ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸಿಕ್ಕ ಯಶಸ್ಸು ಅತ್ಯಂತ ಅಗತ್ಯವಾಗಿದ್ದ ಆಶಾವಾದದ ಅಲೆಯನ್ನು ಸೃಷ್ಟಿಸಿದೆ. ಹೊಸ ಸರ್ಕಾರದ ರಚನೆಗೆ ಸಿಕ್ಕ ಈ ಜನಾದೇಶವು ಮುಖ್ಯವಾಗಿ ಭ್ರಷ್ಟಾಚಾರ, ಬೆಲೆ ಏರಿಕೆ, ದ್ವೇಷ, ಹಿಂಸೆ ಹಾಗೂ ರಾಜ್ಯದ ಸಾಮಾನ್ಯ ಪ್ರಜೆಯನ್ನು ಬಾಧಿಸಿದ ಹಲವಾರು ಸಮಸ್ಯೆಗಳ ವಿರುದ್ಧದ ಫಲಿತಾಂಶವಾಗಿದೆ. ಅಧಿಕಾರಕ್ಕೆ ಬಂದಾಗಿನಿಂದ ಹೊಸ ಸರ್ಕಾರವು ಸುಳ್ಳು ಸುದ್ದಿಗಳ ವಿಷಕಾರಿ ಪ್ರಚಾರಾಂದೋಲನಕ್ಕೂ ತುತ್ತಾಗಿದೆ.
ಹೀಗಾಗಿ ಸರ್ಕಾರವು ತಾನು ನೀಡಿದ್ದ ಭರವಸೆಗಳಿಗೆ ಬದ್ಧವಾಗಿ ಉಳಿಯುವ, ಎಲ್ಲಾ ‘ಐದು ಗ್ಯಾರಂಟಿ’ಗಳನ್ನು ಅನುಷ್ಠಾನಗೊಳಿಸುವ, ಬೆಳವಣಿಗೆಯನ್ನು ಉತ್ತೇಜಿಸುವ ಹಾಗೂ ಎಲ್ಲರನ್ನೂ ಸಾಮಾಜಿಕವಾಗಿ ಒಳಗೊಳ್ಳುವಂತಹ ಆಡಳಿತ ನೀಡುವ ಮಾತುಗಳನ್ನು ಪದೇಪದೇ ಆಡಬೇಕಾಯಿತು. ಈ ಸರ್ಕಾರದ ಸಾಧನೆಯನ್ನು ಮೌಲ್ಯಮಾಪನ ಮಾಡಲು ನೂರು ದಿನಗಳ ಅವಧಿ ಸಾಕಾಗುವುದಿಲ್ಲ ಎಂಬುದೇನೋ ನಿಜ. ಆದರೆ, ಸರ್ಕಾರವು ಗಮನಹರಿಸಬೇಕಾದ ಪ್ರಮುಖ ವಿಷಯಗಳ ಬಗ್ಗೆ ಅವಲೋಕಿಸಲು ಇದೊಂದು ಒಳ್ಳೆಯ ಸಂದರ್ಭವೂ ಆಗಿದೆ.
ವಾಗ್ದಾನಗಳನ್ನು ಅನುಷ್ಠಾನಗೊಳಿಸುವ ಅಥವಾ ಹೊಸ ಪ್ರಜಾತಾಂತ್ರಿಕ ರಾಜಕಾರಣಕ್ಕೆ ಎಡೆ ಮಾಡಿಕೊಡುವ ಯಾವುದೇ ಸರ್ಕಾರದ ಸಾಮರ್ಥ್ಯವನ್ನು ದೊಡ್ಡಮಟ್ಟದ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಸಂರಚನೆಗಳು ನಿರ್ಧರಿಸುತ್ತವೆ. ಭಾರತದ ಬೇರೆಡೆಗಳಂತೆ ಕರ್ನಾಟಕದಲ್ಲಿ ಕೂಡ ಈ ಸಂರಚನೆಗಳು ಬಲಪಂಥೀಯ ಹಾಗೂ ಎಡಪಂಥೀಯ ನಿಲುವುಗಳನ್ನು ತುಷ್ಟೀಕರಿಸುತ್ತ ಸಾಗಬೇಕಾದ ಸಂದರ್ಭವನ್ನು ಸೃಷ್ಟಿಸಿವೆ.
ಜಾತಿಯು ಒಂದು ಅಸ್ಮಿತೆಯ ಗುಂಪಾಗಿ, ಒಂದು ಸಂಪನ್ಮೂಲವಾಗಿ ಹಾಗೂ ಒಂದು ರಾಜಕೀಯ ಶಕ್ತಿಯಾಗಿ ಒಗ್ಗೂಡುವುದನ್ನು ಇದು ಒಳಗೊಂಡಿದೆ. ಅತ್ಯಂತ ಹಿಂದುಳಿದ ವರ್ಗಗಳ ಆರ್ಥಿಕ ಅಗತ್ಯಗಳನ್ನು ಪೂರೈಸದೆ ಇರುವ ಉಪೇಕ್ಷೆಯ ಆರ್ಥಿಕ ರಚನೆಯು ಪ್ರಶ್ನಾತೀತ ಎಂದು ಭಾವಿಸಿರುವ ನೀತಿಗಳು ಇಲ್ಲಿ ಪೂರಕವಾಗಿ ಕೆಲಸ ಮಾಡಿವೆ. ಹಾಗೆಯೇ, ದುರ್ಬಲ ವರ್ಗಗಳ ಜನರನ್ನು ಚುನಾವಣೆ ಬಂದಾಗ ಓಲೈಸುವ, ಬಹುಜನರಿಗೆ ಪ್ರಿಯವಾಗುವ ರಾಜಕಾರಣವು ಇಲ್ಲಿದೆ.
ಕರ್ನಾಟಕವು ಇದನ್ನು ಬದಲಾಯಿಸಬೇಕೆಂದರೆ ಜಾತಿ, ಆರ್ಥಿಕತೆ ಮತ್ತು ರಾಜಕಾರಣದ ಸಂರಚನೆಗಳನ್ನು ಜಾಗರೂಕವಾಗಿ ಪರಿಶೀಲನೆ ಮಾಡಬೇಕಾಗುತ್ತದೆ. ಅದಾಗಲೇ ಸವಲತ್ತುಳ್ಳವರಿಗೇ ಸವಲತ್ತುಗಳನ್ನು ಕೊಡಮಾಡುವ ಹಾಗೂ ಅವಕಾಶ ವಂಚಿತರನ್ನು ಮತ್ತಷ್ಟು ಅವಕಾಶ ವಂಚಿತರಾಗಿಸುವ ಸಂರಚನೆಗಳ ಪುನರ್‌ಸೃಷ್ಟಿ ಆಗದಿರಲು ಇಂತಹ ಎಚ್ಚರಿಕೆ ಅಗತ್ಯವಿರುತ್ತದೆ. ಇದನ್ನು ಮಾಡಿ ತೋರಿಸಬೇಕೆಂದರೆ, ರಾಜ್ಯದಲ್ಲಿ ಮತ್ತು ಕಾಂಗ್ರೆಸ್ಸಿನ ಆಡಳಿತಾತ್ಮಕ ಕ್ರಮಗಳಲ್ಲಿ ಕೆಲವು ಪ್ರಮುಖ ಬದಲಾವಣೆಗಳನ್ನು ಕೈಗೊಳ್ಳುವುದು ಅಗತ್ಯವಿರುತ್ತದೆ.
ಜಾತಿ ಆಧಾರಿತ ಬೇಡಿಕೆಗಳು ಮತ್ತು ಜಾತಿ ಆಧಾರಿತ ಮೈತ್ರಿಕೂಟಗಳನ್ನು ನಿರ್ವಹಿಸಲೇಬೇಕಾದ ಸಂದರ್ಭಗಳು ಈ ಹಿಂದೆ ಸರ್ಕಾರಗಳಿಗೆ ಎದುರಾಗಿವೆ. ಆದರೆ, ರಾಜ್ಯವು ಹೀಗೆ ಜಾತಿ ಆಧಾರಿತ ಬೇಡಿಕೆಗಳಿಗೆ ಸ್ಪಂದಿಸಿದ ವಿದ್ಯಮಾನಗಳು ನಿಜವಾಗಿಯೂ ಜಾತಿ ಆಧಾರಿತ ಅಸಮಾನತೆಗಳನ್ನು ಅಥವಾ ಜಾತಿ ಆಧಾರಿತ ಸವಲತ್ತುಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಪರಿಹರಿಸಿಲ್ಲ.
ಜಾತಿ ಆಧಾರಿತ ನಿಗಮಗಳ ಸ್ಥಾಪನೆಯು ಸೂಕ್ಷ್ಮ ಅಥವಾ ಸ್ಥೂಲಸ್ತರಗಳಲ್ಲಿ ಜಾತಿ ಆಧಾರಿತ ಅಸಮಾನತೆಗಳನ್ನು ಪರಿಹರಿಸುವ ಬದಲಿಗೆ ಸ್ವಾರ್ಥ ಹಿತಾಸಕ್ತಿಗಳಿಗೆ ತಮ್ಮ ವೈಯಕ್ತಿಕ ಬೆಳವಣಿಗೆಗಾಗಿ ಅಥವಾ ಸಂಕುಚಿತ ರಾಜಕಾರಣದ ಕಾರ್ಯಸೂಚಿಗಳಿಗಾಗಿ ಈ ಸಂಸ್ಥೆಗಳ ಆಯಕಟ್ಟಿನ ಹುದ್ದೆಗಳನ್ನು ಹಿಡಿತದಲ್ಲಿ ಇಟ್ಟುಕೊಳ್ಳಲು ಆಸ್ಪದ ಮಾಡಿಕೊಟ್ಟಿದೆ. ಜಾತಿಯ ಕಾರಣದಿಂದಾಗಿನ ಅವಕಾಶಗಳ ಅಲಭ್ಯತೆಯನ್ನು ಗುರುತಿಸಿ, ನಿವಾರಿಸಲು ಅಗತ್ಯ ಕ್ರಮ ಕೈಗೊಳ್ಳುವುದರ ಜೊತೆಗೆ ಎಲ್ಲ ಹಂತಗಳಲ್ಲೂ ಉತ್ತಮ ಗುಣಮಟ್ಟದ ಸಾರ್ವಜನಿಕ ಶಿಕ್ಷಣವನ್ನು ಲಭ್ಯವಾಗಿಸಬೇಕಾಗುತ್ತದೆ. ಈ ಕ್ರಮವು ಅವಕಾಶಗಳು ಮತ್ತು ಫಲಿತಾಂಶಗಳ ಸಮಾನತೆಯನ್ನು ಉತ್ತೇಜಿಸಲು ಅಡಿಪಾಯವಾಗುತ್ತದೆ.
ಇನ್ನು, ರಾಷ್ಟ್ರೀಯ ಶಿಕ್ಷಣ ನೀತಿಯ ಬದಲಿಗೆ ರಾಜ್ಯ ಶಿಕ್ಷಣ ನೀತಿಯನ್ನು ಜಾರಿಗೊಳಿಸುವುದಾಗಿ ಘೋಷಿಸಲಾಗಿದೆ. ಹೀಗೆ ಮಾಡುವಾಗ ಶೈಕ್ಷಣಿಕ ಅವಕಾಶ, ಗುಣಮಟ್ಟ, ಎಲ್ಲಾ ಸಾರ್ವಜನಿಕ ಶಿಕ್ಷಣ ಸಂಸ್ಥೆಗಳು ಹಾಗೂ ಕೋರ್ಸ್‌ಗಳ ಫಲಿತಾಂಶಗಳು ಖಾಸಗಿ ಶಿಕ್ಷಣ ಕ್ಷೇತ್ರವನ್ನು ನಿಯಂತ್ರಿಸುವ ವ್ಯವಸ್ಥೆಗೆ ಸರಿಸಾಟಿಯಾಗಿರುವಂತೆ ಕ್ರಮವಹಿಸಬೇಕಾಗುತ್ತದೆ.
ಅದೇ ರೀತಿಯಾಗಿ, ನಮ್ಮ ಆರ್ಥಿಕ ನೀತಿಗಳು ಗ್ರಾಮೀಣ ಹಾಗೂ ಕೃಷಿ ಆರ್ಥಿಕತೆಗಿಂತ ಹೆಚ್ಚಾಗಿ ನಗರೀಕೃತ, ಔದ್ಯಮಿಕ ಹಾಗೂ ಷೇರು ಮಾರುಕಟ್ಟೆಯಂತಹ ಊಹಾತ್ಮಕ ಆರ್ಥಿಕತೆಗಳಿಗೆ ಹೆಚ್ಚು ಆದ್ಯತೆ ಕೊಡುವ ರೀತಿಯಲ್ಲಿ ಮುಂದುವರಿದಿವೆ. ಕಾಂಗ್ರೆಸ್ ಪಕ್ಷಕ್ಕೆ ಅತ್ಯುತ್ಸಾಹದಿಂದ ಮತ ನೀಡಿರುವವರು ಗ್ರಾಮೀಣ ಜನರು ಎಂಬುದು ವಾಸ್ತವವಾದರೂ ಚುನಾವಣಾ ನಂತರದ ಹೊಸ ಬಜೆಟ್‌ನಲ್ಲಿ ಬೆಂಗಳೂರು ಮತ್ತು ಇತರ ನಗರಗಳ ಮೂಲಸೌಕರ್ಯಕ್ಕಾಗಿ ಹೆಚ್ಚಿನ ಹಣ ಮೀಸಲಿಡಲಾಗಿದೆ. ‘ಬ್ರ್ಯಾಂಡ್ ಬೆಂಗಳೂರು’ಗೆ ಉತ್ತೇಜನ ನೀಡುವ ಜೊತೆಗೆ ಪ್ರಾದೇಶಿಕ ಅಭಿವೃದ್ಧಿ, ಗ್ರಾಮೀಣ- ನಗರ ಹಾಗೂ ಕೃಷಿ- ಕೈಗಾರಿಕೆಗಳ ಸಮತೋಲನದ ಅಗತ್ಯವನ್ನು ಗಮನದಲ್ಲಿ ಇರಿಸಿಕೊಳ್ಳಬೇಕಾಗುತ್ತದೆ. ಈ ಕಾರಣದಿಂದ, ಚುನಾವಣೆ ಪ್ರಚಾರದ ಸಂದರ್ಭದಲ್ಲಿ, ಭೂಸ್ವಾಧೀನ ಕಾಯ್ದೆ– 2019 ಮತ್ತು ಭೂ ಸುಧಾರಣೆ ತಿದ್ದುಪಡಿ– 2020, ಇವುಗಳನ್ನು ಹಿಂತೆಗೆದುಕೊಳ್ಳುವುದಾಗಿ ನೀಡಲಾಗಿದ್ದ ಭರವಸೆಗಳನ್ನು ಈಡೇರಿಸಬೇಕಾಗುತ್ತದೆ. ಇದು ಕೃಷಿ ಆಧಾರಿತ ಮತ್ತು ಗ್ರಾಮೀಣ ಆರ್ಥಿಕತೆ ದೃಷ್ಟಿಯಿಂದ ಮಾತ್ರ ಮಹತ್ವದ್ದಾಗಿರದೆ ಮಾರುಕಟ್ಟೆ ಪ್ರಣೀತ ಆರ್ಥಿಕತೆಯ ಲೂಟಿ ಪ್ರವೃತ್ತಿಯನ್ನೂ ಚಿವುಟಿ ಹಾಕುತ್ತದೆ.
ಹವಾಮಾನ ವೈಪರೀತ್ಯದ ಸವಾಲುಗಳನ್ನು ಎದುರಿಸುವ ದಿಸೆಯಲ್ಲಿ ರಾಜ್ಯವು ಅದಕ್ಕೆ ಹೊಂದಿಕೊಳ್ಳುವಂತಹ ಹಾಗೂ ಕಡಿವಾಣ ಹಾಕುವಂತಹ ವಿಕೇಂದ್ರೀಕೃತ ರೀತಿಯ ಕ್ರಿಯಾಯೋಜನೆಗಳಿಗೆ ಚಾಲನೆ ನೀಡಬೇಕಾಗುತ್ತದೆ. ಇದರಲ್ಲಿ ವಿಫಲವಾದರೆ ರಾಜ್ಯ ಸರ್ಕಾರವು ರಕ್ಷಣೆ, ಪುನರ್ವಸತಿ ಮತ್ತು ಪರಿಹಾರಗಳಿಗಾಗಿ (ಬರ ಮತ್ತು ಪ್ರವಾಹದ ಸಂದರ್ಭಗಳಲ್ಲಿ ಮಾಡುವಂತೆ) ಪುನರಾವರ್ತಿತ ವೆಚ್ಚ ಭರಿಸಬೇಕಾಗುತ್ತದೆ.
ಜೊತೆಗೆ, ಆಹಾರ ಉತ್ಪಾದನೆಯ ತೀವ್ರ ನಷ್ಟದ ಅಪಾಯಗಳನ್ನು ಎದುರಿಸಲೇಬೇಕಾಗುತ್ತದೆ. ರಾಜ್ಯದಲ್ಲಿ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಪರಿಷ್ಕರಿಸುವ ತುರ್ತು ಅವಶ್ಯಕತೆ ಕೂಡ ಇದೆ. ಜನರು ಆರೋಗ್ಯಕ್ಕಾಗಿ ಮಾಡುವ ವೆಚ್ಚವು ಹಲವರನ್ನು ಬಡತನಕ್ಕೆ ದೂಡುತ್ತಿದೆ. ಹೀಗಾಗಿ, ಸರ್ಕಾರವು ಈ ವೆಚ್ಚವನ್ನು ಜನರ ಮೇಲೆ ಹೊರಿಸಬಾರದು.
ಐದು ಗ್ಯಾರಂಟಿಗಳಾದ ಹೆಚ್ಚುವರಿ 5 ಕೆ.ಜಿ. ಅಕ್ಕಿ, ಉಚಿತ ವಿದ್ಯುತ್, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಮನೆಯ ಯಜಮಾನಿಯರಿಗೆ ಪ್ರತಿ ತಿಂಗಳು ₹ 2,000 ಮತ್ತು ನಿರುದ್ಯೋಗಿ ಪದವೀಧರ ಯುವಕ, ಯುವತಿಯರಿಗೆ ಮಾಸಿಕ ಭತ್ಯೆ, ಇವು ಘೋಷಿತ ‘ಸಾರ್ವತ್ರಿಕ ಕನಿಷ್ಠ ಆದಾಯ’ಕ್ಕೆ ಬದಲಾಗಿ ರಾಜಕೀಯ ರಕ್ಷಣೆಯನ್ನು ಪ್ರತಿನಿಧಿಸುತ್ತವೆ. ಆದರೂ ಹೆಚ್ಚಿನ ಜನರ ಖರೀದಿ ಸಾಮರ್ಥ್ಯ ಹೆಚ್ಚಿಸಲು, ಬದುಕಿನ ಗುಣಮಟ್ಟ ಉತ್ತಮಗೊಳಿಸಲು ಹಾಗೂ ಸಂಚಾರದ ಅಗತ್ಯಗಳನ್ನು ಪೂರೈಸಲು ಸಹಕಾರಿಯಾಗುವುದರಿಂದ ಈ ‘ಗ್ಯಾರಂಟಿ’ಗಳನ್ನು ಮರುವಿತರಣೆಯ ಮಾರ್ಗೋಪಾಯಗಳೆಂದು ಒಪ್ಪಿಕೊಳ್ಳಬೇಕಾಗುತ್ತದೆ. ಆದರೆ ಈ ಯೋಜನೆಗಳ ಸೌಲಭ್ಯಗಳು ಪರಿಣಾಮಕಾರಿಯಾಗಿ ಫಲಾನುಭವಿಗಳಿಗೆ ತಲುಪುತ್ತವೆ ಎಂಬುದನ್ನು ಖಾತರಿಗೊಳಿಸಿಕೊಳ್ಳಲು ಸಮರ್ಥ ಆಡಳಿತಾತ್ಮಕ ವ್ಯವಸ್ಥೆ ಅಗತ್ಯವಿರುತ್ತದೆ.
ಕೆಲವು ವರ್ಷಗಳಿಂದ ಕರ್ನಾಟಕದ ಆಡಳಿತ ವ್ಯವಸ್ಥೆಯು ಹಲವಾರು ಸ್ಕೀಮ್‌ಗಳು ಹಾಗೂ ಕಾರ್ಯಕ್ರಮಗಳ ಹೊರೆಯಿಂದ ಬಳಲುತ್ತಿದೆ. ಇದರ ಜೊತೆಗೆ ಮೇಲ್ವಿಚಾರಣೆಯ ಕೊರತೆ ಮತ್ತು ಹೆಚ್ಚಾದ ರಾಜಕೀಯ ಹಸ್ತಕ್ಷೇಪಗಳು ಕಾಡುತ್ತಿವೆ. ಈ ಸ್ಕೀಮುಗಳ ಸೌಲಭ್ಯಗಳನ್ನು ಫಲಾನುಭವಿಗಳಿಗೆ ತಲುಪಿಸಬೇಕೆಂದರೆ ಹಾಗೂ ಒಟ್ಟಾರೆಯಾಗಿ ದಕ್ಷತೆಯಿಂದ ಕೂಡಿದ ಭ್ರಷ್ಟಾಚಾರಮುಕ್ತ ಆಡಳಿತವನ್ನು ಖಾತರಿಗೊಳಿಸಬೇಕೆಂದರೆ ಪಂಚಾಯಿತಿಗಳು, ನಗರಸಭೆಗಳಿಂದ ಹಿಡಿದು ರಾಜ್ಯ ಮಟ್ಟದವರೆಗೆ ಆಡಳಿತ ವ್ಯವಸ್ಥೆಯನ್ನು ಪೂರ್ತಿಯಾಗಿ ಸರಿಪಡಿಸಬೇಕಾಗುತ್ತದೆ.
ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ವಲಯಗಳ ನಡುವಿನ ಸಂಬಂಧಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿ, ಅತ್ಯಂತ ಅವಕಾಶವಂಚಿತ ಪ್ರಜೆಗಳ ಶೋಚನೀಯ ಸ್ಥಿತಿ ಮುಂದುವರಿಯುವುದಕ್ಕೆ ತಡೆಯೊಡ್ಡುವ ಕಾರ್ಯನೀತಿಗಳು ಹಾಗೂ ಆಡಳಿತವು ಸರ್ಕಾರಕ್ಕೆ ಜನರ ಆದೇಶವನ್ನು ಈಡೇರಿಸಲು ಅನುವು ಮಾಡಿಕೊಡುತ್ತವೆ. ಹೀಗಾದಾಗ ಮಾತ್ರವೇ ಆರ್ಥಿಕ ಬೆಳವಣಿಗೆಯು ಸಾಮಾಜಿಕ ಕಲ್ಯಾಣಕ್ಕೆ ಪೂರಕವಾಗುತ್ತದೆ; ರಾಜಕಾರಣ ಎಂಬುದು ನಿರ್ದೇಶಿಸಬಲ್ಲ ಹಾಗೂ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬಲ್ಲ ಯಂತ್ರದಂತೆ ಕಾರ್ಯನಿರ್ವಹಿಸುತ್ತದೆ.
ಇದಕ್ಕೆ ಆಸ್ಪದ ಮಾಡಿಕೊಡುವ ಜೊತೆಗೆ ಕರ್ನಾಟಕದ ಬಹುತ್ವ ಹಾಗೂ ವಿವಿಧತೆಯಿಂದ ಕೂಡಿದ ಸಾಮಾಜಿಕ ವಿನ್ಯಾಸದ ಕಾಯ್ದುಕೊಳ್ಳುವಿಕೆಯನ್ನು ಖಾತರಿಗೊಳಿಸುವ ವಿಶಾಲ ಕಾರ್ಯಸೂಚಿಯು ಕುವೆಂಪು ಅವರ ನುಡಿಯಂತೆ ರಾಜ್ಯವನ್ನು ‘ಸರ್ವ ಜನಾಂಗದ ಶಾಂತಿಯ ತೋಟ’ವಾಗಿ ಮಾಡುವ ಸಾಧ್ಯತೆಯನ್ನು ತೆರೆಯುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.