ವಾಣಿಜ್ಯನಗರಿ ಹುಬ್ಬಳ್ಳಿಗೆ ಇತ್ತೀಚೆಗೆ ಆಗಮಿಸಿದ್ದ ಮೋದಿ ಅವರಿಗೆ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರೇಟ್ ಸೇರಿದಂತೆ ಬಹುತೇಕ ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಿ ಬಿಗಿ ಬಂದೋಬಸ್ತ್ ನಿಯೋಜನೆ ಮಾಡಲಾಗಿತ್ತು. ಆದರೆ ಭದ್ರತಾ ಲೋಪವೊಂದು ನಡೆದಿದ್ದು, ಬಾಲಕನೊಬ್ಬ ಬ್ಯಾರಿಕೇಡ್ ದಾಟಿ ಮೋದಿಯವರಿಗೆ ಹಾರ ಹಾಕಲು ಪ್ರಯತ್ನಿಸಿದ್ದ. ಈ ಘಟನೆ ದೇಶದಾದ್ಯಂತ ಸುದ್ದಿಯಾಗಿದ್ದು, ಸಾಕಷ್ಟು ಚರ್ಚೆಯೂ ಆಗಿದೆ.
ಅಸಲಿಗೆ, ಪ್ರಧಾನಿ ಅಥವಾ ಅತಿ ಗಣ್ಯವ್ಯಕ್ತಿಗಳ ವಿವಿಐಪಿಗಳ ಬಂದೋಬಸ್ತ್ ಎಂದರೆ ಏನು, ಹೇಗಿರುತ್ತದೆ, ಹೇಗಿರಬೇಕು, ಭದ್ರತಾ ಲೋಪವಾದರೆ ಸ್ಥಳೀಯ ಪೊಲೀಸ್ ವಲಯದಲ್ಲಿ ಆಗುವ ಆತಂಕ, ತಲ್ಲಣಗಳೇನು? ಎಂಬುದರ ಬಗ್ಗೆ ನಿವೃತ್ತ ಪೊಲೀಸ್ ಅಧಿಕಾರಿ ಜೆ.ಬಿ ರಂಗಸ್ವಾಮಿ ಅವರು ಮಾತನಾಡಿದ್ದಾರೆ.
ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರಿಗೆ ಆಗಿದ್ದ ಭದ್ರತಾಲೋಪದ ಪ್ರಸಂಗವೊಂದರ ಮೂಲಕ ವಿವಿಐಪಿ ಬಂದೋಬಸ್ತ್ ಬಗ್ಗೆ ರಂಗಸ್ವಾಮಿ ಅವರು ವಿವರಿಸಿದ್ದಾರೆ.
ಓದಿ...
ಮಾಜಿ ಪ್ರಧಾನಿಗೆ ಭದ್ರತಾ ಲೋಪ
1998. ಜೆಡಿಎಸ್ ಪಕ್ಷದ ಬೃಹತ್ ಸಮಾವೇಶ. ಮೈಸೂರಿನ ವಸ್ತು ಪ್ರದರ್ಶನ ಆವರಣದಲ್ಲಿ ಆಯೋಜಿಸಲಾಗಿತ್ತು. ಐವತ್ತು ಸಾವಿರ ಜನಕ್ಕೆ ನಿರ್ಮಿಸಲಾಗಿದ್ದ ಬೃಹತ್ ಶಾಮಿಯಾನ ಚಪ್ಪರ. ಮಾಜಿ ಪ್ರಧಾನಿ ದೇವೇಗೌಡರು ಉದ್ಘಾಟಿಸಲು ಬರಲಿದ್ದರು. ಮುಖ್ಯಮಂತ್ರಿ ಪಟೇಲರಾದಿಯಾಗಿ ಮಂತ್ರಿಮಂಡಲವೇ ವೇದಿಕೆಯಲ್ಲಿತ್ತು.
ಮಾಜಿ ಪ್ರಧಾನಿಗಳ ಕಾನ್ವಾಯ್ ( ಬೆಂಗಾವಲು ವಾಹನಸಾಲು) ಸಮಾವೇಶದ ವೇದಿಕೆಯ ಜಾಗಕ್ಕೆ ನೇರವಾಗಿ ಬರಲಿತ್ತು. ಮಾಜಿ ಪ್ರಧಾನಿಗಳು ಕಾನ್ವಾಯ್ ಕಾರಿನಿಂದ ವೇದಿಕೆಗೆ ಹತ್ತುವ ತನಕ ಪೂರ್ವಭಾವಿಯಾಗಿ ಎರಡು ರಿಹರ್ಸಲ್ ನಡೆದಿದ್ದವು.
ಮಾಜಿ ಪ್ರಧಾನಿಯಾದರೇನು?
ಸ್ವತಃ ಅವರೇ ತಮಗೆ ಇದೆಲ್ಲಾ ಬೇಡ ಎಂದರೂ, ಇಂತಹ ಭದ್ರತಾ ವ್ಯವಸ್ಥೆಗಳನ್ನು ಒಂದಿನಿತೂ ಲೋಪವಿಲ್ಲದಂತೆ ಪಕ್ಕಾ ಮಾಡಲೇಬೇಕು.
ಅದು ಅತ್ಯಗತ್ಯದ ಮುಂಜಾಗ್ರತೆ.
‘ಮಾಜಿ ಪ್ರಧಾನಿಗಳು ಸರ್ಕಾರಿ ಭವನ ಬಿಟ್ಟು ಸಮಾವೇಶದ ಸ್ಥಳಕ್ಕೆ ಬರುತ್ತಾ ಇದ್ದಾರೆ. ಈಗಿನ ಲೊಕೇಶನ್ ಹಾರ್ಡಿಂಜ್ ಸರ್ಕಲ್’ ಎಂದು ಕಂಟ್ರೋಲ್ ರೂಮ್ ಎಚ್ಚರಿಕೆ ನೀಡಿತ್ತು.
ಹಾದಿಯುದ್ದಕ್ಕೂ ನೇಮಿಸಿದ್ದ ಪೊಲೀಸ್ ಪಡೆ ಜಾಗೃತವಾಯಿತು.
ಆಯಾ ಸರ್ಕಲ್‌ಗಳ ರಸ್ತೆ ಸಂಚಾರ ಸಂಪೂರ್ಣ ಬಂದ್ ಆಯಿತು. ಕಾನ್ವಾಯ್ ಸುಗಮವಾಗಿ ಸಾಗಿತು.
ಕಾನ್ವಾಯ್ ಹೊರಡುವ ಕಾಲುಗಂಟೆ ಮೊದಲೇ ವಾರ್ನಿಂಗ್ ವಾಹನ ಸೈರನ್ ಊದುತ್ತಾ ಸಾಗುತ್ತದೆ. ರಸ್ತೆಯ ಸುರಕ್ಷತೆಗೆ ಯಾವ ಅಡೆತಡೆಯೂ ಇಲ್ಲ ಎಂಬುದನ್ನು ಖುದ್ದು ಖಚಿತ ಪಡಿಸಿಕೊಳ್ಳುವುದಷ್ಟೇ ಅಲ್ಲದೆ, ಹಾದಿಯಲ್ಲಿರುವ ಎಲ್ಲ ಪೊಲೀಸರನ್ನೂ ಎಚ್ಚರವಾಗಿರುವಂತೆ ಸೈರನ್ ಸೂಚಿಸುತ್ತಾ ಸಾಗುತ್ತದೆ.
ಅದಾದ ನಂತರ ಕೆಂಪು ಬಾವುಟದೊಂದಿಗೆ ಮುನ್ನುಗ್ಗುವುದೇ ಪೈಲೆಟ್ ವಾಹನ.
ಇದನ್ನು ಹಿಂಬಾಲಿಸಿ ಭದ್ರತಾ ವಾಹನಗಳು, ಬೆಂಗಾವಲು, ವಾಹನಗಳು, ಜಾಮರ್ ವಾಹನಗಳು ಒಂದರ ಹಿಂದೊಂದು ಧಾವಿಸಿ ಬರುತ್ತವೆ. ಒಂದೊಂದು ವಾಹನಕ್ಕೂ 60 –70 ಅಡಿಯಷ್ಟು ಅಂತರವಿರುವಂತೆ ವೇಗ ನಿಯಂತ್ರಿಸಿಕೊಂಡು ಸಾಗುತ್ತಾರೆ.
ಇವುಗಳ ನಡುವೆ ಮಾಜಿ ಪ್ರಧಾನಿ ಅಥವಾ ಅತಿ ಗಣ್ಯವ್ಯಕ್ತಿಯ ಕಾರು ಇರುತ್ತದೆ. ಅವರನ್ನು ಹಿಂಬಾಲಿಸುತ್ತಾ ಹಿರಿಯ ಅಧಿಕಾರಿಗಳ, ಇತರ ಮುಖ್ಯರ ಆಂಬ್ಯುಲೆನ್ಸ್, ಅಗ್ನಿಶಾಮಕ ದಳ ಇತ್ಯಾದಿ ವಾಹನಗಳು ಧಾವಿಸುತ್ತವೆ. ಒಮ್ಮೆ ಕಾನ್ವಾಯ್‌ನಲ್ಲಿ ಸೇರ್ಪಡೆಯಾದ ಮೇಲೆ ಮುಗಿಯಿತು. ಯಾವ ವಾಹನವೂ ಸ್ವತಂತ್ರವಾಗಿ ಅತ್ತಿತ್ತ ಹೋಗುವಂತಿಲ್ಲ. ರೈಲ್ವೇ ಬೋಗಿಯಂತೇ ಸಾಗಬೇಕು!.
ಆ ದಿನ ನನಗೆ ವೇದಿಕೆಯ ಪ್ರವೇಶದಲ್ಲಿ ಡ್ಯೂಟಿ. ಇತರ ಅಧಿಕಾರಿಗಳೊಂದಿಗೆ ಕಾಯುತ್ತಾ ನಿಂತಿದ್ದೆ. ಕಾರಿಳಿದು ಬರುವ ಮಾಜಿ ಪ್ರಧಾನಿಗಳನ್ನು ವೇದಿಕೆಗೆ ಬರಮಾಡಿಕೊಂಡು, ಅವರ ನಂತರ ಮತ್ತಾರೂ ಪ್ರವೇಶಿಸದಂತೆ ನಿರ್ಬಂಧಿಸುವ ಕೆಲಸ ನನ್ನದು.
ಅಕಸ್ಮಾತ್ ಪ್ರವೇಶಿಸಲು ಯಾರಾದರೂ ಪ್ರಮುಖ ಮಂತ್ರಿಗಳಿದ್ದಲ್ಲಿ, ಸೂಕ್ತ ತಪಾಸಣೆ ಮಾಡಿ ಒಳಬಿಡುವ ಹೊಣೆಗಾರಿಕೆಯೂ ಜೊತೆಗೂಡಿತ್ತು.
ಆ ಗೇಟಿನಲ್ಲೋ? ಮಂತ್ರಿಗಳಿಗಿಂತ ಕಂತ್ರಿಗಳದ್ದೇ ಕಾಟ. ತಾನೂ ಅತಿ ಮುಖ್ಯ ವ್ಯಕ್ತಿ ಎಂಬ ಪೋಸಿನೊಂದಿಗೆ ಬರುವ ನಕಲಿಗಳನ್ನು ತಡೆಯಲೇ ಬೇಕು. ಇಂತಹ ಕಡೆ ಜಟಾಪಟಿ ಮಾತು ಅನಿವಾರ್ಯ. ನಾನಾ ಪ್ರಮುಖರ ನೇರ ಪರಿಚಯ ನನಗಿದ್ದುದರಿಂದ ಆ ಜಾಗಕ್ಕೆ ನೇಮಕ ಮಾಡಿದ್ದರು.
ವಸ್ತು ಪ್ರದರ್ಶನ ಆವರಣವನ್ನು ಕಾನ್ವಾಯ್ ಪ್ರವೇಶಿಸಿತು ಎಂದು ಕಂಟ್ರೋಲ್ ರೂಂ ಹೇಳಿತು.
ರೊಯ್ಞ್... ರೊಂಯ್ಞ್... ಸೈರನ್ ಸದ್ದು ಮೊಳಗಿತು.
ಮಾಜಿ ಪ್ರಧಾನಿಗಳು ವೇದಿಕೆಗೆ ಬರಲು ಇದ್ದ ಸಮಯ ಕೇವಲ ನಾಲ್ಕಾರು ನಿಮಿಷ ಮಾತ್ರ.
ಎಲ್ಲರೂ ಜಾಗೃತರಾದರು. ಪೊಲೀಸರು ಜನಸಂದಣಿಯನ್ನು ಒಪ್ಪ ಮಾಡಿ ನಿಲ್ಲಿಸಿದರು. ಮೊದಲಿಗೆ ವಾರ್ನಿಂಗ್ ಜೀಪು, ಪೈಲೆಟ್ ವಾಹನಗಳು ಸಾಲಾಗಿ ಧಾವಿಸಿದವು. ನೋಡಿದರೆ ಮಾಜಿ ಪ್ರಧಾನಿಗಳ ಕಾರೇ ಇಲ್ಲ!
ಸಮಾವೇಶವೋ ಐವತ್ತು ಸಾವಿರ ಜನರಿದ್ದ ಬೃಹತ್ ಜನಸಾಗರ. ಆ ದಟ್ಟ ಶರಧಿಯಲ್ಲಿ ಎಲ್ಲಿದ್ದಾರೆ ಗೊತ್ತಾಗಲಿಲ್ಲ.
ಏನೋ ಅಪಾಯ ಎದುರಾಗಿರಬೇಕು. ಅವರನ್ನು ತಕ್ಷಣ ಸೇಫ್ ಹೌಸಿಗೆ ಕರೆದೊಯ್ದಿರಬೇಕು ಎಂದು ಅನುಭವ ಹೇಳಿತು. ಅಕಸ್ಮಾತ್ ಅವಘಡ ಎದುರಾದರೆ ಬೇರೆ ರಸ್ತೆಯಿಂದ ಸುರಕ್ಷಿತ ಗೃಹಕ್ಕೆ ಕರೆದೊಯ್ಯುತ್ತಾರೆ. ನಾಲ್ಕಾರು ಅಂತಹ ಗುಪ್ತಗೃಹಗಳಿರುತ್ತವೆ. ಅವು ಎಲ್ಲಿರುತ್ತವೆ ಎಂಬುದು ಪೊಲೀಸರಿಗೇ ಗೊತ್ತಿರುವುದಿಲ್ಲ. ಅದು ಅಷ್ಟು ಸೀಕ್ರೆಟ್. And the meaning of secret is SECRET only! (ಗೌಪ್ಯತೆಯ ಅರ್ಥ ಗೌಪ್ಯ ಮಾತ್ರ).
ಯಾವ ಕಾರಣಕ್ಕೂ ಅತಿ ಗಣ್ಯರ ಕಾರು ಕಾನ್ವಾಯ್ ಬಿಡುವಂತೆಯೇ ಇಲ್ಲ. ಆ ಕಾರು ಎಲ್ಲಿಗೆ ಹೋಯಿತು?
ಕಿರು ಆತಂಕ ಆಶ್ಚರ್ಯಗಳಿಂದ ಕಾಯತೊಡಗಿದೆವು.
ಅಷ್ಟರಲ್ಲಿ ಸಮಾವೇಶದ ಆರಂಭದಲ್ಲಿ ಕುಳಿತಿದ್ದ ಸಾವಿರಾರು ತಲೆಗಳ ಸಮುದಾಯ ಅತ್ತಿತ್ತ ಹೊಯ್ದಾಡುವುದು ಕಾಣಿಸಿತು. ಜೈಕಾರ ಹಾಕುವ ಗದ್ದಲವೂ ಕೇಳಿಸಿತು.
ಇಡೀ ಸಭಾಂಗಣ ಧಿಗ್ಗನೇ ಎದ್ದು ನಿಂತಿತು. ಏನಾಗುತ್ತಿದೆ ಎಂಬದೇ ಗೊತ್ತಾಗದ ಅಯೋಮಯ ಸ್ಥಿತಿ.
ಮಾಜಿ ಪ್ರಧಾನಿಗಳ ಕಾರೂ ವೇದಿಕೆಯತ್ತ ಬಂದಿಲ್ಲ. ಅದು ಯಾವ ಕಾರಣಕ್ಕೂ ಎಲ್ಲೂ ನಿಲ್ಲುವಂತೆಯೇ ಇರಲಿಲ್ಲ. ವೇದಿಕೆಯತ್ತಲೂ ಬರಲಿಲ್ಲ.
ಏನೋ ಅನಾಹುತವಾಗಿರಬೇಕು ಎಂದು ಎಲ್ಲರಿಗೂ ಅನ್ನಿಸಿತು.
ಕಂಟ್ರೋಲ್ ರೂಂ, ‘ಮಾಜಿ ಪ್ರಧಾನಿಗಳು ಸಭಾ ಮಧ್ಯದ ಪ್ಯಾಸೇಜಿನಲ್ಲಿ ನಡೆದುಕೊಂಡು ಮುಖ್ಯ ವೇದಿಕೆಯತ್ತಾ ಹೋಗ್ತಾ ಇದ್ದಾರೆ. ಅಲ್ಲಿರೋ ಆಫೀಸರ್ಸ್ ತಕ್ಷಣ ಅಲರ್ಟ್ ಆಗಿ. ಜನಗಳು ಮಾಜಿ ಪ್ರಧಾನಿಗಳ ಹತ್ತಿರ ಸುತ್ತುವರೆಯದಂತೆ ನೋಡಿಕೊಳ್ಳಿ. ತಕ್ಷಣ human barricade ( ಮಾನವ ಸರಪಳಿ) ಮಾಡಿ ವಿವಿಐಪಿಯನ್ನು ಕವರ್ ಮಾಡಿ’ ಎಂದು ಒಂದೇ ಸಮನೆ ಒರಲತೊಡಗಿತು.
ತಕ್ಷಣ ಮಾನವ ಸರಪಳಿ ರಚಿಸಿಕೊಂಡು ವಿವಿಐಪಿಯನ್ನು ಸುತ್ತುವರೆಯುವವರಾದರೂ ಯಾರು?
ಅಸಲಿಗೆ ಅತಿಗಣ್ಯರು ಸಭಾ ದ್ವಾರದಿಂದ ನಡೆದು ಬರುತ್ತಾರೆಂಬ ಸಣ್ಣ ಸುಳಿವೂ ಅಲ್ಲಿದ್ದ ಅಧಿಕಾರಿಗಳಿಗೇ ಗೊತ್ತಿಲ್ಲ. ಇನ್ನು ಸಿಬ್ಬಂದಿಗೆ ಹೇಗೆ ತಾನೇ ತಿಳಿದೀತು?
ಇದೆಲ್ಲವೂ ಕ್ಷಣಾರ್ಧದಲ್ಲಿ ನಡೆದು ಹೋದ ಘಟನೆ. ಮಾಜಿ ಪ್ರಧಾನಿಗಳ ಮೇಲೆ ಹಲ್ಲೆ ಮಾಡುವುದಿರಲಿ, ಅಭಿಮಾನಿಯೊಬ್ಬ ಮೈಮುಟ್ಟಿ ಎಳೆದಾಡಿದರೂ ಅದೇ ದೊಡ್ಡ ಭದ್ರತಾ ಲೋಪವೆನಿಸಿ, ಅನೇಕರ ತಲೆದಂಡವಾಗಿ ಬಿಡುತ್ತದೆ.
‘ವೇದಿಕೆಯ ಹತ್ತಿರವಿರುವ ಅಧಿಕಾರಿಗಳೆಲ್ಲ ಸೀದಾ ಮುಂದೆ ಹೋಗಿ ಅತಿಗಣ್ಯರನ್ನು ಕವರ್ ಮಾಡಿಕೊಂಡು ಬೆಂಗಾವಲಾಗಿ (escort) ಬನ್ನಿ’ ಎಂಬ ಆದೇಶ ಕಂಟ್ರೋಲ್ ರೂಮಿನಿಂದ ಬಂದಿತು. ನಾವೊಂದಿಷ್ಟು ಜನ ವೇದಿಕೆಯ ಬಂದೋಬಸ್ತಿನಲ್ಲಿದ್ದೆವು.
ಕ್ವಿಕ್ಕಾಗಿ ಹೋಗುವಂತೆ ಕಂಟ್ರೋಲ್ ಕಿರಿಕಿರಿ ಕರೆ.
ವೇದಿಕೆ ಬಿಟ್ಟು ಈಗ ನಾವೆಲ್ಲರೂ ಮಾಜಿ ಪ್ರಧಾನಿಗಳು ಬರುತ್ತಿದ್ದ ಜಾಗಕ್ಕೆ ಓಡತೊಡಗಿದೆವು. ಅದು ಮುಖ್ಯ ವೇದಿಕೆಯಿಂದ ಎರಡು ಫರ್ಲಾಂಗ್ ದೂರದಲ್ಲಿತ್ತು. ಮಾಜಿ ಪ್ರಧಾನಿಯನ್ನು ನೋಡಲು ಮುಗಿ ಬಿದ್ದಿದ್ದ ಜನರ ತುಂಬಳಿಯನ್ನು ದಾಟುವುದು ಕಷ್ಟವಿತ್ತು.
ಅಷ್ಟರಲ್ಲಿ ಕಮೀಷನರ್ ಕೆಂಪಯ್ಯನವರ ಆದೇಶ ನೇರವಾಗಿ ವೈರ್ ಲೆಸ್ಸಿನಲ್ಲಿ ಧ್ವನಿಸಿತು.
‘ವೇದಿಕೆಯಲ್ಲಿರುವ ಅಧಿಕಾರಿಗಳೆಲ್ಲರೂ ಒಮ್ಮೆಲೇ ಹೋಗಬೇಡಿ. 2 + 10 ಅಧಿಕಾರಿಗಳು ( skeleton staff ) ಮೈಯ್ಯೆಲ್ಲಾ ಕಣ್ಣಾಗಿ ವೇದಿಕೆಯಲ್ಲೇ ಇರಲಿ. ಉಳಿದವರು ಮಾತ್ರ ಅತಿಗಣ್ಯರ ಬಳಿ ಹೋಗಿ. ಜನ ಜಂಗುಳಿಯ ಹದ ಕೆಡದಂತೆ ನಿಯಂತ್ರಿಸಿ!.
ಸಮಾವೇಶದಲ್ಲಿದ್ದ ಹಿರಿಯ ಕಿರಿಯ ಅಧಿಕಾರಿಗಳೆಲ್ಲರಿಗೂ ಯಾರು ಯಾವ ಕೆಲಸ ಮಾಡಬೇಕೆಂದೇ ಗೊತ್ತಾಗದ ದಿಙ್ಮೂಢತೆ! ಏನೆಲ್ಲಾ ಪೂರ್ವಾಭ್ಯಾಸ ಮಾಡಿದ್ದರೂ ಈ ಗುರುತರ ಪ್ರಮಾದ ಹೇಗಾಯಿತು?
ಹತ್ತಿರ ಹತ್ತಿರ ಐವತ್ತು ಸಾವಿರ ಸೇರಿರುವ ಜನಸಂದಣಿಯಲ್ಲಿ ಯಾವ ಕ್ಷಣ ಏನು ಬೇಕಾದರೂ ಆಗಿಬಿಡಬಹುದು. ದುಷ್ಕರ್ಮಿಗಳು ಸೇರಿದ್ದರಂತೂ ಆಗಬಹುದಾದ ಅನಾಹುತವನ್ನು ಕಲ್ಪಿಸುವುದೇ ಬೇಡ.
ನಾವುಗಳು ಹೋಗುವಷ್ಟರಲ್ಲಿ ಮಾಜಿ ಪ್ರಧಾನಿಗಳು ಮುಗುಳ್ನಗುತ್ತಾ ಕೈ ಬೀಸುತ್ತಾ ಆನಂದವಾಗಿ ಪ್ಯಾಸೇಜಿನಲ್ಲಿ ಬರುತ್ತಿದ್ದರು!.
ಒಂದಷ್ಟು ಸಿಬ್ಬಂದಿ ಅವರನ್ನು ಸುತ್ತುವರೆದು ಜನ ನುಗ್ಗದಂತೆ ಹರ ಸಾಹಸ ಪಡುತ್ತಿತ್ತು. ಆ ಜನತುಂಬಳಿಯಲ್ಲಿ ನಮಗ್ಯಾರಿಗೂ ಅತಿಗಣ್ಯರನ್ನು ಸಮೀಪಿಸಲು ಸಾಧ್ಯವೇ ಆಗದಾಯಿತು.
ಅಕಸ್ಮಾತ್ ಏನಾದರೂ ಸ್ಫೋಟವಾದರೆ ಎಂಬ ರಾಜೀವ್ ಗಾಂಧಿ ದುರಂತದ ನೆನಪು; ಅದೇ ಕಾಲಮಾನದಲ್ಲಿ ತೋಟಗಾರಿಕೆ ಸಚಿವ ಡಿ.ಟಿ.ಜಯಕುಮಾರ್ ಅವರ ಮೇಲೆ ನಡೆದಿದ್ದ ಹಲ್ಲೆಯೂ ನೆನಪಾಗುತ್ತಿತ್ತು. ಜನರಿಂದ ಅಹವಾಲು ಸ್ವೀಕರಿಸುತ್ತಿದ್ದ ಸಚಿವರಿಗೆ ಮನವಿ ಪತ್ರ ಕೊಟ್ಟವನೊಬ್ಬ ದಿಢೀರನೆ ಕಪಾಳಮೋಕ್ಷ ಮಾಡಿದ್ದ!.
ಅದೊಂದು ಅನಾಹುತಕಾರಿ ಘಟನೆ ತುಂಬಿದ ಸಭೆಯಲ್ಲಿ ನಡೆದು ಹೋಗಿತ್ತು. ಸಂಬಂಧಿಸಿದ ಪೊಲೀಸ್ ಅಧಿಕಾರಿಗಳು ತೊಂದರೆ ಅನುಭವಿಸಿದ್ದರು. ಲೋಪ ಯಾರದೇ ಆಗಿರಲಿ, ಹೇಗೇ ಆಗಿರಲಿ ಹೊಣೆಗಾರಿಕೆಯ ಗೂಬೆ ಮಾತ್ರ ಅಲ್ಲಿರುವ ಪೊಲೀಸರ ಮೇಲೆ .
ಅಂತೂ ಮಾಜಿ ಪ್ರಧಾನಿಗಳು ಯಾವುದೇ ಅಡಚಣೆ ಇಲ್ಲದಂತೆ ವೇದಿಕೆ ಹತ್ತಿದರು. ಅವರಿಗೇನೂ ತೊಂದರೆಯಾಗಲಿಲ್ಲವೆಂದರೆ ಭದ್ರತಾ ಲೋಪವನ್ನು ಮಾಫ್ ಮಾಡಬಹುದು ಎಂದಲ್ಲ. ಅನಾಹುತ ಆಗಲಿ, ಆಗದಿರಲಿ ಕರ್ತವ್ಯ ಲೋಪವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸುತ್ತಾರೆ. ಹಿರಿ ಕಿರಿಯ ಅಧಿಕಾರಿಗಳ ತಲೆದಂಡ ಇಂತಲ್ಲಿ ಅನಿವಾರ್ಯ.
ಎಡವಟ್ಟು ಮಾಡಿದ ಅಧಿಕಾರಿಗಳಿಗೆ ಶಿಕ್ಷೆಯೂ ಆಯಿತು.
ಆದದ್ದು ಇಷ್ಟೇ...
ಕಾನ್ ವಾಯ್ ವಾಹನಗಳು ಸಮಾವೇಶ ಚಪ್ಪರದ ಮುಂದಿನಿಂದ ಹಾದುಹೋಗುವಾಗ, ಮುಖ್ಯ ದ್ವಾರದ ಮುಂದೆ ನಿಂತಿದ್ದ ಅನೇಕ ಮುಂದಾಳುಗಳು ದೇವೇಗೌಡರ ವಾಹನ ಬಂದಾಗ ಕೈ ತೋರಿಸಿ ಜೈಕಾರ ಹಾಕುತ್ತಾ ಮುತ್ತಿಗೆ ಹಾಕಿದ್ದಾರೆ. ಪಕ್ಷದ ಅಭಿಮಾನಿಗಳು ಎಂದು ಗೌಡರು ಕಾರಿನಿಂದ ಇಳಿದು ಕೈ ಮುಗಿದಿದ್ದಾರೆ. ಒಮ್ಮೆಲೇ ಆವರಿಸಿದ ಗುಂಪು ಅವರನ್ನು ಸಭಾಂಗಣದ ಮಧ್ಯಭಾಗದ ಪ್ಯಾಸೇಜಿನಲ್ಲಿ ಮೆರವಣಿಗೆ ಕರೆದುಕೊಂಡು ಹೊರಟಿದೆ. ಬೆರಳೆಣಿಕೆಯ ಬೆಂಗಾವಲು ಪೊಲೀಸರಿಗೆ “ ತಾವು ಅತ್ತ ಹೋಗುವಂತಿಲ್ಲ” ಎಂದು ಗೌಡರಿಗೆ ಹೇಳಲು ಧೈರ್ಯ ಸಾಲದೆ, ಬೆಪ್ಪರಂತೆ ಹಿಂಬಾಲಿಸಿ ಬಿಟ್ಟಿದ್ದಾರೆ. ಏನಾಗುತ್ತಿದೆ ಎಂದು ತಿಳಿಯುವುದರೊಳಗೆ ಜನ ಜಂಗುಳಿಯ ಜೈಕಾರದಲ್ಲಿ ಲೀನರಾಗಿ ಗೌಡರು ಬಿಜಯಂಗೈದಿದ್ದಾರೆ. ಅದೋ ಹೇಳಿ ಕೇಳಿ ಸಾವಿರಾರು ಜನರ ಸಮಾವೇಶ. ಉಗ್ರರೋ, ದುಷ್ಕರ್ಮಿಗಳೋ ಸೇರಿದ್ದರೆ ದುರ್ಘಟನೆಯೊಂದು ನಡೆದು ಬಿಡುತ್ತಿತ್ತು. ಪೊಲೀಸ್ ಕರ್ತವ್ಯವೆಂದರೆ ಹೇಗೋ ನಡೆಯುತ್ತದೆ ಎಂದು ಉದಾಸೀನವಾಗಿರಲಾಗದು. ಕೊಂಚ ಆಯ ತಪ್ಪಿದರೂ ಆಗಬಾರದ ಅನಾಹುತಕ್ಕೆ ಆಹ್ವಾನ ಕೊಟ್ಟಂತೆ.
ಇಡೀ ಸಮಾವೇಶದ ಜನರಿಗೆ, ಅಲ್ಲಿದ್ದ ರಾಜಕಾರಣಿ ಮಹೋದಯರಿಗೆ, ಯಾರಿಗೂ ಪೊಲೀಸರ ಪೇಚಾಟ, ತಲ್ಲಣ , ಶಿಕ್ಷೆ ಕಿಂಚಿತ್ತೂ ಅರಿವಿಗೆ ಬರಲಿಲ್ಲ. ಅದೇ ವಿಪರ್ಯಾಸ!
– ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.