ADVERTISEMENT

ವಿಶ್ಲೇಷಣೆ | ಸಂಶೋಧನೆಗಳ ಚಿತ್ತ ಯಾವುದರತ್ತ?

ಜನಸಮೂಹದ ಆರೋಗ್ಯ ಸುಧಾರಣೆಯ ಸಂಶೋಧನೆಗಳು ಹೆಚ್ಚಬೇಕು

ಗುರುರಾಜ್ ಎಸ್.ದಾವಣಗೆರೆ
Published 17 ಆಗಸ್ಟ್ 2024, 0:00 IST
Last Updated 17 ಆಗಸ್ಟ್ 2024, 0:00 IST
   

ಯಾವುದೇ ದೇಶದ ವಿಜ್ಞಾನ ಮತ್ತು ತಂತ್ರಜ್ಞಾನ ಸಾಧನೆಗಳನ್ನು ಅರಿಯಲು ಅಲ್ಲಿನ ಸಂಶೋಧನಾ ವಲಯಗಳಲ್ಲಿ ಯಾವ ಯಾವ ವಿಷಯಗಳಲ್ಲಿ ಹೆಚ್ಚಿನ ಸಂಶೋಧನೆ ನಡೆಯುತ್ತಿದೆ ಎಂಬುದನ್ನು ಗಮನಿಸಲಾಗುತ್ತದೆ. ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದಲ್ಲಿ ಪ್ರತಿ ದೇಶವೂ ನಿರ್ದಿಷ್ಟ ಕಾಲಮಿತಿಯಲ್ಲಿ ಏನೇನು ಪ್ರಗತಿ ಸಾಧಿಸಿದೆ ಎಂಬುದರ ಬಗ್ಗೆ ಅಂತರರಾಷ್ಟ್ರೀಯ ಸಂಶೋಧನಾ ನಿಯತಕಾಲಿಕೆಗಳು ಆಗಾಗ ವರದಿ ಮಾಡುತ್ತಲೇ ಇರುತ್ತವೆ. ಕಾಲೇಜು, ವಿಶ್ವವಿದ್ಯಾಲಯ, ಸಂಶೋಧನಾ ಕ್ಷೇತ್ರಗಳಲ್ಲಿ ದುಡಿಯುವ, ಸ್ವತಂತ್ರವಾಗಿ ಸಂಶೋಧನೆ ನಡೆಸುವ ಸಂಶೋಧಕರು ಪ್ರಕಟಿಸುವ ಪಿಎಚ್.ಡಿ. ಪ್ರಬಂಧಗಳ ಸಂಖ್ಯೆಗೆ ಅನುಗುಣವಾಗಿಯೂ ಆಯಾ ದೇಶದ ಸಂಶೋಧನಾ ಸಾಮರ್ಥ್ಯವನ್ನು ಅಳೆಯಲಾಗುತ್ತದೆ.

ಆರ್ಥಿಕವಾಗಿ ಸದೃಢವಾಗಿರುವ ದೇಶಗಳಲ್ಲಿ ಹಲವು ವಿಷಯಗಳ ಕುರಿತು ಸಂಶೋಧನೆಗಳು ನಿರಂತರ ನಡೆಯುತ್ತವೆ. ದುರ್ಬಲವಾಗಿರುವ ದೇಶಗಳು ಆ ಸಂಶೋಧನೆಗಳ ಫಲಗಳನ್ನು ಬಳಸುವತ್ತ ಗಮನಹರಿಸುತ್ತವೆ.

ಹಾಗಿದ್ದ ಮೇಲೆ ಜಗತ್ತಿನ ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿಶೀಲ ದೇಶಗಳು ಯಾವ ವಿಷಯಗಳ ಬಗ್ಗೆ ತೀವ್ರತರವಾದ ಸಂಶೋಧನೆ ನಡೆಸುತ್ತಿವೆ ಎಂಬುದರ ವಿವರಗಳನ್ನು ಸಂಶೋಧನಾ ಚಟುವಟಿಕೆಗಳ ದತ್ತಾಂಶ ಸಂಗ್ರಹಿಸುವ ‘ವೆಬ್‌ ಆಫ್ ಸೈನ್ಸ್’ ಸುದೀರ್ಘವಾಗಿ ವರದಿ ಮಾಡಿದೆ. ಈ 20 ವರ್ಷಗಳಲ್ಲಿ ನಡೆದ ಮತ್ತು ಇತ್ತೀಚಿನ ಐದು ವರ್ಷಗಳಲ್ಲಿ ನಡೆದ ಸಂಶೋಧನೆಗಳ ಅಂಕಿ ಅಂಶಗಳನ್ನು ಪ್ರತ್ಯೇಕವಾಗಿ ಪ್ರಕಟಿಸಿದೆ. ಸಂಶೋಧನೆಗಳಿಗೆ ಹೆಚ್ಚಿನ ಪ್ರಾಮುಖ್ಯ ನೀಡುವ ಮಂಚೂಣಿ ದೇಶಗಳ ಪೈಕಿ ನಾಲ್ಕನೇ ಸ್ಥಾನದಲ್ಲಿರುವ ನಾವು ನ್ಯಾನೊ ತಂತ್ರಜ್ಞಾನ, ಕೊರೊನಾ ವೈರಸ್, ಗ್ರೀನ್ ಎನರ್ಜಿ ಮತ್ತು ಕಂಪ್ಯೂಟರ್ ಕ್ಷೇತ್ರದ ಡೀಪ್ ಲರ್ನಿಂಗ್ ವಿಷಯಗಳ ಮೇಲೆ ಸಂಶೋಧನೆ ನಡೆಸುತ್ತಿರುವುದು ವರದಿಯಲ್ಲಿದೆ.

ADVERTISEMENT

ಜಗತ್ತಿನಾದ್ಯಂತ ಕಳೆದ ಎರಡು ದಶಕಗಳಲ್ಲಿ ಅತಿ ಹೆಚ್ಚು ಸಂಶೋಧನೆಗಳು ಮತ್ತು ಪ್ರಬಂಧಗಳ ಮಂಡನೆ ಕೊರೊನಾ ವೈರಸ್ ಕುರಿತೇ ಆಗಿವೆ. 2019ರಿಂದ 2023ರವರೆಗೆ ಐದು ವರ್ಷಗಳಲ್ಲಿ
ಪ್ರಕಟಗೊಂಡಿರುವ ಸಂಶೋಧನೆಗಳ ಪೈಕಿ ಶೇಕಡ 80ರಷ್ಟು ಕೊರೊನಾ ವೈರಸ್ ಕುರಿತು ಆಗಿವೆ. ಸಂಶೋಧನೆಯಲ್ಲಿ ಮಂಚೂಣಿಯಲ್ಲಿರುವ ಅಮೆರಿಕ ದೇಶದ ಸಂಶೋಧನೆಗಳು ಕೊರೊನಾ ಸುತ್ತಲೇ ಇವೆ.  ಆದರೆ ಯಾವಾಗಲೂ ಅಮೆರಿಕದೊಂದಿಗೆ ಪೈಪೋಟಿಗೆ ಬೀಳುವ ಚೀನಾದಲ್ಲಿ ಮಾತ್ರ ಕೊರೊನಾ ವೈರಸ್ ಕುರಿತ ಸಂಶೋಧನೆಯ ಬಗ್ಗೆ ಮಾಹಿತಿಯೇ ಇಲ್ಲ!

ಲಭ್ಯವಿರುವ ದತ್ತಾಂಶದಂತೆ ಭಾರತದಲ್ಲಿ ಐದು ವರ್ಷಗಳಲ್ಲಿ ಕೊರೊನಾ ವೈರಸ್, ನ್ಯಾನೊ ತಂತ್ರಜ್ಞಾನ, ಗ್ರೀನ್ ಎನರ್ಜಿ ಮತ್ತು ಕಂಪ್ಯೂಟರ್ ಕ್ಷೇತ್ರದ ಡೀಪ್ ಲರ್ನಿಂಗ್ ಕುರಿತು ಹೆಚ್ಚಿನ ಸಂಶೋಧನೆಗಳು ನಡೆದಿವೆ. ಕೊರೊನಾ ಕುರಿತು ಅತಿ ಹೆಚ್ಚಿನ ಅಂದರೆ 12,629, ನ್ಯಾನೊ ದ್ರವ (8,496), ಬೆಳ್ಳಿಯ ನ್ಯಾನೊ ಕಣ (7,050), ಬೆಳಕಿನ ಸಹಾಯದಿಂದ ಶುದ್ಧ ಶಕ್ತಿಯ ಉತ್ಪಾದನೆಗೆ ನೆರವಾಗುವ ಫೋಟೊ ಕೆಟಲಿಸಿಸ್ (6,096), ಯಾಂತ್ರಿಕ ಬುದ್ಧಿಮತ್ತೆಗೆ (ಯಾಂಬು) ನೆರವಾಗುವ ಡೀಪ್ ಲರ್ನಿಂಗ್ ಕುರಿತು 6,056 ಸಂಶೋಧನೆಗಳು ನಡೆದಿವೆ. ಅಮೆರಿಕದಲ್ಲಿ ಕೊರೊನಾ ವೈರಸ್ ಕುರಿತು ವಿಶ್ವದಲ್ಲೇ ಅತಿ ಹೆಚ್ಚು (42,237) ಪ್ರಬಂಧಗಳು ಮಂಡನೆಯಾಗಿವೆ. ಡೀಪ್ ಲರ್ನಿಂಗ್‌ನ 20,857 ಸಂಶೋಧನೆಗಳು ಎರಡನೇ ಸ್ಥಾನದಲ್ಲಿವೆ. ಕ್ಯಾನ್ಸರ್‌ಕಾರಕ ಜೀವಕೋಶಗಳನ್ನು ನಾಶಪಡಿಸುವ ಪ್ರೋಗ್ರಾಮ್ಡ್ ಸೆಲ್ ಡೆತ್- ಪಿಡಿ1 (ನಿರ್ದೇಶಿತ ಜೀವಕೋಶ ಕ್ಷಯ) ಬಗ್ಗೆ 19,176, ಎಚ್ಐವಿ ಕುರಿತು 12,826 ಮತ್ತು ಕರುಳಿನ ಸೂಕ್ಷ್ಮ
ಜೀವಿಗಳ ಕುರಿತು12,435 ಸಂಶೋಧನೆಗಳು ಜರುಗಿವೆ.

ಚೀನಾದ ಆದ್ಯತೆ ಡೀಪ್ ಲರ್ನಿಂಗ್ ಕಡೆ ಇದ್ದು, ವಿಶ್ವದಲ್ಲೇ ಅತಿ ಹೆಚ್ಚು ಅಂದರೆ 48,935 ಸಂಶೋಧನೆ
ಗಳು ವರದಿಯಾಗಿವೆ. ನಂತರದ ಸ್ಥಾನದಲ್ಲಿ ಶಕ್ತಿಯನ್ನು ಹಿಡಿದಿಡುವ ಸೂಪರ್ ಕೆಪ್ಯಾಸಿಟರ್, ಫೋಟೊ ಕೆಟಲಿಸಿಸ್, ಆಮ್ಲಜನಕ ಕಡಿತ ಕ್ರಿಯೆ ಕುರಿತು ಸಾವಿರಗಟ್ಟಲೆ ಸಂಶೋಧನೆಗಳು ಜರುಗಿವೆ. ದೇಶದಲ್ಲಿ ನಡೆಯುತ್ತಿರುವ ಪ್ರಮುಖ ಐದು ಸಂಶೋಧನೆಗಳ ಪೈಕಿ ಕೊರೊನಾ ವೈರಸ್‌ಗೆ ಸ್ಥಾನವೇ ಇಲ್ಲ.

ವಾಯುಗುಣ ಬದಲಾವಣೆಯ ಅಡ್ಡ ಪರಿಣಾಮಗಳ ನಿಯಂತ್ರಣಕ್ಕೆ ಬೇಕಾಗುವ ಶುದ್ಧ ಇಂಧನ, ಹಸಿರು ಶಕ್ತಿಗೆ ಸಂಬಂಧಿಸಿದ ಫೋಟೊ ಕೆಟಲಿಸಿಸ್, ಸೂಪರ್ ಕೆಪ್ಯಾಸಿಟರ್ ಮತ್ತು ಆಮ್ಲಜನಕ ಕಡಿತ ಕ್ರಿಯೆಗಳ ಸಂಶೋಧನೆಗಳ ಬಗ್ಗೆ ಭಾರತ ಮತ್ತು ಚೀನಾದಲ್ಲಿ ಹೆಚ್ಚಿನ ಪ್ರಾಮುಖ್ಯ ಇದೆ. ಅಮೆರಿಕ ಮತ್ತು ಯುರೋಪಿನ ದೇಶಗಳು ಈ ವಿಷಯದಲ್ಲಿ ಅಷ್ಟಾಗಿ ತಲೆ ಕೆಡಿಸಿಕೊಂಡಿಲ್ಲ. ಯಾಂತ್ರಿಕ ಬುದ್ಧಿಮತ್ತೆಗೆ ಕಸುವು ತುಂಬಲು ಡೀಪ್ ಮತ್ತು ಮಷೀನ್ ಲರ್ನಿಂಗ್ ಕುರಿತಾದ ಸಂಶೋಧನೆಗಳು ಹೆಚ್ಚಾಗಿ ನಡೆಯುತ್ತಿವೆ. ಹಲವು ಪದರಗಳ ದತ್ತಾಂಶದ ಮೇಲೆ ನಿರ್ಮಿತಗೊಂಡಿರುವ ಯಾಂಬು ತಂತ್ರಜ್ಞಾನವು ಈಗಾಗಲೇ ಮುಖ ಚಹರೆ ಪತ್ತೆ, ಡಿಜಿಟಲ್ ಸೇವಕರ ಮೂಲಕ ಧ್ವನಿ ಪತ್ತೆ ಮಾಡಿ ಉತ್ತರ ನೀಡುವ ಕೆಲಸ ಮಾಡುತ್ತಿದೆ. ಮನರಂಜನೆ ಹಾಗೂ ಶಾಪಿಂಗ್ ವಲಯದಲ್ಲಿ ಗ್ರಾಹಕರಿಗೆ ಇಂಥಿಂಥ ವಸ್ತುಗಳು ಬೇಕಾಗಬಹುದು ಎಂದು ಯಾಂಬು ತಂತ್ರಜ್ಞಾನವು ಮುಂಚಿತವಾಗಿಯೇ ಅಂದಾಜಿಸಿ ಅವರ ಆಯ್ಕೆಗಳನ್ನು ಸುಗಮಗೊಳಿಸಿದೆ. ಅದನ್ನು ಮತ್ತಷ್ಟು ಕರಾರುವಾಕ್ಕುಗೊಳಿಸಲು ವಿಶ್ವದೆಲ್ಲೆಡೆ ಸಂಶೋಧನೆಗಳು ಭರದಿಂದ ಜರುಗುತ್ತಿವೆ. ಯಾಂಬು ಕುರಿತಾದ ಸಂಶೋಧನೆಯಲ್ಲಿ ಚೀನಾ ದೇಶದ ಸಂಶೋಧನೆಗಳು ಅಮೆರಿಕದಸಂಶೋಧನೆಗಳಿಗಿಂತ ಎರಡು ಪಟ್ಟು ಹೆಚ್ಚಿವೆ. ಅಲ್ಲದೆ ಈ ಐದು ವರ್ಷಗಳಲ್ಲಿ ವಿಶ್ವದಾದ್ಯಂತ ನಡೆದಿರುವ ಒಟ್ಟು ಸಂಶೋಧನೆಯಲ್ಲಿ ಶೇಕಡ 45ರಷ್ಟು ಪಾಲು ಯಾಂತ್ರಿಕ ಬುದ್ಧಿಮತ್ತೆಯದೇ ಆಗಿದೆ. ಯಾಂಬು ಕುರಿತಾದ ಸಂಶೋಧನೆಗಳ ಪ್ರಮಾಣ ನಮ್ಮಲ್ಲಿ ಹೇಳಿಕೊಳ್ಳುವ ಮಟ್ಟದಲ್ಲಿ ಇಲ್ಲ.

ಬೆಳಕನ್ನು ಬಳಸಿಕೊಂಡು ರಾಸಾಯನಿಕ ಕ್ರಿಯೆಗಳ ವೇಗ ಹೆಚ್ಚಿಸುವುದನ್ನು ಫೋಟೊ ಕೆಟಲಿಸಿಸ್ ಎನ್ನುತ್ತೇವೆ. ಶುದ್ಧ ಶಕ್ತಿಯನ್ನು ಉತ್ಪಾದಿಸಲು ಇದು ಬಹುದೊಡ್ಡ ರೀತಿಯಲ್ಲಿ ನೆರವಾಗುತ್ತದೆ ಮತ್ತು ಈ ಕ್ರಿಯೆಯಿಂದ ಹೊಸ ಬಗೆಯ ಪದಾರ್ಥಗಳನ್ನು ಸೃಷ್ಟಿಸುವುದು ಸುಲಭವಾಗುತ್ತದೆ. ವಿಶ್ವದೆಲ್ಲೆಡೆ ಹಸಿರು ಜಲಜನಕದ ಉತ್ಪಾದನೆ ಮತ್ತು ಬಳಕೆಯು ಮುನ್ನೆಲೆಗೆ ಬರುತ್ತಿದೆ. ಸೂರ್ಯನ ಶಾಖ, ಬೆಳಕು ಮತ್ತು ಗಾಳಿ ಬಳಸಿಕೊಂಡು ಉತ್ಪಾದಿಸುವ ಶುದ್ಧ ಶಕ್ತಿಯನ್ನು ಸ್ಟ್ಯಾಟಿಕ್ (ಸ್ಥಿರ) ವಿದ್ಯುತ್ ಶಕ್ತಿಯನ್ನಾಗಿ ಸಂಗ್ರಹಿಸಿಡಲು ಸೂಪರ್ ಕೆಪ್ಯಾಸಿಟರ್‌ಗಳು ನೆರವಾಗುತ್ತವೆ. ಸಾಮಾನ್ಯ ಬ್ಯಾಟರಿಗಳಲ್ಲಿ ರಾಸಾಯನಿಕ ಶಕ್ತಿಯನ್ನು ಸಂಗ್ರಹಿಸಿಡಲಾಗುತ್ತದೆ. ಇವುಗಳಿಗೆ ಹೋಲಿಸಿದರೆ ಸೂಪರ್ ಕೆಪ್ಯಾಸಿಟರ್‌ಗಳಲ್ಲಿ ಹೆಚ್ಚಿನ ಶಕ್ತಿಯನ್ನು ಹಿಡಿದಿಡಬಹುದು ಮತ್ತು ಬೇಕೆಂದಾಗ ಬೇಗನೆ ಬಳಸಬಹುದು. ಮಾರುಕಟ್ಟೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವೇಶಿಸುತ್ತಿರುವ ವಿದ್ಯುತ್‌ಚಾಲಿತ ವಾಹನಗಳಿಗೆ ಸೂಪರ್‌ ಕೆಪ್ಯಾಸಿಟರ್‌ಗಳನ್ನು ಅಳವಡಿಸಿದಲ್ಲಿ ವಾಹನದ ಕ್ಷಮತೆ ಹೆಚ್ಚುತ್ತದೆ ಮತ್ತು ಅತಿ ಕಡಿಮೆ ಸಮಯದಲ್ಲಿ ರಿಚಾರ್ಜ್ ಮಾಡುವ ಅನುಕೂಲವಿದೆ.

ವಿದ್ಯುತ್ ರಸಾಯನ ವಿಜ್ಞಾನದಲ್ಲಿ ಆಮ್ಲಜನಕ ಕಡಿತ ಕ್ರಿಯೆಯು ಅತ್ಯಂತ ಪ್ರಮುಖ ಪ್ರಕ್ರಿಯೆ ಎನಿಸಿದ್ದು, ಮುಂದಿನ ದಿನಗಳಲ್ಲಿ ಬಳಕೆಗೆ ಬರುವ ಇಂಧನಚಾಲಿತ ಬ್ಯಾಟರಿ ಮತ್ತು ಲೋಹ- ಗಾಳಿ ಬ್ಯಾಟರಿಗಳಿಗೆ ಜೀವಾಧಾರದಂತೆ ಇದು ಕೆಲಸ ಮಾಡುತ್ತದೆ. ಇದರ ಕುರಿತು ಹೆಚ್ಚಿನ ಸಂಶೋಧನೆ ನಡೆಸುತ್ತಿರುವ ಚೀನಾ ಆ ಕ್ಷೇತ್ರದ ಏಕಸ್ವಾಮ್ಯ ಗಳಿಸಿಕೊಳ್ಳುವ ಇರಾದೆಯಲ್ಲಿದೆ.

ಅಮೆರಿಕದವರು ಜನರ ಆರೋಗ್ಯದ ಕಡೆ ಹೆಚ್ಚಿನ ಗಮನಹರಿಸಿದ್ದಾರೆ. ಚೀನಾದವರು ಹೊಸ ಬಗೆಯ ಪದಾರ್ಥಗಳ ಸಂಶೋಧನೆಗೆ ಆದ್ಯತೆ ನೀಡುತ್ತಿದ್ದಾರೆ. ಪ್ರೋಗ್ರಾಮ್ಡ್ ಸೆಲ್ ಡೆತ್ ಸಂಶೋಧನೆಯು ನಿರೀಕ್ಷಿತ ಫಲ ನೀಡಿದರೆ ಕ್ಯಾನ್ಸರ್ ಗುಣಪಡಿಸಲು ಆಗದು ಎಂಬ ಮಾತಿಗೆ ಪೂರ್ಣ ವಿರಾಮ ಬೀಳುತ್ತದೆ. ಅಮೆರಿಕ, ಪಿಡಿ ಒನ್ ಸಂಶೋಧನೆಯು ಸೇರಿ ಜನರ ಆರೋಗ್ಯ ಸುಧಾರಿಸುವ ಸಂಶೋಧನೆಗಳಿಗೆ ಹೆಚ್ಚಿನ ಹಣ ನೀಡುತ್ತಿದೆ.

ನಮ್ಮ ದೇಶದ ಸಂಶೋಧನೆಗಳು ನ್ಯಾನೊ ತಂತ್ರಜ್ಞಾನದತ್ತ ಮುಖ ಮಾಡಿ ಬಹಳ ವರ್ಷಗಳೇ ಆಗಿವೆ. ಕಳೆದ 20 ವರ್ಷಗಳಲ್ಲಿ ನ್ಯಾನೊ ತಂತ್ರಜ್ಞಾನದ ಕುರಿತು15,070 ಸಂಶೋಧನೆಗಳನ್ನು ಕೈಗೊಂಡಿದ್ದೇವೆ. ಉಷ್ಣಾಂಶ ಸಾಗಣೆಗೆ ನೆರವಾಗುವ ದ್ರವ ನ್ಯಾನೊ ಪದಾರ್ಥಗಳು, ಸೂಕ್ಷ್ಮಜೀವಿಗಳ ವಿರುದ್ಧ ಹೋರಾಡಿ ಕ್ಯಾನ್ಸರ್ ಮತ್ತು ಮೈಕ್ರೋಬಿಯಲ್ ಕಾಯಿಲೆ ಗುಣಪಡಿಸಲು ನೆರವಾಗುವ ಬೆಳ್ಳಿಯ ನ್ಯಾನೊ ಕಣಗಳು, ಸೆಮಿಕಂಡಕ್ಟರ್, ಪ್ರಸಾದನ, ಸೆರಾಮಿಕ್ಸ್‌ ಕ್ಷೇತ್ರದಲ್ಲಿ ಬಳಕೆಯಾಗುವ ಸತುವಿನ ಆಕ್ಸೈಡ್ ನ್ಯಾನೊ ಕಣಗಳ ಬಗೆಗೆ ಹೆಚ್ಚಿನ ಸಂಶೋಧನೆ ಮಾಡುತ್ತಿದ್ದೇವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.