ADVERTISEMENT

ಲಿಂಕ್ಡ್‌ಇನ್ ಮೂಲಕ ಗೂಢಚಾರರ ನೇಮಕ!

ಗೂಢಚರ್ಯೆಗೆ ಜನರನ್ನು ನೇಮಿಸಿಕೊಳ್ಳಲು ಸಾಮಾಜಿಕ ಜಾಲತಾಣಗಳೂ ಬಳಕೆಯಾಗುತ್ತಿವೆ

ಪ್ರಜಾವಾಣಿ ವಿಶೇಷ
Published 6 ಸೆಪ್ಟೆಂಬರ್ 2019, 20:00 IST
Last Updated 6 ಸೆಪ್ಟೆಂಬರ್ 2019, 20:00 IST
   

ಅಮೆರಿಕದ ಹಿರಿಯ, ಮಾಜಿ ವಿದೇಶಾಂಗ ಅಧಿಕಾರಿಯೊಬ್ಬರಿಗೆ ಲಿಂಕ್ಡ್‌ಇನ್‌ ಮೂಲಕ ಸಂದೇಶವೊಂದು ಬಂದಿತ್ತು. ಚೀನಾದಲ್ಲಿ ಒಳ್ಳೆಯ ಅವಕಾಶ ಕೊಡಿಸುವ ಮಾತು ಅದರಲ್ಲಿ ಇತ್ತು. ಡೆನ್ಮಾರ್ಕ್‌ನ ಮಾಜಿ ವಿದೇಶಾಂಗ ಅಧಿಕಾರಿಯೊಬ್ಬರಿಗೆ ಕೂಡ ಲಿಂಕ್ಡ್‌ಇನ್‌ ಮೂಲಕ ಸಂದೇಶವೊಂದು ಬಂದಿತ್ತು, ‘ಬೀಜಿಂಗ್‌ಗೆ ಬನ್ನಿ, ಭೇಟಿಯಾಗೋಣ’ ಎಂಬರ್ಥದ ಮಾತು ಅದರಲ್ಲಿತ್ತು. ಅದು ಚೀನಾದ ಮಾನವ ಸಂಪನ್ಮೂಲ ಸಂಸ್ಥೆಯೊಂದರ ಮಹಿಳೆಯೊಬ್ಬರಿಂದ ಬಂದಂತೆ ಇತ್ತು. ಆದರೆ, ಅವರನ್ನು ಭೇಟಿ ಮಾಡಿದ್ದು ಮಧ್ಯವಯಸ್ಸಿನ ಮೂವರು ಪುರುಷರು. ಸಂಶೋಧನೆಗೆ ‘ಚೀನಾದ ವ್ಯವಸ್ಥೆಯೊಳಗೆ ಸಂಪರ್ಕ ದೊರಕಿಸಲು ಸಹಾಯ ಮಾಡಬಲ್ಲೆವು’ ಎಂದು ಈ ಮೂವರು ಆ ಮಾಜಿ ಅಧಿಕಾರಿಗೆ ಹೇಳಿದರು.

ಅಮೆರಿಕದ ಮಾಜಿ ಅಧಿಕಾರಿಯೊಬ್ಬರ ಜೊತೆ ಲಿಂಕ್ಡ್‌ಇನ್‌ ಮೂಲಕ ಸ್ನೇಹ ಬೆಳೆಸಿಕೊಂಡ ವ್ಯಕ್ತಿಯೊಬ್ಬ, ತಾನು ಕ್ಯಾಲಿಫೋರ್ನಿಯಾ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯಲ್ಲಿ ಸಂಶೋಧಕ ಎಂದು ಹೇಳಿಕೊಂಡ. ಆದರೆ, ಅಂತಹ ಯಾವುದೇ ವ್ಯಕ್ತಿ ಅಲ್ಲಿ ಇರಲಿಲ್ಲ! ಗೂಢಚಾರರು ತಮಗೆ ಬೇಕಾದವರನ್ನು ನೇಮಕ ಮಾಡಿಕೊಳ್ಳಲು ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳುತ್ತಿದ್ದಾರೆ, ಅದರಲ್ಲೂ ಲಿಂಕ್ಡ್‌ಇನ್‌ ತಾಣವನ್ನು ಹೆಚ್ಚಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಪಾಶ್ಚಿಮಾತ್ಯ ದೇಶಗಳ ಅಧಿಕಾರಿಗಳು ಹೇಳಿದ್ದಾರೆ. ವಿದೇಶಗಳ ಏಜೆಂಟರು ಈ ತಾಣದ ಸಹಸ್ರಾರು ಬಳಕೆದಾರರನ್ನು ಸಂಪರ್ಕಿಸಿರುವ ಬಗ್ಗೆ ಅಮೆರಿಕ, ಬ್ರಿಟನ್, ಜರ್ಮನಿ ಮತ್ತು ಫ್ರಾನ್ಸ್‌ ದೇಶಗಳ ಗೂಢಚರ ಸಂಸ್ಥೆಗಳು ಎಚ್ಚರಿಕೆ ನೀಡಿವೆ. ಅದರಲ್ಲೂ, ಚೀನಾದ ಏಜೆಂಟರು ಇಂತಹ ತಾಣಗಳಲ್ಲಿ ಬಹಳ ಸಕ್ರಿಯರಾಗಿ ಇದ್ದಾರೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.

‘ಇಂತಹ ಕೆಲಸವನ್ನು ಚೀನಾದ ಗುಪ್ತಚರ ಸಂಸ್ಥೆಗಳು ಬೃಹತ್ ಪ್ರಮಾಣದಲ್ಲಿ ಮಾಡುವುದನ್ನು ನಾವು ಗಮನಿಸಿದ್ದೇವೆ’ ಎಂದು ಅಮೆರಿಕದಲ್ಲಿ ವಿದೇಶಿ ಗೂಢಚಾರರ ಚಟುವಟಿಕೆಗಳ ಮೇಲೆ ಕಣ್ಣಿಡುವ ಸರ್ಕಾರಿ ಸಂಸ್ಥೆಯೊಂದರ ನಿರ್ದೇಶಕ ವಿಲಿಯಂ ಆರ್. ಇವಾನಿನಾ ಹೇಳುತ್ತಾರೆ. ‘ವ್ಯಕ್ತಿಯ ನೇಮಕಕ್ಕೆ ಚೀನಾದಿಂದ ಅಮೆರಿಕಕ್ಕೆ ಒಬ್ಬ ವ್ಯಕ್ತಿಯನ್ನು ಕಳುಹಿಸಿಕೊಡುವ ಬದಲು, ಜಾಲತಾಣದಲ್ಲಿ ನಕಲಿ ಖಾತೆ ಸೃಷ್ಟಿಸಿ, ಚೀನಾದಲ್ಲಿ ಕಂಪ್ಯೂಟರ್‌ ಎದುರು ಕುಳಿತು ಸಾವಿರಾರು ಜನರಿಗೆ ಸ್ನೇಹ ಕೋರಿಕೆ ಸಲ್ಲಿಸುವುದು ಆರಾಮದ ಕೆಲಸ’ ಎಂದು ವಿಲಿಯಂ ಹೇಳುತ್ತಾರೆ.

ADVERTISEMENT

ಚೀನಾ ಸರ್ಕಾರದ ಕೆಲವು ಏಜೆಂಟರು ಸಾಮಾಜಿಕ ಜಾಲತಾಣಗಳನ್ನು ದುಷ್ಟ ಉದ್ದೇಶಗಳಿಗಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಅಮೆರಿಕದ ಅಧಿಕಾರಿಗಳು ಹೇಳುತ್ತಿದ್ದಾರೆ. ಏಜೆಂಟರ ಚಟುವಟಿಕೆಗಳು ಈಚಿನ ದಿನಗಳಲ್ಲಿ ಹೆಚ್ಚು ನಿಕಷಕ್ಕೆ ಒಳಪಡುತ್ತಿವೆ. ಹಾಂಗ್‌ಕಾಂಗ್‌ನಲ್ಲಿ ನಡೆದ ಪ್ರಜಾತಂತ್ರ ಪರ ಹೋರಾಟದ ವಿರುದ್ಧ ಸುಳ್ಳು ಮಾಹಿತಿ ಹರಡಿದ ಖಾತೆಗಳನ್ನು ನಿಷ್ಕ್ರಿಯಗೊಳಿಸಿದ್ದಾಗಿ ಫೇಸ್‌ಬುಕ್‌, ಟ್ವಿಟರ್ ಮತ್ತು ಯೂಟ್ಯೂಬ್‌ ಹೇಳಿವೆ. ಸರಿಸುಮಾರು 1,000 ಖಾತೆಗಳನ್ನು ನಿಷ್ಕ್ರಿಯಗೊಳಿಸಿದ್ದಾಗಿ ಟ್ವಿಟರ್ ಹೇಳಿದೆ.

ರಷ್ಯಾ ದೇಶವು ಸುಳ್ಳು ಮಾಹಿತಿ ಹರಡುವುದನ್ನು 2015 ಮತ್ತು 2016ರಲ್ಲಿ ಬಹಳ ಪರಿಣಾಮಕಾರಿಯಾಗಿ ಬಳಸಿಕೊಂಡಿತು. ಇದಾದ ನಂತರ ಈ ಬಗೆಯ ತಂತ್ರಗಳನ್ನು ಹಲವು ದೇಶಗಳು ಬಳಸಿಕೊಂಡಿವೆ. ಮೈಕ್ರೊಸಾಫ್ಟ್‌ ಮಾಲೀಕತ್ವದ ಲಿಂಕ್ಡ್‌ಇನ್‌ ತಾಣವು ಸುಳ್ಳುಗಳನ್ನು ಹರಡಬಹುದಾದ ಹಾಗೂ ಗೂಢಚಾರರ ನೇಮಕಕ್ಕೆ ಬಳಸಿಕೊಳ್ಳಬಹುದಾದ ಸಲಕರಣೆ ಎಂದು ಅಮೆರಿಕದ ಅಧಿಕಾರಿಗಳು ಹೇಳುತ್ತಾರೆ. ಏಕೆಂದರೆ, ಈ ತಾಣದ ಬಹುತೇಕ ಬಳಕೆದಾರರು, ಅಪರಿಚಿತರಿಂದಲಾದರೂ ಸರಿಯೇ ತಮಗೆ ಉದ್ಯೋಗ ಬೇಕು ಎಂಬ ಅಪೇಕ್ಷೆ ಹೊಂದಿರುವವರು. ಉದ್ಯೋಗ ಲಭಿಸುವ ಸಾಧ್ಯತೆ ಹೆಚ್ಚಿಸಿಕೊಳ್ಳಲು ಕೆಲವು ಮಾಜಿ ಅಧಿಕಾರಿಗಳು, ತಮಗೆ ಸರ್ಕಾರದ ರಹಸ್ಯ ಕಡತಗಳನ್ನು ಪರಿಶೀಲಿಸಲು ಪರವಾನಗಿ ಇದೆ ಎಂಬುದನ್ನೂ ಲಿಂಕ್ಡ್‌ಇನ್‌ ಮೂಲಕ ಜಾಹೀರುಪಡಿಸಿಕೊಳ್ಳುತ್ತಾರೆ.

ಚೀನಾದಲ್ಲಿ ನಿರ್ಬಂಧಕ್ಕೆ ಒಳಪಟ್ಟಿಲ್ಲದ, ಅಮೆರಿಕ ಮೂಲದ ಪ್ರಮುಖ ಸಾಮಾಜಿಕ ಜಾಲತಾಣಗಳಲ್ಲಿ ಲಿಂಕ್ಡ್‌ಇನ್‌ ಕೂಡ ಒಂದು. ತಾವು ಹೇಳಿದಂತೆ ಕೆಲಸ ಮಾಡಲು ಒಪ್ಪಬಹುದಾದ ವ್ಯಕ್ತಿಯನ್ನು ಚೀನಾಕ್ಕೆ ಕರೆತರಲು ಆ ದೇಶದ ಏಜೆಂಟರು ಬಹಳ ಸಂದರ್ಭಗಳಲ್ಲಿ ಲಿಂಕ್ಡ್‌ಇನ್‌ ಸೇರಿದಂತೆ ಹಲವು ಮಾರ್ಗಗಳ ಮೂಲಕ ಆಮಿಷ ಒಡ್ಡುತ್ತಾರೆ. ಆಗಷ್ಟೇ ಸರ್ಕಾರಿ ಕೆಲಸ ತೊರೆದಿರುವವರು ಇಂತಹ ಏಜೆಂಟರಿಗೆ ಸುಲಭದ ತುತ್ತಾಗುತ್ತಾರೆ.

ನಕಲಿ ಖಾತೆಗಳನ್ನು ಪತ್ತೆ ಮಾಡಿ, ನಿಷ್ಕ್ರಿಯಗೊಳಿಸುವ ಕೆಲಸವನ್ನು ಕಂಪನಿ ಮಾಡುತ್ತಿದೆ, ಸರ್ಕಾರಿ ಸಂಸ್ಥೆಗಳು ಸೇರಿದಂತೆ ಹಲವು ಕಡೆಗಳಿಂದ ಬರುವ ಮಾಹಿತಿ ಆಧರಿಸಿ ಕೆಲಸ ಮಾಡುವ ತಂಡವೊಂದು ಕಂಪನಿಯಲ್ಲಿ ಇದೆ ಎಂದು ಲಿಂಕ್ಡ್‌ಇನ್‌ ವಕ್ತಾರರು ಹೇಳುತ್ತಾರೆ. ಗೂಢಚರ್ಯೆಗೆ ಜನರನ್ನು ನೇಮಿಸಿಕೊಳ್ಳಲು ಲಿಂಕ್ಡ್‌ಇನ್‌ ಪರಿಣಾಮಕಾರಿ ಸಾಧನ ಎಂಬುದು ಈಚಿನ ಹಲವು ಪ್ರಕರಣಗಳ ಮೂಲಕ ಸಾಬೀತಾಗಿದೆ. ಅಮೆರಿಕದ ಸಿಐಎ ಸಂಸ್ಥೆಯ ಮಾಜಿ ನೌಕರನೊಬ್ಬನನ್ನು ಚೀನಾ ಪರ ಗೂಢಚರ್ಯೆ ನಡೆಸಿದ ಕಾರಣ ಮೇ ತಿಂಗಳಲ್ಲಿ ಶಿಕ್ಷೆಗೆ ಗುರಿಪಡಿಸಲಾಯಿತು. ಚೀನಾದ ಒಬ್ಬ ಏಜೆಂಟನ ಸಂದೇಶಕ್ಕೆ ಲಿಂಕ್ಡ್‌ಇನ್‌ ಮೂಲಕ ಪ್ರತಿಕ್ರಿಯೆ ನೀಡುವುದರ ಮೂಲಕ ಸಿಐಎ ಮಾಜಿ ನೌಕರನಿಗೆ ಚೀನಾ ಏಜೆಂಟ್‌ ಜೊತೆ ಸಂಬಂಧ ಬೆಳೆದಿತ್ತು ಎಂದು ಅಮೆರಿಕದ ತನಿಖಾ ಸಂಸ್ಥೆ ಎಫ್‌ಬಿಐ ಹೇಳಿದೆ.

ಚೀನಾದ ಗೂಢಚಾರನಂತೆ ಕಾಣುತ್ತಿದ್ದ ವ್ಯಕ್ತಿಯೊಬ್ಬ ತಮ್ಮನ್ನು ಅವರ ಕೆಲಸಗಳಿಗೆ ನೇಮಕ ಮಾಡಿಕೊಳ್ಳಲು ಒಂದು ತಿಂಗಳ ಪರ್ಯಂತ ನಡೆಸಿದ ಪ್ರಯತ್ನಗಳ ಬಗ್ಗೆ ಅಮೆರಿಕದ ವಿದೇಶಾಂಗ ನೀತಿಗಳ ಮಾಜಿ ಅಧಿಕಾರಿಯೊಬ್ಬರು ವಿವರ ನೀಡಿದ್ದಾರೆ. ಆದರೆ ಅವರು ತಮ್ಮ ಹೆಸರು ಬಹಿರಂಗಪಡಿಸದಂತೆ ಷರತ್ತು ವಿಧಿಸಿದ್ದಾರೆ. ಈ ಅಧಿಕಾರಿ ಸರ್ಕಾರಿ ಹುದ್ದೆ ತೊರೆದ ಐದು ತಿಂಗಳ ನಂತರ, ರಾಬಿನ್ಸನ್‌ ಝಾಂಗ್ ಎಂಬ ವ್ಯಕ್ತಿಯಿಂದ ಲಿಂಕ್ಡ್‌ಇನ್‌ ಮೂಲಕ ಸಂದೇಶವೊಂದು ಬಂತು. ಝಾಂಗ್‌ ತನ್ನನ್ನು ಆರ್‌&ಸಿ ಕ್ಯಾಪಿಟಲ್ ಎಂಬ ಕಂಪನಿಯ ಸಾರ್ವಜನಿಕ ಸಂಪರ್ಕ ನಿರ್ವಹಣಾ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದ. ಅಮೆರಿಕದ ಮಾಜಿ ಅಧಿಕಾರಿಗೆ ಕಳುಹಿಸಿದ್ದ ಸಂದೇಶದಲ್ಲಿ ಈ ವ್ಯಕ್ತಿ ತನ್ನ ಕಂಪನಿ ‘ಜಾಗತಿಕ ಹೂಡಿಕೆ, ಸಾರ್ವಜನಿಕ ನೀತಿ’ಗಳಿಗೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ಪರಿಣತಿ ಹೊಂದಿದೆ ಎಂದು ಹೇಳಿಕೊಂಡಿದ್ದ.

‘ನಿಮ್ಮ ಸ್ವವಿವರ ನೋಡಿದೆ. ನೀವು ಒಳ್ಳೆಯ ಸಂಭಾವನೆ ಇರುವ ಕೆಲವು ಕೆಲಸಗಳಿಗೆ ಸೂಕ್ತ ವ್ಯಕ್ತಿ’ ಎಂದು ಈ ಅಧಿಕಾರಿಗೆ ಝಾಂಗ್‌ ಹೇಳಿದ್ದ. ಝಾಂಗ್‌ನ ಸಂದೇಶ ಈ ಅಧಿಕಾರಿಗೆ ತುಸು ವಿಚಿತ್ರ ಅನಿಸಿತು. ತಮ್ಮ ಕಂಪನಿಯ ವೆಬ್‌ಸೈಟ್‌ ವಿಳಾಸ ಕೊಡುವಂತೆ ಝಾಂಗ್‌ಗೆ ಅವರು ಹೇಳಿದರು. ಆತ ನೀಡಿದ ವೆಬ್‌ಸೈಟ್‌ ವಿಳಾಸಕ್ಕೆ ಭೇಟಿ ಇತ್ತಾಗ, ಅದರಲ್ಲಿ ಕಂಪನಿ ಬಗ್ಗೆ ತೀರಾ ಕಡಿಮೆ ವಿವರ ಇದ್ದದ್ದು ಗೊತ್ತಾಯಿತು. ಕಂಪನಿಯ ಬಗ್ಗೆ ಹೆಚ್ಚಿನ ವಿವರ ಕೊಡುವಂತೆ ಈ ಅಧಿಕಾರಿ ಹಲವು ಬಾರಿ ಕೇಳಿಕೊಂಡರೂ, ಝಾಂಗ್‌ನಿಂದ ಯಾವುದೇ ಉತ್ತರ ಬರಲಿಲ್ಲ. ಅಲ್ಲದೆ, 2017ರ ಆಗಸ್ಟ್‌ ನಂತರ ಝಾಂಗ್‌, ಇವರಿಗೆ ಯಾವ ಸಂದೇಶವನ್ನೂ ಕಳುಹಿಸಿಲ್ಲ.

ಆರ್‌&ಸಿ ಕಂಪನಿ ಇದೆ ಎನ್ನಲಾದ ಹಾಂಗ್‌ಕಾಂಗ್‌ ವಿಳಾಸದಲ್ಲಿ ಅಂತಹ ಯಾವುದೇ ಕಂಪನಿ ಇಲ್ಲ. ಹಾಂಗ್‌ಕಾಂಗ್‌ನ ಕಾರ್ಪೊರೇಟ್‌ ಸಂಸ್ಥೆಗಳ ನೋಂದಣಿ ಪಟ್ಟಿಯಲ್ಲಿ ಈ ಕಂಪನಿಯ ಹೆಸರು ಇಲ್ಲ.

ದಿ ನ್ಯೂಯಾರ್ಕ್‌ ಟೈಮ್ಸ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.