ADVERTISEMENT

ಆಹಾರಕ್ಕೆ ಧರ್ಮದ ಲೇಬಲ್ಲೇ?

ಗೋಧಿ, ಅಕ್ಕಿ, ಬ್ಯಾಳಿ ಎಲ್ಲ ನಮ್ಮ ನಮ್ಮ ಧರ್ಮದವರೇ ಬೆಳೆದದ್ದಾ, ಅಥವಾ...

ಡಾ.ಬಸವರಾಜ ಸಾದರ
Published 19 ಆಗಸ್ಟ್ 2019, 19:46 IST
Last Updated 19 ಆಗಸ್ಟ್ 2019, 19:46 IST
   

ತಾವು ತಿನ್ನುವ ಕೂಳು, ಅಂದ್ರೆ ಆಹಾರ ಎಲ್ಲಿ ಹುಟ್ಟಿ, ಹೆಂಗ್ ತಮಗ ಸಿಗತೈತಿ ಅನ್ನೂದು ಗೊತ್ತಿಲ್ಲದವ್ರಿಂದ, ಕೂಳಿಗೂ ಜಾತಿ ಹಾಗೂ ಧರ್ಮದ ಬಣ್ಣಾ ಬಳಿಯೋ ಮೂರ್ಖತನಾ ಈಗೀಗ ಹೆಚ್ಚಾಗಕತ್ತೈತಿ. ಆಹಾರ ಅಂದ್ರ ಏನು ಅನ್ನೂದುನ್ನ ಹಿಂತವ್ರು ಮೊದ್ಲ ಚಂದಂಗ ತಿಳಕೋಬೇಕಾಗೇತಿ. ನಾವೆಲ್ಲಾ ಇಸ್ಸೀ ಅಂತ ಮೂಗು ಮುಚಕೊಂಡು ದೂರ ಹೋಗೂವಂಥಾ ಗಟಾರದ ಗಲೀಜೂ ಹಂದಿಗೆ ಅಮೃತ ಅಕ್ಕೈತಿ. ವಿಷ ಅಂತ ಅಂಜಿ ದೂರ ಓಡೂ ಹಾಂವನ್ನೂ ಬಡದು ತಿನ್ನೂ ಪ್ರಾಣಿ-ಪಕ್ಷಿ ಅಷ್ಟ ಅಲ್ಲ, ಮನಷ್ಯಾರೂ ಅದಾರ. ಒಂದಿಷ್ಟು ಮಂದೀಗೆ ಸಸ್ಯಾಹಾರ, ಮತ್ತೊಂದಿಷ್ಟು ಜನರ್‍ಗೆ ಮಾಂಸಾಹಾರ, ಇನ್ನೂ ಒಂದಿಷ್ಟು ಜೀವಿಗಳಿಗೆ ಸಸ್ಯ-ಮಾಂಸಾಹಾರ ಹಿಂಗ್ ಥರಥರದ ಆಹಾರ ರುಚಿ ಅಕ್ಕಿರತೈತಿ, ಅವರವರ ದೇಹಗುಣಕ್ಕ ಒಗ್ಗತಿರತೈತಿ. ಅದನ್ನ ಯಾವ ದೊಣೆ ನಾಯಕನೂ ನಿರ್ಧಾರ ಮಾಡಾಕಾಗುದುಲ್ಲ. ಒಟ್ಟs ಹೇಳೂದಂದ್ರ, ಕೂಳು ಅಥವಾ ಆಹಾರ ಎಲ್ಲಾ ಜೀಂವಕ್ಕೂ ಬೇಕಾಗೋ ಜೀವನಾಧಾರ. ಹಿಂತಾ ಆಹಾರಕ್ಕ ಇರೂ ಒಂದs ಗುಣ ಅಥವಾ ಧರ್ಮ ಅಂತಂದ್ರ, ತಿಂದವ್ರ ಹೊಟ್ಟೀ ತುಂಬಸೂದು, ಅವರ ಜೀಂವಕ್ಕ ಆಧಾರ ಆಗೂದು.

ಹಿಂಗಿರೋ ಆಹಾರಕ್ಕೂ ಧರ್ಮದ ಬಣ್ಣಾ ಹಚ್ಚಿ, ಅಲ್ಲೀನೂ ಜಾತಿಯ ವಾಸನೆ ಹೊಂಡಸೂ ಕೆಟ್ಟ ಚಾಳಿ ಸುರೂವಾಗೈತಂದ್ರ ಅದರಷ್ಟು ಧರ್ಮಹೀನ ಕೆಲಸ ಮತ್ತೊಂದಿಲ್ಲ. ಆಹಾರದ ಈ ರಾಜಕಾರಣಾ ಕಡೀಕ ಜಾತೀಗೂ ಸುತ್ತಾಕ್ಕೊಂಡು ನಮ್ಮನ್ನ ಹದಗೆಡಿಸಾಕತ್ತಿರುವ ಈ ಸಂದರ್ಭದಲ್ಲಿ, ‘ಬ್ಯಾರೇ ಧರ್ಮದವರ ಮನ್ಯಾಗ ಮಾಡಿದ ಆಹಾರಪದಾರ್ಥ ನಾನು ತಿನ್ನೂದಿಲ್ರಿ’ ಅಂತ ಹೇಳಿದ ದೊಡ್ಡ ಅಧಿಕಾರಿಯೊಬ್ಬರ ನೀರು ಇಳಿಸಿ, ನಾನು ತಂದ ರೊಟ್ಟೀ ತಿನಿಸಿ ಕಳಿಸಿದ ಘಟನಾ ನನಗ ನೆನಪಕ್ಕೈತಿ.

ಇದು ನಡದದ್ದು, ನಾನು ಬೆಂಗಳೂರು ಆಕಾಶವಾಣಿಯ ನಿರ್ದೇಶಕ ಆಗಿದ್ದಾಗ. ದಿನಾನೂ ಮಧ್ಯಾಹ್ನ ನಾನು ನನ್ನ ಚೇಂಬರಿನ್ಯಾಗ ಕುಂತು ಮನೀಲಿಂದ ತಂದ ಊಟಾ ಮಾಡ್ತಿದ್ದ್ಯಾ. ಹಂಗ್ ಊಟಾ ಮಾಡೂ ಮುಂದ, ಒಂದು ಪಾಲು ಬ್ಯಾರೆ ಪ್ಲೇಟಿನ್ಯಾಗ ತಗದಿಟ್ಟು ಉಣ್ಣೂದು ಮೊದ್ಲಿಂದನೂ ನಾನು ರೂಢಸ್ಕೊಂಡು ಬಂದಿದ್ದ ರೀತಿ (ಉಣ್ಣೂವಾಗ ಯಾರಾದ್ರೂ ಬಂದ್ರ, ಅವರಿಗೂ ಕೊಟ್ಟು ಉಣ್ಣಬೇಕು ಅನ್ನೋ ಈ ನೀತಿಯನ್ನು ರೈತನಾಗಿದ್ದ ನನ್ನ ಅಪ್ಪ ಹೇಳಿದ್ದು). ಅವತ್ತ ಮನೀಲಿಂದ ಜ್ವಾಳದ ರೊಟ್ಟೀ ತಂದಿದ್ದ್ಯಾ. ಅದರಾಗ ಒಂದ್ ರೊಟ್ಟೀ ತಗದಿಟ್ಟು ಉಣ್ಣಾಕ ಸುರೂ ಮಾಡಿದ್ಯಾ, ಆ ಹೊತ್ಗೆ ಸರಿಯಾಗಿ ವಿಧಾನಸೌಧದಿಂದ ಒಬ್ಬ ಬಾಳ ದೊಡ್ಡ ಅಧಿಕಾರಿ ದಬಕ್ನ ಬಾಗಲಾ ಬಡದು, ನಾನು ಒಪ್ಪಿಗೀ ಕೊಡೂ ಮೊದ್ಲs ಒಳಗ ಬಂದು ಬಿಟ್ರು. ಕೆಲಸ ಅಷ್ಟು ಅಂವಸರದ್ದೂ ಇತ್ತನ್ರಿ. ನಾನು, ‘ಬರ್‍ರಿ ಸರ್, ಕೂಡ್ರಿ’ ಅಂದ್ರ, ‘ಇಲ್ರಿ ಒಂದ್ ಅರ್ಜಂಟ್ ಕೆಲಸ ಆಗಬೇಕಿತ್ತು’ ಅಂತ ಅವ್ರು. ‘ಕುಂತರs ಕೂಡ್ರಿ, ಉಂಡಿಂದ ಕೆಲಸ ಏನನ್ನೂದರ ಯೋಚ್ನೆ ಮಾಡೂಣು’ ಅಂದೆ ನಾನು. ಆದ್ರ ಅವರಿಗೆ ಎಳ್ಳಷ್ಟೂ ತಾಳ್ಮೆ ಇದ್ದಂಗ ಕಾಣಲಿಲ್ಲ. ಆದರೂ ‘ಈ ಆಸಾಮಿ ಈಗ ನನ್ನ ಅಂವಸರಾ ಕೇಳೂವಂಗ್ ಕಾಣ್ಸೂದುಲ್ಲ’ ಅಂತ ಪಕ್ಕಾ ಗೊತ್ತಾದಮ್ಯಾಲ ಬ್ಯಾರೆ ದಾರೀನs ಇಲ್ದ, ಸುಮ್ನ ಕುಂತ್ರು ಅವ್ರು.

ADVERTISEMENT

ಹಂಗ್ ಕುಂತಮ್ಯಾಲ ನಾನು ‘ತೊಗೋಳ್ರಿ ಸರ್ ಈ ರೊಟ್ಟೀ ತಿನ್ರಿ’ ಅಂತ ಬ್ಯಾರೆ ತಗದಿಟ್ಟಿದ್ದ ರೊಟ್ಟೀ ಕೊಡಾಕ ಹ್ವಾದ್ಯಾ. ತಕ್ಷಣಾ ಆ ಮನಷ್ಯಾ- ‘ಬ್ಯಾರೇ ಧರ್ಮದವರ ಮನ್ಯಾಗ ಮಾಡಿದ ಆಹಾರಪದಾರ್ಥ ನಾನು ತಿನ್ನೂದಿಲ್ರಿ’ ಅನಬೇಕಾ! (ಖರೇವಂದ್ರ ಅವರ ಮನಸಿನಾಗಿದ್ದದ್ದು ಬ್ಯಾರೇ ಜಾತಿಯವರ ಮನೀ ಆಹಾರ ಪದಾರ್ಥ ಅನ್ನೂ ಅರ್ಥ. ಹಂಗ್ ಹೇಳಿದ್ರ ಬಾಳ ವಿಪರೀತ ಆದೀತಂತ ಸ್ವಲ್ಪ ಸುಧಾರಿಸಿ ‘ಬ್ಯಾರೇ ಧರ್ಮದವರ...’ ಅಂದಿದ್ರು) ನನಗ ಖರೇನ ಸಿಟ್ಟು ನೆತ್ತಿಗೇರಿತ್ತು. ಆದ್ರೂ ಸೈಸ್ಕೊಂಡು, ‘ಓ ಹಿಂಗ್ರ್ಯಾ’ ಅನಕೊಂತ, ಹಗೂರ್ಕs ಅವ್ರಿಗೆ ಒಂದೆರ್ಡು ಪ್ರಶ್ನೆ ಒಗದ್ಯಾ.

‘ಸರ್, ನೀವು ಮನ್ಯಾಗ ಏನೇನು ಅಡಗೀ ಮಾಡ್ತೀರಿ? ಎಂಥೆಂಥಾ ಸಾಮಾನ ಉಪಯೋಗ ಮಾಡ್ತೀರಿ? ನೀರು ಎಲ್ಲೀವು ಬಳಸ್ತೀರಿ...?’ ಆ ಮನಷ್ಯಾ, ಇವ್ರು ಲೋಕಾಭಿರಾಮದ ಪ್ರಶ್ನೆ ಕೇಳ್ತಿರಬೇಕು ಅನಕೊಂಡು, ‘ನಾವು ಚಪಾತಿ, ರೈಸ್, ಪಲಾವ್, ಎರಡ್ಮೂರು ಥರದ ಕಾಯಿಪಲ್ಲೆ, ಬೇಳೆ ಸಾರು, ಕಾಳಿನ ಪಲ್ಲೆ ಮಾಡ್ತೇವೆ, ಕಾವೇರಿ ನೀರು ಬಳಸ್ತೇವೆ...’ ಅಂತ ಉಮೇದಿನಿಂದs ಹೇಳಾಕ್ಹತ್ತಿದ್ರು. ಆವಾಗ ನಾನು, ‘ಸರ್, ಹಂಗಿದ್ರ ನಿಮಗ ಈ ಚಪಾತಿ ಮಾಡೂ ಗೋಧೀನ ಯಾರು ಬೆಳದು ಕೊಟ್ರು? ರೈಸ್ ಮಾಡೂ ಅಕ್ಕಿ ಬೆಳದವ್ರು ಯಾರು? ಥರಥರದ ಕಾಯಿಪಲ್ಲೆ ಉಪಯೋಗಿಸ್ತೇವಿ ಅಂದ್ರೆಲ್ಲಾ, ಅವನ್ನ ಯಾರು ಬೆಳದದ್ದು? ಬ್ಯಾಳಿ ಅಂದ್ರೆಲ್ಲಾ ಅದನ್ನ ನೀವ ಬೆಳದ್ರ್ಯಾ? ಕಾವೇರಿ ನೀರು ನಿಮ್ಮ ಮನೀಗೆ ಹೆಂಗ ಬಂತು...?’ ಹಿಂಗ್ ಕೇಳ್ಕೊಂತ ಹೊಂಟ್ ಕೂಡ್ಲೇ ಆ ಆಸಾಮಿಗೆ ಇಂವಾ ತನ್ನ ಬುಡಕ್ಕ ಕೈ ಹಾಕಾಕತ್ಯಾನನ್ನೂದು ಗೊತ್ತಾಗಿ ಬಿಟ್ಟಿತು.

‘ಅಲ್ಲರಿ, ಈ ಗೋಧಿ, ಅಕ್ಕಿ, ಕಾಯಿಪಲ್ಲೆ, ಬ್ಯಾಳಿ ಇವನ್ನೆಲ್ಲಾ ನಿಮ್ಮ ಧರ್ಮದವರ ಬೆಳದಿದ್ದಾ? ಕಾವೇರಿ ನೀರ್‍ನ ನಿಮ್ಮ ಧರ್ಮದವರ ನಿಮ್ಮ ಮನೀಗೆ ತಂದು ಹಾಕಿದ್ರಾ? ಆಯ್ತು, ನಮ್ಮ ಮನೀಲಿಂದ ತಂದ ಈ ರೊಟ್ಟೀ ಮ್ಯಾಲ ನಮ್ಮ ಧರ್ಮ ಯಾವದನ್ನೂದನ್ನ ಬರದೈತ್ಯಾ? ತೋರಿಸ್ರಿ ನೋಡೂನು’ ಹಿಂಗ ಕೇಳ್ಕೊಂತ ಹೊಂಟ್ ಕೂಡ್ಲೇ ಆ ವ್ಯಕ್ತಿ ಮಕಾ ಔಡಲೆಣ್ಣಿ ಕುಡದವ್ರ ಗತಿ ಆಗಿಬಿಟ್ಟತು. ಹುಳು ಹುಳು ಮಾರಿ ನೊಡ್ಕೊಂತ ಕುಂತ ಬಿಟ್ರು ಸಾಹೇಬ್ರು! ನಾನೂ ಬಿಡ್ಲೇ ಇಲ್ಲ. ‘ನೋಡ್ರಿ, ಯಾರರ ಹಸಿವ್ಯಾದವ್ರು ಬಂದ್ರ ಈ ರೊಟ್ಟೀ ತಿಂದs ತಿಂತಾರ, ಆ ಮಾತು ಬ್ಯಾರೆ. ಆದ್ರ, ಇವತ್ತ ಮಾತ್ರ ಇದನ್ನ ನಾನು ಯಾರಿಗೂ ಕೊಡೂದಿಲ್ಲ. ಒಂದು, ನೀವು ನನ್ನ ಪ್ರಶ್ನೆಗಳಿಗೆ ಉತ್ರಾ ಕೊಡ್ರಿ, ಇಲ್ಲಂದ್ರ ಈ ರೊಟ್ಟೀ ತಿನ್ರಿ. ಎರಡರಾಗ ಒಂದನ್ನ ನೀವು ಮಾಡಾಕsಬೇಕು. ಇಲ್ಲಂದ್ರ ನೀವು ಹೇಳೂ ಧರ್ಮಕ್ಕ ಅರ್ಥಾನೂ ಇಲ್ಲ, ಬೆಲೀನೂ ಇಲ್ಲ. ಹಂತಾ ಧರ್ಮಕ್ಕ ಈ ಜಗತ್ತಿನ್ಯಾಗ ಇರೋ ಯೋಗ್ಯತಾನೂ ಇಲ್ಲಾ!’ ಅಂದಬಿಟ್ಟೆ.

ಹಿಂಗಂದ ಕೂಡ್ಲೇ ಆ ಮನಷ್ಯಾಗ ಅರ್ಥ ಆತಂತ ಕಾಣತೈತಿ. ಮತ್ತೊಂದ್ ಮಾತು ಆಡಲಾರ್ದs ಎದ್ದು ಬಂದವ್ರs ‘ಕೊಡ್ರಿ ಸರ್ ಆ ರೊಟ್ಟೀನ, ಇವತ್ತ ಖರೇವಂದ್ರೂ ನನಗ ಕಣ್ಣ ತಗಸಿದ್ರಿ ನೀವು. ಇನ್ನಮ್ಯಾಲ ಎಂದೂ ಇಂಥಾ ಧಿಮಾಕಿನ ಮಾತು ಆಡೂದುಲ್ಲ’ ಅಂದವ್ರ, ಬಾಳ ಪ್ರೀತಿಲಿಂದನ ಆ ರೊಟ್ಟೀ ತಿಂದು, ನಾನs ತಂದ ನೀರೂ ಕುಡದ್ರು.

ಉಂಡ ನಂತರ ನಾನು ಅವರ ಕೆಲಸ ಮಾಡಿಕೊಟ್ಟೆ. ಯಾವುದೇ ಧರ್ಮದ ಲೇಬಲ್ ಇರಲಾರದ ನಮ್ಮ ಮನೆಯ ರೊಟ್ಟೀ ತಿಂದು, ನನ್ನ ನೀರು ಕುಡದು, ಹೊಸಾ ಧರ್ಮದ ಮನಷ್ಯಾ ಆಗಿ ಹೋದ ಆ ವ್ಯಕ್ತಿಯ ಬಗ್ಗೆ ನನಗೆ ಈಗ್ಲೂ ಖುಷಿ ಅಕ್ಕೈತಿ. ಆದ್ರ, ಈಗ ಜೊಮ್ಯಾಟೊ ಕಂಪನಿಯ ಡೆಲಿವರಿ ಹುಡುಗನ ಮುಂದ ‘ಶ್ರಾವಣ ಮಾಸ ಪ್ರಾರಂಭವಾದ ಕಾರಣ ನಾನು ಅನ್ಯಧರ್ಮೀಯರಿಂದ ಆಹಾರ ಸ್ವೀಕರಿಸಲಿಲ್ಲ’ ಎಂದು ಢಾಣಾಡಂಗೂರ ಸಾರಿರುವ ಅಮಿತ್ ಶುಕ್ಲಾ ಎಂಬ ವಿಪರೀತಧರ್ಮಿಷ್ಠನಿಗೂ ಮತ್ತೊಮ್ಮೆ ಅವೇ ಪ್ರಶ್ನೆಗಳನ್ನು ಕೇಳಬೇಕು ಅನ್ನಿಸ್ತಿದೆ. ಅನ್ನ, ನೀರು, ಗಾಳಿ, ಬೆಂಕಿ, ಭೂಮಿ, ಆಕಾಶ- ಇವು ಬ್ಯಾರೆ ಬ್ಯಾರೆ ಧರ್ಮದವ್ರಿಗೆ ಬ್ಯಾರೆ ಬ್ಯಾರೆ ಅದಾವ? ಮನಷ್ಯಾ ಯಾಕ ಇಷ್ಟು ಧರ್ಮಗೇಡಿ ಆಗಾಕ್ಹತ್ಯಾನ? ಧರ್ಮಾನs ಉತ್ತರಾ ಕೊಡಬೇಕು: ಹಂತಾ ಧರ್ಮ ಇದ್ರ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.