ADVERTISEMENT

ವಿಶ್ಲೇಷಣೆ: ರಾವಣ ಎಂಬ ಮಹಾನ್‌ ರೂಪಕ

ಯಶಸ್ಸಿನ ರಣಕಹಳೆಗೆ ಬುದ್ಧಿಮಾತಿನ ಕೊಳಲಗಾನ ಬಂಡುಕೋರತನವಾಗಿ ಕೇಳಿಸುತ್ತಿರುತ್ತದೆ

ಸಬಿತಾ ಬನ್ನಾಡಿ
Published 4 ಮಾರ್ಚ್ 2021, 19:30 IST
Last Updated 4 ಮಾರ್ಚ್ 2021, 19:30 IST
   

‘ಕಾಲಿಟ್ಟರೆ ಎಲ್ಲಿ ಮಾಸುವುದೋ ಎನ್ನುವಂತಿದ್ದ ಆ ರಾಜಮಾರ್ಗದ ಇಕ್ಕೆಲಗಳಲ್ಲಿಯೂ ಗಗನಚುಂಬಿಯಾದ ಉಪ್ಪರಿಗೆಯ ಮನೆಗಳಿದ್ದುವು. ಜಗತ್ತಿನ ಐಶ್ವರ್ಯವೆಲ್ಲವೂ ಅಲ್ಲಿಯೇ ಬಂದು ನೆಲೆಸಿರುವಂತೆ ನವರತ್ನಗಳಿಂದ ಅಲಂಕೃತವಾಗಿರುವ ಆ ಸೌಧಸೌಧದಿಂದಲೂ ವಾದ್ಯಧ್ವನಿ ಹೊರಹೊಮ್ಮುತ್ತಿತ್ತು. ಎಲ್ಲಿ ನೋಡಿದರೂ ನಗುವಿನ ತರಂಗಗಳನ್ನೆಬ್ಬಿಸುತ್ತಿರುವ ಹೆಣ್ಣುಗಂಡುಗಳು...’

ಇದು ಯಾವುದೋ ಅತ್ಯಾಧುನಿಕ ಮೆಟ್ರೊಪಾಲಿಟನ್ ನಗರದ ವರ್ಣನೆಯಲ್ಲ. ಹನುಮಂತನ ಕಣ್ಣಿಗೆ ಕಂಡ ರಾವಣನ ಲಂಕಾನಗರ. ಆತ ಹಾಗೇ ಮುಂದುವರಿದಾಗ, ‘ರಾಕ್ಷಸೇಶ್ವರನಾದ ರಾವಣನ ಅರಮನೆ ಸಿಕ್ಕಿತು. ಅರಮನೆಯ ಸುತ್ತಲೂ ದೊಡ್ಡ ಪ್ರಾಕಾರ; ಅಲ್ಲಿ ಎಲ್ಲಿ ನೋಡಿದರೂ ರಥಗಳೂ ವಾಹನಗಳೂ ವಿಮಾನಗಳೂ ಆನೆಕುದುರೆಗಳೂ ಕಿಕ್ಕಿರಿದು ತುಂಬಿದ್ದವು. ಅದರ ಹೊರಬಾಗಿಲು ಬಂಗಾರದಿಂದ ನಿರ್ಮಿತವಾದುದು. ಬಹು ಬಲಾಢ್ಯರಾದ ಸಾವಿರಾರು ಮಂದಿ ರಾಕ್ಷಸರು ಆ ಬಾಗಿಲ ಬಳಿ ಬಹು ಎಚ್ಚರಿಕೆಯಿಂದ ಕಾವಲು ಕೆಲಸ ನಡೆಸುತ್ತಿದ್ದರು’.

‘ಒಂದು ಕಡೆ ಹಾಸ್ಯಪರಿಹಾಸ್ಯಗಳಲ್ಲಿ ತೊಡಗಿರುವ ಹೆಣ್ಣುಗಳು; ಮತ್ತೊಂದೆಡೆ ಪರಸ್ಪರ ಆಲಿಂಗನದಲ್ಲಿ ಬಾಹ್ಯ ಜಗತ್ತನ್ನು ಮರೆತು ಅರ್ಥವಿಲ್ಲದ ಜಲ್ಪಿತದಲ್ಲಿ ಮಗ್ನರಾಗಿರುವ ಕಾಮಾಸಕ್ತರು; ಇನ್ನೊಂದೆಡೆ ಪಾನದಿಂದ ಮತ್ತೇರಿ ಬಾಯಿಗೆ ಬಂದಂತೆ ಹರಟುತ್ತಲೊ ಅಥವಾ ಒಬ್ಬರನ್ನೊಬ್ಬರು ಬಯ್ದಾಡುತ್ತಲೊ ಇರುವ ಕುಡುಕರ ತಂಡ’– ಕುವೆಂಪು ಬರೆದ ಜನಪ್ರಿಯ ವಾಲ್ಮೀಕಿ ರಾಮಾಯಣದ ‘ರಾತ್ರಿಯಲ್ಲಿ ಲಂಕಾನಗರ’ ಎಂಬ ಅಧ್ಯಾಯದಲ್ಲಿನ ವರ್ಣನೆಗಳಿವು.

ADVERTISEMENT

ಇದನ್ನು ಓದುತ್ತಿದ್ದರೆ, ಇಂದು ಇದೇ ರಾವಣ ರಾಜ್ಯವೇ ನಮ್ಮ ‘ಅಭಿವೃದ್ಧಿ’ಯ ಮಾದರಿಯಲ್ಲವೇ ಎಂದೆನಿಸುತ್ತದೆ. ಇದೇ ಇಂದು ಎಲ್ಲರ ಕನಸು. ರಾವಣ ವಿಮಾನ ಏರಿ ಬಂದು ಸೀತೆಯನ್ನು ಅಪಹರಿಸುವುದಕ್ಕೂ ಈ ಸೊಕ್ಕಿನ ಸಂಪತ್ತಿಗೂ ಖಂಡಿತ ಸಂಬಂಧವಿದೆ. ರಾಮನು ಸೇತುವೆ ಕಟ್ಟಿ ವಾನರ ಪಡೆಯ ಸಹಾಯ ಪಡೆದು ಸೀತೆಯನ್ನು ಕರೆತರಲು ಹೋಗುವ ಶ್ರಮ ಇಂದು ಬಡತನವಾಗಿ, ಸೋಲಾಗಿ ಕಾಣಿಸುವ ಸಾಧ್ಯತೆಯೇ ಹೆಚ್ಚು. ಆದರೆ ಅಷ್ಟೆಲ್ಲ ಕಾವಲಿದ್ದ ರಾವಣ ರಾಜ್ಯವನ್ನು ಹನುಮಂತ ಪುಟ್ಟ ಕಪಿಯಾಗಿ ರೂಪು ತಳೆದು ನುಗ್ಗಿಬಿಟ್ಟ. ಕಾಡಿನ ಗಮಾರನೊಬ್ಬ ಬೃಹತ್ ಸಾಮ್ರಾಜ್ಯದ ಅಹಂಕಾರ ನಾಶಕ್ಕೆ ಬೀಜರೂಪಿಯಾಗುತ್ತಾನೆ ಎಂಬ ಈ ಸೂಚನೆ ಸಾರ್ವಕಾಲಿಕ ಎಚ್ಚರದ ಸೂಚನೆಯೂ ಆಗಿದೆ. ‘ಅರ್ಧ ಯೋಜನ ಅಗಲ ಒಂದು ಯೋಜನ ವಿಸ್ತಾರವಾದ ರಾವಣನ ಅಂತಃಪುರದಲ್ಲಿ ಅವನ ಪತ್ನಿಯರೂ ಆತನು ಭುಜಬಲದಿಂದ ಅಪಹರಿಸಿ ತಂದಿದ್ದ ರಾಜಕನ್ನಿಕೆಯರೂ ಅಸಂಖ್ಯಾತರಾಗಿ ತುಂಬಿದ್ದರು’ ಎಂಬ ವಿವರವೂ ಇದರಲ್ಲಿ ಬರುತ್ತದೆ. ಹೀಗಿದ್ದೂ ತೃಪ್ತನಾಗದೆ, ಅನ್ಯರಾಜ್ಯಕ್ಕೆ ಹೋಗಿ ಸೀತೆಯನ್ನು ಅಪಹರಿಸಿ ತರುವ ಅವನ ದುರಾಸೆಯು ಎಷ್ಟೆಲ್ಲಾ ಜನರ ವಿಪತ್ತಿಗೆ ಕಾರಣವಾಗುತ್ತದೆ. ಈ ಮತ್ತಷ್ಟು ವಿಸ್ತರಿಸುವ ವಾಂಛೆಯೇ ಜಗತ್ತಿನ ಹಲವು ವಿಪ್ಲವಗಳ ಮೂಲ. ಅದೇ ಸರ್ವಾಧಿಕಾರಿಗಳನ್ನು ಹುಟ್ಟಿಸುವುದು. ಅಂತಹವರೊಂದಿಗೆ ಬಹುಬಲದ ಸೈನ್ಯರೂಪಿ ಬೆಂಬಲಿಗರಿಗೂ ದಿಗ್ವಿಜಯದ ಅಮಲು ಏರಿರುತ್ತದೆ.

ರಾವಣನಿಗೆ ಸೈನ್ಯ, ಸಂಪತ್ತು ಮತ್ತು ವಿಮಾನದಂತಹ ತಂತ್ರಜ್ಞಾನ ಬಲದ ಅಹಂಕಾರವಿತ್ತು. ಕವಿ ನಾಗಚಂದ್ರ ಬಳಸುವ ‘ದುರ್ಯಶ ಪಟರವ’ ಎಂಬ ಪದವನ್ನು ನೆನಪಿಸಿಕೊಳ್ಳಬೇಕು. ಕೈಹಾಕಿದ್ದೆಲ್ಲದರಲ್ಲೂ ಯಶಸ್ಸು ಸಿಗುತ್ತಾ ಹೋದಾಗ, ಕೆಲವೊಮ್ಮೆ ಕೆಟ್ಟ ಕೆಲಸವಾಗಿದ್ದರೂ ಅದಕ್ಕೂ ಮನ್ನಣೆ ಸಿಗುತ್ತಾ ಹೋಗುತ್ತದೆ. ಇದನ್ನೆಲ್ಲಾ ವ್ಯಕ್ತಿ ತನ್ನ ಯಶಸ್ಸು ಎಂದು ಭಾವಿಸಿಕೊಳ್ಳ ತೊಡಗುತ್ತಾನೆ. ಈ ಯಶಸ್ಸಿನ ಸದ್ದು ಆತನ ಕಿವಿಯಲ್ಲಿ ಮೊಳಗುತ್ತಿರುತ್ತದಂತೆ. ಹೀಗಾಗಿ, ಆತನಿಗೆ ತಾನು ಯಾವ ಕೆಲಸಕ್ಕೆ ಕೈ ಹಾಕುತ್ತಿದ್ದೇನೆ, ಅದರ ಅಪಾಯ ಯಾವುದು ಎಂಬುದೂ ಅರಿವಿಗೆ ಬರುವುದಿಲ್ಲವಂತೆ.

ಸೀತೆಯನ್ನು ಸಲೀಸಾಗಿ ಅಪಹರಿಸಿದ್ದು ಕೂಡ ಆತನಿಗೆ ತನ್ನ ಯಶಸ್ಸು ಎಂದೇ ಕಾಣುತ್ತದೆ. ತನ್ನನ್ನು ಯಾರೂ ಮಣಿಸಲಾರರು ಎಂದೇ ಅವನು ಭಾವಿಸುತ್ತಾನೆ. ತನ್ನ ಕಾರ್ಯಯೋಜನೆಯ ಗೆಲುವಿಗಾಗಿ ಆತ ಚಿನ್ನದ ಜಿಂಕೆಯ ಮರೆಮೋಸದ ಜಾಲವನ್ನೂ ಹೆಣೆಯಬಲ್ಲ. ಯಾಕೆಂದರೆ ಅವನಿಗೆ ಹೇಗಾದರೂ ಗೆಲ್ಲುವುದೇ ಮುಖ್ಯ. ಆದರೆ ಈ ಗೆಲುವೇ ಅವನ ಅವನತಿಯ, ನಾಶದ ಮೊದಲಮೆಟ್ಟಿಲಾಗಿರುತ್ತದೆ.

ಎಂತಹ ವಿಪರ್ಯಾಸ ನೋಡಿ. ರಾಮ ನೆಲೆಸಬಯಸಿದ್ದು ಹನುಮಂತನಂತಹವರ ಹೃದಯದಲ್ಲಿ. ಆದರೆ ನಾವು ಬಯಸುವುದು ರಾವಣ ರಾಜ್ಯದ ವೈಭವೋಪೇತ ಅಟ್ಟಹಾಸವನ್ನು. ಅದಕ್ಕಾಗಿ ನಾವು ಹನುಮಂತನ ಪರಿವಾರ ವಾಸಿಸುವ ಕಾಡುಗಳನ್ನೇ ಬಲಿ ಕೊಡಬಲ್ಲೆವು. ಆದರೆ ಆ ಬದುಕುಗಳು ನೀಡಿದ ಸೂಚನೆಗಳನ್ನು ಮಾತ್ರ ಇನ್ನಾವುದೋ ಕೊನೆಯಿಲ್ಲದ ಬಾಯಾರಿಕೆಯ ಗೆಲುವಿಗಾಗಿ ಸೇರುವ ರಸ್ತೆಯಾಗಿಸಿಕೊಳ್ಳಬಲ್ಲೆವೇ ಹೊರತು ಅವುಗಳನ್ನು ಮೌಲ್ಯವಾಗಿಸಿಕೊಳ್ಳಲಾರೆವು. ಸೀತೆಯು ರಾವಣನ ವೈಭವದ ಕಡೆ ಕಣ್ಣೆತ್ತಿಯೂ ನೋಡಲಿಲ್ಲ. ರಾವಣ ಭಾವಿಸಿದ್ದೇನೆಂದರೆ, ಸೀತೆ ಇಂದಲ್ಲಾ ನಾಳೆ ಈ ವೈಭವಕ್ಕೆ ಒಡತಿಯಾಗಲು ಬಯಸಿಯೇ ಬಯಸುತ್ತಾಳೆ ಎಂದು. ಬಂಗಾರದ ಜಿಂಕೆಗೆ ಮಾರುಹೋದವಳು ಬಂಗಾರದರಮನೆಗೆ ಒಡತಿಯಾಗುವುದನ್ನು ನಿರಾಕರಿಸುತ್ತಾಳೆಯೇ ಎಂದು ಅವನು ಎಣಿಕೆ ಹಾಕಿರಬಹುದು. ಹೀಗೆ ಕಾಲಬುಡಕ್ಕೆ ಬಂದು ಬೀಳುವ ಸಂಪತ್ತು ಅನೈತಿಕವಾದರೇನಂತೆ, ಬಂದಾಗ ಬಾಚಿಕೊಳ್ಳಬೇಕು ಎನ್ನುವವರಿರುವ ತನಕ ಇದಕ್ಕೆ ಕೊನೆಯಿಲ್ಲ. ಹಾಗೆ ಕೊಟ್ಟಿದ್ದನ್ನು ಪಡೆದು ತೆಪ್ಪಗೆ ದಾಸರಾಗಿ ಇರಬೇಕೆಂಬುದೇ ಹತ್ತು ತಲೆಯ ಯೋಜನಾಕಾಂಕ್ಷಿಗಳ ಅನುಕ್ತ ಶಾಸನ. ಅಂತಹ ಶಾಸನ ಒಪ್ಪದವರೆಲ್ಲಾ ಅವರಿಗೆ ಬಂಡುಕೋರರಂತೆಯೇ ಕಾಣಿಸುವುದು.

ಈ ರಾವಣ ರಾಜ್ಯದಂತೆಯೇ ರಾವಣನ ಹತ್ತು ತಲೆಯೂ ಮಹಾನ್ ರೂಪಕ. ಏಕಕಾಲಕ್ಕೆ ಎಷ್ಟು ಯೋಚನೆ, ಯೋಜನೆ, ಯುಕ್ತಿ, ಕುಯುಕ್ತಿ! ಮನುಷ್ಯ ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ, ಸನ್ಯಾಸಗಳೆಂಬ ನಾಲ್ಕು ಆಶ್ರಮಗಳನ್ನು ದಾಟಬೇಕು ಎಂದು ಹೇಳುತ್ತಿದ್ದುದು ಈ ಹತ್ತು ತಲೆಯ ಯೋಜನೆಯ ವಿರುದ್ಧ ದಿಕ್ಕಿನದು. ತಾನು ಅನುಭವಿಸಿದ ನಂತರದಲ್ಲಿ ಕಿರಿಯರಿಗೆ ಜವಾಬ್ದಾರಿ ಒಪ್ಪಿಸಿ ನೀಗಿಕೊಳ್ಳುವಂತಹದು. ಕೊನೆಯ ಎರಡನ್ನು ಕಾಡಿನಲ್ಲಿ ಕಳೆಯಬೇಕಿತ್ತು. ಆದರೆ ಈಗಲೋ, ಸ್ಟೈಲಿಶ್ ಇಂಗ್ಲಿಷ್, ಅತ್ಯಾಧುನಿಕ ಗ್ಯಾಜೆಟ್, ಚಿನ್ನದ ಸರ ಇತ್ಯಾದಿಗಳನ್ನೆಲ್ಲಾ ಕಾವಿಯಲ್ಲಿ ಧರಿಸಿ ಕಾಂಕ್ರೀಟ್ ಅರಮನೆಯಲ್ಲಿ ಬಂಟರೊಂದಿಗೆ ಬಾಳುತ್ತಿರುವ ಹಲವು ‘ಸನ್ಯಾಸಿ’ಗಳಿಗೇ ಕಾಡು ಯಾವ ದಿಕ್ಕಿನಲ್ಲಿ ಇದೆ ಎಂದು ತಿಳಿದಿಲ್ಲ. ಇನ್ನು ಜವಾಬ್ದಾರಿಗಳೋ– ವಾಣಿಜ್ಯ ವ್ಯವಹಾರಗಳಿಂದ ಹಿಡಿದು ಸರ್ಕಾರ ಉಳಿಸಬೇಕೋ ಉರುಳಿಸಬೇಕೋ ಎಂಬಲ್ಲಿಯವರೆಗೆ ಗೃಹಸ್ಥರು ನಾಚಿಕೊಳ್ಳುವಷ್ಟು ಹೆಚ್ಚಾಗಿದೆ! ಜೊತೆಗೆ ಶಿಷ್ಯರುಗಳಿಗೆ ಒಳ್ಳೆಯ ಖಾತೆಗಳನ್ನು ಕೊಡಿಸಿ, ಇಲ್ಲವೇ ಕ್ಷೇತ್ರಕ್ಕೆ ಹೆಚ್ಚು ಅನುದಾನಗಳನ್ನು ಕೊಡಿಸಿ ರಾವಣ ರಾಜ್ಯದಲ್ಲಿರುವಂತೆ ವೈಭವೋಪೇತ ಮಹಲುಗಳನ್ನು ಮೇಲಕ್ಕೆಬ್ಬಿಸಬೇಕಾಗಿದೆ.

ಮನುಷ್ಯ ತಾನಾಗಿ ತಂದುಕೊಳ್ಳುವ ಈ ಗೋಳುಗಳಿಗೂ ರಾವಣ ಒಳ್ಳೆಯ ರೂಪಕ. ವಿಭೀಷಣ ಮಾತ್ರವಲ್ಲ, ಕುಂಭಕರ್ಣನೂ ಸೀತೆಯನ್ನು ಮರಳಿ ಒಪ್ಪಿಸು ಎಂದು ಬುದ್ಧಿಮಾತು ಹೇಳುತ್ತಾನೆ. ನಿನ್ನಿಂದಾಗಿ ಲಂಕೆಗೆ ವಿಪತ್ತು ಬಂದಿತು ಎನ್ನುತ್ತಾನೆ. ಆದರೂ ಆತ ಕೇಳದೆ ಕೆರಳಿದ. ಕುಂಭಕರ್ಣ ‘ಸರಿ, ನಾನು ನಿನಗಾಗಿ ಹೋರಾಡುತ್ತೇನೆ. ರಾಮನನ್ನು ಕೊಲ್ಲುತ್ತಲೇ ಸೀತೆ ನಿನ್ನ ವಶವಾಗುತ್ತಾಳೆ’ ಎನ್ನುತ್ತಾನೆ. ಈ ಸಂದರ್ಭದಲ್ಲಿ ಅತಿಕಾಯನೆಂಬ ರಾಕ್ಷಸನ ಮಾತು ಕೇಳಿದರೆ, ಈತನೇ ನಮ್ಮ ಇಂದಿನ ವಾಟ್ಸ್‌ಆ್ಯಪ್ ಯೂನಿವರ್ಸಿಟಿಯವರ, ಕೆಲವೊಮ್ಮೆ ಕೆಲವು ಮಾಧ್ಯಮಗಳವರ ಮೂಲಗುರುವಾಗಿರಬೇಕು ಎಂಬ ಸಂಶಯ ಹುಟ್ಟುತ್ತದೆ. ‘ನನ್ನನ್ನೂ ಸೇರಿಸಿ ಇನ್ನೂ ಐವರನ್ನು ಯುದ್ಧಕ್ಕೆ ಕಳುಹಿಸು. ಶತ್ರುಗಳು ಹತರಾದ ಮೇಲೆ ಸೀತೆ ನಿನ್ನವಳಾಗುತ್ತಾಳೆ. ಒಂದು ಪಕ್ಷ ನಾವು ಸೋತರೆ, ಅದನ್ನು ಬಹಿರಂಗಪಡಿಸಬೇಡ: ನಾವೇ ಗೆದ್ದೆವೆಂದು ಊರಿನಲ್ಲೆಲ್ಲಾ ಹರಡು. ಅದನ್ನು ಕೇಳಿ ನಿರಾಶಳಾದ ಸೀತೆ ಗತ್ಯಂತರವಿಲ್ಲದೆ ನಿನ್ನನ್ನು ವರಿಸುತ್ತಾಳೆ’. ರಾವಣನೂ ಒಪ್ಪದ ಗೆಲುವಿನ ಈ ನೀಚದಾರಿಯ ಮಾತು ಈಗೀಗ ಬಹಳ ದೊಡ್ಡ ರಣತಂತ್ರವೇ ಆಗುತ್ತಿದೆ– ರಾಮಾಯಣದ ರಾವಣನ ನಾಶದ ನಂತರವೂ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.