂಚಿತರಾದವರಿಗೆ ಅದನ್ನು ಕೊಡಿಸಲು ಮುಂದಾದರೆ, ಎಡಪಂಥೀಯರು ಎಂಬ ಹಣೆಪಟ್ಟಿ ಕಟ್ಟಲಾಗುತ್ತದೆ. ಎರಡೂವರೆ ಸಾವಿರ ವರ್ಷಗಳ ಹಿಂದೆ ಜನಿಸಿ, ಮಾನವ ಲೋಕದ ಜಟಿಲ ವ್ಯವಸ್ಥೆಯನ್ನು ಪ್ರಶ್ನಿಸಿದ ಬುದ್ಧ. ಅವನ ಕಾರಣಕ್ಕಾಗಿ ಮಾನವ ಸ್ವಾತಂತ್ರ್ಯ ಎತ್ತಿಹಿಡಿಯಲ್ಪಟ್ಟಿತು.

ಎರಡು ಸಾವಿರ ವರ್ಷಗಳ ಹಿಂದೆ ಹುಟ್ಟಿದಂತಹ ಏಸುಕ್ರಿಸ್ತ, ಅಂದಿನ ಸಾಮ್ರಾಜ್ಯಶಾಹಿಗಳನ್ನು ಎದುರು ಹಾಕಿಕೊಂಡು, ತನ್ನ ಅನಿಸಿಕೆಗಳನ್ನು ಮುಕ್ತವಾಗಿ ಅಭಿವ್ಯಕ್ತಿಸಿದ; ಪರಿತ್ಯಕ್ತ ಮಹಿಳೆಯರ ಹಕ್ಕುಗಳನ್ನು ಸಂರಕ್ಷಿಸಿದ. ಮಹಿಳೆಯರ ಹಕ್ಕುಗಳಿಗಾಗಿ ಸಾವಿರದ ನಾನೂರು ವರ್ಷಗಳಿಗೂ ಹಿಂದೆ ಹೋರಾಡಿದ ಧೀಮಂತ ವ್ಯಕ್ತಿ ಮೊಹಮ್ಮದ್ ಪೈಗಂಬರ್. ಮಹಾವೀರಾದಿ ತೀರ್ಥಂಕರರು ಅಹಿಂಸೆಯನ್ನು ಬೋಧಿಸುತ್ತ ಒಂದು ನಾಗರಿಕ ಸಮಾಜದ ರಚನೆಗೆ ಸ್ಫೂರ್ತಿ ನೀಡಿದರು. ರಾಮಾನುಜಾಚಾರ್ಯರು,ಮಧ್ವಾಚಾರ್ಯರು ಧರ್ಮದ ಹೆಸರಿನಲ್ಲಿ ನಡೆಯುತ್ತಿದ್ದಂತಹ ಕರ್ಮಠತನದ ವಿರುದ್ಧ ಹೋರಾಡಿದರು. ಒಂಬೈನೂರು ವರ್ಷಗಳ ಹಿಂದೆ ಸ್ತ್ರೀಸಮಾನತೆ ಮತ್ತು ಅಸ್ಪೃಶ್ಯತಾ ನಿವಾರಣೆಗೆ 770 ಅಮರ ಗಣಗಳೊಂದಿಗೆ ಕ್ರಾಂತಿ ಮಾಡಿದ ಕೀರ್ತಿ ಬಸವಣ್ಣನವರದು.

ಶರಣ ಚಳವಳಿಯ ನಂತರ ಗುರುನಾನಕರು, ಕೇರಳದ ನಾರಾಯಣ ಗುರುಗಳು, ಕನಕ-ಪುರಂದರ ದಾಸರು, ಶಿಶುನಾಳ ಶರೀಫರು, ಜ್ಯೋತಿಬಾ ಫುಲೆ, ಮೀರಾಬಾಯಿ, ಬಂದೇನವಾಜ್ ಅಲ್ಲದೆ ಸೂಫಿಸಂತರು, ಕವಿ ವೇಮನ, ಹೇಮರಡ್ಡಿ ಮಲ್ಲಮ್ಮ, ಸಂತ ಕಬೀರದಾಸ್, ತಿರುವಳ್ಳುವರ್ ಮುಂತಾದವರು ಭಕ್ತಿಪಂಥದ ಮುಖಾಂತರ ಸಮಾಜ ಪರಿವರ್ತನೆಗೆ ಒತ್ತಾಸೆಯಾದರು. ದಯಾನಂದ ಸರಸ್ವತಿ, ವಿನೋಬಾ ಭಾವೆ, ಸ್ವಾಮಿ ವಿವೇಕಾನಂದ, ಸ್ವಾತಂತ್ರ್ಯ ಸಂಗ್ರಾಮದ ನೇತೃತ್ವ ವಹಿಸಿದ ಗಾಂಧೀಜಿ, ಸಂವಿಧಾನಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್‌ ಅವರು ಸಮಾಜದಲ್ಲಿ ಬೇರು ಬಿಟ್ಟಿದ್ದಂತಹ ಅಮಾನವೀಯ ಆಚರಣೆಗಳನ್ನು ಮತ್ತು ಅಸಮಾನತೆಯನ್ನು ಪ್ರಶ್ನಿಸಿದರು.

ಹೊರರಾಷ್ಟ್ರದಲ್ಲಿ ಸಮಾಜ ಪರಿವರ್ತನೆಗಾಗಿ ಷೇಕ್ಸ್‌ಪಿಯರ್, ಸಾಕ್ರೆಟಿಸ್, ಅಬ್ರಹಾಂ ಲಿಂಕನ್, ಕಾರ್ಲ್‌ಮಾರ್ಕ್ಸ್‌, ಮಾರ್ಟಿನ್ ಲೂಥರ್‌ ಕಿಂಗ್ ಮುಂತಾದವರು ಸಮಸಮಾಜದ ರಚನೆಗೆ ಏನೆಲ್ಲ ಕಷ್ಟ ಅನುಭವಿಸಿದರು. ಜಗತ್ತಿನಲ್ಲಿ ನಡೆದಂತಹ ಶರಣಕ್ರಾಂತಿ, ಫ್ರೆಂಚ್‍ಕ್ರಾಂತಿ, ರಷ್ಯಾಕ್ರಾಂತಿ, ಅಮೆರಿಕ ಕ್ರಾಂತಿ ಮುಂತಾದ ಕ್ರಾಂತಿಗಳು ಸಮಾಜ ಸುಧಾರಣೆ ಮತ್ತು ಸಮಸಮಾಜ ನಿರ್ಮಾಣಕ್ಕಾಗಿ ನಡೆದಂತಹವು. ಸರ್ವಕ್ರಾಂತಿಗಳು ಬಡತನ, ಹಸಿವು, ಅಸಮಾನತೆ, ನಿರುದ್ಯೋಗ, ಅಂಧಶ್ರದ್ಧೆ ಮುಂತಾದವುಗಳ ನಿವಾರಣೆಗೆ ಎಂಬುದನ್ನು ಮರೆಯುವಂತಿಲ್ಲ. ಮತ-ಧರ್ಮಗಳು ಅಂತರವನ್ನು ಸೃಷ್ಟಿಸುತ್ತವೆಂದು ಜಾತ್ಯತೀತತೆಯನ್ನು (ಧರ್ಮನಿರಪೇಕ್ಷತೆ) ಹಲವಾರು ರಾಷ್ಟ್ರಗಳು ಒಪ್ಪಿಕೊಂಡಿವೆ. ಚೀನಾದಂತಹ ಕಮ್ಯುನಿಸ್ಟ್ ರಾಷ್ಟ್ರವು ಸಮತಾವಾದವನ್ನು (ಕಮ್ಯುನಿಸಮ್) ಪುರಸ್ಕರಿಸಿದೆ. ಎಡಪಂಥವನ್ನು ದ್ವೇಷಿಸುವುದೆಂದರೆ ಸರ್ವದಾರ್ಶನಿಕರನ್ನು ದ್ವೇಷಿಸಿದಂತೆ. ಎಡಪಂಥೀಯ ಧೋರಣೆಗೆ ತನ್ನದೇ ಆದ ಬದ್ಧತೆಗಳಿದ್ದು ಅದು ಅತಿವಾದ ಆಗಬಾರದಷ್ಟೇ.

ಪ್ರತಿಶತ 10-20ರಷ್ಟಿರುವ ಎಡಪಂಥೀಯರ ತುಡಿತವು ಶೇ 80ಕ್ಕೂ ಹೆಚ್ಚು ಜನರ ಹಕ್ಕುಬಾಧ್ಯತೆಗಳನ್ನು ಎತ್ತಿಹಿಡಿಯುವುದಕ್ಕಾಗಿ ಎಂಬುದನ್ನು ಕಡೆಗಣಿಸುವಂತಿಲ್ಲ. ಕೆಲವರ ಅತಿವಾದ, ಅತಿವರ್ತನೆ, ಅತಿಧೋರಣೆಯಿಂದಾಗಿ ಎಡಪಂಥೀಯರನ್ನು ಸಂದೇಹಿಸುವಂತಾಗಿದೆ. ಎಡಪಂಥೀಯ ಮಂಡನೆಯು ಶುಷ್ಕ ವಿಚಾರಧಾರೆ ಆಗಬಾರದು. ಅದು ತನ್ನ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕಾಗಿದೆ. ಬಲಪಂಥವು ಎಡಪಂಥದಿಂದ ಉಂಟಾದ ಸಾಮಾಜಿಕ ಸುಧಾರಣೆಯನ್ನು ಗೌರವಿಸಬೇಕಾಗಿದೆ. ದಾರ್ಶನಿಕರು ಬದುಕಿದ್ದಾಗ ಅವರ ಪ್ರಗತಿಪರ ಹೆಜ್ಜೆಗಳನ್ನು ವಿರೋಧಿಸಿದ ಸಂಪ್ರದಾಯಬದ್ಧ ಸಮಾಜವು, ನಂತರದಲ್ಲಿ ಅವರ ತತ್ವಗಳನ್ನು ಒಪ್ಪಿಕೊಂಡಿದೆ.

ಶಾರೀರಿಕವಾಗಿಯೂ ಎಡಗೈಗಿಂತ ಬಲಗೈ ಹೆಚ್ಚು ಶಕ್ತಿಶಾಲಿ ಮತ್ತು ಸಮರ್ಥವಾಗಿದ್ದು, ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತದೆ, ತೀರ್ಥ-ಪ್ರಸಾದ ಮತ್ತು ದಾನಾದಿಗಳನ್ನು ಎಡಗೈಲಿ ನೀಡಬಾರದು ಎಂಬ ಮೌಢ್ಯವನ್ನು ಬಿತ್ತಲಾಯಿತು. ಭಾರತೀಯ ಪರಂಪರೆಯಲ್ಲಿ ಬಲಗೈಗೆ ಹೆಚ್ಚು ಪ್ರಾತಿನಿಧ್ಯವಿದ್ದು, ಲಿಂಗಾಯತ ಪರಂಪರೆಯಲ್ಲಿ ಎಡ ಅಂಗೈಯಲ್ಲಿ ಇಷ್ಟಲಿಂಗವನ್ನಿಟ್ಟು ಧ್ಯಾನಿಸುವ ಪರಂಪರೆಯಿದೆ. ತನ್ಮೂಲಕ ಎಡಗೈ, ಬಲಗೈನಷ್ಟೇ ಶ್ರೇಷ್ಠವೆಂಬುದನ್ನು ಅರಿಯಬೇಕಾಗಿದೆ. ಎಡಗೈಯವರನ್ನು ದುರ್ಬಲರೆಂದು, ಬಲಗೈಯವರನ್ನು ಪ್ರಬಲರೆಂದು ಭಾವಿಸಲಾಗುತ್ತದೆ.

ಜಾತಿ– ಮತ– ಧರ್ಮಗಳು ಜಗತ್ತನ್ನು ಸೀಮಿತಗೊಳಿಸುತ್ತವೆ. ವಿಚಾರಗಳು ವಿಶಾಲವಾದ ತಳಹದಿಯ ಮೇಲೆ ಪ್ರಸ್ತಾಪವಾಗುವುದರಿಂದ ಅವು ಸಂಕುಚಿತವಲ್ಲ. ಆಯಾ ದೇಶದ ಸಂವಿಧಾನದಲ್ಲಿ ವಿಚಾರಗಳು ಅಡಕವಾಗಿವೆ. ಎಲ್ಲ ಸಂವಿಧಾನಗಳ ಸವಾಲೆಂದರೆ ಸಮಾಜದ ಕಟ್ಟಕಡೆಯ ವ್ಯಕ್ತಿ. ಅವನನ್ನು ಕೇಂದ್ರೀಕರಿಸಿ ಯೋಜನೆಗಳನ್ನು ರೂಪಿಸಲಾಗುತ್ತದೆ.

ವಿಚಾರಶೀಲತೆ ಇಲ್ಲವಾದಲ್ಲಿ ಸಮಾಜವು ನಿಂತ ನೀರಾಗುತ್ತದೆ. ಪರಿವರ್ತಕರು ಪ್ರಗತಿಶೀಲರು. ಜಗತ್ತಿನಲ್ಲಿ ಬೆರಳೆಣಿಕೆಯ ಧರ್ಮಗಳು. ಜಾತಿ– ಮತ– ಧರ್ಮಗಳು ಜಗತ್ತನ್ನು ಸೀಮಿತಗೊಳಿಸುತ್ತವೆ. ಎಡಗೈ ಮತ್ತು ಬಲಗೈ ಎರಡೂ ಒಗ್ಗೂಡಿದಾಗ ಸಮಗ್ರ ಭಾರತ, ಸಮೃದ್ಧ ಭಾರತ. ಎರಡೂ ವಿಭಜನೆಗೊಂಡರೆ ಅಪೂರ್ಣ ಭಾರತ. ಇಂದಿನ ಕೆಲ ಎಡಪಂಥೀಯರನ್ನು ನೋಡಿ, ಸಾವಿರಾರು ವರ್ಷಗಳ ಹಿಂದೆ ಸಮಾಜ ಸುಧಾರಣೆ ತಂದಂತಹ ದಾರ್ಶನಿಕರನ್ನು, ಶತಮಾನಗಳ ಹಿಂದೆ ಆಗಿಹೋಗಿರುವ ಸುಧಾರಕರನ್ನು ಸಂದೇಹಿಸಬಾರದು. ಇಂದು ನಾವೆಲ್ಲ ತಲೆಯೆತ್ತಿ ನಿಲ್ಲಲು, ಅಂದು ಅವರು ತಮ್ಮ ತಲೆ ತೆತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.