ಬೀಗದ ಕೈ, ಚಾಕು, ಕತ್ತರಿ, ಮೊಬೈಲ್ ಫೋನ್, ಕ್ರೆಡಿಟ್–ಡೆಬಿಟ್ ಕಾರ್ಡ್ ಇಂತಹವುಗಳನ್ನೆಲ್ಲ ನೀವು ಎಲ್ಲೋ ಇಟ್ಟು ಮರೆಯುವುದು ಸಾಮಾನ್ಯ. ಆದರೆ ನೀವೋ ಅಥವಾ ನಿಮ್ಮ ಮನೆಯವರೋ ಕಷ್ಟಪಟ್ಟು ದುಡಿದ ಹಣವನ್ನು ಮರೆಯಲು ಸಾಧ್ಯವೇ? ಖಂಡಿತಾ ಇಲ್ಲ ಎಂದು ನೀವು ಹೇಳಬಹುದು. ಆದರೆ ಬ್ಯಾಂಕ್, ವಿಮೆ, ಭವಿಷ್ಯನಿಧಿ ಮತ್ತು ಕಂಪನಿಗಳಲ್ಲಿ ವಾರಸುದಾರರಿಲ್ಲದೆ ಉಳಿದುಕೊಂಡಿರುವ ಮೊತ್ತವನ್ನು ಗಮನಿಸಿದರೆ, ನಿಮ್ಮ ಅಭಿಪ್ರಾಯವನ್ನು ಬದಲಿಸಿಕೊಳ್ಳಬೇಕಾಗುತ್ತದೆ.
ಈ ಸಂಸ್ಥೆಗಳಲ್ಲಿ ಕ್ಲೇಮು ಮಾಡದಿರುವ ಮೊತ್ತ ₹ 51,500 ಕೋಟಿ ಎಂದು 2021ರ ಡಿಸೆಂಬರ್‌ನಲ್ಲಿ ಹಣಕಾಸು ಸಚಿವರು ಸಂಸತ್ತಿನಲ್ಲಿ ಬಹಿರಂಗಪಡಿಸಿದ್ದಾರೆ. ಇದರ ಮೇಲಿನ ಬಡ್ಡಿಯೂ ಸೇರಿದರೆ ಈ ಮೊತ್ತ ಸುಮಾರು ₹ 82,000 ಕೋಟಿ ಇರಬಹುದೆಂದು ಅಂದಾಜು ಮಾಡಲಾಗಿದೆ. ಈ ಹಣ ಸುಮಾರು 10.24 ಕೋಟಿ ಖಾತೆದಾರರಿಗೆ ಅಥವಾ ಹೂಡಿಕೆದಾರರಿಗೆ ಸೇರಿದ್ದು. ಇವರಲ್ಲಿ ನೀವೂ ಒಬ್ಬರಾಗಿರಬಹುದು.
ಬಳಕೆದಾರರು ಇಷ್ಟೊಂದು ಹಣವನ್ನು ಮರೆಯಲು ಹೇಗೆ ಸಾಧ್ಯ? ಮನೆಯ ಹಿರಿಯರು ಅಥವಾ ಕುಟುಂಬದ ಸದಸ್ಯರು ತಮ್ಮ ಹಣದ ವ್ಯವಹಾರವನ್ನು ಇತರರಿಗೆ ತಿಳಿಸದೆ ನಿಧನರಾಗುವುದು, ದಾಖಲೆ ಕಾಣೆಯಾಗುವುದು, ಸಾಲ ಪಡೆಯಲು ಬ್ಯಾಂಕ್‍ನಲ್ಲಿ ಖಾತೆ ತೆರೆದು ನಂತರ ಅದನ್ನು ಚಾಲನೆಯಲ್ಲಿ ಇಡದಿರುವುದು, ಸಣ್ಣಪುಟ್ಟ ಮೊತ್ತವನ್ನು ಕಡೆಗಣಿಸುವುದು, ಮನೆ ಮತ್ತು ಉದ್ಯೋಗದಲ್ಲಿ ಬದಲಾವಣೆಯಂತಹ ಕಾರಣದಿಂದ ಬ್ಯಾಂಕ್ ಸಂಪರ್ಕ ಕಳೆದುಕೊಳ್ಳುವುದು ಇದಕ್ಕೆ ಕಾರಣ. ಕೆಲವೊಮ್ಮೆ ಹಳೆ ದಾಖಲೆ ದೊರಕಿದರೂ ಬ್ಯಾಂಕ್‍ಗಳು ಸುಲಭವಾಗಿ ಹಣ ಹಿಂತಿರುಗಿಸುವುದಿಲ್ಲ. ಹತ್ತಾರು ದಾಖಲೆ, ಪ್ರಮಾಣಪತ್ರ ಸಲ್ಲಿಸಬೇಕಾಗುತ್ತದೆ.
ಸರ್ಕಾರಿ ಕಚೇರಿಯಿಂದ ದಾಖಲೆ ಪಡೆಯುವುದಕ್ಕೆ ನೀಡಬೇಕಾದ ಲಂಚದ ಮೊತ್ತವೇ ಕೆಲವೊಮ್ಮೆ ತಮ್ಮ ಠೇವಣಿಗಿಂತ ಹೆಚ್ಚಾಗುವ ಸಂಭವ ಇರುವುದರಿಂದ ಬಹಳಷ್ಟು ಠೇವಣಿದಾರರು ಅದರ ಗೋಜಿಗೆ ಹೋಗುವುದಿಲ್ಲ. ಈ ಮೊತ್ತವು ಬಳಕೆದಾರರಿಗೆ ಸೇರಿದ್ದು. ಅದನ್ನು ಬ್ಯಾಂಕ್, ಎಲ್‍ಐಸಿ, ಭವಿಷ್ಯನಿಧಿ ಅಥವಾ ಕಂಪನಿಗಳು ತಮ್ಮ ಖರ್ಚುವೆಚ್ಚಕ್ಕೆ ಬಳಸಿಕೊಳ್ಳುವಂತಿಲ್ಲ. ಆದರೆ ಅದನ್ನು ಠೇವಣಿದಾರರಿಗೆ ಅಥವಾ ಅವರ ವಾರಸುದಾರರಿಗೆ ತಲುಪಿಸುವುದು ಹೇಗೆ?
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) 2014ರಲ್ಲಿ ‘ಡೆಫ್’ (ಡೆಪಾಸಿಟರ್ ಎಜುಕೇಷನ್ ಆ್ಯಂಡ್ ಅವೇರ್‌ನೆಸ್ ಫಂಡ್) ಯೋಜನೆಯನ್ನು ಜಾರಿಗೊಳಿಸಿದೆ. ಈ ಯೋಜನೆಯ ಅನ್ವಯ, ಯಾವ ಖಾತೆ ಅಥವಾ ನಿಗದಿತ ಠೇವಣಿಯಂತಹವು 10 ವರ್ಷಕ್ಕಿಂತ ಹೆಚ್ಚು ಕಾಲ ಚಾಲ್ತಿಯಲ್ಲಿ ಇರುವುದಿಲ್ಲವೋ ಅದರ ಮೊತ್ತವನ್ನು ಬಡ್ಡಿ ಸಹಿತ ಡೆಫ್‍ಗೆ ವರ್ಗಾಯಿಸಬೇಕು. ಆರ್‌ಬಿಐನ 2021ನೇ ಸಾಲಿನ ವಾರ್ಷಿಕ ವರದಿಯ ಪ್ರಕಾರ, ಬ್ಯಾಂಕ್‍ಗಳಲ್ಲಿ ಕ್ಲೇಮು ಮಾಡದ ಮೊತ್ತ ₹ 39,264 ಕೋಟಿ ಇತ್ತು. ಮರುವರ್ಷ ಈ ಮೊತ್ತ ₹ 48,262 ಕೋಟಿಗೆ ಏರಿಕೆಯಾಗಿದೆ. ರಾಷ್ಟ್ರೀಕೃತ ಬ್ಯಾಂಕ್‍ಗಳು ಹೋದ ವರ್ಷ ₹ 35,012 ಕೋಟಿ ಹಣವನ್ನು ಆರ್‌ಬಿಐಗೆ ವರ್ಗಾಯಿಸಿವೆ. ಈ ನಿಧಿಗೆ ಹಣವನ್ನು ವರ್ಗಾಯಿಸಿದಾಕ್ಷಣ ಅದನ್ನು ಠೇವಣಿದಾರರಿಗೆ ಹಿಂತಿರುಗಿಸಲಾಗದು ಎಂದರ್ಥವಲ್ಲ. ಅಕಸ್ಮಾತ್ ಠೇವಣಿದಾರರು ತಮ್ಮ ಖಾತೆಯಲ್ಲಿರುವ ಹಣವನ್ನು ವಾಪಸ್ ಪಡೆಯಬೇಕಿದ್ದರೆ ಸಂಬಂಧಪಟ್ಟ ಬ್ಯಾಂಕನ್ನು ಸಂಪರ್ಕಿಸಬಹುದು.
ಬ್ಯಾಂಕ್‍ಗಳಲ್ಲಿರುವ ಕ್ಲೇಮು ಮಾಡದ ಮೊತ್ತವನ್ನು ಸಂಬಂಧಪಟ್ಟ ಬಳಕೆದಾರರಿಗೆ ಹಿಂತಿರುಗಿಸುವ ಸಲುವಾಗಿ ಆರ್‌ಬಿಐ ಕೆಲವು ಕ್ರಮಗಳನ್ನು ಕೈಗೊಂಡಿದೆ. ಕೆಲವು ತಿಂಗಳ ಹಿಂದೆ ‘100 ಡೇಸ್ 100 ಪೇಸ್’ ಎಂಬ ಆಂದೋಲನವನ್ನು ಆರಂಭಿಸಿದೆ. ಈ ಯೋಜನೆಯ ಪ್ರಕಾರ, ದೇಶದ ಪ್ರತಿಯೊಂದು ಬ್ಯಾಂಕ್ ಜಿಲ್ಲಾ ಮಟ್ಟದಲ್ಲಿ ಅತಿ ದೊಡ್ಡ ಮೊತ್ತದ ಕ್ಲೇಮು ಮಾಡದ 100 ಠೇವಣಿಗಳ ವಾರಸುದಾರರನ್ನು ಗುರುತಿಸಿ ಅವನ್ನು 100 ದಿನಗಳೊಳಗೆ ಅವರಿಗೆ ತಲುಪಿಸಬೇಕು. ಹಿಂಡನ್‍ಬರ್ಗ್ ವರದಿಯ ಹಿನ್ನೆಲೆಯಲ್ಲಿ ಅದಾನಿ ಸಂಸ್ಥೆಯ ವ್ಯವಹಾರದ ತನಿಖೆ ನಡೆಸಲು ಸುಪ್ರೀಂ ಕೋರ್ಟ್ ನೇಮಕ ಮಾಡಿದ್ದ ಸಮಿತಿಯು ಕ್ಲೇಮು ಮಾಡದ ಆಸ್ತಿ ಪ್ರಾಧಿಕಾರವನ್ನು ಸ್ಥಾಪಿಸಬೇಕೆಂದು 2023ರ ಮೇ ತಿಂಗಳಲ್ಲಿ ಸರ್ಕಾರಕ್ಕೆ ಸಲಹೆ ನೀಡಿತ್ತು. ಠೇವಣಿದಾರರು ತಮ್ಮ ಹಣವನ್ನು ಹಿಂಪಡೆಯಲು ಸುಲಭ ಮಾರ್ಗ ಜಾರಿಗೊಳಿಸಬೇಕೆಂದು ಸಹ ಸೂಚನೆ ನೀಡಿತ್ತು. ಈ ಕಾರಣದಿಂದ, ಆರ್‌ಬಿಐ ಇತ್ತೀಚೆಗೆ ಯುಡಿಜಿಎಎಮ್ (ಅನ್‌ಕ್ಲೇಮ್ಡ್ ಡೆಪಾಸಿಟ್ಸ್– ಗೇಟ್‌ವೇ ಟು ಆ್ಯಕ್ಸೆಸ್ ಇನ್‌ಫರ್ಮೇಷನ್) ಎಂಬ ವೆಬ್ ಪೋರ್ಟಲ್ ಸ್ಥಾಪಿಸಿದೆ. ಇದರಿಂದ ಸದ್ಯಕ್ಕೆ ಐದು ಬ್ಯಾಂಕ್‍ಗಳ ಠೇವಣಿದಾರರಿಗೆ ಅನುಕೂಲವಾಗಲಿದೆ. ಠೇವಣಿದಾರರು ತಾವು ಮರೆತಿರುವ ಹಣವನ್ನು ಸುಲಭವಾಗಿ ಹಿಂದಕ್ಕೆ ಪಡೆಯಬಹುದು.
ವಾರಸುದಾರರಿಲ್ಲದೆ ಕಂಪನಿಗಳ ಪುಸ್ತಕಗಳಲ್ಲಿ ಷೇರ್, ಮ್ಯೂಚುವಲ್ ಫಂಡ್, ಡಿವಿಡೆಂಡ್‌ನಂತಹ ಹಣ ಸಹ ಉಳಿದುಕೊಂಡಿದೆ. ಹೂಡಿಕೆದಾರರಿಗೆ ಸಲ್ಲಬೇಕಾದ ಈ ಹಣವನ್ನು ಅವರಿಗೆ ತಲುಪಿಸುವ ಸಲುವಾಗಿ ಕಂಪನೀಸ್ ಕಾಯ್ದೆ ಅಡಿಯಲ್ಲಿ ಹೂಡಿಕೆದಾರರ ಶಿಕ್ಷಣ ಮತ್ತು ರಕ್ಷಣಾ ನಿಧಿಯನ್ನು (ಐಇಪಿಎಫ್) 1994ರಲ್ಲಿ ಸ್ಥಾಪಿಸಲಾಗಿದೆ. ವಿವಿಧ ಕಂಪನಿಗಳು 2019- 20ರ ಸಾಲಿನಲ್ಲಿ ₹ 1,887 ಕೋಟಿ ಮೊತ್ತವನ್ನು ಈ ನಿಧಿಗೆ ವರ್ಗಾಯಿಸಿವೆ. 2022ರ ಮಾರ್ಚ್ ಅಂತ್ಯದ ವೇಳೆಗೆ ನಿಧಿಯಲ್ಲಿ ಕ್ಲೇಮು ಮಾಡದ ಡಿವಿಡೆಂಡ್ ಮತ್ತು ಷೇರುಗಳ ಮೊತ್ತ ₹ 18,433 ಕೋಟಿ. ವಾರಸುದಾರರಿಲ್ಲದ ಮೊತ್ತ ಎಲ್‍ಐಸಿಯಲ್ಲೂ ಇದೆ. 2020–21ರ ಅಂತ್ಯದಲ್ಲಿ ಎಲ್‍ಐಸಿ ಬಳಿ ಇದ್ದ ಕ್ಲೇಮು ಮಾಡದ ಮೊತ್ತ ₹ 25,000 ಕೋಟಿ.
ಈ ಸಂಸ್ಥೆಗಳಲ್ಲದೆ ರಾಷ್ಟ್ರೀಯ ಔಷಧ ಬೆಲೆ ನಿಯಂತ್ರಣ ಪ್ರಾಧಿಕಾರ (ಎನ್‍ಪಿಪಿಎ) ಮತ್ತು ಎನ್‍ಎಎ (ನ್ಯಾಷನಲ್ ಆ್ಯಂಟಿ– ಪ್ರಾಫಿಟೀರಿಂಗ್ ಅಥಾರಿಟಿ) ಸಂಸ್ಥೆಗಳು ಸಂಗ್ರಹಿಸುವ ದಂಡದ ಮೊತ್ತವೂ ಬಹಳಷ್ಟಿದೆ. ಔಷಧ ತಯಾರಕರು ನಿಗದಿತ ಬೆಲೆಗಿಂತ ಅಧಿಕ ಬೆಲೆಗೆ ಔಷಧ ಮಾರಾಟ ಮಾಡಿದರೆಂಬ ಅಪರಾಧಕ್ಕೆ ಎನ್‍ಪಿಪಿಎ 2022ರ ಸೆಪ್ಟೆಂಬರ್‌ವರೆಗೆ ₹ 9,782 ಕೋಟಿ ಮೊತ್ತದ ದಂಡವನ್ನು ಸಂಗ್ರಹಿಸಿದೆ. ಡಿಟಿಎಚ್ ಸೇವೆ ನೀಡುತ್ತಿರುವ ಸಂಸ್ಥೆಯೊಂದರ ವಿರುದ್ಧ ಹೋದ ವರ್ಷ ಎನ್‍ಎಎ ದಂಡ ವಿಧಿಸಿತು. ಜಿಎಸ್‍ಟಿ ಪರಿಣಾಮವಾಗಿ ಸೇವೆಯ ಬೆಲೆ ಇಳಿಕೆಯಾಗಿದ್ದು, ಅದನ್ನು ಬಳಕೆದಾರರಿಗೆ ವರ್ಗಾಯಿಸದ ಕಾರಣ ಈ ಸಂಸ್ಥೆ ₹ 450 ಕೋಟಿಯನ್ನು ಕೇಂದ್ರ ಗ್ರಾಹಕ ಕಲ್ಯಾಣ ನಿಧಿಗೆ ಪಾವತಿಸಬೇಕೆಂದು ಆದೇಶ ನೀಡಿತ್ತು. ಅದೇ ರೀತಿ ಸೌಂದರ್ಯ ಸಾಮಗ್ರಿ ತಯಾರಿಕಾ ಸಂಸ್ಥೆಯೊಂದಕ್ಕೆ ₹ 186 ಕೋಟಿ ಪಾವತಿಸಬೇಕೆಂದು ಹೇಳಿತ್ತು.
ಕ್ಲೇಮು ಮಾಡದವರನ್ನು ಗುರುತಿಸುವುದು ಕಷ್ಟವಾಗಿರುವುದರಿಂದ ಒಂದಿಷ್ಟು ಹಣವನ್ನು ಕೇಂದ್ರ ಗ್ರಾಹಕ ಕಲ್ಯಾಣ ನಿಧಿಗೆ ವರ್ಗಾಯಿಸಲಾಗುತ್ತಿದೆ. ಕೇಂದ್ರ ಗ್ರಾಹಕ ಕಲ್ಯಾಣ ನಿಧಿ, ಡೆಪಾಸಿಟರ್ಸ್ ಎಜುಕೇಷನ್ ಆ್ಯಂಡ್ ಅವೇರ್‌ನೆಸ್ ಫಂಡ್, ಹೂಡಿಕೆದಾರರ ಶಿಕ್ಷಣ ಮತ್ತು ರಕ್ಷಣಾ ನಿಧಿಯು ಬಳಕೆದಾರರಿಗೆ ಶಿಕ್ಷಣ ಹಾಗೂ ಅರಿವು ಮೂಡಿಸುವ ಕಾರ್ಯಕ್ರಮಗಳಿಗೆ ನೋಂದಾಯಿತ ಸಂಘ ಸಂಸ್ಥೆಗಳಿಗೆ ಹಣ ನೀಡುವ ಉದ್ದೇಶ ಹೊಂದಿವೆ. ಆದರೆ ಕೊರೊನಾ ಬಂದಾಗ ಸ್ಥಗಿತಗೊಂಡ ಕೇಂದ್ರ ಗ್ರಾಹಕ ಕಲ್ಯಾಣ ನಿಧಿಯು ಇದುವರೆಗೆ ಗ್ರಾಹಕ ಸಂಘ ಸಂಸ್ಥೆಗಳಿಗೆ ಯಾವುದೇ ನೆರವು ನೀಡಿಲ್ಲ. ಇದರ ಫಲವಾಗಿ, ಬಳಕೆದಾರರಿಗೆ ಸೇರಬೇಕಾದ ಕೋಟ್ಯಂತರ ರೂಪಾಯಿ ಸರ್ಕಾರದ ಬಳಿ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.