ADVERTISEMENT

ಪೂರ್ವಾನ್ವಯ ತೆರಿಗೆ: ಪ್ರಣವ್ ವೃತ್ತಾಂತ

ಈ ತೆರಿಗೆಯನ್ನು ರದ್ದುಪಡಿಸುವ ಈಗಿನ ಸರ್ಕಾರದ ಕ್ರಮ ಇನ್ನಷ್ಟು ಸುಧಾರಣೆಗಳಿಗೆ ದಾರಿಯಾಗಲಿ

ಕ್ಯಾಪ್ಟನ್‍ ಗೋಪಿನಾಥ್‍
Published 27 ಆಗಸ್ಟ್ 2021, 22:30 IST
Last Updated 27 ಆಗಸ್ಟ್ 2021, 22:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವು 2012ರಲ್ಲಿ ಜಾರಿಗೆ ತಂದಿದ್ದ ಪೂರ್ವಾನ್ವಯ ತೆರಿಗೆ (retrospective tax) ಕಾನೂನನ್ನು ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವು ಅಧಿಕೃತವಾಗಿ ಪರಿಸಮಾಪ್ತಿಗೊಳಿಸಿದೆ. ಯುಪಿಎ ಅವಧಿಯ ಕಾನೂನು ಒಂದು ಕರಾಳ ಶಾಸನವಾಗಿತ್ತು. ಸಾರ್ವಭೌಮತ್ವವನ್ನು ತಪ್ಪಾಗಿ ಗ್ರಹಿಸಿಕೊಂಡು ಇಂತಹ ಕಾನೂನು ತರಲಾಗಿತ್ತು.

ನಿಸ್ತೇಜರಾಗಿದ್ದ ಹೂಡಿಕೆದಾರರಲ್ಲಿ ಇಂದಿನ ಸರ್ಕಾರದ ಕ್ರಮವು ಒಂದಿಷ್ಟು ಸಮಾಧಾನ ಮೂಡಿಸಿರ ಬಹುದು. ಭಾರತದಲ್ಲಿ ಹಣ ಹೂಡಿಕೆ ಮಾಡಲು ಆಮಿಷ ವೊಡ್ಡುವ ನಮ್ಮ ಅಧಿಕಾರಶಾಹಿಯು ನಂತರದಲ್ಲಿ ತೋಡುವ ಖೆಡ್ಡಾ ಹೇಗಿರುತ್ತದೆ ಎಂಬುದನ್ನು ಊಹಿಸಲು ಹೂಡಿಕೆದಾರರಿಗೆ ಸಾಧ್ಯವಾಗುವುದೇ ಇಲ್ಲ. 2014ರ ಲೋಕಸಭಾ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ನರೇಂದ್ರ ಮೋದಿ ಅವರು, ‘ಕಾಂಗ್ರೆಸ್ಸು ತೆರಿಗೆ ಭಯೋತ್ಪಾದನೆಯಲ್ಲಿ ತೊಡಗಿದೆ’ ಎಂದು ಆರೋಪಿಸಿದ್ದರು. ತಾನು ಅಧಿಕಾರಕ್ಕೆ ಬಂದರೆ ಈ ಬಗೆಯ ತೆರಿಗೆಗಳನ್ನು ರದ್ದು ಮಾಡುವುದಾಗಿ ಬಿಜೆಪಿ ಹೇಳಿತ್ತು. ಆದರೆ ಅಧಿಕಾರಕ್ಕೆ ಬಂದ ನಂತರ ಕೆಲವು ಸಂಗತಿಗಳನ್ನು ಉದ್ದೇಶಪೂರ್ವಕವಾಗಿ ಮರೆಯುವ ಪ್ರವೃತ್ತಿ ಬೆಳೆಸಿಕೊಂಡಿತ್ತು.

ಪೂರ್ವಾನ್ವಯ ತೆರಿಗೆ ಕಾನೂನು ಜಾರಿಗೆ ತಂದಿದ್ದಕ್ಕೆ ಅಷ್ಟೂ ದೂಷಣೆಯನ್ನು ಅಂದು (2012ರಲ್ಲಿ) ಕೇಂದ್ರ ಹಣಕಾಸು ಸಚಿವರಾಗಿದ್ದ ಪ್ರಣವ್ ಮುಖರ್ಜಿ ಅವರೇ ಹೊತ್ತುಕೊಳ್ಳಬೇಕು. ಭಾರತದಲ್ಲಿ ಆಸ್ತಿ ಹೊಂದಿರುವ ವಿದೇಶಿ ಕಂಪನಿಗಳು 1962ರ ನಂತರ ನಡೆಸಿದ ಷೇರು ವರ್ಗಾವಣೆಯನ್ನು ತೆರಿಗೆ ವ್ಯಾಪ್ತಿಗೆ ತರುವ ಉದ್ದೇಶ ಈ ಕಾನೂನಿನದ್ದು. ಮುಖರ್ಜಿ ಅವರು ಹಿಂದಕ್ಕೆ ಹೋಗಿ, ಈಸ್ಟ್ ಇಂಡಿಯಾ ಕಂಪನಿಯ ಕಾಲದವರೆಗೂ ತೆರಿಗೆ ವಿಧಿಸಬಹುದಿತ್ತು!

ADVERTISEMENT

‘ಪ್ರತೀ ನೌಕರನೂ ಕಾಲಕ್ರಮೇಣ ತನ್ನ ಅಸಾಮರ್ಥ್ಯದ ಹಂತವನ್ನು ತಲುಪುತ್ತಾನೆ’ ಎಂದು ಲಾರೆನ್ಸ್ ಜೆ. ಪೀಟರ್ ಹೇಳಿದ್ದರು. ಕೆಲವು ಕಂಪನಿಗಳು ಈ ಅಸಾಮರ್ಥ್ಯವನ್ನು ಗುರುತಿಸಿ ಸೂಕ್ತ ಕ್ರಮ ಕೈಗೊಳ್ಳುತ್ತವೆ. ಕೆಲವು ಸಂಸ್ಥೆಗಳು ತಮ್ಮ ಸಿಬ್ಬಂದಿಯನ್ನು ವಜಾ ಮಾಡುತ್ತವೆ. ಇನ್ನು ಕೆಲವು ಸಂಸ್ಥೆಗಳು ಆ ವ್ಯಕ್ತಿ ಸಂಸ್ಥೆಯ ಬಗ್ಗೆ ಹೊಂದಿರುವ ನಿಷ್ಠೆಯನ್ನು ನೋಡಿ ವಜಾ ಮಾಡುವುದಿಲ್ಲ. ಇಂತಹ ಸಂದರ್ಭದಲ್ಲಿ ಅಂತಹ ವ್ಯಕ್ತಿಗಳಿಗೆ ಬಡ್ತಿ ನೀಡಿ ಮೂಲೆಗೆ ತಳ್ಳುವ ಪದ್ಧತಿಗಳೂ ಇವೆ ಎಂದು ಲಾರೆನ್ಸ್ ಹೇಳಿದ್ದರು!

ಮುಖರ್ಜಿ ಅವರು ಅರ್ಥವ್ಯವಸ್ಥೆಯನ್ನು ಹಾಳುಮಾಡಿಬಿಟ್ಟರು ಎಂಬ ವಿಚಾರದಲ್ಲಿ ಸಮ್ಮತಿ ಮೂಡಿತ್ತು. ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿ ಹಾಗೂ ಪಿ. ಚಿದಂಬರಂ ಅವರು ಹಣಕಾಸು ಸಚಿವರಾಗಿ ಮಾಡಿದ್ದ ನ್ನೆಲ್ಲ ಮುಖರ್ಜಿ ಅವರು ತಲೆಕೆಳಗು ಮಾಡಿದ್ದರು. ಹಗರಣಗಳು ಇದ್ದರೂ ಯುಪಿಎ ಅವಧಿಯಲ್ಲಿ ಅರ್ಥವ್ಯವಸ್ಥೆಯು ವೇಗವಾಗಿ ಬೆಳೆದಿತ್ತು. ಮುಖರ್ಜಿ ಅವರಿಗೆ ತಮ್ಮ ನಡೆಯು ಹೂಡಿಕೆದಾರರ ಭಾವನೆಗಳ ಮೇಲೆ, ಅರ್ಥವ್ಯವಸ್ಥೆಯ ಮೇಲೆ ಬೀರಬಹುದಾದ ಪರಿಣಾಮ ವನ್ನು ಗ್ರಹಿಸಲು ಆಗಲಿಲ್ಲ ಎಂದು ಹಲವರು ಹೇಳಿದ್ದರು.

ಪ್ರತಿಗಾಮಿ ನಡೆಗಳಿಂದಾಗಿ ಅಂತರರಾಷ್ಟ್ರೀಯ ಸಮುದಾಯದಿಂದ ವ್ಯಕ್ತವಾದ ಟೀಕೆಗಳನ್ನು, ಅರ್ಥವ್ಯವಸ್ಥೆಯು ಇಳಿಕೆಯ ಹಾದಿ ಹಿಡಿದಿದ್ದನ್ನು ಗ್ರಹಿಸಿದ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು, ಹಣಕಾಸು ಸಚಿವಾಲಯದ ನೀತಿಗಳನ್ನು ಬಹಿರಂಗವಾಗಿ, ಅತ್ಯಂತ ಕಟುವಾಗಿ ಟೀಕಿಸಿತ್ತು. ಸಚಿವಾಲಯವನ್ನು ಟೀಕಿಸುವುದು ಅಂದರೆ, ಪರಿಣಾಮದಲ್ಲಿ ಅದರ ಸಚಿವರನ್ನೂ ಟೀಕಿಸಿತ್ತು ಎಂದೇ ಅರ್ಥಮಾಡಿಕೊಳ್ಳಬೇಕು. ಚುನಾವಣೆಯಲ್ಲಿ ಪಕ್ಷಕ್ಕೆ ತೊಂದರೆ ಆಗಬಹುದು ಎಂಬುದನ್ನು ಹಲವರು ಆಗಲೇ ಅಂದಾಜಿಸಿದ್ದರು. ಇಲ್ಲಿ ಒಂದು ವ್ಯಂಗ್ಯವಿದೆ. ಭಾರತದ ಆರ್ಥಿಕ ಸುಧಾರಣೆಗಳ ಶಿಲ್ಪಿ ಮನಮೋಹನ್ ಸಿಂಗ್ ಅವರು ಸರ್ಕಾರದ ನಾಯಕನಾಗಿ ಇವನ್ನೆಲ್ಲ ಮೌನವಾಗಿ ನೋಡುತ್ತ ಕುಳಿತಿದ್ದರು.

ಮುಖರ್ಜಿ ಅವರ ಬಗ್ಗೆ ಬಹುತೇಕರಿಗೆ ಬಹಳ ಗೌರವ ಇತ್ತು. ಅವರು ಮುತ್ಸದ್ದಿಯಂತಹ ವ್ಯಕ್ತಿತ್ವ ಹೊಂದಿದ್ದರು. ಸುಸಂಸ್ಕೃತರಾಗಿದ್ದರು. ಕಾಂಗ್ರೆಸ್ಸಿಗೆ ಎದುರಾಗುವ ಸಮಸ್ಯೆಗಳನ್ನು ಪರಿಹರಿಸುವ ವ್ಯಕ್ತಿ ಎಂಬ ಹೆಸರಿಗೆ ತಕ್ಕಂತೆ ಯಾವತ್ತೂ ನಡೆದುಕೊಂಡಿದ್ದರು. ಅವರನ್ನು ಹಣಕಾಸು ಸಚಿವ ಸ್ಥಾನದಿಂದ ಮೇಲಕ್ಕೆ ಎತ್ತುವುದು ಪಕ್ಷ ಕೈಗೊಂಡ ಮಹತ್ವದ ತೀರ್ಮಾನವಾಗಿತ್ತು. ಲಾರೆನ್ಸ್ ಪೀಟರ್‌ ಅವರು ಮೇಲೆ ಉಲ್ಲೇಖಿಸಿದ ಮಾತನ್ನು ಹೇಳುವ ಮೊದಲೇ, ಆ ಮಾತಿನಲ್ಲಿದ್ದ ತತ್ವವನ್ನು ಜಾರಿಗೆ ತಂದ ಪಕ್ಷ ಕಾಂಗ್ರೆಸ್. ಕೆಲವರನ್ನು ಮಂತ್ರಿ ಸ್ಥಾನದಿಂದ ಇಳಿಸಿ ಅವರನ್ನು ರಾಜ್ಯಪಾಲರನ್ನಾಗಿಸುವ ದಾರಿಯನ್ನು ಹುಡುಕಿದ್ದೇ ಕಾಂಗ್ರೆಸ್! ಮುಖರ್ಜಿ ಅವರ ವ್ಯಕ್ತಿತ್ವ ಅದೆಷ್ಟು ಹಿರಿದಾಗಿತ್ತೆಂದರೆ, ಅವರಿಗೆ ರಾಷ್ಟ್ರಪತಿ ಹುದ್ದೆಯನ್ನು ಮಾತ್ರ ನೀಡಲು ಸಾಧ್ಯವಿತ್ತು. ಅವರನ್ನು ರಾಷ್ಟ್ರಪತಿ ಭವನಕ್ಕೆ ತಳ್ಳಿ, ಕೈತೊಳೆದುಕೊಳ್ಳಲಾಯಿತು.

ಪೂರ್ವಾನ್ವಯ ತೆರಿಗೆ ವಿಚಾರದಲ್ಲಿ ಯುಪಿಎ ಸರ್ಕಾರವನ್ನು ಬಿಜೆಪಿಯು ಸರಿಯಾಗಿಯೇ ಟೀಕಿಸಿದ್ದರೂ, ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಅದೇ ನೀತಿಯನ್ನು ಕಾಂಗ್ರೆಸ್ಸಿನಂತೆಯೇ ಮುಂದುವರಿಸಿಕೊಂಡು ಬಂದಿದ್ದು ಏಕೆ, ವೊಡಾಫೋನ್ ಮತ್ತು ಕೇನ್ ಎನರ್ಜಿ ಕಂಪನಿಗಳನ್ನು ಕಾಡಿದ್ದು ಏಕೆ ಎಂಬ ಪ್ರಶ್ನೆ ಮೂಡುತ್ತದೆ. ಚುನಾವಣೆಯ ವೇಳೆ ನೀಡಿದ್ದ ಭರವಸೆಯನ್ನು ಈಡೇರಿಸದೇ ಇದ್ದುದು ಅರ್ಥ ವ್ಯವಸ್ಥೆಯ ಬುಡಕ್ಕೇ ಕೊಡಲಿಪೆಟ್ಟು ನೀಡುತ್ತಿದೆ ಎಂಬುದು ಅರ್ಥವಾಗಲು ಈಗಿನ ಸರ್ಕಾರಕ್ಕೆ ಏಳು ವರ್ಷ ಬೇಕಾಗಿದ್ದೇಕೆ? ಅಂತರ ರಾಷ್ಟ್ರೀಯ ನ್ಯಾಯಮಂಡಳಿಗಳು ವೊಡಾಫೋನ್, ಕೇನ್ ಪರ ತೀರ್ಪು ನೀಡಿದವು. ಇದರಿಂದಾಗಿ ಭಾರತದ ಬಗ್ಗೆ ಕೆಟ್ಟ ಚಿತ್ರಣ ಮೂಡಿತು. ಭಾರತವು ವಿಶ್ವಾಸಾರ್ಹ ಪಾಲುದಾರ ಅಲ್ಲ, ಸುಪ್ರೀಂ ಕೋರ್ಟ್‌ ತೀರ್ಪನ್ನು ಅಗೌರವದಿಂದ ಕಾಣುವುದಷ್ಟೇ ಅಲ್ಲದೆ ಈ ದೇಶವು ಅಂತರರಾಷ್ಟ್ರೀಯ ದ್ವಿಪಕ್ಷೀಯ ಒಪ್ಪಂದಗಳನ್ನು ಕೂಡ ಉಪೇಕ್ಷಿಸುತ್ತದೆ ಎಂಬ ಭಾವನೆ ಮೂಡಿತು. ವಾಣಿಜ್ಯ, ವಹಿವಾಟಿನ ನೆಲೆಗಟ್ಟು ಗಟ್ಟಿಯಾಗಿರಬೇಕು ಎಂದಾದರೆ ಈ ಬಗೆಯ ಚಿತ್ರಣ ರೂಪುಗೊಳ್ಳಲು ಬಿಡಬಾರದು.

ಪೂರ್ವಾನ್ವಯ ತೆರಿಗೆ ವ್ಯವಸ್ಥೆಯು ವೈಫಲ್ಯ ಕಾಣುವುದು ಆರಂಭದಲ್ಲೇ ಖಚಿತವಾಗಿತ್ತು. ಹಠಮಾರಿ ತನದ ಎದುರಿನಲ್ಲಿ ವಿವೇಕಕ್ಕೆ ಹೆಚ್ಚಿನ ಮಾನ್ಯತೆಯನ್ನು ತಡವಾಗಿಯಾದರೂ ನೀಡಬಹುದು. ಪೂರ್ವಾನ್ವಯ ತೆರಿಗೆಯನ್ನು ರದ್ದುಪಡಿಸುವ ಈಗಿನ ಸರ್ಕಾರದ ತೀರ್ಮಾನವನ್ನು ಸ್ವಾಗತಿಸಬೇಕು. ಈ ಕ್ರಮವು ಮುಂದಿನ ದಿನಗಳಲ್ಲಿ ಇನ್ನಷ್ಟು ಸುಧಾರಣೆಗಳಿಗೆ ದಾರಿ ಮಾಡಿಕೊಡಲಿ.

ಆದರೆ, ಅಂತರರಾಷ್ಟ್ರೀಯ ನ್ಯಾಯಮಂಡಳಿಗಳು ನೀಡಿದ ತೀರ್ಪುಗಳನ್ನು ಒಪ್ಪಿಕೊಳ್ಳುವ ನಿಲುವನ್ನು ಕೇಂದ್ರ ಸರ್ಕಾರವು ಆರಂಭದಲ್ಲೇ ಏಕೆ ತೋರಲಿಲ್ಲ ಎಂಬುದು ಆಶ್ಚರ್ಯಕರ. ಈ ತೀರ್ಪುಗಳು ನಮ್ಮ ಸುಪ್ರೀಂ ಕೋರ್ಟ್ ತೀರ್ಪಿಗೆ ಅನುಗುಣವಾಗಿಯೇ ಇದ್ದವು.

ನ್ಯಾಯಮಂಡಳಿಗಳ ತೀರ್ಪುಗಳನ್ನು ಪೂರ್ತಿಯಾಗಿ ಒಪ್ಪಿ, ಪೂರ್ವಾನ್ವಯ ತೆರಿಗೆ ಬೇಡಿಕೆಗಳನ್ನು ಹಿಂಪಡೆಯ
ಲಾಗುತ್ತದೆ, ತೆರಿಗೆ ಪಾವತಿಸಿದ್ದರೆ ಅದನ್ನು ಬಡ್ಡಿ ಮತ್ತು ಖರ್ಚು ಸಮೇತ ಹಿಂದಿರುಗಿಸಲಾಗುತ್ತದೆ, ಅದಕ್ಕೆ ಪ್ರತಿಯಾಗಿ ಸಂಬಂಧಪಟ್ಟ ಕಂಪನಿಗಳು ನ್ಯಾಯಮಂಡಳಿ ಗಳಿಗೆ ಸರ್ಕಾರದ ವಿರುದ್ಧ ಸಲ್ಲಿಸಿರುವ ಅರ್ಜಿಗಳನ್ನು ಹಿಂದಕ್ಕೆ ಪಡೆಯಬೇಕು ‍ಎಂದು ಹೇಳಿದ್ದರೆ ಸಾಕಿತ್ತು. ಸ್ನೇಹದಲ್ಲಿ ರಾಜಿ ಮಾಡಿಕೊಳ್ಳುವ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿ ಒಳ್ಳೆಯ ಹೆಸರು ಗಳಿಸಬಹುದಿತ್ತು. ನಾವು ಯಾರನ್ನಾದರೂ ಕೆಟ್ಟದಾಗಿ ನಡೆಸಿಕೊಂಡಾಗ, ಅವರು ನ್ಯಾಯಕ್ಕಾಗಿ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಕಾನೂನು ಹೋರಾಟ ನಡೆಸಬೇಕಾಗಿ ಬಂದಾಗ ಅವರ ವಿಚಾರದಲ್ಲಿ ವಿಶಾಲ ಹೃದಯ ತೋರುವುದು ಒಳ್ಳೆಯದು. ನ್ಯಾಯಮಂಡಳಿಗಳ ತೀರ್ಪು ಜಾರಿಗೆ ಬರುವುದನ್ನು ತಡೆಯಲು ಬೇರೆ ಬೇರೆ ಕ್ರಮಗಳ ಮೊರೆ ಹೋಗುವುದಕ್ಕಿಂತ ಉದಾರಿಗಳಾಗಿ ವರ್ತಿಸುವುದು ಉತ್ತಮ.

ಕಾನೂನಿನ ಕೈಗಳು ಹಾಗೂ ಅಧಿಕಾರಶಾಹಿಯ ಮನಸ್ಸು ಕೆಲವು ಸಂದರ್ಭಗಳಲ್ಲಿ ಸ್ವರ್ಗವನ್ನು ನರಕ ವಾಗಿಯೂ ನರಕವನ್ನು ಸ್ವರ್ಗವಾಗಿಯೂ ಪರಿವರ್ತಿಸ ಬಲ್ಲವು. ಮುಂಬರುವ ವರ್ಷಗಳಲ್ಲಿ ಮನಸ್ಸು ಬದಲಾಗುತ್ತದೆ ಎಂದು ನಾವು ನಿರೀಕ್ಷಿಸೋಣವೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.