ADVERTISEMENT

ಪ್ರತಿಕ್ರಿಯೆ: ಸಿಎಎ ಬಗ್ಗೆ ಎತ್ತಿದ ತಾತ್ವಿಕ ಪ್ರಶ್ನೆಗಳು ಘನವಲ್ಲ

ಸುಧೀಂದ್ರ ಬುಧ್ಯ
Published 17 ಜನವರಿ 2020, 7:36 IST
Last Updated 17 ಜನವರಿ 2020, 7:36 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಜನವರಿ 15ರಂದು ಪ್ರಜಾವಾಣಿಯಲ್ಲಿ ಪ್ರಕಟವಾದ ದಿನೇಶ್ ಅಮೀನ್ ಮಟ್ಟು ಅವರ ‘ಸಿಎಎ ಎತ್ತುವ ತಾತ್ವಿಕ ಪ್ರಶ್ನೆಗಳು’ ಲೇಖನದಲ್ಲಿ ಕೇವಲ ವ್ಯಂಗ್ಯವಷ್ಟೇ ಎದ್ದು ಕಾಣುತ್ತದೆ. ಲೇಖಕರು ಎತ್ತಿಕೊಂಡಿರುವ ತಾತ್ವಿಕ ಪ್ರಶ್ನೆಗಳಲ್ಲೂ ಕೆಲವು ತಪ್ಪು ಮಾಹಿತಿ ನುಸುಳಿದೆ. ಅವರು ಎತ್ತಿರುವ ಒಂದೊಂದೇ ಪ್ರಶ್ನೆಯನ್ನು ಗಮನಿಸುವುದಾದರೆ, ಮೊದಲಿಗೆ, ಭಾರತ - ಪಾಕಿಸ್ತಾನದ ನಡುವೆ ಸ್ವಾತಂತ್ರ್ಯಾನಂತರದ ದಿನಗಳಲ್ಲಿ ನೂರಾರು ಸುತ್ತಿನ ಮಾತುಕತೆಗಳಾಗಿವೆ, ಶೃಂಗಸಭೆಗಳಾಗಿವೆ. ಪಾಕಿಸ್ತಾನದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ನಡೆಯುತ್ತಿರುವ ಬಗ್ಗೆ ಎಲ್ಲಿಯಾದರೂ ನಿರ್ದಿಷ್ಟ ಚರ್ಚೆ ನಡೆದಿದೆಯೇ? ಎಂದು ಪ್ರಶ್ನಿಸಿದ್ದಾರೆ. ಆದರೆ ಭಾರತ - ಪಾಕಿಸ್ತಾನ ಪ್ರಧಾನಿಗಳ ನಡುವೆ ದ್ವಿಪಕ್ಷೀಯ ಮಾತುಕತೆ, ಶೃಂಗಸಭೆ ನಡೆದಾಗ ಈ ಪ್ರಶ್ನೆಯನ್ನು ಎತ್ತಿಕೊಳ್ಳಲು ಬರುವುದಿಲ್ಲ. ಕಾರಣವಿಷ್ಟೇ, ಪಾಕಿಸ್ತಾನದಲ್ಲಿರುವ ಅಲ್ಪಸಂಖ್ಯಾತರ ವಿಚಾರ ಅವರು ಆ ದೇಶದ ಪರಿಧಿಯಲ್ಲಿ ಇರುವ ತನಕ ಅದು ಪಾಕಿಸ್ತಾನದ ಆಂತರಿಕ ವಿಚಾರ ಎನಿಸಿಕೊಳ್ಳುತ್ತದೆ. ಉಭಯ ದೇಶಗಳೂ ಪರಸ್ಪರ ಆಂತರಿಕ ವಿಚಾರಗಳಲ್ಲಿ ತಲೆ ಹಾಕುವಂತಿಲ್ಲ ಎಂಬ ನಿಬಂಧನೆ ಹಾಕಿಕೊಂಡೇ ಯಾವುದೇ ದೇಶಗಳು ದ್ವಿಪಕ್ಷೀಯ ಮಾತುಕತೆಗೆ ಕುಳಿತುಕೊಳ್ಳುತ್ತವೆ.

ಆದರೆ ವಿದೇಶಾಂಗ ಕಾರ್ಯದರ್ಶಿಗಳ ನಡುವಿನ ಮಾತುಕತೆಯಲ್ಲಿ ಈ ಸಂಗತಿಗಳನ್ನು ಪ್ರಸ್ತಾಪಿಸಬಹುದು, ಅಧಿಕೃತವಾಗಿ ವಿದೇಶಾಂಗ ಕಾರ್ಯಾಲಯದಿಂದ ಆಕ್ಷೇಪ ಸಲ್ಲಿಸಬಹುದು. ಈ ಬಗ್ಗೆ 2018ರ ಜುಲೈ 19ರಂದು ಸಮಾಜವಾದಿ ಪಕ್ಷದ ರಾಜ್ಯಸಭಾ ಸದಸ್ಯ ಜಾವೇದ್ ಅಲಿ ಖಾನ್ ಪ್ರಶ್ನಿಸಿದ್ದರು. ಅದಕ್ಕೆ ಸುಷ್ಮಾ ಸ್ವರಾಜ್ ಅವರು ಉತ್ತರಿಸುತ್ತಾ ‘ನೆರೆಯ ರಾಷ್ಟ್ರಗಳಾದ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಆಫ್ಘಾನಿಸ್ತಾನದಲ್ಲಿ ಅಲ್ಪಸಂಖ್ಯಾತ ಸಮುದಾಯದ ಮೇಲೆ ದೌರ್ಜನ್ಯ ಎಸಗುತ್ತಿರುವ, ಪ್ರಾರ್ಥನಾ ಸ್ಥಳಗಳ ಮೇಲೆ ದಾಳಿ ನಡೆಯುತ್ತಿರುವ, ಬಲವಂತದ ಮತಾಂತರಕ್ಕೆ ಹಿಂಸಿಸುತ್ತಿರುವ ಘಟನೆಗಳ ವರದಿ ಬರುತ್ತಲೇ ಇದೆ. ಅಲ್ಲಿನ ಅಲ್ಪಸಂಖ್ಯಾತರ ಬಗ್ಗೆ ಸರ್ಕಾರಕ್ಕೆ ಕಾಳಜಿ ಇದೆ. ಆಯಾ ದೇಶಗಳ ಗಮನಕ್ಕೆ ತರುವ ಕೆಲಸ ಮಾಡುತ್ತಿದ್ದೇವೆ. ಬಾಂಗ್ಲಾದೇಶ, ಆಫ್ಘಾನಿಸ್ತಾನದಿಂದ ಪ್ರತಿಸ್ಪಂದನೆ ದೊರೆತಿದೆ. ಪಾಕಿಸ್ತಾನದಲ್ಲಿ ನಡೆಯುತ್ತಿರುವ ದೌರ್ಜನ್ಯದ ಕುರಿತು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಲ್ಲಿ (UNHRC) ಪ್ರಮುಖವಾಗಿ ಪ್ರಸ್ತಾಪಿಸಲಾಗಿದೆ’ ಎಂದು ಉತ್ತರಿಸಿದ್ದರು. ರಾಜ್ಯಸಭೆಯ ಪ್ರಶ್ನೋತ್ತರ ಅವಧಿಯ ವಿವರಗಳು ವಿದೇಶಾಂಗ ಖಾತೆಯ ವೆಬ್ ತಾಣದಲ್ಲಿ ಲಭ್ಯವಿದೆ.

ಎರಡು ಮತ್ತು ಮೂರನೆಯ ಪ್ರಶ್ನೆ, ‘ಅಂತರರಾಷ್ಟ್ರೀಯ ವೇದಿಕೆಯಲ್ಲಿ ಈ ವಿಷಯ ಪ್ರಸ್ತಾಪಿಸಲಾಯಿತೇ, ವಿಶ್ವಸಂಸ್ಥೆಯ ಮಾನವ ಹಕ್ಕು ಮಂಡಳಿಯಲ್ಲಿ ಇದನ್ನು ಪ್ರಸ್ತಾಪಿಸಬಹುದಿತ್ತಲ್ಲವೇ’ ಎಂಬುದಾಗಿದೆ. ನಿಜ, ಯಾವ ಸರ್ಕಾರವಿದ್ದರೂ ಈ ವಿಚಾರವನ್ನು ಅಂತರಾಷ್ಟ್ರೀಯ ವೇದಿಕೆಯಲ್ಲಿ ಪ್ರಸ್ತಾಪಿಸುವುದಕ್ಕೆ ಅಡ್ಡಿಯಿಲ್ಲ. ಪಾಕಿಸ್ತಾನ ಕಾಶ್ಮೀರದ ಮುಸಲ್ಮಾನರ ಸ್ಥಿತಿಗತಿಯ ಬಗ್ಗೆ, ಭಾರತ ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಮೇಲಾಗುತ್ತಿರುವ ದೌರ್ಜನ್ಯದ ಬಗ್ಗೆ ವಿಶ್ವಸಂಸ್ಥೆಯ ಅಧಿವೇಶನಗಳಲ್ಲಿ ಹಲವು ಬಾರಿ ಪ್ರಶ್ನಿಸಿಕೊಂಡಿವೆ. ವಿಶ್ವಸಂಸ್ಥೆಯೇ ಇದಕ್ಕೆ ಸೂಕ್ತ ವೇದಿಕೆ ಕೂಡ. ಈ ಮೇಲೆ ಪ್ರಸ್ತಾಪಿಸಿದ ಸುಷ್ಮಾ ಸ್ವರಾಜ್ ಉತ್ತರದಲ್ಲೇ ವಿಶ್ವಸಂಸ್ಥೆಯಲ್ಲಿ ಪ್ರಸ್ತಾಪಿಸಿರುವ ಅಂಶವಿದೆ. ಜೊತೆಗೆ ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಆಯೋಗದ (ECOSOC) ಭಾಗವಾಗಿರುವ CSW ಕಳೆದ ತಿಂಗಳು ಬಿಡುಗಡೆಗೊಳಿಸಿದ 47 ಪುಟಗಳ ವರದಿಯಲ್ಲಿ ’ಪಾಕಿಸ್ತಾನದಲ್ಲಿರುವ ಕ್ರೈಸ್ತರು ಮತ್ತು ಹಿಂದೂಗಳ ಸ್ಥಿತಿ ಶೋಚನೀಯವಾಗಿದೆ. ಪ್ರತೀ ವರ್ಷ ಈ ಸಮುದಾಯಗಳ ನೂರಾರು ಮಹಿಳೆಯರನ್ನು ಮತಾಂತರವಾಗುವಂತೆ ಹಾಗೂ ಮುಸಲ್ಮಾನ ಪುರುಷರನ್ನು ಮದುವೆಯಾಗುವಂತೆ ಒತ್ತಾಯಿಸಲಾಗುತ್ತಿದೆ. 18 ವರ್ಷಕ್ಕಿಂತ ಕಡಿಮೆ ವಯೋಮಾನದ, ಆರ್ಥಿಕವಾಗಿ ಹಿಂದುಳಿದ, ಗ್ರಾಮೀಣ ಭಾಗದ ಹೆಣ್ಣುಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ಈ ಹಿಂಸೆಗೆ ಒಳಪಡುತ್ತಿದ್ದಾರೆ’ ಎಂದು ಹೇಳಿದೆ.

ADVERTISEMENT

ನಾಲ್ಕನೆಯದು, ಕಳೆದ ವರ್ಷದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಇಮ್ರಾನ್ ಖಾನ್ ಕಾಶ್ಮೀರದಲ್ಲಿ ಮುಸ್ಲಿಮರ ಮೇಲೆ ಭಾರತ ಸರ್ಕಾರ ದೌರ್ಜನ್ಯ ನಡೆಸುತ್ತಿದೆ ಎಂದು ಆರೋಪಿಸಿದಾಗ, ವಿದೇಶಾಂಗ ವ್ಯವಹಾರ ಸಚಿವೆ ಸುಷ್ಮಾ ಸ್ವರಾಜ್ ಪಾಕಿಸ್ತಾನದಲ್ಲಿ ಶಿಯಾ ಮತ್ತು ಅಹ್ಮದೀಯ ಜನಾಂಗದ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದು ಆರೋಪಿಸಿದ್ದರು. ಇಷ್ಟನ್ನು ಬಿಟ್ಟರೆ ಮೋದಿ ನೇತೃತ್ವದ ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿಯೇ ಇಲ್ಲ ಎಂಬುದು ಅವರ ಸಂದೇಹ. ಈ ಅಂಶದಲ್ಲೇ ತಪ್ಪು ನುಸುಳಿದೆ. ಸುಷ್ಮಾ ಸ್ವರಾಜ್ ಉತ್ತರಿಸಿದರು ಎಂಬುದು ತಪ್ಪು ಮಾಹಿತಿ. ಕಳೆದ ವರ್ಷ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಇಮ್ರಾನ್ ಖಾನ್ ವಿಶ್ವಸಂಸ್ಥೆಯಲ್ಲಿ ತಾವು ಮಾಡಿದ ಮೊದಲ ಭಾಷಣದಲ್ಲಿ ಕಾಶ್ಮೀರದ ವಿಷಯ ಪ್ರಸ್ತಾಪಿಸಿ ಮಾತನಾಡಿದ್ದು ನಿಜ. ಆದರೆ ಅಧಿವೇಶನಕ್ಕೆ ತಿಂಗಳ ಮೊದಲೇ ದುರ್ದೈವವಶಾತ್ ಸುಷ್ಮಾ ಸ್ವರಾಜ್ ತೀರಿಕೊಂಡಾಗಿತ್ತು. ಭಾರತ ಸರ್ಕಾರದ ಪ್ರತಿನಿಧಿಯಾಗಿ ವಿಧಿಶಾ ಮೈತ್ರಾ ಉತ್ತರಿಸಿದ್ದರು. ‘ಪಾಕಿಸ್ತಾನದಲ್ಲಿ ಕ್ರೈಸ್ತರು, ಸಿಕ್ಕರು, ಅಹ್ಮದೀಯರು, ಹಿಂದೂಗಳು, ಶಿಯಾ, ಸಿಂಧೀ ಮತ್ತು ಬಲೂಚಿಗಳ ಮೇಲೆ ಧರ್ಮನಿಂದನೆ, ಹಿಂಸೆ, ಬಲವಂತದ ಮತಾಂತರ ನಿರಂತರವಾಗಿ ನಡೆಯುತ್ತಿದೆ’ ಎಂಬುದನ್ನು ಪ್ರಸ್ತಾಪಿಸಿದ್ದರು.

ಉಳಿದಂತೆ ಲೇಖಕರು ‘ಪ್ರಧಾನಿ ತುಮಕೂರಿಗೆ ಭೇಟಿ ಇತ್ತಾಗ ಪಾಕಿಸ್ತಾನ ಸರ್ಕಾರ ಅಲ್ಲಿನ ದಲಿತರ ಮೇಲೆ ದೌರ್ಜನ್ಯ ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ. ಆದರೆ ಭಾರತದಲ್ಲಾಗುತ್ತಿರುವ ದೌರ್ಜನ್ಯ ಕಾಣುವುದಿಲ್ಲವೇ?’ ಎಂದು ಪ್ರಶ್ನಿಸಿದ್ದಾರೆ. ದಲಿತರ ಮೇಲೆ ದೌರ್ಜನ್ಯ ಎಲ್ಲಿ ನಡೆದರೂ ಅದು ಖಂಡನಾರ್ಹ. ಭಾರತದಲ್ಲಾದ ಘಟನೆಗಳ ಬಗ್ಗೆ ಪ್ರಧಾನಿ ಗಟ್ಟಿಯಾಗಿ ಮಾತನಾಡಬೇಕು. ಆದರೆ ಮೋದಿ ಅವರ ಮಾತಿನಲ್ಲಿ ಸುಳ್ಳಿಲ್ಲ ಎಂಬುದನ್ನು CSW ವರದಿ ಹೇಳುತ್ತಿದೆ. ಜೊತೆಗೆ ಭಾರತದಲ್ಲಿ ದಲಿತರ ಹಿತ ಕಾಯಲು ನಮ್ಮ ಸಂವಿಧಾನ, ವಿಶೇಷ ಕಾನೂನುಗಳ ಆಸರೆಯಿದೆ. ಪಾಕಿಸ್ತಾನದಲ್ಲಿ ದಲಿತರಾಗಲೀ, ಆರ್ಥಿಕವಾಗಿ ಹಿಂದುಳಿದ ಇತರ ಅಲ್ಪಸಂಖ್ಯಾತರಾಗಲೀ ಯಾವುದೇ ಆಸರೆ, ಭರವಸೆ ಇಲ್ಲದೇ ಬದುಕುತ್ತಿದ್ದಾರೆ. ಹಾಗಾಗಿ ಅಲ್ಲಿನ ಕೂಗಿಗೆ ಪ್ರತಿಸ್ಪಂದಿಸಬೇಡಿ ಎನ್ನುವುದು ಅಮಾನವೀಯ ಹಾಗೂ ಬೇಜವಾಬ್ದಾರಿ ಮಾತಾಗುತ್ತದೆ.

ಕೊನೆಯದಾಗಿ, ಸಿಎಎಯಿಂದ ಮುಸಲ್ಮಾನರನ್ನು ಹೊರಗಿಟ್ಟು ಕ್ರೈಸ್ತರನ್ನು ಮಾತ್ರ ಸೇರಿಸಲಾಗಿದೆ. ದೌರ್ಜನ್ಯಕ್ಕೆ ಒಳಗಾಗಿರುವ ಕ್ರೈಸ್ತರಿಗೆ ಆಶ್ರಯ ನೀಡಲು ಕ್ರೈಸ್ತರು ಬಹುಸಂಖ್ಯಾತರಾಗಿರುವ ದೇಶಗಳಿಲ್ಲವೇ? ಟ್ರಂಪ್ ಅವರನ್ನು ಎದುರಿಸುವ ಶಕ್ತಿ ಇಲ್ಲ ಎಂಬ ಕಾರಣಕ್ಕೆ ಕ್ರೈಸ್ತರನ್ನು ಸೇರಿಸಲಾಗಿದೆಎಂದು ಲೇಖಕರು ಅಭಿಪ್ರಾಯ ಪಟ್ಟಿದ್ದಾರೆ. ಸಿಎಎ ಮುಖ್ಯ ಉದ್ದೇಶವೇ ನಮ್ಮ ನೆರೆಯ ರಾಷ್ಟ್ರಗಳಲ್ಲಿ ಅಲ್ಪಸಂಖ್ಯಾತರಾಗಿ, ದೌರ್ಜನ್ಯಕ್ಕೆ ಒಳಗಾಗಿರುವವರಿಗೆ ಮಾನವೀಯ ನೆಲೆಯಲ್ಲಿ ಆಶ್ರಯ ಕೊಡಬೇಕು ಎಂಬುದು. ನಮ್ಮ ನೆರೆಯ ರಾಷ್ಟ್ರಗಳಾದ ಪಾಕಿಸ್ತಾನ, ಆಫ್ಘಾನಿಸ್ತಾನ, ಬಾಂಗ್ಲಾದೇಶಗಳು ’ಇಸ್ಲಾಮಿಕ್ ಸ್ಟೇಟ್ಸ್’ ಎಂದು ಗುರುತಿಸಿಕೊಂಡಿರುವ ಮುಸಲ್ಮಾನ ಬಾಹುಳ್ಯದ ದೇಶಗಳು. ಅಲ್ಲಿ ಹಿಂದೂಗಳಂತೆಯೇ ಕ್ರೈಸ್ತ, ಸಿಖ್, ಜೈನ, ಬೌದ್ಧ, ಪಾರ್ಸಿಗಳು ಅಲ್ಪಸಂಖ್ಯಾತರು ಎನಿಸಿಕೊಳ್ಳುತ್ತಾರೆಯೇ ಹೊರತು, ಮುಸಲ್ಮಾನರಲ್ಲ. ದೌರ್ಜನ್ಯದ ವರದಿಗಳು ಬರುತ್ತಿರುವುದು ಈ ಅಲ್ಪಸಂಖ್ಯಾತರ ಕುರಿತೇ. ಹಾಗಾಗಿ ಪೌರತ್ವ ಹೊಂದಲು ಸಿಎಎ ಮೂಲಕ ಸುಲಭ ಮಾರ್ಗವನ್ನು ತೆರೆಯಲಾಗಿದೆಯೇ ವಿನಹ, ಮುಸಲ್ಮಾನರಾರೂ ಭಾರತಕ್ಕೆ ಆಶ್ರಯ ಬಯಸಿ ಬರಬಾರದೆಂಬ ನಿರ್ಬಂಧ ಈ ಕಾನೂನಿನ ಮೂಲಕ ತಂದಿಲ್ಲ.

ಲೇಖಕರು ಪ್ರಶ್ನೆಗಳನ್ನು ಮುಂದಿಡುವ ಮುಂಚೆ ಪೀಠಿಕೆಯಾಗಿ ‘ಅಮಿತ್ ಶಾ ಮತ್ತು ಮೋದಿ ಅವರಿಗೆ ಮುಸ್ಲಿಮರ ಬಗ್ಗೆ ಪೂರ್ವಗ್ರಹವಿದೆ. ಗುಜರಾತ್ ನರಮೇಧ ಅದಕ್ಕೆ ಉದಾಹರಣೆ’ ಎಂಬ ವಾದ ಸರಣಿಯಿಂದ ಆರಂಭಿಸಿದ್ದಾರೆ. ಗುಜರಾತ್ ಘಟನೆಯ ಪೂರ್ವಗ್ರಹದಲ್ಲೇ ಲೇಖಕರು ಸಿಎಎ ಅಂಶಗಳನ್ನು ನೋಡಿರುವಂತಿದೆ. ಹಾಗಾಗಿ ತಾತ್ವಿಕ ಪ್ರಶ್ನೆಗಳು ಪೊಳ್ಳಾಗಿವೆ. ಲೇಖನದುದ್ದಕ್ಕೂ ಬಳಸಿರುವ ವ್ಯಂಗ್ಯದ ಮಾತುಗಳು ಪ್ರಸ್ತುತ ಚರ್ಚೆಗೆ ಯಾವ ಮೌಲ್ಯವನ್ನೂ ಒದಗಿಸುವುದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.